ತಂತ್ರ, ಕುತಂತ್ರಕ್ಕೆ ದೂಡಿದ ಅತಂತ್ರ ಸಮೀಕ್ಷೆ

Posted In : ಅಂಕಣಗಳು, ಒಳಸುಳಿ

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯ ರಾಜಕೀಯ ಚಿತ್ರಣ ಊಹೆಗೆ ನಿಲುಕುತ್ತಿಲ್ಲ, ಕುತೂಹಲ ತಣಿಸುತ್ತಿಲ್ಲ. ತಾವು ಹತ್ತು ಕೂತಿರುವುದೇ ಗೆಲುವಿನ ಕುದುರೆಯ ಮೇಲೆ, ಗೆಲುವೇನಿದ್ದರೂ ತಮ್ಮದೇ ಎಂದು ಮೂರೂ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಹೇಳಿಕೊಳ್ಳುತ್ತಿವೆ. ಆದರೆ ಬಹಿರಂಗದಲ್ಲಿ ಆಡುತ್ತಿರುವ ಮಾತಿನ ಬಗ್ಗೆ ಆಂತರ್ಯದಲ್ಲಿ ಈ ಪಕ್ಷಗಳ ಮುಖಂಡರಿಗೇ ವಿಶ್ವಾಸ ಇಲ್ಲ. ಅಳೆದು-ತೂಗಿ, ಕೂಡಿ-ಕಳೆದು, ಗುಣಾಕಾರ, ಭಾಗಾಕಾರ ಮಾಡಿ ಅವರೆಲ್ಲ ತಮ್ಮದೇ ಆದ ಲೆಕ್ಕಾಚಾರ ಮಂಡಿಸುತ್ತಿದ್ದಾರೆ. ಇದು ಕೂಡ ಅವರಿಗೆ ಅವರೇ ಸಮಾಧಾನ ಹೇಳಿಕೊಳ್ಳುವ ಪ್ರಕ್ರಿಯೆಗಷ್ಟೇ ಸೀಮಿತ. ಮತದಾರನ ಮತಾಕಾರದ ರೂಪುರೇಷೆ, ಆತನ ಒಲವು-ನಿಲುವು ಇವರಾರಿಗೂ ಇನ್ನೂ ನಿಲುಕಿಲ್ಲ. ಆದರೂ ತಮ್ಮ ಬೆನ್ನನ್ನು ತಾವೇ ಸವರಿಕೊಳ್ಳುವುದನ್ನು ನಿಲ್ಲಿಸಿಲ್ಲ.

ಇರಲಿ, ಈ ರಾಜಕೀಯ ಪಕ್ಷಗಳ ಗೆಲುವಿನ ಏನೇ ಇರಲಿ, ಇಂಡಿಯಾ ಟುಡೆ ಮತ್ತು ಕಾರ್ವಿ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಹೇಳಿದೆ. ಯಾರಿಗೂ ಸ್ಪಷ್ಟ ಬಹುಮತ ಬಾರದೆ, ಒಬ್ಬರು ಸರಕಾರ ರಚನೆ ಮಾಡಲು ಮತ್ತೊಬ್ಬರ ನೆರವು ಬೇಕೇಬೇಕು. ಕಾಂಗ್ರೆಸ್ 90-101, ಬಿಜೆಪಿ 78-86 ಹಾಗೂ ಜೆಡಿಎಸ್ 34-43 ಸ್ಥಾನಗಳನ್ನು ಗಳಿಸಲಿದೆ. ಸರಕಾರದ ಕಿಂಗ್ ಮೇಕರ್ ಜೆಡಿಎಸ್ ಆಗಲಿದೆ ಎಂದು ಹೇಳಿದೆ. ಇದಕ್ಕೂ ಮೊದಲು ಮಾಧ್ಯಮಗಳು, ಖಾಸಗಿ ಸಂಸ್ಥೆಗಳು ಹಾಗೂ ರಾಜಕೀಯ ಆಂತರಿಕವಾಗಿ ನಡೆಸಿರುವ ಸಮೀಕ್ಷೆ ಭಿನ್ನ ಚಿತ್ರಣವನ್ನು ನೀಡಿತ್ತು.

ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದೇ ಹೇಳಿದ್ದವು. ಒಂದೋ ಎರಡೋ ಸಮೀಕ್ಷೆ ಮಾತ್ರ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಂಬಿಸಿತ್ತು. ಆದರೆ ಜೆಡಿಎಸ್ ಸ್ವಂತ ಬಲದ ಮೇಲೆ ಸರಕಾರ ರಚನೆ ಮಾಡುತ್ತದೆ ಎಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಆ ಪಕ್ಷದ ನಾಯಕರು ಮಾತ್ರ ಹಾಗೆಂದು ಪ್ರತಿಪಾದಿಸಿಕೊಂಡಿದ್ದರು. ಅನ್ಯಪಕ್ಷಗಳ ಮಾದರಿಯಲ್ಲಿಯೇ. ಆದರೆ ಈಗ ನಿರ್ಣಾಯಕ ಪಾತ್ರಧಾರಿ ಎಂದು ಪರಿಗಣಿಸಲ್ಪಟ್ಟಿದೆ!
ಇಲ್ಲಿ ಗಮನಿಸಬೇಕಾದ ಒಂದು ವಿಷಯವಿದೆ. ರಾಜಕೀಯ ಎಂಬುದು ನಿಂತ ನೀರಲ್ಲ. ಅದು ಹರಿಯುತ್ತಲೇ ಇರುತ್ತದೆ. ಸಿಕ್ಕ ದಾರಿಗಳನ್ನು ಭೇದಿಸಿಕೊಂಡು ಮುನ್ನುಗ್ಗುತ್ತದೆ.

ಒಂದು ಕಡೆ ಪ್ರಶಾಂತವಾಗಿ, ಮತ್ತೊಂದು ಕಡೆ ಭೋರ್ಗರೆದು, ಮಗದೊಂದೆಡೆ ಧುಮುಕಿ ಓಡುತ್ತಿರುತ್ತದೆ. ಅದರ ದಾರಿ ಹೀಗೇ ಎಂಬ ನಿಷ್ಕರ್ಷೆಯಿಲ್ಲ. ಹಾಗೆಯೇ ಚುನಾವಣೆ ಪೂರ್ವ ಚಿತ್ರಣ ಸಹ. ಚುನಾವಣೆಗೆ ಆರು ತಿಂಗಳು ಮೊದಲುಗೊಂಡು ರಾಜಕೀಯ ಪಕ್ಷಗಳ ಸ್ಥಿತಿ ಗತಿ ತಿಂಗಳು-ಪಾಕ್ಷಿಕವಾಗಿ ರೂಪಾಂತರ ಹೊಂದುತ್ತಾ ಪ್ರಚಲಿತ ಬೆಳವಣಿಗೆಗಳು, ಕಾನೂನು ಸುವ್ಯವಸ್ಥೆ, ನಾಯಕರ ಹೇಳಿಕೆ, ಅಪರಾಧ ಪ್ರಕರಣಗಳು ಈ ರೂಪಾಂತರದ ವಸ್ತುಗಳು. ಸರಕಾರದ ಸಾಧನೆ ಕುರಿತ ಜಾಹೀರಾತುಗಳು, ಕಾರ್ಯಕ್ರಮಗಳು ನಾಯಕರ ಚುನಾವಣೆಪೂರ್ವ ಬಯಕೆಯನ್ನು ಬರೆದಿಡುವ ಸಾಧನವಾಗುತ್ತವೆಯೇ ಹೊರತು ಜನರ ಮನಸ್ಸನ್ನು ಹಿಡಿದಿಡುವ ಅಸ್ತ್ರಗಳಾಗುವುದಿಲ್ಲ. ಏಕೆಂದರೆ ಸರಕಾರ ಮತ್ತು ರಾಜಕೀಯ ಪಕ್ಷಗಳ ಹಣೆಬರಹಕ್ಕೆ ಗೀಟು ಎಳೆಯುವ ಬುದ್ಧಿಮತ್ತೆ ಜನರಲ್ಲಿ ಪ್ರಖರಗೊಂಡಿದೆ. ಹೀಗಾಗಿ ಚುನಾವಣೆಪೂರ್ವ ಸ್ಥಿತಿ ಗತಿ ಊಹೆಗಳನ್ನು ಹಿಂದಿಕ್ಕಿ ಪರಿವರ್ತನೆ ಕಾಣುತ್ತಾ ಹೋಗುತ್ತದೆ.

