About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಮಾಂಗಿ-ತುಂಗಿ ಭಾರತದಲ್ಲೊಂದು ಮಹಾಗೋಡೆ

ಸುಧೀರ್ ಸಾಗರ್

ಚೀನಾದ ಅರಿವಿರದವರೇ ವಿರಳ. ಆದರೆ ಅದರ ಪ್ರತಿರೂಪದಂತಿರುವ ಮಹಾಗೋಡೆಯೊಂದು ಭಾರತದಲ್ಲಿಯೇ ಅಸ್ತಿತ್ವದಲ್ಲಿದೆ ಅನ್ನೋದು ಮಾತ್ರ ಬಹುತೇಕರಿಗೆ ತಿಳಿದಿಲ್ಲ. ಬೃಹದಾಕಾರವಾಗಿ ಮೈಚಾಚಿಕೊಂಡಿರುವ ಪರ್ವತವೊಂದರ ಇಕ್ಕೆಲಗಳಲ್ಲಿ ನಿರ್ಮಾಣವಾಗಿರುವ ದೇವಾಲಯ ಸಮುಚ್ಛಯ ಗಳನ್ನು ತಲುಪಲು ನಿರ್ಮಿಸಲಾಗಿರುವ, ಇಡೀ ಪರ್ವತಕ್ಕೇ ಹಬ್ಬಿ ನಿಂತ ಬಳ್ಳಿಯಂತೆ ಕಂಗೊಳಿಸುವ ಮಹಾಗೋಡೆಯಂತಹ ಮೆಟ್ಟಿಲುಗಳ ಸಾಲು ಹಾದಿಯ ಪ್ರದೇಶವೇ ಸಿದ್ಧ ಕ್ಷೇತ್ರವೆಂಬ ಖ್ಯಾತಿಯ ಮಾಂಗಿತುಂಗಿ.

ಮಹಾರಾಷ್ಟ್ರದ ನಾಸಿಕ್ ನಿಂದ 125 ಕಿಮೀ ದೂರದಲ್ಲಿರುವ ತಹರಾಬಾದ್ ಗೆ ಸೇರಿದ ಹಳ್ಳಿಯಾದ ಬಿಲ್ವಾಡಿ ಎಂಬ ಹಳ್ಳಿಯ ಸಮೀಪದಲ್ಲಿರುವ, ಸಾವಿರಾರು ವರ್ಷಗಳ ಹಿಂದೆ ಜೈನ ಮುನಿಗಳು ಧ್ಯಾನ ಹಾಗೂ ತಪಸ್ಸಿಗಾಗಿ ನಿರ್ಮಿಸಿಕೊಂಡ ಗುಹಾ ಸಮುಚ್ಛಯ ಹಾಗೂ ದೇವಸ್ಥಾನಗಳನ್ನೊಳಗೊಂಡ ಅಜ್ಞಾತ ಸ್ಥಳವಾಗಿದ್ದು, ನಂತರದಲ್ಲಿ ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಮಾರ್ಪಾಡಾದ ಮಾಂಗಿತುಂಗಿ ಪರ್ವತವಲ್ಲ ಬದಲಾಗಿ ಒಂದೇ ಪರ್ವತದ ವಿಭಿನ್ನ ದಿಕ್ಕಿನಲ್ಲಿರುವ ಅವಳಿ ಧ್ರುವಗಳಿವು. ನೋಡು ವುದಕ್ಕೆ ಎರಡೂ ತುದಿಗಳೂ ಒಂದೇ ತೆರನಾಗಿದ್ದು ತಕ್ಷಣಕ್ಕೆ ಪ್ರತಿ ಬಿಂಬದಂತೆ ಭಾಸವಾಗುತ್ತದೆ. ಎರಡೂ ತುದಿಯಲ್ಲಿ ದೇವಸ್ಥಾನ ವನ್ನು ನಿರ್ಮಿಸಲಾಗಿದ್ದು ಅದರ ಮೇಲ್ಭಾಗದಲ್ಲಿ ಕೊರೆದು ಮಾನಸ್ಥಂಬದಂತೆ ಗೋಪುರ ನಿರ್ಮಿಸಲಾಗಿದೆ.

