ನಿಜವಾಗಿ ಕ್ಷಮೆ ಕೇಳಬೇಕಾದ್ದು ಪ್ರತಿಪಕ್ಷಗಳು

Posted In : ಅಂಕಣಗಳು, ಪ್ರಥಮ ಪೂಜೆ

ಇತ್ತೀಚಿನ ವರ್ಷಗಳಲ್ಲಿ ಪ್ರತಿಪಕ್ಷಗಳು ಈ ಪರಿ ಅಸಹಾಯಕವಾಗಿದ್ದನ್ನು ನೋಡಿಯೇ ಇಲ್ಲ. ಕಾರಣವೇ ಇಲ್ಲದಿದ್ದರೂ ಸರಕಾರದ ವಿರುದ್ಧ ಹೋರಾಡುತ್ತಾರೆ. ಯಾವ್ಯಾವುದೋ ಸಂಗತಿಗಳನ್ನು ಹೇಗೆಹೇಗೋ ಬಿಂಬಿಸಿ ಸರಕಾರದ ವಿರುದ್ಧ ಹೋರಾಟ ರೂಪಿಸಲು ಮುಂದಾಗುತ್ತಾರೆ. ಲೋಕಸಭೆ ಅಧಿವೇಶನಕ್ಕೆ ನಿರಂತರ ಅಡ್ಡಿ ಮಾಡುತ್ತಾರೆ. ಪ್ರತಿಯೊಂದಕ್ಕೂ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸುತ್ತಾರೆ. ಕ್ಷಮೆ ಯಾಚಿಸದಿದ್ದರೆ, ಬರದಿದ್ದರೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿಯುತ್ತಾರೆ. ಹೇಗಾದರೂ ಮಾಡಿ ಮೋದಿಯನ್ನು ಒಮ್ಮೆ ಕ್ಷಮೆಯಾಚಿಸುವಂತೆ ಮಾಡಬೇಕು. ಒಮ್ಮೆ ತಲೆತಗ್ಗಿಸುವಂತೆ ಮಾಡಿದರೆ ಜೀವನವೇ ಸಾರ್ಥಕವಾಯಿತು ಎಂಬಂತಿದೆ ಪ್ರತಿಪಕ್ಷಗಳ ವರ್ತನೆ. ಆದರೆ ಉದ್ದೇಶ ಈಡೇರುತ್ತಿಲ್ಲ. ಸರಕಾರದ ಕೆಲವು ನಿರ್ಧಾರಗಳಂತೂ ಅತ್ತ ವಿರೋಧಿಸಲೂ ಆಗುತ್ತಿಲ್ಲ, ಇತ್ತ ಸ್ವಾಗತಿಸುವಂತೆಯೂ ಇಲ್ಲ ಎಂಬಂತಿವೆ.

ಪಾಕಿಸ್ತಾನದಲ್ಲಿ ನಿರ್ದಿಷ್ಟ ದಾಳಿ ನಡೆಸಿದಾಗ ಪ್ರತಿಪಕ್ಷಗಳಿಗೆ ಇದೇ ಸ್ಥಿತಿ ಬಂದೊಂದಗಿತ್ತು. ಅದನ್ನು ವಿರೋಧಿಸುವಂತಿರಲಿಲ್ಲ. ಸ್ವಾಗತಿಸಿ, ಬೆಂಬಲಿಸಿಬಿಟ್ಟರೆ ಕೇಂದ್ರ ಸರಕಾರಕ್ಕೆ, ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚುತ್ತದೆ. ಅದಕ್ಕೇನು ಮಾಡಬೇಕು? ಆರಂಭದಲ್ಲಿ ನಿರ್ದಿಷ್ಟ ದಾಳಿಗಾಗಿ ಸೈನಿಕರನ್ನು ಹೊಗಳಿದರು. ಆಮೇಲೆ ನಿಧಾನವಾಗಿ ಸಾಕ್ಷಿ ಕೊಡಿ ಎಂದು ಒತ್ತಾಯಿಸಿದರು. ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಸೈನಿಕರ ಶವದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದೂ ಬೊಬ್ಬೆ ಹೊಡೆದರು. ಒಟ್ಟಿನಲ್ಲಿ ದೇಶದ ಕ್ರಮಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿಗೆ ಇದರಿಂದ ಯಾವುದೇ ಪ್ರಯೋಜನವಾಗದಂತೆ ನೋಡಿಕೊಳ್ಳುವುದೇ ಅವರ ಪ್ರಮುಖ ಉದ್ದೇಶವಾಗಿತ್ತು.

