ಆಗದೆಯೂ ಇರಬಹುದಾದ ಮದುವೆಗೆ ಓಲಗ!

Posted In : ಕ್ಷಣಹೊತ್ತು ಅಣಿ ಮುತ್ತು

ಹೌದು! ಆಗದೆಯೇ ಹೋಗಬಹುದಾದ ಮದುವೆಗೆ ಓಲಗ ನುಡಿಸುವ ಜನರಿದ್ದಾರೆ! ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸಬೇಕಾದ ಪ್ರಸಂಗ ಬಂದಿರುತ್ತದೆ. ಆ ಸಮಸ್ಯೆಯ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿದೆ. ಆದರೆ ಎಂದೋ ಬರಬಹುದಾದ (ಬಾರದೆಯೂ ಇರಬಹುದಾದ) ಸಮಸ್ಯೆಯ ಬಗ್ಗೆ ಇಂದು ಚಿಂತಿಸುವುದರಲ್ಲಿ ಅರ್ಥವಿಲ್ಲ. ಆಗದೆಯೇ ಹೋಗ ಬಹುದಾದ ಮದುವೆಗೆ ಓಲಗ ನುಡಿಸುವುದು ಎಂದರೆ ಇದೆ!

ಇಲ್ಲಿರುವ ಕುತೂಹಲಕಾರಿ ಕತೆಯು ಅಂತಹ ಚಿಂತಕರದ್ದು!  ಒಂದೂರಿನ ಹೊರಗೊಂದು ಹಲಸಿನ ಮರವಿತ್ತು. ಅದರ ನೆರಳಲ್ಲಿ ಹದಿಹರೆಯದ ಹುಡುಗಿ ಯೊಬ್ಬಳು ಚಿಂತಾಕ್ರಾಂತಳಾಗಿ ಕುಳಿತಿದ್ದಳು. ಆ ರಸ್ತೆಯಲ್ಲಿ ಅದೇ ಸಮಯಕ್ಕೆ ಬಂದ ಅದೇ ಊರಿನ ಸಜ್ಜನರೊಬ್ಬರು ಆಕೆಯನ್ನು ನೋಡಿ, ಆಕೆಯ ಚಿಂತೆಗೆ ಕಾರಣವೇನೆಂದು ಕೇಳಿದರು. ಆಕೆ ನಮ್ಮ ತಂದೆ ಮತ್ತು ನಮ್ಮ ಅಣ್ಣ ನವರು ಸೌದೆ ಕಡಿದು ತರಲು ಕಾಡಿಗೆ ಹೋಗಿದ್ದಾರೆ. ಕಾಡಿಗೆ ಎಲ್ಲಿಂದಲೋ ನರಭಕ್ಷಕ ಹುಲಿಯೊಂದು ಬಂದಿದೆಯೆಂದು ಜನ ಮಾತನಾಡಿಕೊಳ್ಳುವುದನ್ನು ಈಗ ತಾನೇ ಕೇಳಿದೆ. ಅದು ಎದುರು ಬಂದವರನ್ನು ಯಾರನ್ನೂ ಬಿಟ್ಟಿಲ್ಲವಂತೆ. ತಿಂದು ಹಾಕಿದೆ ಯಂತೆ. ನಮ್ಮ ತಂದೆಯವರಿಗೆ ಏನಾಗುತ್ತದೋ ಎಂಬ ಚಿಂತೆ ಎಂದಳು.

ಸಜ್ಜನರು ನಮ್ಮೂರಿನ ಜನರು ಪ್ರತಿದಿನ ಕಾಡಿಗೆ ಹೋಗಿ ಬರುತ್ತಾರೆ. ನರಭಕ್ಷಕ ಹುಲಿಯ ಬಗ್ಗೆ ಜನರು ಹೇಳುವುದು ಅಂತೆ-ಕಂತೆಯ ಮಾತಿರಬಹುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಮಗೂ. ಅದೂ ಅಲ್ಲದೆ ನಿಮ್ಮ ತಂದೆಯವರು ಒಬ್ಬರೇ ಕಾಡಿಗೆ ಹೋಗಿಲ್ಲ. ನಿಮ್ಮ ತಂದೆಯವರ ಸಂಗಡ ನಿಮ್ಮ ಅಣ್ಣನೂ ಹೋಗಿದ್ದಾರೆ. ನಿಮ್ಮಣ್ಣ ನಿಮ್ಮ ತಂದೆಯವರನ್ನು ಸುರಕ್ಷಿತವಾಗಿ ಕರೆತರುತ್ತಾರೆ ಚಿಂತಿಸಬೇಡ ಎಂದರು.  ತಕ್ಷಣ ಆಕೆ ನನಗೆ ನಮ್ಮಣ್ಣನಿಗೇ ಏನಾದರೂ ಆಗಿಬಿಟ್ಟರೆ ಎನ್ನುವ ಚಿಂತೆ ಎಂದಳು. ಸಜ್ಜನರು ನಿಮ್ಮಣ್ಣ ಕೈಯ್ಯಲ್ಲಿ ಬಂದೂಕು ಇಟ್ಟುಕೊಂಡಿರುತ್ತಾನಂತೆ. ಆತ ಹುಲಿಯನ್ನು ಎದುರಿಸಬಲ್ಲ.

