About Us Advertise with us Be a Reporter E-Paper

ಸಿನಿಮಾಸ್

ಕಳೆಗಟ್ಟಿದ ನಾಗರಹಾವು: ಮತ್ತೊಮ್ಮೆ ಪ್ರೇಕ್ಷಕರು ಮೋಡಿ

ನಾಗರಹಾವು ಅಬ್ಬರ ಬಲು ಜೋರು

ಜಿ.ಎಸ್ ಕಾರ್ತಿಕ ಸುಧನ್.

ಕಳೆದ ಒಂದು ತಿಂಗಳಿನಿಂದ ಪ್ರತಿ ಶುಕ್ರವಾರ ಏಳು-ಎಂಟು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಗಾಂಧಿನಗರದಲ್ಲಿ ಈ ವಾರ ಸಮರ್ಥ, ನವೋದಯ ಡೇಸ್ ಮತ್ತು ಕೀಚಕರು ಎಂಬ ಹೊಸ ಚಿತ್ರಗಳು ತೆರೆಗೆ ಬಂದಿವೆ. ಈ ಮೂರು ಸಿನಿಮಾಗಳ ಜೊತೆಗೆ 45 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಸಿನಿಮಾಗಳಲ್ಲಿ ಒಂದು ಎಂದೇ ಕರೆಸಿಕೊಳ್ಳುತ್ತಿರುವ ‘ನಾಗರಹಾವು’ ಚಿತ್ರ ಮರು ಬಿಡುಗಡೆಯಾಗಿದೆ. ಒಟ್ಟಾರೆ ಈ ನಾಲ್ಕೂ ಸಿನಿಮಾಗಳಲ್ಲಿ ‘ಟಾಕ್ ಆಫ್ ದಿ ಸ್ಯಾಂಡಲ್‌ವುಡ್’ ಎಂದು ಕರೆಸಿಕೊಳ್ಳುತ್ತಿರುವುದು ಮಾತ್ರ ನಿರೀಕ್ಷೆಯಂತೆ ‘ನಾಗರ ಹಾವು’.

ಇತ್ತೀಚೆಗೆ ತೆರೆಕಾಣುವ ಬಹುತೇಕ ಹೊಸ ಸಿನಿಮಾಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳೇ ಸಿಗುವುದು ಕಷ್ಟ. ಸಿಕ್ಕರೂ, ಫಸ್ಟ್ ಡೇ ಫಸ್ಟ್ ಶೋಗಳಿಗೇ ಪ್ರೇಕ್ಷಕರಿಲ್ಲದೆ ಥಿಯೇಟರ್‌ಗಳು ಬಣಗುಡುತ್ತಿರುತ್ತವೆ. ಇನ್ನು ಅಬ್ಬಬ್ಬಾ ಎಂದರೂ ಒಂದು ಚಿತ್ರ ಒಂದು ಥಿಯೇಟರ್‌ನಲ್ಲಿ ಕನಿಷ್ಠ ಒಂದುವಾರವಾದರೂ ಓಡುತ್ತದೆ ಎಂಬುದಕ್ಕೂ ಗ್ಯಾರೆಂಟಿ ಕೊಡುವಂತಿಲ್ಲ. ಇನ್ನು ಸಿನಿಮಾ ಬಿಡುಗಡೆಯಾದ ಸಂಜೆಯೊಳಗೆ ಅದರ ಹಣೆಬರಹ ಪ್ರೇಕ್ಷಕರಿಗೆ, ನಿರ್ಮಾಪಕರಿಗೆ, ವಿತರಕರಿಗೆ ಗೊತ್ತಾಗಿ ಹೋಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ ನಾಲ್ಕೂವರೆ ದಶಕದ ಹಿಂದಿನ ‘ನಾಗರ ಹಾವು’ ಚಿತ್ರ ಹೊಸ ರೂಪದಲ್ಲಿ ಈ ವಾರ ಗಾಂಧಿನಗರದ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಾಂತ ನೂರೈವತ್ತಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ರೀ ರಿಲೀಸ್ ಆಗಿದೆ.

