About Us Advertise with us Be a Reporter E-Paper

ಅಂಕಣಗಳು

ನಾಯಕತ್ವದ ಒಂದು ತೆರೆದ ಪುಸ್ತಕ ನೆಲ್ಸನ್ ಮಂಡೇಲಾ!

ಸ್ಮರಣೆ: ವಿಕ್ರಮ್ ಜೋಶಿ

ಕಾಲ ಯಾರಿಗೂ ನಿಲ್ಲುವುದಿಲ್ಲ ಎನ್ನುತ್ತಾರೆ ಆದರೆ ಮಂಡೇಲಾ ಅವರ ಕಾಲ ಒಂದು ಕಾಲದಲ್ಲಿ ನಿಂತೇ ಹೋಗಿತ್ತು. ಬ್ರಿಟಿಷರು ಅವರನ್ನು ಇಪ್ಪತ್ತೇಳು ವರ್ಷಗಳ ಕಾಲ ಜೈಲಿನ ಒಂದು ಚಿಕ್ಕ ಕೋಣೆಯಲ್ಲಿ ಬಂಧಿಯಾಗಿಸಿದ್ದರು.  ಜನ್ಮದಲ್ಲಿ ಎರಡು ಬಾರಿ ಜೀವ ತಾಳಿದ ಮಹಾತ್ಮ ನೆಲ್ಸನ್ ಮಂಡೇಲಾ. ಅವರು ಮತ್ತೊಮ್ಮೆ ಜೈಲಿನಿಂದ ಜೀವಂತ ಹೊರಗೆ ಬರುತ್ತಾರೆ ಎಂದು ದಕ್ಷಿಣ ಆಫ್ರಿಕಾದ ಜನರು ನಿರೀಕ್ಷಿಸಿರಲಿಲ್ಲ. ಜೈಲಿನಲ್ಲಿ ಮಂಡೇಲಾರಿಗೆ ಹೊರಗಿನ ಆಗುಹೋಗುಗಳ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿರಲಿಲ್ಲ. ಒಂದು ಅರ್ಥದಲ್ಲಿ ಹೇಳುವುದಾದರೆ ಅವರ ಜಗತ್ತು ಚಲಿಸುವುದನ್ನೇ ನಿಂತಿತ್ತು ಅಂದುಕೊಳ್ಳಿ. ಆದರೆ ವಾಸ್ತವದಲ್ಲಿ ಜಗತ್ತು ಬಹಳ ವೇಗವಾಗಿ ಓಡುತ್ತಿತ್ತು. ಅವರು ಜೈಲಿನಿಂದ ಹೊರಗಡೆ ಬಂದಾಗ ಅವರು ಕಂಡಿದ್ದ ಜಗತ್ತೇ ಬೇರೆ  ನೋಡುತ್ತಿರುವ ಜಗತ್ತೇ ಬೇರೆಯಾಗಿತ್ತು. ಮೂರು ದಶಕದಲ್ಲಿ ಪರಿಸ್ಥಿತಿ ನೂರು ಪಟ್ಟು ಬದಲಾಗಿತ್ತು. ಅವರು ಹಚ್ಚಿ ಹೋಗಿದ್ದ ಸ್ವಾತಂತ್ರ್ಯದ ಕಿಚ್ಚು ಜ್ವಾಲೆಯಾಗಿ ಉರಿಯುತ್ತಿತ್ತು. ಕರಿಯರ ಹಾಗೂ ಬಿಳಿಯರ ನಡುವಿನ ಸಂಘರ್ಷಕ್ಕೆ ಕೊನೆಯೇ ಇರಲಿಲ್ಲ. ಬ್ರಿಟಿಷರ ಎಂದೂ ಮುಳುಗದ ಸಾಮ್ರಾಜ್ಯದ ಪತನವಾದರೂ ಕೂಡ ದಕ್ಷಿಣ ಆಫ್ರಿಕಾದಲ್ಲಿನ ಕರಿಯರಿಗೆ ಮಾನವ ಹಕ್ಕು ಪ್ರಾಪ್ತಿಯಾಗಿರಲಿಲ್ಲ. ಆದರೆ ಅವರು ತಮ್ಮ ಆ ಇಳಿ ವಯಸ್ಸಿನಲ್ಲೂ ಆಫ್ರಿಕಾದ ಜನರಿಗಾಗಿ ಹೋರಾಡಲು ಸಿದ್ಧರಾಗಿದ್ದರು. ಈ ವರ್ಷ ಇಂತಹ ಮಹಾನ್  ಜನಿಸಿ ನೂರು ವರ್ಷಗಳಾಗುತ್ತವೆ.

