Srikakulam Stampede: ಇದು ನನ್ನ ಖಾಸಗಿ ಜಾಗ, ನಾನ್ಯಾಕೆ ಪೊಲೀಸರಿಗೆ ತಿಳಿಸಬೇಕು? ಆಂಧ್ರ ಪ್ರದೇಶ ಕಾಲ್ತುಳಿತ ಬಗ್ಗೆ ಅರ್ಚಕ ಹೇಳಿದ್ದೇನು?
Hari Mukunda Panda: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಭಾರಿ ಕಾಲ್ತುಳಿತದಲ್ಲಿ ಮಕ್ಕಳು, ಮಹಿಳೆಯರು ಸೇರಿ 9 ಮಂದಿ ಮಂದಿ ಬಲಿಯಾಗಿದ್ದಾರೆ. ಇದೀಗ ದುರಂತದ ಬಗ್ಗೆ ದೇವಸ್ಥಾನ ನಿರ್ಮಿಸಿರುವ ಹರಿ ಮುಕುಂದ ಪಾಂಡ ಪ್ರತಿಕ್ರಿಯಿಸಿದ್ದಾರೆ. ʼʼನಾನು ನನ್ನ ಖಾಸಗಿ ಸ್ಥಳದಲ್ಲಿ ದೇವಸ್ಥಾನ ರಚಿಸಿದ್ದೇನೆ. ಏಕಾದಶಿ ಪೂಜೆ ನಡೆಸುವ ಬಗ್ಗೆ ನಾನ್ಯಾಕೆ ಪೊಲೀಸ್‌ಗಾಗಲಿ, ಸ್ಥಳೀಯಾಡಳಿತಕ್ಕಾಗಲೀ ತಿಳಿಸಬೇಕಿತ್ತು?ʼʼ ಎಂದು ಕೇಳಿದ್ದಾರೆ.
ಹರಿ ಮುಕುಂದ ಪಾಂಡ -
Ramesh B
Nov 2, 2025 4:18 PM
ಅಮರಾವತಿ, ನ. 2: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ (Srikakulam District) ಕಾಶಿಬುಗ್ಗ ಪಟ್ಟಣದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ (ನವೆಂಬರ್ 1) ನಡೆದ ಭಾರಿ ಕಾಲ್ತುಳಿತದಲ್ಲಿ ಮಕ್ಕಳು, ಮಹಿಳೆಯರು ಸೇರಿ 9 ಮಂದಿ ಮಂದಿ ಬಲಿಯಾಗಿದ್ದಾರೆ (Srikakulam Stampede). ಇದೊಂದು ಖಾಸಗಿ ದೇವಸ್ಥಾನವಾಗಿದ್ದು, ಏಕಾದಶಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ದುರಂತ ಸಂಭವಿಸಿದೆ. ದೇವಸ್ಥಾನ ಇನ್ನೂ ನಿರ್ಮಾಣ ಹಂತದಲ್ಲಿದ್ದು, ವಿಶೇಷ ಪೂಜೆ ಆಯೋಜಿಸುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿರುವ ದೇವಸ್ಥಾನ ನಿರ್ಮಿಸಿರುವ 94 ವರ್ಷದ ಹರಿ ಮುಕುಂದ ಪಾಂಡ (Hari Mukunda Panda), ʼʼನಾನು ನನ್ನ ಖಾಸಗಿ ಸ್ಥಳದಲ್ಲಿ ದೇವಸ್ಥಾನ ರಚಿಸಿದ್ದೇನೆ. ಏಕಾದಶಿ ಪೂಜೆ ನಡೆಸುವ ಬಗ್ಗೆ ನಾನ್ಯಾಕೆ ಪೊಲೀಸ್‌ಗಾಗಲಿ, ಸ್ಥಳೀಯಾಡಳಿತಕ್ಕಾಗಲೀ ತಿಳಿಸಬೇಕಿತ್ತು?ʼʼ ಎಂದು ಪ್ರಶ್ನಿಸಿದ್ದಾರೆ.
