ಇವರ‍್ಯಾರೂ ನಮ್ಮ ಆಯ್ಕೆಯಲ್ಲ (ನೋಟಾ)ಎಂಬ ನೂತನ ಆಯ್ಕೆ

Posted In : ಸಂಗಮ, ಸಂಪುಟ

ಇಂದು ಜರುಗುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು 2019ರ ಲೋಕಸಭೆ ಚುನಾವಣೆಗೆ ಒಂದು ಪೂರ್ವಭಾವಿ ತಾಲೀಮು ಎಂದೇ ಭಾವಿಸಲಾಗಿರುವುದು ಸ್ಪಷ್ಟವಾಗಿಯೇ ಗೋಚರವಾಗುತ್ತಿದೆ. ಚುನಾವಣಾ ಆಯೋಗ, ಜಿಲ್ಲಾ ಆಡಳಿತಗಳು, ಮಾಧ್ಯಮಗಳು, ಮತದಾನದ ಪ್ರಮಾಣವನ್ನು ಹೆಚ್ಚಿಸಲು ನವನವೀನ ಪ್ರಯತ್ನಗಳೊಂದಿಗೆ ಮತದಾರರನ್ನು ಹುರಿದುಂಬಿಸಿದರು. ಅವರೊಟ್ಟಿಗೆ ಅನೇಕ ಸರಕಾರೇತರ ಸಂಸ್ಥೆಗಳು, ಯುವಪಡೆಗಳೂ, ಮತದಾನದ ಮೌಲ್ಯವನ್ನು ತಿಳಿಸುವ ಪ್ರಯತ್ನಕ್ಕೆ ಕೈಹಾಕಿ ಶ್ಲಾಘನೀಯ ಕೆಲಸ ಮಾಡಿದವು.

ಯುವಪಡೆಗಳು ಸ್ವ ಇಚ್ಛೆಯಿಂದ ಬೀದಿಗಿಳಿದು ಮತದಾರರಿಗೆ ಅವರ ಮತದಾನದ ಮಹತ್ವವನ್ನು ತಿಳಿಸಿದ್ದೇ ಅಲ್ಲದೆ, ಯಾವ ಅಭ್ಯರ್ಥಿಗಳಿಗೂ ಮತ ಹಾಕಲು ಇಚ್ಛೆ ಇಲ್ಲದಿರುವವರನ್ನು, ರಾಜಕಾರಣದಿಂದ ನಿರಾಸೆ ಹೊಂದಿದವರರನ್ನೂ ಸಂಪರ್ಕಿಸಿದರು: ನಿಮಗೆ ಸೂಕ್ತವೆನಿಸುವ ಅಭ್ಯರ್ಥಿಗಳು ಇಲ್ಲವಾದರೆ, ಕಡೇ ಪಕ್ಷ NOTA (None Of The Above) ಕ್ಕಾದರೂ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. ಮತದಾನದಿಂದ ಮಾತ್ರ ದೂರ ಉಳಿಯದಿರಿ’ ಎನ್ನುವ ಸಂದೇಶ ಸಾರಿದರು.

ಚುನಾವಣಾ ಆಯೋಗವು ‘ನೋಟಾ’ವನ್ನು ಕಳೆದ ಲೋಕಸಭಾ ಚುನಾವಣೆಯಿಂದ ಜಾರಿಗೆ ತಂದಿದೆ. ಒಂದು ಲೋಕಸಭೆ ಹಾಗೂ ಸುತ್ತಿನ ವಿಧಾನಸಭೆ ಚುನಾವಣೆಗಳಲ್ಲಿ ಅದರ ಬಳಕೆಯಾಗಿದೆ. 2013ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅಳವಡಿಸಿಕೊಳ್ಳಲಾದ ಈ ಋಣಾತ್ಮಕ ಮತದಾನವನ್ನು ಛತ್ತೀಸ್‌ಗಢ, ಮಿಜೋರಾಂ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿದ್ದ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಮೊದಲ ಬಾರಿಗೆ ಜನರಿಗೆ ಒಂದು ಆಯ್ಕೆಯಾಗಿ ನೀಡಲಾಗಿತ್ತು. ಇತ್ತೀಚಿನ 2016ರ ವಿಧಾನಸಭೆ ಚುನಾವಣೆಯಲ್ಲಿಯೂ ಅದಕ್ಕೆ ವ್ಯಾಪಕ ಪ್ರಚಾರ ನೀಡಲಾಗಿತ್ತು. ಕಣದಲ್ಲಿ ಒಬ್ಬೇ ಒಬ್ಬ ಮಹಿಳಾ ಅಭ್ಯರ್ಥಿ ಇಲ್ಲದಿರುವುದನ್ನು ಪ್ರತಿಭಟಿಸಲು ಯಾರನ್ನೂ ಆರಿಸದೇ ಇರುವಂತೆ ಕೇರಳದಲ್ಲಿ ಕಾರ್ಯಕರ್ತರು ಆಂದೋಲನ ನಡೆಸಿದ್ದರು. ಭ್ರಷ್ಟಾಚಾರ ನಿಗ್ರಹಕ್ಕೆ ನೋಟಾ ಬಳಕೆ ಸಹಾಯಕ ಎಂದು ತಮಿಳುನಾಡಿನಲ್ಲಿ ಪ್ರಚಾರ ಮಾಡಲಾಗಿತ್ತು.

