About Us Advertise with us Be a Reporter E-Paper

ಅಂಕಣಗಳು

ಗುಂಪುಹಲ್ಲೆ; ಸಮೂಹ ಸನ್ನಿಯಿಂದಾಗುವ ಹೊಸ ಅನಾಹುತ

ಕಳಕಳಿ: ಅಕ್ಷತಾ ರಾವ್

ಸಾಮಾಜಿಕ ಜಾಲತಾಣ ಒಂದು ಶಕ್ತಿಯುತ ಮಾಧ್ಯಮ ಅನ್ನೋದು ಸರಿ. ಇಲ್ಲಿ ಹರಿದಾಡುವ ಮೆಸೇಜ್‌ಗಳು, ವೀಡಿಯೋಗಳು ಕೆಲವೊಮ್ಮೆ ಸಮಾಜುುಖಿ ಆಗಿದ್ದರೆ, ಬಹಳಷ್ಟು ಬಾರಿ ಸಮಾಜದ ಸ್ವಾಸ್ಥ್ಯ ಹದಗೆಡಿಸಿರುವುದೂ ಉಂಟು. ಜನರ ಬುದ್ಧಿ ಭಾವನೆಗಳ ಅಡಿಯಾಳಾಗುವುದರಿಂದ ಊಹೆಗೂ ಮೀರಿದ ಅವಘಡಗಳೂ ಸಂಭವಿಸಿವೆ. ಆ ಸಾಲಿಗೆ ಹೊಸ ಸೇರ್ಪಡೆ ಗುಂಪು  ಮತ್ತದರಿಂದ ಆಗುತ್ತಿರುವ ಅಮಾಯಕರ ಅಮಾನುಷ ಹತ್ಯೆ!

ಹೌದು, ದೇಶದ ಉದ್ದಗಲಕ್ಕೂ ಈಗ ಮಕ್ಕಳ ಕಳ್ಳರ ಮೇನಿಯಾ ತನ್ನ ಕಬಂಧಬಾಹುಗಳನ್ನು ಚಾಚಿದೆ. ಇದೆಲ್ಲ ಹೇಗಾಯಿತು? ಇದರ ಮೂಲ ಕಾರಣ ಏನು? ರೂಪಾಂತರ ಹೇಗೆ? ಈ ರೂಪಾಂತರದಿಂದ ಆಗುತ್ತಿರುವ ಅನಾಹುತಗಳ ಸ್ವರೂಪ ಏನು – ಇವೇ ಮೊದಲಾದ ಅಂಗಳ ಬಗ್ಗೆ ಸಂಕ್ಷಿಪ್ತವಾಗಿ ಪರಾಮರ್ಶಿಸುವುದಾದರೆ, ಕೆಲದಿನಗಳ ಹಿಂದೆ ನೆರೆಯ ಪಾಕಿಸ್ತಾನದಲ್ಲಿ ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರವೊಂನ್ನು ನಿರ್ಮಿಸಲಾಗಿತ್ತು. ಬೈಕ್‌ನಲ್ಲಿ ಬರುವ  ಯುವಕರು ರಸ್ತೆಬದಿಯಲ್ಲಿ ಆಡುತ್ತಿದ್ದ ಹುಡುಗನನ್ನು ಅಪಹರಿಸಿಕೊಂಡು ಹೋಗುವ ದೃಶ್ಯ ಇದರಲ್ಲಿದೆ. ಜತೆಗೆ ಮಕ್ಕಳನ್ನು ವಾಪಸ್ಸು ಕರೆತಂದು ಬಿಟ್ಟು, ಲಾಹೋರ್‌ನಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ಎಚ್ಚರಿಕೆ ಸಂದೇಶವನ್ನೂ ಅಳವಡಿಸಲಾಗಿದೆ. ನಿಜಕ್ಕೂ ಇದೊಂದು ಸದುದ್ದೇಶದ ಚಿತ್ರ. ಆದರೆ ಕೆಲವು ವಿಕೃತರು ಹಿನ್ನೆಲೆ ಧ್ವನಿಯನ್ನು ತಿರುಚಿ ಈ ಚಿತ್ರದ ತುಣುಕನ್ನು ಭಾರತಾದ್ಯಂತ ಹರಿಯಬಿಟ್ಟರು. ಭಾರತದಲ್ಲಿ ಮಕ್ಕಳ ಕಳ್ಳರು ಸಕ್ರಿಯರಾಗಿದ್ದಾರೆ. ಅಂಥದ್ದೊಂದು ನೈಜ ಪ್ರಕರಣ ಇದಾಗಿದೆ ಎಂಬ ಧ್ವನಿ ಅಳವಡಿಸಿ ಕೆಲವು ಸಾಮಾಜಿಕ ಜಾಲತಾಣಿಗರು  ಫೇಸ್‌ಬುಕ್, ಟ್ವಿಟರ್‌ನಲ್ಲಿ ಹರಿಯಬಿಟ್ಟರು.

ಗುಂಪು ಹಲ್ಲೆ ದುರಂತದ ಪರಾಕಾಷ್ಠೆ ಎಷ್ಟಿದೆಯೆಂದರೆ ಪ್ರತೀ ಬಾರಿಯೂ ಗುಂಪುಹಲ್ಲೆಗೊಳಗಾದವರು, ಹಲ್ಲೆಗೊಳಗಾಗಿ ಸತ್ತವರು ನಿರಪರಾಧಿಗಳು ಎಂದು ಸಾಬೀತಾಗುತ್ತಿದ್ದರೂ ಮತ್ತೆ, ಮತ್ತೆ ಅಂಥದ್ದೆ ಪ್ರಕರಣಗಳು ಮರುಕಳಿಸಿದ್ದು. ಸೋಂಕುರೋಗದಂತೆ ಜನರ ಚಿತ್ತಭ್ರಮಣೆ ಮಾಡಿರುವ ಈ ಮೇನಿಯಾಕ್ಕೆ ಕಾರಣವಾದರೂ ಏನು? ಅಮಾಯಕರು ಸಾಯುತ್ತಿದ್ದಾರೆ ಎಂದು ಗೊತ್ತಿದ್ದರೂ ಈ ಹಲ್ಲೆಗಳೇಕೆ ನಿಲ್ಲುತ್ತಿಲ್ಲ, ಜನರ ಅರಿವನ್ನು ಮಸುಕು ಮಾಡಿರುವ ಮನೋವೈಕಲ್ಯವಾದರೂ ಏನು?

ಸಮಾಜದಲ್ಲಿ ನಕಾರಾತ್ಮಕ ಸಂಗತಿಗಳು, ವದಂತಿಗಳಿಗೆ ಸಿಗುವ ಪ್ರಚಾರ, ಅವು  ನಂಬುಗೆ ಸಕಾರಾತ್ಮಕ ಸಂಗತಿಗಳಿಗೆ ಸಿಗುವುದಿಲ್ಲ. ಮಕ್ಕಳ ಬಗ್ಗೆ ಹೆತ್ತವರಿಗೆ ಕಾಳಜಿ, ಕಕ್ಕುಲತೆ, ಭದ್ರತೆಭಾವ ಸದಾ ಇರುತ್ತದೆ. ಹೀಗಾಗಿ ಮಕ್ಕಳ ಕಳ್ಳರ ಬಗೆಗಿನ ವದಂತಿಗಳನ್ನುಸುಲಭವಾಗಿ ನಂಬುತ್ತಾರೆ. ಟಿವಿಯಲ್ಲೋ, ಸಾಮಾಜಿಕ ಜಾಲಾತಣಗಳಲ್ಲೋ ಮಕ್ಕಳ ಕಳ್ಳರ ಬಗ್ಗೆ ಸುದ್ದಿ ಹಬ್ಬಿದಾಗ ಸಹಜವಾಗಿಯೇ ಹೆದರುತ್ತಾರೆ. ಅವರ ಭೀತಿ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಅವರ ಸತ್ಯಾನ್ವೇಷಣೆ ಶಕ್ತಿಯನ್ನೇ ಆಪೋಶನ ತೆಗೆದುಕೊಂಡಿರುತ್ತದೆ. ಹೀಗಾಗಿ ಕ್ಷಣಮಾತ್ರದಲ್ಲಿ ಇಂಥ ಸುದ್ದಿ ಸಮೂಹ ಸನ್ನಿ ರೀತಿಯಲ್ಲಿ ಸಾಮೂಹಿಕ ಅಭದ್ರತೆ ಮೂಡಿಸಿಬಿಡುತ್ತದೆ.  ‘ಮಾಸ್ ಮೆಂಟಾಲಿಟಿ’ ಅಂತಲೂ ಕರೆಯುತ್ತಾರೆ.

