ಒಂದು ಸಂವಾದ, ಸಂಬಂಧ ಮುರಿಯಲು ವೈಫೈ ಸಾಕು!

Posted In : ಅಂಕಣಗಳು, ಇದೇ ಅಂತರಂಗ ಸುದ್ದಿ

ಮೊನ್ನೆ ನಾನು ಇಸ್ರೇಲಿಗೆ ಹೋದಾಗ ನನ್ನ ಜತೆ ಚೀನಾ, ಬ್ರಿಟನ್, ಆಸ್ಟ್ರೇಲಿಯಾ, ರಷ್ಯಾ, ದಕ್ಷಿಣ ಆಫ್ರಿಕಾ, ಜಪಾನ್, ಪೋಲಂಡ್, ಇಟಲಿ ದೇಶದ ತಲಾ ಒಬ್ಬರು ಪತ್ರಕರ್ತರೂ ಇದ್ದರು. ಒಂದು ವಾರ ಈ ಮಾಧ್ಯಮ ಮಿತ್ರರ ಜತೆ ಕಳೆದ ಕ್ಷಣಗಳು ರಸಮಯವಾಗಿದ್ದವು. ಇವರಂತೆ ನಾನು ಯಾರನ್ನೂ ಈ ಮೊದಲು ಭೇಟಿ ಮಾಡಿರಲಿಲ್ಲ. ಆದರೆ ಮೊದಲನೆಯ ದಿನವೇ ಎಲ್ಲರೂ ಆತ್ಮೀಯರಾದೆವು. ಸಾಮಾನ್ಯವಾಗಿ ಗುಂಪಿನಲ್ಲಿರುವ ಎಲ್ಲ ಪತ್ರಕರ್ತರು ಒಟ್ಟಾಗಿ ಬೆರೆಯುವುದಿಲ್ಲ.

ಹತ್ತು ಜನರಿದ್ದರೆ, ಕನಿಷ್ಠ ಮೂರು ಗುಂಪುಗಳಾಗಿರುತ್ತವೆ. ಅದರಲ್ಲೂ ಸಿಗರೇಟು ಸೇದುವವರಿದ್ದರೆ, ಬಹುಬೇಗ ಎಷ್ಟೋ ವರ್ಷಗಳ ಕೊರಳ ಗೆಳೆಯರಂತೆ ಆತ್ಮೀಯರಾಗಿ ಬಿಡುತ್ತಾರೆ. ಈ ಮೈತ್ರಿ ಪ್ರತಿರಾತ್ರಿ ಗುಂಡು ಪಾರ್ಟಿಯವರೆಗೆ ನಡೆದು ಮರುದಿನವೂ ಮುಂದುವರಿಯುತ್ತದೆ. ಆದರೆ ಮೊನ್ನೆಯ ನಮ್ಮ ತಂಡದಲ್ಲಿ ಯಾರೂ ಸಿಗರೇಟು ಸೇದುವವರಿರಲಿಲ್ಲ. ಸೋಜಿಗವೆಂದರೆ, ಆಸ್ಟ್ರೇಲಿಯಾದ ಪತ್ರಕರ್ತ ಮಾತ್ರ (ಹಿತಮಿತವಾಗಿ) ಗುಂಡು ಹಾಕುವವನು. ಉಳಿದವರ್ಯಾರೂ ಅದು ಬೇಕೆಂಬ ಬೇಡಿಕೆ ಇಟ್ಟವರಲ್ಲ. ಎಲ್ಲರೂ ಬಹಳ ಸುಬಗರು, ಸಂಭಾವಿತರು. ಈ ಗುಂಪಿನಲ್ಲಿ ಯಾರೂ ಐವತ್ತು ವರ್ಷ ದಾಟಿದವರಲ್ಲ. ನಿಗದಿತ ಸಮಯಕ್ಕೆ ಎಲ್ಲರೂ ಸೇರುತ್ತಿದ್ದೆವು.

ಪತ್ರಕರ್ತರು ಸಮಯಪಾಲನೆಯಲ್ಲಿ ಕೆಲವೊಮ್ಮೆ ರಾಜಕಾರಣಿಗಳಿಗೂ ಪೈಪೋಟಿ ನೀಡುವುದುಂಟು. ಆದರೆ ನಮ್ಮ ಪೈಕಿ ಎಲ್ಲರೂ ಕಟ್ಟರ್ ಸಮಯಪಾಲಕರು. ಪ್ರತಿದಿನ ಏಳೆಂಟು ಸ್ಟಾರ್ಟಪ್ ಕಂಪನಿಗಳಿಗೆ ಭೇಟಿ ನೀಡಬೇಕಾದ ಸಮಯದಲ್ಲಿ ಬಸ್‌ನಲ್ಲಿ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ತಮ್ಮ ಪತ್ರಿಕೆ, ತಮ್ಮ ದೇಶದ ಪತ್ರಿಕೋದ್ಯಮ, ಪತ್ರಕರ್ತರ ಬಗ್ಗೆ ಹೇಳುತ್ತಿದ್ದರು. ಮಧ್ಯಾಹ್ನ ಹಾಗೂ ರಾತ್ರಿ ಊಟದ ಸಮಯದಲ್ಲಿ ನಮ್ಮ ನಡುವೆ ಒಂದು ಚರ್ಚೆ, ಸಂವಾದ ನಡೆಯುತ್ತಿತ್ತು. ಎರಡು ದಿನಗಳಲ್ಲಿ ನಾವೆಲ್ಲ ತೀರಾ ಆತ್ಮೀಯರಾದೆವು, ಒಬ್ಬರನ್ನೊಬ್ಬರು ಕಾಲೆಳೆಯುವಷ್ಟು, ಕಿಚಾಯಿಸುವಷ್ಟು, ಕೀಟಲೆ ಮಾಡುವಷ್ಟು.

