ಕರುಣಾ ಭೇಟಿ ಹಿಂದೆ ಪ್ರಧಾನಿ ಮೋದಿ ಲೆಕ್ಕಾಚಾರ

Posted In : ಸಂಗಮ, ಸಂಪುಟ

‘ಕರುಣಾನಿಧಿಯವರೇ, ದೆಹಲಿಯ ನನ್ನ ಮನೆಗೆ ಬಂದು ಸ್ವಲ್ಪ ದಿನ ವಿಶ್ರಾಂತಿ ಪಡೆಯಿರಿ’ ಎಂದು ಮೋದಿ ಕರುಣಾನಿಧಿಯವರ ಮನೆಗೆ ಹೋಗಿ ಹೇಳಿದ ಮಾತು ಗಾಳಿಯಲ್ಲಿ ತೂರಿ ಬಿಡುವಷ್ಟು ಹಗುರವಾದುದ್ದಲ್ಲ. ಆ ಮಾತಿನಲ್ಲಿ ಆಳವಿದೆ.ಇದು ಮುಂದೆ ದೇಶದ ರಾಜಕೀಯದಲ್ಲಿ, ವಿಶೇಷವಾಗಿ ದಕ್ಷಿಣ ಭಾರತದ ರಾಜಕೀಯದಲ್ಲಿ ಒಂದು ಹೊಸ ತಿರುವನ್ನೇ ನೀಡಬಹುದು. ಹೌದು. ಚೆನ್ನೈನ ಗೋಪಾಲಪುರಂನಲ್ಲಿರುವ ಕರುಣಾನಿಧಿಯವರ ಮನೆಗೆ ಮೋದೀಜಿಯವರ ಭೇಟಿ ದಕ್ಷಿಣ ಭಾರತದ ರಾಜಕೀಯದಲ್ಲಿ ಒಂದು ಹೊಸ ಅಲೆಯನ್ನೇ ಎಬ್ಬಿಸಿದೆ. ಮೋದಿಜಿಯವರ ಈ ಇಪ್ಪತ್ತು ನಿಮಿಷದ ಭೇಟಿ ಕೇವಲ ಕರುಣಾನಿಧಿಯವರ ಆರೋಗ್ಯದ ವಿಚಾರಣೆಗಾಗಿ ಎನ್ನುವ ಬಿಜೆಪಿ ನಾಯಕರ ಮಾತಿಗೆ ಜನರ ಸಮ್ಮತಿಯಿಲ್ಲ. ಮೋದಿಜಿ ಹೊರಗಡೆ ಬಂದು ಜನರತ್ತ ಕೈ ಬೀಸಿದಾಗ, ಡಿಎಮ್‌ಕೆ- ಬಿಜೆಪಿ ಮೈತ್ರಿ ಎನ್ನುವ ಕೂಗು ಇಡೀ ತಮಿಳುನಾಡು ಕೇಳುವಹಾಗಿತ್ತು.

ಜಯಲಲಿತಾ ನಿಧನದ ನಂತರ ಅವರ ಪಾರ್ಥಿವ ಶರೀರವನ್ನು ನೋಡಲು ಬಂದಿದ್ದ ಮೋದಿ ಅದಾದ ನಂತರ ತಮಿಳುನಾಡಿಗೆ ಭೇಟಿ ನೀಡಿದ್ದು ಈಗಲೇ. ಮದ್ರಾಸಿನ ಪ್ರತಿಷ್ಠಿತ ದಿನಪತ್ರಿಕೆ ‘ದಿನ ತಂತಿ’ಯ ಪ್ಲಾಟಿನಮ್ ಜುಬ್ಲಿ ಸಮಾರಂಭಕ್ಕೆ ಮೋದಿಜಿ ಬಂದಿದ್ದು ನಿಜ. ಆದರೆ ನಿಜವಾದ ಉದ್ದೇಶ ಕರುಣಾನಿಧಿಯವರನ್ನು ಭೇಟಿ ಮಾಡುವುದಾಗಿತ್ತು. ನಿತಿನ್ ಗಡ್ಕರಿಯವರು ರಜನೀಕಾಂತ್ ಅವರನ್ನು ಕೆಲದಿನಗಳ ಹಿಂದೆ ಭೇಟಿಯಾಗಿ ರಾಜಕೀಯಕ್ಕೆ ಬರುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಇನ್ನೊಂದು ಕಡೆ ಕಮಲ್ ಹಾಸನ್ ಸ್ವತಂತ್ರವಾಗಿ ( ಕಾಂಗ್ರೆಸ್ ಸಹಾಯವನ್ನು ಹಿಂಬದಿಯಿಂದ ಪಡೆದು) ರಾಜಕೀಯಕ್ಕೆ ಧುಮುಕುವ ಸಕಲ ಸಿದ್ಧತೆಯಲ್ಲಿದ್ದ. ಅಮಿತ್ ಷಾ ಅವರು ಎಐಎಡಿಎಮ್‌ಕೆಯ ನಾಯಕರನ್ನು ಒಗ್ಗೂಡಿಸುವ ಜಟಿಲ ಕೆಲಸದಲ್ಲಿ ಒಂದು ವರ್ಷದಿಂದ ನಿರತರಾಗಿದ್ದಾರೆ.

