About Us Advertise with us Be a Reporter E-Paper

ಅಂಕಣಗಳು

ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು ಬೇಡ ಅಂತಾರೆ ಕಾಶಂಪುರ್

ಬಂಡೆಪ್ಪ ಕಾಶಂಪುರ್, ಸಹಕಾರ ಸಚಿವ

-ಸಿದ್ದು ಚಿಕ್ಕಬಳ್ಳೇಕೆರೆ ಬೆಂಗಳೂರು

ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಹೆಚ್ಚಾಗುತ್ತಿದೆಯಲ್ಲಾ ?

ಅಖಂಡ ಕರ್ನಾಟಕ, ಸಮಗ್ರ ಕರ್ನಾಟಕವಿರಬೇಕು. ನೆಲ, ಜಲ, ಭಾಷೆ ವಿಷಯ ಬಂದಾಗ ಎಲ್ಲರೂ ಸೇರಿ  ಹೋರಾಟ ಮಾಡಬೇಕು. ನಾವು ಕಟ್ಟಕಡೆಯ ಬೀದರ್‌ನವರು. ಕೆಲವೆಡೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಆದರೂ ಸಮಗ್ರ ಕರ್ನಾಟಕಕ್ಕೆ ಬದ್ಧವಾಗಿರುತ್ತೇವೆ. ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುವುದು ಸರಿಯಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಮಸ್ಯೆಗಳ ಬಗ್ಗೆ ಚರ್ಚಿಸೋಣ ಬನ್ನಿ ಎಂದು ಹೇಳಿದ್ದಾರೆ. ತಾರತಮ್ಯವಿದ್ದರೆ ನಿವಾರಿಸುತ್ತೇನೆ, ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಅನುಕೂಲ ಮಾಡುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಾರೆ. ನಾವೆಲ್ಲಾ ಸಹೋದರರಂತೆ. ಸರಕಾರ ತಾರತಮ್ಯ ಮಾಡುವುದಿಲ್ಲ. ನಾವು ಆ ಭಾಗದವನು. ಆರೇಳು ಸಚಿವರು  ಭಾಗದವರಿದ್ದೇವೆ. ಹಿಂದೆ ಈ ಭಾಗದ ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದ್ದು, ಅಲ್ಲಿ ಅಧಿವೇಶನ ನಡೆಸಿದ್ದು ಕುಮಾರಸ್ವಾಮಿಯವರು. ಹಿಂದಿನ 60 ವರ್ಷದಲ್ಲಿ ಯಾರೂ ಮಾಡದ್ದನ್ನು ಕುಮಾರಸ್ವಾಮಿ ಮಾಡಿದ್ದಾರೆ. ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಆದ್ದರಿಂದ ಕೆಲವೆಡೆ ನೀರಾವರಿಯಿಂದ ಉತ್ತಮ ಬೆಳೆ ಬೆಳೆಯಲಾಗುತ್ತಿದೆ. 15-20 ವರ್ಷದ ಹಿಂದೆ ಏನೂ ಇರಲಿಲ್ಲ. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಚರ್ಚೆ ಮಾಡೋಣ ಬನ್ನಿ. ವಿಧಾನ ಮಂಡಲ ಅಧಿವೇಶನದಲ್ಲೂ  ಅವಕಾಶವಿದೆ.

ಆಗಸ್‌ಟ್ 2 ರಂದು ಕರೆ ನೀಡಿರುವ ಬಂದ್ ಬಗ್ಗೆ ಏನಂತೀರಿ ?

ನಮಗೆ ಕಾವೇರಿ-ಕೃಷ್ಣಾ ಎರಡೂ ಒಂದೇ. ಸಮಸ್ಯೆಗಳು ಉಂಟಾದಾಗ ಎಲ್ಲರೂ ಒಂದಾಗಿ ಹೋರಾಟ ನಡೆಸಿದ್ದೇವೆ. ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳೋಣ. ರಾಜ್ಯ ಸರಕಾರ ಉತ್ತರ ಕರ್ನಾಟಕವನ್ನು ಮರೆತಿಲ್ಲ. ಆ ಭಾಗದ ಜನರ ಜತೆ ನಾವಿದ್ದೇವೆ. ಮೊದಲ ಬಾರಿಗೆ ನಂಜುಂಡಪ್ಪ ವರದಿಯ ಅನುಷ್ಠಾನಕ್ಕೆ ಮುಂದಾಗಿದ್ದು ಕುಮಾರಸ್ವಾಮಿ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ  ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರಕಾರ ಸಾಥ್ ನೀಡಲಿದೆ.

ಸಂಪುಟ ವಿಸ್ತರಣೆ, ನಿಗಮ-ಮಂಡಳಿಗೆ ನೇಮಕ, ಜಿಲ್ಲಾ ಉಸ್ತುವಾರಿ ಸಚಿವರಿಲ್ಲದಿರುವುದು ಆಡಳಿತಕ್ಕೆ ಹಿನ್ನಡೆಯಾಗಿದೆ ಅನಿಸುತ್ತಿಲ್ಲವೇ?

ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಶೀಘ್ರ ಈ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಇಲಾಖೆಗಳ ಸಚಿವರು ಚುರುಕಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ.