ನಮ್ಮ ಪೈಕಿ ಜಪಾನಿನ ಪತ್ರಕರ್ತನಿಗೆ ತಲೆ ಚಕ್ಕರ್ ಬಂದು ಕೆಲಕಾಲ ಅಸ್ವಸ್ಥನಾದಾಗ, ನಾವೆಲ್ಲರೂ ಸಮಾವೇಶದಿಂದ ಹೊರಬಂದು ಅವನ ಜತೆಯೇ ಇದ್ದೆವು.  ನಮ್ಮ ನಮ್ಮಲ್ಲಿ ಅಂಥ ಅನ್ಯೋನ್ಯ ಭಾವಗಳು ಮೂಡಿದ್ದವು. ಅಲ್ಲದೇ ಹೋದ ದಿನವೇ ನಮ್ಮ ವಿದೇಶಾಂಗ ವ್ಯವಹಾರ ಖಾತೆ ಅಧಿಕಾರಿಯೊಬ್ಬರು International Journos in Israel ಎಂಬ ವಾಟ್ಸಪ್ ಗ್ರೂಪ್ ಮಾಡಿದ್ದರಿಂದ ನಾವೆಲ್ಲರೂ ಪರಸ್ಪರ ಚಾಟ್ ಮಾಡುತ್ತಾ ಫೋಟೊಗಳನ್ನು ಷೇರ್ ಮಾಡಿಕೊಳ್ಳಲಾರಂಭಿಸಿದೆವು. ಮೂರನೆಯ ದಿನ ನಾವು ಬಸ್ಸನ್ನೇರುತ್ತಿದ್ದಂತೆ, ಡ್ರೈವರ್ ‘ಹಲೋ ಫ್ರೆಂಡ್ಸ್ ಮರೆತುಬಿಟ್ಟಿದ್ದೆ, ನಮ್ಮ ಬಸ್ಸಿನಲ್ಲಿ ವೈಫೈ ವ್ಯವಸ್ಥೆಯಿದೆ.

ಇದೋ ಪಾಸ್‌ವರ್ಡ್’ಎಂದು ಘೋಷಿಸಿದ. ಆ ಪಾಪಿಗೆ ಅದೆಂಥ ದುಷ್ಟ ಆಲೋಚನೆ ಬಂತೋ ಕಾಣೆ. ಆ ರೀತಿ ಘೋಷಿಸಿದ್ದೇ ಕೊನೆ, ಎಲ್ಲರೂ ತಮ್ಮ ತಮ್ಮ ಮೊಬೈಲುಗಳಲ್ಲಿ ಮಗ್ನರಾಗಿಬಿಟ್ಟರು. ನಮ್ಮ-ನಮ್ಮ ನಡುವೆ ಮಾತುಕತೆ, ಹರಟೆ, ಹಾಡು, ಸಂವಾದ, ಜೋಕು, ತರಲೆಗಳೆಲ್ಲ ಮಾಯವಾಗಿಬಿಟ್ಟವು. ಎಲ್ಲರೂ ಮಾತು ಮರೆತವರಂತೆ ಮೌನವಾಗಿ ಬಿಟ್ಟರು. ಅಷ್ಟಕ್ಕೂ ಮಾತಾಡಬೇಕೆನಿಸಿದಾಗ ವಾಟ್ಸಪ್ ಗ್ರೂಪ್‌ನಲ್ಲಿ ಚಾಟ್ ಮಾಡಲಾರಂಭಿಸಿದರು. ಎಲ್ಲರ ವಿವಿಧ ಭಂಗಿಗಳ ಫೋಟೊಗಳು ಷೇರ್ ಆಗತೊಡಗಿದವು. ಎಲ್ಲರೂ ಸೆಲ್ಫೀ ತೆಗೆದುಕೊಂಡು ಈ ಗ್ರೂಪ್‌ನಲ್ಲಿ ಹಾಕಲಾರಂಭಿಸಿದರು. ನಮ್ಮ ನಡುವೆ ಯಾವುದೋ
ತಡೆಗೋಡೆ ಎದ್ದ ಭಾವನೆ.

