ಸತ್ತವರ ಬಗ್ಗೆ ಸದಾ ಒಳ್ಳೆಯದನ್ನೇ ಹೇಳಬೇಕು, ಹಾಗಂತ ಹಸಿ ಸುಳ್ಳನ್ನೂ ಹೇಳಬಾರದು!

Posted In : ಅಂಕಣಗಳು, ನೂರೆಂಟು ವಿಶ್ವ

ಸತ್ತವರ ಬಗ್ಗೆ ಒಳ್ಳಯದನ್ನೇ ಹೇಳಬೇಕು, ನಿಜ. ಹಾಗಂತ ಅವರ ಬಗ್ಗೆ ಹಸಿ ಹಸಿ ಸುಳ್ಳುಗಳನ್ನೂ ಹೇಳಬಾರದು. ಗೌರಿ ಲಂಕೇಶ್ ಹತ್ಯೆಯನ್ನು ಎಡಚರರು ಬಳಸಿಕೊಳ್ಳುತ್ತಿರುವ ರೀತಿ ನೋಡಿದರೆ, ನಿಜಕ್ಕೂ ಅಸಹ್ಯವಾಗುತ್ತದೆ. ಇದು ಗೌರಿ ಹತ್ಯೆಗೆ ಆಕ್ರೋಶವೋ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಆಕ್ರಂದನವೋ ಎಂಬುದು ಗೊತ್ತಾಗುತ್ತಿಲ್ಲ. ಯಾರ ಹತ್ಯೆಯನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು, ಬೇರೆಯವರ ಗೋರಿ ಮೇಲೆ ತಮ್ಮ ಅಸ್ತಿತ್ವದ ಸೂರು ಕಟ್ಟಿಕೊಳ್ಳುವುದು ಅತಿ ಹೇಯ ಕೃತ್ಯ. ಗೌರಿ ಹತ್ಯೆಯಾದ ಕ್ಷಣದಿಂದ ಎಡಚರರು ವರ್ತಿಸುವ ರೀತಿಯನ್ನು ನೋಡಿದರೆ ಹೇಸಿಗೆಯಾಗುತ್ತದೆ. ಕೆಲವು ಎಡಬಿಡಂಗಿಗಳಂತೂ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ‘ಗೌರಿ ಹತ್ಯೆಯನ್ನೂ ಆರ್‌ಎಸ್‌ಎಸ್‌ನವರ ತಲೆಗೆ ಕಟ್ಟೋಣ.

ಬಲಪಂಥೀಯರು, ಕೋಮುವಾದಿಗಳ ಕೃತ್ಯವಿದು ಎಂದು ಪ್ರಚಾರ ಮಾಡೋಣ, ತನಿಖೆ, ತೀರ್ಪು ಏನೇ ಬರಲಿ, ಅದನ್ನು ಆಮೇಲೆ ನೋಡಿಕೊಳ್ಳೋಣ, ಆದರೆ ಅಲ್ಲಿ ತನಕ ನಮ್ಮ ಹೋರಾಟ ಈ ದಿಕ್ಕಿನೆಡೆಗೆ ಫೋಕಸ್ಡ್‌ ಆಗಿರಲಿ. ಮೋದಿ ಬಂದ ನಂತರ ಭಾರತದಲ್ಲಿ ಭಯದ ವಾತಾವರಣ ನೆಲೆಸಿದೆಯೆಂದು ಹೇಳುತ್ತಾ ಮೋದಿಯೇ ಪರೋಕ್ಷ ಈ ಹತ್ಯೆಗೆ ಕಾರಣ ಎಂಬಂತೆ ಬಿಂಬಿಸಬೇಕು. ಯಾವ ವೇದಿಕೆ ಸಿಕ್ಕರೂ ಈ ನಿಟ್ಟಿನಲ್ಲಿಯೇ ನಮ್ಮ ವಾದವಿರಬೇಕು’ ಎಂಬ ಸಂದೇಶಗಳು ಹರಿದಾಡುತ್ತಿವೆ.ಇಷ್ಟೇ ಅಲ್ಲ, ಕೆಲವು ಗ್ರೂಪ್‌ಗಳಲ್ಲಿ ‘ ನಮ್ಮ ಹೋರಾಟವನ್ನು ಜೀವಂತವಾಗಿಡಲು ಕೇಂದ್ರಬಿಂದುವಾದ ಗೌರಿಯನ್ನು ಉದಾತ್ತವಾಗಿ ಚಿತ್ರಿಸಬೇಕು. ಅವಳಿಗೆ ಹುತಾತ್ಮನ ಪಟ್ಟ ಕಟ್ಟಬೇಕು. ನಿರಂತರವಾಗಿ ಅವಳ ಗುಣಗಾನ ಮಾಡುತ್ತಿರಬೇಕು. ಅವಳ ವಿರುದ್ಧ ಮಾತಾಡುವವರ ಚಾರಿತ್ರ್ಯ ಹರಣ ಮಾಡಬೇಕು. ಆಗ ಮಾತ್ರ ನಮ್ಮ ಹೋರಾಟವನ್ನು ಜೀವಂತವಾಗಿಡಲು ಸಾಧ್ಯ’. ಎಂಬ ಸಂದೇಶವನ್ನು ಎಡಚರರು ವ್ಯವಸ್ಥಿತವಾಗಿ ಹರಿ ಬಿಡುತ್ತಿದ್ದಾರೆ. ಇದು ಅಕ್ಷರಶಃ ನಿಜವೆಂಬುದು ಅವರ ವರ್ತನೆ, ಧೋರಣೆ ಹಾಗೂ ನಡೆ-ನುಡಿಗಳಿಂದ ಮನವರಿಕೆಯಾಗುತ್ತದೆ.