ಹೀಗಾಗಿ ಮಕ್ಕಳ ಕಳ್ಳರ ವೀಡಿಯೋಗಳು ಸತ್ಯಾಲೋಚನೆ ಪರಿಧಿಯಿಂದಾಚೆಗೆ ದಾಂಗುಡಿ ಇಟ್ಟು ಅನಗತ್ಯ ಅವಘಡಗಳನ್ನು ಸೃಷ್ಟಿಸುತ್ತದೆ. ಹೈದರಾಬಾದ್‌ನಲ್ಲಿ ಪ್ರೀತಿಯಿಂದ ಮಕ್ಕಳಿಗೆ ಚಾಕ್‌ಲೆಟ್ ಕೊಟ್ಟ ಯುವಕ ಕಳ್ಳನಾಗಿ ಕಂಡು ಕ್ಷಣಮಾತ್ರದಲ್ಲಿ ಗುಂಪುಹಲ್ಲೆಗೆ ಬಲಿಯಾಗುತ್ತಾನೆ. ಆತನ ಪ್ರೀತಿ, ಅಮಾಯಕತೆ, ಗೋಗರೆತ ಯಾವುದೂ ಜನರ ಮನಸ್ಸಿನಾಳಕ್ಕೆ ಇಳಿಯುವುದೇ ಇಲ್ಲ. ಇದು ಹೈದರಬಾದ್‌ನ ಒಂದು ಪ್ರಕರಣದ ಕತೆಯಲ್ಲ. ಮಕ್ಕಳ ಕಳ್ಳರೆಂದು ಗುಂಪು ಹಲ್ಲೆಗೆ ಹತ್ಯೆಯಾದ ಎಲ್ಲರ ಕುಟುಂಬದ ವ್ಯಥೆಯೂ ಇದೇ  ಪ್ರತಿ ಜೀವ ಹೋದಾಗಲೂ ಸರಕಾರ, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಅರಿವು ಮೂಡಿಸಲು ಪ್ರಯತ್ನಿಸುತ್ತಲೆ ಇವೆ. ಆದರೆ ಅದು ಮತ್ತಷ್ಟು ವ್ಯಾಪಕವಾಗಬೇಕಿದೆ. ವಿಡಿಯೋಗಳ ಸಾಚಾತನದ ಬಗ್ಗೆ ವಿಳಂಬವಿಲ್ಲದೆ ಕ್ಷಿಪ್ರ ಪ್ರಚಾರ ಮಾಡಬೇಕು. ವಿಡಿಯೋ ತಿದ್ದಲಾಗಿದೆ, ಇದನ್ನು ನಂಬಬೇಡಿ ಎಂದು ಮಾಧ್ಯಮ ಹಾಗೂ ಜಾಲತಾಣಗಳ ಮೂಲಕ ಸಾರಬೇಕು. ಮನೋಶಾಸ್ತ್ರಜ್ಞ ಡಾ. ಸಿ.ಆರ್. ಚಂದ್ರಶೇಖರ್ ಕೂಡ ಇದನ್ನೇ ಹೇಳುತ್ತಾರೆ. ಜನರು ಸಾಮೂಹಿಕ ಸನ್ನಿಗೆ ಒಳಗಾಗುವುದೇ ಮೂಲಕಾರಣ. ಸತ್ಯಾಸತ್ಯತೆ ಯೋಚಿಸದೇ ಆಕ್ರಮಣ  ಮನೋಭಾವದ ಹಿಂದೆ ಅವರು ಬದುಕುತ್ತಿರುವ, ಬೆಳೆದು ಬಂದ ವಾತಾವರಣ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಇಲ್ಲಿ ಪೊಲೀಸರು ಮತ್ತು ಮಾಧ್ಯಮದವರ ಪಾತ್ರ ಹಿರಿದು. ಜನರ ಮನಸ್ಸಿಗೆ ನಾಟುವಂತೆ ಸುದ್ದಿ ನೈಜತೆಯನ್ನು ಪ್ರಚಾರ ಮಾಡುವುದೊಂದೇ ಪರಿಹಾರ ಎಂಬುದು ಅವರ ಅಭಿಮತ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಬಿತ್ತುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಖಾತೆ ಹೊತ್ತಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿರುವ ಮಾತು ಕೂಡ ಕೃತಿಗಿಳಿಯಬೇಕು.