ಎರಡು ತಿಂಗಳು ಇರುವಾಗಲಂತೂ ತಿರುವು ಮೆರೆಯುತ್ತದೆ. ಚುನಾವಣೆ ದಿನಾಂಕ ಪ್ರಕಟವಾದ ನಂತರವಂತೂ ದಿನಕ್ಕೊಂದು ಚಿಮ್ಮು, ಹೊರಳು. ಹೀಗಾಗಿ ಹಳೆಯ ಸಮೀಕ್ಷೆಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ ಹಾಗೂ ಅದೇ ಕಾಲಕ್ಕೆ ಅದು ಸ್ಥಿರ ಎನ್ನುವಂತೆಯೂ ಇಲ್ಲ. ಆ ಕಾಲಮಾನ, ಸಂದರ್ಭಕ್ಕೆ ಅವು ಸರಿಯಿರಬಹುದು, ಇಲ್ಲದಿರಬಹುದು. ಆದರೆ ಸರಿಯುವ ಕಾಲದೊಳಗೆ ಈ ಎಲ್ಲ ಸಂದರ್ಭಗಳು ವಿಲೀನ ಆಗುವುದರಿಂದ ಪ್ರಸ್ತುತವಷ್ಟೇ ಉಳಿದುಕೊಳ್ಳುತ್ತದೆ, ಮುಖ್ಯವಾಗುತ್ತದೆ. ಇಂಡಿಯಾ ಟುಡೆ, ಕಾರ್ವಿ ಜಂಟಿ ಸಮೀಕ್ಷೆ ಆ ಪ್ರಸ್ತುತದ ಕನ್ನಡಿಯಾಗಿದ್ದು, ರಾಜಕೀಯ ನಾಯಕರ ಲೆಕ್ಕಾಚಾರಗಳನ್ನು ವಿಮರ್ಶೆಗೆ ಒಡ್ಡಿದೆ. ಜತೆಗೆ ಅನುಕೂಲಕರ ತಂತ್ರ ಹೆಣೆಯುವ ಕಾಯಕಕ್ಕೆ ಪಕ್ಷಗಳನ್ನು ಹಚ್ಚಿದೆ.

ನಿಜ, ಇಡೀ ದೇಶದಲ್ಲಿ ಸೊರಗಿದ ಸೋರೆಕಾಯಿಯಂತಾಗಿದ್ದ ಕಾಂಗ್ರೆಸ್‌ಗೆ ಒಂದಷ್ಟು ಜೀವಜಲ ಸ್ಫುರಿಸಿದ ಕೀರ್ತಿ ಸಿದ್ದರಾಮಯ್ಯ ಅವರದ್ದು. ಹೀಗಾಗಿಯೇ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವೆ ಅವಿನಾಭಾವ ಸಂಬಂಧ ಗಟ್ಟಿಯಾಗಿದೆ. ಹೈಕಮಾಂಡ್ ಕೃಪಾಕಟಾಕ್ಷ ತಮಗಿದೆ ಎಂದೇ ಸಿದ್ದರಾಮಯ್ಯ ತಮ್ಮ ‘ಡೋಂಟ್ ಕೇರ್’ ವ್ಯಕ್ತಿತ್ವನ್ನು ಮತ್ತಷ್ಟು ಚೂಪು ಮಾಡಿಕೊಂಡು ಎದುರಾಳಿಗಳನ್ನು ಮಾತಿನಲ್ಲಿ ತಿವಿದಿದ್ದೇ ತಿವಿದದ್ದು. ಮುಂದಿನ ಬಾರಿಯೂ ತಾವೇ ಸಿಎಂ ಮುಂದಿನ ಚುನಾವಣೆಯಲ್ಲಿ ಬೆಂಬಲಿಗ ಪಡೆ ವೃದ್ಧಿಸಿಕೊಳ್ಳಬೇಕೆಂದು 150 ಕ್ಕೂ ಹೆಚ್ಚು ಹಿಂಬಾಲಕರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಜೆಡಿಎಸ್ ಮತ್ತಿತರ ಪಕ್ಷಗಳನ್ನು ತೊರೆದು ಬಂದವರಿಗೆ ಮಣೆ ಹಾಕಲಾಗಿದೆ. ಕಳೆದೆರಡು ದಶಕಗಳಿಂದಲೂ ಮೂಗಿನ ತುಪ್ಪವಾಗಿಯೇ ಪರಿಣಮಿಸಿರುವ ಸಿಎಂ ಪದವಿ ಪ್ರಬಲ ಆಕಾಂಕ್ಷಿ, ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇದು ಕೆರಳಿಸಿಟ್ಟಿದೆ.