2 ಭಾರತ ‘ನೋಟಾ’ವನ್ನು ಜಾರಿಗೆ ತಂದ 14ನೇ ರಾಷ್ಟ್ರವಾಗಿದೆ. ಮುಂದುವರಿದ ರಾಷ್ಟ್ರಗಳಾದ ಫ್ರಾನ್‌ಸ್, ಬೆಲ್ಜಿಯಂ, ಬ್ರೆಜಿಲ್, ಗ್ರೀಸ್, ಯುಕ್ರೇನ್, ಚಿಲಿ, ಫಿನ್‌ಲೆಂಡ್, ಅಮೆರಿಕ, ನೇವಡಾ, ಸ್ಪೇನ್ ಹಾಗೂ ಸ್ವೀಡನ್‌ಗಳಲ್ಲಿ ಮತ್ತು ನೆರೆಯ ಬಾಂಗ್ಲಾದೇಶದಲ್ಲಿಯೂ ಈಗಾಗಲೇ ನೋಟಾ ಜಾರಿಯಲ್ಲಿದೆ. ಭಾರತದಲ್ಲಿಯೂ, ಸಂಸತ್ತಿನ ಮತದಾನದಲ್ಲಿ ‘ಹೌದು’, ‘ಇಲ್ಲ’ ಆಯ್ಕೆಗಳ ಜತೆ ‘ಆಯ್ಕೆ ಮಾಡದೇ ಸುಮ್ಮನುಳಿ-ಅಬ್‌ಸ್ಟೇನ್’ ಇರುವುದಕ್ಕೆ ಸಂವಾದಿಯಾಗಿ ‘ನೋಟಾ’ ಇರಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಮತದಾರರು ‘ನೋಟಾ’ಕ್ಕೆ ಚಲಾಯಿಸಿದ ಮತಗಳು ಶೇ.1.1ರಷ್ಟು. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಶೇ.1.ರಷ್ಟು, ಕೇರಳದಲ್ಲಿ ಶೇ.1.2ರಷ್ಟು, ತಮಿಳುನಾಡಿನಲ್ಲಿ ಶೇ.1.4ರಷ್ಟು, ಪುದುಚೇರಿಯಲ್ಲಿ ಶೇ.3.0 ಹಾಗೂ ಗುಜರಾತ್‌ನಲ್ಲಿ ಶೇ.1.8%ರಷ್ಟು ಮಂದಿ ‘ನೋಟಾ’ ಆಯ್ಕೆ ಮಾಡಿದ್ದರು. ಹಾಗೆ ‘ಮೇಲಿನ ಯಾವ ಅಭ್ಯರ್ಥಿಯೂ ನಮ್ಮ ಆಯ್ಕೆಯಲ್ಲ’ ಎಂದು ನಿರಾಕರಿಸುವ ಮತದಾನ ಮಾಡುವವರ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದೆ. ಇದರೊಟ್ಟಿಗೆ ಮತದಾನದ ಪ್ರಮಾಣವೂ ಹೆಚ್ಚಾಗುತ್ತಿದೆ. ಮೀಸಲು ಕ್ಷೇತ್ರದಲ್ಲಿ, ಮಾವೋವಾದಿಗಳ ಹಿಡಿತದಲ್ಲಿರುವ ರಾಜ್ಯಗಳಲ್ಲಿ ನೋಟಾ ಮತಗಳು ಹೆಚ್ಚು ಬಿದ್ದಿರುವುದು ಕೆಲ ಸಾಮಾಜಿಕ ಪೂರ್ವಗ್ರಹಗಳಿಗೂ ದಿಕ್ಸೂಚಿಯಂತಿದೆ.