ಆ ರಾತ್ರಿ ಗೌರಿ ಹತ್ಯೆಯಾಗಿ ಇನ್ನು ಅರ್ಧ ಗಂಟೆಯಾಗಿರಲಿಲ್ಲ. ಟಿವಿಯಲ್ಲಿ ಧುತ್ತನೆ ಕಾಣಿಸಿಕೊಂಡ ಎಡಚರರು ಇದು ಕೋಮುವಾದಿಗಳ ಕೈವಾಡ ಎಮದು ತೀರ್ಮಾನಕ್ಕೆ ಬಂದು ಬಿಡುತ್ತಾರೆ. ‘ಇದು ಆರೆಸ್ಸೆಸ್ , ಬಿಜೆಪಿಯವರ ಕೃತ್ಯ’ ಎಂಬ ಫರ್ಮಾನು ಹೊರಡಿಸುತ್ತಾರೆ. ಹೆಣ ಬಿದ್ದು ಇನ್ನೂ ಒಂದು ಗಂಟೆಯಾಗಿಲ್ಲ, ಅವಳ ಮನೆಯ ಮುಂದೆ ನೂರಾರು ಎಡಚರರು ಸೇರಿ ‘ಇದು ಮೋದಿಯ ಕೃತ್ಯ, ಮೋದಿಗೆ ಧಿಕ್ಕಾರ’ ಎಂದು ಕೂಗುತ್ತಾರೆ.  ಆನಂತರ ಪತ್ರಿಕೆಗಳಲ್ಲಿ ಗೌರಿಯನ್ನು ಚಿಂತಕಿ, ಮಾನವತಾವಾದಿ, ಜೀವಪ್ರೇಮಿ, ಮಹಾನ್ ಹೋರಾಟಗಾರ್ತಿ, ಆಧುನಿಕ ಮದರ್ ಥೆರೇಸಾ, ವಾತ್ಸಲ್ಯಮಯಿ …… ಎಂದೆಲ್ಲ ಬಣ್ಣಿಸುತ್ತಾರೆ.

‘ಒಂದು ಆ್ಯಂಗಲ್‌ನಿಂದ ಗೌರಿ ಮಹಾತ್ಮಾಗಾಂಧಿಯಂತೆ ತೋರುತ್ತಿದ್ದಳು’ ಎಂದು ಅವಿವೇಕಿಯೊಬ್ಬ ಬರೆಯುತ್ತಾನೆ. ಗಾಂಧಿಯಂತೆ ಗೌರಿ ಕೂಡ ಗುಂಡಿಗೆ ಬಲಿಯಾಗಿ ಅಮರಳಾದಳು. ಹುತ್ತಾತ್ಮಳಾದಳು ಎಂದು ಮತ್ತೊಬ್ಬ ಪರಿತಪಿಸುತ್ತಾನೆ. (ಗುಂಡಿಗೆ ಬಲಿಯಾದವರೆಲ್ಲ ಗಾಂಧಿಯಾಗುವುದಾದರೆ ಜಯರಾಜ, ಡೆಡ್ಲಿಸೋಮ, ಬೆತ್ತನಗೆರೆ ಸೀನ, ಚಂದಪ್ಪ ಹರಿಜನ, ಕಜ್ಜಿ ಶಂಕ್ರಣ್ಣ ಇವರನ್ನೆಲ್ಲ ಏನೆಂದು ಕರೆಯುವುದು? ಇವರೂ ಸಹ ಗುಂಡಿಗೆ ಬಲಿಯಾದವರೇ !)  ‘ಪ್ರಸ್ತುತ ಸಮಾಜದಲ್ಲಿರುವ ಎಲ್ಲ ಶೋಷಣೆಗಳ ವಿರುದ್ಧ ಹೋರಾಟಕ್ಕೆ ನಿಂತಿದ್ದ, ದಮನಿತರು, ದುರ್ಬಲರ ಪರವಾಗಿ ನಿಂತಿದ್ದ ಗೌರಿಯನ್ನು ಹತ್ಯೆ ಮಾಡುವುದೆಂದರೆ, ನಮ್ಮನ್ನೂ ಹತ್ಯೆ ಮಾಡಿದಂತೆ. ಕಾರಣ ಅವಳ ವಿಚಾರವೇ ನಮ್ಮ ವಿಚಾರವೂ ಆಗಿತ್ತು’ ಎಂದು ಮತ್ತೊಬ್ಬ ವಿಚಾರವಾದಿ ಬೊಬ್ಬಿರಿಯುತ್ತಾನೆ.

ಗೌರಿ ಹತ್ಯೆಯ ಮೂಲಕ ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳ ಬಯಸುವ ಐನಾತಿ ಮನಸ್ಸಿನ, ಪಡಪೋಶಿಯೊಬ್ಬ ಬರೆಯುತ್ತಾನೆ- ‘ಕರ್ನಾಟಕ ಮಾತ್ರವಲ್ಲ, ದೇಶದ ಚರಿತ್ರೆಯಲ್ಲಿ ಗೌರಿಗೆ ಹೋಲಿಕೆ ಮಾಡಲು ಹುಡುಕುತ್ತಾ ಹೊರಟರೆ ಕೆಲವೇ ಕೆಲವರು ಸಿಗುತ್ತಾರೆ. ಅಕ್ಕಮಹಾದೇವಿಯ ವೈರಾಗ್ಯ, ಒನಕೆ ಓಬವ್ವನ ಛಲ, ಕಿತ್ತೂರು ಚೆನ್ನಮ್ಮನ ರಾಜಿ ರಹಿತ ಗುಣ, ಇಂದಿರಾಗಾಂಧಿಯ ದಿಟ್ಟತನ, ಗಾರ್ಕಿ ತಾಯಿಯ ಕಾದಂಬರಿಯ ತಾಯ್ತನ, ಯಾರಿಗೂ ಹೆದರದ ಚಿತ್ತಗಾಂಗ ಕ್ರಾಂತಿಯ ಪ್ರೀತಿ ಲತಾ ವಾಡ್ವೇದಾರಳ ಶೂರತನ, ಸಾವಿತ್ರಿಬಾಯಿ ಫುಲೆಯ ಅಕ್ಷರ ಸೇನೆ.. ಹೀಗೆ ಎಲ್ಲವೂ ಸೇರಿ ನಮ್ಮ ಗೌರಿಯಂಥ ವ್ಯಕ್ತಿತ್ವ ರೂಪುಗೊಂಡಿದೆ’
ಮತ್ತೊಬ್ಬ ಮಾಜಿ ವಿವೇಕಿ, ‘ ಈ ಸಮಾಜವನ್ನು ಕಾಡುವ ಎಲ್ಲ ವ್ಯಾಧಿಗಳಿಗೆ ಚಿಕಿತ್ಸೆಯಾಗುವಂಥ ಉದಾತ್ತ ವಿಚಾರಗಳನ್ನು ಗೌರಿ ಹೊಂದಿದ್ದಳು. ಹಾಗೂ ಅವುಗಳನ್ನು ಸಮಾಜದ ಮೇಲೆ ಪ್ರತಿಪಾದಿಸುತ್ತಿದ್ದಳು. ಪ್ರಾಯಶಃ ಅವನ್ನೂ ಸಹಿಸದವರು ಅವಳನ್ನು ಕೊಲೆ ಮಾಡಿರಬಹುದು. ಗಾಂಧಿ ವಿಚಾರಗಳಷ್ಟೇ ಗೌರಿ ವಿಚಾರಗಳೂ ಉದಾತ್ತವಾದವು ಹಾಗೂ ಇಂದಿಗೂ ಪ್ರಸ್ತುತವಾದವು. ಅವಳ ಅಮರತ್ವದಲ್ಲಾದರೂ ಅವನ್ನು ಈಡೇರಿಸಿ ಅವಳಿಗೆ ಅರ್ಹ ಶ್ರದ್ಧಾಂಜಲಿ ಸಲ್ಲಿಸಬೇಕು’ ಎಂದು ಹಲುಬುತ್ತಿದ್ದ.

