About Us Advertise with us Be a Reporter E-Paper

ಆಟೋಮೊಬೈಲ್

ರಾಷ್ಟ್ರವಾದಿ ‘ಅನ್ನು’ವ ಅಭಿಮಾನ ಒಂದೊಂದು ಶಬ್ದದಲ್ಲೂ…!

- ಶ್ರೀವತ್ಸ ಜೋಶಿ

ಅನ್ನು ಕಪೂರ್. ಹತ್ತಿಪ್ಪತ್ತು ವರ್ಷಗಳ ಹಿಂದೆ, ಝೀ ಟಿವಿ ವಾಹಿನಿಯಲ್ಲಿ ಅತ್ಯಂತ ಜನಪ್ರಿಯವಾಗಿದ್ದ ‘ಅಂತಾಕ್ಷರಿ’ ಕಾರ್ಯಕ್ರಮದ ಅದ್ಭುತ ನಿರೂಪಕ. ಅದ್ಭುತ ಅಂದಿದ್ದೇಕೆಂದರೆ 1994ರಿಂದ 2005ರವರೆಗೆ ಸತತ ಹನ್ನೆರಡು ವರ್ಷ ಆ ಕಾರ್ಯಕ್ರಮದ ಪುರುಷ ಆಂಕರ್ ಆಗಿದ್ದವರು ಅನ್ನು ಕಪೂರ್. ಅವರ ಜೊತೆ ರಾಜೇಶ್ವರಿ ಸಚ್‌ದೇವ್, ಆಮೇಲೆ ಪಲ್ಲವಿ ಜೋಶಿ, ಒಂದಿಷ್ಟು ಎಪಿಸೋಡುಗಳಿಗೆ ರೇಣುಕಾ ಶಹಾನೆ ಸಹ ಮಾಡಿದ್ದುಂಟು. ಆದರೂ, ಅಂತಾಕ್ಷರಿ ಅಂದ ಕೂಡಲೇ ಈಗಲೂ ಥಟ್ಟನೆ ನೆನಪಿಗೆ ಬರುವುದು ಅನ್ನು ಕಪೂರ್ ಮುಖ. ಕೈಯಲ್ಲಿ ಮೈಕ್ ಹಿಡಿದು ಸ್ಟೇಜ್ ಮೇಲೆ ಪಾದರಸದ ಚುರುಕಿನಂತೆ ಅತ್ತಿಂದಿತ್ತ ಓಡಾಡುತ್ತ, ಸ್ಪರ್ಧಿಗಳನ್ನು ಹುರಿದುಂಬಿಸುತ್ತ, ನಿರರ್ಗಳ ಮಾತಿನಲ್ಲಿ ನಡುನಡುವೆ ಹಾಡುತ್ತ, ಅಷ್ಟಿಷ್ಟು ಅಂಗ-ಮಂಗ ಚೇಷ್ಟೆಗಳನ್ನೂ ಮಾಡಿ ವೀಕ್ಷಕರನ್ನು ರಂಜಿಸುತ್ತ ಅಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದ ಅನ್ನು ಕಪೂರ್. ಹಾಗೆ ನೋಡಿದರೆ ಅಂತಾಕ್ಷರಿ ಸಹ ‘ರಿಯಾಲಿಟಿ ಶೋ’ ಕ್ಯಾಟೆಗರಿಯದೇ ಕಾರ್ಯಕ್ರಮ. ಆದರೆ ಆಮೇಲೆ ಹಲವಾರು ಶೋಗಳಂತೆ ಅದು ‘ವಿದೇಶದಿಂದ ನಕಲು ಮಾಡಿದ್ದು’ ಅಂತ ಯಾವತ್ತೂ ಅನಿಸುತ್ತಿರಲಿಲ್ಲ. ಅಪ್ಪಟ ಭಾರತೀಯತೆ ಅದರಲ್ಲಿ ತುಂಬಿ ತುಳುಕುತ್ತಿತ್ತು. ಅಂತಾಕ್ಷರಿಯಲ್ಲಿ ಅಂಥದೊಂದು ಅಪ್ಪಟ ಭಾರತೀಯತೆ ಕಾಣಿಸುತ್ತಿದ್ದುದರ ಹಿಂದೆ ಅನ್ನು ಕಪೂರ್ ಕೊಡುಗೆ ಖಂಡಿತ ಇದೆ. ಬಹುಶಃ ಆಗ ನಾವೆಲ್ಲ ಅದನ್ನು ಅಷ್ಟೇನೂ ಗಮನಿಸುತ್ತಿರಲಿಲ್ಲ. ಈಗ ನೆನಪಿಸಿಕೊಂಡರೆ ಹೆಮ್ಮೆಯೆನಿಸುತ್ತದೆ.

