ತಂತ್ರಕ್ಕೆ ಪ್ರತಿತಂತ್ರ ಎಂದರೆ ಕೆಟ್ಟ ಅನುಕರಣೆಯೆ ?

Posted In : ಸಂಗಮ, ಸಂಪುಟ

ತನ್ನ ಸುತ್ತಲಿನದು ಬದಲಾಗುತ್ತಿದ್ದಂತೆ ತಾನೂ ಬದಲಾಗುವುದು ವಿಕಾಸವಾದದ ಜೀವಿಯ ಲಕ್ಷಣ. ಇಂದು ಕಾಂಗ್ರೆಸ್ ಅಂಥದೇ ಹಂತದಲ್ಲಿದೆ. ದೇಶ ಹಿಂದುತ್ವದ ಜಪ ಮಾಡುತ್ತಿರುವ ಇವತ್ತಿನ ಕಾಲಘಟ್ಟದಲ್ಲಿ ಕಾಂಗ್ರೆಸ್ ಕೂಡ ಪೊರೆಕಳಚಿ ಹೊಸ ವೇಷ ಧರಿಸುತ್ತಿರುವುದು ಸ್ಪಷ್ಟ. ಆದರೆ ಇದು ತಂತ್ರಕ್ಕೆ ಪ್ರತಿತಂತ್ರವಾ ಎಂಬ ಅನುಮಾನ ಮೂಡುತ್ತಿರುವುದು ಸುಳ್ಳಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ ಕಾಣುತ್ತಿದೆ ಕಾಂಗ್ರೆಸ್‌ನ ‘ಮೃದು ಹಿಂದುತ್ವ’ದ ನಡೆ. ಗುಜರಾತ್ ಚುನಾವಣೆ ಇದನ್ನು ಸಾಬೀತು ಪಡಿಸುತ್ತಿದೆ. ನರೇಂದ್ರ ಮೋದಿಯವರ ಹಿಂದುತ್ವದ ಹೊಡೆತಕ್ಕೆ ತತ್ತರಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುವುದು, ಜಾತ್ಯತೀತತೆಯಂಥ ತನ್ನ ಖಾಯಂ ಬಾಣಗಳನ್ನು ಬದಿಗಿರಿಸಿ ಹಿಂದುತ್ವ ಎಂಬ ಹೊಸ ಬಾಣವನ್ನು ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಂಡಿರುವುದು ಈಗ ಸ್ಪಷ್ಟವಾಗಿದೆ. ಒಂದೆಡೆ ತನ್ನ ಯುವರಾಜನ ಪೆದ್ದುತನಗಳೊಂದಿಗೆ ಏಗುತ್ತಾ, ಮತ್ತೊಂದೆಡೆ ಹೊಸ ತಂತ್ರಗಳನ್ನು ರೂಪಿಸುವ ಅನಿವಾರ್ಯ ಕಾಂಗ್ರೆಸ್‌ಗಿದೆ.