ಇವೆಲ್ಲದರ ನಡುವೆ ಇದ್ದಕ್ಕಿದ್ದಂತೆ ಮೋದೀಜಿ ಚೆನ್ನೈಗೆ ಬಂದು ಕರುಣಾನಿಧಿಯವರನ್ನು ಭೇಟಿ ಮಾಡಿದ್ದರ ಹಿಂದೆ ಬೇರೆ ಏನೋ ಇದೆ ಎಂದನಿಸದೇ ಇರದು. ಇದು ಯಾವುದರ ಸೂಚನೆ? ‘ಇಂದು ತಮಿಳುನಾಡಿನಲ್ಲಿ ಸರಕಾರವೇ ಇಲ್ಲ ಅಂದರೂ ತಪ್ಪಾಗಲಾರದು.ರಾಜ್ಯ ನಡೆಯುತ್ತಿರುವುದು ಒಳ್ಳೆಯ ಐಎಎಸ್ ಅಧಿಕಾರಿಗಳಿಂದ’ ಎಂದು ಹಿರಿಯರೊಬ್ಬರು ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತಿದೆ. ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಕೆ ಪಕ್ಷದಲ್ಲಿ ಆರಂಭವಾದ ಕಲಹ ಇನ್ನೂ ನಿಂತಿಲ್ಲ. ಪಕ್ಷ ಮೂರು ಬಣವಾಗಿ ಒಡೆದು ಹೋಗಿದೆ. ಪನ್ನೀರ್ ಸೆಲ್ವಂ ಬಳಗ, ಪಳನಿಸ್ವಾಮಿ ಬಳಗ, ಟಿ. ಟಿ. ದಿನಕರನ್ ಬಳಗ ಹೀಗೆ ಒಂದು ಪಕ್ಷದಲ್ಲಿ ಮೂರು ಭಾಗ ಅವರ ನಡುವೆ ಕಾಯಂ ಆಗಿ ಒಂದು ವರ್ಷದಿಂದ ಜಗಳ ನಡೆಯುತ್ತಲೇ ಇದೆ. ಈ ಸರಕಾರ ಯಾವಾಗ ಉರುಳುತ್ತದೆ ಎನ್ನುವುದು ತಿಳಿಯದು ಆದರೆ ಸರಕಾರ ಮಾತ್ರ ನಯಾಪೈಸೆಯ ಕೆಲಸವನ್ನೂ ಮಾಡುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ತಮ್ಮಲ್ಲಿಯೇ ಬಗೆಹರಿಯದ ಜಗಳಗಳಿರುವಾಗ ಹೊರ ಲೋಕದ ಆಗು ಹೋಗುಗಳ ಚಿಂತೆ ಅವರಿಗೆ ಎಲ್ಲಿಂದ ಬರಬೇಕು? ಸರಕಾರ ನಡೆಸಬೇಕಿದ್ದ ಅತಿರತ ಮಹಾರಥರೇ ಕಚ್ಚಾಡಿಕೊಳ್ಳುತ್ತಿರುವಾಗ ಪ್ರಜೆಗಳ ಬಗ್ಗೆ ಯೋಚಿಸುವವರಾರು? ಜನರು ಆಗ ಅಮ್ಮನ ಭರವಸೆಯ ಮೇಲೆ ಮತ ಹಾಕಿ ಗೆಲ್ಲಿಸಿದ್ದರು. ಆದರೆ ಇಂದು ಅಮ್ಮನೂ ಇಲ್ಲ, ಚಿಕ್ಕಮ್ಮನೂ ಇಲ್ಲ. ಹೀಗಾಗಿ ಇಂದು ತಮಿಳುನಾಡು ಸರಕಾರದ ಪಕ್ಷಗಳು ಒಳಗೊಳಗೆ ಪೊಳ್ಳಾಗಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ, ನಂತರ ಬರುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಗೆದ್ದು ಬರುವ ಸಾಧ್ಯತೆ ಬಹಳ ಕಡಿಮೆಯಾಗಿದೆ. ಬಿಜೆಪಿಗೆ ಇದರ ಅರಿವಿದೆ.ಹೀಗಾಗಿ ಆ ಪಾಳಯದಲ್ಲಿ ಈಗಾಗಲೇ ಚಿಂತೆ ಕಾಡುತ್ತಿದೆ. ಇದಕ್ಕೆ ಪರ್ಯಾಯವೇನು? ಡಿಎಂಕೆ ಜತೆ ಸಂಧಾನ ನಡೆಸಿ ಮೈತ್ರಿ ಬೆಳೆಸುವುದು. ಇದು ಮೋದೀಜಿಯ ಬುದ್ಧಿವಂತ ನಡೆಯಾಗಿತ್ತು.

