ವಿಶ್ವವಾಣಿ

ಒಂದಲ್ಲಾ ಎರಡಲ್ಲಾ ನಾಯಕ ರೋಹಿತ್ ಒಡಲು ಕದಡುವ ಕಥನ

ನ್ನ ಹೆಸರು ರೋಹಿತ್. ಪಾಂಡವಪುರ. ಜ್ಞಾನಬಂದು ವಿದ್ಯಾಲಯ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದೇನೆ. ಶಾಲೆಯಲ್ಲಿ ನಾನು ಮೇಡಂ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಮಾಮೂಲಿ ಹುಡುಗನಾಗಿದ್ದೇನೆ. ನಾನು ನಾರ್ಮಲ್ ವ್ಯಕ್ತಿ ಎನ್ನುತ್ತಾರೆ. ದಡ್ಡನೂ ಅಲ್ಲ, ಬುದ್ದಿವಂತನೂ ಅಲ್ಲ ನಾನು. ನನಗೆ ಕಂಪ್ಯೂಟರ್ ಈಸಿ ಸಬ್ಜೆಕ್‌ಟ್. ಮನೆಯಲ್ಲೂ ಕಂಪ್ಯೂಟರ್ ಇದೆ. ಫುಲ್ ಇಂಗ್ಲೀಷ್ ಮೀಡಿಯಂ. ಕನ್ನಡದಲ್ಲಿ ಮಾತನಾಡಿದರೆ ಏನು ಹೊಡೆಯಲ್ಲ. ಕನ್ನಡ ಸಬ್ಜೆಕ್‌ಟ್ನಲ್ಲಿ ಕನ್ನಡನೇ ಮಾತನಾಡಬೇಕು. ಇಂಗ್ಲೀಷ್ ಮೇಲೆ ಎಷ್ಟು ಪ್ರೀತಿ ಉಂಟೋ ಅಷ್ಟೇ ಪ್ರೀತಿ ಕನ್ನಡದ ಮೇಲುಂಟು. ಕರಾಟೆಗೆ ಹೋಗ್ತಿದಿನಿ. ಆರೆಂಜ್ ಬೆಲ್‌ಟ್ ಇದೆ. ಸ್ಪೋರ್‌ಟ್ಸ್ ಏನಿಲ್ಲ. ಸಿನಿಮಾಗೆ ಅತ್ತೆ ಫೋನ್ ಮಾಡಿ ಆಡಿಷನ್ ಇದೆ ಹೋಗು ಅಂದ್ರು. ನಟ ಅಂತ ಒಬ್ಬರಿದ್ದಾರೆ. ಅವರೆ ಆಡಿಷನ್ ಮಾಡಿಸ್ತಿದ್ದಾರೆ ಅಂತ ಗೊತ್ತಾದ ಮೇಲೆ, ಎಲ್ಲಿ ಮಾಡುತ್ತಿದ್ದಾರೆ, ಏನು ಕಥೆ ಅಂತ ಸುಮ್ನೆ ಸಿಂಪಲ್ಲಾಗಿ ಹೋದೆ. ನಾಟಕ ಏನು ಗೊತ್ತಿರಲಿಲ್ಲ. ಅವರು ಏನು ಹೇಳಿದರೋ ಅದನ್ನ ಮಾಡಿದೆ. ಸೆಲೆಕ್‌ಟ್ ಆದೆ. ಅತ್ಕೊಂಡು ಡೈಲಾಗ್ ಹೇಳು ಎಂದರು, ನಕ್ಕೊಂಡು ಡೈಲಾಗ್ ಹೇಳು ಎಂದರು, ಹೇಳಿದೆ, ಸೆಲೆಕ್‌ಟ್ ಆದೆ. ಸಿನಿಮಾ, ಫ್ಯಾಮಿಲಿ ಇದ್ದಂಗಿತ್ತು. ಖುಷಿಯಾಗಿತ್ತು. ಅಪ್ಪ ಅಮ್ಮನ ನೆನಪು ಒಂದೊಂದ್ ಸಲ ಬರ್ತಿತ್ತು ಅಷ್ಟೆ. ಯಾವಾಗಲು ನಕ್ಕೊಂಡು ಇರ್ತಿದ್ವಿ. ಡೈರೆಕ್ಟರ್ ಸರ್ ಬೈಯ್ಯಲಿಲ್ಲ ಹೊಡೆದಿಲ್ಲ. ಯಾವ ತರ ಬೇಕೋ ಆ ತರ ಮಾಡೋ ತನಕ ಇದ್ದರು. ಭಾನು ಇವಾಗಲು ನೆನಪಾಗತ್ತೆ.

