About Us Advertise with us Be a Reporter E-Paper

ಯಾತ್ರಾ

ಕೊರೆವ ಚಳಿಯಲ್ಲಿ ಮುನ್ನಾರಿಗೆ ಚಾರಣ

* ಕೆ.ಪಿ.ಸತ್ಯನಾರಾಯಣ

ಒಂದು ದಿನ ಸಹೋದ್ಯೋಗಿ ಶ್ರೀನಿವಾಸ್ ಕೇಳಿದರು ‘ಕೊಡೈಕನಾಲ್‌ನಿಂದ ಮುನ್ನಾರ್‌ಗೆ ಚಾರಣ ಇದೆಯಂತೆ, ಬರ್ತೀರಾ?’ ಯೂತ್ ಹಾಸ್ಟೆಲ್‌ನ ತಮಿಳುನಾಡು ವಿಭಾಗದವರು ಡಿಸೆಂಬರ್ ತಿಂಗಳ ಕೊನೆಯಲ್ಲಿ ಆಯೋಜಿಸಿದ್ದ ಚಳಿಗಾಲದ ಚಾರಣದ ಬಗ್ಗೆ ಅವರು ಪ್ರಸ್ತಾಪಿಸಿದ್ದರು. ಉನ್ನತ ಬೆಟ್ಟಗಳ ಪ್ರದೇಶ, ಚಳಿಗಾಲದ ತೀವ್ರತೆಯ ದಿನಗಳು, ಸುಮಾರು 70 ಕಿ.ಮೀ ನಡಿಗೆ. ಒಂಥರಾ ಮಜ ಇರುತ್ತೆ, ವಿಶೇಷ ಅನುಭವವೂ ಆದೀತು ಎಂಬುದು ನಮ್ಮ ಲೆಕ್ಕಾಚಾರ.

ಡಿಸೆಂಬರ್ ಇಪ್ಪತ್ತೇಳರಂದು ಬಸ್ ಏರಿ, ಬೆಳಿಗ್ಗೆ ಎಂಟಕ್ಕೆಲ್ಲಾ ಕೊಡೈಕೆನಾಲಿನಲ್ಲಿ ಇಳಿದೆವು. ಅಂದು ಸಂಜೆಯ ತನಕ ಬಿಡುವು ಇತ್ತು. ಒಂದು ವಾಹನವನ್ನು ಗೊತ್ತು ಮಾಡಿಕೊಂಡು ಕೊಡೈಕೆನಾಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ಸಂಜೆ ಐದು ಘಂಟೆಗೆ ನಮ್ಮ ಜತೆಯಲ್ಲಿ ಬರಲಿದ್ದ ಚಾರಣಿಗರ ಗುಂಪನ್ನು ಸೇರಿಕೊಂಡೆವು. ಅಂದು ರಾತ್ರೆ ಪರಸ್ಪರ ಪರಿಚಯ, ಚಾರಣದ ಬಗೆಗಿನ ಸೂಚನೆಗಳು, ಇತ್ಯಾದಿ ಕಾರ್ಯಕ್ರಮ ನಡೆಯಿತು.
ಹಾಲು ಹೆಪ್ಪುಗಟ್ಟಿದ ನೋಟ

ಬೆಳಿಗ್ಗೆ ಐದು ಘಂಟೆಗೆಲ್ಲ ಹೊರಗೆ ಏನೋ ಕೋಲಾಹಲ. ಹೊರಗೆ ಬಂದು ನಾವು ಉಳಿದುಕೊಂಡಿದ್ದ ವಸತಿಗೃಹದ ಎದುರಿನ ಕಡಿದಾದ ಕಣಿವೆಯಲ್ಲಿ ಹತ್ತಿ ಹರಡಿದಂತೆ ಮಂಜು ಹಾಲಿನಂತೆ ಹೆಪ್ಪುಗಟ್ಟಿತ್ತು! ಆ ಸುಂದರ ನೋಟ ಬಣ್ಣಿಸಲಸದಳ! ಸೂರ್ಯನ ಕಿರಣಗಳು ಸೋಕಿದೆಡೆಯೆಲ್ಲ ಮಂಜು ಕರಗಿ ಕ್ಷಣಕ್ಷಣಕ್ಕೂ ದೃಶ್ಯಾವಳಿಯಲ್ಲಿ ಹೊಸದೇ ವಿನ್ಯಾಸ ಮೂಡುತ್ತಿತ್ತು. ಸೂರ್ಯ ಉದಯಿಸಿ, ಮೇಲೆ ಬರುವವರೆಗೂ ಯಾರೂ ಅಲ್ಲಿಂದ ಕದಲಲೇ ಇಲ್ಲ!

