About Us Advertise with us Be a Reporter E-Paper

ಅಂಕಣಗಳು

ಅಷ್ಟಕ್ಕೂ ಮೋದಿ ಸ್ಥಾಪಿಸಿದ್ದು ಕಾಂಗ್ರೆಸ್‌ ನಾಯಕನ ಪ್ರತಿಮೆ!

- ವಿಶ್ವೇಶ್ವರ್‌ ಭಟ್‌

ನಮ್ಮ ದೇಶದ ಅಗ್ಗಳಿಕೆಯೋ, ದೌರ್ಭಾಗ್ಯವೋ ಗೊತ್ತಿಲ್ಲ, ಪ್ರತಿಯೊಂದೂ ವಿವಾದದಲ್ಲಿ ಆರಂಭವಾಗಿ, ವಿವಾದದಲ್ಲೇ ವಿವಾದವಿಲ್ಲದೇ ಯಾವುದೂ ಸುರಳೀತವಾಗಿ ಬಗೆಹರಿಯುವುದಿಲ್ಲ. ಏತಿ ಅಂದರೆ ಪ್ರೇತಿ ಎನ್ನದೇ ಹೋಗುವುದಿಲ್ಲ. ವಿವಾದಕ್ಕೆ ಗೋಹತ್ಯೆ ನಿಷೇಧ, ಕಾಶ್ಮೀರ, ಅಯೋಧ್ಯೆ, ಶಬರಿಮಲೆಯೇ ಆಗಬೇಕೆಂದಿಲ್ಲ. ರಸ್ತೆಗೆ ಯಾರದ್ದಾದರೂ ಹೆಸರಿಡಿ, ಈ ಹೆಸರು ಬೇಕಿತ್ತಾ ಅಂತಾರೆ. ರಸ್ತೆ ಹೆಸರು ಬದಲಿಸಿ, ಇತಿಹಾಸ ಬದಲಿಸಲು ಹೊರಟಿದ್ದಾರೆ ಅಂತಾರೆ. ಇನ್ನು ನಗರ, ಊರಿನ ಹೆಸರನ್ನು ಬದಲಿಸಿದರೆ ಮುಗಿದೇ ಹೋಯಿತು. ಎಡಬದಿಗೆ ಪಾರ್ಕಿಂಗ್ ನಿಷೇಧಿಸಿದರೆ, ಬಲ ಬದಿಗೇಕಿಲ್ಲ ಅಂತಾರೆ.

ಹೆಲ್ಮೆಟ್ ಕಡ್ಡಾಯ ಮಾಡಿದರೆ, ಹೆಲ್ಮೆಟ್‌ಗೂ ಸಾವಿಗೂ ಸಂಬಂಧ ಅಂತಾರೆ. ಪಟಾಕಿ ಬೇಡ, ಪರಿಸರಕ್ಕೆ ಹಾನಿ ಅಂದ್ರೆ, ಪಟಾಕಿ ಹೊಡೆದರೆ ಏನೂ ಆಗೊಲ್ಲ, ವರ್ಷದಲ್ಲಿ ಒಂದು ದಿನ ಪಟಾಕಿ ಹೊಡೆದರೆ ಏನಾಗುತ್ತೆ ಅಂತ ಪ್ರಶ್ನಿಸುತ್ತಾರೆ. ಮಹಾತ್ಮ ಗಾಂಧಿ ಹೆಸರನ್ನು ರಸ್ತೆಗೆ ಇಟ್ಟರೆ, ನಾಥುರಾಂ ಗೋಡ್ಸೆ ಹೆಸರನ್ನೂ ಏಕೆ ಇಡೊಲ್ಲ ಎಂದು ಪ್ರಶ್ನಿಸುತ್ತಾರೆ. ನರಭಕ್ಷಕ ಹುಲಿಯನ್ನು ಸಾಯಿಸಿ ಅಂತಾರೆ ಕೆಲವರು, ಸಾಯಿಸಬಾರದು ಅಂತಾರೆ ಇನ್ನು ಕೆಲವರು. ದೇಶಕ್ಕೆ ದೇಶವೇ ಮಹಾಮಸ್ತಕಾಭಿಷೇಕ ನೋಡಿ ಸಂಭ್ರಮಿಸಿದರೆ, ಗೊಮ್ಮಟನ ಮೇಲೆ ಸಾವಿರಾರು ಕೊಡ ಹಾಲು, ಸುರಿದು ಹಾಳು ಮಾಡಿದರು, ಬಡಮಕ್ಕಳಿಗೆ ಕೊಟ್ಟಿದ್ದರೆ ಅವರ ಹೊಟ್ಟೆಯಾದರೂ ತುಂಬುತ್ತಿತ್ತು, ಹಸಿವು ನೀಗುತ್ತಿತ್ತು ಎಂದು ಬೊಬ್ಬೆ ಹೊಡೆಯುತ್ತಾರೆ. ಟಿಪ್ಪು ಜಯಂತಿ ಬೇಕಾ-ಬೇಡವಾ ಎಂಬ ಹೆಸರಿನಲ್ಲಿ ಹತ್ತಾರು ಹೆಣಗಳು ಬೀಳುತ್ತವೆ.

