About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಆಳ್ವಾಸ್ ಅಂಗಳದಲ್ಲಿ ನುಡಿಸಿರಿ ಜಾತ್ರೆ

ಮೂಡುಬಿದಿರೆ: ನಾಡಿನ ಸಂಸ್ಕೃತಿ ಬಿಂಬಿಸುವ ಬೃಹತ್ ನುಡಿಜಾತ್ರೆಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಅಂಗಳ ಸಜ್ಜಾಗಿದೆ. ರಾಜ್ಯದ ವಿಭಿನ್ನ ಸಂಸ್ಕೃತಿ ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೋಹನ್ ಆಳ್ವಾ ಅವರ ಸಂಘಟನಾ ಚತುರತೆ ಕುಲುಮೆಯಲ್ಲಿ ನುಡಿಗಟ್ಟಿನ ನಾಡಹಬ್ಬ ವೈಭವದಿಂದ ನಡೆಯಲಿದೆ.

ಕಳೆದ ಹದಿನೈದು ವರ್ಷದಿಂದ ವ್ಯವಸ್ಥಿತವಾಗಿ ನಡೆಯುತ್ತಿರುವ ನುಡಿಸಿರಿಯ ವೈಭವ ವರ್ಣಿಸಲು ಅಕ್ಷರಗಳ ಸಾಲು ಸಾಲದೇನೋ ಎಂಬರಷ್ಟರಮಟ್ಟಿಗೆ ನುಡಿಜಾತ್ರೆ ನಡೆಯುತ್ತಿದೆ. ರಾಜ್ಯದ ವಿವಿಧ ಮೂಲೆಯಿಂದ ಆಗಮಿಸುವ ಜತೆಜತೆಗೆ ದೇಶ ವಿದೇಶದಲ್ಲಿ ವಾಸವಿರುವ ಕನ್ನಡದ ಮನಸುಗಳು ಮೂರು ದಿನಗಳ ನುಡಿಹಬ್ಬ ನಡೆಯುವ ಒಂದು ದಿನ ಮುಂಚೆ ಮೂಡಬಿದಿರೆ ಕಡೆ ನಡೆಯುತ್ತವೆ.

ಮೂರು ದಿನ ನಡೆಯುವ ನುಡಿ ಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಮನದ ಭಾವನೆಗಳನ್ನು ನುಡಿಸಿರಿಯ ಅಂಗಳದಲ್ಲಿ ವ್ಯಕ್ತಪಡಿಸಿ, ನುಡಿಜಾಣರ ಮಾತುಗಳ ಮೇಳದಲ್ಲಿ ಮಿಂದೆದ್ದು, ಸಂಗೀತ ಸುಧೆಯ ಗಾನಗಂಗೆಯಲಿ ಒಂದಾಗಿ ತೇಲಿ ತನ್ಮಯರಾಗುತ್ತಾರೆ. ರಾಜ್ಯದ ವಿವಿಧ ವಿದ್ಯಾಸಂಸ್ಥೆಗಳಿಂದ ಆಗಮಿಸುವ ಮಕ್ಕಳ ನೃತ್ಯ ವೈಭವ ಕಂಡು ಬೆಕ್ಕಸಬೆರಗಾಗಿ ನಿಂತು ಚಪ್ಪಾಳೆಯ ಸುರಿಮಳೆಗರೆಯುತ್ತಾರೆ.

ಬೆಟ್ಟಗುಡ್ಡಗಳ ನಡುವಿನ ಸುಂದರ ದಿಬ್ಬದ ಮೇಲೆ ಹಬ್ಬಿರುವ ಅಂಗಳದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಕನ್ನಡ ನಾಡಿನ ಕೃಷಿ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ಕೋಲಾಟ, ಗೊಂಬೆಕುಣಿತ, ಉತ್ತರ ಕರ್ನಾಟಕದ ಭಜನೆ, ವೀರಗಾಸೆ, ದೊಳ್ಳುಕುಣಿತ, ಬಯಲಾಟ, ದೊಡ್ಡಾಟ, ಸವಾಲ್‌ಪದ, ಕಂಸಾಳೆ ದಕ್ಷಿಣ ಕರ್ನಾಟಕದ ಸೋಮನಕುಣಿತ, ಗಾಡಿಗ ಗೊಂಬೆಗಳ ಕುಣಿತ, ಕೋಲಾಟ, ದಕ್ಷಿಣ ಕನ್ನಡದ ಯಕ್ಷಗಾನ, ಕೋಲಾ-ಭೂತಾರಾಧನೆ ಸೇರಿದಂತೆ ವಿವಿಧ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ತಂದು ಅಖಂಡ ಕರ್ನಾಟಕವನ್ನು ಒಂದೇ ಕಡೆ ವರ್ಣಿಸುವ ವ್ಯವಸ್ಥೆ ಇಲ್ಲಿ ಸ್ಥಾಪಿತವಾಗುತ್ತದೆ.

ನೀರಿನ ಕೊರತೆಯಲ್ಲಿ ನರಳುವ ರೈತರಿಗೆ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ಬಗೆ, ಕೃಷಿ ಪರಿಕರಗಳ ಬಳಕೆ ಕುರಿತು ಮಾಹಿತಿ, ಆಧುನಿಕ ಮತ್ತು ಸಾವಯವ ಕೃಷಿ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗೆಯನ್ನು ತಿಳಿಸಿಕೊಡುವ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ರೈತರು ಬೆಳೆಯುವ ವಿವಿಧ ತಳಿಯ ಉತ್ಪನ್ನಗಳು, ಕೃಷಿಯಲ್ಲಿ ಬಳಸುವ ರಾಸುಗಳು, ಬೆಳೆಯುವ ತರಕಾರಿ ಹಣ್ಣುಗಳು, ಮೀನುಗಾರಿಕೆ, ಹೈನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಉತ್ಪನ್ನಗಳು ಹಾಗೂ ಸಾಧಕರ ಸಮಾಗಮ ಆಳ್ವಾಸ್ ನುಡಿಸಿರಿಯ ಭಾಗವಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close