ನೆನಪಾಗಲಿಕ್ಕೆ ಕಾರಣವೂ ಇದೆ. ಮೊನ್ನೆ ವಾಟ್ಸಪ್‌ನಲ್ಲಿ ಒಂದು ವಿಡಿಯೋ ತುಣುಕನ್ನು ಕಳುಹಿಸಿದ್ದರು, ಬೆಂಗಳೂರಿನಿಂದ ಸ್ನೇಹಿತ ಅರುಣ ಮರಾಠೆ. ಸಾಮಾನ್ಯವಾಗಿ ಅವರು ಮೆಸೇಜುಗಳು ಕಸ ಅಲ್ಲ, ಸತ್ತ್ವ ಇರುವಂಥವು. ಖುಷಿಯಿಂದಲೇ ಕ್ಲಿಕ್ಕಿಸಿದೆ. ಆರೇಳು ನಿಮಿಷ ಅವಧಿಯ ವಿಡಿಯೋ. ಹಿಂದೀ ಸುದ್ದಿವಾಹಿನಿ ‘ಆಜ್ ತಕ್’ ಇತ್ತೀಚೆಗೆ ದಿಲ್ಲಿಯಲ್ಲಿ ಏರ್ಪಡಿಸಿದ್ದ ಸಾಹಿತ್ಯಗೋಷ್ಠಿಯಲ್ಲಿ ಅನ್ನು ಕಪೂರ್ ಜೊತೆಗಿನ ಸಂದರ್ಶನದ ಒಂದು ಚಿಕ್ಕ ತುಣುಕು. ವಾಹಿನಿಯ ನಿರೂಪಕಿ ಮೀನಾಕ್ಷಿ ಎಂಬ ಚಂದದ ಹುಡುಗಿಯೇ ಸಂದರ್ಶಕಿ. ಸ್ಟುಡಿಯೊ ರೆಕಾರ್ಡಿಂಗ್ ಸಂಕಲಿತ ರೂಪ ಅಲ್ಲ, ಲೈವ್ ಆಗಿ ಬಿತ್ತರಗೊಂಡಿದ್ದ ಕಾರ್ಯಕ್ರಮದ ಭಾಗ. ವಾಟ್ಸಪ್‌ನಲ್ಲಿ ಆ ಕ್ಲಿಪ್ಪಿಂಗ್‌ನೊಂದಿಗೆ ಚಿಕ್ಕದೊಂದು ಟಿಪ್ಪಣಿಯೂ ಇತ್ತು: ನಿರೂಪಕಿಯು ರಾಜಕೀಯ ಹಿತಾಸಕ್ತಿಗಳನ್ನು ಹೇರುವ ಯತ್ನ ಮಾಡಿದರೂ, ಅವನ್ನೆಲ್ಲ ಬಗ್ಗುಬಡಿದು ನೇರ, ನಿಖರ, ಸ್ಪಷ್ಟ, ಪ್ರಖರ ಮಾತುಗಳನ್ನಾಡಿದ ಅನ್ನು ಕಪೂರ್!’ ಮೆಚ್ಚುಗೆಯ ಶಿಫಾರಸು. ಅರುಣ ಮರಾಠೆಯವರನ್ನು ಬಹುಕಾಲದಿಂದ ಬಲ್ಲೆನಾದ್ದರಿಂದ ಅವರೇ ಟೈಪ್ ಮಾಡಿದ್ದೆಂದು ನನ್ನ ಅಂದಾಜು.

ವಿಡಿಯೋ ಕ್ಲಿಪ್ ಶುರುವಾಯ್ತು. ‘ನಮ್ಮ ದೇಶದಲ್ಲೀಗ ‘ರಾಷ್ಟ್ರವಾದ’ ಅಂತೊಂದು ದೊಡ್ಡ ಗುಲ್ಲೆದ್ದಿದೆಯಲ್ಲ, ಈ ರಾಷ್ಟ್ರವಾದ ಎಂಬ ಕಲ್ಪನೆ ನಿಮಗೇನನಿಸುತ್ತದೆ? ಇದರಲ್ಲಿ ನಿಮ್ಮನ್ನು ನೀವು ಎಲ್ಲಿ ಗುರುತಿಸಿಕೊಳ್ಳುತ್ತೀರಿ?’ ಸಂದರ್ಶಕಿಯ ಪ್ರಶ್ನೆ. ಆಕೆಯ ಮುಖಕ್ಕೆ ಅನ್ನು ಕಪೂರ್ ಉತ್ತರ ‘ಮೈ ತೋ ಬಹುತ್ ಬಡಾ ರಾಷ್ಟ್ರವಾದಿ ಹೂಂ!’. ಒಂದು ಕ್ಷಣ ಮೌನ. ಪ್ರೇಕ್ಷಕರಿಂದ ಚಪ್ಪಾಳೆ. ಮುಂದುವರಿದು, ‘ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್ ನಾನು ಯಾವುದೇ ಪಕ್ಷ-ಸಿದ್ಧಾಂತಗಳ ಬೆಂಬಲಿಗನಲ್ಲ. ಚರ್ಚೆ ಆಗುತ್ತಿರುವ ರಾಷ್ಟ್ರವಾದ ಅಂತ ನೀವೇನು ಹೇಳ್ತಿದ್ದೀರೋ ಅದು ಬಿಲ್‌ಕುಲ್ ಬಕ್ವಾಸ್’ ಎನ್ನುತ್ತ ನಮ್ಮ ದೇಶದ ಚರಿತ್ರೆಯ ಬಗೆಗೊಂದಿಷ್ಟು ಮಾತು. ನಮ್ಮ ದೇಶವನ್ನು ಇಂಡಿಯಾ ಅಥವಾ ಹಿಂದುಸ್ಥಾನ್ ಎಂದು ಕರೆಯುವುದು ಕೂಡ ಅನ್ನು ಕಪೂರ್‌ಗೆ ಇಷ್ಟವಿಲ್ಲ. ಅವರೆನ್ನುತ್ತಾರೆ ದೇಶದ ಮೂಲ ಹೆಸರು ಭಾರತ. ದುಷ್ಯಂತ-ಶಕುಂತಲೆಯ ಪ್ರೇಮದ ಪ್ರತೀಕ ಭರತನಿಂದಾಗಿ ಬಂದ ಹೆಸರು ಭಾರತ. ಯಾರೋ ಅಲೆಕ್ಸಾಂಡರ್ ಅಂತೆ, ದಾಳಿಕೋರನಾಗಿ ಬಂದು ಇಂಡಸ್(ಸಿಂಧು) ನದೀಕಣಿವೆಯ ಪಕ್ಕದ ದೇಶವನ್ನು ಇಂಡಿಯಾ ಎಂದು ಕರೆದನಂತೆ.