ಗುಜರಾತ್ ಚುನಾವಣೆ ಘೋಷಣೆಯಾದ ದಿನದಿಂದಲೇ ಕಾಂಗ್ರೆಸ್ ಭಿನ್ನವಾಗಿ ಯೋಚಿಸುತ್ತಿದೆ. ಇದಕ್ಕೆ ಸಾಕ್ಷಿ ರಾಹುಲ್ ಗಾಂಧಿಯ ನವಸರ್ಜನ್ ಯಾತ್ರೆ. ಈ ಯಾತ್ರೆಯಲ್ಲಿ ರಾಹುಲ್ ಹೊಸ ನಡೆಯೆಂಬಂತೆ ಗುಜರಾತಿನ ಬಹುತೇಕ ಎಲ್ಲ ದೇವಾಲಯಗಳಿಗೆ ಭೇಟಿ ನೀಡಿದರು. ಕಾಂಗ್ರೆಸ್ ಅದನ್ನು ಅತ್ಯಂತ ವ್ಯವಸ್ಥಿತವಾಗಿ ಟ್ವಿಟರ್‌ನಲ್ಲಿ ಹಾಕಿತು. ರಾಹುಲ್ ದೇವಾಲಯಗಳಲ್ಲಿ ಆರತಿ ತೆಗೆದುಕೊಳ್ಳುತ್ತಿರುವುದು, ಕುಂಕುಮ ಹಚ್ಚಿಕೊಂಡಿದ್ದು, ಕೇಸರಿ ಶಾಲು ಹೊದ್ದಿದ್ದು ಈ ಎಲ್ಲ ಫೋಟೋಗಳನ್ನೂ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಹರಿಬಿಟ್ಟಿತು. ಮುಂದಿನ ನಡೆಯಾಗಿ ಕಾಂಗ್ರೆಸ್‌ನ ಭಾವೀ ಅಧ್ಯಕ್ಷ ಎತ್ತಿನ ಗಾಡಿಯ ಮೇಲೆ ನಿಂತೂ ಪ್ರಚಾರ ಮಾಡಿದರು. ಗೋಶಾಲೆಗೂ ಭೇಟಿ ನೀಡಿದರು. ಇತ್ತೀಚೆಗೆ ಸೋಮನಾಥ್ ದೇವಾಲಯಕ್ಕೂ ಭೇಟಿ ನೀಡಿ ವಿವಾದಕ್ಕೆ ತುತ್ತಾದರು.

ನನ್ನದೊಂದು ಪ್ರಶ್ನೆ. ಕಾಂಗ್ರೆಸ್‌ಗೆ ಈ ಪರಿಯ ಬೌದ್ಧಿಕ ದಾರಿದ್ರ್ಯ ಬಂತಾ? ಸ್ವತಂತ್ರ ಭಾರತದ ಮುಕ್ಕಾಲು ಭಾಗ ಆಡಳಿತ ನಡೆಸಿದ ಪಕ್ಷವೊಂದು ಇಂದು ಚುನಾವಣಾ ತಂತ್ರಗಳಿಗೆ ಪರದಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಅಯ್ಯೋ ಎನಿಸುತ್ತದೆ. ಕಾಂಗ್ರೆಸ್‌ನ ಪ್ರಚಾರ ತಂತ್ರಗಳನ್ನು ರೂಪಿಸುತ್ತಿರುವವರ ವಿಳಾಸವೇನಾದರೂ ಇದ್ದರೆ ಬೇಕಿತ್ತು. ಅವರೇನಾದರೂ ಮೊದಲು ಬಿಜೆಪಿ ಪಾಳಯದಲ್ಲಿದ್ದರಾ ಎಂಬ ಅನುಮಾನ ಕಾಡುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಸೆಕ್ಯುಲರಿಸಂನ್ನು ಪ್ರತಿಪಾದಿಸುತ್ತ ಬಂದ ಪಕ್ಷ. ಅಲ್ಪಸಂಖ್ಯಾತರನ್ನು ಓಲೈಸುತ್ತ, ಹಿಂದೂ ಮತ, ಮುಸ್ಲಿಂ ಮತ ಎಂದು ಬಹಿರಂಗವಾಗಿಯೇ ದೇಶವನ್ನು ವಿಭಾಗಿಸುತ್ತ, ಹಿಂದುತ್ವದ ದನಿ ಎತ್ತಿದವರ ದಮನ ಮಾಡುತ್ತ ಬಂದ ಪಕ್ಷ. ಅಂಥ ಪಕ್ಷವೊಂದು ಇದ್ದಕ್ಕಿದ್ದಂತೆ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ಅಸ್ತ್ರವನ್ನೇ ಕೈಗೆತ್ತಿಕೊಳ್ಳುತ್ತದೆ ಎಂದರೆ ಮತದಾರ ಅವರನ್ನು ನಂಬುತ್ತಾನಾ? ‘ನಾನು ಶಿವ ಭಕ್ತ, ಸತ್ಯವನ್ನೇ ನುಡಿಯುತ್ತೇನೆ’ ಎಂದಿದ್ದಾರೆ ರಾಹುಲ್. ಸ್ವತಃ ಅವರ ಧರ್ಮದ ಕುರಿತೇ ಹಲವಾರು ಪ್ರಶ್ನೆಗಳೆದ್ದಿರುವ ಈ ಸಂದರ್ಭದಲ್ಲಿ ರಾಹುಲ್ ಹಣೆಗೆ ಕುಂಕುಮವಿಟ್ಟು ಬಿಟ್ಟರೆ ನಂಬಲು ಇದು 70 ರ ದಶಕವಲ್ಲ. ಜನರೂ ಅಂದಿನಷ್ಟು ಮುಗ್ಧರಲ್ಲ.