ಪ್ರತಿಪಕ್ಷಗಳ ಹತಾಶ ವರ್ತನೆ ಸಂಪೂರ್ಣ ಬಯಲಾಗಿದ್ದು ನೋಟು ನಿಷೇಧದ ಸಂದರ್ಭದಲ್ಲಿ. ನ.8ರಂದು ರಾತ್ರಿ ದಿಢೀರನೆ 1000 ಹಾಗೂ 500 ರು. ನೋಟುಗಳನ್ನು ನಿಷೇಧಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಾಗ, ನಿಜವಾದ ಬರಸಿಡಿಲು ಎರಗಿದ್ದು ಪ್ರತಿಪಕ್ಷಗಳ ಮೇಲೆ. ತಕ್ಷಣಕ್ಕೆ ಅದಕ್ಕೆ ಯಾವ ಪ್ರತಿರೋಧವೂ ವ್ಯಕ್ತವಾಗಲಿಲ್ಲ. ಬಹುಶಃ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಪ್ರತಿಪಕ್ಷಗಳಿಗೆ ತೋಚಲಿಲ್ಲ. ಅಷ್ಟು ಅನಿರೀಕ್ಷಿತವಾಗಿತ್ತು ಆ ನಿರ್ಧಾರ. ಸಾಮಾನ್ಯ ಜನರಿಂದ ಇದಕ್ಕೆ ದೊಡ್ಡ ಪ್ರಮಾಣದ ಸ್ವಾಗತ ವ್ಯಕ್ತವಾಯಿತು. ನೋಟು ನಿಷೇಧವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕೆಲವರಲ್ಲಿ ಮಾತ್ರ ಆತಂಕವಿತ್ತು. ಆದರೆ ಸಂಪೂರ್ಣವಾಗಿ ಅದು ಅರ್ಥವಾಗುತ್ತಿದ್ದಂತೆ ಆ ಆತಂಕ ಕೂಡ ಇಲ್ಲವಾಗಿತ್ತು. ನೋಟು ನಿಷೇಧದ ಹಿಂದಿನ ಉದ್ದೇಶವೇನೆಂಬುದು ಸಾಮಾನ್ಯ ಜನರಿಗೂ ತಕ್ಷಣವೇ ಅರ್ಥವಾಗಿತ್ತು.

ಕಪ್ಪು ಹಣ ಇಟ್ಟುಕೊಂಡವರ ಜತೆಗೆ ಇಕ್ಕಟ್ಟಿಗೆ ಸಿಲುಕಿದ್ದು ಪ್ರತಿಪಕ್ಷಗಳು. ನೋಟು ನಿಷೇಧದ ಕ್ರಮದಿಂದ ಪ್ರಧಾನಿ ಮೋದಿ ಜನಪ್ರಿಯತೆ ಇಮ್ಮಡಿಗೊಳ್ಳುತ್ತದೆ ಎಂಬುದು ಪ್ರತಿಪಕ್ಷಗಳಿಗೆ ಖಾತ್ರಿಯಾಗಿತ್ತು. ಕಪ್ಪು ಹಣದ ವಿರುದ್ಧ ಹೋರಾಡಿಯೇ ಮುಖ್ಯಮಂತ್ರಿ ಅಧಿಕಾರಕ್ಕೇರಿದ ಅರವಿಂದ ಕೇಜ್ರಿವಾಲ್ ಸೇರಿದಂತೆ ಯಾರೂ ಒತ್ತಾಯಿಸಿರದ, ಸೂಚಿಸಿರದ ಕ್ರಮವೊಂದನ್ನು ಮೋದಿ ಕೈಗೊಂಡಿದ್ದರು. ಅಷ್ಟು ಪ್ರಮುಖ ವಿಷಯವೊಂದನ್ನು ಅವರು ಎಲ್ಲಿಯೂ ಬಹಿರಂಗವಾಗದಂತೆ ಕಾಯ್ದುಕೊಂಡಿದ್ದರು.