ಬಿಲ್ವಾಡಿಯಿಂದ ಮೊದಲಾಗುವ ಬರೋಬ್ಬರಿ ಏಳು ಸಾವಿರ ಮೆಟ್ಟಿಲುಗಳ ಮಾಂಗಿತುಂಗಿ ಪರ್ವತಾರೋಹಣದಲ್ಲಿ ಒಂದನೇ ಶತಮಾನದಿಂದ ಮೊದಲಾಗಿ ಐದನೇ ಶತಮಾನದವರೆಗೂ ನಿರ್ಮಾಣಗೊಂಡ ಹದಿನೈದಕ್ಕೂ ಹೆಚ್ಚು ದೇವಸ್ಥಾನಗಳು, ಮಹಾ ವೀರ, ರಿಷಭನಾಥ, ಶಾಂತಿನಾಥ ಪಾರ್ಶ್ವನಾಥ ಸೇರಿದಂತೆ ಇಪ್ಪ ತ್ತಕ್ಕೂ ಅಧಿಕ ಗುಹೆಗಳನ್ನು ಕಾಣಬಹುದಾಗಿದ್ದು, ಹಾದಿಯುದ್ದಕ್ಕೂ ಒಟ್ಟು ಇನ್ನೂರಕ್ಕೂ ಅಧಿಕ ಪಾದುಕೆಗಳು ಹಾಗೂ ತೀರ್ಥಂಕರ ರಾದಿಯಾಗಿ ಯಕ್ಷ ಯಕ್ಷಿಣಿ, ಇಂದ್ರ ಸೇರಿದಂತೆ ಹಲವು ದೇವತೆ ಗಳ ಆರುನೂರಕ್ಕೂ ಹೆಚ್ಚು ಭಂಗಿಗಳ ವಿಗ್ರಹಗಳನ್ನು ಕೆತ್ತಲ್ಪಟ್ಟಿರುವುದನ್ನು ನೋಡಬಹುದು. ಇದಲ್ಲದೆ ಅನೇಕ ಸಂಸ್ಕೃತವೂ ಸೇರಿದಂತೆ ಇತರ ಲಿಪಿಗಳ, ಸೂಕ್ತ ರಕ್ಷಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿರುವ ಶಾಸನಗಳನ್ನೂ ಕಾಣಬಹುದಾಗಿದ್ದು, ಪರ್ವತದ ಮೇಲ್ಭಾಗ ತಲುಪುತ್ತಿದ್ದಂತೆಯೇ ಕಂಡುಬರುವ ಮೈಲು ಗಟ್ಟಲೆ ಚಾಚಿಕೊಂಡಂತಹ ಮೆಟ್ಟಿಲುಗಳ ಕಾಲುಹಾದಿ ಚೀನಾದ ಮಹಾಗೋಡೆಯನ್ನು ಕಣ್ಣೆದುರು ತಂದು ನಿಲ್ಲಿಸುತ್ತದೆ.