ಮೋದಿ ಮುನ್ನೆಲೆಗೆ ಬರುತ್ತಿದ್ದಂತೆ ಅವರನ್ನು ವಾಚಾಮಗೋಚರವಾಗಿ ಬೈಯುವುದನ್ನೇ ಕಾಂಗ್ರೆಸ್ ರೂಢಿಸಿಕೊಂಡಿತ್ತು. 2007ರ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಮೋದಿಯನ್ನು ‘ಸಾವಿನವ್ಯಾಪಾರಿ’ ಎಂದರು. ಆಗ ಬಿಜೆಪಿ ಅದನ್ನೇ ಟ್ರಂಪ್ ಕಾರ್ಡ್ ಆಗಿ ಬಳಸಿ ಅನುಕಂಪ ಗಿಟ್ಟಿಸಿಕೊಂಡು ಬಿಟ್ಟಿತು. ಅದನ್ನೆಲ್ಲ ನೋಡಿ ಕಾಂಗ್ರೆಸ್ ಪಾಠ ಕಲಿತಂತಿದೆ. ಈ ಬಾರಿ ಅದು ಮೋದಿಯನ್ನು ಎಲ್ಲಿಯೂ ಕೆಟ್ಟದಾಗಿ ಬೈಯ್ದಿಲ್ಲ ಅಥವಾ ಬಿಜೆಪಿಗೆ ಅನುಕಂಪ ಗಿಟ್ಟಿಸಲು ಅನುಕೂಲವಾಗುವಂಥ ಯಾವ ಹೇಳಿಕೆಯನ್ನೂ ನೀಡಿಲ್ಲ. ತೀರಾ ಇತ್ತೀಚೆಗೆ ‘ಚಹಾ ಮಾರುವವ ದೇಶದ ಪ್ರಧಾನಿಯಾದ’ ಎಂಬ ರಾಹುಲ್ ಹೇಳಿಕೆಗೆ ಮೋದಿ, ‘ಚಹಾ ಮಾರಿದ್ದೇನೆ ಆದರೆ ದೇಶ ಮಾರಿಲ್ಲ ಎಂದು ಸರಿಯಾಗೇ ಟಾಂಗ್ ನೀಡಿದರು. ಇದಾಗುತ್ತಿದ್ದಂತೆ ಮತ್ತೆ ಎಚ್ಚೆತ್ತುಕೊಂಡು ಬಿಟ್ಟಿತು ಕಾಂಗ್ರೆಸ್. ಸೋನಿಯಾರಂತೆ ಮೋದಿಯನ್ನು ಎಲ್ಲೂ ಹೀಗಳಿಯಲು ಹೋಗದೆ,ಅವರದೇ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಇದು ಸ್ವತಃ ಬಿಜೆಪಿಗೆ ಹಾಗೂ ದೇಶದ ಜನರಿಗೂ ಅಚ್ಚರಿ ತಂದಿದೆ. ಕಾಂಗ್ರೆಸ್ ಬಿಜೆಪಿಯ ತಂತ್ರವನ್ನೇ ಮಾಡಿದರೂ ಇದೊಂಥರಾ ಬುದ್ಧಿವಂತ ನಡೆ ಎಂದೇ ಹೇಳಬೇಕಿದೆ. ದೇಶದ ಜನರ ನಾಡಿಮಿಡಿತ ಇಷ್ಟು ವರ್ಷಗಳ ಮೇಲಾದರೂ ಕಾಂಗ್ರೆಸ್‌ಗೆ ಅರ್ಥವಾಯಿತಲ್ಲ !