ನೋಟು ನಿಷೇಧ ಘೋಷಣೆಯಾಗುತ್ತಿದ್ದಂತೆ ಸಹಜವಾಗಿ ಬ್ಯಾಂಕುಗಳಲ್ಲಿ ದೊಡ್ಡ ಸಾಲು ಕಾಣಿಸಿಕೊಂಡಿತು. ಬಹಳ ಮಂದಿ ಕಪ್ಪು ಹಣ ಬಿಳಿ ಮಾಡಲು ಹಲವು ವಿಧಾನಗಳನ್ನು ಕಂಡುಕೊಂಡರು. ದೊಡ್ಡ ದೊಡ್ಡ ಸಾಲು ಸೃಷ್ಟಿಯಾಗಲು ಇದೂ ಒಂದು ಕಾರಣವಾಯಿತು. ಸಾಲುಗಳು ನಮ್ಮ ದೇಶದಲ್ಲಿ ತುಂಬ ಸಾಮಾನ್ಯ. ಸಿನಿಮಾ, ರೇಲ್ವೆ, ಕ್ರಿಕೆಟ್ ಪಂದ್ಯದ ಟಿಕೆಟ್‌ಗೆ, ರೇಶನ್ ಕಾರ್ಡ್‌ಗೆ, ಆಧಾರ್ ಕಾರ್ಡ್‌ಗೆ, ದರ ಹೆಚ್ಚಳವಾದಾಗ ಪೆಟ್ರೋಲ್ ಬಂಕ್‌ಗಳಲ್ಲಿ, ಟೋಲ್‌ಗಳಲ್ಲಿ, ಭಾರೀ ಆಫರ್‌ಗಳು ಘೋಷಣೆಯಾದಾಗ, ಮಕ್ಕಳನ್ನು ಶಾಲೆಗೆ ಸೇರಿಸಲು ಹೀಗೆ ಎಷ್ಟೆಲ್ಲ ಕಡೆ ನಾವು ಸಾಲು ನಿಂತಿಲ್ಲ ಹೇಳಿ. ಇವೆಲ್ಲ ಏನೂ ಬೇಡ, ಭಾನುವಾರ ಬೆಳಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಬ್ರಾಹ್ಮಣ ಕಾಫೀ ಬಾರ್ ಮುಂದೆ ಬ್ಯಾಂಕು, ಎಟಿಎಂಗಳಲ್ಲಿರುವುದಕ್ಕಿಂತ ದೊಡ್ಡ ಸಾಲು ಇರುತ್ತದೆ.

ಆದರೂ ನೋಟು ಬದಲಾವಣೆ, ಜಮೆ ಮಾಡಲು ಬ್ಯಾಂಕ್‌ಗಳಲ್ಲಿ ಸಾಲು ಕಾಣಿಸಿಕೊಂಡಿದ್ದನ್ನೇ ನೆಪವಾಗಿಸಿಕೊಂಡು ಪ್ರತಿಪಕ್ಷಗಳು ‘ಸಾಮಾನ್ಯ ಜನರ ಪರ’ ಎಂದು ಕಾಳಜಿಯ ನೆಪದಲ್ಲಿ ನೋಟು ನಿಷೇಧದ ವಿರುದ್ಧ ಮಾತನಾಡಲಾರಂಭಿಸಿದವು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದರ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್ ಬೇಕೊ ಬೇಡವೊ ಎಂಬ ರೀತಿಯಲ್ಲಿ ವಿರೋಧಿಸುತ್ತಿತ್ತು. ಇದೇ ಕಾರಣಕ್ಕೆ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕಲಾಪ ನಡೆಯಲು ಅವಕಾಶ ನೀಡುತ್ತಿಲ್ಲ.