ಉದ್ದೇಶ ಸ್ಪಷ್ಟ. ಗೌರಿಗೊಂದು ಅಮರತ್ವದ ಗೋರಿ ಕಟ್ಟಬೇಕು. ಅವಳನ್ನು larger than life ಥರಾ ಚಿತ್ರೀಕರಿಸಬೇಕು. ಆ ಕಟೌಟ್‌ನ ಕೆಳಗೆ ನಿಂತು ಎಷ್ಟು ದಿನವೋ ಅಷ್ಟು ದಿನ ಆಶ್ರಯಪಡೆಯಬೇಕು. ಅವಳ ನೆನಪಿನ ಅಗ್ಗಿಷ್ಟಿಕೆಯಲ್ಲಿ ಮೈಕಾಯಿಸಿಕೊಳ್ಳಬೇಕು. ಸಾಧ್ಯವಾದಷ್ಟು ಅವಳ ನೆನಪಿನ ಅಕೌಂಟ್‌ನ್ನು ಚಾಲ್ತಿಯಲ್ಲಿಡಬೇಕು. ಮೋದಿಯೇ ಈ ಕೊಲೆಗೆ ಕಾರಣವೆಂಬುದನ್ನು ತಲೆಗೆ ಕಟ್ಟಬೇಕು. ಸಾಧ್ಯವಾದಷ್ಟು ಗೌರಿ ಹತ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚಿತವಾಗುವಂತೆ ಮಾಡಿ, ಮೋದಿಗೆ ಕೆಟ್ಟ ಹೆಸರು ತರಬೇಕು. ಈ ನೆಲೆಯಲ್ಲಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಬೇಕು. ನೋಡಿ, ಎಂಥ ಮನೆಹಾಳು ಬುದ್ಧಿ!?

ಮೊನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿರೋಧ ಸಮಾವೇಶವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಈ ಎಲ್ಲ ಸಂಗತಿಗಳು ನಿಜವೆಂಬುದು ಎದ್ದು ತೋರುತ್ತಿದೆ. ಗೌರಿ ಹತ್ಯೆಗೆ ಅನುಕಂಪಕ್ಕಿಂತ ಹಿಂದುತ್ವ ಪೋಷಣೆ, ಮೋದಿ ನಿಂದನೆಯೇ ಪರಾಕಾಷ್ಠೆ ತಲುಪಿತ್ತು. ಇನ್ನು ಆರು ತಿಂಗಳ ಕಾಲ ಈ ಹೋರಾಟದ ಕಾವು ಉಳಿಸಿಕೊಳ್ಳಬೇಕು, ಮುಂದಿನ ಹೋರಾಟವನ್ನು ದಿಲ್ಲಿಯಲ್ಲಿ ಸಂಘಟಿಸಬೇಕೆಂಬ ನಿರ್ಧಾರದ ಹಿಂದಿರುವುದೂ ಗೌರಿಹತ್ಯೆಯ ಕಾವಿನಲ್ಲಿ ತಾವೆಷ್ಟು ಮೈಕಾಯಿಸಿಕೊಳ್ಳಬೇಕೆಂಬ ಕುತ್ಸಿಕ ಲೆಕ್ಕಾಚಾರವೇ ಹೊರತು ಬೇರೇನೂ ಅಲ್ಲ.

ಎಡಚರರರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಕಾಲಕಾಲಕ್ಕೆ ಒಂದು ಪ್ರತಿಮೆ, ಸಂಕೇತ ಬೇಕು. ಜಗತ್ತಿನಾದ್ಯಂತ ಮಾರ್ಕ್ಸ್‌‌ವಾದ ್ಛಜ್ಝಿಿಛಿ ಜ್ಝಿಿಟಟ ಎಂಬುದು ದೃಢ ಪಟ್ಟನಂತರ ಎಷ್ಟು ವರ್ಷವೆಂದು ಆ ವಾದದ ಸೂರಿನಡಿಯಲ್ಲಿ ಆಶ್ರಯ ಪಡೆಯಲು ಸಾಧ್ಯ? ಕಮ್ಯುನಿಸಂ ಜಗತ್ತಿನೆಲ್ಲೆಡೆ ತಿರಸ್ಕೃತಗೊಂಡ, ಪ್ರಸ್ತುತ ಸಂದರ್ಭದಲ್ಲಿ ಕಾರ್ಯಸಾಧುವಿಲ್ಲದ ಬರಗೆಟ್ಟ ಸಿದ್ಧಾಂತ ಎಂಬುದು ಸಾಬೀತಾಗಿದೆ.  ಅದು ಹುಟ್ಟಿದ ಮನೆಯಲ್ಲೇ ಚಟ್ಟಕ್ಕೇರಿಸಲಾಗಿದೆ. ಮರುಭೂಮಿಯಲ್ಲಿನ ಹಸುರಿನಂತೆ, ಭಾರತದಲ್ಲಿ ಅಲ್ಲೊಂದು ಇಲ್ಲೊಂದು ಪಳೆಯುಳಿಕೆಗಳಿವೆ. ಅವನ್ನಾದರೂ ಉಳಿಸಿಕೊಳ್ಳಲು ಅವರಿಗೆ ಪ್ರತಿಮೆಗಳು ಬೇಕು. ಇಲ್ಲದಿದ್ದರೆ ಅಸ್ತಿತ್ವಕ್ಕೇ ಸಂಚಕಾರ. ಅದಕ್ಕಾಗಿ ಗೌರಿಯಂಥವರೂ ಹುಲ್ಲುಕಡ್ಡಿಯಂತೆ ತೋರುತ್ತಾರೆ.