ವಿವಾದಕ್ಕೆ ಇಂಥದೇ ವಸ್ತು, ವಿಚಾರವೇ ಆಗಬೇಕೆಂದಿಲ್ಲ. ಒಟ್ಟಾರೆ ಪ್ರತಿಯೊಂದು ವಿಷಯವೂ ವಿವಾದವಿಲ್ಲದೇ ಮುಗಿಯುವುದಿಲ್ಲ. ವಿವಾದವಿಲ್ಲದೇ ಯಾವುದಾದರೂ ಒಂದು ವಿಷಯ ಆರಂಭವಾಗಿ, ಅಂತ್ಯವಾಗಿದ್ದರೆ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ‘ಭಾರತ ರತ್ನ’ ನೀಡುವುದರ ಬಗ್ಗೆ ಪ್ರಾಯಶಃ ದೇಶದಲ್ಲಿ ಯಾರಿಗೂ ಇರಲಿಲ್ಲ. ಎಲ್ಲಾ ಪಕ್ಷಗಳೂ ಇಷ್ಟಪಡುವ ಮುತ್ಸದ್ದಿ ಅವರಾಗಿದ್ದರು. ಆದರೆ ಕಮ್ಯುನಿಷ್‌ಟ್ ನಾಯಕರು ಹಾಗೂ ಮಮತಾ ಬ್ಯಾನರ್ಜಿ ಅದಕ್ಕೂ ಸೊಲ್ಲೆತ್ತಿದರು.
‘ವಾಜಪೇಯಿ ಅವರಿಗೆ ಮೋದಿ, ಭಾರತ ರತ್ನ ಕೊಡಬಾರದಿತ್ತು. ಇದು ವಾಜಪೇಯಿಗೆ ಅವಮಾನ’ ಎಂದರು.

ಪ್ರಾಯಶಃ ಸ್ವತಂತ್ರ ಭಾರತದಲ್ಲಿ ವಿವಾದವೇ ಸೃಷ್ಟಿಯಾಗಬಾರದ ಎರಡು ಕಾರ್ಯಕ್ರಮಗಳೆಂದರೆ, ಕುಟುಂಬ ಕಲ್ಯಾಣ(ಜನ ನಿಯಂತ್ರಣ) ಯೋಜನೆ ಹಾಗೂ ಸ್ವಚ್ಛ ಭಾರತ. ಆದರೆ ಇವೆರಡೂ ವಿವಾದಗಳಿಗೆ ತುತ್ತಾದವು. ಕುಟುಂಬ ಯೋಜನೆ ಒಪ್ಪಿಕೊಳ್ಳಲು ಸುಮಾರು ಎರಡು ದಶಕಗಳೇ ಹಿಡಿದವು. ಸ್ವಚ್ಛ ಭಾರತ ಯೋಜನೆ ವಿಫಲವಾದರೆ ಸಾಕು ಎಂದು ಪ್ರತಿಪಕ್ಷಗಳು ಹೊಂಚು ಹಾಕುತ್ತಿವೆ. ‘ಇಷ್ಟು ವರ್ಷ ಭಾರತ ಸ್ವಚ್ಛವಾಗಿರಲಿಲ್ಲವಾ? ಮೋದಿ ಬಂದು ಇದನ್ನು ಹೇಳಿಕೊಡಬೇಕಾ? ಇದೊಂದು ಅರ್ಥಹೀನ ಕಾರ್ಯಕ್ರಮ’ ಎಂದು ಕಾಂಗ್ರೆಸ್ ನಾಯಕರು ಜರೆದರು.

ರಾತ್ರೋರಾತ್ರಿ ನಗರದ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿ ಮಸೀದಿಯನ್ನೋ, ದೇಗುಲವನ್ನೋ ಕಟ್ಟಿದರೆನ್ನಿ. ಕೆಲವರು ಅದನ್ನು ನೆಲಸಮ ಮಾಡಬೇಕು ಅಂದರೆ, ಇನ್ನು ಕೆಲವರು ನೆಲಸಮ ಮಾಡಬಾರದು ಅಂತಾರೆ. ಈ ವಿಷಯ ವಾರ, ಹದಿನೈದು ದಿನಗಳ ಕಾಲ ದೊಡ್ಡ ಆಗಿಬಿಡುತ್ತದೆ. ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಆಧರಿಸಿ, ಅದರ ನೀತಿ-ಸಿದ್ಧಾಂತ ನಿರ್ಧರಿತವಾಗುತ್ತದೆ. ಅಧಿಕಾರದಲ್ಲಿದ್ದಾಗ ಒಂದು ರೀತಿ, ಇಲ್ಲದಾಗ ಇನ್ನೊಂದು ರೀತಿ. ಪ್ರತಿಪಕ್ಷಗಳೂ ಹಾಗೆಯೇ. ಯಾವ ವಿಷಯವೇ ಆಗಲಿ, ವಿವಾದವಿಲ್ಲದೇ ಬಗೆಹರಿಯಲು ಯಾರೂ ಬಿಡುವುದಿಲ್ಲ.

ನಾಳೆ ಪ್ರಧಾನಿ ಮೋದಿಯವರು ‘ಹೊಸ ದೇಶ ಕಟ್ಟೋಣ, ಹತ್ತು ಕೋಟಿ ಗಿಡಗಳನ್ನು ನೆಡೋಣ’ ಅಂದ್ರೆ, ಶಶಿ ತರೂರ್‌ರಂಥವರು, ‘ಮೋದಿಯವರು ಭಾರತವನ್ನು ಕಾಡು ಮಾಡಲು ಹೊರಟಿದ್ದಾರೆ. ಸ್ಮಾರ್ಟ್‌ಸಿಟಿ ಕಟ್ಟಲು ಹೊರಟ ಮೋದಿ, ಈಗ ದೇಶದಲ್ಲಿ ಬೆಳೆಸಲು, ದೇಶವನ್ನು ಹಿಂದಕ್ಕೆ ಒಯ್ಯಲು ಹೊರಟಿದ್ದಾರೆ. He is Paradoxical Prime Minister ಎಂದು ಜರೆಯುತ್ತಾರೆ. ಮತ್ತೆ ಕೆಲವರು ‘ಅಷ್ಟು ಸಸಿಗಳ ದಾಸ್ತಾನು ಇದೆಯಾ? ಅಷ್ಟು ಸಸಿ ನೆಡಲು ಎಷ್ಟು ನೀರು ಬೇಕು, ಕೆಲಸಗಾರರು ಬೇಕು? ಇದೊಂದು ನಿರರ್ಥಕ ಯೋಜನೆ’ ಎಂದು ಟೀಕಿಸುತ್ತಾರೆ. ಅರ್ನಾಬ್ ಗೋಸ್ವಾಮಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬುದನ್ನು ಆಧರಿಸಿ ರಾಜದೀಪ ಸರದೇಸಾಯಿ ಅದಕ್ಕೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ನಿರ್ಧಾರವನ್ನು ನಟ ಅನುಪಮ ಖೇರ್ ಸ್ವಾಗತಿಸಿದರೆ, ಪ್ರಕಾಶ ರೈ ವಿರೋಧಿಸುತ್ತಾರೆ. ಹದಿನೈದು ದಿನ ಇದೇ ವಿವಾದ, ಚರ್ಚೆ.

ಒಟ್ಟಾರೆ ಜನರಿಗೆ ಜಗಿಯಲು ತಾಂಬೂಲ ಬೇಕು. ಉಗುಳಲು ಎಲೆಅಡಿಕೆ ಬೇಕು. ಎಲ್ಲರಿಗೂ ಎಲ್ಲವೂ ಇಷ್ಟವಾಗುವುದಿಲ್ಲ. ‘ಎಲ್ಲರೂ ಸತ್ಯವನ್ನೇ ನುಡಿಯಬೇಕು’ ಎಂದು ಕರೆ ಕೊಟ್ಟರೆ, ಆ ಮಾತಿಗೆ ವಿವಾದ ಸೃಷ್ಟಿಯಾಗಲಿಕ್ಕಿಲ್ಲ ಎಂದು ಭಾವಿಸುವುದು ತಪ್ಪು. ‘ಸತ್ಯವನ್ನೇ ನುಡಿಯಬೇಕೇಕೆ? ಕೆಲವು ಸಂದರ್ಭಗಳಲ್ಲಿ ಸುಳ್ಳು ಹೇಳಬೇಕಾಗುತ್ತದೆ. ಸುಳ್ಳು ಹೇಳದಿದ್ದರೆ ಜೀವ ಹೋಗಬಹುದು. ಅಂಥ ಸನ್ನಿವೇಶದಲ್ಲಿ ಸತ್ಯ ಹೇಳಿ ಜೀವ ಕಳೆದುಕೊಳ್ಳಬೇಕಾ? ಸತ್ಯವನ್ನೇ ಎಂದು ಮೇಲ್ವರ್ಗದವರು, ದಲಿತರನ್ನು ಸಾಯಿಸಲು ಹೊರಟಿದ್ದಾರೆ. ಇದು ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಬಹುದು. ಇದು ಸಂವಿಧಾನ ವಿರೋಧಿ. ಅಂಬೇಡ್ಕರ್‌ಗೆ ಅವಮಾನ ಮಾಡಿದಂತೆ’ ಎಂದು ಕೆಲವು ಪ್ರಗತಿಪರರ, ಬುದ್ಧಿಜೀವಿಗಳು ಹೇಳದೇ ಹೋಗುವುದಿಲ್ಲ. ಅಲ್ಲೂ ವಿವಾದ!

ಇಡೀ ವಿಶ್ವವೇ ಅಭಿಮಾನಪಡುವ ರೀತಿಯಲ್ಲಿ ಪ್ರಧಾನಿ ಮೋದಿಯವರು ಗುಜರಾತಿನಲ್ಲಿ ಜಗತ್ತಿನ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಸ್ಥಾಪಿಸಿ, ಇತ್ತೀಚೆಗೆ ಉದ್ಘಾಟಿಸಿದರಷ್ಟೆ. ಆ ಪ್ರತಿಮೆಗಿಂತ ಅದರ ಸುತ್ತ ಹಬ್ಬಿದ ವಿವಾದ ಇನ್ನೂ ಮುಗಿಲು ಚಾಚಿದೆ. ಹರಿದು ಹಂಚಿ ಹೋಗಿದ್ದ ರಾಜ್ಯಗಳನ್ನೆಲ್ಲ ಒಂದುಗೂಡಿಸಿ, ಭಾರತವೆಂಬ ದೇಶದಲ್ಲಿ ಸಾಮರಸ್ಯದಿಂದ ಏಕತ್ರಗೊಳಿಸಿದ ಕೀರ್ತಿ, ಅಗ್ಗಳಿಕೆ ಪಟೇಲ್ ಅವರಿಗೆ ಸಲ್ಲಬೇಕು. ಅಂಥ ಪುಣ್ಯಾತ್ಮನಿಗೆ Statue of Unity ಎಂಬ ತಳಪಾಯದಲ್ಲಿ ಪ್ರತಿಮೆ ಸ್ಥಾಪಿಸಿದರೆ, ದೇಶಕ್ಕೆ ದೇಶವೇ ಅಭಿಮಾನ ಪಡಬೇಕು. ಅಮೆರಿಕ, ಚೀನಾ, ಜಪಾನ್‌ನನ್ನೂ ಮೀರಿಸಿ ಈ ವಿಷಯದಲ್ಲಿ ಭಾರತ ಸಾಧನೆ ಮಾಡಿ ಹೊಸ ದಾಖಲೆ ಸ್ಥಾಪಿಸಿದೆ. ಇದು ಹೆಮ್ಮೆಯ ವಿಷಯ.

