ವಿಶ್ವವಾಣಿ

ಚುನಾವಣೆಯಲ್ಲಿನ ಗೆಲುವು ನೋಟು-ಕ್ವಾಟರ್‌ನಿಂದ ನಿರ್ಧಾರ!

ಮಡಿಕೇರಿ: ಪ್ರಸ್ತುತ ಚುನಾವಣೆಯಲ್ಲಿ ಪ್ರಾಮಾಣಿಕತೆ, ನಾವು ಮಾಡಿದ ಕೆಲಸ ಕಾರ್ಯಗಳಿಂದ ಗೆಲ್ಲಲು ಸಾಧ್ಯವಿಲ್ಲ. ಇಂದೇನಿದ್ದರು ನೋಟು ಮತ್ತು ಕ್ವಾಟರ್‌ನಿಂದ ಮಾತ್ರ ಗೆಲುವು ದೊರಕುತ್ತದೆಂದು ಹಿರಿಯ ನ್ಯಾಯವಾದಿಗಳಾದ ಹೆಚ್.ಎಸ್.ಚಂದ್ರಮೌಳಿ ಮಾರ್ಮಿಕವಾಗಿ ನುಡಿದಿದ್ದಾರೆ.

ಮಡಿಕೇರಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಪತ್ರಿಕಾ ದಿನಾಚರಣೆಯಲ ಹೆಚ್.ಎಸ್.ಚಂದ್ರಮೌಳಿ ಅವರು ಮಾತನಾಡಿ, ರಾಜಕೀಯ ರಕ್ತ ತನ್ನ ಕುಟುಂಬದ್ದಲ್ಲ. ನಾನು ರಾಜಕೀಯ ಮಾಡಲು ಬಂದವನಲ್ಲ, ಬದಲಾಗಿ ರಾಜಕಾರಣ ಮಾಡಲು ಬಂದವನೆಂದು ಸ್ಪಷ್ಟಪಡಿಸಿದ ಚಂದ್ರಮೌಳಿ ಅವರು, ನಾನು ಕಳೆದ ವಿಧಾನ ಸಭಾ ಚುನಾಣೆಯಲ್ಲಿ ಸ್ಪರ್ಧಿಸಬೇಕೆನ್ನುವ ಹಂತದಲ್ಲಿ ಪ್ರಕರಣವೊಂದನ್ನು ಮುಂದು ಮಾಡುವ ಮೂಲಕ ತನಗೆ ಪಕ್ಷದ ದೊರಕದಂತಾಯಿತೆಂದು ತಿಳಿಸಿದರು.

ತಾನೊಬ್ಬ ವಕೀಲನಾಗಿ ನೂರಾರು ಪ್ರಕರಣಗಳು ನನ್ನ ಬಳಿ ಬರುತ್ತದೆ ಮತ್ತು ಆ ನಿಟ್ಟಿನಲ್ಲಿ ತಾನು ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ, ಪ್ರಕರಣವೊಂದನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ನಾನು ಚುನಾವಣೆಯಲ್ಲಿ ಸ್ಪರ್ಧಿಸದಂತಾಯಿತು. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಸುಂದರವಾಗಲು ಸಾಧ್ಯವೆಂದು ಚಂದ್ರಮೌಳಿ ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರತಿಯೊಬ್ಬರು ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಆರೋಗ್ಯ ಪೂರ್ಣವಾದ ಪತ್ರಿಕಾ ಕ್ಷೇತ್ರವಿರುವುದು ಅತ್ಯವಶ್ಯವಾಗಿದ್ದರೂ, ಉತ್ತಮ ವ್ಯವಸ್ಥೆಯ ನಡುವೆ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ಕಾಣುತ್ತಿರುವ ಬಗ್ಗೆ ಹಿರಿಯ ನ್ಯಾಯವಾದಿಗಳಾದ ಬೆಸೂರು ಹೆಚ್.ಎಸ್. ಚಂದ್ರಮೌಳಿ ಆತಂಕ ವ್ಯಕ್ತಪಡಿಸಿದರು.

ಮಾಧ್ಯಮಗಳ ಯಾವುದೇ ಪ್ರಾಮಾಣಿಕ ವ್ಯಕ್ತಿಯ ಚಾರಿತ್ರ್ಯ ವಧೆಯಾದಲ್ಲಿ ಅದನ್ನು ಕೇವಲ ಹಣದಿಂದ ತುಂಬಿಕೊಡಲು ಬರುವುದಿಲ್ಲವೆಂದು ಸೂಕ್ಷ್ಮವಾಗಿ ನುಡಿದ ಚಂದ್ರಮೌಳಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳು ತಪ್ಪೆಸಗದಂತೆ ನೊಡಿಕೊಳ್ಳಬೇಕಾದ ಪತ್ರಿಕಾ ಕ್ಷೇತ್ರ ಅತ್ಯಂತ ಜಾಗರೂಕವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆಯೆಂದು ಹೇಳಿದರು.

ಬ್ರೇಕಿಂಗ್ ನ್ಯೂಸ್ ಎನ್ನುವ ಅಪಾಯ: ಹಿಂದೆ 80ರ ದಶಕದಲ್ಲಿ ಮಾಧ್ಯಗಳಲ್ಲಿನ ಸುದ್ದಿಗಳಿಗೆ ನಿಖರತೆ ಇತ್ತು. ಪ್ರಸ್ತುತ ಪತ್ರಿಕಾ ಕ್ಷೇತ್ರದೊಂದಿಗೆ ದೃಶ್ಯ ವಾಹಿನಿಗಳು, ಸಾಮಾಜಿಕ ಜಾಲ ತಾಣಗಳು ಪ್ರಭಾವಯುತವಾಗಿ ಅದರಲ್ಲೂ ದೃಶ್ಯ ವಾಹಿನಿಗಳಲ್ಲಿನ ಬ್ರೇಕಿಂಗ್ ನ್ಯೂಸ್ ಎನ್ನುವುದು ಸತ್ಯಾಸತ್ಯತೆಗಳನ್ನು ಮೀರಿ ಬಿತ್ತರಗೊಳ್ಳುವ ಮೂಲಕ ವ್ಯತಿರಿಕ್ತ ಪರಿಣಾಮವನ್ನು ನೋಡುಗನಲ್ಲಿ ಮೂಡಿಸುತ್ತಿದೆಯೆಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾ ಸ್ವಾತಂತ್ರ್ಯದ ಹರಣವಾಗುತ್ತಿದೆ: ಪತ್ರಿಕಾ ಸ್ವಾತಂತ್ರ್ಯದ ಹರಣವಾಗುತ್ತಿರುವುದರತ್ತ ಬೊಟ್ಟು ಮಾಡಿದ ಚಂದ್ರಮೌಳಿ ಅವರು, ಮಾಧ್ಯಮಗಳು ವಿಷಯದ ಸತ್ಯಾಸತ್ಯತೆಯನ್ನು ಅರಿತು ಅದನ್ನು ಓದುಗನಿಗೆ ನೀಡುವುದು ಅವಶ್ಯ. ಆದರೆ, ಸಮಾಜದ ಹೊಲಸನ್ನು ತೆಗೆಯಲು ಹೋಗಿ ತಾವೇ ಹೊಲಸನ್ನು ಮೈಮೇಲೆ ಎಳೆದುಕೊಳ್ಳುವ ಪರಿಸ್ಥಿತಿಯನ್ನಿಂದು ಕಾಣುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು.