About Us Advertise with us Be a Reporter E-Paper

ಗುರು

ಬೌದ್ಧ ತಂತ್ರಾರಾಧನೆಯ ಮೂಲ ಪುರುಷ

- ವಿವೇಕ ಆದಿತ್ಯ, ಕಾಸರಗೋಡು

ಮಂಜುಶ್ರೀ ಬೋಧಿಸತ್ವ
ಬೋಧಿಸತ್ವ ಕಲ್ಪನೆ ಮಹಾಯಾನ ಬೌದ್ಧ ಪರಂಪರೆಯಲ್ಲಿ ಹುಟ್ಟಿ, ಬೆಳೆದು ಬೌದ್ಧ ಧರ್ಮಾಚರಣೆಗೆ ಹೊಸ ಆಯಾಮ ನೀಡಿದ ತತ್ವಾದರ್ಶ. ಭಾರತ ದೇಶದ ಸಂಸ್ಕೃತಿಯನ್ನು ಪ್ರಭಾವಿಸಿದ ಶ್ರಮಣ ತತ್ವಾದರ್ಶಗಳಲ್ಲಿ ಪರಂಪರೆಯೂ ಒಂದು. ಜೈನ ತೀರ್ಥಂಕರರು ಹೇಗೆ ಜೈನ ಮತ ಅನುಯಾಯಿಗಳನ್ನು ತಮ್ಮ ಕೈವಲ್ಯ ಮಾರ್ಗದ ಮೂಲಕ ಪ್ರಭಾವಿಸಿದರೋ, ವಿಷ್ಣುವಿನ ಹಲವು ಅವತಾರಗಳು ಹೇಗೆ ದೇಶದ ಧರ್ಮ ಸಂಸ್ಕೃತಿಯನ್ನು ಪ್ರಭಾವಿಸಿತೋ ಅದೇ ರೀತಿಯಲ್ಲಿ ಬೋಧಿಸತ್ವ ಕಲ್ಪನೆ ಬೌದ್ಧ ಮತ ವಿಶ್ವಾಸಿಗಳನ್ನು ಬಹಳಷ್ಟು ಪ್ರಭಾವಿಸಿದೆ. ಬೋಧಿಸತ್ವ ಪರಂಪರೆಯಲ್ಲಿ ಕಂಡು ಬರುವ ಅವಲೋಕಿತೇಶ್ವರ, ಮಂಜುಶ್ರೀ, ಪದ್ಮಸಂಭವ ಸಹಿತ ವಿವಿಧ ಬೋಧೀಸತ್ವರು ಶಾಕ್ಯಮುನಿ ಗೌತಮನ ವಿಶೇಷ ಗುಣಗಳನ್ನು ಪ್ರತಿಬಿಂಬಿಸುವರಾಗಿದ್ದಾರೆ. ಬೋಧೀಸತ್ವರೆಂದರೆ ಮುಕ್ತಿ ಮಾರ್ಗದ ಪರಮ ನಿರ್ವಾಣದ ಬಗ್ಗೆ ಅರಿವು ಇದ್ದವರು, ತಮ್ಮ ನಿರ್ವಾಣವನ್ನು ಮುಂದೂಡಿ ಪುನಃ ಜನ್ಮ ತಾಳಿ ಬಂದು ಜನ ಸಾಮಾನ್ಯರಿಗೆ ದುಃಖ, ವ್ಯಾಮೋಹದಿಂದ ಹೊರ ಬರಲು ದಾರಿ ತೋರಿಸಬಲ್ಲ ದೇವತಾಕಲ್ಪರು ಎಂಬ ಅರ್ಥವೂ ಇದೆ.

ಬುದ್ಧ ಸಮಾನ ಜ್ಞಾನಿ
ಬೋಧಿಸತ್ವ ಮಂಜುಶ್ರೂ ಐತಿಹಾಸಿಕ ವ್ಯಕ್ತಿಯೂ ಆಗಿದ್ದು, ಬೌದ್ಧ ಚಿತ್ತ ಮತ್ತು ಜ್ಞಾನವನ್ನು ಪ್ರತಿಬಿಂಬಿಸುತ್ತಾನೆ. ಬೌದ್ಧ ಸಂಸ್ಕೃತ ಗ್ರಂಥ ಪ್ರಜ್ಞಾ ಪರಿಮಿತದಲ್ಲೂ ಮಂಜುಶ್ರೀ ಬಗ್ಗೆ ಉಲ್ಲೇಖವಿದೆ. ಬೋಧೀಸತ್ವ ವಿರಚಿತ ಮಂಜುಶ್ರೀ ಮೂಲಕಲ್ಪ ಸಂಸ್ಕೃತ ದೇಶದ ತಂತ್ರರಾಧನಾ ಕ್ರಮಗಳಿಗೆ ಮೂಲ ಎಂದು ನಂಬಲಾಗಿದೆ. ಹಿಮಾಲಯದ ತಪ್ಪಲಲ್ಲಿರುವ ನೇಪಾಳ, ಭೂತಾನ್ ರಾಷ್ಟ್ರಗಳಲ್ಲಿ ಮಂಜುಶ್ರೀ ಬೋಧಿಸತ್ವನಿಗೆ ವಿಶೇಷ ಗೌರವವಿದೆ, ಮಾತ್ರವಲ್ಲ ವಿಹಾರಗಳಲ್ಲಿ ಆರಾಧಿಸಲ್ಪಡುತ್ತಾನೆ. ಈತನನ್ನು ವಜ್ರಪಾಣಿ ಎಂದೂ ಬಿಂಬಿಸಲಾಗಿದ್ದು, ಬುದ್ಧ ಸಮಾನ ಜ್ಞಾನವನ್ನು ಹೊಂದಿರುವಾತ ಎಂದು ನಂಬಲಾಗುತ್ತದೆ. ಧ್ಯಾನಿ ಬುದ್ಧನ ರಕ್ಷಕ ಎಂದು ಉಲ್ಲೇಖಿಸಲ್ಪಡುವ ವಜ್ರಪಾಣಿ ಮಂಜುಶ್ರೀಯು, ಚೀನಾದಲ್ಲೂ ‘ಯಿದಂ’ ಎಂದೂ ಕರೆಯಲ್ಪಡುತ್ತಾನೆ. ನಾಗಾರ್ಜುನನ ಪುತ್ರಿಗೆ ನಿರ್ವಾಣದ ರಹಸ್ಯವನ್ನು ತಿಳಿಸಿ, ಮುಕ್ತಿ ಮಾರ್ಗ ದಾರಿಯನ್ನು ತೋರಿಸಿದ ಮಂಜುಶ್ರೀಯು ವರಿಸಿದ್ದ ಎನ್ನಲಾಗಿದೆ. ಮಂಜುಶ್ರೀ ಮೂಲಕಲ್ಪವು ಕ್ರಿಯಾತಂತ್ರದ ಭಾಗವಾಗಿದ್ದು, ಪ್ರಸ್ತುತ ಶೈವ, ಗರುಡ, ವೈಷ್ಣವ ತಂತ್ರಗಳು ಬೌದ್ಧ ತಂತ್ರದ ಮೂಲಕ ಅನುಸರಿಸಿದರಷ್ಟೇ ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಈ ಎಲ್ಲ ತಂತ್ರಗಳ ಮೂಲ ಗುರು ಮಂಜುಶ್ರೀ ಎಂದು ನಂಬಲಾಗಿದೆ.