ಯಾವುದೇ ಹೋರಾಟಕ್ಕೆ ಒಂದು ಮೂರ್ತಿ, ಪ್ರತಿಮೆ ಬೇಕೇ ಬೇಕು. ಆಗ ಆ ಹೋರಾಟದಲ್ಲಿರುವವರು ಆ ಪ್ರತಿಮೆಯನ್ನು ನಖಶಿಖಾಂತ ಪ್ರಶಂಸಿಸಲೇಬೇಕು, ಹೊಗಳಿ ಅಟ್ಟಕ್ಕೇರಿಸಲೇಬೇಕು. ಇಲ್ಲ ಸಲ್ಲದ ಅಪದ್ಧ, ಅಸಂಬದ್ಧಗಳನ್ನೆಲ್ಲ ಹೇಳಿ ಗುಣಗಾನ ಮಾಡಬೇಕು. ಸ್ತೋತ್ರ ಪಠಿಸಬೇಕು, ಸಹಸ್ರ ನಾಮಾರ್ಚನೆಗಳು ಸಂದಾಯವಾಗಬೇಕು. ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಬೇಕೆಂದು, ಬೇಕಾಬಿಟ್ಟಿ ಸುಳ್ಳು ಹೇಳಬೇಕು.ಇಲ್ಲದಿರುವ ಗುಣಗಳನ್ನೆಲ್ಲ ತುಂಬಿ ಹೊಸವ್ಯಕ್ತಿಯನ್ನು ಮೂರ್ತೀಕರಿಸಿ ಹುತಾತ್ಮನನ್ನಾಗಿ ಮಾಡಬೇಕು. ಆ ಹುತಾತ್ಮನ ನೆರಳಲ್ಲಿ ಆಶ್ರಯಪಡೆದು ಅಸ್ತಿತ್ವ ಉಳಿಸಿಕೊಳ್ಳಬೇಕು. ಇದು ಎಡಚರರು ಲಗಾಯ್ತಿನಿಂದ ಪಾಲಿಸಿಕೊಂಡು ಬಂದ ಪರಮಸಿದ್ಧಾಂತ. ಹೀಗಾಗಿ ಲೆನಿನ್, ಮಾರ್ಕ್ಸ್‌ ನಾಮಾವಶೇಷವಿಲ್ಲದಿದ್ದರೂ ಇವರು ದಾಸರಾಗುತ್ತಾರೆ.  ಮೊನ್ನೆಯ ಪ್ರತಿರೋಧ ಸಮಾವೇಶದಲ್ಲಿ ಭಾಗವಹಿಸಿದ ಬಹುತೇಕರಿಗೆ ಗೌರಿಯ ಪರಿಚಯವೂ ಇರಲಿಲ್ಲ.

ಅವಳ ಹೆಸರನ್ನು ಸಹ ಕೇಳಿದವರಲ್ಲ. ಆದರೆ ಅವರೆಲ್ಲರಿಗೂ ಗೌರಿ ದುರ್ಗೆ, ಚಿಂತಕಿ, ಮಾನವತಾವಾದಿ, ಥೆರೇಸಾ ಆಗಿ ಕಂಡಳು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ಸ್ವಾಮಿ ಅಗ್ನಿವೇಶ್‌ಗೆ ವರದಿಗಾರನೊಬ್ಬ ,‘ಗೌರಿ ಲಂಕೇಶ್ ನಕ್ಸಲರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು. ಅದಕ್ಕೇನು ಹೇಳುತ್ತೀರಿ?’ ಎಂದು ಕೇಳಿದಾಗ ‘ ಹೊಟ್ಟೆ ಹಸೀತಾ ಇದೆ, ಮೊದಲು ಎರಡು ತುತ್ತು ಬಾಯಿಗೆ ಹಾಕಿಕೊಳ್ತೀನಿ. ಗೌರಿಯಂತೂ ಹೋದಳು,ಸುಮ್ಮನೆ ನಡಿಯಪ್ಪಾ’ ಎಂದು ಹೇಳಿ ಪೇರಿ ಕಿತ್ತಿದ್ದು ಮಾರ್ಮಿಕವಾಗಿತ್ತು. ಇವರೆಲ್ಲ ಬಂದಿದ್ದು ತಮ್ಮ ತಮ್ಮ ಇರುವಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ಹಿಂದುತ್ವವನ್ನು ಹೀಗಳೆಯುವುದಕ್ಕಾಗಿ, ತಮ್ಮ ಊಹೆಗೆ ಕೈಗೆಟುಕದೇ ಬೆಳೆಯುತ್ತಿರುವ ಮೋದಿಯನ್ನು ಬೈಯುವುದಕ್ಕಾಗಿ, ಹೊರತು ಗೌರಿ ಮೇಲಿನ ಪ್ರೀತಿಯಿಂದಲ್ಲ. ಇವರಿಗೆ ಗೌರಿ ಒಂದು ನೆಪ, ಇವರು ಗಣಪತಿ ಕಾಲ ಕೆಳಗಿನ ಇಲಿ ಸತ್ತರೆ, ಗಣಪತಿಗಿಂತ ಇಲಿಯೇ ದೊಡ್ಡದು, ಇಲಿ ವಿಚಾರಗಳಿಂದಲೇ ಗಣಪತಿ ವಿಶ್ವಯಮಾನ್ಯನಾದದ್ದು, ಇಲಿ ಇಲ್ಲದಿದ್ದರೆ ಅವನೆಲ್ಲಿ ಎಂದು ಮೊಂಡುವಾದ ಮಾಡುತ್ತಾರೆ.