ಇಲ್ಲಿ  ಮುಖ್ಯವಾದದ್ದು ಜನ ಸ್ವಯಂ ಅರಿವಿಗೆ ತಮ್ಮನ್ನು ತೆರೆದುಕೊಳ್ಳುವುದು. ಯಾರೋ ಏನೋ ಹೇಳಿದರು ಎಂದ ಮಾತ್ರಕ್ಕೆ ನಂಬಲು ಹೋಗಬಾರದು. ಕಣ್ಣಿಗೆ ಕಂಡದನ್ನು ಮತ್ತೆ ಮತ್ತೆ ಪರಾಮರ್ಶಿಸಿ ನೋಡಿಕೊಳ್ಳಬೇಕು. ಯಾವುದಾದರೂ ವಿಡಿಯೋ ಕಂಡಲ್ಲಿ ಅದನ್ನು ಬೇರೆಯವರಿಗೆ ಶೇರ್ ಮಾಡುವ ಬದಲು ಅದರ ನೈಜತೆ ಪರಾಮರ್ಶಿಸಬೇಕು. ತಾವೂ ಅನಗತ್ಯ ಭೀತಿಗೆ ಒಳಗಾಗಬಾರದು, ಮಕ್ಕಳಲ್ಲೂ ಅದನ್ನು ಉಂಟು ಮಾಡಬಾರದು. ಅನುಮಾನ ಬಂದರೆ, ಅನುಮಾನ ಬಲವಾದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳಬಾರದು.  ಅನಿವಾರ್ಯ ಎನಿಸಿದರೆ, ಪೊಲೀಸರು ಬರುವುದರೊಳಗೆ ಅನಾಹುತ ನಡೆದು ಹೋಗುತ್ತದೆ ಎಂದು ದೃಢವಾಗಿ ಮನವರಿಕೆಯಾದರೆ ಮಾತ್ರ ಶಂಕಾಸ್ಪದ ವ್ಯಕ್ತಿಯನ್ನು ಸುಪರ್ದಿಯಲ್ಲಿಟ್ಟುಕೊಳ್ಳಬೇಕೆ ಹೊರತು ಯಾವುದೇ ಕಾರಣಕ್ಕೂ ಹಲ್ಲೆ, ಹಿಂಸೆ ಮಾಡಬಾರದು.

Tags

Related Articles

Leave a Reply

Your email address will not be published. Required fields are marked *

Language
Close