Establishedಅಷ್ಟಕ್ಕೂ ಮೋದಿಯವರು ಸ್ಥಾಪಿಸಿದ್ದು ಅವರಪ್ಪನ ವಿಗ್ರಹ ಅವರ ಪಕ್ಷದ ನಾಯಕರ ಪ್ರತಿಮೆ ಅಲ್ಲ. ಆರೆಸ್ಸೆಸ್ ನಾಯಕರದ್ದೂ ಅಲ್ಲ. ಅದು ಕಾಂಗ್ರೆಸ್ ನಾಯಕನ ಪ್ರತಿಮೆ. ಅದು ನೆಹರು ಸಂಪುಟದಲ್ಲಿ ಗೃಹಸಚಿವರಾಗಿದ್ದ ಪಟೇಲ್‌ರ ಪ್ರತಿಮೆ. ಕಾಂಗ್ರೆಸ್ ನಾಯಕರು ಸಂತೋಷ ಪಡಬೇಕಾದ ಸಂಗತಿಯಲ್ಲವೇ ಇದು? ಪಾಯಖಾನೆಯಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಗಾಂಧಿ, ನೆಹರು, ಇಂದಿರಾಗಾಂಧಿ ಹಾಗೂ ರಾಜೀವ ಗಾಂಧಿಯವರ ಹೆಸರನ್ನಿಟ್ಟು, ಹಾದಿ-ಬೀದಿಗಳಲ್ಲೆಲ್ಲಾ ಅವರ ಪ್ರತಿಮೆ, ಸಮಾಧಿ, ಸ್ಮಾರಕ, ಕ್ರೀಡಾಂಗಣ, ವಿಶ್ವವಿದ್ಯಾಲಯ, ಗೋದಾಮು…ಎಲ್ಲವನ್ನೂ ಸ್ಥಾಪಿಸಿದ್ದೇವೆ. ಕಾಂಗ್ರೆಸ್‌ನವರಿಗೇ ವಾಕರಿಕೆ ಬರಬೇಕು, ಆ ರೀತಿ ಹೆಸರುಗಳನ್ನು ಗೋಡೆ, ಕಟ್ಟಡ, ಸೇತುವೆ, ಅಣೆಕಟ್ಟುಗಳಿಗೆಲ್ಲ ಇಟ್ಟಿದ್ದೇವೆ. ಉತ್ತರಪ್ರದೇಶದಲ್ಲಿ ಗೋಡೆ, ಕಟ್ಟಡ, ಸೇತುವೆ, ಶೌಚಾಲಯ, ರಸ್ತೆಗಳಿಗೆಲ್ಲ ಗಾಂಧಿ, ನೆಹರು, ಇಂದಿರಾ, ರಾಜೀವ್ ಹೆಸರಿಟ್ಟ ನಂತರ, ಎಲ್ಲವೂ ಇವರ ನಾಮಕರಣಗಳಿಂದ ಭರ್ತಿಗೊಂಡ ನಂತರ, ಲಖನೌದ ಹೊರವಲಯದಲ್ಲಿರುವ ಖಾಲಿ ಜಾಗಕ್ಕೆ ‘ಇಂದಿರಾಗಾಂಧಿ ಬಯಲು’ ಎಂದು ಹೆಸರಿಟ್ಟಿದ್ದನ್ನೂ ನೋಡಿದ್ದೇವೆ. ಗಾಂಧಿಗಳು, ನೆಹರು ಬದುಕಿದ್ದಿದ್ದರೆ ಅವರಿಗೇ ಹೇಸಿಗೆ, ಅಸಹ್ಯ ಹುಟ್ಟಬೇಕು, ಆ ಪ್ರಮಾಣದಲ್ಲಿ ಅವರ ಹೆಸರನ್ನಿಟ್ಟು ರೇಜಿಗೆ ಹುಟ್ಟಿಸಿದ್ದೇವೆ.

ಹೀಗಿರುವಾಗ ಸರ್ದಾರ ಪಟೇಲ್‌ರ ಪ್ರತಿಮೆ welcome change. ಆದರೆ ದುರ್ದೈವವೆಂದರೆ, ಅದನ್ನು ವಿರೋಧಿಸುತ್ತಿರುವವರು ಕಾಂಗ್ರೆಸ್ ನಾಯಕರೇ. ಇನ್ನು ಪ್ರತಿಮೆ ಎತ್ತರ, ವ್ಯಾಪ್ತಿ ಹಾಗೂ ಅದಕ್ಕೆ ತಗುಲಿರುವ ಖರ್ಚಿನ ಬಾಬತ್ತು. ಪಟೇಲ್‌ರ ಪ್ರತಿಮೆಯನ್ನುಮೂರು ಕೋಟಿ ರುಪಾಯಿಯಲ್ಲೂ ನಿರ್ಮಿಸಬಹುದು. ಮೂರು ಸಾವಿರ ಕೋಟಿ ರುಪಾಯಿಯಲ್ಲೂ ನಿರ್ಮಿಸಬಹುದು. ಆದರೆ ಈಗ ಮೂರು ಸಾವಿರ ಕೋಟಿ ರುಪಾಯಿಯಲ್ಲಿ ನಿರ್ಮಿಸಿದ್ದಾರೆ. ಏನಾಯ್ತು ಈಗ? ಒಂದು ವೇಳೆ ನಿರ್ಮಿಸದೇ ಇದ್ದರೆ ಅಷ್ಟು ಹಣ ಉಳಿಸಬಹುದಿತ್ತು. ಅದೇ ರೀತಿ ಗಾಂಧಿ, ನೆಹರು, ಇಂದಿರಾ, ರಾಜೀವ ಅವರುಗಳ ಸ್ಮಾರಕ ಇತ್ಯಾದಿಗಳನ್ನು ನಿರ್ಮಿಸದೇ ಇದ್ದರೆ, ಲಕ್ಷಾಂತರ ಕೋಟಿ ರುಪಾಯಿ ಉಳಿಸಬಹುದಿತ್ತಲ್ಲ? ಕಾಲ ಮಿಂಚಿಲ್ಲ, ಈಗಲೂ ಅವರುಗಳ ಹೆಸರಿನಲ್ಲಿರುವ ಸ್ಮಾರಕ, ಸಮಾಧಿಗಳನ್ನು ನೆಲಸಮ ಮಾಡಿ, ಆ ಭೂಮಿಯನ್ನು ಲಕ್ಷಾಂತರ ಕೋಟಿಗಳಿಗೆ ಮಾರಾಟ ಮಾಡಿ, ಬಡವರಿಗೆ ಸೂರು ಒದಗಿಸಬಹುದು, ಅವರ ಹಸಿವು ನೀಗಿಸಬಹುದಲ್ಲ? ಈ ರೀತಿ ವಾದ ಮಾಡುವುದು ಎಷ್ಟು ಅಸಮಂಜಸವೋ, ಪಟೇಲ್ ಪ್ರತಿಮೆಗೆ ಅಷ್ಟೊಂದು ಖರ್ಚು ಮಾಡುವುದು ಎಷ್ಟು ಸರಿ ಎಂದು ವಾದಿಸುವುದೂ ಹಾಗೇ.

