ಇದು ದೇವರ ಕತೆಯಲ್ಲ! ದೇವಸ್ಥಾನದ ಕತೆಯಲ್ಲ!

Posted In : ಕ್ಷಣಹೊತ್ತು ಅಣಿ ಮುತ್ತು

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಟ್ಟಲ್ಪಟ್ಟಿರುವ ಅತಿ ದೊಡ್ಡ ದೇವಸ್ಥಾನವೆಂದರೆ ಸ್ವಾಮಿನಾರಾಯಣ ಪಂಥದವರು ನವದೆಹಲಿಯಲ್ಲಿ ಕಟ್ಟಿರುವ ಅಕ್ಷರಧಾಮ ದೇವಾಲಯ! ನೂರು ಎಕರೆ ಜಾಗದಲ್ಲಿ, ಹನ್ನೊಂದು ಸಾವಿರ ನುರಿತ ಕೆಲಸಗಾರರು, ಶಿಲ್ಪಿಗಳು ಮತ್ತು ಕಲಾವಿದರು ಐದು ವರ್ಷ ಬಿಡುವಿಲ್ಲದೆ ದುಡಿದು ನಿರ್ಮಿಸಿದ ದೇವಾಲಯ. ಮೇಲುಸ್ತುವಾರಿ ಮಾಡಿದವರು ಪಂಥದ ಸ್ವಾಮಿಗಳು. ಅದನ್ನು ಕಟ್ಟುತ್ತಿರುವಾಗ ನಡೆದ ಒಂದು ಹೃದಯಸ್ಪರ್ಶಿ ಘಟನೆ ಹೀಗಿದೆ.

ಒಂದು ಮಧ್ಯಾಹ್ನ ಭೋಜನಾನಂತರ ಶಿಲ್ಪಿಯೊಬ್ಬರು ಸ್ವಾಮಿಗಳ ಬಳಿ ಬಂದು ನನಗೆ ಅರ್ಧ ದಿನ ರಜೆ ಬೇಕು. ಇಂದೇಕೋ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೈಯಲ್ಲಿನ ಸುತ್ತಿಗೆ-ಉಳಿಗಳು ನನ್ನ ಮಾತು ಕೇಳುತ್ತಿಲ್ಲ. ಒಂದೊಂದೂ ಒಂದೊಂದು ಕಡೆ ಹೋಗುತ್ತಿವೆ ಎಂದು ಹೇಳಿದರು. ಸ್ವಾಮೀಜಿಯವರು ರಜೆ ಬೇಕೆಂದರೆ ತೆಗೆದುಕೊಳ್ಳಿ. ಅಭ್ಯಂತರವಿಲ್ಲ. ಆದರೆ ಇಂದು ಮಧ್ಯಾಹ್ನ ಭೋಜನಕಾಲದಲ್ಲಿ ಏನಾದರೂ ಆಯಿತೇ? ಏನಾದರೂ ತಿನ್ನಬಾರದ್ದನ್ನು ತಿಂದಿರಾ? ಎಂದು ಕೇಳಿದರು. ಶಿಲ್ಪಿಯವರು ನಾನು ಅಂಥ ದ್ದೇನನ್ನೂ ತಿನ್ನಲಿಲ್ಲ. ಆದರೆ ನನಗೆ ಊಟ ಕೊಡುತ್ತಿದ್ದವನು ಒಬ್ಬ ಪುಟ್ಟ ಬಾಲಕ. ಅವನು ಬಿಸಿಯಾಗಿದ್ದ ಬೇಳೆಯ ದಾಲನ್ನು ನನ್ನ ತಟ್ಟೆಗೆ ಸುರಿಯುವಾಗ ನನ್ನ ಬಟ್ಟೆಯ ಮೇಲೆಲ್ಲ ಚೆಲ್ಲಿಬಿಟ್ಟ. ನನಗೆ ಸಿಟ್ಟು ಬಂದಿತು. ಆ ಪುಟ್ಟ ಹುಡುಗನಿಗೆ ನಾಲ್ಕೈದು ಪೆಟ್ಟು ಕೊಟ್ಟೆ. ಅವನು ಗಟ್ಟಿಯಾಗಿ ಅಳುತ್ತ ಹೊರಟು ಹೋದ. ಇದಿಷ್ಟೇ ಊಟದ ಸಮಯದಲ್ಲಿ ನಡೆದದ್ದು ಎಂದರು.