ಇಷ್ಟೂ ಸಾಲದೆಂಬಂತೆ, ನಾಲ್ಕನೆಯ ದಿನ ಸಂಘಟಕರು ನಮ್ಮೆಲ್ಲರಿಗೂ ಒಂದೊಂದು ಹೈ ಸ್ಪೀಡ್ ವೈಫೈ ಡಾಂಗಲ್ ನೀಡಿದರು. ನಮ್ಮ ನಮ್ಮ ನಡುವೆ ಮಾತುಕತೆ ಸಂಪೂರ್ಣ ಬಂದ್. ಎಲ್ಲರೂ ಅವರವರ ಪಾಡಿಗೆ ಒಂದು ಮೂಲೆ ಸೇರಿಕೊಂಡು, ಬಯಲಲ್ಲಿ ಕೂತರೂ ಒಂದು ಮೂಲೆ ಸೇರಿದವರಂತೆ, ಮೊಬೈಲ್ ಒಳಗೆ ಹೂತು ಹೋದರು. ಯಾರಿಗೂ ಮಾತಾಡಲು ಪುರುಸೊತ್ತಿಲ್ಲ ಹಾಗೂ ಆಸಕ್ತಿಯೂ ಇಲ್ಲ. ಗ್ರೂಪ್‌ನಲ್ಲಿ ಮಾತ್ರ ಹಲೋ, ಹಾಯ್, ಗುಡ್ ಮಾರ್ನಿಂಗ್, ಗುಡ್ ನೈಟ್. ರಾತ್ರಿಯ ಭೋಜನಕೂಟಗಳಿಗೂ ಕೆಲವರು ತಪ್ಪಿಸಿಕೊಳ್ಳಲಾರಂಭಿಸಿದರು. ಬಂದರೂ ಮಾತುಕತೆ ಕಡಿಮೆ. ಮೊಬೈಲ್‌ನಲ್ಲೇ ಮಗ್ನ. ಬೆಳಗ್ಗೆ ಎಂಟು ಗಂಟೆಗೆ ಎಲ್ಲರೂ ಹೋಟೆಲ್ ಲಾಬಿಯಲ್ಲಿ ಸೇರಬೇಕಾಗುತ್ತಿತ್ತು. ಒಬ್ಬೊಬ್ಬರೇ ತಡವಾಗಿ ಬರಲಾರಂಭಿಸಿದರು.

ಹದಿನೈದು-ಇಪ್ಪತ್ತು ನಿಮಿಷ ವಿಳಂಬವಾಗುವುದು ಸಾಮಾನ್ಯವಾಯಿತು. ಬಸ್ಸಿನಲ್ಲಿ ಗೈಡ್ ಮಾತಾಡಲಾರಂಭಿಸಿದರೆ,
ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಮೊಬೈಲೇ ಸರ್ವಸ್ವ. ಬಸ್ಸಿನ ಕಿಟಕಿ ಮೂಲಕ ಊರನ್ನು ನೋಡುವ ಆಸಕ್ತಿಯೂ ಇಲ್ಲ. ಈ ಹುಚ್ಚಾಟವನ್ನು ನೋಡಿ ಬೇಸತ್ತು, ಆರನೆಯ ದಿನ ನಾನು ಸಂಘಟಕರಿಗೆ ಈ ಬಗ್ಗೆ ವಿವರಿಸಿದೆ. ಅವರಿಗೂ ಇದು ಮನವರಿಕೆಯಾಯಿತು. ‘ಫ್ರೆಂಡ್ಸ್, ತಾಂತ್ರಿಕ ದೋಷದಿಂದ ವೈಫೈ ಕೆಲಸ ಮಾಡುತ್ತಿಲ್ಲ. ಅಡಚಣೆಗಾಗಿ ಕ್ಷಮಿಸಿ. ಹಾಗೆಯೇ ನಿಮಗೆ ನೀಡಿರುವ ಡಾಂಗಲ್‌ನ್ನು ಹಿಂದಿರುಗಿಸಿ. ನಾಳೆ ಅದಕ್ಕಿಂತ ಹೆಚ್ಚಿನ ಸ್ಪೀಡ್ ಇರುವುದನ್ನು ನೀಡುತ್ತೇನೆ. ದಯವಿಟ್ಟು ಎಲ್ಲರೂ ಸಹಕರಿಸಬೇಕು’ಎಂದು ಮ್ಯಾನೇಜರ್ ಘೋಷಿಸಿದ.

ಎಲ್ಲರೂ ಮುಖ ಕಿವುಚಿಕೊಂಡರು. ಕೆಲವರಂತೂ ತೀವ್ರ ಸಿಡಿಮಿಡಿಗೊಂಡರು. ಆಗಬಾರದ ಮಹಾಪರಾಧ ಆದವರಂತೆ ಅವರ ಪ್ರತಿಕ್ರಿಯೆ ಇದ್ದಂತಿತ್ತು. ಮರುದಿನದಿಂದ ನಮ್ಮ ಸಂಬಂಧ ಮೊದಲಿನ ಸ್ಥಿತಿಗೆ ಬಂದಿತು. ನಮ್ಮ ಹರಟೆ, ಮಾತುಕತೆ, ಸಂವಾದ, ನಗು, ಕೇಕೆ, ಕಾಡು ಹರಟೆಗಳೆಲ್ಲ ಮುಂದುವರಿದವು. ಮುಂದಿನ ನಾಲ್ಕು ದಿನ ಬಸ್ಸಿನಲ್ಲಿ ವೈಫೈ ಇರಲಿಲ್ಲ. ಹೈ ಸ್ಪೀಡ್ ಡಾಂಗಲ್‌ನ್ನೂ ಕೊಡಲಿಲ್ಲ. ನಾವೆಲ್ಲರೂ ತೀರಾ ಆತ್ಮೀಯರಂತೆ, ಎಷ್ಟೋ ವರ್ಷಗಳ ಸ್ನೇಹಿತರಂತೆ ಇದ್ದೆವು.