ರಾಹುಲ್ ಈ ಬಾರಿ ಮೋದಿಯವರನ್ನು ಮತ್ತೊಂದು ವಿಚಾರದಲ್ಲೂ ಅನುಕರಿಸಿದ್ದಾರೆ. ಅದೇನೆಂದರೆ ಜನರೊಂದಿಗೆ ಮಾತಿಗಿಳಿದಿದ್ದು. ರೋಡ್‌ಶೋ ಜತೆಗೆ ಜನರನ್ನು ಬೇರೆ ಬೇರೆ ಪ್ರಶ್ನೆ ಕೇಳಿ ಭಿನ್ನ ಎನಿಸಿಕೊಳ್ಳುತ್ತಿದ್ದಾರೆ. ನಾವು ನಿಮ್ಮ ಬಡತನವನ್ನು ನೀಗಿಸ್ತೀವಿ, ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ಕೊಡ್ತೀವಿ, ಕಾನೂನಿನಲ್ಲಿ ರಕ್ಷಣೆ ಕೊಡ್ತೀವಿ ಎಂಬ ಹಳೆಯ ಶಂಖವನ್ನೇ ಊದದೇ, ಥೇಟ್ ಮೋದಿ ತರವೇ ನಿಮಗೆ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗ್ತಿದೆಯಾ? ನಿಮ್ಮ ಮಕ್ಕಳಿಗೆ ಕೆಲಸ ಸಿಕ್ಕಿದೆಯಾ? ನಿಮಗೆ ಶಾಲೆಯ ದುಬಾರಿ ಫೀಸ್ ಕಟ್ಟಲು ಆಗ್ತಿದೆಯಾ? ಎಂದೆಲ್ಲ ಪ್ರಶ್ನೆ ಕೇಳತೊಡಗಿದ್ದಾರೆ. ಇವೆಲ್ಲ ಮೋದಿಯದೇ ತಂತ್ರ. ತಂತ್ರಕ್ಕೆ ಪ್ರತಿತಂತ್ರ ಎಂದರೆ ಅವರನ್ನೇ ಅನುಕರಿಸುವುದು ಎಂದು ಗೊತ್ತಿರಲಿಲ್ಲ.