ಕ್ಷೋಭೆಗೀಡಾಗಿರುವ ಪ್ರದೇಶಗಳಲ್ಲಿ ಮತದಾನವನ್ನೇ ತಿರಸ್ಕರಿಸದೆ ಒಂದು ಪ್ರಜಾಸತ್ತಾತ್ಮಕವಾದ ವಿಧಾನವಾದ ನೋಟಾ ಬಳಸಿ ಜನ ತಮ್ಮ ಅಸಂತೃಪ್ತಿ ಸೂಚಿಸುತ್ತಿರುವುದು ಸಹ ಒಂದು ಉತ್ತಮ ಬೆಳವಣಿಗೆ. ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದ ಕ್ಷೇತ್ರಗಳಲ್ಲಿ ಜನ ನೋಟಾ ಮೊರೆ ಹೋಗಿರುವುದು ರಾಷ್ಟ್ರವ್ಯಾಪಿ ಪಕ್ಷಗಳ ಅವರಿಗೆ ಉಂಟಾಗಿರುವ ಭ್ರಮನಿರಸನ ಹಾಗೂ ಒಂದು ಪರ್ಯಾಯ ಪಕ್ಷದ ಹುಡುಕಾಟದಲ್ಲಿ ಇರುವುದರ ಸಂಕೇತವಾಗಿ ಕಂಡಿದೆ. ‘ಯಾರಿಗೆ ಮತ ಚಲಾಯಿಸಿದರೂ ಅಷ್ಟೇ. ಅದೇ ಹಣವಂತರು, ಕ್ರೂರಿಗಳು, ರೌಡಿಗಳು, ಕೊಲೆಪಾತಕರು, ಭ್ರಷ್ಟಚಾರವೇ ತುಂಬಿಕೊಂಡಿರುವ ನಾಯಕರುಗಳಲ್ಲಿ ಯಾರನ್ನು ಚುನಾಯಿಸುವುದು ?

ಕಡಿಮೆ ಭ್ರಷ್ಟರನ್ನು ಚುನಾಯಿಸುವುದಾ? ಎಂಬ ಸಂದಿಗ್ಧಕ್ಕೆ ‘ನೋಟಾ’ಕ್ಕೆ ಮತ ಚಲಾಯಿಸುವುದು ಒಂದು ಬಗೆಯ ಉತ್ತರವಾಗಿದೆ. ಆದರೆ ನೋಟಾ ಋಣಾತ್ಮಕ ಮತವಾಗಿರುವುದು ಒಂದು ಕೊರತೆ. ‘ಒಂದು ವೇಳೆ ‘ನೋಟಾ’ಕ್ಕೆ ಮತ ಚಲಾಯಿಸಿದ್ದೇವೆ ಎಂದಿಟ್ಟುಕೊಳ್ಳಿ, ಒಂದು ಋಣಾತ್ಮಕ ಮತ. ಈ ರೀತಿಯ ಮತಗಳು ಅಭ್ಯರ್ಥಿಯ ಆಯ್ಕೆಯ ವಿಷಯದಲ್ಲಿ ಯಾವುದೇ ಪರಿಣಾಮಕಾರಿಯಾದ ಅಥವಾ ಧನಾತ್ಮಕ ಪರಿಣಾಮ ಬೀರುವುದಿಲ್ಲವಲ್ಲ?’ಎಂದು ಜಾಗೃತ ಮತದಾರರು ಕೇಳಬಹುದು.

