About Us Advertise with us Be a Reporter E-Paper

ಗೆಜೆಟಿಯರ್

ಸೂರ್ಯನನ್ನು ತಲುಪಲು ಬೇಕು 7 ವರ್ಷ

ದೇ ಭಾನುವಾರದಂದು ನಾಸಾ ಸಂಸ್ಥೆ ಹಾರಿಸಿದ ಪಾರ್ಕರ್ಹೆಸರು ಹೊತ್ತ ಬಾಹ್ಯಾಕಾಶ ನೌಕೆಯ ಗುರಿ ಸೂರ್ಯ! ನಿಜ, ಕುದಿಕುದಿ ಕೆಂಡದಂತಹ ಸೂರ್ಯನ ಹೊರ ವಲಯವನ್ನು ಪಾರ್ಕರ್, ಅಲ್ಲಿನ ವಾತಾವರಣ ಮತ್ತು ಇತರ ವಿದ್ಯಮಾನಗಳ ಕುರಿತು ಅಧ್ಯಯನ ನಡೆಸುತ್ತದೆ. 12.8.2018ರಂದು ತನ್ನ ಪಯಣ ಆರಂಭಿಸಿದ ಗಗನ ನೌಕೆಯು ಸೂರ್ಯನನ್ನು ತಲುಪುವುದು 2024ರಲ್ಲಿ! ಒಟ್ಟು ಏಳು ವರ್ಷಗಳ ಪಯಣ. ಸುಮಾರು 1.5 ಬಿಲಿಯ ಡಾಲರು ವೆಚ್ಚದ ಬಾಹ್ಯಾಕಾಶ ನೌಕೆಯು ಸೂರ್ಯನ ಮೇಲ್ಮೈ ಯಲ್ಲಿರುವ ಅಯಸ್ಕಾಂತೀಯ ಬಿರುಗಾಳಿಯನ್ನು ಮತ್ತು ಇತರ ರಹಸ್ಯಗಳನ್ನು ಅಧ್ಯಯನ ಮಾಡಲಿದೆ. ಇದುವರೆಗೆ ಮಾನವನು ಹಾರಿಸಿದ ಯಾವುದೇ ಗಗನ ನೌಕೆಗಿಂತ ಹೆಚ್ಚು ವೇಗದಲ್ಲಿ ನೌಕೆಯು ಚಲಿಸುತ್ತಿದ್ದು, ತನ್ನ ಸುದೀರ್ಘ ಪಯಣದಲ್ಲಿ , ಸೂರ್ಯನ ಮೇಲ್ಮೈ ತಲುಪಲು ಸಾಕಷ್ಟು ಸವಾಲುಗಳನ್ನು ಎದುರಿಸಲಿದೆ. ಇದರ ದಾರಿಗೆ ಅಡ್ಡಲಾಗಿ ಬುಧ ಮತ್ತು ಶುಕ್ರ ಗ್ರಹಗಳ ಪಥವು ಹಾದುಹೋಗುತ್ತಿರುವುದರಿಂದಾಗಿ, ಎರಡೂ ಗ್ರಹಗಳ ಸ್ಥಾನ ಮತ್ತು ಅವುಗಳ ಅಯಸ್ಕಾಂತೀಯ ವಲಯವು ಪಾರ್ಕರ್ ನೌಕೆಯ ಪಯಣಕ್ಕೆ ಪ್ರಮುಖ.

ಪಾರ್ಕರ್ ನೌಕೆಯು ಸೂರ್ಯನ ಹತ್ತಿರ ತಲುಪಿದಂತೆಲ್ಲಾ, ಅಲ್ಲಿನ ಬಿಸಿಯನ್ನು ತಡೆದುಕೊಳ್ಳಬೇಕಾದ ಮತ್ತೊಂದು ಸವಾಲನ್ನು ಎದುರಿಸಬೇಕಾಗುತ್ತದೆ. ಸುಮಾರು 1371 ಡಿಗ್ರಿ ಸೆಲ್ಶಿಯಸ್ ಇರಬಹುದಾದ ವಾತಾವರಣದ ಬಿಸಿಯನ್ನು ತಡೆಯಲು ಸುಮಾರು ನಾಲ್ಕೂವರೆ ಇಂಚು ದಪ್ಪನೆಯ ರಕ್ಷಾಕವಚ ಗಗನನೌಕೆಗೆ ಇದೆ. ಹೊರಗಿನ ಬಿಸಿ ಎಷ್ಟೇ ಇರಲಿ, ಗಗನನೌಕೆಯ ಒಳಗಿನ ಬಿಸಿಯನ್ನು 29 ಡಿಗ್ರಿ ಸೆಲ್ಶಿಯಸ್‌ನಲ್ಲಿ ಕಾಯ್ದುಕೊಳ್ಳುವ ಶಕ್ತಿ ರಕ್ಷಾಕವಚಕ್ಕೆ ಇದೆ. ಸೂರ್ಯನ ಸುತ್ತ ಇರುವ ಕರೋನಾ ವಲಯವನ್ನು ಸುಮಾರ 24 ಬಾರಿ ಹಾದು ಹೋಗುವ ಪಾರ್ಕರ್ ನೌಕೆಯು, ಬಹಳಷ್ಟು ಮಾಹಿತಿಯನ್ನು ಕಳುಹಿಸುವ ನಿರೀಕ್ಷೆ ಇದೆ. ಸೂರ್ಯನ ಕುರಿತು ನಾವು ಅರಿತಿರುವುದು ತುಂಬಾ ಕಡಿಮೆ. ಉತ್ಪತ್ತಿಯಾಗುತ್ತಿರುವ ಪ್ರಚಂಡವಾದ ಬಿಸಿಯಿಂದಾಗಿ, ಈಗ ತಿಳಿದಿರುವಂತಹ ಮಾಹಿತಿ ಕಡಿಮೆ. ಅಪರಿಮಿತ ಬಿಸಿಯಿಂದಾಗಿ ಸೂರ್ಯನ ವಾತಾವರಣದಲ್ಲಿ ಸದಾ ಕಾಲ ಪ್ರಚಂಡ ಬಿರುಗಾಳಿ ಇರುತ್ತದೆ ಎಂದು ಈಜೀನ್ ಪಾರ್ಕರ್ ಎಂಬ ವಿಜ್ಞಾನಿ ಹೇಳಿದ್ದರಿಂದಾಗಿ, ಗಗನ ನೌಕೆಗೆ ಪಾರ್ಕರ್ ಎಂಬ ಹೆಸರು. ಭಾರತೀಯ ಪೌರಾಣಿಕ ಹಿನ್ನೆಲೆಯನ್ನು ಗಮನಿಸಿ, ಸೂರ್ಯನತ್ತ ಹಾರಿ ತನ್ನ ಮುಖವನ್ನು ಕೆಂಪಗೆ ಊದಿಸಿಕೊಂಡ ಆಂಜನೇಯನ ಹೆಸರನ್ನು ಸಹ ಇಂತಹ ಸಾಹಸಕ್ಕೆ ಇಡಬಹುದಿತ್ತು, ಅಲ್ಲವೆ!

Tags

Related Articles

Leave a Reply

Your email address will not be published. Required fields are marked *

Language
Close