ಇಷ್ಟು ದೊಡ್ಡ ದೇಶದಲ್ಲಿ ದೊಡ್ಡ ಬದಲಾವಣೆಯೊಂದನ್ನು ತರಲು ಹೊರಟಾಗ ಒಂದಷ್ಟು ಅನಾನುಕೂಲಗಳು ಆಗುವುದು ಸಹಜ ನೋಟು ನಿಷೇಧ ಒಳ್ಳೆಯದೇ ಆದರೆ, ಇನ್ನಷ್ಟು ತಯಾರಿ ಬೇಕಿತ್ತು ಅನ್ನುವ ಕಾಂಗ್ರೆಸ್‌ನವರು ‘ಉದ್ಯೋಗ ಖಾತರಿ ಯೋಜನೆ’ ಜಾರಿ ಮಾಡಿದರು. ಇದು ನೋಟು ನಿಷೇಧದಂತಹ ಯೋಜನೆಯಲ್ಲ. ಆದರೂ ಅದರಲ್ಲೂ ಕೆಲವು ಹುಳುಕುಗಳಿದ್ದವು. ಎಷ್ಟೆಲ್ಲ ಅವ್ಯವಹಾರಗಳಾದವು. ಅದರರ್ಥ ಎಷ್ಟೇ ಮುಂದಾಲೋಚನೆ ಮಾಡಿದರೂ ಯೋಜನೆ ಜಾರಿ ಮಾಡಿದಾಗ ಕೆಲವು ಹೊಸ ಅಂಶಗಳು, ಹುಳುಕುಗಳು ಪತ್ತೆಯಾಗುತ್ತವೆ. ಅದನ್ನು ತಕ್ಷಣಕ್ಕೆ ಸರಿಪಡಿಸಿಕೊಳ್ಳಲಾಗಿದೆ. ಅದರರ್ಥ ಯೋಜನೆಯನ್ನೇ ರದ್ದುಮಾಡಬೇಕು ಎಂದಲ್ಲವಲ್ಲ. ಆದರೆ ಪ್ರತಿಪಕ್ಷಗಳು ನೋಟು ನಿಷೇಧ ಹಿಂಪಡೆಯುವಂತೆ ಒತ್ತಾಯಿಸುತ್ತಿವೆ.

ಅಲ್ಲಿಗೆ ಪ್ರತಿಪಕ್ಷಗಳ ಉದ್ದೇಶ ಸ್ಪಷ್ಟ. ಒಂದೋ ಅವು ಕಪ್ಪು ಹಣ ಹೊಂದಿರುವವರ ಪರವಾಗಿರಬೇಕು. ಅವರನ್ನು ಉಳಿಸಲು ಇಷ್ಟೆಲ್ಲ ಹೋರಾಟ ಮಾಡುತ್ತಿರಬೇಕು. ಇಲ್ಲವಾದಲ್ಲಿ ನೋಟು ನಿಷೇಧದಿಂದ ಹೆಚ್ಚಲಿರುವ ಮೋದಿ ಜನಪ್ರಿಯತೆ ತಡೆಯಲು ಯತ್ನಿಸುವ ಹತಾಶ ಪ್ರಯತ್ನವಾಗಿರಬೇಕು. ಆದರೆ ಅವರೆಷ್ಟೇ ತಿಪ್ಪರಲಾಗ ಹಾಕಿದರೂ ಜನರ ಭಾವನೆಗಳನ್ನು ಬದಲಾಯಿಸಲು ಪ್ರತಿಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಕಪ್ಪು ಹಣ, ಕಳ್ಳನೋಟು ಹಾಗೂ ಉಗ್ರಗಾಮಿಗಳಿಗೆ ಹೋಗುವ ಹಣ ಇಷ್ಟನ್ನೂ ತಡೆಯಲು ನೋಟು ನಿಷೇಧ ಮಾಡಲಾಗಿದೆ ಎಂಬುದನ್ನು ಸಾಮಾನ್ಯ ವ್ಯಕ್ತಿ ಕೂಡ ಸುಲಭವಾಗಿ ಅರ್ಥ ಮಾಡಿಕೊಂಡಿದ್ದಾನೆ. ನೋಟು ನಿಷೇಧ ವಿರೋಧಿಸುವವರು ಕಪ್ಪು ಹಣ ಎಷ್ಟು ಬಂತು ಎನ್ನುತ್ತಿದ್ದಾರೆ. ಅದಕ್ಕಿಂತ ಮಜವೆಂದರೆ ಚಿನ್ನ ಖರೀದಿ ಮಾಡಿ, ಡಾಲರ್‌ಗೆ ಹಣ ಬದಲಾಯಿಸಿ, ಪೆಟ್ರೋಲ್ ಬಂಕ್‌ಗಳ ಮೂಲಕ ಕಪ್ಪು ಹಣ ಇರುವವರು ಬಿಳಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆಂಗ್ಲ ವಾರಪತ್ರಿಕೆ ಕೂಡ ಇದೇ ಅಂಶಗಳನ್ನು ಪ್ರಕಟಿಸಿದೆ.