ಉದಾಹರಣೆಗೆ ಒಂದು ಕ್ಷೇತ್ರದಲ್ಲಿ 100 ಮತಗಳಿವೆ ಎಂದಿಟ್ಟುಕೊಳ್ಳಿ. ಒಂದು ವೇಳೆ 99 ಮತಗಳು ‘ನೋಟಾ’ಕ್ಕೆ ಚಲಾವಣೆಗೊಂಡರೂ, ಯಾರೋ ಒಬ್ಬ ಅಭ್ಯರ್ಥಿ, ಉಳಿದ ಒಂದು ಮತ ಗಳಿಸಿದಾತನನ್ನೇ ಚುನಾಯಿತ ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಅಂದರೆ, ನೋಟಾ ಒಂದು ನಿರಾಕರಣೆಯ ಮತವಾದರೂ ಯಾವುದೇ ಒಬ್ಬ ಅಭ್ಯರ್ಥಿಯನ್ನು ಹಕ್ಕು ಎಂದು ಅದನ್ನು ಪರಿಗಣಿಸಲಾಗುವುದಿಲ್ಲ. ‘ನೋಟಾ’ ಚಲಾಯಿಸಿದ ಮೇಲೆಯೂ ನಮ್ಮ ಆಯ್ಕೆಯವರಲ್ಲದ ಅಭ್ಯರ್ಥಿ ಅಧಿಕಾರಕ್ಕೆ ಬರಬಹುದು. ಹಾಗಿದ್ದರೂ ಮತದಾನ ನಮ್ಮ ಹಕ್ಕು. ನಾವು ನಮ್ಮ ಮತವನ್ನು ಚಲಾಯಿಸಲೇಬೇಕು. ಒಂದು ವೇಳೆ ಯಾವುದಾದರೂ ಚುನಾವಣೆಯಲ್ಲಿ, ಯಾವುದಾದರೊಂದು ಕ್ಷೇತ್ರದಲ್ಲಿ ‘ನೋಟಾ’ಕ್ಕೆ ಶೇ.50ಕ್ಕೂ ಅಧಿಕ ಮತ ಚಲಾವಣೆಯಾದಲ್ಲಿ ಈ ಕುರಿತು ಚುನಾವಣಾ ಆಯೋಗ ಗಂಭೀರವಾಗಿ ಚಿಂತಿಸಿ, ಮುಂದಿನ ನಿರ್ಣಯಗಳನ್ನು ಕೈಗೊಳ್ಳಬಹುದೇನೋ?

ಅಲ್ಲದೆ, ಜನರ ‘ನೋಟಾ’ ಮತಗಳು ಯಾವುದಾದರೂ ಅಭ್ಯರ್ಥಿಗೆ ಅಧಿಕವಾಗಿ ಬಿದ್ದಲ್ಲಿ ರಾಜಕೀಯ ತಮ್ಮ ಉಮೇದುವಾರರ ಆಯ್ಕೆ ಕುರಿತು ನಿರ್ವಾಹವಿಲ್ಲದ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಕುರಿತಂತೆ ಪರಸ್ಪರ ಪೈಪೋಟಿಗಿಳಿದು, ಆತ್ಮವಿಮರ್ಶೆ ಮಾಡಿಕೊಂಡು ಯೋಗ್ಯ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷಗಳು ಮುಂದಾದರೆ, ಅಷ್ಟರಮಟ್ಟಿಗೆ ಹಣ, ಹೆಂಡ, ಉಡುಗೊರೆಗಳನ್ನು ಪೂರೈಸುವ ಅನರ್ಹ ಅಭ್ಯರ್ಥಿಗಳು ಕಣದಿಂದ ಮರೆಯಾಗುತ್ತಾರೆ.

Right to reject ಎಂದರೆ, ಆಯ್ಕೆಯ ಹಕ್ಕಿನಂತೆ ತಿರಸ್ಕರಿಸುವ ಹಕ್ಕೂ ಇದ್ದರೆ ‘ನೋಟಾ’ ಪ್ರಕ್ರಿಯೆಯಲ್ಲಿರುವ ತೊಡಕನ್ನು ಪರಿಹರಿಸಿಕೊಳ್ಳಬಹುದು. ಒಂದು ಕ್ಷೇತ್ರದಲ್ಲಿ ಬಹುತೇಕ ಮತಗಳು ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವಂತಿದ್ದರೆ ಆಯೋಗವು ಅಂತಹ ಅಭ್ಯರ್ಥಿಗಳನ್ನು ಅನರ್ಹರೆಂದು ಪರಿಗಣಿಸಿ, ಮತ್ತೆ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಿ ಪುನಃ ಚುನಾವಣೆ ನಡೆಸುವುದು ಈ ಹಕ್ಕನ್ನು ಮತದಾರರರಿಗೆ ನೀಡಿದಾಗ ಸಂಭವನೀಯವಾಗುತ್ತದೆ. ಆದರೆ ತಿರಸ್ಕರಿಸುವ ಹಕ್ಕು ಜಾರಿಗೊಳಿಸಲು ಕೆಳ ಕಂಡ ತೊಡಕುಗಳಿವೆ:

* ಸರಿಸುಮಾರು ಶೇ.60ರಷ್ಟು ಮತದಾರರು ರಾಜಕೀಯ ವ್ಯವಸ್ಥೆಯಿಂದ ಅಸಮಾಧಾನಗೊಂಡು ಅಥವಾ ಬೇಸತ್ತು ಈ ರೀತಿಯ ಮತದಾನವನ್ನು ತಿರಸ್ಕರಿಸುವುದರಿಂದ ಮತ್ತೆ ಚುನಾವಣೆ ನಡೆಸಬೇಕಾದ ಸಂದರ್ಭ ಬರಬಹುದು ಅಥವಾ ಅದನ್ನು ಮುಂದೂಡಬೇಕಾದ ಅಗತ್ಯ ಉಂಟಾಗಿ ರಾಜಕೀಯ ಅಸ್ಥಿರತೆ ಉಂಟಾಗಬಹುದು.

* ತಿರಸ್ಕರಿಸುವ ಹಕ್ಕನ್ನು ಮತದಾರರಿಗೆ ನೀಡಿ ಚುನಾವಣೆಗಳನ್ನು ನಡೆಸುವುದರಿಂದ ಹಣದ ವ್ಯಯವೂ ಹೆಚ್ಚಾಗಿ ಇದು ತೆರಿಗೆ ಸಂದಾಯ ಮಾಡುವವರ ಮೇಲೆ ಆರ್ಥಿಕ ಹೊರೆಯಾಗಬಹುದು.

* ರಾಜಕೀಯ ಪಕ್ಷಗಳು ಸಹ ಹೊಸ ಅಭ್ಯರ್ಥಿಯ ಪ್ರಚಾರಕ್ಕೆ ಮತ್ತೆ ಹಣ ಖರ್ಚು ಮಾಡಬೇಕಾಗುತ್ತದೆ.

* ಯಾವುದೇ ಒಂದು ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಅಧಿಕಾರಿಗಳು, ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ಸಿಬ್ಬಂದಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಂದು ವೇಳೆ ಆಯ್ಕೆಯಾಗದಿದ್ದರೆ, ಅನವಶ್ಯಕವಾಗಿ ಅಧಿಕಾರಿಗಳ ಮತ್ತು ಚುನಾವಣಾ ಆಯೋಗದ ಮೇಲೆ ಹೊರೆ ಬಿದ್ದಂತಾಗುತ್ತದೆ.

* ಜಮ್ಮುಮತ್ತುಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ತಿರಸ್ಕರಿಸುವ ಹಕ್ಕನ್ನು ರಾಜಕೀಯ ಅಸ್ಥಿರತೆ ಜಾರಿಯಲ್ಲಿಡಲು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತೆ ಮತ್ತೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಮೂಲಕ ಸರಕಾರ ರಚಿಸುವುದೇ ಅಸಾಧ್ಯವಾಗಬಹುದು.

ತಿರಸ್ಕರಿಸುವ ಹಕ್ಕಿನ ಪರವಾದ ವಾದಕ್ಕೆ ಅಷ್ಟೊಂದು ಬೆಂಬಲವಿಲ್ಲವಾದರೂ ಕೂಡ ಇವತ್ತಿನ ಸ್ಥಿತಿ-ಗತಿಗಳಲ್ಲಿ ಇದೊಂದೇ ದಾರಿ ಎನಿಸುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಕಳ್ಳರು, ಕೊಲೆಗಡುಕರು, ಅಪರಾಧ ಹಿನ್ನೆಲೆಯುಳ್ಳವರು, ಅತ್ಯಾಚಾರಿಗಳು ನಮ್ಮ ಬೆಳೆಯುತ್ತಿರುವ ಆತಂಕಕಾರಿ ಸನ್ನಿವೇಶವನ್ನು ಸದ್ಯ ಎದುರಿಸುತ್ತಿದ್ದೇವೆ. ಇದೇ ವೇಳೆ ನೋಟಾ ಜಾಗದಲ್ಲಿ ತಿರಸ್ಕರಿಸುವ ಹಕ್ಕಿನ ಚಲಾವಣೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೂ ದಾಖಲಾಗಿದೆ.

ಒಟ್ಟಾರೆ, ‘ನೋಟಾ’ ಅಥವಾ ಅದರ ಇನ್ನಷ್ಟು ಶಕ್ತಿಶಾಲಿ ರೂಪವಾದ ತಿರಸ್ಕರಿಸುವ ಹಕ್ಕು ಮತ್ತು ಇನ್ನೂ ಮುಂತಾದ ಸುಧಾರಣಾ ವಿಧಾನಗಳನ್ನು ಚುನಾವಣೆಗಳಲ್ಲಿ ಅನುಸರಿಸುವುದರ ಮೂಲಕ ಮತದಾನದ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗುವಂತೆ ಮಾಡಬಹುದು. ಆ ಮೂಲಕ ಅಭ್ಯರ್ಥಿಗಳು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ ಎಂಬ ಭರವಸೆ ತಳೆಯಬಹುದು.

Leave a Reply

Your email address will not be published. Required fields are marked *

2 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top