About Us Advertise with us Be a Reporter E-Paper

ಗೆಜೆಟಿಯರ್

ಡಿಜಿಟಲ್ ಕಣ್ಣಲ್ಲಿ ವಾಸ್ತವಿಕತೆಯ ನಾನಾ ಮಗ್ಗಲುಗಳು

ಶ್ರೀನಿವಾಸ. ನಾ. ಪಂಚಮುಖಿ  

ಮಧ್ವಾಚಾರ್ಯರ ದ್ವೈತ ತತ್ತ್ವದನುಸಾರ ಬ್ರಹ್ಮನೂ ಸತ್ಯ ಜಗತ್ತು ಸತ್ಯ. ಅಂದರೆ ಜೀವಾತ್ಮರಿಗಿಂತ  ಸರ್ವ ಶಕ್ತನಾದ, ಸರ್ವಶ್ರೇಷ್ಠನಾದ ಭಗವಂತ ಭಿನ್ನ.  ಶಂಕರಾಚಾರ್ಯರ ಅದ್ವೈತದ ಪ್ರಕಾರ ಜಗತ್ತು ಮಿಥ್ಯ ಕೇವಲ ಬ್ರಹ್ಮ ಮಾತ್ರ ಸತ್ಯ, ಅರ್ಥಾತ್ ಆತ್ಮ  ಪರಮಾತ್ಮ ಒಂದೇ. ವಿಶಿಷ್ಟಾದ್ವೈತ ಪ್ರತಿಪಾದಿಸಿದ ರಾಮನುಜಾಚಾರ್ಯರು ಹೇಳಿದ್ದು ಹೀಗೆ , ಆತ್ಮ ಮತ್ತು ಪರಮಾತ್ಮ ಎರಡೂ ವಿಭಿನ್ನವಾದರೂ ಒಂದಾಗುವ ಸಂಭವನೀಯತೆ ಯಾವಾಗಲೂ ಇದೆ. ಈ ರೀತಿ ವಾಸ್ತವಿಕತೆಯ ಕುರಿತ ಆಚಾರ್ಯ ತ್ರಯರ ತತ್ತ್ವಗಳ ಬಗ್ಗೆ ನಾವೆಲ್ಲ ಓದಿದ್ದೇವೆ ಕೇಳಿದ್ದೇವೆ. ಆದರೆ ನಮ್ಮ ಊಹೆಗೂ ಮೀರಿದ, ಕನಸಿನಲ್ಲಿ ತೇಲುವ ಅವಾಸ್ತವಿಕ ಕಾಲ್ಪನಿಕ ಲೋಕವು ಒಮ್ಮೊಮ್ಮೆ ಸತ್ಯವೆಂಬಂತೆ ಗೋಚರಿತ್ತದೆ! ಇಂತಹ ಫ್ಯಾಂಟಸಿಯ  ಲೋಕಕ್ಕೆ ಹತ್ತಿರವಾಗಲು, ಪಯಣಿಸಲು  ತಂತ್ರಜ್ಞಾನ ಮತ್ತು ಡಿಜಟಲೀ ಕರಣ  ಆಯಾಮ ಕಲ್ಪಿಸಿದೆ.

ವಾಸ್ತವಿಕತೆಯನ್ನು ಮೂರು  ತೆರನಾಗಿ ವಿಂಗಡಿಸಬಹುದು. ಮೊದಲನೆಯದಾಗಿ ನಮ್ಮ ಹುಟ್ಟು, ಸಾವು ಮತ್ತು ನಮ್ಮೆಲ್ಲ ಚಟುವಟಿಕೆಗಳಿಗೆ ಸಾಕ್ಷಿಯಾಗಿ ಯಾವುದೇ ಪೌಸ್ ಬಟನ್ ಹೊಂದಿರದ ಭೌತಿಕ ಜಗತ್ತು. ಇಲ್ಲಿ ವಸ್ತುಗಳು ದ್ರವ್ಯರಾಶಿ ಯನ್ನು ಹೊಂದಿವೆ ಮತ್ತು  ಭೌತಶಾಸ್ತ್ರದ ಎಲ್ಲ ನಿಯಮಗಳು ಅನ್ವಯಿಸುತ್ತವೆ.