ಬೆಂಗಳೂರು ನಿಧಾನ ಸಾಮಾನ್ಯವಾಗಿ ವಿದೇಶ ಪ್ರಯಾಣದಿಂದ ಮರಳಿ ಬಂದವರ ಬಳಿ ಆ ದೇಶದ ಬಗ್ಗೆ ಕೇಳುವುದು ರೂಢಿ. ಅಷ್ಟೇ ಅಲ್ಲ, ನಮ್ಮ ದೇಶಕ್ಕೂ, ಆ ದೇಶಕ್ಕೂ ಏನು ವ್ಯತ್ಯಾಸವೆಂದು ಕೇಳುವುದು ಸಹ ಸಹಜ. ಮೊನ್ನೆ ಇಸ್ರೇಲ್‌ನಿಂದ ವಾಪಸ್ ಬಂದಾಗ ಸ್ನೇಹಿತರೊಬ್ಬರು, ‘ನಮ್ಮ ಬೆಂಗಳೂರಿಗೂ, ಇಸ್ರೇಲ್‌ಗೂ ಏನು ವ್ಯತ್ಯಾಸ?’ಎಂಬ ಅದೇ ಪ್ರಶ್ನೆಯನ್ನು ಕೇಳಿದರು. ‘ನನಗೆ ಯಾಕೋ ಬೆಂಗಳೂರು ಬಹಳ ನಿಧಾನ ಎಂದು ಅನಿಸುತ್ತಿದೆ’ಎಂದು ಹೇಳಿದೆ. ಅದಕ್ಕೆ ಅವರು ‘ಹೌದಾ? ಹಾಗ್ಯಾಕೆ ಹೇಳಿದ್ರಿ? ಬೆಂಗಳೂರು ನಿಧಾನ ಹೇಗೆ?’ಎಂದು ಕೇಳಿದರು. ನಾನು ಹೇಳಿದೆ – ‘ಇಸ್ರೇಲ್‌ನಲ್ಲಿ ವೈಫೈ ಸ್ಪೀಡ್ ನಮಗಿಂತ ಹತ್ತು ಪಟ್ಟು ಜಾಸ್ತಿಯಿದೆ. ಹೀಗಾಗಿ ಇಲ್ಲಿನ ಬದುಕು ನಿಧಾನವೆಂದು ಅನಿಸುತ್ತಿದೆ’.‘ಹೌದಾ!? ಇಸ್ರೇಲ್ ಬಿಡಿ, ಮಹಾನ್ ದೇಶ’ಎಂದು ಉದ್ಗಾರ ತೆಗೆದು, ತಲೆ ಅಲ್ಲಾಡಿಸುತ್ತಾ ಹೊರಟು ಹೋದರು.

ಒಂದು ದೇಶವನ್ನು ವೈಫೈಯಿಂದಲೂ ಅಳೆಯುವ ಕಾಲ ಬಂತು ಅಂತೀರಾ? ಬರೆಯದೇ ಇರುವುದಾದರೂ ಹೇಗೆ? ‘ನೀನು ಯಾವುದಾದರೂ ದೇಶಕ್ಕೆ ಹೋದರೆ ಆ ದೇಶದ ಬಗ್ಗೆ ಮೂರು-ನಾಲ್ಕು ವಾರಗಳ ತನಕ ಬರೀತೀಯಾ. ಯಾಕಾದರೂ ನೀನು ಅಲ್ಲಿಗೆ ಹೋಗ್ತೀಯಾ. ಅಲ್ಲಿ ಕಂಡಿದ್ದನ್ನೆಲ್ಲ ಬರೆದು ನಮ್ಮ ಮೇಲೆ ದಾಳಿ ಮಾಡ್ತೀಯ. ಈಗ ಇಸ್ರೇಲ್ ದಾಳಿ’ಎಂದು ನನ್ನ ಕೆಲವು ಸ್ನೇಹಿತರು ಛೇಡಿಸುವುದುಂಟು. ಅವರು ಅಂದುಕೊಳ್ಳುವಷ್ಟು ನಾನು ಬರೆಯುವುದೂ ಹೌದು ಎಂದು ನನಗನಿಸಿದೆ. ಏನು ಮಾಡುವುದು, ಯಾವುದೇ ದೇಶಕ್ಕೆ, ಊರಿಗೆ ಹೋದರೆ, ನಾವು ನೋಡುವುದೆಲ್ಲಾ ಹೊಸತೇ, ಎಲ್ಲವೂ ನವ ನವೀನವೇ. ಭೇಟಿ ಮಾಡುವವರೆಲ್ಲ ಹೊಸಬರೇ, ವಿಶೇಷ ಗುಣವಿರುವವರೇ.