ಟಿಕೆಟ್ ಗಿಟ್ಟಿಸಿಕೊಂಡ ಸಿದ್ದರಾಮಯ್ಯ ಬೆಂಬಲಿಗರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಗೆದ್ದುಬಂದರೂ ಸಿಎಂ ಪದವಿ ಮತ್ತೆ ಮೊಣಕೈ ಜೇನಾಗುತ್ತದೆ ಎಂದೇ ಖರ್ಗೆ ವರಿಷ್ಠರ ಸಮ್ಮುಖದಲ್ಲೇ ಸಿದ್ದರಾಮಯ್ಯ ಜತೆ ಕುಸ್ತಿಗಿಳಿದಿದ್ದಾರೆ. ಅಷ್ಟೇ ಅಲ್ಲ , ಅಭ್ಯರ್ಥಿ ಆಯ್ಕೆ ಸಭೆಯಿಂದ ಎರಡು ಬಾರಿ ನಿರ್ಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೂ ಏನೂ ಮಾಡಲು ತೋಚಿಲ್ಲ. ಲೋಕಸಭೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತಿರುವ ಪರಿಶಿಷ್ಟ ಸಮುದಾಯದ ಗಟ್ಟಿ ಮುಖಂಡ ಖರ್ಗೆ ಅವರನ್ನು ಎದಿರು ಹಾಕಿಕೊಳ್ಳುವಂತೆಯೂ ಇಲ್ಲ. ಹಾಗೆಂದು ಸುಮ್ಮನೆ ಇರುವಂತೆಯೂ ಇಲ್ಲ. ವರಿಷ್ಠರು ಬಹಳ ಸಂಯಮ ಮತ್ತು ನಾಜೂಕಿನಿಂದ ಬಗೆಹರಿಸುವ ಯತ್ನ ಮಾಡಿದ್ದಾರೆ. ಆದರೆ ಖರ್ಗೆ ಅವರು ಇಲ್ಲೊಂದು ಸಂದೇಶ ರವಾನೆ ಮಾಡಿದ್ದಾರೆ.

ಮುಂದಿನ ಸಿಎಂ ಗಾದಿಗೆ ತಾವೂ ಒಬ್ಬ ಪ್ರಬಲ ಆಕಾಂಕ್ಷಿ, ‘ದಲಿತ ಸಿಎಂ’ ಕೂಗಿನ ಪ್ರತಿನಿಧಿ ತಾವೆಂದು. ಆದರೆ ಎರಡು ಬಾರಿ ಖರ್ಗೆ ಸಭಾತ್ಯಾಗ ಮಾಡಿದರೂ ವರಿಷ್ಠರು ಮೌನದ ಮೊರೆ ಹೋದದ್ದು ಮಾತ್ರ ಕುತೂಹಲದೊಳಗೆ ಕುತೂಹಲ ಇಣುಕುವಂತೆ ಮಾಡಿದೆ. ಅವರು ಹಾಗೆ ಯೋಚಿಸಲು ಪ್ರೇರಕವಾಗಿರುವುದು ಅತಂತ್ರ ವಿಧಾನಸಭೆ ನಿರ್ಮಾಣ ಸಾಧ್ಯತೆ. ಒಂದೊಮ್ಮೆ ಜೆಡಿಎಸ್ ಜತೆ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದೇ ಆದಲ್ಲಿ ಯಾವುದೇ ಕಾರಣಕ್ಕೂ ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯ ಸಿಎಂ ಆಗಲು ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ಒಪ್ಪುವುದಿಲ್ಲ ಎಂದು ಖರ್ಗೆ ಅವರಿಗೆ ಚೆನ್ನಾಗಿ ಗೊತ್ತು.