ಅಂದಮಾತ್ರಕ್ಕೇ ನಾವೂ ಏಕೆ ಲಜ್ಜೆಗೆಟ್ಟವರಂತೆ ಇಂಡಿಯಾ ಎನ್ನಬೇಕು? ವಿದೇಶೀಯರ ಪ್ರಭಾವ ಅಂತಲೇ?’ ಮಾತಿಗೆ ತಡೆಯೊಡ್ಡಿ ಸಂದರ್ಶಕಿ ಕೇಳುತ್ತಾಳೆ: ‘ಹಾಗಾದರೆ ಪಟ್ಟಣಗಳ ಹೆಸರುಗಳನ್ನು ಮೂಲಕ್ಕೆ ಬದಲಾಯಿಸುವುದು ನಿಮಗೆ ಒಪ್ಪಿಗೆಯಿದೆ?’ ಮತ್ತೊಮ್ಮೆ ಸ್ಪಷ್ಟ ಉತ್ತರ: ‘ಯಾಕಿಲ್ಲ? ನೋಡಿ ಮೇಡಂ, ಯಾವುದೇ ಪ್ರದೇಶವನ್ನಾದರೂ ಗೆದ್ದವರು ಅಲ್ಲೆಲ್ಲ ತಂತಮ್ಮ ನಿಶಾನೆಗಳನ್ನು ಛಾಪಿಸಿಯೇ ಇದ್ದಾರೆ. ಅಮೆರಿಕ ಎಲ್ಲೆಲ್ಲ ವಸಾಹತುಗಳನ್ನು ಮಾಡಿದೆಯೋ ಅಲ್ಲಿ ಅಮೆರಿಕತನವನ್ನು ಬಿತ್ತಿದೆ. ಬ್ರಿಟಿಷರಂತೂ ಪ್ರಪಂಚದಲ್ಲೆಲ್ಲ ಹಾಗೆ ಮಾಡಿದವರೇ. ಬ್ರಿಟಿಷರಿಗಿಂತ ಮೊದಲು ಭಾರತಕ್ಕೆ ಬಂದು ಇಲ್ಲಿನವರನ್ನು ಆಳಿದ ಮೊಘಲರು, ಲೋದಿಗಳು, ಪಠಾಣರೂ ಅವರವರ ಚಿಹ್ನೆಗಳನ್ನು ಬಿಟ್ಟಿದ್ದಾರೆ. ಅವು ಮೂಲ ಭಾರತದವು ಅಲ್ಲವಲ್ಲ? ಅಂದಮೇಲೆ ಈಗ ನಮ್ಮ ದೇಶ ಸ್ವತಂತ್ರವಾಗಿರುವಾಗ ಅವುಗಳೇಕೆ ಬೇಕು ನಮಗೆ? ಆದರೆ ನಮ್ಮ ದೇಶ ಯಾವತ್ತೂ ಯಾರ ಮೇಲೂ ಹೋದದ್ದಿಲ್ಲ. ಗೆದ್ದು ಸಾಮ್ರಾಜ್ಯ ಸ್ಥಾಪಿಸಿದ್ದಿಲ್ಲ. ಹಾಗೊಂದು ವೇಳೆ ಗೆದ್ದಿರುತ್ತಿದ್ದರೆ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೈಕೇಲ್ ಜಾಕ್ಸನ್‌ನದೋ ಲೇಡಿ ಗಾಗಾಳದೋ ನರ್ತನ ನಡೆಯುತ್ತಿರಲಿಲ್ಲ. ಪಂಡಿತ್ ಭೀಮಸೇನ ಜೋಶಿಯವರ ಸಂಗೀತ ಕಚೇರಿ ನಡೆಯುತ್ತಿತ್ತು! ನಮಗೆ ಇನ್ನೊಬ್ಬರನ್ನು ಜಯಿಸಿ ಗೊತ್ತಿಲ್ಲ. ಇನ್ನೊಬ್ಬರು ನಮ್ಮಮೇಲೆ ಜಯ ಸಾಧಿಸಿದ ಭೂತಕಾಲದ ಘಟನೆಗಳನ್ನೇ ಈಗಲೂ ಚಪ್ಪರಿಸುತ್ತೇವೆ. ನಾಚಿಕೆಯಾಗಬೇಕು ನಮಗೆ. ಹಾಂ… ನಮ್ಮಲ್ಲಿ ಪುಗ್ಸಟ್ಟೆ ಮಾತಾಡುವವರು ಬೇಕಾದಷ್ಟಿದ್ದಾರೆ. ನಮ್ಮ ದೇಶದ ವೈಜ್ಞಾನಿಕ ಚಿಂತನೆ ಏನು ಕಮ್ಮಿಯದೇ? ವರಾಹಮಿಹಿರ, ಶಂಕರ, ರಾಮಾನುಜ, ಚರಕ, ಸುಶ್ರುತ, ಚಾರ್ವಾಕನೇ ಮುಂತಾದ ಮಹಾನ್ ವ್ಯಕ್ತಿಗಳ ವಿರಾಟ್ ಪರಂಪರೆ ನಮ್ಮದು. ಆದರೆ ಆ ಜ್ಞಾನ-ವಿಜ್ಞಾನವನ್ನು ನಾವು ಮುಂದುವರಿಸಿಕೊಂಡು ಹೋದೆವೇ? ಇಲ್ಲ! ಅದಕ್ಕೋಸ್ಕರವೇ ನಾವು ಸೋಲುತ್ತ ಸಾಗಿದೆವು…’ ಅನ್ನು ಕಪೂರ್ ವಾಗ್ಝರಿ ಉದ್ಬುದ್ಧ ಶುದ್ಧ ನೀರಿನ ಬುಗ್ಗೆ.

