ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಸಜ್ಜಾದ ಸ್ಯಾಂಡಲ್‌ವುಡ್‌ನ ಯುವ ತಂಡ: ಬಂದಿದೆ ‘ನಮ್ಮೂರು ನಮ್ಮವರು’ ಆಲ್ಬಂ
ಸಮಾಜದಲ್ಲಿ ಮಿತಿಮೀರುತ್ತಿರುವ ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆಗಳು ಸಜ್ಜಾಗಿದ್ದು, ‘ನಮ್ಮೂರು ನಮ್ಮವರು’ ಕ್ರಾಂತಿಕಾರಿ ಮ್ಯೂಸಿಕ್ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. ಆರೋಹ ಫಿಲಂಸ್ ಲಾಂಛನದಲ್ಲಿ ವಕೀಲ ಸಂದೀಪ್ ಪಾಟೀಲ್ ಬೆಂಬಲದೊಂದಿಗೆ ಮೂಡಿಬಂದಿರುವ ಈ ಜಾಗೃತಿ ಗೀತೆಗೆ ಮಯೂರ್ ಅಂಬೇಕಲ್ಲು ಸಂಗೀತ ನೀಡಿದ್ದಾರೆ.
-
ಪ್ರಸ್ತುತ ಸಮಾಜದಲ್ಲಿ ಮಿತಿಮೀರುತ್ತಿರುವ ಭ್ರಷ್ಟಾಚಾರ, ಅನ್ಯಾಯ ಹಾಗೂ ಸಾಮಾಜಿಕ ಅಸಮಾನತೆಯಿಂದ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಇಂತಹ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆಗಳ ತಂಡವೊಂದು ಒಟ್ಟಾಗಿ ‘ನಮ್ಮೂರು ನಮ್ಮವರು’ ಎಂಬ ವಿಶೇಷ ಮ್ಯೂಸಿಕ್ ಆಲ್ಬಂ ಹಾಡಿನ ಮೂಲಕ ವಿಭಿನ್ನ ಜನಜಾಗೃತಿ ಮೂಡಿಸಲು ಮುಂದಾಗಿದೆ.
‘ಆರೋಹ ಫಿಲಂಸ್’ ಮತ್ತು ‘ಆರಾ ಫಿಲಂಸ್’ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಕ್ರಾಂತಿಕಾರಿ ಸಾಮಾಜಿಕ ಸಂಘಟನಾ ಗೀತೆಗೆ ಹಾನಗಲ್ ಮೂಲದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಟೀಲ್ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಮ್ಯೂಸಿಕ್ ಆಲ್ಬಂ ಜೂನ್ 5 ರಂದು ಬಿಡುಗಡೆ ಆಗಿದೆ.
Pabbar Movie: 14 ವರ್ಷದ ಬಳಿಕ ಕ್ಲೀನ್ ಶೇವ್; 'ಪಬ್ಬಾರ್' ಚಿತ್ರದಲ್ಲಿ ಅಯ್ಯಪ್ಪ ಶರ್ಮ ಲುಕ್ ಹೇಗಿದೆ ಗೊತ್ತಾ?
ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ?
ಈ ಸಮಾಜಮುಖಿ ಆಲ್ಬಂ ಸಾಂಗ್‌ನಲ್ಲಿ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ಹಲವು ಪರಿಚಿತ ಮುಖಗಳು ಕಾಣಿಸಿಕೊಂಡಿದ್ದಾರೆ. ‘ಭಾವತೀರ ಯಾನ' ಚಿತ್ರದ ನಾಯಕ ತೇಜಸ್ ಕಿರಣ್, ‘ಡಿಕೆಡಿ’ ಖ್ಯಾತಿಯ ಶಶಿನ್ ಆರ್, ‘ಶ್ರೀರಾಘವೇಂದ್ರ ಮಹಾತ್ಮೆ’ ಧಾರಾವಾಹಿ ಖ್ಯಾತಿಯ ಭವಾನಿ ಪುರೋಹಿತ್, ‘ಮಗ್ಗಿ ಪುಸ್ತಕ’ ಚಿತ್ರದ ನಟ ಸಂದೀಪ್ ರಾಜಗೋಪಾಲ್ ಸೇರಿದಂತೆ ಯುವ ನಟರಾದ ಸುನಿಲ್, ಅರುಣ್ ಮತ್ತು ಮುರುಡಯ್ಯ ಪ್ರಮುಖ ತೆರೆ ಹಂಚಿಕೊಂಡಿದ್ದಾರೆ.