ಜೆಡಿಎಸ್ ಸಿಎಂ ಗಾದಿಗೆ ಪಟ್ಟು ಹಿಡಿಯಬಹುದು. 2004ರಲ್ಲಿ ಆದಂತೆ ಕಾಂಗ್ರೆಸ್ಸಿಗೆ ಸಿಎಂ ಪದವಿ ಬಿಟ್ಟುಕೊಟ್ಟರೆ ತಾವೇ ಆ ಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಬೇಕೆಂಬ ಅಭೀಪ್ಸೆ ಅವರಿಗಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದರೆ ಸಿದ್ದರಾಮಯ್ಯ ಅವರನ್ನು ಅಲ್ಲಾಡಿಸುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ಹೀಗಾಗಿ ಅತಂತ್ರ ವಿಧಾನಸಭೆ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ.

ಗೌಡರ ಪಾಳೆಯದಲ್ಲಿ ಪಳಗಿರುವ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಗೊತ್ತಿಲ್ಲದೇ ಏನಿಲ್ಲ. ಒಂದೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜತೆ ಕಾಂಗ್ರೆಸ್ ಹೋಗಬಾರದೆಂದೇ ಅವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಗೌಡರ ಕುಟುಂಬ ಸದಸ್ಯರನ್ನು ಕೆಣಕಿ, ಟೀಕಿಸಿ ಅವರನ್ನು ಕಾಂಗ್ರೆಸ್ ಮೈಮೇಲೆ ಎಳೆದುಕೊಳ್ಳುವ ಪ್ರಯತ್ನ ಮಾಡಿರುವುದು. ಯಾವುದೇ ಕಾರಣಕ್ಕೂ ಗೌಡರ ಕುಟುಂಬ ಸದಸ್ಯರು ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೇ ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಾಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿಸಿದ್ದಾರೆ. ಇದರ ಹಿಂದೆ ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಸಾಧ್ಯವಾಗಬಾರದು. ತಮಗೆ ದಕ್ಕದ ಸಿಎಂ ಪದವಿ ಕಾಂಗ್ರೆಸ್‌ನಲ್ಲಿ ಬೇರಾರಿಗೂ ಸಿಗಬಾರದು. ಬೇಕಿದ್ದರೆ ಬಿಜೆಪಿ ಜತೆ ಜೆಡಿಎಸ್ ಹೋಗಿ ಮತ್ತೊಮ್ಮೆ ‘ಜಾತಿ ಕೆಡಿಸಿಕೊಳ್ಳಲಿ’ ಎಂಬ ಮುಂದಾಲೋಚನೆಯೂ ಅಡಗಿದೆ.