ದನ ಕಂಡ್ರೆ ಹೆದರುತ್ತಿದ್ದೆ. ದನದ ಜತೆ ಎರಡು ವಾರ ಟ್ರೈನಿಂಗ್ ಕೊಟ್ರು, ಒಂದು ದನ ಇತ್ತು. ಅದು ಅದರ ಓನರ್ ಜತೆ ತುಂಬ ಜೋರಿತ್ತು. ಅಲ್ಲಿಗೆ ಓಡೋದು ಇಲ್ಲಿಗೆ ಓಡೋದು ಯಾರಿಗ್ ಬೇಕಾದ್ರು ಗುಮ್ಮೋದು. ಅದಕ್ಕೆ ಇನ್ನೊಂದು ಹಸು ತಗೊಂಡು. ಅದು ತುಂಬ ಪಾಪದ ಹಸು. ನಾವು ಏನು ಮಾಡಿದ್ರು ಅದು ಏನೂ ಮಾಡ್ತಿರ್ಲಿಲ್ಲ. ಹಂಗಂತ ನಾನು ಅದಕ್ಕೆ ತೊಂದರೆ ಕೊಟ್ಟಿಲ್ಲ. ನನಗೆ ಸಿನಿಮಾದಲ್ಲಿ ಯಾವುದೂ ಕಷ್ಟ ಎನಿಸಿಲ್ಲ. ನಾನು ಓದಿ ಸೈಂಟಿಸ್‌ಟ್ ಆಗ್ತೀನಿ. ಯಾಕೆಂದ್ರೆ ನಂಗೆ ಇಷ್ಟ. ಸೈಂಟಿಸ್‌ಟ್ ಆಗಿ ಏನು ಮಾಡ್ತೀನಿ ಗೊತ್ತಿಲ್ಲ, ನೋಡೋಣ. ಮತ್ತೆ ಸಿನಿಮಾ ಮಾಡಲ್ಲ. ಓದಬೇಕಲ್ಲಾ. ಶಾರ್ಟ್ ಡಾಕ್ಯುಮೆಂಟರಿ ಆದ್ರೆ ಬೇಗ ಮುಗಿಯತ್ತಲ್ವಾ ಆ ತರದ್ದು ಮಾಡ್ತೀನಿ ಅಷ್ಟೆ. ಸಿನಿಮಾ ನೋಡಿ ಅಜ್ಜ ಅಜ್ಜಿ ಅಮ್ಮ ಅಪ್ಪ ಎಲ್ಲರಿಗೂ ಖುಷಿಯಾಯ್ತು. ಚೆನ್ನಾಗ್ ಮಾಡಿದಿಯಾ ಸುಸ್ತಾಗಲ್ವಾ ನಿನಗೆ ಅಷ್ಟು ಓಡಿದರೆ ಅಂತ ಕೇಳಿದ್ರು. ಆಟಾಡಿ ಆಟಾಡಿ ಅಭ್ಯಾಸ ಈ ಕಡೆ ಕಾಂಪೊಂಡಿಂದ ಆ ಕಡೆ ಹಾರಿ ಅವಸ್ಕೊಳ್ಳೋದು ಎಲ್ಲಾ ಅಭ್ಯಾಸ ಇತ್ತು. ನನ್ನ ಫ್ರೆಂಡ್‌ಸ್ ನೋಡೇ ಇಲ್ಲ. ರಷ್ ಇರತ್ತೆ ನಾಳೆ ನೋಡ್ತೀನಿ, ರಷ್ ಇರತ್ತೆ ನಾಳೆ ನೋಡಾಣ ಅಂತ ಹೇಳ್ತಾನೇ ಇದ್ರು. ರಷ್ ಇಲ್ಲ ಅಂತ ಕೊನೆಗೆ ಥಿಯೇಟರಿನವರೇ ಸಿನಿಮಾನ ತೆಗದೇ ಹಾಕ್‌ಬಿಟ್ರು. ಅಪ್ಪ ಅಮ್ಮ ಅಜ್ಜಿ ತುಂಬಾ ಸಪೋರ್ಟ್ ಕೊಟ್ಟಿದ್ರು. ನನ್ನ ಅಕ್ಕ, ಅಮ್ಮನ ಅಣ್ಣನ ಮಗಳು ಪ್ರಜ್ಞಾ ತುಂಬಾ ಸಪೋರ್ಟ್ ಮಾಡಿದ್ಲು.

ಸೂಜಿಗಲ್ಲಿನಂಥ ಹುಡುಗ

ಎಂದು ಗೆಳೆಯ ಆನಂದ್ ರೋಹಿತ್ ಬಗ್ಗೆ ಹೇಳಿದರೋ ಅಂದೇ ತಕ್ಷಣ ರೋಹಿತ್ ಊರು, ಕುಟುಂಬ, ಹೆತ್ತವರನ್ನ ಕಾಣುವ ತವಕ ನನ್ನದಾಯಿತು. ಮರುದಿನವೇ ಮುಂಜಾನೆ ರಘು (‘ಒಂದಲ್ಲಾ ಎರಡಲ್ಲಾ’ ಚಿತ್ರದ ಅಸೋಸಿಯೇಟ್ ಡೈರೆಕ್ಟರ್) ಮತ್ತು ಅವರ ಗೆಳೆಯ ಕಿರಣ್‌ರೊಂದಿಗೆ ನಾನು ಆನಂದ್ ಸೇರಿಕೊಂಡ್ವಿ. ಮಂಡ್ಯದ ಪಾಂಡವಪುರ ರೋಹಿತ್ ಕುಟುಂಬ ಇರುವ ಸ್ಥಳ. ಮಧ್ಯಾಹ್ನದ ಹೊತ್ತಲ್ಲಿ ಅವರ ಮನೆ ತಲುಪಿದಾಗ ರೋಹಿತ್ ಕಾಲಿಗೆ ಚಕ್ರ ಕಟ್ಟಿಕೊಂಡು ಮನೆಯೊಳಗೇ ಸ್ಕೇಟ್ ಮಾಡುತ್ತಿದ್ದ. ತಕ್ಷಣ ಹಲೋ ನಮಸ್ತೆಯೊಂದಿಗೆ ರೋಹಿತ್ ನಮ್ಮೊಂದಿಗೆ ಮಾತಿಗಿಳಿದದ್ದು ಮೇಲಿನಂತೆ. ಹುಡುಗ ಎಣ್ಗಪ್ಪು. ತುಂಬಾ ಆಕರ್ಷಕ ಕಣ್ಗಳು. ತುಸು ಎತ್ತರ ಕಮ್ಮಿನೇ. ಆ್ಯಕ್ಟಿವ್. ಬುದ್ಧಿ ಮಾಗಿದೆ. ಮಾತು ಮೆಚೂರ್‌ಡ್. ಯಾರೋ ಹೇಳಿಕೊಟ್ಟ ಮಾತಲ್ಲ ಅದು. ಮೊದಲ ನೋಟದಲ್ಲೇ ಸೆಳೆದ ಹುಡುಗ.