ಮಾಂಗಿ ಗಿರಿಶೃಂಗ

ಸಮುದ್ರ ಮಟ್ಟದಿಂದ ಸುಮಾರು 4343 ಅಡಿಗಳಷ್ಟು ಎತ್ತರ ದಲ್ಲಿರುವ ಪರ್ವತದ ಪಶ್ಚಿಮದ ಶೃಂಗವಿದು. ಮೇಲ್ಭಾಗದಲ್ಲಿ ಮಹಾವೀರ, ಆದಿನಾಥ ಸೇರಿದಂತೆ ಒಟ್ಟು ಏಳು ಐವತ್ತಕ್ಕೂ ಅಧಿಕ ತೀರ್ಥಂಕರರ ಪದ್ಮಾಸನದ ಮೂರ್ತಿಗಳು ಹಾಗೂ ಪಾದುಕೆಗಳ ಕೆತ್ತನೆ ಶಿಲ್ಪಗಳಿವೆ. ಮಾಂಗಿ ಒಟ್ಟು ಹತ್ತು ಗುಹೆಗಳನ್ನು ಹೊಂದಿದ್ದು ಅವುಗಳಲ್ಲಿ ಬಲರಾಮನ ವಿಗ್ರಹವಿರುವ ಗುಹೆ ಪ್ರಮುಖವಾಗಿದೆ. ಇದಲ್ಲದೆ ಕೃಷ್ಣ ಕುಂಡವೆಂಬ ಸಿಹಿನೀರ ಸರೋವರವೊಂದನ್ನು ನಿರ್ಮಿಸಲಾಗಿದ್ದು, ಅಷ್ಟೊಂದು ಎತ್ತರ ದಲ್ಲಿದ್ದೂ ಈ ಸರೋವರ ವರ್ಷಪೂರ್ತಿ ಬತ್ತದಂತಿರೋದು ವಿಶೇಷ. ಮಾನಸ್ಥಂಬ ರಚನೆಯಂತೆ ಶಿಲೆಯನ್ನು ಕೆತ್ತಿ ಗೋಪುರ ನಿರ್ಮಿಸಲಾಗಿದ್ದು ಸುತ್ತಲೂ ಮುನಿಗಳ ಶಿಲ್ಪವನ್ನು ಕೆತ್ತಲಾಗಿದೆ.

ಮಾಂಗಿ ತುಂಗಿ ನಡುವಿನ ಹಾದಿ

ಎರಡು ಶೃಂಗಗಳ ನಡುವೆ ಕಡಿದಾದ ಪರ್ವತದಂಚಿನ ರಸ್ತೆ ಇದಾಗಿದ್ದು ಚೂರು ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ.ಮಾರ್ಗ ಮಧ್ಯದಲ್ಲಿ ದೇವಸ್ಥಾನವೊಂದಿದ್ದು ಇಲ್ಲಿ ಬಾಹುಬಲಿ ಹಾಗೂ ಮುನಿಸುವೃರ್ತರ ಮೂರ್ತಿಗಳಿವೆ.ಎರಡು ಗುಹೆಗಳೂ ಕಾಣಬಹು ದಾಗಿದ್ದು ಅವು ಶುದ್ಧ ಹಾಗೂ ಬುದ್ಧಿಕರಿಗೆ ಸೇರಿದ್ದಾಗಿದೆ.ಇದಲ್ಲದೆ ಹಾದಿಯ ಇಕ್ಕೆಲದ ಬಂಡೆಗಳ ಮೇಲೆ ದೇವತೆಗಳ ಕೆತ್ತನೆಗಳನ್ನು ಕಾಣಬಹುದು.

ತುಂಗಿ ಗಿರಿಶೃಂಗ

ಸಮುದ್ರ ಮಟ್ಟದಿಂದ ಸುಮಾರು 4366ಅಡಿ ಎತ್ತರದಲ್ಲಿರುವ ತುಂಗಿ ಪರ್ವತದ ಪೂರ್ವದ ಗಿರಿಶೃಂಗ.ಮೇಲ್ಭಾಗದಲ್ಲಿ ಒಟ್ಟು ಐದು ದೇವಸ್ಥಾನಗಳ ಜೊತೆಗೆ ತೀರ್ಥಂಕರ ಚಂದ್ರಪ್ರಭು ಹಾಗೂ ರಾಮಚಂದ್ರರ ಹೆಸರಿನ ಎರಡು ಗುಹೆಗಳನ್ನೂ ಹೊಂದಿದೆ.ಇಲ್ಲಿಯೂ ಕಪ್ಪುಶಿಲೆಯನ್ನು ಕೊರೆದು ಗೋಪುರದಂತೆ ನಿರ್ಮಿಸಲಾ ಗಿದ್ದು, ಅದನ್ನು ಪ್ರದಕ್ಷಿಣೆ ಹಾಕಲು ಅನುಕೂಲವಾಗುವಂತೆ ಹಾದಿ ಯನ್ನೂ ನಿರ್ಮಿಸಲಾಗಿದ್ದು, ಸುತ್ತಲೂ ಹನುಮಂತ,ಗವ, ಗವಾಕ್ಷಿ, ನೀಲ ಸೇರಿದಂತೆ ತೀರ್ಥಂಕರರ ವಿಗ್ರಹಗಳನ್ನು ಕೆತ್ತಲಾಗಿದೆ.