ಐದು ದಿನಗಳ ಚಾರಣದ ಮೊದಲ ದಿನ ಬೆಳಗ್ಗೆ ತಿಂಡಿ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಸಿಕೊಂಡು ಒಂಬತ್ತು ಘಂಟೆಗೆ ನಮ್ಮ ಚಾರಣ ಪ್ರಾರಂಭಿಸಿದೆವು. ನಮ್ಮ ಸಾಮಾನುಗಳ ಚೀಲ, ಕೈಯಲ್ಲಿ ಕ್ಯಾಮೆರಾ, ನೀರಿನ ಬಾಟಲ್. ಶಿಸ್ತಿನ ಸಿಪಾಯಿಗಳಂತೆ ನಾವು ನಲವತ್ನಾಲ್ಕು ಮಂದಿ ಹೊರಟಾಗ ಏನೋ ಹುಮ್ಮಸ್ಸು. ಹನ್ನೆರಡು ವರ್ಷದ ಬಾಲಕನಿಂದ ಹಿಡಿದು ಎಪ್ಪತ್ತೆರಡು ವರ್ಷದ ವೃದ್ಧರೂ ಇದ್ದ ನಮ್ಮ ಗುಂಪು, ಹಲವು ರಾಜ್ಯಗಳ, ಹಲವು ಭಾಷೆಗಳ, ಸಂಸ್ಕೃತಿಗಳ ಸಂಗಮ. ಆದರೆ ಎಲ್ಲರ ಗುರಿ ಪ್ರಕೃತಿಯ ಆರಾಧನೆ.

ಕಾಡುಮೇಡುಗಳ ನಡುವೆ ಏರಿಳಿವಿನ ಹಾದಿಯಲ್ಲಿ ಹಳ್ಳಕೊಳ್ಳಗಳನ್ನು ಹಾದು ಹೋಗುವಾಗ ಇನ್ನಿಲ್ಲದ ಉತ್ಸಾಹ. ಕೊಡೈಕೆನಾಲನ್ನು ಸುತ್ತಿ ಬಳಸಿ ಮತ್ತೆ ಸ್ಥಳಗಳಿಗೆ ಬಂದಾಗ ಸ್ವಲ್ಪ ನಿರುತ್ಸಾಹ. ಆದರೆ ನಮಗೆ ಆ ವಾತಾವರಣದ ಅಭ್ಯಾಸ ಆಗಬೇಕಿತ್ತಲ್ಲ, ಅದಕ್ಕಾಗಿ ಈ ವಾಮಮಾರ್ಗ! ಮಧ್ಯಾಹ್ನ ಹಳ್ಳವೊಂದರ ಬದಿಯಲ್ಲಿ ಕುಳಿತು ತಂದ ಬುತ್ತಿಯನ್ನು ತಿಂದಿದ್ದಾಯ್ತು. ನಂತರ ಎರಡು ವಾಹನಗಳಲ್ಲಿ ನಮ್ಮನ್ನು ದಟ್ಟ ಕಾಡಿನ ನಡುವೆ ಇರುವ ಬೆರಿಜಾಮ್ ಎಂಬಲ್ಲಿಗೆ ಕರೆದೊಯ್ಯಲಾಯಿತು. ಅಲ್ಲಿಗೆ ಕಾಲ್ನಡಿಗೆಯಲ್ಲಿ ಹೋಗಲು ಅನುಮತಿಯಿರಲಿಲ್ಲ. ಬೆರಿಜಾಮ್ ಎಂಬುದು ಒಂದು ದೊಡ್ಡ ಸರೋವರದ ಹೆಸರು. ಅದನ್ನು ಅಭಿವೃದ್ಧಿಪಡಿಸಿದ ಬ್ರಿಟೀಷ್ ಅಧಿಕಾರಿಯ ಹೆಸರೂ ಹೌದು. ಸರೋವರದ ಹತ್ತಿರದಲ್ಲಿ ಇಲಾಖೆಯವರ ವಸತಿಗೃಹಗಳು ಇವೆ. ಅಂದು ನಮ್ಮ ವಾಸ್ತವ್ಯ ಅಲ್ಲಿಯೇ. ಬೆಳಿಗ್ಗೆ ಕೆರೆಯ ಕಡೆ ಹೋಗುವಾಗ ಎತ್ತರದ ಮರವೊಂದರ ಮೇಲೆ ದೊಡ್ಡ ಗಾತ್ರದ ಕೆಂದಳಿಲು ಕಂಡು, ಬಂದ ಕೆಲಸವೇ ಮರೆತು ಅದರ ಚಿತ್ರ ತೆಗೆಯುವುದರಲ್ಲಿ ಮಗ್ನರಾದೆವು! ಸರೋವರದ ಬಳಿ ಬಂದರೆ ನೀರಿನ ಮೇಲೆ ಹಬೆಯ ದರ್ಶನ!