ಆದರೆ ನಾವು ಅವನನ್ನ ಈಗ ಕಾಣುವಷ್ಟು ಆತ ಸಶಕ್ತನಲ್ಲ. ಬಿಲ್ಲಿನಾಕಾರದ ಕಾಲ್ಗಳು. ಸಿನಿಮಾದಲ್ಲಿಯೂ ಬಾಗಿದ ಕಾಲ್ಗಳಲ್ಲೇ ತುಂಬಾ ಚುರುಕಾಗಿ ಓಡಾಡಿದ್ದಾನೆ. ಕೆಲವು ಕಿ.ಮೀ.ಗಳಷ್ಟು ಓಡಿದ್ದಾನೆ. ಆದರೆ ಇವನ ನಡೆ ಒಂಥರಾ ಪೆಕರಾ. ಅದು ಇವನ ತಪ್ಪಲ್ಲ. ವಿಧಿ. ಹುಟ್ಟುವಾಗಲೇ ಅವನಿಗೊದಗಿದ ಪ್ರಾರಬ್ಧ. ಅವನ ಎಲುಬಿಗೆ ತಾಕತ್ತಿಲ್ಲ. ಅದು ಮೃದು. ಬಾಗುತ್ತದೆ. ವರ್ಷ ಹೋದಹಾಗೆ, ದೇಹ ಬೆಳೆದ ಹಾಗೇ, ಭಾರ ಜಾಸ್ತಿ ಆಗ್ತಾ ಹೋದ ಹಾಗೆ ಅವನ ಕಾಲ್ಗಳು ಬಾಗುತ್ತವೆ. ದೇಹ ಹೊರಲಾರದೆ ಕುಸಿಯುತ್ತದೆ. ಕ್ಯಾಲ್ಸಿಯಂ ಡಿಫೀಶಿಯೆನ್ಸಿ, ಡಿ. ಥ್ರೀ ಕೊರತೆ. ರೋಹಿತ್ ಅಮ್ಮನೂ ಹುಟ್ಟುವಾಗ ಸರಿಯಿದ್ದು, ನಂತರ ಪೋಲಿಯೋ ಅಂತ ಹೇಳಿಸಿಕೊಂಡು ಬೆಳೆದಂತೆ ನಡೆಯಲಾಗದೆ, ಈ ಕಂಕುಳಲ್ಲಿ ಊರುಗೋಲು ಹಾಕಿಕೊಂಡು ಸಾಗಿಸುತ್ತಾರೆ. ಅಕ್ಷರಶಃ ಅವರ ಎರಡೂ ಕಾಲ್ಗಳು ಬಲ ಕಳಕೊಂಡಿವೆ. ಕಾಲ್ಗಳಿವೆ, ಆದರೆ ಇಲ್ಲ. ಸೊಂಟದ ಕೆಳಗೆ ಸ್ವಾದೀನ ಇಲ್ಲ. ರೋಹಿತ್‌ಗೆ ಈಗಾಗಲೇ ಬಹಳ ರೀತಿಯ ಟ್ರೀಟ್‌ಮೆಂಟ್ ಆಗಿದೆ. ಒಂದು ಮೇಘಾ ಆಪರೇಷನ್ನೂ ಆಗಿದೆ. ಅದು ಆದ ನಂತರವೇ ಮೊದಲು ತೆವಳುತ್ತಿದ್ದವನು ಈಗ ನಡೆಯುತ್ತಾನೆ. ಓಡುತ್ತಾನೆ. ಕರಾಟೆ ಆಡುತ್ತಾನೆ. ಆದರೆ ವರ್ಷ ಕಳೆದಂತೆ ಕಾಲು ಬಾಗುವ, ಭಾರ ಹೊರಲಾರದೆ ಮುಷ್ಕರ ಹೂಡುವ ಸಾಧ್ಯತೆ ಅತ್ಯಧಿಕ. ಆ ಕಾರಣಕ್ಕೆ ಅವನಿಗೆ ಎರಡೂ ಇನ್ನೊಂದು ಮೇಜರ್ ಸರ್ಜರಿ ಆಗಬೇಕಾಗಿದೆ. ಕಾಲು ಬಾಗದಂತೆ ತಡೆದು, ಎರಡೂ ಕಾಲುಗಳಿಗೂ ಸ್ಟೀಲ್ ರಾಡ್ ಅಳವಡಿಸಬೇಕಾಗಿದೆ. ರೋಹಿತ್‌ನ ಭವಿಷ್ಯ ಆ ಆಪರೇಷನ್ ಮೇಲೆ ನಿಂತಿದೆ.

