About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ರಫೇಲ್‌ ಡೀಲ್‌ ಮಾಡುವ ವೇಳೆ ಎಚ್‌ಎಎಲ್‌ಅನ್ನು ಕಡೆಗಾಣಿಸಿದ್ದ ಯುಪಿಎ ಸರಕಾರ: ರಕ್ಷಣಾ ಸಚಿವೆ

ದೆಹಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿಯಲ್ಲಿ ಎಚ್‌ಎಎಲ್‌ಅನ್ನು ಗಣನಗೆ ತೆಗೆದುಕೊಳ್ಳದ ವಿಚಾರವಾಗಿ ಹಿಂದಿನ ಯುಪಿಎ ಸರಕಾರದ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವಾಗ್ದಾಳಿ ನಡೆಸಿದ್ದಾರೆ.

“ಯುಪಿಎ ಸರಕಾರದ ಅವಧಿ ವೇಳೆ ರಫೇಲ್ ಯುದ್ಧ ವಿಮಾನಗಳ ಉತ್ಪಾದನೆ ಕುರಿತಂತೆ ಎಚ್‌ಎಎಲ್‌ ಹಾಗು ಡಸಾಲ್ಟ್‌ ನಡುವೆ ಒಮ್ಮತ ಮೂಡದ ಕಾರಣ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಅಲ್ಲದೇ ಕಾಂಗ್ರೆಸ್‌ ನೇತೃತ್ವಚದ ಯುಪಿಎ ಸರಕಾರ 2013ರಲ್ಲಿ ಎಚ್‌ಎಎಲ್‌ಅನ್ನು ಬೆಂಬಲಿಸಲಿಲ್ಲ” ಎಂದು ಸೀತಾರಾಮನ್‌ ತಿಳಿದ್ದಾರೆ.

ರಫೇಲ್‌ ಡೀಲ್‌ ಮೂಲಕ ಎಚ್‌ಎಎಲ್‌ ಇಮೇಜ್‌ಗೆ ಧಕ್ಕೆಯಾಗಿದೆ ಎಂದ ಕಾಂಗ್ರೆಸ್‌ ನಾಯಕ ಎ ಕೆ ಆಂಟನಿ ಮಾತಿಗೆ ಪ್ರತಿಕ್ರಿಯಿಸಿದ ಸೀತಾರಾಮನ್‌, “ಡೀಲ್‌ಅನ್ನು ಯುಪಿಎ ಕಾಲದಲ್ಲಿ ಮಾಡಿಕೊಂಡಿರಲಿಲ್ಲ. ಯುಪಿಎ ಕಾಲದಲ್ಲಿ ಆದ ಇನ್ನೊಂದು ವಿಚಾರವೆಂದರೆ ಉತ್ಪಾದನೆ ವಿಚಾರವಾಗಿ ಎಚ್‌ಎಎಲ್ ಹಾಗು ರಫೇಲ್‌ ನಡುವೆ ಸರಿಯಾದ ಹೊಂದಾಣಿಕೆ ಆಗಿಬರಲಿಲ್ಲಇದರರ್ಥ, ಎಚ್‌ಎಎಲ್‌ ಹಾಗು ಡಸಾಲ್ಟ್‌ ನಡುವೆ ಹೊಂದಾಣಿಕೆ ಮೂಡಿಬರಲಿಲ್ಲ. ಇದರಿಂದ ತಿಳಿಯುವುದಿಲ್ಲವೇ ಯಾರ ಕಾಲದಲ್ಲಿ ಎಚ್‌ಎಎಲ್‌ಅನ್ನು ಕಡೆಗಾಣಿಸಲಾಗಿತ್ತು ಎಂದು? ಯಾರ ಸರಕಾರದಲ್ಲಿ ಇದಾಯಿತು?” ಎಂದು ಸೀತಾರಾಮನ್‌ ಮರುಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಸರಕಾರಗಳ ನಿರ್ಲಕ್ಷ್ಯದ ಕಾರಣ ಯುದ್ಧ ವಿಮಾನಗಳ ಉತ್ಪಾದನೆ ಮಾಡಲು ಎಚ್‌ಎಎಲ್‌ಗೆ ಸಾಮರ್ಥ್ಯವಿಲ್ಲದಂತಾಗಿದೆ ಎಂದು ಈ ಮುನ್ನ ಸೀತಾರಾಮನ್‌ ಆಪಾದನೆ ಮಾಡಿದ್ದರು. ಸೀತಾರಾಮನ್ ಮಾತಿನಿಂದ ಎಚ್‌ಎಎಲ್‌ನ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ ಎಂದು ಆಂಟನಿ ಆಪಾದಿಸಿದ್ದರು.