ಬದಲಾವಣೆ ಎನ್ನುವುದು ಕಲ್ಲು ಮುಳ್ಳುಗಳು ತುಂಬಿರುವ ದಾರಿ. ಮಂಡೇಲಾ ಮನಸ್ಸು ಮಾಡಿದ್ದರೆ ತನ್ನ ಜೊತೆಗಾರನ ಲಾ ಫರ್ಮಿನಲ್ಲಿ ಕೆಲಸ ಮಾಡುತ್ತ ಕೋಟ್ಯಧಿಪತಿಯಾಗಿ ಆರಾಮದಲ್ಲಿ ಜೀವನ ಮಾಡಬಹುದಿತ್ತು. ಸಮಾಜದಲ್ಲಿ ಒಂದು ಬದಲಾವಣೆ ತರಬೇಕು ಎಂಬ ಗುರಿಯ ಹಿಂದೆ ಬಿದ್ದಾಗಿನಿಂದ ಅವರ ವೈಯಕ್ತಿಕ ಜೀವನ, ವ್ಯಾವಹಾರಿಕ ಬದುಕು ಎಲ್ಲವೂ ಸರ್ವನಾಶವಾದವು. ವಕೀಲಿ ವೃತ್ತಿಯಲ್ಲಿ ಬೇಕಾದಷ್ಟು ಗಳಿಸಿ ಅರಮನೆಯಲ್ಲಿ ಇರಬೇಕಾದ ಮಂಡೇಲಾ ಜೈಲಿನ ಪುಟ್ಟ ಕೋಣೆಯಲ್ಲಿ ಕಲ್ಲು ಕೆತ್ತುತ್ತಾ  ಕಳೆದರು. ಮಂಡೇಲಾರವರ ಜೀವನವನ್ನು ನೋಡಿದಾಗ ಅಲ್ಲಿ ಕಾಣುವುದು ಕೇವಲ ಸಂಘರ್ಷ ಮಾತ್ರ. The struggle is my life. I will continue fighting for freedom until the end of my days  ಎನ್ನುತ್ತಾರೆ. ನೆಲ್ಸನ್ ಮಂಡೇಲಾ ಜೈಲಿನಲ್ಲಿರುವಾಗ ಅವರ ಮಡದಿ ಅವರ ಪರವಾಗಿ ಹೋರಾಟ ನಡೆಸಿದರು. ಇಡೀ ಜಗತ್ತು ಮಂಡೇಲಾರವರಿಗೆ ಜೈಲಿನಲ್ಲಿ ಕೊಡುತ್ತಿರುವ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಂತರಾಷ್ಟ್ರೀಯ ದಿಗ್ಬಂಧನದ ಹೇರಿಕೆ ಹೆಚ್ಚುತ್ತಾ ಹೋಯಿತು.  ಆಂತರಿಕ ಯುದ್ಧದ ಸನ್ನಿವೇಶ ನಿರ್ಮಾಣವಾಗಿತ್ತು. ಮಂಡೇಲಾ ಅವರನ್ನು ಜೈಲಿನಿಂದ ಹೊರಗಡೆ ಬಿಡದೇ ಆ ದೇಶದ ರಾಷ್ಟ್ರಪತಿಗೆ ಬೇರೆ ಮಾರ್ಗವೇ ಇರಲಿಲ್ಲ. ಮಂಡೇಲಾರನ್ನು ಜೈಲಿನಿಂದ ಹೊರತರಲು ದಕ್ಷಿಣ ಆಫ್ರಿಕಾದ ಬಿಳಿ ನಾಯಕರು ಆ ಮೊದಲು ಪ್ರಯತ್ನ ಪಡಲಿಲ್ಲ ಎಂದಲ್ಲ. ಆದರೆ ಪ್ರತಿ ಬಾರಿಯೂ ಅದಕ್ಕಾಗಿ ಒಂದಲ್ಲಾ ಒಂದು ಷರತ್ತುಗಳನ್ನು ಹಾಕಲಾಗುತ್ತಿತ್ತು. ಮಂಡೇಲಾರಿಗೆ ದೇಶದ ಸ್ವಾತಂತ್ರ್ಯಕ್ಕಿಂತ ಮತ್ತೇನೂ ಬೇಕಾಗಿರಲಿಲ್ಲ. ನಾಯಕತ್ವದ ಹಾದಿಯಲ್ಲಿ ಹಲವಾರು ರೀತಿಯ ಪರೀಕ್ಷೆಗಳು ಎದುರಾಗುತ್ತವೆ. ಅದರಲ್ಲಿ ಒಂದು ‘ಹೊಂದಾಣಿಕೆ’.  ರಾಜನಾಗಲು ರಾಜಕಾರಣಿ ಏನು ಬೇಕಾದರೂ ರಾಜಿ ಮಾಡಿಕೊಳ್ಳಬಲ್ಲ. ಆದರೆ ಮಂಡೇಲಾ ಬ್ರಿಟಿಷರ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಲಿಲ್ಲ. ತೀವ್ರವಾದ ದೈಹಿಕ ಹಾಗೂ ಮಾನಸಿಕ ಆಘಾತದ ನಡುವೆಯೂ ತಮ್ಮ ಗುರಿಯಿಂದ ತುಸುವಾದರೂ ಈ ಕಡೆ ಆ ಕಡೆ ಸರಿಯಲಿಲ್ಲ. ಅವರ ತಾಯಿ ತೀರಿಕೊಂಡಾಗ, ಮಗನ ನಿಧನವಾದಾಗ ಕೊನೆಯ ದರ್ಶನದ ಭಾಗ್ಯವೂ ಸಿಗಲಿಲ್ಲ.

