About Us Advertise with us Be a Reporter E-Paper

ಸಿನಿಮಾಸ್

“ಆರೆಂಜ್‌”ನ ತೊಳೆ ಬಿಡಿಸಿಟ್ಟ ಗಣೇಶ್

- ಶಶಾಂಕ ಜೋಯಿಸ್

‘ಚೆಲುವಿನ ಚಿತ್ತಾರ’ದಲ್ಲಿ ಮಿಸ್ ಆಗಿದ್ದ ಐಶೂಳನ್ನ ಪಡೆದು ‘ಮುಗುಳು ನಗೆ’ ಬೀರಿದ ಗಣೇಶ್ ನಂತರದಲ್ಲಿ ಎಲ್ಲರಿಗೂ ‘ಚಮಕ್’ ಕೊಟ್ಟು ಮರೆಯಾಗಿದ್ದರು. ‘ರ್ಯಾಂಬೋ 2’ನಲ್ಲಿ ತಮ್ಮ ಅಶರೀರ ವಾಣಿಯನ್ನು ಕೇಳಿಸಿದ್ದು ಬಿಟ್ಟರೆ ಅವರ ಯಾವುದೇ ಸಿನಿಮಾಗಳು ಈ ವರ್ಷ ತೆರೆಗೆ ಗೋಲ್ಡನ್ ಸ್ಟಾರ್ ಎಲ್ಲಿ ಹೋದರಪ್ಪಾ ಎಂದು ಹುಡುಕುವ ಹೊತ್ತಿಗೆ, ಡಿಸೆಂಬರ್‌ನಲ್ಲಿ ಬಿದ್ದ ಮಳೆಯ ಗೆಲುವನ್ನು ಮತ್ತೆ ನೆನಪಿಸಲು ಆರೆಂಜ್ ಬುಟ್ಟಿ ಹೊತ್ತು ಬಂದಿದ್ದಾರೆ. ಪ್ರಶಾಂತ್ ರಾಜ್ ಜತೆಗೆ ‘ಜೂಮ್’ ನಂತರದಲ್ಲಿ ಗಣೇಶ್ ಮಾಡುತ್ತಿರುವ ಸಿನಿಮಾ ಇದ್ದಾಗಿದ್ದು, ದೊಡ್ಡ ತಾರಾಬಳಗದ ಜತೆ ‘ರಾಜಕುಮಾರ’ ಚೆಲುವೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ಆರೆಂಜ್ ಬಗ್ಗೆ ಏನು ಹೇಳುತ್ತೀರಿ ಎಂದು ವಿಶ್ವವಾಣಿ ಸಿನಿಮಾಸ್‌ಗೆ ಚಿತ್ರದ ಒಳನೋಟವನ್ನು ತೊಳೆ ತೊಳೆಯಾಗಿ ಬಿಡಿಸಿಟ್ಟಿದ್ದಾರೆ.

ಆರೆಂಜ್‌ನ ತೊಳೆ ಕೊಡಿ.
ಆರೆಂಜ್ ಒಂದು ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಸಿನಿಮಾ. ಇದೊಂದು ಗಣೇಶ್ ಸಿಗ್ನೇಚರ್ ಇರುವ ಸಿನಿಮಾ, ಎಲ್ಲರೂ ಹಾಲಿಡೇ ಮೂಡ್‌ನಲ್ಲಿ ಇರುವವರಿಗೆಂದು ಮಾಡಿರುವ ಸಿನಿಮಾ. ಪಕ್ಕಾ ಕಾಮಿಡಿ ಎಂಟರ್‌ಟೈನರ್.

ಆರೆಂಜ್ ಹುಳಿಯೋ ಇಲ್ಲ ಸಿಹಿ ಇದೆಯೋ?
ಇದು ಪಕ್ಕಾ ಸಿಹಿ ಇರೋ ಆರೇಂಜ್, ಒಂಚೂರು ಹುಳಿ ಇಲ್ಲ, ಪ್ರತಿ ತೊಳೆ ಕೂಡಾ ತುಂಬಾ ಸಿಹಿಯಾಗಿದೆ.