ಇದಕ್ಕೆಲ್ಲ ಯಾರು ಹೊಣೆ?’ ಸಂದರ್ಶಕಿಯ ಪ್ರಶ್ನೆ. ‘ನಾವೆಲ್ಲರೂ ಹೊಣೆ. ನಾನು, ನೀವು, ಇಲ್ಲಿ ಸೇರಿರುವ ಎಲ್ಲರೂ, ಮತ್ತು ಪ್ರತಿಯೊಬ್ಬ ಭಾರತೀಯನೂ ಹೊಣೆ. ಸಮಷ್ಟಿ ಪ್ರಜ್ಞೆಯಿಂದ ಜವಾಬ್ದಾರರಾಗಿ ನಾವೆಲ್ಲ ಮುನ್ನಡೆಯುವ ಶಪಥ ಮಾಡುವವರೆಗೂ ನಾವು ಹೀಗೇ ಬಿದ್ದುಕೊಂಡಿರುತ್ತೇವೆ. ಮಾತಾಡುವುದರಲ್ಲೇ ಕಾಲಹರಣ ಮಾಡುತ್ತೇವೆ. ಅದಕ್ಕಿಂತ, ಗಲ್ಲಿಗಲ್ಲಿಗಳಲ್ಲೂ ಚರ್ಚೆಯಾಗಲಿ. ಚಿಂತನೆಗಳು ನಡೆಯಲಿ. ನಮ್ಮ ಪತನಕ್ಕೆ ಕಾರಣಗಳೇನು? ಯಾಕೆ ಕಚ್ಚಾಡುತ್ತೇವೆ? ಧರ್ಮ, ಜಾತಿ, ಆಚಾರ-ವಿಚಾರ, ಭಾಷೆ ಯಾವುದರಲ್ಲೂ ನಾವು ಒಂದಾಗುತ್ತಿಲ್ಲ. ಕನಿಷ್ಠ ಪಕ್ಷ ಭಾರತಮಾತೆಯ ಹೆಸರಿನಿಂದಾದರೂ ಒಗ್ಗಟ್ಟಾಗಬಹುದಲ್ಲ? ಅವರದು ಭಗವಾ ಧ್ವಜ ಅಂತೆ, ಇವರದು ಹಸುರು ಧ್ವಜವಂತೆ, ಇನ್ನೊಬ್ಬರದು ಶ್ವೇತವಸ್ತ್ರವಂತೆ. ಯಾಕೆ ತ್ರಿವರ್ಣಧ್ವಜವೊಂದೇ ನಮ್ಮನ್ನು ಒಂದುಗೂಡಿಸಬಲ್ಲದ್ದು, ಭವಿಷ್ಯವನ್ನು ಉಜ್ವಲಗೊಳಿಸಬಲ್ಲದ್ದು ಎಂದು ನಾವು ಅರ್ಥ ರಾಜಕಾರಣಿಗಳನ್ನು ದೂರುವುದು ಇನ್ನೊಂದು ದುರಭ್ಯಾಸ. ಅವರನ್ನೇಕೆ ದೂರಬೇಕು? ಅವರೇನು ಮಂಗಳಗ್ರಹದಿಂದ ಬಂದವರೇ? ನಮ್ಮಲ್ಲಿಂದಲೇ ನಾವು ಆರಿಸಿ ಕಳಿಸಿದವರಲ್ಲವೇ?’ ಭೋರ್ಗರೆವ ಜಲಪಾತದಂತೆ ಧುಮ್ಮಿಕ್ಕುತ್ತವೆ ಅನ್ನು ಕಪೂರ್ ಮಾತುಗಳು. ‘ತ್ರಿವರ್ಣಧ್ವಜ ಹೆಚ್ಚೂಕಡಿಮೆ ಪ್ರತಿಯೊಬ್ಬರನ್ನೂ ಜಾಗ್ರತಗೊಳಿಸುತ್ತದೆ, ಆದರೆ ರಾತ್ರಿಹೊತ್ತು ಸೆಕೆಂಡ್ ಶೋ ಸಿನಿಮಾಗೆ ಮೊದಲು ರಾಷ್ಟ್ರಗೀತೆ ಮೊಳಗಬೇಕು, ಎಲ್ಲರೂ ಎದ್ದು ನಿಲ್ಲಬೇಕು ಎಂದು ಅಪೇಕ್ಷಿಸುವುದು ತರವೇ?’ ಎಂದು ಕೇಳುತ್ತಾಳೆ ಸಂದರ್ಶಕಿ. ಅನ್ನು ಕಪೂರ್ ಮೇಜು ಗುದ್ದುತ್ತ, ಕುಳಿತ ಕುರ್ಚಿಯಿಂದ ಪುಟಿಪುಟಿಯುತ್ತ ಹೇಳುತ್ತಾರೆ- ‘ಖಂಡಿತ. ಸಿನಿಮಾ ನೋಡಲಿಕ್ಕೆ ಹೋದವರು ಆ ಘಳಿಗೆಯಲ್ಲಿ ಎದ್ದು ನಿಲ್ಲಲೇಬೇಕು. ಅದನ್ನೂ ಮಾಡಲಿಕ್ಕಾಗುವುದಿಲ್ಲ ಅಂದ್ರೆ ಏನು ಧಾಡಿ?’ ಸಂದರ್ಶಕಿಯಿಂದ ಮತ್ತೆ ಕೆಣಕುಮಾತು: ‘ಆದರೆ ಅದನ್ನೊಂದು ನಿಯಮ ಅಂತ ಮಾಡುವುದು ತಪ್ಪಲ್ವಾ? ವ್ಯಕ್ತಿಗೆ ಸ್ವಂತ ಮನಸ್ಸಿಂದ ದೇಶಭಕ್ತಿ ಬರಬೇಕೇ ಹೊರತು ಒತ್ತಾಯದಿಂದ ಹೇರಬಾರದಲ್ವಾ?’ ಅನ್ನು ಕಪೂರ್ ಮತ್ತಷ್ಟು ತೀಕ್ಷ್ಣರಾಗುತ್ತಾರೆ: ‘ಸ್ವಂತ ಮನಸ್ಸಿಂದ ದೇಶಭಕ್ತಿ ಬಂದಿದ್ದಿದ್ದರೆ ನಾವು ಶಕ-ಹೂಣ-ಲೋದಿಗಳಿಂದ, ಪಠಾಣರಿಂದ, ಮೊಘಲರಿಂದ, ಬ್ರಿಟಿಷರಿಂದ ಸೋಲುತ್ತಿರಲಿಲ್ಲ. ಅಂಥದೊಂದು ದಂ ಇದ್ದರೆ ತಾನೆ ನಮ್ಮಲ್ಲಿ?’