ಮಂಡೇಲಾ ಪರೋಕ್ಷವಾಗಿ ತೋರಿಸಿದ ಹಾದಿ ಎಂದರೆ ಗೆಲುವಿನಿಂದ ಗೆಲುವುಗಳನ್ನು ಹೆಚ್ಚಿಸುತ್ತಾ ಹೋಗುವುದು. ಮಂಡೇಲಾ ಜೈಲಿನಿಂದ ಹೊರಗಡೆ  ಒಡೆದು ಛಿದ್ರವಾದ ದಕ್ಷಿಣ ಆಫ್ರಿಕಾವನ್ನು ಕೂಡಿಸಬೇಕಿತ್ತು. ಕರಿಯರು, ಕರಿಯರೊಡನೆ ಕಚ್ಚಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಒಂದು ಭಾಷಣದಲ್ಲಿ ಮಂಡೇಲಾ,  ‘ಸಹೋದರರ ನಡುವೆ ಹೊಡೆದಾಟ ತರಲೆಂದು ನಾನು ಇಪ್ಪತ್ತೇಳು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಲಿಲ್ಲ’ ಎಂದು ವಿಷಾದದಿಂದ ಹೇಳುತ್ತಾರೆ. ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಮಂಡೇಲಾ ಬಿಳಿಯರ ಜೊತೆ ಕೂತು ಮಾತನಾಡಿದರು. ಜೈಲಿನಲ್ಲಿ ಇರುವಾಗಲೇ ಸರಕಾರದ ಮುಖ್ಯಸ್ಥರೊಡನೆ ಗೌಪ್ಯವಾಗಿ ವರ್ಣಭೇದ ನೀತಿಯಿಂದ ದೇಶ ಅನುಭವಿಸಬೇಕಾದ ನಷ್ಟವನ್ನು ವಿಸ್ತಾರವಾಗಿ ಮಂಡಿಸಿದ್ದರು. ಅದರ ಫಲವಾಗಿ,  ರಾಷ್ಟ್ರಪತಿ ಫೆಡರಿಕ್ ಈ ವರ್ಣಭೇದ ನೀತಿ ನಿಲ್ಲದೇ ಹೋದರೆ ದೇಶ ದಿವಾಳಿ ಆಗುತ್ತದೆ ಎನ್ನುವುದನ್ನು ಮನಗಂಡಿದ್ದರು. ವರ್ಣಭೇದ ನೀತಿಯು ಕೊನೆಗೊಂಡು ಎಲ್ಲರಿಗೂ ಸಮನಾದ ಹಕ್ಕುಗಳನ್ನು ನೀಡುವಲ್ಲಿ ಮಂಡೇಲಾ, ಫೆಡರಿಕ್ ಅವರ ಜೊತೆ ನಡೆಸಿದ ಸಂಧಾನ ಬಹಳ ಮುಖ್ಯವಾದದ್ದು.