ಮಯೂರ್ ಅಂಬೇಕಲ್ಲು ಸಂಗೀತ ಸಂಯೋಜನೆ
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ 'ಶಾಖಾಹಾರಿ', 'ಭಾವತೀರ ಯಾನ' ಹಾಗೂ ‘ಪಬ್ಬಾರ್’ ನಂತಹ ಚಿತ್ರಗಳಿಗೆ ವಿಭಿನ್ನವಾಗಿ ಸಂಗೀತ ನೀಡಿ ಗಮನ ಸೆಳೆದಿರುವ ಯುವ ಸಂಗೀತ ನಿರ್ದೇಶಕ ಮಯೂರ್ ಅಂಬೇಕಲ್ಲು ‘ನಮ್ಮೂರು ನಮ್ಮವರು’ ಹಾಡಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ತಾವೇ ಹಾಡಿದ್ದಾರೆ ಕೂಡ. ವಿಶಾಕ್ ನಾಗಲಾಪುರ ಅವರು ಪವರ್‌ಫುಲ್ ಪದಗಳನ್ನು ಪೋಣಿಸಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನು, ಈ ಗೀತೆಗೆ ನಟ ತೇಜಸ್ ಕಿರಣ್ ಮತ್ತು ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ಇಬ್ಬರೂ ಜೊತೆಯಾಗಿ ದೃಶ್ಯರೂಪ ಕೊಟ್ಟು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.
ಇನ್ನು, ಚಿತ್ರರಂಗದಲ್ಲಿ ಒಳ್ಳೆಯ ಅನುಭವವಿರುವ ಶಿವಶಂಕರ ನೂರಂಬಡ ಈ ಗೀತೆಗೆ ಅದ್ಭುತವಾಗಿ ಛಾಯಾಗ್ರಹಣ ಮಾಡಿದ್ದಾರೆ. ಅನು ರಂಜನ್ ಹೆಚ್. ಆರ್. ಅವರ ಸಂಕಲನ ಮತ್ತು ಡಿಐ ಹಾಗೂ ಶಿಬಿನ್ ನಡು ವೀಟ್ಟಿಲ್ ಅವರ ಆಡಿಯೋಗ್ರಫಿ ಈ ಆಲ್ಬಂಗೆ ತಾಂತ್ರಿಕವಾಗಿ ಮತ್ತಷ್ಟು ಬಲ ತುಂಬಿದೆ.
ಆಲ್ಬಂ ಕುರಿತು ಈ ತಂಡ ಹೇಳೋದೇನು?
"ಇದು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕಾಗಿ ಮಾಡಿರುವ ಒಂದು ಪ್ರಾಮಾಣಿಕ ಪ್ರಯತ್ನ. ಈ ಹಾಡಿನ ಮೂಲಕ ಮಣ್ಣಿನ ನಂಟು, ಜನರ ಆತ್ಮೀಯತೆ, ಸಂಘಟನೆಯ ಆಶಯ ಹಾಗೂ ಒಗ್ಗಟ್ಟಿನ ಶಕ್ತಿಯನ್ನು ಸಂಗೀತ ಮತ್ತು ದೃಶ್ಯದ ಮೂಲಕ ಅಭಿವ್ಯಕ್ತಪಡಿಸಲಾಗಿದೆ. ಇದು ಕೇವಲ ಒಂದು ಹಾಡಲ್ಲ; ಬದಲಾವಣೆ ಬಯಸುವ ಜನಸಾಮಾನ್ಯರ ಬದ್ಧತೆಯನ್ನು ಸಾರುವ ಸಮೂಹ ಧ್ವನಿಯಾಗಿದೆ. 'ನಮ್ಮೂರು ನಮ್ಮವರು' ಎಂಬ ಪರಿಕಲ್ಪನೆ ಪ್ರತಿಯೊಬ್ಬರ ಹೃದಯ ಮುಟ್ಟಲಿದೆ" ಎಂಬ ಈ ತಂಡ ಭರವಸೆ ವ್ಯಕ್ತಪಡಿಸಿದೆ. ಈಗಾಗಲೇ ರಿಲೀಸ್ ಆಗಿರುವ ಈ ಹಾಡನ್ನು ಕೇಳಿದವರಿಂದ ಮೆಚ್ಚುಗೆ ವ್ಯಕ್ತವಾಗಿದೆ.