ವಿಶ್ವವಾಣಿ

ರಫೇಲ್‌ ನೆವದಲ್ಲಿ ವಿಪಕ್ಷಗಳ ಪ್ರತಿಭಟನೆ: ತಲಾಖ್‌ ನಿಷೇಧಕ್ಕೆ ಕಲ್ಲು?

ದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸುತ್ತಲೇ ಬಂದಿರುವ ಕಾಂಗ್ರೆಸ್‌ ಇಂದು ಅದರ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೆ ಕುಳಿತಿವೆ.

ಮಾನ್ಸೂನ್‌ ಅಧಿವೇಶನದ ಕೊನೆ ದಿನವಾದ ಇಂದು ತ್ರಿವಳಿ ತಲಾಖ್‌ ನಿಷೇಧಿಸಿ ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ  ಇಂದು ಮಸೂದೆಯನ್ನು ಪರಿಚಯಿಸಲಿದೆ. ತ್ರಿವಳಿ ತಲಾಖ್‌ಅನ್ನು ಅಪರಾಧ ಎಂದು ಪರಿಗಣಿಸಿ, ತಲಾಖ್ ನೀಡುವ ಪುರುಷರನ್ನು ಕಾರಾಗೃಹಕ್ಕೆ ಕಳುಹಿಸುವ ಸಾಧ್ಯತೆಯನ್ನು ಉದ್ದೇಶಿತ ಕಾಯಿದೆಯಿಂದ ಆಚೆ ಇಡಲು ವಿಪಕ್ಷಗಳು ಪಟ್ಟು ಹಿಡಿದಿದ್ದವು.

ವಿಪಕ್ಷಗಳ ಒತ್ತಡದ ಕಾರಣ ಮಸೂದೆಗೆ ಕೆಲ ತಿದ್ದುಪಡಿಗಳನ್ನು ತಂದಿದ್ದು, ತಲಾಖ್‌ಅನ್ನು ಜಾಮೀನು ರಹಿತ ಅಪರಾಧದ ವ್ಯಾಪ್ತಿಯಿಂದ ಆಚೆ ಇಡಲು ಕೆಲ ತಿದ್ದುಪಡಿಗಳನ್ನು ಕೇಂದ್ರ ಸರಕಾರ ಮಾಡಿದೆ.

ತ್ರಿವಳಿ ತಲಾಖ್‌ ನಿಷೇಧದ ಕುರಿತಂತೆ ಕೇಳಿದ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ಉತ್ತರ ನೀಡಿದ ಸೋನಿಯಾ ಗಾಂಧಿ, “ಈ ವಿಚಾರವಾಗಿ ನಮ್ಮ ಪಕ್ಷದ ನಿಲುವು ಸುಸ್ಪಷ್ಟವಾಗಿದೆ. ಈ ಕುರಿತು ನಾನು ಏನೂ ಹೇಳುವುದಿಲ್ಲ” ಎಂದಿದ್ದಾರೆ.