ಇಷ್ಟೇ ಅಲ್ಲ , ದೇಶದ ಉದ್ದಗಲಕ್ಕೆ ಹಬ್ಬಿದ್ದ ರಾಜಕೀಯ ಅರಾಜಕತೆಯನ್ನು ತಡೆಯುವುದು ಕೂಡ ಸುಲಭವಾಗಿರಲಿಲ್ಲ. ಮಂಡೇಲಾ, ಅರಾಜಕತೆಯ ಬೆನ್ನೇರಿ ಹೊರಟ ನಾಯಕರನ್ನು ಸೋಲಿಸಲಿಲ್ಲ, ಗೆದ್ದರು. ನಿಮ್ಮ ಗೆಲುವಿನಲ್ಲಿ ಎಲ್ಲರ ಗೆಲುವಿದೆ  ಇಡೀ ದಕ್ಷಿಣ ಆಫ್ರಿಕಾದ ಸಂಘಟನೆಗೆ ಸಾಕ್ಷಿಯಾದರು. ಇದಕ್ಕಾಗಿಯೇ ಫೆಡರಿಕ್ ವಿಲಿಯಂ ಡಿ ಕ್ಲಾರ್ಕ್ ಹಾಗೂ ನೆಲ್ಸನ್ ಮಂಡೇಲಾ ಇಬ್ಬರಿಗೂ 1993ರ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿದ್ದು.

ಜೈಲಿನಿಂದ ಹೊರಗೆ ಬರುವಾಗ ಮಂಡೇಲಾರ ಕಣ್ಣುಗಳಲ್ಲಿ ಸಿಟ್ಟಿನ ಜ್ವಾಲಾಮುಖಿ ಕಾಣುತ್ತಿತ್ತು. ರಾತ್ರಿ ಮೂರು ಗಂಟೆಗೆ ಎದ್ದು ಮಂಡೇಲಾ ಹೊರಗಡೆ ಬರುವುದನ್ನು ಆಗಿನ ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ನಂತರದಲ್ಲಿ ಮಂಡೇಲಾರನ್ನು ಭೇಟಿಯಾದಾಗ ಕೇಳಿದ್ದಕ್ಕೆ, ಕ್ಯಾಮೆರಾಗಳು ಅಷ್ಟೊಂದು ಎಚ್ಚರಿಕೆಯಿಂದ ನನ್ನ  ಹಿಡಿಯುತ್ತವೆ ಅಂದುಕೊಂಡಿರಲಿಲ್ಲ. ಹೌದು, ನನ್ನ ಇಪ್ಪತ್ತೇಳು ವರ್ಷಗಳನ್ನು ಕಸಿದುಕೊಂಡಿದ್ದಕ್ಕೆ ಸಿಟ್ಟು ಬಂತು, ಆದರೆ ನಾನು ಕ್ಷಮಿಸಿದ್ದೇನೆ. ಜೈಲಿನಲ್ಲಿರುವಾಗ ಮುಕ್ತನಾದೆ, ಈಗ ಹೊರಗೆ ಬಂದು ಮತ್ತೆ ಬಂಧಿಯಾಗುವ ಮನಸಿಲ್ಲ’ ಎಂದರು!