ನಲವತ್ತೆರಡು ಮಂದಿ ಮುಂದೆ ಹೋಗುತ್ತಿದ್ದರು. ನಾನು, ಕುಮಾರ್ ಫೋಟೊ ತೆಗೆಯುತ್ತಾ ನಡೆಯುತ್ತಿದ್ದೆವು. ದಾರಿಯ ಪಕ್ಕದ ಮರಗಳ ಸಂದಿನಲ್ಲಿ ಬಿಸಿಲಿಗೆ ಹೊಳೆಯುತ್ತಿದ್ದ ಕೆಂಪು ಬಣ್ಣದ, ಆರಿಂಚು ವ್ಯಾಸದ ವೃತ್ತಾಕಾರದ ವಸ್ತುವೊಂದು ಕಣ್ಣಿಗೆ ಬಿದ್ದು, ಅದೇನೆಂದು ನೋಡುವ ಸಲುವಾಗಿ ಹತ್ತಿರ ಹೋದರೆ, ‘ಅಬ್ಬಾ, ಅಪರೂಪದ ಅಣಬೆ ಸಾರ್ ಇದು’ ಕುಮಾರ್ ಉದ್ಘಾರ. ಎಷ್ಟು ಚಿತ್ರ ತೆಗೆದರೂ ಇನ್ನೂ ತೆಗೆಯಬೇಕೆಂಬ ಆಸೆ ಹುಟ್ಟಿಸುವ ಅದರ ಗಾತ್ರ, ಬಣ್ಣಕ್ಕೆ ಬೆರಗಾದೆವು.