ಬಿಜೆಪಿ ಮೊದಲಿನಿಂದಲೂ ಹಿಂದುತ್ವದ ಚುಂಗನ್ನು ಹಿಡಿದು ಬಂದ ಪಕ್ಷ. ಅದು ಓಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಸಲಿಲ್ಲ ಅಥವಾ ಜಾತ್ಯತೀತ ಮಂತ್ರವನ್ನೂ ಪಠಿಸಲಿಲ್ಲ. ಆದರೆ ಕಾಂಗ್ರೆಸ್ ಹೀಗೆ ಇದ್ದಕ್ಕಿದ್ದಂತೆ ಯೂಟರ್ನ್ ತೆಗೆದುಕೊಂಡು ಬಿಜೆಪಿಯ ಮುಖವಾಡವನ್ನೇ ಧರಿಸತೊಡಗಿದರೆ ಅದನ್ನರ್ಥ ಮಾಡಿಕೊಳ್ಳದಷ್ಟು ಮೂಢರೆ ಜನರು? ಅಷ್ಟಕ್ಕೂ ಒರಿಜಿನಲ್ ಇರುವಾಗ ಡೂಪ್ಲಿಕೇಟ್ ಯಾಕೆ ಒಪ್ಪಿಕೊಳ್ಳುತ್ತಾರೆ ಜನ? ಅಷ್ಟೂ ಅರ್ಥವಾಗುತ್ತಿಲ್ಲವೆ ಕಾಂಗ್ರೆಸ್‌ಗೆ? ರಾಹುಲ್‌ರ ಹೊಸ ನಡೆಯನ್ನು ಟೀಕಿಸುತ್ತಾ ಅರುಣ್ ಜೇಟ್ಲಿ ಇದನ್ನೇ ಹೇಳಿದ್ದಾರೆ. ‘ಒರಿಜಿನಲ್ ಇರುವಾಗ ಜನರು ಕ್ಲೋನಿಂಗ್’ ಯಾಕೆ ಬಯಸುತ್ತಾರೆ ಎಂದು ಕೇಳಿದ್ದಾರೆ. ಕೋಹಿನೂರ್ ವಜ್ರದಂಥದ್ದನ್ನು ಹತ್ತು ತಯಾರಿಸಿದರೂ ಮೂಲ ಕೋಹಿನೂರ್ ಬೆಲೆ ಇನ್ಯಾವುದಕ್ಕೂ ಬರಲಾರದು ಎಂದು ಕಾಂಗ್ರೆಸ್‌ಗೆ ಅರ್ಥವೇ ಆಗುತ್ತಿಲ್ಲವೇಕೆ?

‘ರಾಹುಲ್ ಶಿವ ಭಕ್ತ, ಅವರು ಜನಿವಾರಧಾರಿ ಬ್ರಾಹ್ಮಣ’ ಎಂದೆಲ್ಲ ಹೇಳಿಕೆ ನೀಡಿ ಕಾಂಗ್ರೆಸ್ ದಿನ ಬೆಳಗಾದರೆ ಹೊಸ ಹೊಸ ನಗೆ ಬುಗ್ಗೆಗಳನ್ನು ಚಿಮ್ಮಿಸುತ್ತಿದೆ. ಸೋಮನಾಥ್‌ಕ್ಕೆ ಭೇಟಿ ನೀಡಿ ತಮ್ಮ ಧರ್ಮವನ್ನೇ ಪ್ರಶ್ನೆಗಿರಿಸಿದರು ರಾಹುಲ್. ಆಗ ತಮ್ಮ ನಾಯಕನ ಕಾಪಾಡಲು ಕಾಂಗ್ರೆಸ್ ಅವರನ್ನು ಹಿಂದೂ ಎಂದಿತಲ್ಲದೆ ಹಿಂದೂಗಳಲ್ಲೇ ಅತ್ಯುತ್ತಮ ಎನಿಸಿದ ಬ್ರಾಹ್ಮಣ ಪಟ್ಟವನ್ನೇ ಕಟ್ಟಿತು. ಅಷ್ಟೇ ಅಲ್ಲದೆ ಹಣೆಗೆ ತಿಲಕವಿಟ್ಟ ರಾಹುಲ್‌ರ ಫೋಟೋವನ್ನು ಪೋಸ್ಟರ್‌ನಲ್ಲಿ ಪ್ರಕಟಿಸಿ ‘ಪಂಡಿತ್’ ಎಂಬಂತೆ ಫೋಸು ಕೊಡಿಸಿತು. ಇವನ್ನೆಲ್ಲ ಕಾಂಗ್ರೆಸ್ ಮನಸ್ಸಿನಿಂದ ಮಾಡಿಲ್ಲ. ಕೇವಲ ಚುನಾವಣಾ ತಂತ್ರವಾಗಿ ಮಾಡಿತು. ಇದೆಲ್ಲ ಜನರಿಗೆ ಈಗಾಗಲೇ ಅರ್ಥವಾಗಿರುತ್ತೆ ಬಿಡಿ.