ಮಂಗಳೂರಿನಲ್ಲೂ ಮಂಜುಶ್ರೀ ವಿಹಾರ
ಮಂಜುಶ್ರೀ ಮೂಲಕಲ್ಪದಲ್ಲಿ ಮುದ್ರಾರಾಧನೆ, ವಿಗ್ರಹಾರಾಧನಾ ಕ್ರಮಗಳ ಬಗ್ಗೆ ಉಲ್ಲೇಖವಿದೆ. ಕವಿ ಕೋವಿದ, ಸಂಶೋಧಕ, ಬಹುಭಾಷಿಗ, ಕನ್ನಡದ ಪ್ರಥಮ ರಾಷ್ಟ್ರಕವಿಯಾಗಿದ್ದ ಮಂಜೇಶ್ವರ ಗೋವಿಂದ ಪೈ ಯವರ ಸಂಶೋಧನೆಯಲ್ಲೂ ಘೋಷನ ವಿಹಾರದ ಬಗ್ಗೆ ಉಲ್ಲೇಖವಿದೆ. ಮಂಗಳೂರಿನ ಕದಿರೆಯಲ್ಲಿ ಮಂಜುಶ್ರೀಯ ವಿಹಾರವಿತ್ತು ಎಂಬುದನ್ನು ಸಂಶೋಧನೆಗಳ ಮೂಲಕ ಸಾದರಪಡಿಸುತ್ತಾರೆ. ಜಟೆಯಲ್ಲಿ ಧ್ಯಾನಿ ಬುದ್ಧನ ಬಿಂಬವನ್ನು ಇರಿಸಿರುವ ಬೋಧಿಸತ್ವ ವಿಗ್ರಹಗಳಂತೆ ಕಾಣುವ ನಾಥ ಪರಂಪರೆಯ ಶೈವಾಂಶರು ಶಿವನನ್ನು ಮುಡಿಯಲ್ಲಿರಿಸಿರುವ ಪ್ರತಿಮೆಗಳನ್ನು ಇಂದಿಗೂ ಕಾಣಬಹುದಾಗಿದೆ. ಸುಮಾರು ಕ್ರಿ.ಶ 9 ಶತಮಾನದ ನಂತರ ಬೌದ್ಧರಿಂದ ಪ್ರಭಾವಿತವಾದ ಶೈವ ನಾಥ ಪಂಥವು ಮಂಜುಶ್ರೀಗೆ ಗೌರವಪೂರ್ವಕವಾಗಿ ಪ್ರತಿಷ್ಠಾಪಿಸಲಾದ ಶಿವಲಿಂಗಕ್ಕೆ ಆತನ ಹೆಸರನ್ನು ಇಟ್ಟರು ಎಂಬುದನ್ನು ತಿಳಿಸಿದ್ದಾರೆ. ನಾಥ ಪರಂಪರೆಯ ಮತ್ತು ಗೋರಕ್ಷನಾಥರೂ ಮಹಾಯಾನ ಮತ್ತು ತಂತ್ರಯಾನದಿಂದ ಪ್ರಭಾವಿತರಾಗಿದ್ದರು ಎಂದು ಹೇಳಲ್ಪಟ್ಟಿದೆ.

ಸ್ವಯಂಭೂ ಪುರಾಣದ ಪ್ರಕಾರ ನೇಪಾಳದ ಕಾಠ್ಮಂಡು ಕಣಿವೆಯು ದೊಡ್ಡ ಸರೋವರವಾಗಿತ್ತು. ಕಣಿವೆಗೆ ಪಂಚಗಿರಿಯಿಂದ ಯಾತ್ರಿಕನಾಗಿ ಬಂದ ಮಂಜುಶ್ರೀಯು ಸರೋವರದ ಮಧ್ಯದಲ್ಲಿ ಪ್ರಕಾಶಿಸುತ್ತಿರುವ ಕಮಲವನ್ನು ನೋಡುತ್ತಾನೆ, ತನ್ನ ವಜ್ರಾಯುಧದ ಮೂಲಕ ಸರೋವರದ ಒಂದು ಬದಿಯನ್ನು ಛೇದಿಸಿ, ಸರೋವರ ಬತ್ತುವಂತೆ ಮಾಡುತ್ತಾನೆ. ಅಲ್ಲಿದ್ದ ಕಮಲವು ತಳ ತಲುಪಿ ಸ್ವಯಂಭೂನಾಥ ಸ್ಥೂಪವಾಯಿತೆಂಬ ಪ್ರತೀತಿ ಇದೆ. ಭಾರತದ ಹಿಮಾಚಲ, ಅರುಣಾಚಲ ಸೇರಿದಂತೆ ಭೂತಾನ್, ಚೀನಾ ದೂರದ ಇಂಡೋನೇಷ್ಯಾದಲ್ಲೂ ಮಂಜುಶ್ರೀಯನ್ನು ಪೂಜನೀಯವಾಗಿ ಕಾಣಲಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close