ತಂದೆ ತಾಯಿ ಇಬ್ಬರಿಗೂ

ರೋಹಿತ್ ತಂದೆಯ ಸ್ಥಿತಿಯೂ ಇದೇ. ಅವರ ಹೆಸರು ಎನ್.ಎಸ್. ವೆಂಕಟೇಶ್. ಮೂಲತಃ ನರಸಿಂಹರಾಜಪುರದವರು. ವೆಂಕಟೇಶ್ ತಂದೆ ಸುಬ್ರಮಣ್ಯಂ. ಡಾ ರಾಜ್‌ಕುಮಾರ್ ಒಟ್ಟಿಗೆ ನಾಟಕ ಕಂಪನಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದವರು. ತಾಯಿ ವಿಜಯಲಕ್ಷ್ಮಿ. ನಾಟಕ ಕಂಪನಿಯ ಒಡನಾಟ, ತಿರುಗಾಟ ಕೊನೆಗೆ ಬಂದು ಪಾಂಡವಪುರ. ವೆಂಕಟೇಶ್‌ಗೊಬ್ಬ ಅಣ್ಣ ಇದ್ದಾರೆ, ಅಕ್ಕ ಇದ್ದಾರೆ. ಅವರಿಬ್ಬರೂ ಸರಿಯಾಗಿದ್ದಾರೆ. ವೆಂಕಟೇಶ್ ಹುಟ್ಟುವಾಗ ಅಂದದ, ಚೆಂದದ, ಸದೃಢ ಮಗು. ಎರಡೂವರೆ ವರ್ಷದ ಮಗುವಿದ್ದಾಗ ವಿಪರೀತ ಜ್ವರ ಬಂದ ನೆಪ. ಅದಕ್ಕೆ ವೈದ್ಯರು ಇಂಜೆಕ್ಷನ್ ನೀಡಿದ ಕಾರಣ. ನಂತರ ವೆಂಕಟೇಶ್‌ಗೆ ಸೊಂಟದ ಕೆಳಗೆ ಸ್ವಾದೀನವಿಲ್ಲ. ವೈದ್ಯರು ಖಾಯಂ ಆಗಿ ನೀಡಿದ್ದು ‘ಅವನಿಗೆ ಪೋಲಿಯೋ ಅಟ್ಯಾಕ್ ಆಗಿದೆ’. ಅಲ್ಲಿಂದ ತಾಯಿ ವಿಜಯಲಕ್ಷ್ಮಿ ಅವರು ಮಗನ ಹೊತ್ತು ಸಾಗದ ಆಸ್ಪತ್ರೆಗಳಿಲ್ಲ. ಮೈಸೂರು, ಬೆಂಗಳೂರು ಕಡೆ ಆ ಕಾಲದ ಸುಪ್ರಸಿದ್ಧ ವೈದ್ಯರನ್ನೆಲ್ಲ ಸಂಪರ್ಕಿಸಿ ಶುಶ್ರೂಷೆ ಮಾಡಿಸಿದರೂ ವೆಂಕಟೇಶ್ ಕೊನೆಗೂ ನೆಲದಲ್ಲೇ ತೆವಳುವುದು ತಪ್ಪಲೇ ಇಲ್ಲ. ದಕ್ಷಿಣ ಕನ್ನಡದ ಪುತ್ತೂರಿನ ಆಯುರ್ವೇದ ವೈದ್ಯರೊಬ್ಬರು ಅನಿರೀಕ್ಷಿತವಾಗಿ ಮನೆಗೆ ಬಂದು, ಆರೆಂಟು ಬಗೆಯ ವಿಭೂತಿ ಬಳಸಿ ತಿಂಗಳು ಗಟ್ಟಲೆ ಎಣ್ಣೆ ಮಸಾಜ್ ಮಾಡಿದ ಪರಿಣಾಮ ಎಡಗಾಲನ್ನು ಎಡಗೈಯಿಂದ ಒತ್ತಿಕೊಂಡು ನಡೆದಾಡುವ, ಶಾಲಾ ಕಾಲೇಜು ಓದಿ ಪದವಿ ಪಡೆದು ‘ಕೋರಮಂಗಲ ಶುಗರ್‌ಸ್’ ಕಂಪೆನಿಯಲ್ಲಿ ಕೆಲಸ ಮಾಡುವ ಹಂತಕ್ಕೆ ಬಂದು ನಿಂತಿದ್ದಾರೆ.