ಆ ಎಲ್ಲಾ ಸಂಗತಿಗಳ ಬಗ್ಗೆ ಬರೆಯದೇ ಇರುವುದಾದರೂ ಹೇಗೆ? ಹೀಗಾಗಿ ನನಗೆ ಅವೆಲ್ಲವುಗಳ ಬಗ್ಗೆ ಬರೆಯುವುದು ಕಷ್ಟವೇ ಅಲ್ಲ. ಬರೆಯದಿರುವುದೇ ಕಷ್ಟ. ಅಷ್ಟೆಲ್ಲ ಬರೆದ ನಂತರವೂ ನಮ್ಮ ಓದುಗರಿಗೆ ಹೇಳಿದ್ದಕ್ಕಿಂತ, ಬಿಟ್ಟ ಸಂಗತಿಗಳೇ ಜಾಸ್ತಿಯಾಯಿತಲ್ಲ ಅನಿಸುತ್ತದೆ. ಆಗ ಮುಂದಿನ ವಾರ ಪುನಃ ಆ ದೇಶದ ಬಗ್ಗೆಯೇ ಬರೆಯಲಾರಂಭಿಸುತ್ತೇನೆ. ಇಸ್ರೇಲಿಗೆ ಐದು ಸಲ ಹೋಗಿ ಬಂದರೂ ಬರೆಯುವುದು ಎಷ್ಟೆಲ್ಲ ಇದೆ ಎಂದು ಅನಿಸಿದ್ದರಿಂದ ಈ ವಾರವೂ ಇಸ್ರೇಲೇ!

ಇದು ಇಸ್ರೇಲ್ ವಿಷಯದಲ್ಲಿ ಮಾತ್ರ ಅಲ್ಲ. ಯಾವುದೇ ಊರು ಅಥವಾ ದೇಶಕ್ಕೆ ಹೋದರೂ ಹೀಗೆ ಅನಿಸುವುದು ಸಹಜ. ಒಂದೋ, ಎರಡೋ ವರದಿ ಬರೆದು ಸುಮ್ಮನಾಗುವುದು ಸಾಧ್ಯವೇ ಇಲ್ಲ. ಆರ್ಥಿಕ ಸಂಕಟಕ್ಕೆ ಪರಿಹಾರ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಜನರಿಗೆ ರಾಜಕಾರಣಿಗಳನ್ನು ಕಂಡರೆ ಒಂಥರ ಸಿಟ್ಟು. ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲ ರಾಜಕಾರಣಿಗಳೇ ಕಾರಣ ಎಂಬುದು ಅವರ ಆಕ್ರೋಶವಿದ್ದಿರಬಹುದು.

ಅಷ್ಟೇ ಅಲ್ಲ, ರಾಜಕಾರಣಿಗಳೆಂದರೆ ಏನೂ ಗೊತ್ತಿಲ್ಲದವರು, ದಡ್ಡರು ಎಂಬ ಕಲ್ಪನೆಯೂ ಇದೆ. ನಮ್ಮ ಜತೆಗಿದ್ದ ಗೈಡ್ ಬಳಿ, ‘ನಿಮ್ಮ ರಾಜಕಾರಣಿಗಳು ಹೇಗೆ?’ಎಂದು ಕೇಳಿದೆ. ‘ರಾಜಕಾರಣಿಗಳೇ ಹಾಗೆ. ನೀವು ಯಾವುದೇ ದೇಶಕ್ಕೆ ಹೋಗಿ, ಅವರು ಒಂದೇ ರೀತಿ. ಅವರ ನಿರ್ಧಾರಗಳೆಲ್ಲ ವಿಚಿತ್ರ. ಅವರನ್ನು ದಡ್ಡರೆನ್ನಬೇಕೋ, ಬುದ್ಧಿವಂತರೆನ್ನಬೇಕೋ ಗೊತ್ತಾಗೊಲ್ಲ’ಎಂದ. ‘ನೀವು ಹೇಗೆ ಹೇಳ್ತೀರಿ?’ಎಂದು ಕೇಳಿದೆ. ಅದಕ್ಕೆ ಆತ ಒಂದು ಪ್ರಸಂಗವನ್ನು ಹೇಳಿದ.

ಒಮ್ಮೆ ಇಸ್ರೇಲಿನ ಕ್ಯಾಬಿನೆಟ್ ಸಚಿವರೆಲ್ಲ ಆರ್ಥಿಕ ಬಿಕ್ಕಟ್ಟಿನಂಥ ಗಂಭೀರ ವಿಷಯದ ಬಗ್ಗೆ ಚರ್ಚಿಸುತ್ತಿದ್ದರು. ಆಗ ಸಚಿವನೊಬ್ಬ ‘ನಾವು ಅಮೆರಿಕದ ಮೇಲೆ ಯುದ್ಧ ಸಾರಬೇಕು’ಎಂದು ಸಲಹೆಯನ್ನಿತ್ತ. ಎಲ್ಲ ಸಚಿವರೂ ಅವನತ್ತ ನೋಡಿದರು. ‘ಅಮೆರಿಕದ ವಿರುದ್ಧ ನಾವ್ಯಾಕೆ ಯುದ್ಧ ಮಾಡಬೇಕು. ಅದರಿಂದ ನಮ್ಮ ಆರ್ಥಿಕ ಸಮಸ್ಯೆ ಬಗೆಹರಿಯುವುದಾ?’ಎಂದು ಎಲ್ಲರೂ ಕೇಳಿದರು. ಅದಕ್ಕೆ ಆ ಸಚಿವ ಹೇಳಿದ – ‘ನೋಡಿ, ನಾವು ಅಮೆರಿಕದ ಮೇಲೆ ಯುದ್ಧ ಸಾರುತ್ತೇವೆಂದುಕೊಳ್ಳಿ. ಅವರು ನಮ್ಮನ್ನು ಸೋಲಿಸುತ್ತಾರೆ. ಇಂಥ ಸಂದರ್ಭದಲ್ಲಿ ಅಮೆರಿಕ ಕಷ್ಟದಲ್ಲಿರುವ ದೇಶಕ್ಕೆ ಆರ್ಥಿಕ ನೆರವು ಕೊಡುತ್ತದೆ.