‘ವಿಶ್ವದ ಅತಿ ಎತ್ತರದ ಪ್ರತಿಮೆ’ ಅದರ ಗಾತ್ರ, ಎತ್ತರ ಹಾಗೂ ಖರ್ಚು ಅಡಗಿದೆ. ಇದು ದೇಶದ ಸಾರ್ವಭೌಮತ್ವ ಹಾಗೂ ಏಕತೆಯ ಪ್ರತಿಮೆ. ಅಂಥ ಗುರಿ, ಆಶಯ, ಧ್ಯೇಯ ಇಟ್ಟುಕೊಂಡಾಗ ಅಷ್ಟು ಖರ್ಚಾಗುವುದು ಸಹಜ. ಅಷ್ಟಕ್ಕೂ ಭಾರತದಂಥ ದೇಶಕ್ಕೆ ಮೂರು ಸಾವಿರ ಕೋಟಿ ರುಪಾಯಿ ಯಾವ ಲೆಕ್ಕವೂ ಅಲ್ಲ. ಭಾರತಕ್ಕೆ ಅಂಥ ದರಿದ್ರ ಬಂದಿಲ್ಲ. (ಕೇವಲ ಬೆಂಗಳೂರಿನಲ್ಲೊಂದೇ, ಮದುವೆಯಲ್ಲೊಂದೇ, 500 ಕೋಟಿಯಷ್ಟು ಮೌಲ್ಯದ ಆಹಾರವನ್ನು ತಿಪ್ಪೆಗೆ ಪ್ರತಿ ವರ್ಷ ಎಸೆಯುತ್ತಾರೆ.) ಸಾವಿರಾರು ಕೋಟಿ ವ್ಯಯಿಸಿ ಪ್ರತಿಮೆ ಎಂದು ಯೋಚಿಸಿದ್ದಿದ್ದರೆ, ಶ್ರವಣಬೆಳಗೊಳದಲ್ಲಿ ಗೋಮಟೇಶ್ವರನೂ ಇರುತ್ತಿರಲಿಲ್ಲ, ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಏಸುವಿನ ಪ್ರತಿಮೆಯನ್ನೂ ನಿಲ್ಲಿಸುತ್ತಿರಲಿಲ್ಲ. ನ್ಯೂಯಾರ್ಕ್‌ನಲ್ಲಿ Statue Of Liberty ಇರುತ್ತಿರಲಿಲ್ಲ. ವ್ಯಾಟಿಕನ್‌ನಲ್ಲಿ ಚರ್ಚ್‌ಗಳೂ ಇರುತ್ತಿರಲಿಲ್ಲ.