ನಿರೀಕ್ಷೆಯಂತೆ ‘ನಾಗರ ಹಾವು’ ಹೊಸ ರೂಪದಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಚಿತ್ರ ತೆರೆಕಂಡ ಗಾಂಧಿನಗರದ ಮುಖ್ಯ ಚಿತ್ರಮಂದಿರ ನರ್ತಕಿ ಮುಂದೆ ಅಭಿಮಾನಿಗಳ ಜಾತ್ರೆಯೆ ನಡೆದಿತ್ತು. ನರ್ತಕಿ ಚಿತ್ರಮಂದಿರದಲ್ಲಿ ಹಿಂದಿನ ದಿನವೇ ಮೊದಲ ಪ್ರದರ್ಶನದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಬೆಂಗಳೂರಿನ ತಾವರೆಕೆರೆಯ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಗ್ಗೆ ಆರು ಗಂಟೆಗೆ ಮೊದಲ ಪ್ರದರ್ಶನ ಪ್ರಾರಂಭ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಚಿತ್ರಮಂದಿರದ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ಕೆಲವರು ಸೀಟ್ ಇಲ್ಲದೆ ಮೆಟ್ಟಿಲ ಮೇಲೆ ಕೂತು ಸಿನಿಮಾ ನೋಡಿದರೆ, ಇನ್ನೂ ಕೆಲವರು ನಿಂತೇ ಇಡೀ ಸಿನಿಮಾವನ್ನು ಕಣ್ಣು ತುಂಬಿಕೊಂಡರು. ಚಿತ್ರ ಬಿಡುಗಡೆಯಾದ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಈ ಸನ್ನಿವೇಶಗಳು ಕಂಡುಬರುತ್ತಿದೆ.

ಇನ್ನು 7.1 ಸಿನಿಮಾ ಸ್ಕೋಪ್‌ನಲ್ಲಿ ‘ನಾಗರಹಾವು’ ಅಬ್ಬರ ಬಲು ಜೋರಾಗಿದೆ. ವಿಡಿಯೋ ಹಾಗೂ ಆಡಿಯೋ ಕ್ವಾಲಿಟಿ ಸಿನಿಮಾವನ್ನು ಮತ್ತೊಂದು ಹಂತಕ್ಕೆ ನೋಡುಗರನ್ನು ಕರೆದೊಯ್ಯುತ್ತದೆ. ಇನ್ನು ಚಿತ್ರದ ಟೈಟಲ್ ಕಾರ್ಡ್‌ನಿಂದ ಕೊನೆಯವರೆಗೆ, ಮೂಲ ಯಾವ ದೃಶ್ಯಗಳು, ಸನ್ನಿವೇಶಗಳೂ ಬದಲಾಗಿಲ್ಲ. ಚಿತ್ರದ ಪ್ರತಿ ದೃಶ್ಯಕ್ಕೆ ಕೂಡ ಯಾವುದೇ ಲೋಪ ಬಾರದಂತೆ ರೀ ಕ್ರಿಯೇಟ್ ಮಾಡಲಾಗಿದೆ. ಹಾಡುಗಳು ಇನ್ನಷ್ಟು ಇಂಪಾಗಿದ್ದು, ನೋಡುಗರು ಮತ್ತೊಮ್ಮೆ ಹಾಡುಗಳನ್ನು ಗುನುಗುಡುತ್ತಿದ್ದಾರೆ. ತೆರೆಯ ಮೇಲೆ ವಿಷ್ಣುವರ್ಧನ್ ಅವರ ಎಂಟ್ರಿಯಾಗುತ್ತಿದ್ದಂತೆ, ಚಿತ್ರಮಂದಿರದ ತುಂಬೆಲ್ಲ ಜೈಕಾರ ತುಂಬಿಕೊಳ್ಳುತ್ತಿದೆ. ತಮ್ಮ ನೆಚ್ಚಿನ ನಟನನ್ನು ಮತ್ತೊಮ್ಮೆ ಬೆಳ್ಳಿತೆರೆಮೇಲೆ ನೋಡುವ ವಿಷ್ಣುವರ್ಧನ್ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.

ಗಾಂಧಿನಗರದ ನರ್ತಕಿ ಚಿತ್ರಮಂದಿರ ಮುಂದೆ ಅಭಿಮಾನಿಗಳು ಚಿತ್ರ ನೋಡಲು ಮುಗಿಬೀಳುತ್ತಿರುವುದು.

‘ನಾಗರಹಾವು’ ಚಿತ್ರವನ್ನು ನೋಡಲು ಅಭಿಮಾನಿಗಳು ಮಾತ್ರವಲ್ಲ, ಚಿತ್ರರಂಗ ಗಣ್ಯರು ಕೂಡ ಚಿತ್ರಮಂದಿರಗಳತ್ತ ಬಂದಿದ್ದರು. ನಿರ್ದೇಶಕ ಸಂತೋಷ್ ಆನಂದ ರಾಮ್, ನಿರ್ಮಾಪಕ ಸೂರಪ್ಪ ಬಾಬು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ನಿರ್ದೇಶಕ ರಘುರಾಮ್ ಸೇರಿದಂತೆ ಅನೇಕರು ಫಸ್‌ಟ್ ಡೇ ಫಸ್‌ಟ್ ಶೋದಲ್ಲಿ ಸಿನಿಮಾವನ್ನು ವೀಕ್ಷಿಸಿದರು. ಒಟ್ಟಾರೆ ಕನ್ನಡ ಚಿತ್ರರಂಗದ ಅಪರೂಪದ ಚಿತ್ರ ಇಂದಿನ ದಿನಗಳಲ್ಲಿ ಚರ್ಚೆ-ವಿಮರ್ಶೆಗಳನ್ನು ಮೀರಿ ನಿಲ್ಲುವಂತದ್ದು. ವಾದ, ವಿವಾದ, ತರ್ಕಗಳನ್ನು ಬದಿಗಿಟ್ಟು ನೋಡುವವರಿಗೆ ‘ನಾಗರ ಹಾವು’ ಹೊಸ ಅನುಭವವನ್ನು ಕೊಡುವುದರಲ್ಲಿ ಅನುಮಾನವೇ ಇಲ್ಲ.