2009 ರಲ್ಲಿ ಇದೇ ರಾಹುಲ್ ಗಾಂಧಿ ಅಮೆರಿಕದಲ್ಲಿ ‘ಹಿಂದೂ ಮೂಲಭೂತವಾದಿಗಳು ಇಸ್ಲಾಂ ಮೂಲಭೂತವಾದಿಗಳಿಗಿಂತ ಅಪಾಯಕಾರಿ’ ಎಂದಿದ್ದರು. ‘ಹಿಂದೂ ಟೆರರಿಸ್ಟ್‌ ’ಎಂಬ ಪದವನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್. ಈಗ ಇದ್ದಕ್ಕಿದ್ದಂತೆ ‘ಮೃದು ಹಿಂದುತ್ವ’ ಎನ್ನತೊಡಗಿ ಬಿಟ್ಟರೆ ಅವರನ್ನು ನಂಬಿಬಿಡಬೇಕೆ ನಾವು? 26/11 ರ ಮುಂಬೈ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಇಡೀ ಜಗತ್ತೇ ಅನುಮಾನಪಡುತ್ತಿದ್ದಾಗ ಇದೇ ರಾಹುಲ್‌ಗಾಂಧಿ, ‘26/11 ಆರ್‌ಎಸ್‌ಎಸ್ ಕಿ ಸಾಜಿಶ್’ ಎಂಬ ಪುಸ್ತಕ ಬಿಡುಗಡೆ ಮಾಡುತ್ತಾರೆ. ಇವನ್ನೆಲ್ಲ ನೋಡಿಯೂ ಅವರ ಇಂದಿನ ವೇಷವನ್ನು ಹಗಲುವೇಷ ಎನ್ನದಿರಲು ಸಾಧ್ಯವೆ?  ಕಾಂಗ್ರೆಸ್ ತನ್ನನ್ನು ರಿಬ್ರಾಂಡಿಗ್ ಮಾಡಿಕೊಳ್ಳುತ್ತಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಆಯಾ ರಾಜ್ಯಕ್ಕೆ ತಕ್ಕಂತೆ ತನ್ನ ಐಡಿಯಾಲಜಿಗಳನ್ನು ಬದಲಾಯಿಸಿಕೊಂಡು ‘ಅವಕಾಶವಾದಿ’ತನ ಪ್ರದರ್ಶಿಸುವುದನ್ನು ಸಹಿಸಲಿಕ್ಕಾಗದು.

ನಂಬಲಿಕ್ಕೂ ಆಗದು. ಒಂದು ಪಕ್ಷ ತನ್ನ ಐಡಿಯಾಲಜಿಗಳನ್ನು ಜನತೆಗೆ ಸ್ಪಷ್ಟವಾಗಿ ತಿಳಿಸಬೇಕು ಹಾಗೂ ಅದಕ್ಕೇ ಕಚ್ಚಿಕೊಳ್ಳಬೇಕು. ಅದನ್ನು ಬಿಟ್ಟು ಕೇರಳಕ್ಕೆ ಬಂದರೆ ಮುಸ್ಲಿಮರ ಓಲೈಸುವುದು, ಗುಜರಾತಿಗೆ ಹೋದರೆ ಹಿಂದೂಗಳಂತೆ ವರ್ತಿಸುವುದು ಮಾಡಿದರೆ ಪಕ್ಷ ತನ್ನ ನೆಲೆ ಕಳೆದುಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಸಿದ್ದು ಸರಕಾರ ಬಹಿರಂಗವಾಗಿಯೇ ಹಿಂದೂಗಳನ್ನು, ಹಿಂದುತ್ವವನ್ನು, ಹಿಂದೂಗಳ ಆಚರಣೆಗಳನ್ನು ಪೋಲಿಸ್ ಬಳಸಿ ಬಗ್ಗುಬಡಿಯುವ ಕೆಲಸಕ್ಕಿಳಿದಿದೆ. ಹುಬ್ಬಳ್ಳಿಯಲ್ಲಿ ಮೌಲ್ವಿಯೊಬ್ಬರು ಪಬ್ಲಿಕ್‌ನಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದರೂ ಬಂಧಿಸಲು ಹೋಗಲಿಲ್ಲ. ಹೀಗೆ ರಾಜ್ಯಕ್ಕೊಂದು ನೀತಿ ಪ್ರದರ್ಶಿಸಿದರೆ ಈಗಾಗಲೆ ತಳಮಟ್ಟಕ್ಕಿಳಿದ ಕಾಂಗ್ರೆಸ್ ಇನ್ನು ಕೆಲವೇ ದಿನಗಳಲ್ಲಿ ಹೇಳ ಹೆಸರಿಲ್ಲದಂತಾಗುವುದರಲ್ಲಿ ಸಂಶಯವಿಲ್ಲ.