ಇನ್ನೊಂದೆಡೆ ಪ್ರದೇಶ ಕಾಂಗ್ರೆಸ್ ಡಾ. ಜಿ. ಪರಮೇಶ್ವರ ಅವರು ಕೂಡ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಿಗಿತು ನಿಂತಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೆ ಮೊದಲು ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದಿರಿಸುತ್ತೇವೆ, ವರಿಷ್ಠರು ಬಯಸಿದರೆ ಸಿದ್ದರಾಮಯ್ಯ ಅವರೇ ಮುಂದಿನ ಬಾರಿಯೂ ಸಿಎಂ ಆದರೆ ತಪ್ಪೇನು ಎನ್ನುತ್ತಿದ್ದ ಪರಮೇಶ್ವರ, ಚುನಾವಣೆ ದಿನಾಂಕ ಘೋಷಣೆ ನಂತರ ಪ್ಲೇಟು ಬದಲಿಸಿದ್ದಾರೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಣಯಿಸುತ್ತದೆ. ಅಲ್ಲಿಯವರೆಗೂ ಮುಂದಿನ ಸಿಎಂ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಅಂದರೆ ಹಿಂದೆ ತಾವೇ ಎಬ್ಬಿಸಿದ್ದ ದಲಿತ ಸಿಎಂ ಕೂಗಿಗೆ ಈಗಲೂ ತಾವೇ ಒಡೆಯ ಎಂಬುದನ್ನು ಶ್ರುತಪಡಿಸುವ ತವಕ ಅವರಲ್ಲಿದೆ. ಹಿಂದಿನ ಚುನಾವಣೆಯಲ್ಲಿ ತಾವು ಸೋಲಲು ಸಿದ್ದರಾಮಯ್ಯ ಕೃಪಾಪೋಷಿತ ಒಳತಂತ್ರ ಕಾರಣ ಎಂಬ ನಂಬಿಕೆ ಪರಮೇಶ್ವರ ಅವರಲ್ಲಿ ಪ್ರಬಲವಾಗಿದೆ. ಅದಕ್ಕೆ ಸೇಡು ತೀರಿಸಿಕೊಳ್ಳಬೇಕೆಂದು ಕಾಯುತ್ತಿದ್ದಾರೆ. ಆದರ ಜತೆಗೆ ಮುಂದಿನ ಸಿಎಂ ಬಗ್ಗೆ ಒಗ್ಗರಣೆ ಬೇರೆ. ಅಂದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಕಳೆದ ಸುಲಭ ಅಲ್ಲ ಎಂಬುದಕ್ಕೆ ಖರ್ಗೆ ಮತ್ತು ಪರಮೇಶ್ವರ ನಡೆ-ನುಡಿ ಮುನ್ನುಡಿಯಾಗಿದೆ.

ಇನ್ನೊಂದೆಡೆ ಬಿಜೆಪಿ ಪಾಳೆಯದಲ್ಲೂ ಅತಂತ್ರ ವಿಧಾನಸಭೆ ಸಾಧ್ಯತೆ ಸಂದರ್ಭ ಚುನಾವಣೆಪೂರ್ವ ಚಲನಶೀಲತೆಗೆ ಕಾರಣವಾಗಿದೆ. ಒಬ್ಬೊಬ್ಬ ನಾಯಕರು ಒಂದೊಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಾಗೆ ನೋಡಿದರೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಂಡರು ಕಿತ್ತಾಡಿಕೊಂಡಷ್ಟು ಬಿಜೆಪಿ-ಜೆಡಿಎಸ್ ನಾಯಕರು ಕೂಗಾಡಿಕೊಂಡಿಲ್ಲ. ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಜರಿದಿದ್ದಕ್ಕೆ ಹೀಗಾಗಿದೆಯೋ ಅಥವಾ ಕಾಂಗ್ರೆಸ್ ನಾಯಕರು ಹಾಗೆ ಹೇಳಿದರೆಂದು ಒಂದು ನೋಡಿಯೇ ಬಿಡೋಣ ಎಂದು ಬಿಜೆಪಿ-ಜೆಡಿಎಸ್ ಒಳ ಶಪಥ ಮಾಡಿಕೊಂಡಿವೆಯೋ ಗೊತ್ತಾಗುತ್ತಿಲ್ಲ. ಆದರೆ ಮೈತ್ರಿ ಸರಕಾರದ ಯಾತ್ರೆ ಸಂಭವ ಜೆಡಿಎಸ್-ಬಿಜೆಪಿಯನ್ನು ಪರಸ್ಪರ ಮೃದುಧೋರಣೆಯ ಆಲಿಂಗನಕ್ಕೆ ದೂಡಿರುವುದು ಸುಳ್ಳಲ್ಲ. ಬಿಜೆಪಿ ಪಾಳೆಯದಲ್ಲಿ ಯಡಿಯೂರಪ್ಪ ವಿರೋಧಿಗಳದು ಒಂದು ಚಿಂತನೆ ಇದೆ.