ನಮ್ಮ ದೇಶಕ್ಕೆ ಸಹ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ಹರಿದು ಬರುತ್ತದೆ. ಆ ಹಣದಲ್ಲಿ ನಾವು ನಮ್ಮ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇಸ್ರೇಲ್‌ನ್ನು ಇನ್ನೂ ಬಲಿಷ್ಠವಾಗಿ ಕಟ್ಟಬಹುದು. ಇದರಿಂದ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ’.ಎಲ್ಲ ಸಚಿವರೂ ಏಕಾಏಕಿ ಸುಮ್ಮನಾದರು. ಆದರೆ ಒಬ್ಬ ಸಚಿವ ಎದ್ದು ನಿಂತು ಹೇಳಿದ -‘ದೇಶ ಸ್ವತಂತ್ರಗೊಂಡ ನಂತರ ಇಸ್ರೇಲ್ ಎಲ್ಲ ಯುದ್ಧಗಳಲ್ಲೂ ಗೆದ್ದಿದೆ. ಈಗ ಅಮೆರಿಕದ ಮೇಲೆ ಯುದ್ಧ ಸಾರಿದರೆ, ನಾವು ಗೆದ್ದರೆ ಏನು ಮಾಡೋದು? ಆಗ ನಮಗೆ ಆರ್ಥಿಕ ನೆರವು ಬರುವುದಿಲ್ಲವಲ್ಲ?’ಇಸ್ರೇಲಿನಲ್ಲಿ ಜ್ಯೋತಿಷಿಗಳಿದ್ದಾರಾ? ಇಸ್ರೇಲಿನಲ್ಲಿ ನವಜಾತ ಶಿಶುಗಳಿಗೆ ‘ನೋಮ್’(Noam) ಎಂಬ ಆರಂಭಿಕ ಹೆಸರು ಇಡುವುದು ಸಾಮಾನ್ಯ ಎನ್ನುವಷ್ಟು ಜನಪ್ರಿಯ.

ಈ ಹೆಸರನ್ನು ಗಂಡು ಮಗುವಿಗೆ ಇಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಗುವಿಗೂ ಈ ಹೆಸರನ್ನು ಇಡುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ, ನೂರು ನವಜಾತ ಶಿಶುಗಳ ಪೈಕಿ ನಲವತ್ತೆರಡು ಶಿಶುಗಳಿಗೆ ‘ನೋಮ್’ಎಂಬ ಹೆಸರಿಡಲಾಗಿದೆ. ಈ ಎಲ್ಲಾ ಮಕ್ಕಳು ದೊಡ್ಡವರಾದ ನಂತರ ಅವರ ಹೆಸರು ಗೊಂದಲ ಸೃಷ್ಟಿಸುವುದರಲ್ಲಿ ಸಂದೇಹವಿಲ್ಲ. ತಮ್ಮ ಮಕ್ಕಳು ರಾಜಕಾರಣಿಯಾಗಲಿ ಎಂದು ಅಪೇಕ್ಷಿಸುವ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಯಿಜಾಕ್ ಅಥವಾ ಚೈಮ್ ಎಂಬ ಹೆಸರನ್ನು ಇಡುತ್ತಾರೆ. ಯಾರಿಗಾದರೂ ಈ ಹೆಸರನ್ನು ಇಟ್ಟರೆ, ‘ನೀನು ಇಸ್ರೇಲಿನ ರಾಷ್ಟ್ರಾಧ್ಯಕ್ಷನಾಗುವ ಅಥವಾ ಪ್ರಧಾನಿಯಾಗುವ
ಅರ್ಹತೆ ಪಡೆದೆ’ಎಂದು ಹಾಸ್ಯ ಮಾಡುವುದುಂಟು.