ಮಧ್ಯಾಹ್ನ ಬುತ್ತಿ ತಿನ್ನಲು ನಾವು ಕುಳಿತಿದ್ದು ಕೆರೆಯೊಂದರ ಬಳಿ. ನಿಶ್ಚಲ ನೀರಿನಿಂದಾಗಿ, ದಂಡೆಯ ಮರಗಿಡಗಳ ಪ್ರತಿಬಿಂಬ ನೀರಿನಲ್ಲಿ ಸೊಗಸಾಗಿ ಮೂಡಿತ್ತು. ಆದರೆ ಅದೆಷ್ಟು ಹೊತ್ತು? ಕೆಲವೇ ನಿಮಿಷಗಳಲ್ಲಿ ಕವಿದು ದೃಶ್ಯವೇ ಬೇರೆಯಾಯ್ತು! ನಾವು ಚಾರಣದುದ್ದಕ್ಕೂ ಕಂಡಂತೆ, ಬೆಳಿಗ್ಗೆಯಿಂದ ನಡುಮಧ್ಯಾಹ್ನದವರೆಗೆ ಶುಭ್ರ ಆಕಾಶವಿದ್ದರೆ, ಮಧ್ಯಾಹ್ನದ ನಂತರ ಮಂಜು ಮುಸುಕು ಕವಿದು, ಸಂಜೆಯ ವೇಳೆಗೆ ಅಕ್ಕಪಕ್ಕ ಏನೂ ಕಾಣಿಸದಂಥ ವಾತಾವರಣ. ಮರುದಿನ ಬೆಳಗ್ಗೆ ಅದು ತಗ್ಗು ಪ್ರದೇಶದಲ್ಲಿ, ಕಣಿವೆಗಳಲ್ಲಿ ದಟ್ಟವಾಗಿ ಸಂಗ್ರಹವಾಗಿರುತ್ತಿತ್ತು. ಹಾಗಾಗಿ ಪ್ರತಿದಿನ ನಮಗೆ ಸೂರ್ಯೋದಯದ ವೇಳೆಗೆ ಅದ್ಭುತ ಎನ್ನುವಂತಹ ದೃಶ್ಯ!

ಅಂದು ರಾತ್ರೆ ನಾವು ಉಳಿದದ್ದು ಕಾವುಂಜಿ ಎಂಬ ಚಿಕ್ಕ ಹಳ್ಳಿಯ ಅರಣ್ಯ ಇಲಾಖೆಯ ಕೊಠಡಿಗಳಲ್ಲಿ. ಆ ತಗ್ಗು ಪ್ರದೇಶದಲ್ಲಿ. ಹಾಗಾಗಿ ಮರುಬೆಳಗ್ಗೆ ನಮಗೆ ಸೂರ್ಯೋದಯದ ಸಮಯದಲ್ಲಿ ಮಂಜಿನ ದರ್ಶನವಾಗಲಿಲ್ಲ. ಆಕಾಶದಲ್ಲಿ ವಿಶಿಷ್ಟ ವಿನ್ಯಾಸದ ಮೋಡಗಳಿದ್ದು ಸಂತಸ ತಂದವು. ಕಾವುಂಜಿಯಿಂದ ಎದುರಿಗೇ ಕಾಣುತ್ತಿದ್ದ ಮನವನ್ನೂರಿಗೆ ಹೋಗಲು ಬಳಸು ದಾರಿ. ಉದ್ದೇಶ, ಇನ್ನಷ್ಟು ಚಾರಣದ ಅನುಭವ ಪಡೆಯುವುದು. ಸುಮ್ಮಸುಮ್ಮನೆ ಬೆಟ್ಟ ಹತ್ತಿಳಿದು, ಹಳ್ಳ ದಾಟಿ, ಐದು ಮೈಲಿಯಿದ್ದ ಹಳ್ಳಿಯನ್ನು ಹತ್ತು ಮೈಲಿ ಕ್ರಮಿಸಿ ಮುಟ್ಟುವುದು, ದಾರಿಯಲ್ಲಿ ಸಿಗುತ್ತಿದ್ದ ಹಳ್ಳಿಗರಿಗೆ ಮೋಜಿನ ವಿಷಯವೇ ಆಗಿತ್ತು! ಅಂತೂ ಸಂಜೆಯ ವೇಳೆಗೆ ಮನವನ್ನೂರು ಹಿಲ್ ಟಾಪ್ ಹೋಟೆಲ್ ತಲುಪಿದೆವು. ಅಂದು ವರ್ಷದ ಕೊನೆಯ ದಿನ. ಎಲ್ಲರಿಗೆ ಕ್ಯಾಂಪ್ ಫೈರ್ ಮಾಡುವ ಉಮೇದು.