ಇವರೆಲ್ಲರಿಗೆ ಗೌರಿ ಅಷ್ಟು ಪ್ರೀತಿ ಪಾತ್ರಳಾಗಿದ್ದರೆ, ಅವಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದೇ ಹೌದಾಗಿದ್ದರೆ, ಬಿಜೆಪಿ ಸಂಸದ ಪ್ರಹ್ಲಾ ಜೋಶಿ ಮಾನನಷ್ಟ ಪ್ರಕರಣದಲ್ಲಿ ಕೋರ್ಟ್ ಜೈಲು ಶಿಕ್ಷೆ ವಿಧಿಸಿದಾಗ, ಒಬ್ಬನೇ ಒಬ್ಬನೂ ಅವಳ ನೆರವಿಗೆ, ಸಂತೈಸಲು ಬರಲಿಲ್ಲವೇಕೆ? ಎಲ್ಲರೂ ‘ ಅನುಭವಿಸಲಿ ಬಿಡು, ಮಾಡಿದ್ದುಣ್ಣೋ ಮಹಾರಾಯ’ ಎಂದರು. ಸ್ವತಃ ಇದನ್ನು ಗೌರಿಯೇ ತಮ್ಮ ಆಪ್ತರ ಮುಂದೆ ಹೇಳಿಕೊಂಡು ದುಃಖಿಸಿದ್ದಳಂತೆ. ‘ನನ್ನವರು ಎನ್ನುವವರು ಯಾರೂ ಇಲ್ಲ, ನಾನು ಎಲ್ಲರಿಗೂ ಬೇಡವಾದೆನಾ?’ ಯಾರೂ ಸಹಾಯಕ್ಕೆ ಬರುವುದು ಬೇಡ, ಆದರೆ ಒಂದು ಸಮಾಧಾನದ ಮಾತನ್ನು ಹೇಳಲಿಲ್ಲ’ ಎಂದು ನೊಂದು ನುಡಿದಿದ್ದಳಂತೆ. ಆದರೆ ಆಕೆಯ ಗುರುತು-ಪರಿಚಯವಿಲ್ಲದವರು, ಲಘುವಾಗಿ ಕಂಡವರು, ಲಂಕಿಣಿ, ಲಂಕೇಶ್ ಪತ್ರಿಕೆ ಎಂದು ಗೇಲಿ ಮಾಡಿದವರು, ಗಾಂಧಿ ಬಜಾರಿನ ಬಜಾರಿ, ಲಂಕೇಶರ ಕೆಟ್ಟ ಕೃತಿ ಎಂದು ಕುಹಕವಾಡಿದವರು, ಇಂದ್ರಜಿತ್‌ನ ಹಿರಿಯಣ್ಣ ಎಂದೆಲ್ಲ ಕಟಕಿಯಾಡಿದವರು, ನಕ್ಸಲ್ ಹೋರಾಟದ ನಪುಂಸಕವಾದಿ, ನಿಜವಾದ ‘ಗುಂಡು’ಗಲಿ ಎಂದು ಅಪಹಾಸ್ಯ ಮಾಡುತ್ತಿದ್ದ ಪಕ್ಕಾ ಎಡಚರರೇ, ಈಗ ಆಕೆಯ ಹತ್ಯೆಯಾದಾಗ ‘ ನಾನೂ ಗೌರಿ’ ಎಂದು ಆರ್ಭಟಿಸುತ್ತಿದ್ದಾರೆ. ಇವರಿಗ್ಯಾರಿಗೂ ಬದುಕಿದ್ದ ಗೌರಿ ಬಗ್ಗೆ ಅಭಿಮಾನವಾಗಲಿ, ಪ್ರೀತಿಯಾಗಲಿ, ಕಾಳಜಿಯಾಗಲಿ ಇರಲಿಲ್ಲ. ಅವಳು ಸತ್ತ ನಂತರ ತಮ್ಮ ಅಸ್ತಿತ್ವಕ್ಕಾಗಿ ಗೌರಿಯ ಬೇತಾಳದ ಬೆನ್ನನ್ನೇರಿದ್ದಾರೆ. ಇದು ನಿಜಕ್ಕೂ ಗೌರಿಗೆ ಮಾಡಿದ ದ್ರೊಹವಲ್ಲದೇ ಮತ್ತೇನು?

ವಿಚಾರವಾದಿಗಳು ಹಾಗೂ ಪ್ರಗತಿಪರರ ಚಿಂತನೆಯ ಮೂಲ ಸೆಲೆಯಿರುವುದೇ ಪೂರ್ವಗ್ರಹಣದ ಸತ್ಯದ ಹುಡುಕಾಟದಲ್ಲಿ . ಆದರೆ ಈಗ ಅವರು ಮಾಡುತ್ತಿರುವುದೇನು? ಗೌರಿ ಸತ್ತ ಕ್ಷಣದಿಂದಲೇ ಯಾರು ಹತ್ಯೆ ಮಾಡಿದ್ದಾರೆಂಬ ತೀರ್ಮಾನಕ್ಕೆ ಅವರೆಲ್ಲ ಬಂದುಬಿಟ್ಟಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರೂ ಇಂಥವರೇ ಗೌರಿಯನ್ನು ಕೊಂದಿದ್ದಾರೆಂದು ಹೇಳಿಬಿಟ್ಟಿದ್ದಾರೆ. ಇಷ್ಟಾದ ನಂತರ ಸಿದ್ದರಾಮಯ್ಯನವರ ಸರಕಾರ ಎಸ್‌ಐಟಿಗೆ ಈ ಹತ್ಯೆ ಪ್ರಕರಣದ ತನಿಖೆಯನ್ನು ಏಕೆ ವಹಿಸಿತು? ಹತ್ಯೆ ಮಾಡಿದ್ದು ಇಂಥವರೇ ಎಂದ ಮೇಲೆ ಹಂತಕರ ಸುಳಿವು ನೀಡಿದವರಿಗೆ ಹತ್ತುಲಕ್ಷ ರೂಪಾಯಿ ಘೋಷಿಸಿದ್ದೇಕೆ? ಹತ್ಯೆ ಮಾಡಿದವರು ಇವರೇ ಎಂಬುದು ಎಡಚರರಿಗೆ ಗೊತ್ತಾದ ಮೇಲೆ ಇನ್ನೂ ಏಕೆ ಯಾರೂ ಈ ಹತ್ತು ಲಕ್ಷ ರೂಪಾಯಿಗೆ failed philosophy ಮಾಡಿಲ್ಲ? ಇಷ್ಟೆಲ್ಲ ಆದರೂ ಹಂತಕರ ಸುಳಿವು ಸಿಕ್ಕಿಲ್ಲ. ಯಾರು ಕೊಂದಿದ್ದಾರೆಂಬುದು ಗೊತ್ತಾಗುತ್ತಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ಹೇಳುತ್ತಿರುವುದೇಕೆ? ಸ್ವತಃ ಮುಖ್ಯಮಂತ್ರಿಯವರಿಗೆ, ಗೃಹಸಚಿವರಿಗೆ ಗೊತ್ತಿಲ್ಲದ ಸತ್ಯ ಎಡಚರರಿಗೆ ಗೌರಿಯವರನ್ನು ಕೊಂದಿರುವವರು ಯಾರು ಅಂತ ಗೊತ್ತು, ಆದರೆ ಹೆಸರು ಗೊತ್ತಿಲ್ಲ ಅಂದಂತಾಯಿತು! ಇದೆಂಥ ಬಾಲಿಶ ವಾದ?!