ತಾಯಿ ಛಾಯಾಲಕ್ಷ್ಮಿ. ಮೂಲತಃ ಚಿಕ್ಕಮಗಳೂರಿನವರು. ತಂದೆ ಸತ್ಯನಾರಾಯಣ. ನೀರಾವರಿ ಇಲಾಖೆಯಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿದ್ದವರು. ತಾಯಿ ಶಕುಂತಲಾ. ಛಾಯಾಲಕ್ಷ್ಮಿ ಅವರಿಗೊಬ್ಬ ಅಣ್ಣ ಇದ್ದಾನೆ. ಅವರು ಸಶಕ್ತರಾಗಿದ್ದಾರೆ. ಛಾಯಾಲಕ್ಷ್ಮಿ ಅವರಿಗೂ ಪೋಲಿಯೋ ಅಂತ ಅಂದಿದ್ದಾರೆ. ಆದರೆ ಇವರನ್ನು ಕಾಡಿದ ರೋಗವೇ ಬೇರೆ. ಎಲುಬು ಮೃದು. ಐದನೇ ಕ್ಲಾಸಿನಲ್ಲಿರುವಾಗಲೇ ಎರಡೂ ಕಾಲುಗಳನ್ನ ಆಪರೇಷನ್ ಮಾಡಿದರು. ಕಾಲೇಜ್ ಓದುತ್ತಿರುವಾಗ ಮಂಗಳೂರಿನ ಪ್ರಖ್ಯಾತ ಮೂಳೆ ತಜ್ಞ ಡಾ ಶಾಂತಾರಾಂ ಶೆಟ್ಟಿ ಮತ್ತೆ ಶಸ್ತ್ರ ಮಾಡಿದರು. ಪರಿಣಾಮ ಸೊನ್ನೆ. ಮಗಳಿಗಾಗಿ ತಂದೆ ಸತ್ಯನಾರಾಯಣರು ಕೊಡಿಸದ ಚಿಕಿತ್ಸೆಯೇ ಇಲ್ಲ. ಏನೇ ಆದರೂ ದೇಹ ಬಲಿದಂತೆ, ಭಾರ ಜಾಸ್ತಿ ಆದಂತೆ ಕಾಲು ಕುಗ್ಗತೊಡಗಿತು. ಬಾತೊಡಗಿತು. ಕೊನೆಗೂ ಹೊರಲಾರೆನೆಂದು ಮುಷ್ಕರ ಹೂಡೇ ಬಿಟ್ಟಿತು. ಈ ಮಧ್ಯೆಯೂ ಛಾಯಾಲಕ್ಷ್ಮಿ ಅವರು ಪದವಿ ಮುಗಿಸಿದರು. ಭಾಷಾ ಕಲಿಕೆ ದೃಷ್ಟಿಯಿಂದ ಹಿಂದಿಯನ್ನು ಪ್ರಥಮದಿಂದ ಆರಂಭಿಸಿ ಅದರಲ್ಲೇ ಬಿಎಡ್‌ನ್ನು ಮಾಡಿ ಶಿಕ್ಷಕರಾದರು.

ಈ ಮಧ್ಯೆ ಮನೆಯಲ್ಲಿ ಮದುವೆ ಪ್ರಸ್ತಾಪ. ಆ ಕಡೆ ವೆಂಕಟೇಶ್ ಮನೆಯಲ್ಲಿಯೂ ಒತ್ತಾಯಿಸುತ್ತಿದ್ದರು. ಛಾಯಾಲಕ್ಷ್ಮಿ ಅವರಂತೂ ಮದುವೆ ಆಗಬಹುದು ಆದರೆ ನನ್ನಂತೇ ಅಂಗವೈಕಲ್ಯ ಹೊಂದಿದವರಾದರೆ ಮಾತ್ರ ಅಂತ ಹಟ ಹೊತ್ತರು. ವೆಂಕಟೇಶ್‌ಗೆ ಅವರ ಪರಿಚಿತ ಸಂಬಂಧಿಗಳಿಂದ ಪ್ರಪೋಸಲ್ ಬಂತು. ಇಬ್ಬರೂ ಒಂದೇ ಸಮಸ್ಯೆಯಿಂದ ಬಳಲಿದವರು. ಎರಡೂ ಕಾಲುಗಳ ಶಕ್ತಿ ಕಳಕೊಂಡವರು. ಸಮಾನ ದುಃಖಿಗಳು. ಸಮಾನ ಸ್ವಾಭಿಮಾನಿಗಳು. ಹಟ, ಹೋರಾಟದಿಂದ ಸ್ವತಂತ್ರವಾಗಿ ಬದುಕು ಕಟ್ಟಲು ಮುಂದಾದವರು. ಮದುವೆಯೂ ಆಯಿತು. ಪರಸ್ಪರ ಅರಿತು ಅಹ್ಲಾದಕರ ಬದುಕನ್ನು ಹೊಂದಿದರು. ಆದರೆ ಇವರಿಬ್ಬರಿಗೂ ಒದಗಿದ ಒಂದೇ ಚಿಂತೆ, ಬೇಕಾ ಬೇಡವಾ