ಎರಡನೆಯದಾಗಿ ನಮ್ಮ ಭೌತಿಕ ಜಗತ್ತಿನಲ್ಲಿ  ಡಿಜಿಟಲ್ ಉಪಕರಣಗಳು ಮತ್ತು ಮಾಹಿತಿ  ತಂತ್ರಜ್ಞಾನದ ಪ್ರವೇಶದಿಂದಾಗಿ ಗೋಚರಿಸುವ ವರ್ಧಿತ ವಾಸ್ತವಿಕತೆ (Augmented Reality) ಇಲ್ಲಿ ಕಂಪ್ಯೂಟರ್-ರಚಿತವಾದ ಉಪಕರಣಗಳಿಂದ/ಪ್ರೋಗ್ರಾಮ್’ಗಳಿಂದ, ವಾಸ್ತವಿಕತೆಯನ್ನು    ಅರ್ಥಪೂರ್ಣವಾಗಿಸಿ ಪ್ರಸ್ತುತಪಡಿಸಲಾಗುತ್ತದೆ. ಆದಾಗ್ಯೂ ಇಲ್ಲಿ ನಾವು ಇಂದ್ರೀಯಗಳ/ಸಂವೇದನೆಗಳ ಸಹಾಯದಿಂದ ಭೌತಿಕ ಜಗತ್ತಿನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ, ಎ.ಆರ್‌ನ್ನು, ಡಿಜಿಟಲ್ ಸಾಧನಗಳನ್ನು ನೈಜ ಜಗತ್ತಿನಲ್ಲಿ ಮಿಶ್ರಣ ಮಾಡಲು ಮೊಬೈಲ್ ಅಪ್ಲಿಕೇಶನ್‌ಗಳ ರೂಪದಲ್ಲೂ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಮಾಹಿತಿ ವಿಶಿಷ್ಟವಾದ ಸಾಧನಗಳಾದ ವಿವಿಧಬಗೆಯ ಕನ್ನಡಕ/ಗಾಗಲ್/ಪ್ರೊಜೆಕ್ಷನ್/ಸ್ಕ್ರೀನ್‌ಗಳ ಮುಖಾಂತರ ತಲುಪುತ್ತದೆ. ವರ್ಧಿತ ವಾಸ್ತವಿಕತೆ (ಎ.ಆರ್.) ಡಿಜಿಟಲ್ ಚಿತ್ರಗಳು, ಗ್ರಾಫಿಕ್‌ಸ್ ಅಥವಾ ಸಂವೇದನೆಗಳಂತಹ ವರ್ಚುವಲ್ ಅಂಶಗಳನ್ನು ಸೇರಿಸುವ ಮೂಲಕ ನೈಜ ಪ್ರಪಂಚದ ಅನುಭವಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಎ.ಆರ್. ತಂತ್ರಜ್ಞಾನವನ್ನು  ಪ್ರಸಾರದಲ್ಲಿ, ವಿಶೇಷವಾಗಿ ಐ.ಪಿ.ಎಲ್.ನಲ್ಲಿ ಟಿ.ವಿ. ಪರದೆಯ ಮೇಲೆ OVERLAYS ರೂಪದಲ್ಲಿ ನಾವು ನೋಡುವ  ಸ್ಕೋರ್ ಬೋರ್ಡನ್ನು, ಮತ್ತು ಮೊಬೈಲ್ ಸಾಧನಗಳಲ್ಲಿ 3ಈ ಇ-ಮೇಲ್, ಫೋಟೋಗಳು ಅಥವಾ ಪಠ್ಯ ಸಂದೇಶಗಳನ್ನು ಪಾಪಪ್ ಮಾಡಲು ಬಳಸಲಾಗುತ್ತದೆ. ಜಿ.ಪಿ.ಎಸ್‌ನಲ್ಲಿ ಎರಡು ಸ್ಥಳಗಳ ನಿರ್ದಿಷ್ಟ ಅಂತರವನ್ನು ಮೊಬೈಲ್ ಕ್ಯಾಮೆರಾದ ಸಹಾಯದಿಂದ ಅಳೆದು ವಾಸ್ತವಿಕ ಚಿತ್ರಣ ನೀಡಲು ಎ.ಆರ್‌ನ್ನು ಉಪಯೋಗಿಸಲಾಗುತ್ತದೆ.