ಕರುಣಾನಿಧಿ ಆರೋಗ್ಯ ಮೊದಲಿನ ಹಾಗಿಲ್ಲ. ಅವರ ಮಗ ಸ್ಟಾಲಿನ್ ಅಪ್ಪನಷ್ಟು ತೀಕ್ಷ್ಣ ನಾಯಕನಲ್ಲ. ಆದರೆ ಕರುಣಾನಿಧಿ ಇರುವವರೆಗೂ ಪಕ್ಷ ಒಡೆಯುವುದಿಲ್ಲ. ಕರುಣಾನಿಧಿ ಉತ್ತರಾಧಿಕಾರಿ ತನ್ನ ಮಗ ಸ್ಟಾಲಿನ್ ಎಂದು ಈಗಾಗಲೇ ಘೋಷಣೆ ಮಾಡಿ ಆತನ ಪಟ್ಟಾಭಿಷೇಕ ಮಾಡಿಯಾಗಿದೆ. ಹೀಗಾಗಿ ಕರುಣಾನಿಧಿಗೆ ಏನಾದರೂ ಆದಲ್ಲಿ ಪಕ್ಷ ಅಮ್ಮನ ಪಕ್ಷದ ಹಾಗೆ ಅನಾಥವಾಗುವುದಿಲ್ಲ. ಅಲ್ಲಿ ರಾಜಕೀಯ ಸ್ಥಿರತೆ ಇದೆ. ಇದು ಬಿಜೆಪಿಗೆ ಬೇಕಾಗಿದೆ. ಸ್ಟಾಲಿನ್ ಒಬ್ಬನೇ ಕೇಂದ್ರದ ವರೆಗೆ ತನ್ನ ಪ್ರಭಾವ ಬೀರಲಾರ ಹೀಗಾಗಿ ಅವನಿಗೂ ಬಿಜೆಪಿಯೊಳಗೆ ಬೆರೆತು ಎನ್‌ಡಿಎ ಜತೆ ಸೇರಬೇಕಿದೆ. ಕಳೆದ ಬಾರಿ ರಾಹುಲ್ ಗಾಂಧಿ ತಮಿಳುನಾಡಿಗೆ ಭೇಟಿಕೊಟ್ಟು ಸ್ಟಾಲಿನ್ ಜತೆ ಚರ್ಚೆ ನಡೆಸಿದ ವಿಷಯ ಗೊತ್ತೇ ಇದೆ. ಆದರೆ ಮೋದಿಯ ಚಾಣಾಕ್ಷತನದ ಮುಂದೆ ರಾಹುಲ್ ಗಾಂಧಿ ಪ್ರಭಾವ ನಿಲ್ಲದು. ಹೀಗಾಗಿ ಕಾಂಗ್ರೆಸ್ ಕರುಣಾನಿಧಿಯ ಮನಸ್ಸು ಗೆಲ್ಲುವುದರೊಳಗೇ, ಮೋದೀಜಿ ಮೋಡಿ ಮಾಡುವ ಪ್ರಯತ್ನ ನಡೆಸಿದ್ದಾರೆ.

