ಪತ್ನಿ ಆರತಿ ಜೊತೆಗಿನ ವಿಚ್ಛೇದನ ಪ್ರಕರಣದಲ್ಲಿ ನಟ ರವಿ ಮೋಹನ್‌ಗೆ ಹಿನ್ನಡೆ; ಜೀವನಾಂಶ ಅರ್ಜಿಯ ವಿಚಾರಣೆಗೆ ಕಾಲಾವಕಾಶ ಕೇಳಿದ್ದಕ್ಕೆ ಹೈಕೋರ್ಟ್ ಹೇಳಿದ್ದೇನು?
ಪತ್ನಿ ಆರತಿ ಸಲ್ಲಿಸಿರುವ ಮಧ್ಯಂತರ ಜೀವನಾಂಶ ಅರ್ಜಿಯ ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ್ದ ನಟ ರವಿ ಮೋಹನ್ (ʻಜಯಂʼ ರವಿ) ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟನಿಗೆ ಭಾರಿ ಹಿನ್ನಡೆಯಾಗಿದೆ. ಮಕ್ಕಳ ಶಾಲಾ ಶುಲ್ಕ ಹಾಗೂ ಜೀವನಾಂಶ ಪಾವತಿಸದ ಕಾರಣ ಆರತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
-
ಪತ್ನಿ ಆರತಿ ರವಿ ಸಲ್ಲಿಸಿರುವ ಮಧ್ಯಂತರ ಜೀವನಾಂಶ ಅರ್ಜಿಯ ವಿಚಾರಣೆ ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಕೋರಿದ್ದ ನಟ ರವಿ ಮೋಹನ್ (ʻಜಯಂʼ ರವಿ) ಅವರ ಮನವಿಯನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಮೂಲಕ ರವಿ ಮೋಹನ್‌ಗೆ ಭಾರಿ ಹಿನ್ನಡೆಯುಂಟಾಗಿದೆ.
ಹೈಕೋರ್ಟ್ ಮೆಟ್ಟಿಲೇರಿದ್ದ ಪತ್ನಿ
ಈ ದಂಪತಿಯ ವಿಚ್ಛೇದನ ಪ್ರಕರಣವು ಪ್ರಸ್ತುತ ಚೆನ್ನೈನ ಕೌಟುಂಬಿಕ ಕಲ್ಯಾಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ರವಿ ಮೋಹನ್ ಅವರು 2025 ಏಪ್ರಿಲ್‌ನಿಂದ ತಮಗೆ ಮಧ್ಯಂತರ ಜೀವನಾಂಶ ಹಾಗೂ ಮಕ್ಕಳ ಶಾಲಾ ಶುಲ್ಕದ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ಆರತಿ ಅವರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ವಿಚಾರಣೆ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ, ಅರ್ಜಿಯ ಶೀಘ್ರ ಇತ್ಯರ್ಥಕ್ಕೆ ನಿರ್ದೇಶನ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆರತಿ ಅವರ ಮನವಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಎರಡು ವಾರಗಳ ಒಳಗಾಗಿ ಅರ್ಜಿಯ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಗಡುವು ನೀಡಿತ್ತು. ಆದರೆ, ಹೈಕೋರ್ಟ್ ನೀಡಿದ್ದ ಈ ಕಾಲಾವಕಾಶವನ್ನು ವಿಸ್ತರಿಸಬೇಕು ಎಂದು ಕೋರಿ ನಟ ರವಿ ಮೋಹನ್ ಹೊಸದಾಗಿ ಮೇಲ್ಮನವಿ ಸಲ್ಲಿಸಿದ್ದರು.