ಈಗಾಗಲೇ ಸಿಎಂ ಅಭ್ಯರ್ಥಿ ಎಂದು ಘೋಷಿತವಾಗಿರುವ ಯಡಿಯೂರಪ್ಪ ಅವರಿಗೆ ಆ ಸ್ಥಾನ ತಪ್ಪಿಸಲು ದೇವೇಗೌಡರೇ ಸರಿಯಾದ ದಾಳ ಎಂದು ಅವರು ಬಗೆದಿದ್ದಾರೆ. ಜೆಡಿಎಸ್‌ಗೆ ಸಿಎಂ ಪಟ್ಟ ಬಿಟ್ಟುಕೊಟ್ಟರಷ್ಟೇ ಮೈತ್ರಿ ಇಲ್ಲದಿದ್ದರೆ ಸರಕಾರವೂ ಅಧಿಕಾರವೂ ಇಲ್ಲ ಎಂಬ ಸ್ಥಿತಿ ತಂದಿಡಬೇಕು ಎಂದು ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿಗಳು ಹಾತೊರೆಯುತ್ತಿದ್ದಾರೆ. ಮತ್ತೊಮ್ಮೆ ಯಡಿಯೂರಪ್ಪ ಸಿಎಂ ಆಗುವುದು ಅವರಿಗೆ ಸುತರಾಂ ಇಷ್ಟವಿಲ್ಲ. ತಮಗೆ ಸಿಗದ್ದು ಯಡಿಯೂರಪ್ಪ ಅವರಿಗೂ ದಕ್ಕುವುದು ಬೇಡ ಎಂಬ ಈರ್ಷೆಯುಕ್ತ ಬಯಕೆ ಅವರದು. ಉಪ ಮುಖ್ಯಮಂತ್ರಿ ಪದವಿ ಬಂದರೆ ಯಡಿಯೂರಪ್ಪ ಅದನ್ನು ಒಪ್ಪಿಕೊಳ್ಳುವುದಿಲ್ಲ. ಬೇರಾರನ್ನಾದರೂ ಕೂರಿಸಬಹುದು. ಒಂದೊಮ್ಮೆ ಸಿಎಂ ಗಾದಿ ಬಿಟ್ಟುಕೊಟ್ಟರಷ್ಟೇ ಮೈತ್ರಿ ಎಂದು ಬಿಜೆಪಿ ವರಿಷ್ಠರು ಹಠ ಹಿಡಿದರೆ ಯಡಿಯೂರಪ್ಪ ಅವರನ್ನು ಬಿಟ್ಟು ಹೇಳಿದವರನ್ನು ಮಾಡಿದರೆ ಮಾತ್ರ ಆಗಬಹುದು ಎಂದು ಗೌಡರಿಂದಲೇ ಹೇಳಿಸಬೇಕು ಎನ್ನುವ ಇರಾದೆಯೂ ಅವರದಾಗಿದೆ.

ಆದರೆ ಈ ಹಿಂದೆ ಬಿಜೆಪಿ ಜತೆ ಕುಮಾರಸ್ವಾಮಿ ಮೈತ್ರಿ ಸರಕಾರ ಮಾಡಿದ್ದಕ್ಕೆ ತಮ್ಮ ಸಮ್ಮತಿ ಇರಲಿಲ್ಲ. ತಮ್ಮದು ಜಾತ್ಯತೀತ ಪಕ್ಷ, ಕೋಮುವಾದಿಗಳ ಜತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೊಂಡಿದ್ದ ಗೌಡರು ಬಿಜೆಪಿ ಜತೆ ಹೋದರೆ ತಮ್ಮ ಮಾತನ್ನು ತಾವೇ ಧಿಕ್ಕರಿಸಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಯೂ ಇಲ್ಲಿದೆ. ಗೌಡರು ಆಗ ಏನು ಮಾಡುತ್ತಾರೆ? ಕುಮಾರಸ್ವಾಮಿಗೆ ಪಟ್ಟ ದಕ್ಕುವುದಾದರೆ ಸುಮ್ಮನಾಗುತ್ತಾರೆಯೇ? ಅಥವಾ ಹೇಗಿದ್ದರೂ ಕುಮಾರಸ್ವಾಮಿ ಒಮ್ಮೆ ಮುಖ್ಯಮಂತ್ರಿ ಆಗಿದ್ದಾಗಿದೆ. ಇನ್ನು ಹಿರಿಯ ಪುತ್ರ ಎಚ್.ಡಿ. ರೇವಣ್ಣ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಲ್ಲಾದರೂ ಕೂರಿಸಬೇಕೆಂದು ಸಿದ್ದರಾಮಯ್ಯ ಹೊರತಾಗಿ ತಾವು ಹೇಳಿದವರು ಸಿಎಂ ಆಗುವುದಾದರೆ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ ಎನ್ನುತ್ತಾರೆಯೇ? ಇದರಿಂದ ತಾವು ಹಿಂದೆ ಪ್ರತಿಪಾದಿಸಿದ್ದ ಜಾತ್ಯತೀತ ನಿಲುವನ್ನು ಉಳಿಸಿಕೊಂಡಂತೆಯೂ ಆಗುತ್ತದೆ, ತಮ್ಮ ಪ್ರೀತಿಪಾತ್ರ ಪುತ್ರ ರೇವಣ್ಣ ಅವರನ್ನು ಉಪ ಮುಖ್ಯಮಂತ್ರಿ ಮಾಡಿದಂತೆಯೂ ಆಗುತ್ತದೆ.

