ಮೂರೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 117 ಕೋಟಿ ಬಾಚಿಕೊಂಡ ʻದೃಶ್ಯಂ 3ʼ; ಕರ್ನಾಟಕದಲ್ಲಿ ಮೋಹನ್‌ಲಾಲ್ ಸಿನಿಮಾಗೆ ಸಿಕ್ಕ ಹಣವೆಷ್ಟು?
ನಟ ಮೋಹನ್‌ಲಾಲ್ ಅವರ 66ನೇ ಜನ್ಮದಿನದ ಅಂಗವಾಗಿ ಮೇ 21 ರಂದು ಬಿಡುಗಡೆಯಾದ 'ದೃಶ್ಯಂ 3' ಚಿತ್ರವು ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 117.17 ಕೋಟಿ ರೂಪಾಯಿ ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಕಲ್ಟ್ ಫ್ಯಾಮಿಲಿ ಥ್ರಿಲ್ಲರ್ ಚಿತ್ರಕ್ಕೆ ಕರ್ನಾಟಕದಲ್ಲೂ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ.
-
ಮೋಹನ್‌ಲಾಲ್, ಮೀನಾ ನಟನೆಯ ʻದೃಶ್ಯಂ 3’ ಸಿನಿಮಾವು ಬಿಡುಗಡೆಯಾದ ಮೂರೇ ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಮೇ 21 ರಂದು ನಟ ಮೋಹನ್‌ಲಾಲ್ ಅವರ 66ನೇ ಜನ್ಮದಿನದ ಅಂಗವಾಗಿ ತೆರೆಕಂಡ ಈ ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ, ಎರಡನೇ ದಿನವಾದ ಶುಕ್ರವಾರ ಗಳಿಕೆಯಲ್ಲಿ ಕೊಂಚ ಕುಸಿತ ಕಂಡಿದ್ದರೂ, ವೀಕೆಂಡ್‌ನಲ್ಲಿ (ಶನಿವಾರ) ಮತ್ತೆ ಭರ್ಜರಿ ವೇಗ ಪಡೆದುಕೊಂಡಿದೆ.
ಮೂರೇ ದಿನಕ್ಕೆ 117 ಕೋಟಿ ರೂ. ಕಲೆಕ್ಷನ್
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 'ದೃಶ್ಯಂ 3' ಚಿತ್ರವು ಮೂರನೇ ದಿನವಾದ ಶನಿವಾರ ಭಾರತದಲ್ಲಿ 13.70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ನಿವ್ವಳ ಕಲೆಕ್ಷನ್ 40.60 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ವಿಶ್ವಾದ್ಯಂತ ಇದರ ಒಟ್ಟು ಗ್ರಾಸ್ ಕಲೆಕ್ಷನ್ ಬರೋಬ್ಬರಿ 117.17 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
Drishyam 3 trailer out: ದೃಶ್ಯಂ 3 ಟ್ರೈಲರ್ ಔಟ್! ಜಾರ್ಜ್‌ಕುಟ್ಟಿಗೆ ಇದೇಕೆ ಪಶ್ಚಾತ್ತಾಪ, ಭಯ?
ಕೇರಳದಲ್ಲಿ ಸಖತ್ ರೆಸ್ಪಾನ್ಸ್
ಶನಿವಾರದಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ದೇಶಾದ್ಯಂತ ನಡೆದ ಒಟ್ಟು 5,185 ಶೋಗಳಲ್ಲಿ ಚಿತ್ರವು ಶೇಕಡಾ 50.2 ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ. ಮೂಲ ಮಲಯಾಳಂ ಆವೃತ್ತಿಯು ಶೇಕಡಾ 66.52 ರಷ್ಟು ಆಕ್ಯುಪೆನ್ಸಿಯೊಂದಿಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿವೆ. ಅದರಲ್ಲೂ ಸಂಜೆ ಮತ್ತು ರಾತ್ರಿಯ ಶೋಗಳು ಕ್ರಮವಾಗಿ ಶೇ. 75 ಮತ್ತು ಶೇ. 72 ರಷ್ಟು ದಾಖಲೆಯ ಪ್ರದರ್ಶನ ಕಂಡಿವೆ. ಕೊಚ್ಚಿ ನಗರವು ಚಿತ್ರದ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು, ಅಲ್ಲಿನ 238 ಶೋಗಳಲ್ಲಿ ಶೇ. 88.3 ರಷ್ಟು ಅತ್ಯಧಿಕ ಆಕ್ಯುಪೆನ್ಸಿ ದಾಖಲಾಗಿದೆ.
ಫ್ಯಾನ್ಸ್‌ಗೆ ಥ್ಯಾಂಕ್ಸ್ ಹೇಳಿದ ಮೋಹನ್‌ಲಾಲ್
ದೃಶ್ಯಂ 3 ಸಿನಿಮಾಗೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸನ್ನು ಕಂಡು ಖುಷಿಯಾಗಿರುವ ನಟ ಮೋಹನ್‌ಲಾಲ್, ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿರುವ ಅವರು, "ಕಳೆದ 13 ವರ್ಷಗಳಿಂದ ಈ ಪ್ರಯಾಣದಲ್ಲಿ ನಮ್ಮನ್ನು ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರೀತಿ, ಬೆಂಬಲ ಮತ್ತು ಈ ಕಥೆಯ ಮೇಲಿಟ್ಟಿರುವ ನಂಬಿಕೆ ನಮ್ಮನ್ನು ಪ್ರತಿದಿನ ಧನ್ಯರನ್ನಾಗಿಸುತ್ತಿದೆ. ದೃಶ್ಯಂ 3 ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ" ಎಂದು ಅವರು ಬರೆದುಕೊಂಡಿದ್ದಾರೆ.
Drishyam 3: ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ; ‘ದೃಶ್ಯಂ 3’ ಕಲೆಕ್ಷನ್ ಏನು?
ಜೀತು ಜೋಸೆಫ್ ಕಥೆ ಬರೆದು ನಿರ್ದೇಶಿಸಿರುವ 'ದೃಶ್ಯಂ 3' ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ಮೋಹನ್‌ಲಾಲ್ ಅವರೊಂದಿಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಮುರಳಿ ಗೋಪಿ, ಸಿದ್ದಿಕ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ
#Drishyam3 Karnataka Box Office ✨
— Karnataka Talkies (@KA_Talkies) May 24, 2026
Day 1 – 2.90cr
Day 2 – 1.65cr
Day 3 – 2.52cr 👌
Total 3 Days Gross – 7.07cr 💥 pic.twitter.com/PYXtyZdoTI
ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್
‘ದೃಶ್ಯಂ 3’ ಸಿನಿಮಾ ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ರಾಜ್ಯಾದ್ಯಂತ ಬರೋಬ್ಬರಿ 2.90 ಕೋಟಿ ರೂಪಾಯಿ ಗಳಿಸುವ ಮೂಲಕ ಅದ್ದೂರಿ ಓಪನಿಂಗ್ ಪಡೆದುಕೊಂಡಿದ್ದ ಈ ಚಿತ್ರ, ಎರಡನೇ ದಿನ 1.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಮೂರನೇ ದಿನವಾದ ಶನಿವಾರ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಚೇತರಿಕೆ ಕಂಡು 2.52 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರೊಂದಿಗೆ ‘ದೃಶ್ಯಂ 3’ ಸಿನಿಮಾ ಕೇವಲ ಮೂರೇ ದಿನಗಳಲ್ಲಿ ಕರ್ನಾಟಕದಲ್ಲಿ ಒಟ್ಟು 7.07 ಕೋಟಿ ರೂಪಾಯಿಗಳ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.