ಸಂದರ್ಶಕಿ ಸುಮ್ಮನಾಗುವುದಿಲ್ಲ. ‘ಹಾಗಾದರೆ ಸಮಾಜದಲ್ಲಿ ಈಗ ಮತ್ತಷ್ಟು ಗಾಢವಾಗಿರುವ ಬಿರುಕು, ವಿಚಾರಗಳ ಧ್ರುವೀಕರಣ, ಎಡ-ಬಲ ತಿಕ್ಕಾಟ- ಇವುಗಳ ಬಗ್ಗೆ ನಿಮ್ಮ ನಿಲುವೇನು?’ ಅನ್ನು ಕಪೂರ್ ಆ ಚೆಂಡಿಗೂ ಸಿಕ್ಸರ್ ಎತ್ತುತ್ತಾರೆ: ‘ಅದೆಲ್ಲ ರಾಜಕೀಯದವರ ಆಟ. ಅವರ ಬೇಳೆ ಬೇಯುವುದೇ ಹಾಗೆ. ಡಾಲ್‌ಹೌಸಿ ನೂರಾರು ವರ್ಷಗಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದನಲ್ಲವೇ ಡಿವೈಡ್ ಅಂಡ್ ರೂಲ್. ಒಡೆದು ಆಳು. ಆರೀತಿ ಮಾಡಿದರೇನೇ ರಾಜಕಾರಣಿಗಳಿಗೆ ಉಳಿಗಾಲ. ಅದು ನಮ್ಮೆಲ್ಲರ ದೌರ್ಬಲ್ಯ. ಭಾರತದ ಪ್ರಜೆಗಳು ಎಲ್ಲಿಯವರೆಗೆ ಚಿಂತನೆ, ಜೀವನಶೈಲಿ, ಸಮಾಜದೆಡೆಗಿನ ದೃಷ್ಟಿಕೋನಗಳಲ್ಲಿ ತೀವ್ರತಮ ಬದಲಾವಣೆ ತರುವುದಿಲ್ಲವೋ ಅಲ್ಲಿಯವರೆಗೆ ಪರಿಸ್ಥಿತಿ ಹೀಗೆಯೇ ಇರುತ್ತದೆ. ನೇತಾರರಿಗೆ ಉಗಿಯುತ್ತೇವೆ, ಎಲ್ಲದಕ್ಕೂ ಅವರತ್ತ ಬೆಟ್ಟು ತೋರಿಸುತ್ತೇವೆ. ಅವರೆಲ್ಲ ಭ್ರಷ್ಟರಾಗಿದ್ದಾರೆ ಎನ್ನುತ್ತೇವೆ. ಭ್ರಷ್ಟ ಜನರಿರುವುದರಿಂದಲೇ ತಾನೇ ನೇತಾರರೂ ಭ್ರಷ್ಟರಾಗುವುದು? ಯಾರೋ ಒಬ್ಬ ಪರಮಶುದ್ಧ ವ್ಯಕ್ತಿತ್ವದವನು ಆರಿಸಿ ಬಂದರೆ ಈ ಸಮಾಜವೇ ಅವನನ್ನು ಬದುಕಗೊಡುವುದಿಲ್ಲ, ಅಷ್ಟು ಕೆಟ್ಟುಹೋಗಿದೆ ನಮ್ಮ ವ್ಯವಸ್ಥೆ. ರಾಜಕೀಯ ಬದಿಗಿಟ್ಟು, ನಿಷ್ಪಕ್ಷಪಾತದಿಂದ ಚಿಂತನೆ ಮಾಡಿ, ದೇಶದ ಉದ್ಧಾರ ಮಾಡಬಲ್ಲ ಅಧ್ವರ್ಯುವೊಬ್ಬ ಉದಯಿಸಿ ಹೆಗಲಿಗೆ ಹೆಗಲು ಕೊಟ್ಟು ಬೆಂಬಲಿಸುವುದಕ್ಕೆ ನಾವು ಸಿದ್ಧರಿದ್ದೇವೆಯೇ?’ ಮತ್ತೆ ಸಂದರ್ಶಕಿಯದು ಅದೇ ರಾಗ- ‘ಆದರೆ, ವಿರೋಧದ ಮಾತನ್ನು ಹತ್ತಿಕ್ಕುವ ಪ್ರಯತ್ನಗಳೂ ನಡೆಯುತ್ತಿವೆಯಲ್ಲ?’ ಅನ್ನು ಕಪೂರ್ ಮತ್ತಷ್ಟು ವ್ಯಗ್ರರಾಗುತ್ತಾರೆ:

‘ಹಾಗಿರುತ್ತಿದ್ದರೆ ನಿಮ್ಮ ಈ ವಾಹಿನಿಯಲ್ಲಿ ನಾನಿದನ್ನೆಲ್ಲ ಇಷ್ಟು ಧೈರ್ಯವಾಗಿ ಹೇಳುತ್ತಿದ್ನಾ? ವಿರೋಧಿಗಳ ಬಾಯ್ಮುಚ್ಚಿಸಲಾಗುತ್ತಿದೆ ಎನ್ನುವುದು ಭ್ರಮೆ. ಈಗಂತೂ ಮಾಧ್ಯಮಗಳು ಎಷ್ಟು ಶಕ್ತಿಶಾಲಿ ಇವೆಯೆಂದರೆ ಜನರು ಪೊಲೀಸರಿಗೆ ಹೆದರುವುದಿಲ್ಲ, ಪುಢಾರಿಗಳ ಗೂಂಡಾಗಿರಿಗೆ ಹೆದರುವುದಿಲ್ಲ, ಆದರೆ ಮಾಧ್ಯಮಗಳಿಗೆ ಹೆದರುತ್ತಾರೆ! ಅಂದಮೇಲೆ ವಿರೋಧವನ್ನು ಹತ್ತಿಕ್ಕಲಾಗುತ್ತಿದೆ ಇವತ್ತು ನಿನ್ನೆ ಅಲ್ಲ, ದಶಕಗಳ ಹಿಂದೆಯೇ ಒಬ್ಬ ಉರ್ದು ಕವಿ ಹೇಳಿದ್ದನಲ್ಲವೇ ‘ಅಜಬ್ ನಹೀ ಹೈ ಜೊ ತುಕ್ಕಾ ಭೀ ತೀರ್ ಹೋ ಜಾಯೇ ಫಟೇ ಜೋ ದೂಧ್ ತೋ ಫಿರ್ ವೋ ಪನೀರ್ ಹೋ ಜಾಯೇ ಮವಾಲಿಯೊಂಕೋ ನ ದೇಖಾ ಕರೋ ಹಿಕಾರತ್ ಸೇ ನ ಜಾನೇ ಕೌನ್ ಸಾ ಗೂಂಡಾ ವಜೀರ್ ಹೋ ಜಾಯೇ’ (ಅದೃಷ್ಟ ಖುಲಾಯಿಸಿದರೆ ಹಾಳುಕಡ್ಡಿಯೂ ಬಾಣ ಆದೀತು. ಒಡೆದು ಹೋದ ಹಾಲು ಆದೀತು. ಯಾರನ್ನೂ ತಾತ್ಸಾರದಿಂದ ನೋಡಬೇಡ, ಯಾರಿಗೆ ಗೊತ್ತು, ಯಾರೋ ಒಬ್ಬ ಗೂಂಡಾ ನಾಳೆ ಮಂತ್ರಿ ಆದಾನು!’)

ಅಲ್ಲಿಗೆ ಏಳು ನಿಮಿಷಗಳ ವಿಡಿಯೋ ಮುಗಿಯುತ್ತದೆ. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಅನ್ನು ಕಪೂರ್ ಮಾತುಗಳು ಕಿವಿಗಳಲ್ಲಿ ಗುಂಯ್‌ಗುಡುತ್ತಲೇ ಇರುತ್ತವೆ. ಅವು ಯಾವುದೋ ನಾಟಕ ಅಥವಾ ಸಿನಿಮಾಗೋಸ್ಕರ ಸ್ಕ್ರಿಪ್‌ಟ್ ಬರೆದು ಬಾಯಿಪಾಠ ಮಾಡಿ ಬಡಬಡಿಸಿದ ಡೈಲಾಗುಗಳಲ್ಲ. ರಾಷ್ಟ್ರವ್ಯಾಪಿ ವಾಹಿನಿಯೊಂದರ ನೇರಪ್ರಸಾರದ ಸಂದರ್ಶನ ಕಾರ್ಯಕ್ರಮದಲ್ಲಿ ಮನಸ್ಸಿಗೆ ಏನು ಹೊಳೆಯಿತೋ, ಹೃದಯದಿಂದ ಹರಿಯಿತೋ ಅದೆಲ್ಲ ಯಥಾವತ್ತಾಗಿ ಹೊರಬಂದ ಮಾತುಗಳು. ಎಂಥವರನ್ನಾದರೂ ಬಡಿದೆಬ್ಬಿಸುವಂಥವು. ನನ್ನೆದೆಯನ್ನು ತಾಕಿದ್ದವು. ಅರುಣ ಮರಾಠೆಯವರಿಗೊಂದು ‘ಥ್ಯಾಂಕ್ಯೂ’ ಮೆಸೇಜು ಹಾಕಿದೆ. ಆ ವಿಡಿಯೋಕ್ಲಿಪ್‌ಅನ್ನು ನಾನು ವಾಟ್ಸಪ್‌ನಲ್ಲಿ ಯಾರಿಗೂ ಫಾರ್ವರ್ಡ್ ಮಾಡುವ ಗೋಜಿಗೆ ಹೋಗಲಿಲ್ಲ. ಬದಲಿಗೆ, ‘ಆಜ್ ತಕ್’ ವಾಹಿನಿಯು ಪ್ರಸಾರ ಮಾಡಿದ್ದ ಆ ಸಂದರ್ಶನದ ಪೂರ್ಣ ಭಾಗ ಸಿಗಬಹುದೇ ಎಂದು ಹುಡುಕಿದೆ. ‘ಯುಟ್ಯೂಬ್’ನಲ್ಲಿ ಸಿಕ್ಕಿತು. ಬಿಡುವು ಮಾಡಿಕೊಂಡು ಪೂರ್ತಿ ನೋಡಿದೆ. ಅಂತಾಕ್ಷರಿಯ ನಿರೂಪಕನಾಗಿಯಷ್ಟೇ ಗೊತ್ತಿದ್ದ ಅನ್ನು ಕಪೂರ್ ಬಗ್ಗೆ ನನ್ನ ಹತ್ತು ಪಟ್ಟು ಹೆಚ್ಚಾಯ್ತು. ಇವತ್ತಿನ ದಿನಗಳಲ್ಲಿ ನಮಗೆ ಬೇಕಾಗಿರುವುದು ಅನ್ನು ಕಪೂರ್ ವ್ಯಕ್ತಪಡಿಸಿದಂಥ ವಿಚಾರಧಾರೆಗಳೇ. ಆದರೆ ವಿಪರ್ಯಾಸವೆಂದರೆ, ‘ದೇಶದಲ್ಲಿ ಅಸಹಿಷ್ಣುತೆ ತುಂಬಿದೆ ಎಂದು ಗೊಣಗುವ ಅಮೀರ್ ಖಾನ್ ಸುದ್ದಿಯಾಗುತ್ತಾನೆ. ‘ಭಾರತ್ ತೇರೆ ತುಕಡೇ ಹೋಂಗೇ’ ಎಂದು ಬೊಬ್ಬಿಡುವ ಕನ್ಹಯ್ಯಾ, ಜಿಗ್ನೇಶನಂಥ ಕ್ರಿಮಿಗಳು ಸುದ್ದಿಯಲ್ಲಿರುತ್ತವೆ. ‘ನಾನೂ ಅರ್ಬನ್ ನಕ್ಸಲ್’ ಎಂದು ಕತ್ತಿನಲ್ಲಿ ಫಲಕ ನೇತಾಡಿಸಿಕೊಳ್ಳುವ ಜ್ಞಾನಪೀಠಿ ನಂ.ಸೆವೆನ್ ಸುದ್ದಿಯಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರೆಲ್ಲರ ಹೊಲಸನ್ನು ಎತ್ತಿಯಾಡುತ್ತ ನಾವು ಕಾಲ ಕಳೆಯುತ್ತೇವೆ. ಒಳಿತಾಯ್ತು? ಅದಕ್ಕಿಂತ, ಅನ್ನು ಕಪೂರ್ ಸಂದರ್ಶನದ ಸಾರಾಂಶವನ್ನು ಕನ್ನಡಕ್ಕಿಳಿಸಿ ಒಂದಿಷ್ಟು ಕನ್ನಡಿಗರಿಗೆ ತಲುಪಿಸುವೆ, ಕೆಚ್ಚಿನ ಕಿಡಿ ಯಾರಲ್ಲಾದರೂ ಹೊತ್ತುತ್ತದಾದರೆ ಹೊತ್ತಿಕೊಳ್ಳಲಿ ಎಂದುಕೊಂಡು ಈ ವಾರದ ಅಂಕಣಕ್ಕೆ ಇದನ್ನು ಆಯ್ದುಕೊಂಡಿದ್ದೇನೆ.