ಓಹ್ ಶಬರಿಯಂತೆ ಕಚ್ಚಿದ ಹಣ್ಣನ್ನು ನಮ್ಮ ಮುಂದೆ ಇಡುತ್ತಿದ್ದೀರಾ?
ನಿಮ್ಮ ಮಾತಿನ ನನಗೆ ಅರ್ಥವಾಗುತ್ತದೆ. ಇದು ಯಾವುದೇ ರಿಮೇಕ್ ಸಿನಿಮಾ ಅಲ್ಲ. ನಾವೇ ನೆಟ್ಟು ಕಷ್ಟ ಪಟ್ಟು ಬೆಳಸಿದ ಮರ ಅಲ್ವಾ, ಹಾಗಾಗಿ ಅದರ ಸ್ವಾದ ಏನಿರುತ್ತದೆ ಎನ್ನುವುದು ನಮಗೆ ತಿಳಿದಿದೆ. ಹಾಗಾಗಿ ಇದೇ ಧೈರ್ಯದಿಂದ ಇದು ತುಂಬಾ ಸಿಹಿಯಾದ ಆರೆಂಜ್ ಎಂದು ಹೇಳುತ್ತಿದ್ದೇವೆ.

ಆರೆಂಜ್ ಕೊಳ್ಳಲು ಜನ ಥಿಯೇಟರ್‌ನತ್ತ ಏಕೆ ಬರಬೇಕು? ಏನಿದೆ ಅಂಥ ವಿಶೇಷತೆ ?
ಮೂರು ತಾಸು ತಮ್ಮ ಫ್ಯಾಮಿಲಿ ಜಂಜಾಟಗಳನ್ನೆಲ್ಲಾ ಮರೆತು ಥಿಯೇಟರ್‌ನಲ್ಲಿ ಎಂಜಾಯ್ ಮಾಡಬಹುದು. ತಂಪೆನಿಸೋ ಲೊಕೇಶನ್‌ಗಳು, ಕವಿಗೆ ಇಂಪೆನಿಸೋ ಹಾಡುಗಳು, ನಕ್ಕು ಹೊಟ್ಟೆ ಹುಣ್ಣಾಗಿಸೋ ಕಾಮಿಡಿ ಜೊತೆಗೆ ಒಂದೊಳ್ಳೆ ಕಥೆ ಎಲ್ಲವೂ ನಮ್ಮ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ನಾಯಕ ದಡ್ಡ, ಆದರೆ ಥಿಯೇಟರ್‌ನಲ್ಲಿ ಕುಳಿತಿರುವ ಪ್ರೇಕ್ಷಕ ಬುದ್ಧಿವಂತ. ಮುಂದೆ ಏನಾಗುತ್ತದೆ ಎಂದು ಪ್ರೇಕ್ಷಕರಿಗೆ ಮೊದಲೇ ಗೊತ್ತಿರುತ್ತದೆ. ಆದರೆ ಈ ವಿಷಯ ನಾಯಕನಿಗೆ ಗೊತ್ತಿಲ್ಲ, ಈ ಸಮಯದಲ್ಲಿ ಅವನು ಮಾಡೋ ಎಡವಟ್ಟುಗಳು ನೋಡುಗನಿಗೆ ಸಖತ್ ಮಜಾ ಕೊಡುತ್ತದೆ.