ಇನ್ನು ಅತ್ಯಂತ ಕೌತುಕ ಮತ್ತು ಕುತೂಹಲ ಹುಟ್ಟಿಸುವ ವಾಸ್ತವಿಕತೆ, ಮಿಥ್ಯವಾಸ್ತವ ಅಥವಾ ವರ್ಚುವಲ್  ರಿಯಾಲಿಟಿ(ವಿ.ಆರ್).  ನಮ್ಮ ಒಂದು ಅಥವಾ ಅಧಿಕ ಮೂಲಭೂತ ಸಂವೇದನೆಯನ್ನುಂಟು ಮಾಡುವ  ಜ್ಞಾನೇಂದ್ರಿಯಗಳನ್ನು  ಡಿಜಿಟಲ್ ಅಥವಾ ಕೃತ್ರಿಮ ಜಗತ್ತು ಆಕ್ರಮಿಸಿಕೊಳ್ಳುತ್ತದೆ. ವರ್ಚುವಲ್ ರಿಯಾಲಿಟಿ ಕೃತಕ, ಕಂಪ್ಯೂಟರ್- ಕೋಡ್‌ಗಳಿಂದ ರಚಿತವಾದ ಸಿಮ್ಯುಲೇಶನ್ ಅಥವಾ ನೈಜ ಜೀವನದ ಪರಿಸರ/ಪರಿಸ್ಥಿತಿಯ ಮರು ಸೃಷ್ಟಿ. ಇಲ್ಲಿ ದೃಷ್ಟಿ ಮತ್ತು  ಶ್ರವಣೇಂದ್ರಿಯಗಳನ್ನು ಉತ್ತೇಜಿಸುವ ಮೂಲಕ ಕೃತಕ ವಾಸ್ತವತೆಯನ್ನು ಬಳಕೆದಾರರು ಅನುಭವಿಸುತ್ತಾರೆ. ಬಹುತೇಕವಾಗಿ ಮಿಥ್ಯಾವಾಸ್ತವದ ಅರಿವು ಮೂಡಿ ಪರಕಾಯ ಪ್ರವೇಶಮಾಡುವದು  ಶಿರ ಆರೋಹಿತ ನಿಯಂತ್ರಕಗಳ (ಹೆಡ್ ಮೌಂಟೆಡ್ ಡಿಸ್ಪ್ಲೆ) ಮೂಲಕ!   ಭೌತಿಕ ಜಗತ್ತಿನ ನೈಜ ನೋಟವು ಗೋಚರಿಸದೇ ನಾವು ಭ್ರಮಾ ಲೋಕವನ್ನು ಪ್ರವೇಶಿಸಿಬಿಟ್ಟಿರುತ್ತೇವೆ. ಫೇಸ್‌ಬುಕ್‌ನ ಓಕ್ಯುಲಸ್, ಮೈಕ್ರೋಸಾಫ್‌ಟ್ನ ಹೊಲೊಲೆನ್‌ಸ್ ತಂತ್ರಜ್ಞಾನ ಹೊಂದಿದ ಹೆಡ್ಸೆಟ್ ಧರಿಸುವುದರ ಮೂಲಕ 360 ಡಿಗ್ರಿ  ಕೋನದ ವಿಡಿಯೋ ಮತ್ತು ಗೇಮ್‌ಗಳನ್ನು ಸವಿಯಬಹುದು. ಅಭ್ಯಾಸಕ್ಕೆಂದು ನಿರ್ಮಿಸಿದ ವಾಸ್ತವಿಕ ಪರಿಸ್ಥಿತಿಯನ್ನು ಸೃಷ್ಟಿಸುವ ಪೈಲಟ್‌ಗಳ ತರಬೇತಿಯ ಸಿಮ್ಯುಲೇಟರ್‌ಗಳು ವಿ.ಆರ್ ತಂತ್ರಜ್ಞಾನದ ಕೊಡುಗೆ.