ಗೌರಿ ಲಂಕೇಶರನ್ನು ಕೊಂದವರಾರು ಎಂದು ಯಾವುದೇ ಎಡಚರರನ್ನು ಕೇಳಿ, ತಟ್ಟನೆ ಆರ್‌ಎಸ್‌ಎಸ್‌ನವರು ಅಂತಾರೆ. ಅದೇ ಉಸಿರಿನಲ್ಲಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್‌ಳನ್ನು ಕೊಂದವರು ಯಾರೆಂದು ಕೇಳಿ, ಅದಕ್ಕೆ ‘ ತನಿಖೆ ನಡೆಯುತ್ತಿದೆ, ಅದು ಪೂರ್ಣಗೊಳ್ಳಲಿ, ಆಗ ಗೊತ್ತಾಗುತ್ತದೆ’ ಅಂತಾರೆ. ಗೌರಿಗೊಂದು ನ್ಯಾಯವಾ? ಸುನಂದಾ ಪುಷ್ಕರ್‌ಗೊಂದು ನ್ಯಾಯವಾ? ಗೌರಿ ಹತ್ಯೆ ಪ್ರಕರಣದ ತನಿಖೆ ಮುಗಿಯುವವರೆಗೆ, ಎಡಚರರಿಗೇಕೆ ಕಾಯುವ ಸಹನೆಯಿಲ್ಲ? ಸುನಂದಾ ಸತ್ತಾಗ ಏಕೆ ಎಡಚರರು ಬೀದಿಗಿಳಿಯಲಿಲ್ಲ? ಸುನಂದಾ ಜೀವಕ್ಕೆ ಹಾಗಾದರೆ ಬೆಲೆಯಿಲ್ಲವಾ? ಸುನಂದಾ ಸಾವಿನ ಬಗ್ಗೆ ರಾಹುಲ್‌ಗಾಂಧಿಯಾಗಲಿ, ಸೋನಿಯಾ ಗಾಂಧಿಯಾಗಲಿ ಈ ತನಕ ಹೇಳಿಕೆ ನೀಡಿಲ್ಲ? ‘ ನಾನೂ ಸುನಂದಾ’ ಎಲ್ಲೂ ಕಾಣಲೇ ಇಲ್ಲವಲ್ಲ?

ಸತ್ತವರು ಒಳ್ಳೆಯ ಕೆಲಸ ಮಾಡಿದ್ದರೆ, ಒಳ್ಳೆಯ ಕೆಲಸ ಮಾಡದಿದ್ದಾಗಲೂ ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ. ಒಳ್ಳೆಯ ಕೆಲಸ ಮಾಡದಿದ್ದಾಗಲೂ ಒಳ್ಳೆಯ ಮಾತುಗಳನ್ನು ಹೇಳುವುದು ಸಂಸ್ಕಾರ ಹಾಗೂ ಶಿಷ್ಟಾಚಾರ. ಆದರೆ ಬದುಕಿದ್ದಾಗಲೆಲ್ಲ ಮನೆಹಾಳು ಕೆಲಸ ಮಾಡಿದವರಿಗೂ ಒಂದು ಸಾಂತ್ವನದ ನುಡಿ ಹೇಳುವುದು ಸಂಪ್ರದಾಯ. ಒಬ್ಬ ಕಳ್ಳ, ಕಟುಕನಿಗೂ ನಮ್ಮ ಸಮಾಜ ಗೌರವಪೂರ್ಣ ವಿದಾಯವನ್ನೇ ಬಯಸುತ್ತದೆ. ಯಾರ ಸಾವೇ ಆಗಲಿ, ಅದು ಸಂಭ್ರಮಿಸುವಂಥದ್ದಲ್ಲ. ಸಾವಿನಲ್ಲಿ ಎಲ್ಲ ದ್ವೇಷ, ಜಗಳಗಳೂ ಚುಕ್ತಾ ಆಗಲೇಬೇಕು. ಹೊಸ ಲೆಕ್ಕಾಚಾರಕ್ಕೆ ಆಸ್ಪದವೇ ಇಲ್ಲ. ಎಲ್ಲ ರಗಳೆಗಳನ್ನು ಮಟ್ಟಸ ಮಾಡುವ ಸಾಮರ್ಥ್ಯ ಸಾವಿಗಿದೆ. ಹಾಗೆಂದು ಸ್ಮಶಾನ ಸೇರಿದವರನ್ನು ಹುತಾತ್ಮ, ಮಹಾತ್ಮ ಎಂದು ಎಬ್ಬಿಸಿ ‘ ಸ್ಮಾರಕ’ದಲ್ಲಿ ತಂದು ಮಲಗಿಸುವುದನ್ನು ಸೂತಕದ ಮನಸ್ಸು ಇಷ್ಟಪಡುವುದಿಲ್ಲ ಎಂಬುದು ಅಷ್ಟೇ ಸತ್ಯ.

ಸಾವಿನಲ್ಲಿ ಎಡ-ಬಲ ಎಂಬ ವಾದವೇ ಅರ್ಥಹೀನ ಹಾಗೂ ಹೇಯ. ಯಾರ ಸಾವಾದರೂ ಅದು ಸಾವೇ. ಅದರಲ್ಲೂ ವಿಚಾರಕ್ಕೆ ಸೋಲೋಣ. ವಿಚಾರವನ್ನು ಒಪ್ಪದೇ ಪ್ರತಿಭಟಿಸೋಣ. ಆದರೆ ವಿಚಾರ ಮಂಡಿಸಿದವರನ್ನು ಮುಗಿಸಿಬಿಡುವುದನ್ನು ಸಹಿಸುವುದು ಅಸಾಧ್ಯ. ಆ ಕೃತ್ಯವನ್ನು ಕಮಂಗಿಗಳೇ ಮಾಡಲಿ, ಭಜರಂಗಿಗಳೇ ಮಾಡಲಿ ಹಾಗೆಂದು ಸತ್ತವರ ಹೆಸರು ಹೇಳಿಕೊಂಡು ಸೂತಕವನ್ನು ಮಾರ್ಕೆಟ್ ಮಾಡುವುದೂ ಅಸಹ್ಯ. ಹತ್ಯೆಯನ್ನೇ ತಮಗಾಗದವರ ವಿರುದ್ಧ ಹತ್ಯಾರವನ್ನಾಗಿ ಮಾಡಿಕೊಳ್ಳುವುದು ಇನ್ನೂ ಅಪಾಯಕಾರಿ. ‘ಕಲಬುರ್ಗಿ,ಕಲಬುರ್ಗಿ’ ಎಂದು ಗಂಟಲು ಹರಿದುಕೊಂಡವರಿಗೆ ಈಗ ಹೊಸ ಹತ್ಯಾರ ಸಿಕ್ಕಿದಂತಾಗಿದೆ.