ಚಿಂತಿಸಬೇಡ ಎಂದರು. ಆಕೆ ಸರಿಯಾದ ಸಮಯದಲ್ಲಿ ಬಂದೂಕು ಸರಿಯಾಗಿ ಕೆಲಸ ಮಾಡದಿದ್ದರೆ ಗತಿಯೇನು? ಅಂತಹ ಸಂದ ರ್ಭದಲ್ಲಿ ಹುಲಿಯಿಂದ ನಮ್ಮ ಅಣ್ಣ ಮತ್ತು ಅಪ್ಪ ಇಬ್ಬರಿಗೂ ಒದಗಬಹುದಾದ ಪ್ರಾಣಾಪಾಯದ ಬಗ್ಗೆ ನನಗೆ ಚಿಂತೆ ಎಂದಳು. ಸಜ್ಜನರು ಹೆದರಬೇಡಮ್ಮ! ನಿಮ್ಮಣ್ಣ ಬಂದೂಕು ಬಳಸುವುದರಲ್ಲಿ ಒಳ್ಳೆಯ ತರಬೇತಿ ಪಡೆದಿದ್ದಾನೆ. ಅದೂ ಅಲ್ಲದೆ, ಆತನಲ್ಲಿರುವ ಬಂದೂಕು ಹೊಸದು, ಶಕ್ತಿಶಾಲಿಯಾದದ್ದು. ಅದು ಸರಿಯಾಗಿ ಕೆಲಸ ಮಾಡುತ್ತದೆ. ಹುಲಿ ಆಕ್ರಮಣ ಮಾಡಿದರೆ, ಆತ ಬಂದೂಕಿನಿಂದ ಹುಲಿಯನ್ನೇ ಕೊಲ್ಲಬಲ್ಲ ಎಂದಾಗ, ಆ ಹುಡುಗಿ ನನ್ನಣ್ಣನ ಬಂದೂಕಿನ ಗುಂಡಿಗೆ ಸಿಕ್ಕ ಹುಲಿ ಅನ್ಯಾಯ ವಾಗಿ ಸತ್ತು ಹೋಗುತ್ತದೆ. ನನಗೀಗ ಬಡಪಾಯಿ ಹುಲಿಯ ಬಗ್ಗೆ ಚಿಂತೆ! ಎನ್ನುತ್ತಾ ಗಟ್ಟಿಯಾಗಿ ಅಳತೊಡಗಿದಳು.

ಆಗ ಸಜ್ಜನರು ನಿನ್ನ ಚಿಂತೆಯ ಸರಪಳಿಗೆ ಮೊದಲಿದೆ. ಆದರೆ ತುದಿಯಿಲ್ಲ. ಯಾವುದಾದರೂ ಒಂದು ವಿಷಯವಾಗಿ ಚಿಂತಿಸು ವವರಿಗೆ ಧೈರ್ಯ ತುಂಬಬಹುದು. ನಿನ್ನ ಹಾಗೆ ಸಂಬಂಧವಿರದ ವಿಷಯಗಳ ಬಗ್ಗೆಯೆಲ್ಲ ಚಿಂತಿಸುವವರಿಗೆ ಯಾರೂ ಏನೂ ಮಾಡಲೂ ಸಾಧ್ಯವಿಲ್ಲ ಎನ್ನುತ್ತ ಹೊರಟು ಹೋದರಂತೆ. ನಮ್ಮ ಸ್ವಾಮೀಜಿಯವರು ತಮ್ಮ ಉಪನ್ಯಾಸದಲ್ಲಿ ಹೇಳಿದ ಈ ಕತೆ ಯಲ್ಲಿ ಉತ್ಪ್ರೇಕ್ಷೆ ಇರಲಾರದು. ಅವರು ನಾವು ಬದುಕಿನಲ್ಲಿ ಕಲ್ಪಿಸಿಕೊಂಡು ಹೆದರಿಕೊಳ್ಳುವ ಸಮಸ್ಯೆಗಳು, ಬಾರದೆಯೇ ಹೋಗುವ ಸನ್ನಿವೇಶಗಳು ಹತ್ತಾರು ಇರುತ್ತವೆ. ನಾವು ಹೆದರಿಕೊಂಡಿದ್ದೆಲ್ಲ ಆಗಿಯೇ ಬಿಟ್ಟಿದ್ದರೆ ನಾವು ಇಷ್ಟು ದಿನ ಬದುಕಿ ರುತ್ತಲೇ ಇರುತ್ತಿರಲಿಲ್ಲ! ಎಂದು ಉಪನ್ಯಾಸವನ್ನು ಮುಂದುವರೆಸಿದರು. ಬದುಕಿನಲ್ಲಿ ಬರಬಹುದಾದ ಅಥವಾ ಬಾರದೆಯೂ ಇರಬಹುದಾದ ಸಮಸ್ಯೆಗಳ ಬಗ್ಗೆ ಚಿಂತಿಸುವ ವ್ಯಕ್ತಿಗಳು ನಾವಲ್ಲಾ ತಾನೇ? ಅಹುದೋ ಅಲ್ಲವೋ ಬಲ್ಲವರು ನಾವೇ ತಾನೇ?

Leave a Reply

Your email address will not be published. Required fields are marked *

17 − 7 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top