ಮರು ಬೆಳಿಗ್ಗೆ ಹೊಸ ವರ್ಷದ ಮೊದಲ ದಿನ. ಪ್ರಕೃತಿಗೂ ಅದು ತಿಳಿದಿತ್ತೇನೋ ಎಂಬಂತೆ ನಮ್ಮೆದುರಿಗೆ ಕನಸಿನ ಲೋಕವೊಂದು ತೆರೆದುಕೊಂಡಿತ್ತು. ಸ್ವರ್ಗವೂ ಇಷ್ಟು ಸೊಗಸಾಗಿರಲಾರದು ಎಂಬ ಭಾವನೆ ಎಲ್ಲರಿಗೂ ಬಂದಿದ್ದರೆ ಆಶ್ಚರ್ಯವಿಲ್ಲ. ಕಣ್ಣೆದುರಿಗಿನ ದೃಶ್ಯ ವೈಭವವನ್ನು ಬಣ್ಣಿಸಲು ಬಹುಶಃ ಕವಿಗಳಿಗೂ ಕಷ್ಟ! ಕೈಯಲ್ಲಿದ್ದ ಕ್ಯಾಮೆರಾ ಈ ನಯನ ಮನೋಹರ ಪ್ರಕೃತಿ ಸೊಬಗನ್ನು ಹಿಡಿಯಿತು. ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಟು ಸ್ವಲ್ಪ ಕಾಲ್ನಡಿಗೆ, ಸ್ವಲ್ಪ ದೂರ ವಾಹನ ಪ್ರಯಾಣ ಮಾಡಿ ಕಾಡಿನ ಮಧ್ಯೆ ಇದ್ದ ಕಡವರೈ ಎಂಬ ಸ್ಥಳವನ್ನು ತಲುಪಿದೆವು. ಈ ದಿನ ಸ್ವಲ್ಪ ನೀರಸ.

ಚಾರಣದ ಕೊನೆಯ ದಿನ
ಕಡವರೈ ಬಿಟ್ಟು, ಕಿಳವರೈ ಮಾರ್ಗವಾಗಿ, ಕೇರಳ ಗಡಿಯ ಕೋವಿಲೂರ್ ಸೇರಬೇಕಿತ್ತು. ಯಥಾಪ್ರಕಾರ ನಡುವೆ ಪರ್ವತವೊಂದನ್ನು ಹತ್ತಿ ಅದರ ಇನ್ನೊಂದು ಬದಿಯ ಊರಿನ್ನು ಮುಟ್ಟುವ ಕ್ರಮ. ಆದರೆ ಬೆಟ್ಟ ಏರಿ ನಿಂತಾಗ ಕಂಡ ವೈಭವ ಆಯಾಸವನ್ನೆಲ್ಲ ಮರೆಸುವಂತಿತ್ತು. ಉನ್ನತ ಶಿಖರದ ಮೇಲೆ ನಿಂತ ನಮಗೆ ನಾಲ್ಕೂ ದಿಕ್ಕುಗಳಲ್ಲಿ ಮಂಜು ಮುಸುಕಿದ ಪರ್ವತಗಳ ಸಾಲು ಕಂಡುದು, ನಡು ಮಧ್ಯಾಹ್ನದಲ್ಲಿ! ಬೆಟ್ಟ ಇಳಿದು ಕೋವಿಲೂರನ್ನು ತಲುಪಿ, ಅಲ್ಲಿಂದ ಒಂದೂವರೆ ಘಂಟೆಯ ಬಸ್ ಪ್ರಯಾಣದ ನಂತರ ಮುನ್ನಾರ್ ತಲುಪಿದಾಗ ‘ಇಷ್ಟು ಬೇಗ ಮುಗಿದೇ ಹೋಯಿತೆ ನಮ್ಮ ಟ್ರೆಕ್ಕಿಂಗ್’ ಅನ್ನೋ ಬೇಸರ.

Tags

Related Articles

Leave a Reply

Your email address will not be published. Required fields are marked *

Language
Close