ಅಷ್ಟಕ್ಕೂ ನಮಗೆ ರಾಷ್ಟ್ರಪತಿ ಭವನವೂ ಬೇಕಿರಲಿಲ್ಲ. ಒಬ್ಬ ರಾಷ್ಟ್ರಪತಿ ವಾಸಿಸಲು ಮೂನ್ನೂರಾ ಇಪ್ಪತ್ತು ಎಕರೆ ಪ್ರದೇಶದಲ್ಲಿ ಕಟ್ಟಲಾದ, ಮೂನ್ನೂರೈವತ್ತು ರೂಮಿನ ಅಂಥ ಭವ್ಯಭವನ ಬೇಕಾ? ಅದನ್ನು ಈಗ ನೆಲಸಮ ಮಾಡಿ, ಆ ಜಾಗವನ್ನು ಮಾರಾಟ ಮಾಡಿದರೆ, ಲಕ್ಷಾಂತರ ಕೋಟಿ ಬರುತ್ತದೆ. ಹಣದಲ್ಲಿ ಲಕ್ಷಾಂತರ ಜನರಿಗೆ ಮನೆ ಕಟ್ಟಿಕೊಡಬಹುದು, ಕೋಟ್ಯಂತರ ಜನರ ಹಸಿವು ನೀಗಿಸಬಹುದು. ರಾಷ್ಟ್ರಪತಿ ಎಂಬ ಒಬ್ಬ ವ್ಯಕ್ತಿಯ ಕುಟುಂಬ ನೆಲೆಸಲು, ಅದರ ನಿರ್ವಹಣೆಗೆ ಪ್ರತಿವರ್ಷ ನೂರಾರು ಕೋಟಿ ರುಪಾಯಿ ಖರ್ಚು ಮಾಡುವ ಬದಲು ಅವರು ಎಲ್ಲರಂತೆ, ಸಾದಾ-ಸೀದಾ ಮನೆಯಲ್ಲಿ ಉಳಿದುಕೊಳ್ಳಬಹುದಲ್ಲ? ದಿಲ್ಲಿಯಲ್ಲಿ ಒಬ್ಬೊಬ್ಬ ಮಂತ್ರಿ, ನ್ಯಾಯಾಧೀಶರಿಗಾಗಿ ಮೂರ್ನಾಲ್ಕು ಎಕರೆ ಪ್ರದೇಶಗಳಲ್ಲಿ ಕಟ್ಟಲಾದ ಬಂಗಲೆಗಳಿವೆ. ಮಂತ್ರಿಗಳಿಗೆ, ನ್ಯಾಯಾಧೀಶರಿಗೆ ಅಷ್ಟು ದೊಡ್ಡ ಮನೆ ಬೇಕಾ? ಅದರ ಬದಲು ಅವರನ್ನೆಲ್ಲ ಎರಡು-ಮೂರು ಬೆಡ್ ಅಪಾರ್ಟ್‌ಮೆಂಟ್‌ನಲ್ಲಿ ಉಳಿಸಬಹುದಲ್ಲ? ಅಷ್ಟು ಹಣ ಉಳಿಸಬಹುದಲ್ಲ? ಭಾರತದಂಥ ಬಡ ದೇಶ ಇಂಥ ಐಷಾರಾಮಿ, ವೈಭವದ ಜೀವನವನ್ನು ದಕ್ಕಿಸಿಕೊಳ್ಳುವುದಾ?

ಈ ರೀತಿ ಯೋಚನೆ ಮಾಡಿದರೆ, ಅದೇ ಸರಿಯೆಂದು ವಾದಿಸಿದರೆ, ನಾಳೆ ವಿಧಾನಸೌಧವನ್ನು ಒಂದು ದೊಡ್ಡ ಮಾಲ್ ಮಾಡಬಹುದು. ಅದರಿಂದ ವರ್ಷಕ್ಕೆ ಸಾವಿರಾರು ಕೋಟಿ ರುಪಾಯಿ ಗಳಿಸಬಹುದು.
ಹೀಗೆಲ್ಲ ಯೋಚಿಸುವುದು ಮೂರ್ಖತನ ಪರಮಾವಧಿ ಅಥವಾ ಮೊಂಡುವಾದದ ಪರಾಕಾಷ್ಠೆ ಎಂದು ಹೇಗೆ ಅನಿಸುತ್ತದೋ, ಪಟೇಲ್ ಪ್ರತಿಮೆಗೆ ಮೂರು ಸಾವಿರ ಕೋಟಿ ರುಪಾಯಿ ಖರ್ಚು ಹಾಗೇ ಅಲ್ಲವೇ? ಒಂದಕ್ಕೆ ಅನ್ವಯಿಸುವ ಮಾನದಂಡ ಮತ್ತೊಂದಕ್ಕೂ ಅನ್ವಯಿಸುತ್ತದೆ.