Jayam Ravi: ಜಯಂ ರವಿ ಈಗ ರವಿ ಮೋಹನ್; ಹೆಸರು ಬದಲಿಸಿಕೊಂಡ ತಮಿಳು ನಟ
ಗಡುವು ವಿಸ್ತರಿಸಬಾರದು ಎಂದು ತೀವ್ರ ಆಕ್ಷೇಪ
ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರ ಪೀಠದ ಮುಂದೆ ಇದರ ವಿಚಾರಣೆ ನಡೆದಾಗ, ಆರತಿ ಪರ ಹಿರಿಯ ವಕೀಲ ಜೆ. ರವೀಂದ್ರನ್ ಅವರು ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸಬಾರದು ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು, ರವಿ ಮೋಹನ್ ಅರ್ಜಿಯನ್ನು ವಜಾಗೊಳಿಸಿದರಲ್ಲದೆ, ಯಾವುದೇ ಹೆಚ್ಚಿನ ಪರಿಹಾರ ಬೇಕಿದ್ದರೂ ಕೌಟುಂಬಿಕ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಬೇಕು ಎಂದು ಆದೇಶಿಸಿದರು. ಇದರಿಂದಾಗಿ ನಿಗದಿತ ಅವಧಿಯೊಳಗೆ ಜೀವನಾಂಶ ಅರ್ಜಿ ಇತ್ಯರ್ಥಪಡಿಸಬೇಕು ಎಂಬ ಹೈಕೋರ್ಟ್‌ನ ಹಳೇ ಆದೇಶವೇ ಜಾರಿಯಲ್ಲಿರಲಿದೆ.
ಕೆಲವು ವಾರಗಳ ಹಿಂದಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ರವಿ ಮೋಹನ್, ಭಾವುಕರಾಗಿದ್ದರು. ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೆ ನಟನೆಯಿಂದ ದೂರ ಉಳಿಯುವುದಾಗಿ ಹೇಳಿದ್ದರು. ಗಾಯಕಿ ಹಾಗೂ ಆಧ್ಯಾತ್ಮಿಕ ಚಿಕಿತ್ಸಕಿ ಕನೀಶಾ ಫ್ರಾನ್ಸಿಸ್ ಅವರು ಚೆನ್ನೈ ತೊರೆಯುವ ಹಾಗೂ ರವಿ ಜೊತೆಗಿನ ಸಂಬಂಧ ಕೊನೆಗೊಳಿಸುವ ಮುನ್ಸೂಚನೆ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ರವಿ ಈ ಪ್ರೆಸ್‌ಮೀಟ್ ನಡೆಸಿದ್ದರು. ಈ ಬೆಳವಣಿಗೆ ಭಾರಿ ಸುದ್ದಿಯಾಗಿತ್ತು.
Ravi Mohan: ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್
ಸಿನಿಮಾಗಳಲ್ಲಿ ಸಕ್ರಿಯವಾಗಿರುವ ನಟ ರವಿ ಮೋಹನ್
ವೈಯಕ್ತಿಕ ಜೀವನದ ಏರುಪೇರುಗಳ ನಡುವೆಯೂ ರವಿ ಮೋಹನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ರಾಘವ ಲಾರೆನ್ಸ್ ಮತ್ತು ನಿವಿನ್ ಪೌಲಿ ನಟನೆಯ ‘ಬೆನ್ಜ್’ (Benz) ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ ರವಿ ಮೋಹನ್. ಜೊತೆಗೆ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಆನ್ ಆರ್ಡಿನರಿ ಮ್ಯಾನ್’ ಚಿತ್ರದ ಶೂಟಿಂಗ್‌ನಲ್ಲೂ ರವಿ ತಲ್ಲೀನರಾಗಿದ್ದಾರೆ. ಗಣೇಶ್ ಕೆ. ಬಾಬು ನಿರ್ದೇಶನದ ‘ಕರಾಟೆ ಬಾಬು’ ಚಿತ್ರದ ಶೂಟಿಂಗ್ ಮುಗಿಸಿರುವ ರವಿ ಮೋಹನ್, ಹೊಸ ನಿರ್ದೇಶಕ ಜಿ.ಎನ್.ಡಿ. ಶ್ಯಾಮ್ ಕುಮಾರ್ ಅವರ ಮುಂದಿನ ಚಿತ್ರಕ್ಕೂ ಸಹಿ ಹಾಕಿದ್ದಾರೆ. ಇವರೊಂದಿಗೆ ಬಹುಕಾಲದಿಂದ ವಿಳಂಬವಾಗಿರುವ ‘ಜೀನಿ’ ಮತ್ತು ಕಾರ್ತಿಕ್ ಯೋಗಿ ನಿರ್ದೇಶನದ ಚಿತ್ರಗಳು ಬಿಡುಗಡೆಗೆ ಬಾಕಿ ಇವೆ.