ಕಾಂಗ್ರೆಸ್ ಈಗ ಗುಜರಾತ್ ಚುನಾವಣೆ ಮುಗಿಯವವರೆಗೆ ಮಾತ್ರ ‘ಮೃದು ಹಿಂದುತ್ವ’ ವನ್ನು ಪ್ರತಿಪಾದಿಸುತ್ತಾ ಅಥವಾ ಕೊನೆಗೂ ಅದನ್ನೇ ತನ್ನ ಹೊಸ ನೀತಿಯಾಗಿಸಿಕೊಳ್ಳುತ್ತಾ ಎನ್ನುವುದು ಮುಖ್ಯ. ಕಾಂಗ್ರೆಸ್ ಮೊದಲಿನಿಂದಲೂ ಅಲ್ಪಸಂಖ್ಯಾತರನ್ನೇ ಓಲೈಸಿಕೊಂಡು ಬಂದಿದೆ ಎಂಬ ಕಾರಣಕ್ಕೆ ಹೊಸತನ ತಂದುಕೊಳ್ಳಲೇಬಾರದು ಎಂದೇನಿಲ್ಲ. ಆದರೆ ಮುಖವಾಡಗಳನ್ನು ಜನರು ಒಪ್ಪಿಕೊಳ್ಳುವುದಿಲ್ಲ. ಕಾಂಗ್ರೆಸ್‌ನ ಹೊಸ ನಡೆಯಿಂದ ಅದಕ್ಕೆ ಪ್ರಯೋಜನವಾಗುತ್ತದೋ ಇಲ್ಲವೊ, ಆದರೆ ಅಲ್ಪಸಂಖ್ಯಾತರು ಮಾತ್ರ ಅನಾಥವಾಗಿ ಹೋಗುತ್ತಾರೆ. ದೇಶದ ಸಂಪತ್ತನ್ನು ಅನುಭವಿಸಲು ಮೊದಲ ಹಕ್ಕುದಾರರೇ ಅಲ್ಪಸಂಖ್ಯಾತರು ಎಂದು ಇಷ್ಟು ವರ್ಷಗಳ ಕಾಲ ಪ್ರತಿಪಾದಿಸುತ್ತಾ ಬಂದು ಈಗ ಇದ್ದಕ್ಕಿದ್ದಂತೆ ಹಣೆಗೆ ತಿಲಕವಿಟ್ಟು, ದೇವಸ್ಥಾನಗಳಿಗೆ ಭೇಟಿ ನೀಡತೊಡಗಿಬಿಟ್ಟರೆ ಪಾಪ ಅಲ್ಪಸಂಖ್ಯಾತರು, ದಲಿತರು ಎಲ್ಲಿಗೆ ಹೋಗಬೇಕು ಕಾಂಗ್ರೆಸ್ಸಿಗರೆ?