ಒಂದುವೇಳೆ ಹರಿ ಮುಕುಂದ ಪಾಂಡ ಅಥವಾ ದೇವಸ್ಥಾನಕ್ಕೆ ಸಂಬಂಧಪಟ್ಟವರು ಕಾರ್ಯಕ್ರಮ ನಡೆಯುತ್ತಿರವ ಬಗ್ಗೆ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಜನರನ್ನು ನಿಯಂತ್ರಿಸಬಹುದಿತ್ತು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದರು. ದುರಂತಕ್ಕೆ ದೇವಸ್ಥಾನ ಆಡಳಿತ ಮಂಡಳಿಯನ್ನೇ ಹೊಣೆಯನ್ನಾಗಿಸಿದ್ದ ಅವರು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಈ ಸುದ್ದಿಯನ್ನೂ ಓದಿ: Major Stampedes This Year: ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ; ಈ ವರ್ಷ ದೇಶದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತ ದುರಂತಗಳಿವು
ಈ ಬಗ್ಗೆ ಎನ್‌ಡಿಟಿವಿ ಹರಿ ಮುಕುಂದ ಪಾಂಡ ಅವರನ್ನು ಪ್ರಶ್ನಿಸಿದೆ. ಇದಕ್ಕೆ ಪಾಂಡೆ, ʼʼನನ್ನ ಮೇಲೆ ಎಷ್ಟೇ ಪ್ರಕರಣ ಬೇಕಾದರೂ ದಾಖಲಿಸಲಿ. ನನಗೇನೂ ತೊಂದರೆ ಇಲ್ಲʼʼ ಎಂದು ಹೇಳಿದ್ದಾರೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸಬಹುದು ಎನ್ನುವ ಬಗ್ಗೆ ತಮಗೂ ಮಾಹಿತಿ ಇರಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.
ʼʼಸಾಮಾನ್ಯವಾಗಿ ಈ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಬಹಳ ಕಡಿಮೆ. ದೇವರ ದರ್ಶನ ಆದ ಬಳಿಕ ಪ್ರಸಾದ ಸ್ವೀಕರಿಸಿ ಭಕ್ತರು ತೆರಳುತ್ತಾರೆ. ಯಾರೂ ಇಲ್ಲಿ ನಿಂತುಕೊಳ್ಳುವುದಿಲ್ಲ. ನನ್ನ ಸ್ವಂತ ಖರ್ಚಿನಲ್ಲಿ ಪ್ರಸಾದ ಮತ್ತು ಆಹಾರ ತಯಾರಿಸುತ್ತೇನೆ, ಭಕ್ತರ ಬಳಿ ಏನನ್ನೂ ಕೇಳುವುದಿಲ್ಲ. ಆದರೆ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಭಕ್ತರ ಪ್ರವಾಹವೇ ಹರಿದು ಬಂತು. ಅದಾಗಲೇ ಪ್ರಸಾದ ತಯಾರಿಸಿಯಾಗಿತ್ತುʼʼ ಎಂದು ವಿವರಿಸಿದ್ದಾರೆ. ಸದ್ಯ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದ್ದು, ದುರಂತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕ ತಿರುಪತಿ ಎಂದೇ ಪ್ರಸಿದ್ಧ
ತಿರುಮಲದ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಈ ದೇಗುಲವನ್ನು ನಿರ್ಮಿಸಿರುವುದರಿಂದ ಇದು ಚಿಕ್ಕ ತಿರುಪತಿ ಎಂದೇ ಪ್ರಸಿದ್ಧ. ಕೇವಲ 4 ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಈ ದೇಗುಲದ ಕೆಲಸ ಇನ್ನೂ ನಡೆಯುತ್ತಿದೆ. ದೇಗುಲದ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಒಂದೇ ಆಗಿದ್ದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಇದೇ ವೇಳೆ ಸ್ಟೀಲ್ ಕಂಬಿಗಳೂ ನೆಲಕ್ಕುಳಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ನಾಯಕರು ಮಿಡಿದಿದ್ದು, ಪರಿಹಾರ ಧನ ಘೋಷಿಸಿದ್ದಾರೆ.