ಆದರೆ ಈ ಮೈತ್ರಿ ಇನ್ನೂ ಮೊಳಕೆಯ ಹಂತದಲ್ಲಿದೆ. ಮೊಳಕೆ ಒಡೆಯಲು ಚುನಾವಣೆಯ ಕಾವು ಏರಬೇಕು. ಈಗಲೇ ಒಡೆದರೆ ರಾಜ್ಯ ಸಭೆಯಲ್ಲಿ ತೊಂದರೆಯಾಗುತ್ತದೆ. ರಾಜ್ಯಸಭೆಯ ಹದಿನೆಂಟು ಸೀಟುಗಳಲ್ಲಿ ಎಐಎಡಿಎಂಕೆ ಪಕ್ಷದ ಹನ್ನೆರಡು ಸದಸ್ಯರಿದ್ದಾರೆ. ಬಿಹಾರದಲ್ಲಿ ಮಾಡಿದ ಹಾಗೆ ಇಂದು ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಡಿಎಮ್‌ಕೆ ಸೇರಿ ಸರಕಾರ ಮಾಡುತ್ತೇವೆ ಎಂದರೆ ಬಿಜೆಪಿಯ ಅಸ್ತಿತ್ವವೇ ಇಲ್ಲಿ ಇಲ್ಲ. ಹೀಗಾಗಿ ಮೋದೀಜಿ ಇಷ್ಟು ಬೇಗ ಕರುಣಾನಿಧಿಯ ಮನೆಯೊಳಗೆ ಮೈತ್ರಿಯ ತಾಂಬೂಲ ತೆಗೆದುಕೊಂಡು ಹೋಗುವುದಿಲ್ಲ. ಆದರೆ ಇದು ಎಐಎಡಿಎಂಕೆ ಪಕ್ಷಕ್ಕೆ ಒಂದು ರೀತಿ ಹೆದರಿಕೆ ತಂದಿದೆ.ಇಂದು ದೇಶದಲ್ಲಿ ಕಾಂಗ್ರೆಸ್‌ಗಿಂತ ಹತ್ತು ಪಟ್ಟಾದರೂ ಶಕ್ತಿಶಾಲಿ ಬಿಜೆಪಿಯಾಗಿದೆ.

ಬಿಜೆಪಿ ನಾಯಕರು ಡಿಎಮ್‌ಕೆ ಕಡೆ ಒಲಿದರೆ ಎಐಎಡಿಎಂಕೆ ಪಕ್ಷಕ್ಕೆ ಹಾನಿ ಹೆಚ್ಚೇ. ಹೀಗಾಗಿ ಬಿಜೆಪಿ ಹೇಳಿದ ಹಾಗೆ ಕೇಳಿಕೊಂಡಿರಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಮೋದೀಜಿ ಹಾಗೂ ಕರುಣಾನಿಧಿಯವರ ಭೇಟಿಯ ಸಮಯ ಬಹಳ ಮಹತ್ವ ಪಡೆದಿದೆ. ನವೆಂಬರ್ ಏಳರಂದು ಸಿಬಿಐ ವಿಶೇಷ ನ್ಯಾಯಾಲಯವು 2ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು ನೀಡುವ ದಿನವನ್ನು ನಿಗದಿಪಡಿಸಬೇಕಿತ್ತು. ಆದರೆ ಆ ದಿನ ಇನ್ನೂ ಹೊರಗೆ ಬಿದ್ದಿಲ್ಲ. ಎಪ್ರಿಲ್ ತಿಂಗಳಿನಿಂದ ಇಲ್ಲಿಯ ತನಕ ಯಾರ ಒಪ್ಪಿಗೆಗೆ ಕಾಯುತ್ತಿದೆಯೋ ನ್ಯಾಯಾಲಯ ಗೊತ್ತಿಲ್ಲ. ಆದರೆ ಆ ದಿನ ಮೋದೀಜಿಯವರು ಕರುಣಾನಿಧಿಯವರನ್ನು ಭೇಟಿಯಾಗಲು ಹೋದಾಗ ಅಲ್ಲಿ ಸ್ಟಾಲಿನ್ ಜತೆ 2ಜಿ ಹಗರಣದ ಆರೋಪಿಗಳಲ್ಲಿ ಒಬ್ಬಳಾದ ಕನಿಮೋಳಿ ಕೂಡಾ ಇದ್ದರು. ಕನಿಮೋಳಿ ಕರುಣಾನಿಧಿಯವರ ಮಗಳು. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಏನು ತೀರ್ಪು ಕೊಡುತ್ತದೆ ಎನ್ನುವುದು ಬಹಳ ಮುಖ್ಯ. ಆ ತೀರ್ಪಿನ ಮೇಲೆ ಕೇಂದ್ರ ಸರಕಾರದ ಪ್ರಭಾವ ಎಷ್ಟು ಎನ್ನುವುದು ಕೂಡ ಮುಖ್ಯ.