ಸ್ವಾಮೀಜಿಯವರು ಆತ ನಿಮ್ಮ ಬಟ್ಟೆಯ ಮೇಲೆ ದಾಲ್ ಚೆಲ್ಲಿದ್ದು ಆಕಸ್ಮಿಕವಾಗಿಯೋ ಅಥವಾ ಬೇಕೆಂತಲೋ? ಎಂದು ಕೇಳಿದರು. ಶಿಲ್ಪಿಯವರು ಅದು ಆಕಸ್ಮಿಕವೆಂದು ನನಗೀಗ ಅರ್ಥವಾಗುತ್ತಿದೆ. ಆದರೆ ಆಗ ಸಿಟ್ಟು ಬಂದದ್ದೂ, ಅವನನ್ನು ಹೊಡೆ ದದ್ದೂ ನಿಜ ಎಂದರು. ಸ್ವಾಮೀಜಿಯವರು ನಿಮಗೆ ರಜೆ ಕೊಡುತ್ತೇನೆ. ಆದರೆ ನೀವು ಈಗಿಂದೀಗಲೇ ಹೋಗಿ ಆ ಪುಟ್ಟ ಹುಡುಗನ ಕ್ಷಮೆ ಕೇಳಬೇಕು. ಆನಂತರ ವಿಶ್ರಾಂತಿ ತೆಗೆದುಕೊಳ್ಳಿ. ನಾಳೆ ಕೆಲಸಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದರು.

ಒಂದೆರಡು ಗಂಟೆಗಳ ನಂತರ ಸ್ವಾಮೀಜಿ ಮತ್ತೆ ಅಲ್ಲಿಗೆ ಬಂದಾಗ ಮಧ್ಯಾಹ್ನ ರಜೆ ಕೇಳಿದ್ದ ಶಿಲ್ಪಿ ಕೆಲಸ ಮಾಡುತ್ತಾ ನಿಂತಿದ್ದರು. ಸ್ವಾಮೀಜಿ ಆಶ್ಚರ್ಯದಿಂದ ಅರೇ! ಏನಿದು? ರಜೆ ಬೇಕೆಂದು ಕೇಳಿ ಹೋದಿರಿ. ಆದರೆ ನೀವು ಮತ್ತೆ ಕೆಲಸ ಮಾಡುತ್ತಿದ್ದೀರ? ಎಂದು ಕೇಳಿದಾಗ, ಆತ ನೀವು ಹೇಳಿದಂತೆಯೇ ಮಾಡಿದೆ. ಆ ಪುಟ್ಟ ಹುಡುಗನನ್ನು ಹುಡುಕಿ ಅವನ ಕ್ಷಮೆಯನ್ನು ಕೇಳಿದೆ. ಅವನಿಗೆ ಹತ್ತು ರೂಪಾಯಿ ಕೊಟ್ಟೆ. ಸಾಂತ್ವನ ಹೇಳಿದೆ. ಆನಂತರ ನನ್ನ ಮನಸ್ಸು ನಿರಾಳವಾಯಿತು. ವಿಶ್ರಾಂತಿ ತೆಗೆದುಕೊಳ್ಳಲು ಮನಸ್ಸು ಬರಲಿಲ್ಲ. ಮತ್ತೆ ಕೆಲಸಕ್ಕೆ ಬಂದೆ. ಆರಾಮವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಸ್ವಾಮೀಜಿಯವರು ನಸುನಕ್ಕು ನಮ್ಮದೆಲ್ಲ ಕರಕುಶಲ ಕೆಲಸವಲ್ಲವೇ? ಮನಸ್ಸು ಕುಶಲವಾಗಿದ್ದರೆ ಕರಗಳು ಕೆಲಸ ಮಾಡುತ್ತವೆ. ಒಳ್ಳೆಯದು ಎಂದು ಹೇಳಿ ಹೋದರು.

ಈ ಕತೆಯನ್ನು ಕೇಳಿರುವ ನಾವು ಈಗ ಎರಡು ಕೆಲಸ ಮಾಡಬಹುದು. ಮೊದಲನೆಯದ್ದು: ಆಕಸ್ಮಿಕವಾಗಿ ಎಂದಾದರೂ ನಮಗೂ ಶಿಲ್ಪಿಗಾದ ಹಾಗೆಯೇ ಕೆಲಸ ಮಾಡಲು ಸಾಧ್ಯವಿಲ್ಲ ಎನಿಸಿದರೆ, ನಾವು ಯಾರ ಮೇಲಾ ದರೂ ಕೋಪಿಸಿ ಕೊಂಡಿದ್ದೇವೆಯೇ, ಯಾರೊಂದಿಗಾದರೂ ಜಗಳವಾಡಿದ್ದೇವೆಯೇ ಎಂದು ಯೋಚಿಸಬಹುದು. ಹಾಗೆ ಆಗಿದ್ದರೆ ತಪ್ಪು ನಮ್ಮದೇ ಇರಬಹುದು. ಅವರದ್ದೇ ಇರಬಹುದು. ಆ ಜಗಳಕ್ಕೆ ಕ್ಷಮೆ ಕೇಳಿದರೆ ನಮ್ಮ ಮನಸ್ಸು ನಿರಾಳವಾಗಬಹುದು.

ಎರಡನೆಯದ್ದು: ಮುಂದಿನ ಬಾರಿ ನವದೆಹಲಿಗೆ ಹೋದಾಗ ತಪ್ಪದೇ ಅಕ್ಷರಧಾಮ ದೇವಾಲಯವನ್ನು ನೋಡಿ ಬರುವುದು. ಅದೊಂದು ಅದ್ಭುತ ಅನುಭವವಾಗುತ್ತದೆ!

Leave a Reply

Your email address will not be published. Required fields are marked *

14 + thirteen =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top