‘ಆಜ್ ತಕ್’ ಸಂದರ್ಶನದಲ್ಲಿ ಅನ್ನು ಕಪೂರ್ ವ್ಯಕ್ತಿತ್ವದ ವಿವಿಧ ಮಗ್ಗಲುಗಳ ಪರಿಚಯ ಆಗುತ್ತದೆ. ಮೊದಲಾಗಿ ತನಗಿಂತ ಕಿರಿಯ ವಯಸ್ಸಿನ ಸಂದರ್ಶಕಿಯನ್ನು ಗೌರವದಿಂದ ಕಂಡ ರೀತಿ. ‘ವಯಸ್ಸಿನಲ್ಲಿ, ಅನುಭವದಲ್ಲಿ ಕಿರಿಯಳಾಗಿದ್ದ ಮಾತ್ರಕ್ಕೆ ಗುಣಧರ್ಮದಲ್ಲಿ ಕಡಿಮೆಯೆಂದಾಗುವುದಿಲ್ಲ’ ಎಂದು ಬೋಧನೆ. ತನ್ನ ಅಮ್ಮ ಪ್ರಪಂಚದಲ್ಲಿ ಪ್ರತಿಯೊಬ್ಬ ಹೆಣ್ಣಿನಲ್ಲೂ ಒಬ್ಬ ಅಮ್ಮ ಇರುತ್ತಾಳೆ, ಅವರೆಲ್ಲರೂ ಗೌರವಾರ್ಹರು ಎಂಬ ಭಾವನೆ. ಇದನ್ನು ತಂದೆಯಿಂದ ಕಲಿತದ್ದಂತೆ. ಅನ್ನು ಕಪೂರ್‌ನ ತಂದೆ ಮೂಲತಃ ಪಂಜಾಬಿನವರು, ನಾಟಕ ಕಂಪನಿ ಇಟ್ಟುಕೊಂಡು ಊರೂರು ತಿರುಗಿ ಪ್ರದರ್ಶನ ನೀಡುತ್ತಿದ್ದವರು. ತಾಯಿ ಮೂಲತಃ ಬಂಗಾಳದವರು, ಶಿಕ್ಷಕಿ, ಕವಯಿತ್ರಿ. ಪತಿಯ ಪ್ರೋತ್ಸಾಹದಿಂದ ಉರ್ದು, ಅರೇಬಿಕ್, ಪರ್ಷಿಯನ್ ಭಾಷೆಗಳನ್ನೆಲ್ಲ ಕಲಿತವರು. ಅದರ ಪ್ರಭಾವ ಅನ್ನು ಕಪೂರ್ ಮೇಲೂ ಆಗಿದೆ. ಅವರ ಮಾತು ಮುಂಬೈಯ ಬಜಾರಿ ಹಿಂದೀ ಅಲ್ಲ. ಮತ್ತು ಪಂಜಾಬಿ ಭಾಷೆಗಳಿಂದ, ಕಬೀರನ ದೋಹಾಗಳಿಂದ, ಸೂರದಾಸ್ ತುಲಸೀದಾಸ್ ಭಜನ್‌ಗಳ ಪಲ್ಲವಿಗಳಿಂದ, ಉರ್ದು ಶಾಯಿರಿಗಳಿಂದ ಶ್ರೀಮಂತಗೊಂಡ ಹಿಂದೀ ಭಾಷೆ. ಅದನ್ನು ಕೇಳುವುದೇ ಒಂದು ರೋಮಾಂಚಕಾರಿ ಅನುಭವ. ಹಾಗಂತ ಅದು ಪ್ರಯತ್ನಪೂರ್ವಕವಾಗಿ ಪದಗಳನ್ನು ಪೋಣಿಸಿ ಸಿಂಗರಿಸಿದ್ದಲ್ಲ, ದಿಲ್-ಸೇ ಹೊರಡುವುದೇ ಹಾಗೆ. ಸೂರದಾಸನ ಪ್ರಸಂಗವೊಂದನ್ನು ಬಣ್ಣಿಸುತ್ತಾರೆ. ಸೂರದಾಸನ ಕಾಲದ ವಿಚಾರವಾದಿಗಳು ಒಮ್ಮೆ ಆತನನ್ನು ಕೆಣಕಲಿಕ್ಕೆಂದೇ ‘ನೀನು ಇಷ್ಟೆಲ್ಲ ಭಜನೆಗಳನ್ನು ಬರೆಯುತ್ತಿಯಲ್ಲ ಹೇಗೆ ಸಾಧ್ಯ?’ ಎಂದು ಕೇಳಿದ್ದರಂತೆ. ‘ನನಗೆ ಏನು ಕಾಣುತ್ತದೆಯೋ ಅದು ಹೃದಯದ ಮಾತಾಗಿ ಹೊರಬರುತ್ತದೆ’ ಎಂದು ಸೂರದಾಸ ಮಾರ್ಮಿಕವಾಗಿ ಉತ್ತರಿಸಿದ್ದನಂತೆ. ‘ಕಣ್ಣಿಲ್ಲದವನಿಗೆ ಕಾಣುವುದೇನು ಬಂತು?’ ಎಂದು ಮತ್ತಷ್ಟು ಗೇಲಿಮಾಡಿದ ವಿಚಾರವಾದಿಗಳು ಸೂರದಾಸನನ್ನು ದೇವಾಲಯವೊಂದಕ್ಕೆ ಕರೆದುಕೊಂಡು ಹೋಗುತ್ತಾರೆ.