ಹೌದು ಸರ್, ನಮಗಿಬ್ಬರಿಗೂ ನಮಗೊಂದು ಮಗು ಬೇಕೇಬೇಕು ಅನ್ನುವ ಆಸೆ ಬೆಟ್ಟದಷ್ಟಿತ್ತು. ಆದರೆ ಇಬ್ಬರಿಗೂ ಭಯ. ನಮ್ಮ ಮಗು ನಮ್ಮಂತೇ ಮೃದು ಎಲುಬಿನ ರೋಗಕ್ಕೆ ತುತ್ತಾದರೆ? ನಮ್ಮ ಕೊರತೆ ಆ ಮಗುವಿಗೂ ಹರಿದು ಬಂದರೆ? ಆಗ ವೈದ್ಯರನ್ನ ಸಂಪರ್ಕಿಸಿದೆವು. ಅವರು ನಿಮಗೆ ಬಂದ ಆ ಡಿಫಿಶಿಯೆನ್ಸಿ ನೂರರಲ್ಲಿ ಒಬ್ಬರಿಗೆ ಬರುವಂತದ್ದು. ಹಾಗೇ ನಾವು ಈಗ ಭ್ರೂಣದಲ್ಲಿರುವಾಗಲೇ ಅದಕ್ಕೆ ಚಿಕಿತ್ಸೆ ಕೊಡಬಹುದು. ಹೆದರಬೇಡಿ, ಮುಂದುವರಿಯಿರಿ ಅಂದರು. ಕನ್‌ಸಿವ್ ಮೇಲೂ ವೈದ್ಯರಲ್ಲಿ ಪರಿಪರಿಯಾಗಿ ಕೇಳಿಕೊಂಡೆ. ಆಗಲೂ ಧೈರ್ಯ ತುಂಬಿದರು, ಏನೂ ಆಗುವುದಿಲ್ಲ ಅಂದರು. ಮಗು ಸಹಜವಾಗಿಯೇ ಜನಿಸಿತು. ಎಲ್ಲ ಮಗುವಿನಂತೆ ಇದ್ದ ಕೂಡ. ಆದರೆ ನನಗೆ ದಿನಗಳೆದಂತೆ ಏನೋ ಸಂದೇಹ ಬಂತು. ಹೋಗಿ ಮಕ್ಕಳ ತಜ್ಞರಲ್ಲಿ ತೋರಿಸಿದಾಗ ನನಗೆ ಯಾವ ಕೊರತೆ ಬೋನಿಗೆ ಸಂಬಂಧಿಸಿ ಇತ್ತೋ ಅದೇ ಅವನಿಗೂ ಬಂದಿರುವುದು ತಿಳಿಯಿತು. ಬೆಂಗಳೂರಿನ ಖ್ಯಾತ ತಜ್ಞ ವೈದ್ಯರಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆಗಲೇ ಒಂದು ಆಪರೇಷನ್ ಆಗಿದೆ. ಇನ್ನೊಂದು ಆಗಬೇಕು. ನಾನು ಏನು ಹಂತಹಂತವಾಗಿ ದೈಹಿಕ ಬೆಳವಣಿಗೆಯಲ್ಲಿ ತೊಂದರೆ, ಸವಾಲು ಅನುಭವಿಸಿದ್ದೇನೋ ಅದೇ ಕಂಡುಬರುತ್ತಿದೆ. ಆದರೆ ಅವನು ಹಟವಾದಿ. ಛಲವಾದಿ. ಎಲ್ಲಾ ಕೊರತೆಗಳನ್ನೂ ಮೀರಿ ಜಿಗಿಯುತ್ತಾನೆ. ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಕ್ಲೈಮ್ಯಾಕ್‌ಸ್ನಲ್ಲಿ ಅವನು ಓಡಿದ್ದನ್ನ ನೋಡಿ ನಾನೇ ಹೌಹಾರಿದೆ. ಒಂದೆರಡು ತಿಂಗಳು ನಮ್ಮಿಬ್ಬರನ್ನೂ ಬಿಟ್ಟು ಚಿತ್ರ ತಂಡದೊಂದಿಗಿದ್ದ. ಅವರು ಅವನನ್ನ ತಮ್ಮ ಮಗುವಿನಂತೇ ನೋಡಿದ್ದಾರೆ. ಸಿನಿಮಾ ಮುಗಿದು ಅವನನ್ನ ಮನೆಗೆ ಬಿಟ್ಟು ಹೋಗಲು ಬಂದಾಗ, ಅವರು ಆ ಕಡೆ ಹೊರಟಾಗ ತುಂಬಾ ಅತ್ತುಗರೆದ. ಅವನು ತುಂಬಾ ಪ್ರಾಕ್ಟಿಕಲ್. ಆದರೆ ಅಷ್ಟೇ ಭಾವಜೀವಿ. ನಾವು ಕಷ್ಟವೋ, ಸುಖವೋ ಈ ಸಮಾಜಕ್ಕೆ ಭಾರ ಆಗಲಿಲ್ಲ. ಆದರೆ ಅವನಿಗೂ ಅದೇ ಸವಾಲು ಎದುರಾಗಿದೆ. ಎದುರಿಸುತ್ತಾನೆ ಅವನು. ಆದರೂ ನೋವು. ನಮ್ಮಂತೇ ಅವನೂ ನಮ್ಮಿಂದ ನರಳುವಂತಾಯಿತಲ್ಲ ಎಂದು. ನಾನು ಪಡೆದು ಬಂದದ್ದು. ಆ ಭಗವಂತ ಅವನಿಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಆರೋಗ್ಯವೊಂದನ್ನು ಭಾಗಶಃ ಕಸಿದುಕೊಂಡ. ಅದನ್ನು