ವಿಚಿತ್ರವೆಂದರೆ ಒಬ್ಬ ಭಾರತೀಯ ಇರಿಸಿಕೊಳ್ಳಬಹುದಾದ ವಿದೇಶಿ ಹಣಕ್ಕೆ ಮಿತಿಯಿದೆ. ಯಾರು ಬೇಕಾದರೂ ವಿದೇಶಿ ಹಣ ಪಡೆಯಲು ಸಾಧ್ಯವಿಲ್ಲ. ಅದಕ್ಕೂ ದಾಖಲೆ ಒದಗಿಸಬೇಕಾಗುತ್ತದೆ. ಚಿನ್ನ ಖರೀದಿ ಮಾಡಿಟ್ಟುಕೊಳ್ಳುವುದು ಅಷ್ಟು ಸುಲಭವಲ್ಲ. ಪೆಟ್ರೋಲ್ ಬಂಕ್‌ಗಳಲ್ಲಿ ಎಷ್ಟು ಹಣ ಬದಲಾಯಿಸಬಹುದು? ಸಾಮಾನ್ಯ ಗ್ರಾಹಕರು ಕೂಡ ಬಂಕ್‌ಗಳಿಗೆ ಹಳೆ ನೋಟು ಕೊಟ್ಟು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಅವರಿಗೂ ಹೊಸ ನೋಟುಗಳು ಸಿಗುವುದು ಅಪರೂಪ. ಹೆಚ್ಚೆಂದರೆ ಬಂದಿರುವ 100 ರು. ನೋಟುಗಳನ್ನು ಹಳೆಯ ನೋಟಿಗೆ ಬದಲಾಯಿಸಬಹುದು ಅಷ್ಟೇ. ಆದರೂ ಒಬ್ಬ ಪೆಟ್ರೋಲ್ ಬಂಕ್‌ನವರು ಎಲ್ಲ ಹಳೆ ನೋಟುಗಳನ್ನೇ ನೀಡಲು ಸಾಧ್ಯವಿಲ್ಲ.

ಇಡೀ ದಿನ ಕೇವಲ 1000-500 ರು. ನೋಟಿನ ವ್ಯವಹಾರ ಮಾತ್ರ ನಡೆಯುತ್ತಿದೆ ಎಂದು ಹೇಳಲಾಗುತ್ತದೆಯೇ? ಇವೆಲ್ಲವನ್ನೂ ನಿಭಾಯಿಸಿ ಒಂದು ದಿನಕ್ಕೆ ಎಷ್ಟು ಕಪ್ಪು ಹಣ ಬಿಳಿ ಮಾಡಲು ಸಾಧ್ಯ? ಇಷ್ಟಕ್ಕೂ ನೋಟು ನಿಷೇಧದ ಗುರಿ ಕೇವಲ ಕಪ್ಪು ಹಣವಷ್ಟೇ ಅಲ್ಲ. ಕಳ್ಳನೋಟು ಹಾಗೂ ಉಗ್ರರಿಗೆ ಪೂರೈಕೆಯಾಗುತ್ತಿದ್ದ ಹವಾಲಾ ಹಣವೂ ಹೌದು. ಅದರ ಬಗ್ಗೆ ವಿರೋಧಿಗಳು ಮಾತನಾಡುತ್ತಿಲ್ಲ. ಬದಲಾಗಿ ಜನರಿಗಾಗುತ್ತಿರುವ ಸಣ್ಣಪುಟ್ಟ ತೊಂದರೆಯನ್ನೇ ದೊಡ್ಡದು ಮಾಡಿ ಹೋರಾಟ ನಡೆಸಲು ಮುಂದಾದವು. ಅದೇನೊ ನಡೆಯುತ್ತಿತ್ತು. ಆದರೆ ಭಾರತ ಬಂದ್‌ಗೆ ಕರೆ ನೀಡುವ ಮೂಲಕ ಪ್ರತಿಪಕ್ಷಗಳು ತಮ್ಮ ಸೀಟಿನಡಿ ತಾವೇ ಬಾಂಬ್ ಇರಿಸಿಕೊಂಡವು.