ಅದಕ್ಕೆ ಕಾರಣವಿದೆ. 1948ರಲ್ಲಿ ಇಸ್ರೇಲ್ ಸ್ವತಂತ್ರ ರಾಷ್ಟ್ರವಾದ ಬಳಿಕ, ಈವರೆಗೆ ಹತ್ತು ಅಧ್ಯಕ್ಷರು ಅಧಿಕಾರಕ್ಕೆ ಬಂದಿದ್ದಾರೆ. ಆ ಪೈಕಿ ನಾಲ್ವರ ಹೆಸರಲ್ಲಿ ಯಿಜಾಕ್ ಇಲ್ಲವೇ ಚೈಮ್ ಎಂಬ ಹೆಸರಿದೆ. ಯಿಜಾಕ್ ಬೆಂಜ್ವಿ, ಚೈಮ್ ವೈಜ್‌ಮನ್, ಯಿಜಾಕ್ ನವೊನ್, ಚೈಮ್ ಹೆರ್ಜೋಗ್ ಇಸ್ರೇಲಿನ ಅಧ್ಯಕ್ಷರಾಗಿದ್ದರು. ಪ್ರಧಾನಿಗಳ ಪೈಕಿ ಈ ಹೆಸರಿರುವವರೆಂದರೆ, ಯಿಜಾಕ್ ರಾಬಿನ್ ಹಾಗೂ ಯಿಜಾಕ್ ಶಮಿರ್ ( ಇವರಿಬ್ಬರೂ ಹೆಸರಿನ ಮಹಾತ್ಮೆಯೇನೋ ಎಂಬಂತೆ ತಲಾ ಎರಡು ಬಾರಿ ಪ್ರಧಾನಿಯಾದವರು). ಹದಿನೆಂಟಕ್ಕೂ ಹೆಚ್ಚು ಹಾಲಿ ಸಂಸದರು ಹಾಗೂ ಸಚಿವರ ಮಕ್ಕಳ ಹೆಸರಿನಲ್ಲಿ ಯಿಜಾಕ್ ಇಲ್ಲವೇ ಚೈಮ್ ಇದೆ. ಪ್ರಧಾನಿ, ಅಧ್ಯಕ್ಷರಾಗುವವರೆಲ್ಲ ಈ ಹೆಸರಿನವರೋ, ಈ ಹೆಸರಿಟ್ಟರೆ ಪ್ರಧಾನಿ, ಅಧ್ಯಕ್ಷರಾಗುತ್ತಾರೋ ಎಂಬುದು ಮಾತ್ರ ಚರ್ಚಾಸ್ಪದ.

ಇಸ್ರೇಲ್ ನಲ್ಲೂ ನಮ್ಮಲ್ಲಿರುವಂತೆ ಜ್ಯೋತಿಷಿಗಳೇನಾದರೂ ಇದ್ದಾರಾ? ಕಂಪ್ಯೂಟರ್ ಇಲ್ಲದ ಮನೆಗಳಿಲ್ಲ ಇಸ್ರೇಲ್‌ಗೆ ಹೋದಾಗ ಅಲ್ಲಿನ ಜಾಫಾ ಪ್ರದೇಶ (ಓಲ್ಡ್ ಸಿಟಿ)ದಲ್ಲಿರುವ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅವರಿಗೆ ನಾಲ್ವರು ಮಕ್ಕಳು. ಆ ಮನೆಯಲ್ಲಿ ಐದು ಕಂಪ್ಯೂಟರ್‌ಗಳಿದ್ದವು. ‘ಮನೆಯಲ್ಲಿ ಇಷ್ಟೊಂದು ಕಂಪ್ಯೂಟರ್‌ಗಳೇಕೆ?’ಎಂದು ಸಹಜವಾಗಿ ಕೇಳಿದೆ. ಅದಕ್ಕೆ ಆ ಸ್ನೇಹಿತರು ಹೇಳಿದರು – ‘ನೀವು ಇಸ್ರೇಲಿನಲ್ಲಿ ಟಿವಿ ಇಲ್ಲದ ಮನೆಗಳನ್ನು ನೋಡಬಹುದು. ಆದರೆ ಕಂಪ್ಯೂಟರ್‌ಗಳಿಲ್ಲದ ಮನೆ ನೋಡಲು ಸಾಧ್ಯವಿಲ್ಲ. ನೂರರಲ್ಲಿ ಎಪ್ಪತ್ತೈದಕ್ಕಿಂತ ಹೆಚ್ಚು ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಕಂಪ್ಯೂಟರ್‌ಗಳಿವೆ. Israel has gone one of the highest percentages in the world of home computers per capita. ಭಾರತದಲ್ಲಿ ಎಲ್ಲರ ಮನೆಗಳಲ್ಲೂ ಟಿವಿ ಇದೆಯೆಂದು ಕೇಳಿದ್ದೇನೆ. ಇಸ್ರೇಲಿನಲ್ಲಿ ಹೋಮ್ ಕಂಪ್ಯೂಟರ್ ಗಳಿಗೆ ಆ ಸ್ಥಾನ.’ಇಸ್ರೇಲ್‌ನ ಶೇ. 96ರಷ್ಟು ಮನೆಗಳು ಸೋಲಾರ್ ಹೀಟರ್‌ಗಳನ್ನು ಹೊಂದಿವೆ. ನೀರು ಕಾಯಿಸಲು ಯಾರೂ ಎಲೆಕ್ಟ್ರಿಕ್ ಗೀಸರ್‌ಗಳನ್ನು ಬಳಸುವುದಿಲ್ಲ.