ಇವರು ತಮ್ಮ ವಾದ- ಮಂಡನೆಗೆ, ಅಸ್ತಿತ್ವಕ್ಕೆ ಹಾಗೂ ವಿರೋಧಿಗಳನ್ನೂ ಹಣಿಯಲು ಕಲಬುರ್ಗಿಯವರನ್ನು ಗುರಾಣಿಯನ್ನಾಗಿ ಉಪಯೋಗಿಸಿಕೊಂಡರು.ಈಗ ಅವರ ಕೈಗೆ ಗೌರಿಯೆಂಬ ಹತ್ಯಾರ ಸಿಕ್ಕಿದೆ. ಆ ಗುರಾಣಿ, ಹತ್ಯಾರ ಬಳಸಿ ಇವರು ತಮ್ಮನ್ನು ರಕ್ಷಿಸಿಕೊಂಡು, ಬಚಾವ್ ಆಗುತ್ತಾರೆ. ದಂಧೆ ಮಾಡುತ್ತಾರೆ, ಕೆಲವೊಮ್ಮೆ ಕಸುಬಿಗಿಂತ ಉಪಕಸುಬೇ ಲಾಭದಾಯಕವೆಂಬುದು ಅಂಥವರಿಗೆ ಗೊತ್ತಿಲ್ಲದೇನೂ ಅಲ್ಲ. ಇನ್ನು ಐದಾರು ತಿಂಗಳು ಪರವಾಗಿಲ್ಲ. ಗೌರಿ ಹೆಸರಿನಲ್ಲಿ ಹೋರಾಟ, ಪ್ರತಿಭಟನೆಗಳು ಸಹ ಒಂದು ಉಪ ‘ಕಸುಬು’ಆಗುತ್ತದೆ. ಈ ಕಾರಣದಿಂದ ಈ ವಿಷಯವನ್ನು ಎಡಚರರು ಜೀವಂತವಾಗಿಡುತ್ತಾರೆ. ಕಾರಣ ಗೌರಿ ಹುತಾತ್ಮರಾಗುವುದರಲ್ಲಿ ಅವರಿಗೆ ಲಾಭವಿದೆ. ಈ ಕೈಂಕರ್ಯ ಈಡೇರಲು ಪನ್ಸಾರೆ, ದಾಬೋಲಕರ್, ಕಲಬುರ್ಗಿಯನ್ನೆಲ್ಲ ಪ್ರತಿಮೆಗಳಾಗಿ ಬಳಸಿಕೊಳ್ಳುತ್ತಾರೆ.

ನನ್ನ ಆತಂಕವಿರುವುದು ಇದಲ್ಲ. ಇವರೆಲ್ಲರ ಹಂತಕರು ಆರೆಸ್ಸಿಸ್ಸಿನವರೋ, ಬಲಪಂಥೀಯರೊ ಆಗಿರುವುದು ತನಿಖೆಯಿಂದ ಸಾಬೀತಾದರೆ ಗಲ್ಲಿಗೇ ಏರಿಸಬೇಕು. ಮಾಫು ಬೇಡವೇ ಬೇಡ. ನನ್ನ ಆತಂಕವಿರುವುದು, ಒಂದು ವೇಳೆ ಕಲ್ಬುರ್ಗಿಯೋ, ಗೌರಿಯೋ ಎಡ-ಬಲಗಳ ಸಂಘರ್ಷದ ಹೊರತಾಗಿ ಬೇರಾವುದೋ ಸ ಕಾರಣಗಳಿಗೆ ಅಥವಾ ಕೌಂಟುಂಬಿಕ ಕಾರಣಗಳಿಗೆ ಅಥವಾ ಸ್ವಯಂಕೃತ ಅಪರಾಧಗಳಿಗೆ ಹತ್ಯೆಗೀಡಾಗಿದ್ದು ತನಿಖೆಯಿಂದ ಸಾಬೀತಾದರೆ ಈ ಎಡಚರರ ಮುಂದಿನ ಗತಿಯೇನು? ಆಗ ಅವರ ಪ್ರತಿಕ್ರಿಯೆ ಹೇಗಿದ್ದೀತು? ಹುತಾತ್ಮರನ್ನಾಗಿಸಿದವರ ಬಗ್ಗೆ ಹೇಳಿದ ಹಸಿಹಸಿ ಸುಳ್ಳುಗಳನ್ನೆಲ್ಲ ಹಾಗೇ ನುಂಗುತ್ತಾರಾ? ಉಗುಳುತ್ತಾರಾ?

ಅದೇನೇ ಇರಲಿ. ಗೌರಿಯ ತತ್ವ(?) ಸಿದ್ಧಾಂತ(?) ಹಾಗೂ ವಿಚಾರ (?) ಗಳನ್ನು ಹಾಡಿ ಹೊಗಳುವವರ ಅನಿವಾರ‌್ಯತೆ, ಅಸಹಾಯಕತೆ, ಆಷಾಡಭೂತಿತನ ಎಂಥವರಿಗಾದರೂ ಅರ್ಥವಾಗುವಂತದ್ದು. ಪಾಪ ಕೆಲವರಿಗೆ ಅಂಥ ಮನಸ್ಥಿತಿ ಹಾಗೂ ಪರಿಸ್ಥಿತಿಗಳಿರುತ್ತವೆ. ಏನೂ ಮಾಡಲು ಆಗುವುದಿಲ್ಲ. ಈ ಸಂದರ್ಭದಲ್ಲಿ ನನಗೆ ಲಂಕೇಶ್ ಅವರು ಸಾಯಲು ಎರಡು ವರ್ಷಗಳ ಮೊದಲು ಆಡಿದ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಲಂಕೇಶ್ ವಿರುದ್ಧ ಮುಂಬೈ ಕೋರ್ಟೊಂದರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಅವರಿಗೆ ಕೋರ್ಟ್ ಮುಂದೆ ಹಾಜರಾಗುವಂತೆ ಸಮನ್ಸ್‌, ವಾರೆಂಟ್ ಹಾಗೂ ನಾನ್‌ಬೇಲಬಲ್ ವಾರಂಟ್ ಹೊರಡಿಸಲಾಗಿತ್ತು. ಆದರೂ ಲಂಕೇಶ್ ಕೋರ್ಟ್‌ಗೆ ಹಾಜರಾಗಿರಲಿಲ್ಲ.