ನನ್ನ ಮಗ ಮನುಷ್ಯ ಪ್ರಯತ್ನದಿಂದ ಪಡೆದುಕೊಳ್ಳುತ್ತಾನೆ ಅನ್ನುವ ನಂಬಿಕೆ ನಮ್ಮದು. ತಂದೆ ಅವನ ಪಾಲಿಗೆ ಊರುಗೋಲಾಗಿದ್ದರು. ನಮಗೂ ಅವರು ಹಾಗೇ ಇದ್ದರು. ನಾವಿಬ್ಬರೂ ಸರಾಗವಾಗಿ ಓಡಾಡಿ ಅವನನ್ನು ನೋಡಿಕೊಳ್ಳಲಾಗದ ಕೊರತೆಯನ್ನು ಅವರು ನೀಗಿಸುತ್ತಿದ್ದರು. ಈಚೆಗೆ ಅವರೂ ಹೊರಟು ಹೋಗಿದ್ದಾರೆ. ಮುಂದೇನೋ ಅದೇ ಚಿಂತೆ. ಮಗ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾನೆ. ಅದು ಅವನ ಅಜ್ಜನ ಬಳುವಳಿ. ಆದರೆ ಅವನ ಆ ಅಭಿನಯದ ಶ್ರೇಷ್ಠತೆಯನ್ನ ಸಂಪೂರ್ಣವಾಗಿ ಅನುಭವಿಸಲಾಗದ ಕರುಳನೋವು. ಅವನಿಗೆ ದೇವರು ಅನ್ಯಾಯ ಮಾಡಲಾರ ಅನ್ನುವುದೊಂದೇ ವಿಶ್ವಾಸ. ಮುಂದೆ ಮಾಡಲಿರುವ ಶಸ್ತ್ರ ಚಿಕಿತ್ಸೆ, ಕಾಲ್ಗಳು ನಮ್ಮ ಹಾಗೆ ಬಾಗದಿರಲಿ, ನೇರವಾಗಿರಲಿ ಅನ್ನುವ ಕಾರಣಕ್ಕೆ. ದೇಹದ ಭಾರವನ್ನ ಹೊರಬೇಕು ಅನ್ನುವುದಕ್ಕೆ. ವೈದ್ಯರು ಭರವಸೆ ನೀಡಿದ್ದಾರೆ. ರೋಹಿತ್ ಶೇ.100 ರಷ್ಟು ಸರಿಹೋಗುತ್ತಾನೆ ಅಂತ. ಅದೊಂದೇ ಆಶಾಕಿರಣ.’

ರೋಹಿತ್ ಅಮ್ಮ ಛಾಯಾಲಕ್ಷ್ಮಿ ಗದ್ಗದಿತರಾದರು.

ಅದಕ್ಕೇ ಹಿಂದಿನವರು ಹೇಳಿದ್ದು, ‘ಆರೋಗ್ಯವೇ ಭಾಗ್ಯ’ ಎಂದು. ಈ ಶರೀರದ ರಚನೆಯೇ ಒಂದು ವಿಸ್ಮಯ. ಅದು ಸರಿಯಾಗಿದ್ದಾಗ ನಮಗೆ ನಮ್ಮ ಶರೀರ ಒಂದು ವಿಶಿಷ್ಟ, ವಿಶೇಷ, ವಿಸ್ಮಯ ಅಂತ ಅನ್ನಿಸುವುದೇ ಇಲ್ಲ. ಅದೇ ಚಿಕ್ಕ ಸಮಸ್ಯೆ, ಅಥವಾ ಒಟ್ಟೂ ಆಕೃತಿಯಲ್ಲಿ ಒಂದೇ ಒಂದು ಅಂಗಾಂಗ, ಅವಯವ ಹದ ತಪ್ಪಲಿ, ಆಗ ನಮಗೆ ದೇಹವೇ ದೇಗುಲ ಎಂದೂ, ದೇಹವೆಂಬುದು ಈ ಪ್ರಕೃತಿ, ಆ ಅಗೋಚರ ಶಕ್ತಿ ನೀಡಿದ ಅತ್ಯಪೂರ್ವ ಕೊಡುಗೆ ಎಂದೂ ಅದರ ಗಾಂಭೀರ್ಯ ಮನತುಂಬಿ ನಮ್ಮ ಕುಬ್ಜತೆ, ಅಜ್ಞಾನ ಆಳುತ್ತದೆ. ನಾನು, ನನ್ನಿಂದ, ನನ್ನದು ಅನ್ನುವುದೆಲ್ಲ ಭ್ರಮೆ ಎಂಬ ಅರಿವಾಗಿ ನಮ್ಮ ಅಸ್ತಿತ್ವವೇ ಪ್ರಶ್ನೆಯಾಗಿ ಕಾಡುತ್ತದೆ. ಹುಟ್ಟು, ಆರೋಗ್ಯಪೂರ್ಣ ಹುಟ್ಟು, ಸಶಕ್ತ ಸ್ವರೂಪ, ಅವನ ಕೃಪೆ. ಹಾಗಾದರೆ ಅವನಾರು? ಗೊತ್ತಿಲ್ಲ. ಆದರೆ ನಮ್ಮ ನದರಿನ ಆಚೆ ಒಂದು ಜಗತ್ತಿದೆ. ಅಲ್ಲೊಬ್ಬ ನಿಯಂತ್ರಕನಿದ್ದಾನೆ. ಒಬ್ಬ ಕ್ರಿಯೇಟರ್ ಇದ್ದಾನೆ. ಅವನಿಲ್ಲದೆ ನಾವೆಲ್ಲಿ? ಅದಲ್ಲವಾದಲ್ಲಿ ಈ ಶರೀರ, ಈ ಸಹಸ್ರ ಸಹಸ್ರ ರಂಧ್ರಗಳ ಅತ್ಯದ್ಭುತ ರೂಪಸಿದ್ಧಿ ಹೇಗೆ ಸಾಧ್ಯ? ಅವನು ಕೊಟ್ಟಿದ್ದನ್ನ ಸರಿಯಾಗಿ ಬಳಸಲೂ ಬಾರದ ನಾವು ಈ ಮಾನವ ಶರೀರವನ್ನ ಆದ್ಯಂತ ನಿರ್ಮಾಣ, ಕ್ರಿಯೇಟ್ ಮಾಡಬಹುದೇ? ಹುಟ್ಟು ಅನಿರೀಕ್ಷಿತ. ವಿಸ್ಮಯ. ಎಲ್ಲಿಂದ, ಹೇಗೆ, ಒಂದೂ ಅರ್ಥವಾಗದ ಪ್ರಪಂಚ. ಗಂಡು ಹೆಣ್ಣಿನ ಸಂಯೋಗವೊಂದೇ ಈ ಶರೀರ, ಬುದ್ಧಿ, ಭಾವ ಜೀವದ ಉಗಮಕ್ಕೆ ಕಾರಣವೇ? ಅದಷ್ಟೇ ಆಗಿದ್ದರೆ ಹುಟ್ಟುವ ಪ್ರತೀ ಮಗುವೂ ಪೇಟೆಯಲ್ಲಿ ದೊರೆವ ಆಟಿಕೆಯಂತೆ ಒಂದೇ ತೆರ, ಒಂದೇ ಬಣ್ಣ, ಒಂದೇ ರೂಪ ಹೊಂದಬೇಕಿತ್ತಲ್ಲಾ. ಬಹುಷಃ ರೋಹಿತ್, ವೆಂಕಟೇಶ್, ಛಾಯಾಲಕ್ಷ್ಮೀ ಅವರಂಥ ಉದಾಹರಣೆ ನಮ್ಮನ್ನ ಮತ್ತೆ ಮತ್ತೆ ಈ ಜಗದಾಚೆಯ ‘ಲೋಕ’ದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ರೋಹಿತ್ ಭಾವಬದುಕು ಮತ್ತು ರುಗ್ಣತೆ, ಬದುಕು ಬಂದಂತೆ ಸ್ವೀಕರಿಸುವ ಆಯನವೇ ನಮ್ಮ ನಿಗಾ, ನಮ್ಮ ಯೋಚನೆ, ಯೋಜನೆಯ ಕಕ್ಷೆಯಲ್ಲಿಲ್ಲ ಅನ್ನುವುದನ್ನ ಸೃಷ್ಟೀಕರಿಸುತ್ತದೆ. ನಾವು ಬದುಕನ್ನ ರೂಪಿಸಿಕೊಳ್ಳಬಹುದು. ಆದರೆ ಮೂಲಸೃಷ್ಟಿ ನಮ್ಮ ಕೈಯಲ್ಲಿಲ್ಲ. ಅದು ಬಳುವಳಿ. ಅದು ಭಾಗ್ಯ. ಬರುವುದು ಬರುವ ರೀತಿಯಲ್ಲಿ ಬಾರದೇ ಇದ್ದಾಗ ಬಂದದ್ದನ್ನು ಬಂದಂತೇ ಸ್ವೀಕರಿಸಿ, ಬದುಕು ಗೆಲ್ಲುವುದಿದೆಯಲ್ಲ ಅದು ತಪಸ್ಸು. ಅದು ನಿಜ ಸಾಧನೆ. ಅದು ನಿಜ ಗೆಲುವು. ವೆಂಕಟೇಶ್, ಛಾಯಾಲಕ್ಷ್ಮೀ ದಂಪತಿ ತಮ್ಮ ಹೆಜ್ಜೆ ಊರದ ಬದುಕಲ್ಲೂ ಈ ಸಮಾಜಕ್ಕೆ ಒಂದು ‘ಮಾದರೀ ಹೆಜ್ಜೆ’ಯಾಗಿ ತಮ್ಮ ನೋವಿಗೆ ಸುಖಸ್ವರ್ಗದ ಕಾಣ್ಕೆಯಾಗಿ ಬಂದ ಮಗ ರೋಹಿತ್ ಕೂಡ ತಮ್ಮ ಅತಂತ್ರತೆಯ ಭಾಗವಾದಾಗ ಅದರಿದರೂ ಅವನನ್ನ ಸಶಕ್ತ ವ್ಯಕ್ತಿಯಾಗಿ ಕಟ್ಟುವ ಕಂಕಣ ತೊಟ್ಟು ಮುನ್ನಡೆದಿರುವುದು ಆದರ್ಶ. ಈ ಕುಟುಂಬಕ್ಕೆ ಕರುಣೆ ಬೇಕಿಲ್ಲ. ಸಾಂಗತ್ಯ, ಸಹಚರ್ಯ, ಪ್ರೀತಿ ಬೇಕಾಗಿದೆ. ರೋಹಿತ್ ತನಗೊದಗಿದ ಎಲ್ಲಾ ಸಂಕಷ್ಟಗಳನ್ನೂ ಎದುರಿಸಿ, ನೀಗಿಸಿ ಹೊಸ ಬದುಕೊಂದರ ವಾರಸುದಾರನಾಗಲಿ. ಕಲಾವಿದನೂ, ವಿಜ್ಞಾನಿಯೂ, ಉತ್ತಮ ನಾಗರಿಕನೂ ಏಕಕಾಲದಲ್ಲಿ ಆಗುವ ಸಲ್ಲಕ್ಷಣ ಅವನಿಗಿದೆ.

ಶುಭಾಶೀರ್ವಾದಗಳು.