ಹಿಂದೆ ರಲ್ಲಿ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿ, ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಿದಂತೆ. ಇಲ್ಲ, ತಮ್ಮನ್ನು ವಾಚಾಮಗೋಚರ ನಿಂದಿಸಿರುವ ಕಾಂಗ್ರೆಸ್ ಸಹವಾಸವೇ ಬೇಡ. ಹೇಗಿದ್ದರೂ ಕಾಂಗ್ರೆಸ್ ನಾಯಕರೇ ಜೆಡಿಎಸ್ ಅನ್ನು ಸಂಘ ಪರಿವಾರದ ಅಂಗ ಎಂದಿದ್ದಾರೆ. ಅದನ್ನು ನಿಜ ಮಾಡಿಯೇ ತೋರಿಸಿ ಮುಯ್ಯಿ ತೀರಿಸಿಕೊಳ್ಳೋಣ ಎಂದು ಯೋಚಿಸುತ್ತಾರೆಯೇ? ಯಡಿಯೂರಪ್ಪ ಹೊರತುಪಡಿಸಿ ತಾವು ಹೇಳಿದವರು ಬಿಜೆಪಿಯಲ್ಲಿ ಸಿಎಂ ಆಗುವುದಾದರೆ ಆ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗಳ ಸರಮಾಲೆಯನ್ನೇ ಈ ವಿಧಾನಸಭೆ ನಿರ್ಮಾಣ ಸನ್ನಿವೇಶ ಸೃಷ್ಟಿಸಿಟ್ಟಿದೆ.

ಒಟ್ಟಾರೆ ಮೂರು ಪಕ್ಷಗಳಲ್ಲಿನ ಈಗಿನ ಪರಿಸ್ಥಿತಿ ನೋಡಿದರೆ ಯೂರೂ 100 ರ ಗಡಿ ದಾಟುವಂತೆ ಕಾಣುತ್ತಿಲ್ಲ. ಪಕ್ಷೇತರರು ಮತ್ತಿತರರು ಸರಕಾರ ರಚನೆಯ ಕೊರತೆ ತುಂಬುವಷ್ಟು ಸಂಖ್ಯೆಯಲ್ಲಿ ಗೆದ್ದು ಬರುತ್ತಾರೆ ಎಂಬ ಸೂಚನೆಯೂ ಇಲ್ಲ. ಆದರೆ ಯಾರು ಯಾರ ಜತೆ ಕೈ ಜೋಡಿಸುತ್ತಾರೆ, ಯಾರು ಯಾರನ್ನು ಮಲಗಿಸುತ್ತಾರೆ ಎಂಬ ಪ್ರಶ್ನೆಗಳದಷ್ಟೇ ಈಗ ಆಳ್ವಿಕೆ. ಇದೆಲ್ಲವನ್ನೂ ಮೀರಿದ ಮತ್ತೊಂದು ಸಾಧ್ಯತೆ; ಮತದಾರನ ಮತಬರಹ. ಎಲ್ಲ ಸಮೀಕ್ಷೆ, ತಲೆಕೆಳಗು ಮಾಡುವ ತಾಕತ್ತು ಇರುವುದು ಅವನೊಬ್ಬನಿಗೆ ಮಾತ್ರ!

 

Leave a Reply

Your email address will not be published. Required fields are marked *

five × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top