ಯುಪಿಎ ಸರಕಾರ ಮಾಡಿಕೊಂಡಿದ್ದ ಡೀಲ್‌ಗಿಂತ 9% ನಷ್ಟು ಕಡಿಮೆ ಬೆಲೆಯಲ್ಲಿ ಎನ್‌ಡಿಎ ಸರಕಾರ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿ ಮಾಡುತ್ತಿದೆ ಎಂದ ಸೀತಾರಾಮನ್‌, ಬಹಳ ಎಚ್ಚರಿಕೆಯಿಂದ ಈ ವಿಚಾರವಾಗಿ ಅಧ್ಯಯನ ಮಾಡಿದ ನಂತರವಷ್ಟೇ ಡೀಲ್‌ಗೆ ಸರಕಾರ ಮುಂದಾಗಿದೆ ಎಂದು ಸೀತಾರಾಮನ್‌ ತಿಳಿಸಿದ್ದಾರೆ.

“ವಾಯುಪಡೆ ಬಳಿ ಕನಿಷ್ಠ 42 ಸ್ಕ್ವಾಡರ್ನ್‌ಗಳು ಇರಬೇಕು. ಆದರೆ ದಿನೇ ದಿನೇ ಅದರ ಬಲ ಕುಗ್ಗುತ್ತಾ ಬರುತ್ತಿದೆ. ಪರಿಸ್ಥಿತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿ ಮಾಡುವುದು ನಮ್ಮ ಕರ್ತವ್ಯವಾಗಿದೆ” ಎಂದು ಸೀತಾರಾಮನ್‌ ತಿಳಿಸಿದ್ದಾರೆ.

ಇದೇ ಸಂದರ್ಭ ರಷ್ಯಾದಿಂದ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಮಾಡುವ ವಿಚಾರವಾಗಿ ಮಾತನಾಡಿದ ಸೀತಾರಾಮನ್‌, “ರಷ್ಯಾದೊಂದಿಗೆ ಕ್ಷಿಪಣಿ ಖರೀದಿ ಒಪ್ಪಂದದ ಅಂತಿಮ ಹಂತಕ್ಕೆ ಬಂದಿದ್ದೇವೆ. ಆದರೆ ಈ ವಿಚಾರವಾಗಿ ಪುಟಿನ್ ಭಾರತ ಭೇಟಿ ಸಂದರ್ಭ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಕುರಿತು ಏನೂ ಹೇಳಲಾರೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ನವಜೋತ್ ಸಿಧು ಪಾಕಿಸ್ತಾನಕ್ಕೆ ತೆರಳಿದ್ದ ಕುರಿತು ಪ್ರತಿಕ್ರಿಯೆ ನೀಡಿದ ಸೀತಾರಾಮನ್‌, “ಖಂಡಿತವಾಗಿಯೂ ಸಿಧು ನಡೆಯು ದೇಶದ ಜನತೆ ಹಾಗು ಸೈನಿಕರ ಮೇಲೆ ಪ್ರಭಾವ ಬೀರಲಿದೆ. ಸಿಧು ನಡೆಯಿಂದ ನಮ್ಮ ಸೈನಿಕರ ಆತ್ಮಸ್ಥೈರ್ಯಕ್ಕೆ ಪೆಟ್ಟು ಬೀಳಲಿದೆ ಎಂಬ ಸಾರ್ವಜನಿಕ ಅಭಿಪ್ರಾಯವೂ ಇದೆ. ಪಾಕ್‌ಗೆ ತೆರಳಿದ ವಿಚಾರಕ್ಕಿಂತ ಪಾಕ್‌ ಸೇನಾ ಮುಖ್ಯಸ್ಥರನ್ನು ಅಪ್ಪಿಕೊಳ್ಳುವ ವಿಚಾರದ ಕುರಿತು ನಾನು ಮಾತನಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆ ಕುರಿತಂತೆ ಮಾತನಾಡಿದ ಸೀತಾರಾಮನ್‌, “ಇದೊಂದು ಉತ್ತಮ ಪೈಪೋಟಿಯಾಗಲಿದ್ದು ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ” ಎಂದು ತಿಳಿಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close