ನಾಗರಹಾವು ಕೇವಲ ಮನರಂಜನೆಗೆ ಸಿನಿಮಾ. ಅದರಲ್ಲಿ ಅನೇಕ ಸಂದೇಶಗಳಿವೆ. ಅದನ್ನು ಸೂಕ್ಷ್ಮವಾಗಿ ನೋಡಿದರೆ ಅರ್ಥವಾಗುತ್ತದೆ. ಚಿತ್ರದ ದೃಶ್ಯವೊಂದರಲ್ಲಿ ಬರುವ ‘ಎರಡು ಹೃದಯ ಒಂದಾಗುತ್ತದೆ ಅಂದರೆ ಎರಡು ಧರ್ಮ ಒಂದಾಗಬೇಕು. ಎರಡು ದೇಶ ಒಂದಾಗುತ್ತಿದೆ ಅಂದರೆ, ಎರಡು ದೇಶದ ಜನ ಒಂದಾಗಬೇಕು’ ಎಂಬ ಅನೇಕ ಸಂಭಾಷಣೆಗಳಲ್ಲಿ ಈ ರೀತಿಯ ಸಂದೇಶಗಳನ್ನು ಕಾಣಬಹುದು.
-ಮನೋಹರ್ ವಿಷ್ಣುವರ್ಧನ್ ಅಭಿಮಾನಿ.

ಅನೇಕ ಒಳ್ಳೆ ಒಳ್ಳೆಯ ವಿಷಯಗಳು ಸಿನಿಮಾದ ಶ್ರೇಷ್ಟತೆಯನ್ನು ಎತ್ತಿ ಹಿಡಿದಿದೆ. ನಾಗರಹಾವು ಎಂಬುದು ಪುಟ್ಟಣ್ಣ ಕಣಗಾಲ್ ಸೃಷ್ಟಿಯ ಅದ್ಭುತ ಕಲಾಕೃತಿ. ಗುರು-ಶಿಷ್ಯನ ಸಂಬಂಧ, ಜಾತಿ, ಧರ್ಮ, ಪ್ರೀತಿ, ಪ್ರೇಮ, ಹಠ, ದ್ವೇಷ, ಹೀಗೆ ಹುಡುಕುತ್ತಾ ಹೋದರೆ ಸಾಕಷ್ಟು ಅಂಶಗಳು ಸಿಗುತ್ತವೆ. ಇದು ಒಂದು ಬಾರಿ ನೋಡಿ ಬಿಡುವ ಸಿನಿಮಾ ಅಲ್ಲ. ಈಗಿನ ತಂತ್ರಜ್ಞಾನದಲ್ಲಿ ನಾಗರ ಹಾವು ಇನ್ನಷ್ಟು ಸುಂದರವಾಗಿ ಕಾಣುತ್ತದೆ.
— ಆಶಾರಾಣಿ, ಪ್ರೇಕ್ಷಕಿ.

ಆಗ ರಿಲೀಸ್ ಆಗಿದ್ದ ನಾಗರಹಾವು ಸಿನಿಮಾವನ್ನ ನೋಡಲು ಆಗಿರಲಿಲ್ಲ. ಆದ್ರೆ ಈಗ ರೀ-ರಿಲೀಸ್ ಆಗುತ್ತಿರುವ ನಾಗರಹಾವು ಸಿನಿಮಾ ನೋಡಲು ಮೊದಲೇ ನಿರ್ಧರಿಸಿದ್ದೆ. ಅದರಂತೆ ಫಸ್ಟ್ ಡೇ ಫಸ್ಟ್ ಶೋವನ್ನು ನೋಡಿದೆ. ನಿಜಕ್ಕೂ ಹೊಸದಾಗಿ ಬಂದಿರುವ ನಾಗರಹಾವು ಅದ್ಭುತವಾಗಿದೆ. ಈಗ ಸಿನಿಮಾ ಮಾಡುತ್ತಿ ರುವವರು ಇಂತಹ ಸಿನಿಮಾಗಳನ್ನು ನೋಡಿ ಕಲಿಯುವುದು ತುಂಬಾ ಇದೆ.
-ರಾಜೇಶ್ ಕುಮಾರ್ ಚಿತ್ರ ಪ್ರೇಮಿ.

Tags

Related Articles

Leave a Reply

Your email address will not be published. Required fields are marked *

Language
Close