ಬಂದ್ ವಿಫಲವಾಗುವ ಮೂಲಕ ಪ್ರತಿಪಕ್ಷಗಳ ಮುಖಕ್ಕೆ ಮಸಿ ಬಳಿದಿದೆ. ಬಂದ್ ಕರೆ ಕೊಟ್ಟ ನಂತರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಬಂದ್‌ಗೆ ತಮ್ಮ ಬೆಂಬಲವಿಲ್ಲ ಅಂದುಬಿಟ್ಟರು. ನಿಧಾನಕ್ಕೆ ಕಾಂಗ್ರೆಸ್ ಕೂಡ ನಮ್ಮದು ಕೇವಲ ಆಕ್ರೋಶದ ಪ್ರತಿಭಟನೆಯಷ್ಟೇ, ಬಂದ್ ಅಲ್ಲ ಅಂದಿತು. ಅಲ್ಲಿಗೆ ಪ್ರತಿಪಕ್ಷಗಳ ಒಗ್ಗಟ್ಟೂ ಮುರಿದುಬಿತ್ತು. ದೇಶಕ್ಕೆ ದೇಶವೇ ನೋಟು ನಿಷೇಧ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ ಎಂಬುದು ಬಂದ್ ವಿಫಲವಾಗುವ ಮೂಲಕ ಜಗತ್ತಿಗೆ ಗೊತ್ತಾಗುವಂತಾಯಿತು. ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರತಿಪಕ್ಷಗಳು ಜನರ ಮನಸಲ್ಲೇನಿದೆ ಎಂಬುದನ್ನು ಗುರುತಿಸಲು ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟ. ಯಾವುದೇ ಸಮೀಕ್ಷೆಯಲ್ಲಿ ಜನ ಬೆಂಬಲವಿದೆ ಎಂಬ ಫಲಿತಾಂಶ ಬಂದಿದ್ದರೆ, ಅದನ್ನು ‘ಮೋದಿ ಪರವಾಗಿರುವವರು ಮಾಡಿದ ಸಮೀಕ್ಷೆ’ ಎಂದು ತಳ್ಳಿಹಾಕಬಹುದಿತ್ತು. ಆದರೆ ಪ್ರತಿಪಕ್ಷಗಳು ಕರೆ ನೀಡಿದ ಬಂದ್ ವಿಫಲವಾಗುವ ಮೂಲಕ ಜನರ ಮನಸ್ಸಲ್ಲೇನಿದೆ ಎಂಬುದು ಸ್ಪಷ್ಟವಾಗಿ, ಪಕ್ಷಪಾತವಿಲ್ಲದೇ ಬಹಿರಂಗವಾಗುವಂತಾಯಿತು.

‘ನೋಟು ನಿಷೇಧ ವಿರೋಧಿಸುತ್ತಿರುವವರು ಕಪ್ಪು ಹಣ ಹೊಂದಿರುವವರ ಪರವಾಗಿದ್ದಾರೆ’ ಎಂದು ಪ್ರಧಾನಿ ಪಂಜಾಬ್‌ನಲ್ಲಿ ಭಾಷಣದ ಸಂದರ್ಭ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದರು. ಅದಕ್ಕೆ ಪ್ರಧಾನಿ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಹಾಗಾದರೆ ಸುಳ್ಳನ್ನೇ ಸತ್ಯವೆಂದು ನಂಬಿಸಿ, ಭಾರತ ಬಂದ್‌ಗೆ ಕರೆ ಕೊಟ್ಟರಲ್ಲ ಅದಕ್ಕೆ ಪ್ರತಿಪಕ್ಷಗಳು ಜನರ ಕ್ಷಮೆಯಾಚಿಸುತ್ತವಾ? ಬಂದ್ ವಿಫಲವಾಗಿದ್ದರಿಂದ ನಾವು ದೇಶದ ಜನರ ಭಾವನೆಗೆ ವಿರುದ್ಧವಾಗಿ ಹೋರಾಡುತ್ತಿದ್ದೆವು ಆದ್ದರಿಂದ ನಮ್ಮನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತವಾ? ನಮ್ಮದು ತಪ್ಪು ನಿರ್ಧಾರ ಎಂದು ಒಪ್ಪಿಕೊಳ್ಳುತ್ತವಾ? ಬೇರೆಯವರ ಕ್ಷಮೆ ಬಯಸುವವರು ತಾವೂ ತಪ್ಪು ಮಾಡಿದ್ದಕ್ಕೆ ಕ್ಷಮೆ ಕೇಳಲು ಸಿದ್ಧರಿರಬೇಕಲ್ಲವೇ?

-ವಿನಾಯಕ ಭಟ್ ಮೂರೂರು

One thought on “ನಿಜವಾಗಿ ಕ್ಷಮೆ ಕೇಳಬೇಕಾದ್ದು ಪ್ರತಿಪಕ್ಷಗಳು

Leave a Reply

Your email address will not be published. Required fields are marked *

3 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top