ದೇಶದಲ್ಲಿ ಬುಲೆಟ್ ಟ್ರೇನ್ ಯೋಜನೆ ಜಾರಿಗೊಳಿಸಬೇಕೆಂದು ಹೊರಟರೂ, ಇದೇ ಪ್ರಶ್ನೆ ತೂರಿ ಬರುತ್ತದೆ. ಬುಲೆಟ್ ಟ್ರೇನು ಯಾರಿಗೆ ಬೇಕು, ಅದು ದುಬಾರಿ ಅಲ್ಲವಾ, ಅದರಿಂದ ಬಡವರಿಗೇನು ಪ್ರಯೋಜನಾ, ಆ ಹಣದಲ್ಲಿ ಬಡತನ ನಿವಾರಣೆಯಾಗುತ್ತಿತ್ತು… ಮುಂತಾದ ಅಸಡ್ಡಾಳ ವಾದ ಕೇಳಿಬರುತ್ತದೆ. ದೇಶದಲ್ಲಿ ವಿಮಾನಯಾನ ಆರಂಭವಾದಾಗಲೂ ಇಂಥದೇ ಪ್ರಶ್ನೆ ಕೇಳಿ ಬಂದಾಗ, ಅಂದಿನ ಪ್ರಧಾನಿ ಹೇಳಿದ್ದರು- ‘ಬಡತನ ನಿವಾರಣೆಗೂ ವಿಮಾನಯಾನಕ್ಕೂ ಸಂಬಂಧ ಯಾರಿಗೆ ಹೆಚ್ಚು ಹಣ ತೆತ್ತು ವೇಗವಾಗಿ ಹೋಗುವ ಅಗತ್ಯ ಇದೆಯೋ ಅಂಥವರು ವಿಮಾನದಲ್ಲಿ ಹೋದರೆ ತಪ್ಪೇನು?’ ಹೀಗೆಂದು ಅವರು ಸಂಸತ್ತಿನಲ್ಲಿ ಹೇಳಿದ್ದರು. ಬಡತನ ನಿವಾರಣೆಯಾದ ನಂತರವೇ ವಿಮಾನ ನಿಲ್ದಾಣ ಕಟ್ಟಿ, ವಿಮಾನಯಾನ ಆರಂಭಿಸಬೇಕು ಎಂದು ವಾದ ಮಾಡುವುದು ಬಾಲಿಶ ಎಂದು ಅವರು ಪ್ರತಿಪಾದಿಸಿದ್ದರು.

ಪ್ರತಿಮೆ, ಸಮಾಧಿ, ಸ್ಮಾರಕಗಳು ಒಂದು ದೇಶದ ರಾಷ್ಟ್ರೀಯ ಸ್ಮೃತಿಗಳು. ಅವು ರಾಷ್ಟ್ರೀಯ ಸಂಪತ್ತುಗಳು. ನಮ್ಮ ಸಂಸ್ಕೃತಿ, ಇತಿಹಾಸದ ಪ್ರತೀಕಗಳು. ಪಂಚತಾರಾ ಹೋಟೆಲ್‌ಗಳನ್ನು ನಿರ್ಮಿಸುವುದೆಂದರೆ ಬಡತನ, ಹಂಗಿಸಿದಂತೆ ಎಂಬ ವಾದಕ್ಕೆ ಕಟ್ಟುಬಿದ್ದರೆ, ರಾಷ್ಟ್ರಪತಿ ಭವನ, ವಿಧಾನ ಸೌಧವನ್ನು ನಿರ್ಮಿಸುವುದೆಂದರೆ, ಬಡವರ ಗುಡಿಸಲುಗಳನ್ನು ಹೀಯಾಳಿಸಿದಂತೆ ಎಂಬುದು ವಿತಂಡವಾದದ ಪರಮಾವಧಿ. ಪಟೇಲ್‌ರ ಪ್ರತಿಮೆಯಿಂದ ಭಾರತ ಸಮಸ್ತ ವಿಶ್ವದ ಗಮನ ಸೆಳೆದಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ ನೀಡಿದಂತಾಗಿದೆ. ಅಭಿವೃದ್ಧಿಶೀಲ ದೇಶದಲ್ಲಿ ಇವೆಲ್ಲ ‘ಲಕ್ಷಣ’ಗಳೂ ಇರಲೇಬೇಕು. ಪ್ರತಿಮೆ ಕಟ್ಟಿದ ನಂತರ ಅದು ಬೇಕಿರಲಿಲ್ಲ ಎನ್ನುವುದು ಮೋದಿಗೆ ಮಾಡುವ ಅಪಚಾರ ಅಲ್ಲ, ಪಟೇಲರಿಗೆ ಮಾಡುವ ಅವಮಾನ. ದೇಶದ ಏಕತೆಯನ್ನು ಮೂದಲಿಸಿದಂತೆ.
ಸಂಭ್ರಮಿಸಲು ಕಾರಣ ಸಿಕ್ಕಿತು ಎಂದುಕೊಳ್ಳೋಣ, ನಾವು ಬಡವರಾಗುವುದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close