೨ಜಿ, ಕೋಲಫಜಿ ಹಗರಣವನ್ನು ಹಿಡಿದು ಸರಕಾರವನ್ನು ರಚಿಸಿದ ಮೋದೀಜಿಯವರು ಇಲ್ಲಿಯವರೆಗೆ ಅದಕ್ಕೊಂದು ಕೊನೆ ತೋರಿಸುವಲ್ಲಿ ವಿಫಲರಾದರು. ಈ ವರ್ಷ ತಮಿಳುನಾಡು ಪಂಚಾಯತ್ ಚುನಾವಣೆ ಇದೆ. ಜಯಲಲಿತಾ ಇಲ್ಲದೆ ಎಐಎಡಿಎಂಕೆ ಚುನಾವಣೆಯನ್ನು ಹೇಗೆ ಎದುರಿಸಬಲ್ಲುದು ಎಂಬುದನ್ನು ಕಾದು ನೋಡಬೇಕಿದೆ. ಎಐಎಡಿಎಂಕೆಯಲ್ಲಿನ ಮೂವರ ಜಗಳ ಡಿಎಮ್‌ಕೆ ಪಕ್ಷಕ್ಕೆ ವರದಾನ ಆಗಬಲ್ಲದು. ಹಾಗಾದರೆ ಬಿಜೆಪಿಯು ಡಿಎಮ್‌ಕೆ ಕಡೆ ವಾಲುತ್ತದೆ. ಆದರೆ ಅಷ್ಟು ಸರಾಗವಾಗಿ ಮೈತ್ರಿ ನಡೆಸುವ ಹಾಗಿಲ್ಲ ಯಾಕೆಂದರೆ ಡಿಎಮ್‌ಕೆ ನಾಯಕರ ಮೇಲೆ ೨ಜಿ ಹಗರಣದ ಕತ್ತಿ ತೇಲಾಡುತ್ತಿದೆ. ಶಶಿಕಲಾ ಜೈಲಿನಲ್ಲಿದ್ದಾರೆ, ಅವರ ಆಸ್ತಿ, ಕಾಗದ ಪತ್ರ, ಒಡವೆಗಳ ಮೇಲೆ ರೇಡ್ ನಡೆಯುತ್ತಿದೆ. ಯಾರು, ಏನನ್ನು ಹುಡುಕುತ್ತಿದ್ದಾರೆ ಗೊತ್ತಿಲ್ಲ.

ಲಕ್ಷಾಂತರ ಕೋಟಿ ಆಸ್ತಿ ಇರುವ ವ್ಯಕ್ತಿಯ ಹತ್ತಿರ ಕೇವಲ ಸಾವಿರಾರು ಕೋಟಿ ಆಸ್ತಿ ಇದೆ ಅನ್ನುವ ಹಾಗೆ ತೋರುತ್ತಿದೆ. ಶಶಿಕಲಾ ತಮಿಳುನಾಡಿನ ರಾಜಕೀಯದಲ್ಲಿ ಅಳಿಸಿ ಹೋದರೆ, ಪನ್ನೀರ್ ಸೆಲ್ವಂ, ಪಳನಿಸ್ವಾಮಿ, ದಿನಕರನ್ ಇವರ ಜಗಳ ಹೀಗೆಯೇ ಮುಂದುವರಿದರೆ ಡಿಎಮ್‌ಕೆ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಹೀಗಾಗಿ ಬಿಜೆಪಿ ಯಾರ ಜತೆಗೂ ಬಾಂಧವ್ಯ ಕೆಡಿಸಿಕೊಳ್ಳದೆ ಬುದ್ಧಿವಂತಿಕೆಯಿಂದ ಚದುರಂಗದಾಟವನ್ನು ಆಡುತ್ತಿದೆ. ಇದೇ ಮೋದೀಜಿ ಹಾಗೂ ಕರುಣಾನಿಧಿಯವರ ಭೇಟಿಯ ಆಟದ ಗುಟ್ಟು. ಈ ಆಟದಲ್ಲಿ ರಜನೀಕಾಂತ್ ಎನ್ನುವ ರೋಬೋಟ್‌ನನ್ನು ನಾವು ಇಲ್ಲಿಯವರೆಗೂ ಪರಿಗಣಿಸಿಯೇ ಇಲ್ಲ. ಈ ರೋಬೋಟನ್ನು ಬಿಜೆಪಿ ಯಾವಾಗ ಆಕ್ಟಿವ್ ಮಾಡುತ್ತದೆ ಹಾಗೂ ಹೇಗೆ ಬಳಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

-ವಿಕ್ರಮ್ ಜೋಷಿ

Leave a Reply

Your email address will not be published. Required fields are marked *

5 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top