ರಾಹುಲ್ ದೇವಸ್ಥಾನಕ್ಕೆ ಹೋದರೋ ಇಲ್ಲ, ಮಸೀದಿಗೆ ಹೋದರೋ ಎನ್ನುವುದು ಜನರಿಗೆ ಮುಖ್ಯವಲ್ಲ. ಹಾಗೆಯೇ ಕಾಂಗ್ರೆಸ್, ಬಿಜೆಪಿ ನಡೆದ ಹಾದಿಯಲ್ಲೇ ನಡೆಯತ್ತಾ ಇಲ್ಲ, ಮೊದಲಿನ ಹಾದಿಗೇ ಹೊರಳುತ್ತಾ ಎನ್ನುವುದೂ ಅಲ್ಲ. ಅನುಕರಣೆ ಬಿಟ್ಟು, ಅನನ್ಯತೆ ಕಂಡುಕೊಳ್ಳಲು ಅದು ತುಳಿಯಬೇಕಿರುವುದು ಅಭಿವೃದ್ಧಿಯ ಹಾದಿಯನ್ನು. ಬದಲಾಗಿದ್ದೇವೆ ಎಂದು ತೋರಿಸಲು ಹೋಗಿ , ಜಾತ್ಯತೀತ, ಹಿಂದೂ ಎಂಬ ಎರಡೂ ದಡಗಳ ಮೇಲೆ ಕಾಲಿಡಲು ಹೋಗಿ, ನೀರು ಪಾಲಾಗದಿದ್ದರೆ ಸಾಕು.

-ಗೀರ್ವಾಣಿ

2 thoughts on “ತಂತ್ರಕ್ಕೆ ಪ್ರತಿತಂತ್ರ ಎಂದರೆ ಕೆಟ್ಟ ಅನುಕರಣೆಯೆ ?

 1. ಮೋದಿಯವರು ನೋಟ್ ಬ್ಯಾನ್ ಮಾಡಿದರು, ಸರ್ಜಿಕಲ್ ಸ್ಟ್ರೈಕ್ ಮಾಡಿದರು ಇನ್ನೂ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದರು.ಆದರೆ ಇವೆಲ್ಲ ಚರ್ಚಾರ್ಹವಾದುವು. ಸಂಶಯಕ್ಕಾಸ್ಪದವಿಲ್ಲದ ಮೋದಿಯವರ ಸಾಧನೆ ಎಂದರೆ -ರಾಹುಲ್ ಗಾಂಧಿ ಹಣೆಯಲ್ಲಿ ನಾಮ ಧರಿಸಿ ದೇವಾಲಯಗಳಿಗೆ ಅಲೆದು ತಾನೂ ಹಿಂದೂ ಎಂದು ಹೇಳುವಂತೆ ಮಾಡಿದ್ದು.

 2. VAYYAKTIKA TEEKE TIPPASNIGALU DESHADA DHAND MUNNOTA TORISABAHUDAGIDE YENO!!
  2 jagattina aneka deeshagalalli nammaq deshakkintalu hechchu bhadrateyondige hindugalu jeevisuttiruvadu sullalla!!
  3 jati vicharagalellas vayyaktikavada nambikegalu anta nanna aqnisikle!!
  modi< gaNDHI ANTA TEEKEGILIYUVIKE YAVU*DE DHARMA KKE SAMANJASAVENISADA RAJAKEEYA!!
  4. YENE MATANADIDARU AVARAVARA GOURAVAAQNTASTU IDDE IRUTTE ALLAVE!!
  * hiriyaradavaru kiriyarige margadarshaka ragirabahudastee OOPPU MATU ALLAVE!!

Leave a Reply

Your email address will not be published. Required fields are marked *

twelve − ten =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 20.03.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ತೃತಿಯಾ,ಮಂಗಳವಾರ, ನಿತ್ಯ ನಕ್ಷತ್ರ -ಅಶ್ವಿನಿ , ಯೋಗ-ಐಂದ್ರ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top