ವರ್ಧಿತ ವಾಸ್ತವಿಕತೆ (ಎ.ಆರ್) ಮತ್ತು ಮಿಥ್ಯಾವಾಸ್ತವಿಕತೆ (ವಿ.ಆರ್) ಪರಸ್ಪರ ವಿಲೋಮ ಪ್ರತಿಫಲನಗಳಾಗಿವೆ. ವರ್ಚುವಲ್ ರಿಯಾಲಿಟಿ ವಾಸ್ತವಿಕ ವ್ಯವಸ್ಥೆಯ  ಮರುಸೃಷ್ಟಿಯಾದರೆ ಆಗ್ಯುಮೆಂಟೆಡ್ ರಿಯಾಲಿಟಿ ವಾಸ್ತವಿಕ ಪ್ರಪಂಚಕ್ಕೆ  ವರ್ಚುವಲ್ ಅಂಶಗಳ ಮೇಲ್ಪದರಗಳನ್ನು (OVERLAYS) ಒದಗಿಸಿ ನೈಜತೆಯನ್ನು ವೃದ್ಧಿಸುತ್ತದೆ. ಎ.ಆರ್. ಮತ್ತು ವಿ.ಆರ್. ಎರಡೂ ಬಳಕೆದಾರರ ಅನುಭವವನ್ನು ವೃದ್ಧಿಸುತ್ತವೆ.  ಕೆಲ ದಶಕಗಳ ಹಿಂದೆ ಕೇವಲ ವೈಜ್ಞಾನಿಕ ಕಾದಂಬರಿಗಳ ಕಲ್ಪನೆಯಾಗಿದ್ದ ಈ ತಂತ್ರಜ್ಞಾನಗಳು ಈಗ ತಾಂತ್ರಿಕತೆ ಉತ್ಸುಕ ಯುವಜನತೆಯ ಮನರಂಜನೆಯ ಬಹುಬೇಡಿಕೆಯ ಸಾಧನಗಳಾಗಿವೆ.   ಇವುಗಳಿಗೆ ರಿಮೋಟ್ ಶಸ್ತ್ರಚಿಕಿತ್ಸೆಯನ್ನು ಸಾಕಾರಗೊಳಿಸಿ  ವೈದ್ಯಕೀಯ ಕ್ಷೇತ್ರದ ನಕಾಶೆಯನ್ನೇ ಬದಲಿಸುವ ಸಾಮರ್ಥ್ಯವಿದೆಯೆಂದು ಹೇಳಲಾಗುತ್ತಿದೆ! ಈಗಾಗಲೇ ಪೋಸ್‌ಟ್ ಟ್ರಾಮಾಟಿಕ್ ಸ್ಟ್ರೆಸ್  (ಪಿಟಿಎಸ್ಡಿ) ನಂತಹ ಮಾನಸಿಕ ಸ್ಥಿತಿಗಳನ್ನು ಗುಣಪಡಿಸಲು ಎ.ಆರ್. ಮತ್ತು ವಿ.ಆರ್. ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಎ.ಆರ್. ಮತ್ತು ವಿ.ಆರ್‌ಗಳ ಸಮ್ಮಿಳಿತ ತಂತ್ರಜ್ನಾನವನ್ನು ಉಪಯೋಗಿಸಿ ಬಳಕೆದಾರರ ಅನುಭವಕ್ಕೆ ಇನ್ನಷ್ಟು ವಾಸ್ತವಿಕತೆಯ ಮೆರಗು ನೀಡಲು ಬಳಸಲಾಗುತ್ತದೆ. ವರ್ಚುವಲ್ ರಿಯಾಲಿಟಿ ಮತ್ತು ಆಗ್ಯುಮೆಂಟೆಡ್ ರಿಯಾಲಿಟಿಗಳು ಜನರನ್ನು ಉತ್ತೇಜಿಸಿ, ಮನರಂಜನೆಯ ಪರಾಕಾಷ್ಟೆಯಲ್ಲಿ ಮುಳುಗಿಸಿ ಡಿಜಿಟಲ್ ಸಾಧನಗಳು ಮತ್ತು ನೈಜ ಪ್ರಪಂಚದ ನಡುವೆ ಹೊಸ ಆಯಾಮವನ್ನು ಸೃಷ್ಟಿಸಿವೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನ ನಿಸ್ಸಂದೇಹವಾಗಿ ಜಗತ್ತಿನ ಮಿಥ್ಯಾಸತ್ಯತೆಗಳ   ಭಂಡಾರವನ್ನು   ತೆರೆದು ಜನತೆಗೆ ಹೊಸ ಅನುಭವ ನೀಡುವಲ್ಲಿ ಯಶಸ್ವಿಯಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close