ಮಧ್ಯಪ್ರಾಚ್ಯ ದೇಶಗಳ ಪೈಕಿ ಇಸ್ರೇಲಿನಷ್ಟು ಒಣಭೂಮಿ ಅಥವಾ ಮರುಭೂಮಿ ಹೊಂದಿರುವ ದೇಶ ಮತ್ತೊಂದಿಲ್ಲ. ಇಸ್ರೇಲ್‌ನ ದಕ್ಷಿಣಕ್ಕಿರುವ ನೆಗೆವ್ ಪ್ರದೇಶದಲ್ಲಿ ನೂರು ಕಿಮೀ ಪ್ರಯಾಣ ಮಾಡಿಯೂ ಒಂದು ಮರ, ಹುಲ್ಲು, ಹಸುರು ಕಣ್ಣಿಗೆ ಬೀಳದಿರಬಹುದು. ಅಂಥ ರಣರಣ ಒಣಒಣ ಭೂಮಿ! ಆದರೂ ಕೃಷಿಯಲ್ಲಿ ಹಾಗೂ ಜಲ ನಿರ್ವಹಣೆಯಲ್ಲಿ ವಿಶ್ವಕ್ಕೇ ಮಾದರಿ. ಜಗತ್ತಿನಲ್ಲಿ ಬೆಳೆಯುವ ಹೂಗಳಲ್ಲಿ ಶೇ.8ರಷ್ಟು ಇಸ್ರೇಲಿನಲ್ಲಿಯೇ ಬೆಳೆಯುತ್ತಾರೆಂದರೆ ಅಚ್ಚರಿಯಾಗಬಹುದು. ಈ ವರ್ಷದ ಪ್ರೇಮಿಗಳ ದಿನದಂದು (ವ್ಯಾಲೆಂಟೈನ್ಸ್ ಡೇ) ಇಸ್ರೇಲ್ ಯುರೋಪಿಗೆ ಆರು ಕೋಟಿ ಹೂವುಗಳನ್ನು ರಫ್ತು ಮಾಡಿತ್ತು.

ಪ್ರತಿ ವರ್ಷ ಸುಮಾರು 245 ದಶಲಕ್ಷ ಕೆಂಪು ಗುಲಾಬಿ ಹೂಗಳನ್ನು ಇಸ್ರೇಲ್ ಬೇರೆ ದೇಶಗಳಿಗೆ ಕಳಿಸುತ್ತದೆ. ಮೂವರಲ್ಲ, ಒಬ್ಬನೇ! ಇಸ್ರೇಲಿನ ಬೆನ್‌ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ನನ್ನ ಸ್ವಾಗತಕ್ಕೆ ಅಲ್ಲಿನ ವಿದೇಶಾಂಗ ವ್ಯವಹಾರ ಖಾತೆಯ ಕಿರಿಯ ಅಧಿಕಾರಿಯೊಬ್ಬ ಬಂದಿದ್ದ. ಅವನ ಜತೆಗೆ ವಿಮಾನ ನಿಲ್ದಾಣದ ಸಹಾಯಕ ಸಿಬ್ಬಂದಿಯೂ ಇದ್ದ. ಪ್ರಯಾಣಿಕರು ಆಗಮಿಸುವ ಜಾಗದಲ್ಲಿ ನಿಂತಿದ್ದ ಇವರಿಬ್ಬರು, ಪ್ಲೆಕಾರ್ಡ್‌ನಲ್ಲಿ ‘ವಿಶ್ವೇಶ್ವರ ರಾಮಚಂದ್ರ ಭಟ್’ಎಂದು ಬರೆದು ನನ್ನ ಆಗಮನದ ನಿರೀಕ್ಷೆಯಲ್ಲಿದ್ದರು.

ಆ ಬೋರ್ಡ್‌ನಲ್ಲಿ ನನ್ನ ಹೆಸರು ಬರೆದಿರುವುದನ್ನು ನೋಡಿ, ನಾನು ಅವರತ್ತ ಹೋಗಿ “I am Vishweshwar’ಎಂದು ಪರಿಚಯಿಸಿಕೊಂಡೆ. ಅವರಿಬ್ಬರೂ ನನ್ನನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲಿಯೇ ನಿಂತಿದ್ದ ಅವರು ಇನ್ಯಾರದೋ ಆಗಮನದ ನಿರೀಕ್ಷೆಯಲ್ಲಿದ್ದಂತಿತ್ತು. ‘ನೀವು ಬೇರೆಯವರ ಆಗಮನವನ್ನು ನಿರೀಕ್ಷಿಸುತ್ತಿದ್ದೀರಾ?’ಎಂದು ಕೇಳಿದೆ. ಅದಕ್ಕೆ ಅವರಲ್ಲೊಬ್ಬ ‘ನೀವು ವಿಶ್ವೇಶ್ವರ್. ಇನ್ನಿಬ್ಬರಾದ ರಾಮಚಂದ್ರ ಮತ್ತು ಭಟ್ ಎಲ್ಲಿ?’ಎಂದು ಕೇಳಿದ.

‘ಇಲ್ಲ ಮಾರಾಯ, ವಿಶ್ವೇಶ್ವರ ರಾಮಚಂದ್ರ ಭಟ್ ಅಂದ್ರೆ ಒಬ್ಬನದ್ದೇ ಹೆಸರು. ಮೂವರದ್ದಲ್ಲ.’ಎಂದೆ. ನನ್ನ ಹೆಸರನ್ನು ಜೀರ್ಣಿಸಿಕೊಳ್ಳಲು ಅವರಿಬ್ಬರಿಗೆ ಎರಡು ನಿಮಿಷ ಬೇಕಾಯಿತು.

Leave a Reply

Your email address will not be published. Required fields are marked *

five + 7 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top