ರೈತರ ಸಾಲಮನ್ನಾ ಮಾಡಿದ್ದರೂ ವಿರೋಧ ವ್ಯಕ್ತವಾಗುತ್ತಿದೆಯಲ್ಲಾ ?

ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ  ರೈತರು ಸಹಕಾರ ಸಂಘಗಳಲ್ಲಿ ಮಾಡಿದ್ದ 8165 ಕೋಟಿ ರುಪಾಯಿ ಮನ್ನಾ ಮಾಡಿದ್ದರು. ಇದರಲ್ಲಿ 5 ಸಾವಿರ ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಇದೀಗ 1 ಸಾವಿರ ಕೋಟಿ ರು. ಇತ್ತೀಚೆಗೆ ಬಿಡುಗಡೆ ಮಾಡಿದ್ದು ಇನ್ನುಳಿದ ಹಣವನ್ನೂ ಸಹಕಾರ ಸಂಘಗಳಿಗೆ ನೀಡಬೇಕಿದೆ. ಸಿಎಂ ಕುಮಾರಸ್ವಾಮಿ ಅವರೂ ಸಹ ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ 9448 ಕೋಟಿ ರು. ಸಾಲಮನ್ನಾ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಸೇರಿದಂತೆ ಒಟ್ಟಾರೆ  ಸಾವಿರ ಕೋಟಿ ರು. ಮನ್ನಾ ಮಾಡಿದಂತಾಗುತ್ತದೆ. ದೇಶದ ಯಾವ ರಾಜ್ಯದಲ್ಲೂ ಈ ಮಟ್ಟದಲ್ಲಿ ಸಾಲಮನ್ನಾ ಮಾಡಿಲ್ಲ. ಆದರೂ ಕೆಲವರು ಇದರಲ್ಲಿ ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಬಹಳಷ್ಟು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿರುವ ಮಹರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಸಾಲಮನ್ನಾ ಹಣದಲ್ಲಿ ಸಹಕಾರ ವಲಯಕ್ಕೆ ಇಲ್ಲಿಯವರೆಗೂ ಎಷ್ಟು ಹಣ ನೀಡಲಾಗಿದೆ ಎಂಬುದಕ್ಕೆ ಉತ್ತರ ನೀಡಲಿ.

ಸಾಲಮನ್ನಾ ನಿಯಮಾವಳಿ ಇನ್ನೂ ಅಂತಿಮವಾಗಿಲ್ಲವಲ್ಲಾ ?

ಹಲವು ಸಭೆಗಳನ್ನು  ವಾರದಲ್ಲಿ ನಿಯಮಾವಳಿ ಹೊರತರಲಾಗುವುದು. ಒಂದೇ ಹಂತದಲ್ಲಿ ಸಾಲಮನ್ನಾ ಮಾಡುವುದಿಲ್ಲ. ಇದನ್ನು ಸಿಎಂ ಸಹ ಈಗಾಗಲೇ ಹೇಳಿದ್ದಾರೆ. ನವೀಕರಣ ದಿನಾಂಕ ಹತ್ತಿರವಾಗುತ್ತಿರುವ ರೈತರ ಸಾಲವನ್ನು ಮನ್ನಾ ಮಾಡುತ್ತಾ ಹೋಗಲಾಗುತ್ತದೆ. ಋಣಮುಕ್ತ ಪತ್ರಗಳನ್ನೂ ರೈತರ ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.

ಖಾಸಗಿ ಲೇವಾದೇವಿದಾರರನ್ನು ನಿಯಂತ್ರಿಸುವ ವಿಷಯ ಎಲ್ಲಿಗೆ ಬಂತು ?

ಪಕ್ಕದ ಕೇರಳ ರಾಜ್ಯದಲ್ಲಿ ಖಾಸಗಿ ಲೇವಾದೇವಿದಾರರನ್ನು ನಿಯಂತ್ರಿಸಲು ವಿಧೇಯಕವನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಅಲ್ಲಿಗೆ ನಮ್ಮ ಅಧಿಕಾರಿಗಳನ್ನು ಕಳುಹಿಸಿ  ಸಂಗ್ರಹಿ ಸಲಾಗಿದೆ. ಅಧಿಕಾರಿಗಳು ವರದಿ ನೀಡಿದ ನಂತರ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈ ಕಾನೂನನ್ನು ನಮ್ಮಲ್ಲೂ ಜಾರಿಗೆ ತಂದರೆ ಹೆಚ್ಚು ಬಡ್ಡಿ ವಸೂಲು ಮಾಡುವುದನ್ನು ತಪ್ಪಿಸಬಹುದು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ವಿಷಯ ವಿವಾದವಾಗಿದೆಯಲ್ಲಾ?

ಸರಕಾರದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಈ ವಿಚಾರದಲ್ಲಿ ಸ್ಪಷ್ಟ  ನಿರ್ಧಾರ ಕೈಗೊಳ್ಳಲಿದ್ದಾರೆ. ಉಚಿತ ಬಸ್ ಪಾಸ್ ನೀಡಲು ತೊಂದರೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನು  ಜನರೂ ಅರ್ಥ ಮಾಡಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close