ಅವರು ಮೊದಲು ಉಗ್ರವಾದವನ್ನು ಕೈಯಲ್ಲಿ ಹಿಡಿದವರೇ. ಆದರೆ ಹೊರಗಿನ ಜಗತ್ತನ್ನು ನೋಡಿ ತಮ್ಮ ಆಯ್ಕೆಯನ್ನು ಬದಲಾಯಿಸಿದರು. ಮಂಡೇಲಾ ಯಾವತ್ತೂ ‘ತಾವೇ ಸರಿ’ ಎನ್ನಲಿಲ್ಲ, ’ಯಾವುದು ಸರಿ’ ಎನ್ನುವುದರತ್ತ ಸಾಗುತ್ತಿದ್ದರು. ್ಗYou mustn’t compromise your principles, but you mustn’t humiliate the opposition. No one is more dangerous than one who is humiliated. ಇದೇ ಅವರ ಗೆಲುವಿನ ರಹಸ್ಯವಾಗಿತ್ತು. ಇನ್ನೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ಮಾಡದೇ ಒಂದು ಒಳಿತಿಗೆ ಸರಿಯಾದ ಕೊೆಗಾಣಿಸುವುದೇ ಇಂದು ಗೆಲುವಿಗೆ ಬೇಕಾದ ಕಲೆ. ಇದನ್ನು ಮಂಡೇಲಾರವರಿಗಿಂತ ಚೆನ್ನಾಗಿ ಬೇರೆ ಯಾರು ಹೇಳಿ ಕೊಡಲು ಸಾಧ್ಯ?

ಒಬ್ಬ ನಾಯಕ ಕೇವಲ ಆ ಪೀಳಿಗೆಗೆ ಮಾತ್ರ ಸೀಮಿತವಾಗಿರುವುದಿಲ್ಲ; ಹಲವಾರು ಪೀಳಿಗೆಗೆ ಮಾದರಿಯಾತ್ತಾನೆ. ತನ್ನ ವರ್ಚಸ್ಸಿನಿಂದ   ತನ್ನದೇ ಆದ ಒಂದು ಗುಂಪನ್ನು ಹೊಸ ತಲೆಮಾರಿನಲ್ಲಿ ಹುಟ್ಟು ಹಾಕುತ್ತಾನೆ. ಮಂಡೇಲಾರ ಜೀವನವನ್ನು ನೋಡಿದರೆ ಅಲ್ಲಿ ಅವರಿಗೆ ಏನಿದೆ? ಎಲ್ಲವನ್ನೂ ದೇಶದ ಜನರಿಗಾಗಿ ತ್ಯಾಗ ಮಾಡಿದರು. ವೈಯಕ್ತಿಕ ಜೀವನದ ಏರುಪೇರು, ಜೈಲುವಾಸ, ವಿರೋಧಗಳು… ಇವೆಲ್ಲ ಮಂಡೇಲಾರಿಗೆ ತಮ್ಮನ್ನು ತಾವು ಗೆಲ್ಲಲು ಸಹಾಯ ಮಾಡಿದವು. ಮಂಡೇಲಾರವರ ಜೀವನ ನಾಯಕತ್ವದ ಒಂದು ತೆರೆದ ಪುಸ್ತಕ. ಅದರಿಂದ ಅನುಗಾಲವೂ ಓದುತ್ತಲೇ ಇರಬೇಕು, ಕಲಿಯುತ್ತಲೇ ಇರಬೇಕು.

Tags

Related Articles

Leave a Reply

Your email address will not be published. Required fields are marked *

Language
Close