ಸಿನಿಮಾ ಗೆಲುವಿನ ಬಗ್ಗೆ ನಿಮ್ಮ ಭರವಸೆ ಏನು?
ಪ್ರಶಾಂತ್ ಕಾಂಬಿನೇಶನ್‌ನಲ್ಲಿ ಬಂದ ಜೂಮ್ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಬಂದಿತ್ತು. ಅದೇ ಕಾಂಬಿನೇಶನ್‌ನ ಒಂದು ಹೊಸ ಪ್ರಯತ್ನ ಈ ಸಿನಿಮಾ. ಟ್ರೇಲರ್ ಮತ್ತು ಹಾಡುಗಳು ಹಿಟ್ ಆಗಿವೆ. ಬಹದ್ದೂರ್ ಚೇತನ್ ಒಂದಿಷ್ಟು ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಅದನ್ನು ಪ್ರಶಾಂತ್ ಮನಮುಟ್ಟುವಂತೆ ತೆರೆಯ ಮೇಲೆ ತಂದಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಒಂದೊಳ್ಳೆ ಲವ್ ಸ್ಟೋರಿ ಇದೆ. ಲವ್ ಸ್ಟೋರಿ ಇಲ್ಲದ ಗಣೇಶ್ ಸಿನಿಮಾವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಫ್ಯಾಮಿಲಿ ಮತ್ತು ಲವ್ ನನ್ನ ಟ್ರಂಪ್ ಅದನ್ನು ಗಮನದಲ್ಲಿ ಇಟ್ಟುಕೊಂಡು ಜನರಿಗೆ ಇಷ್ಟವಾಗುವಂತೆ ಕಟ್ಟಿಕೊಟ್ಟಿದ್ದೇವೆ.

ಆರೆಂಜ್‌ನ ಇತರ ತೊಳೆಯ ಬಗ್ಗೆ ಹೇಳಿ.
ರಾಜಕುಮಾರ ಖ್ಯಾತಿಯ ಪ್ರಿಯಾ ಆನಂದ್ ಇದ್ದಾರೆ. ನಮ್ಮಿಬ್ಬರ ಕಾಂಬಿನೇಶನ್ ಕಲರ್‌ಫುಲ್ ಆಗಿ ಬಂದಿದೆ. ರಂಗಾಯಣ ರಘ, ರವಿಶಂಕರ್, ಅವಿನಾಶ್, ಸಾಧುಕೋಕಿಲ, ಹೀಗೆ ದೊಡ್ಡ ತಾರಾಬಳಗ . ಯಾರನ್ನೂ ಬೇಕೆಂದು ಸೇರಿಸಿದ್ದಲ್ಲ, ಒಂದು ದೊಡ್ಡ ಮನೆಯಲ್ಲಿ ನಡೆಯುವ ಕಥೆ ಇದು, ಅಲ್ಲಿ ನಡೆಯುವ ಗೊಂದಲ ಗಲಾಟೆಗಳ ಕಾಮಿಡಿಯೇ ಸಿನಿಮಾ ಹೂರಣ. ಥಮನ್ ಸಂಗೀತ ನೀಡಿದ್ದಾರೆ.

ಪ್ರೇಕ್ಷಕನಾಗಿ ನಿಮಗೆ ಸಿನಿಮಾದಲ್ಲಿ ಇಷ್ಟವಾಗಿದ್ದೇನು?
ನಾಯಕ ಇಡೀ ಸಿನಿಮಾದಲ್ಲಿ ಒಂದು ಕಂಫ್ಯೂಷನ್‌ನಿಂದ ಇರುತ್ತಾನೆ. ಇದು ಪ್ರೇಕ್ಷಕನಾಗಿ ನೋಡುವಾಗ ನನಗೆ ತುಂಬಾ ಖುಷಿ ಕೊಟ್ಟಿತ್ತು. ನಾನೇ ಮಾಡಿದ ದೃಶ್ಯಗಳನ್ನು ತೆರೆಯ ಮೇಲೆ ನೋಡುವಾಗ ಸಖತ್ ಎಂಜಾಯ್ ಮಾಡಿದ್ದೇನೆ. ಸಾಧುಕೋಕಿಲಾ ಈ ಸಿನಿಮಾದಲ್ಲಿ ಅಂಡರ್‌ಟೇಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ನನಗೆ ತುಂಬಾ ಇಷ್ಟ ಆಯ್ತು. ಮೈತುಂಬ ಗೋಲ್‌ಡ್ ತೊಟ್ಟು ನಾನೇ ನಿಜವಾದ ಗೋಲ್ಡನ್ ಸ್ಟಾರ್ ಎಂದು ರವಿಶಂಕರ್ ಬರುತ್ತಾರೆ. ಈ ನಾನು ಎಂಜಾಯ್ ಮಾಡಿದ್ದೇನೆ. ನಂತರದಲ್ಲೇ ನನಗೆ ಭರವಸೆ ಬಂದಿದ್ದು ಇದೊಂದು ಪಕ್ಕಾ ಪೈಸಾ ವಸೂಲ್ ಸಿನಿಮಾ ಆಗಲಿದೆ ಎಂದು.