ಒಂದು ದಿನ ಮುಂಬೈನಿಂದ ಬಂದ ಪೊಲೀಸರು ಲಂಕೇಶ ಅವರನ್ನು ಅರೆಸ್ಟ್‌ ಮಾಡಿ ಎತ್ತಾಕಿಕೊಂಡು ಹೋದರು. ‘ ನಾನು ಯಾರು ಗೊತ್ತಾ? ಲಂಕೇಶ್.. ಲಂಕೇಶ್..! ಈ ರಾಜ್ಯದ ಮುಖ್ಯಮಂತ್ರಿ ನನಗೆ ಬಹಳ ಕ್ಲೋಸು. ನನ್ನ ಮೈಮುಟ್ಟಿದರೆ ಹುಷಾರ್’ ಎಂದು ರೋಪು ಹಾಕಿದರು. ಮುಂಬೈ ಪೊಲೀಸರು ಲಂಕೇಶ್‌ಗೆ ತಮ್ಮ ‘ಕೈರುಚಿ’ ತೋರಿಸಿ ಕರೆದುಕೊಂಡು ಹೋದರು. ಆಗ ಗೌರಿ ಕೇಂದ್ರಮಂತ್ರಿಯೊಬ್ಬರ ಮನೆಗೆ ಬಂದು ಅಕ್ಷರಶಃ ಅವರ ಕಾಲನ್ನು ಹಿಡಿದು‘ ಅಪ್ಪನನ್ನು ಬಚಾವ್ ಮಾಡುವಂತೆ ಗೋಗರೆದಳು. ಆಗ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರಕಾರ.

ಗೋಪಿನಾಥ ಮುಂಡೆ ಗೃಹಸಚಿವರು ಹಾಗೂ ಉಪಮುಖ್ಯಮಂತ್ರಿ. ಕೇಂದ್ರ ಸಚಿವರು ಮುಂಡೆಯವರಿಗೆ ಫೋನ್‌ಮಾಡಿ, ಲಂಕೇಶ್ ಅವರ ಗುಣಕಥನ ಹೇಳಿ ಅವರನ್ನು ಬಿಡುಗಡೆ ಮಾಡುವಂತೆ ವಿನಂತಿಸಿಕೊಂಡರು. ಅದೇ ದಿನ ಲಂಕೇಶ್ ಬಿಡುಗಡೆಯಾಯಿತು. ಮೂರು ದಿನ ಮುಂಬೈ ಜೈಲಿನಲ್ಲಿದ್ದು ಅವರು ಹೈರಾಣಾಗಿ ಹೋಗಿದ್ದರು. ಅಂದು ಟಿವಿ ಚಾನೆಲ್, ಸಾಮಾಜಿಕ ಜಾಲತಾಣಗಳು ಇಲ್ಲದ ದಿನವಾಗಿದ್ದರಿಂದ ಅವರ ಬಂಧನ,ಬಿಡುಗಡೆ ಸುದ್ದಿಯಾಗಲೇ ಇಲ್ಲ. ಬೆಂಗಳೂರಿಗೆ ಅಪ್ಪನನ್ನು ಕರೆದುಕೊಂಡು ಬಂದ ನಂತರ ಗೌರಿ ಆ ಕೇಂದ್ರದ ಸಚಿವರಿಗೆ ಹೇಳಿದಳು ‘ ನಿಮ್ಮ ಉಪಕಾರಕ್ಕೆ ಥ್ಯಾಾಂಕ್ಸ್‌. ಆದರೆ ನನ್ನ ಅಪ್ಪ ನಿಮ್ಮ ವಿರುದ್ಧ ಬರೆಯುವುದಿಲ್ಲ ಎಂದು ಭಾವಿಸಬೇಡಿ’ ಆತ್ಮ ಹಾಗೂ ಪರಮಾತ್ಮನಲ್ಲಿ ನಂಬಿಕೆ ಇಲ್ಲದ ಗೌರಿಗೆ ಸದ್ಗತಿ ಸಿಗಲಿ.

4 thoughts on “ಸತ್ತವರ ಬಗ್ಗೆ ಸದಾ ಒಳ್ಳೆಯದನ್ನೇ ಹೇಳಬೇಕು, ಹಾಗಂತ ಹಸಿ ಸುಳ್ಳನ್ನೂ ಹೇಳಬಾರದು!

 1. HIDITA TAPPIDA NADENUDI INDU””JEEVNADA ANIVARYA ANGAVEMBANTE VARTISUTTIRUVADU VIPARYASA!”
  2. SAVINA HINDE NURARU KATRANAGALIRABAHUDU;ADARANTE KOLEYA PRAPATAKKE TANNADE ADA KARTANAGALANNI SIT HUDUKUTTADE ANDARE .
  3. SAYYAMADA VARTANEYANNU NAU INDINA KOLEGALALLI KANUTTILLA!!
  4. ONDE KARANAVENDARE “DAHA” DAHA””” hapahapi.. atrapti.. hatashe manobhavav yendenisuttide.. dhanyavada.

 2. Khandita sadgati sigali Gauri ge!! Matte hutti baarade irali !!

  I dont undersand how people like Gauri can behave as though they dont have any social responsibility while putting their ideologies.!!
  What a daring lady was she!! She should have used her skills/daringness/talents/tactics to uplift humanity and patriotism in society.

  Maanva janma elladakkintha doddadu!! adanna heege waste maadodaa??

 3. ಒನ್ದು ವಾಕ್ಯದಲ್ಲಿ ಮುಗಿಸಬೆಕು ಅನ್ದರೆ ಅವಲಿಗೆ ಮತಿ ಇರಲಿಲ್ಲ ಇವರಿಗೆ (ಯಡಛರಿಗೆ) ಗತಿ ಇಲ್ಲ!!!

 4. avalu jeevantha iddaga malagi… satthaga eddu ninthanthide.. obba hengasu sattha mele avala bagge bareyuthiruva neeve dodda gandasu…

Leave a Reply

Your email address will not be published. Required fields are marked *

six + 6 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top