ಅಲ್ಲಿ ಕೃಷ್ಣನ ಪ್ರತಿಮೆಯನ್ನು ಬೇಕಂತಲೇ ವಿವಸ್ತ್ರಗೊಳಿಸಿ ಈಗೇನು ಕಾಣುತ್ತಿದೆ ನಿನಗೆ ಎಂದು ಕೇಳುತ್ತಾರೆ. ಅಂಧ ಸೂರದಾಸ್ ಆಗ ಹಾಡಿದ್ದೇ ‘ಏ ಸಖೀ, ಆಜ್ ಹಮ್ ದೇಖೇ ರೀ ಹರಿ ನಂಗಂ ನಂಗಾ!’ ಒಬ್ಬ ನೇತ್ರಹೀನ ಭಕ್ತ ನಗ್ನ ಭಗವಂತನನ್ನು ಕಂಡು ಅದೇ ತನಗಾದ ಎಂದು ಧನ್ಯತೆ ಪಡೆದ ರೀತಿ ಅದು. ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯಿಂದ ಜೀವನ ಮಾಡಿಕೊಂಡು ಬಂದವನು ತಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅನ್ನು ಕಪೂರ್, ‘ದುಡ್ಡು ಪೂಜನೀಯ. ಹಣಕ್ಕಾಗಿಯೇ ಬದುಕುತ್ತೇವೆ. ನಾನಾದರೂ ಅಷ್ಟೇ. ಆದರೆ ಯಾರದೇ ಜೇಬು ದೋಚಿಯಾಗಲೀ, ಕುತ್ತಿಗೆ ಹಿಸುಕಿಯಾಗಲೀ, ದೇಶದ ಮಾನ ಹರಾಜು ಮಾಡಿಯಾಗಲೀ ದುಡ್ಡು ಮಾಡಿಲ್ಲ, ಮಾಡುವುದಿಲ್ಲ’ ಎನ್ನುತ್ತಾರೆ. ವ್ಯಾಪಾರ ಮಾಡುವುದು ಕೆಟ್ಟದಲ್ಲ, ಅದಕ್ಕೆ ಸಮಾಜಸೇವೆ ಎಂಬ ಮುಖವಾಡ ತೊಡಿಸುವುದು ಕೆಟ್ಟದು ಎಂದು ಅವರ ನಿಲುವು. ಎಷ್ಟು ಉತ್ಕಟವಾದದ್ದೆಂದರೆ ಈಗ ‘ನ ಕಿಸೀಕೇ ತಾಲಿಯೋಂಸೆ ಫರ್ಕ್ ಪಡ್ತಾ ಹೈ. ನ ಕಿಸೀಕೇ ಗಾಲಿಯೋಂ ಸೆ ಫರ್ಕ್ ಪಡ್ತಾ ಹೈ’ (ಯಾರದೇ ಚಪ್ಪಾಳೆಗಳಿಂದಾಗಲೀ ಬೈಗುಳಗಳಿಂದಾಗಲೀ ಏನೂ ವ್ಯತ್ಯಾಸವಾಗದು) ಎನ್ನುವಂಥ ಹಂತಕ್ಕೆ ತಲುಪಿದ್ದೇನೆನ್ನುತ್ತಾರೆ. ಭಗತ್ ಸಿಂಗ್, ವೀರ ಸಾವರ್ಕರ್, ಸುಭಾಶ್ಚಂದ್ರ ಬೋಸ್, ಉಧಮ್ ಸಿಂಗ್, ಖುದಿರಾಂ ಬೋಸ್…ಮುಂತಾದ ದೇಶಭಕ್ತರ ಹೆಸರುಗಳನ್ನು ಸಮಯೋಚಿತವಾಗಿ, ಗರ್ವದಿಂದ ಹೇಳುತ್ತ ಅನ್ನು ಕಪೂರ್ ಸಂದರ್ಶನವನ್ನು ಮುಕ್ತಾಯಗೊಳಿಸುವುದು ಹೀಗೆ: ‘ಮನುಷ್ಯ ಹೋನಾ ಭಾಗ್ಯ ಕೀ ಬಾತ್ ಕಲಾಕಾರ್ ಹೋನಾ ಸೌಭಾಗ್ಯ ಕೀ ಬಾತ್ ಹೈ’ ಎಂದಿದ್ದರು ಕವಿ ನೀರಜ್. ನಾನು ಹೇಳುತ್ತೇನೆ- ‘ಮನುಷ್ಯ ಹೋನಾ ಭಾಗ್ಯ ಕೀ ಬಾತ್ ಹೈ. ದೇಶಭಕ್‌ತ್ ಹೋನಾ ಸೌಭಾಗ್ಯ ಕೀ ಬಾತ್ ಹೈ!’ ಈಗ ನೀವು ಯುಟ್ಯೂಬ್ ವಿಡಿಯೋ ದೇಖನಾ ಸೌಭಾಗ್ಯ ಅಂದ್ಕೊಳ್ತೀರಾದರೆ: http://youtu.be/bdqYPdO2Blo

Tags

Related Articles

Leave a Reply

Your email address will not be published. Required fields are marked *

Language
Close