ಅಹಿಂಸಾ ಮೂರ್ತಿ

2016 ರಲ್ಲಿ ಮಾಂಗಿ ಪರ್ವತ ಶೃಂಗದಲ್ಲಿ ನಿರ್ಮಾಣ ಮಾಡಲಾದ 108 ಅಡಿಗಳ(ನಿಂತಿರುವ ಕಟ್ಟೆಯೂ ಸೇರಿ ಒಟ್ಟು 133 ಅಡಿ)ಎತ್ತರದ ಮೊದಲನೇ ತೀರ್ಥಂಕರ ರಿಶಭ್ ಭಗವಾನರ ಮೂರ್ತಿಗೆ ಅಹಿಂಸಾ ಮೂರ್ತಿಯೆಂದು ನಾಮಕರಣ ಮಾಡಲಾ ಗಿದೆ. ಇದರ ಇನ್ನೊಂದು ವಿಶೇಷವೆಂದರೆ ಜಗತ್ತಿನಲ್ಲಿಯೇ ಬೃಹತ್ ಜೈನ ಮೂರ್ತಿ ಇದಾಗಿದ್ದು ಗಿನ್ನೆಸ್ ಪುಸ್ತಕದಲ್ಲಿಯೂ ದಾಖಲಾ ಗಿದೆ. ಪ್ರತೀವರ್ಷ ಕಾರ್ತಿಕ ಮಾಸದಲ್ಲಿ ಆಯೋಜಿಸಲಾಗುವ ಉತ್ಸವ ಅತೀ ವಿಜೃಂಭಣೆಯಿಂದ ಕೂಡಿದ್ದು ದೇಶದಾದ್ಯಂತದ ಜೈನ ಧರ್ಮೀಯರು ಈ ಸಮಯದಲ್ಲಿ ಭೇಟಿಯಿತ್ತು ಕೃತಾರ್ಥ ರಾಗುತ್ತಾರೆ. ಮಾಂಗಿ ತುಂಗಿ ಪರ್ವತವೀಕ್ಷಣೆಗೂ ಆ ಸಮಯ ಸೂಕ್ತವಾಗಿದ್ದು ಆಗಷ್ಟೇ ಮಳೆಗಾಲ ಮುಗಿದು ಹಸಿರಿನಿಂದ ಕಂಗೊಳಿಸುವ ಪರ್ವತಶ್ರೇಣಿ ಹೊಸತೊಂದು ಜಗತ್ತಿಗೇ ಕೊಂಡೊಯ್ಯುತ್ತದೆ.

ತಪ್ಪಲಿನಲ್ಲಿರುವ ದೇವಸ್ಥಾನ ಸಂಕೀರ್ಣದಲ್ಲಿಯೇ ಗ್ಯಾನ್ ಮಾತಾ ಹಾಗೂ ರಿಶಭನಾಥನೆಂಬ ಎರಡು ಧರ್ಮಶಾಲೆಗಳಿದ್ದು ಅಲ್ಲಿ ಏಸಿ ರೂಮುಗಳೂ ಸೇರಿದಂತೆ ವಸತಿ ಲಭ್ಯವಿದೆ.

ಸಮೀಪದ ವಿಮಾನ ನಿಲ್ದಾಣ :- ಛತ್ರಪತಿ ಶಿವಾಜಿ ಟರ್ಮಿನಲ್ ಮುಂಬಯಿ.

ಸಮೀಪದ ರೈಲ್ವೇ ನಿಲ್ದಾಣ :- ಮನಮಾಡ್

Tags

Related Articles

Leave a Reply

Your email address will not be published. Required fields are marked *

Language
Close