ಚಮಕ್ ಮತ್ತು ಆರೆಂಜ್ ನಡುವೆ ಒಂದು ವರ್ಷದ ಗ್ಯಾಪ್ ಇದೆ. ನೀವೂ ಬೇರೆಯವರಂತೆ ವರ್ಷಕ್ಕೊಂದೇ ಹೆರಿಗೆ ಎನ್ನುವ ಫಾರ್ಮೂಲಾಗೆ ಅಂಟಿಕೊಂಡ್ರಾ?
ಹೇ…. ಇಲ್ಲ…. ನಾನು ಸಾಕಷ್ಟು ಸಿನಿಮಾಗಳನ್ನು ಕೊಡಲೇ ಬೇಕು ಎನ್ನುವ ಪ್ಲಾನ್‌ನಲ್ಲಿ ಇದ್ದೇನೆ, ಈ ವರ್ಷದ ಸ್ವಲ್ಪ ಗ್ಯಾಪ್ ಆಯ್ತು. ಈ ಸಿನಿಮಾವನ್ನು ಸ್ವಲ್ಪ ಮುನ್ನವೇ ಬಿಡುಗಡೆ ಆದರೆ ಸರಿಯಾದ ಟೈಮ್‌ಗೆ ಕಾಯುತ್ತಿದ್ದೆವು. ಡಿಸೆಂಬರ್ ಎಂದರೆ ಕ್ರಿಸ್‌ಮಸ್ ಸೇರಿ ಹಲವು ರಜಾಗಳಿರುತ್ತವೆ. ಈಗ ಬಂದರೆ ಹೆಚ್ಚು ಜನರನ್ನು ತಲುಪುದು ಸುಲಭ ಎನ್ನುವ ಲೆಕ್ಕಾಚಾರ. ಚಳಿಗಾಲದ ಮಳೆ ನನಗೆ ಹೆಚ್ಚು ಆಪ್ತ. ಇದೆಲ್ಲಾ ಸೇರಿ ಡಿಸೆಂಬರ್‌ನಲ್ಲಿ ಬರಲು ನಿರ್ಧಾರ ಮಾಡಿದೆವು ಅಷ್ಟೇ. ಮುಂದಿನ ವರ್ಷದಿಂದ ವರ್ಷಕ್ಕೆ ಮೂರು ಸಿನಿಮಾ ಗ್ಯಾರೆಂಟಿ.

ಮುಂದಿನ ಸಿನಿಮಾಗಳು
‘ಗಿಮಿಕ್’ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ನಂತರದಲ್ಲಿ ಸೈಯದ್ ಸಲಾಂ ಅವರ ‘ಗೀತಾ’. ಗೀತಾ ಶೆಡ್ಯೂಲ್ ಮುಗಿದ ನಂತರ ಪ್ರೀತಂ ಗುಬ್ಬಿ ಅವರ ಜತೆ ‘99’. ಈ ಎಲ್ಲಾ ಸಿನಿಮಾಗಳು ಮುಂದಿನ ವರ್ಷವೇ ಬಿಡುಗಡೆಯಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close