ವಿಶ್ವವಾಣಿ

ರಾಜ್ಯದ ಹಲವೆಡೆ ಸಂಚಾರ ಸ್ತಬ್ಧ, ಕರಾವಳಿಗೂ ತಟ್ಟಿದ ಬಂದ್ ಬಿಸಿ (ವಿಡಿಯೊ)

ಬೆಂಗಳೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ರಾಜ್ಯಸರಕಾರವು ಈಗಾಗಲೆ ಬೆಂಬಲ ಸೂಚಿಸಿದೆ. ರಾಜ್ಯಾದ್ಯಂತ ಜನಸಾಮಾನ್ಯರಿಗೆ ಬಂದ್‍ ಬಿಸಿ ತಟ್ಟಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವಂತಹ ಘಟನೆಯೂ ನಡೆದಿದೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಮೆಟ್ರೋ ಸಂಚಾರ ಕೂಡ ಸ್ಥಗಿತಗೊಂಡಿದೆ. ನಗರದಲ್ಲಿ ಆಟೋಗಳ ಸಂಚಾರವಿದ್ದು, ಆದ್ರೆ ಚಾಲಕರು ಹಗಲು ದರೋಡೆಗೆ ನಿಂತಿದ್ದಾರೆ. ಬೆಂಗಳೂರು ನಗರದ ಕೆಲವೆಡೆ ಖಾಸಗಿ ವಾಹನಗಳ ಸಂಚರಿಸುತ್ತಿದ್ದರೂ, ಪ್ರಯಾಣಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಇದೂವರೆಗೂ ಬೆಂಗಳೂರಿನ ಯಾವುದೇ ಡಿಪೋಗಳಿಂದ ಬಸ್ ಗಳು ರಸ್ತೆಗೆ ಇಳಿದಿಲ್ಲ.

ಕರಾವಳಿಯಲ್ಲೂ ಬಂದ್ ಬಿಸಿ ತಟ್ಟಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಮೇಲೆ ಬಂಟ್ವಾಳದಲ್ಲಿ ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ. ಅಲ್ಲದೆ ಹೋಟೆಲ್ ಗಳಿಗೂ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ  ಬಂದ ದುಷ್ಕರ್ಮಿಯೊಬ್ಬ ಕದ್ರಿಯ ಶಿವಭಾಗ್ ರೆಸ್ಟೋರೆಂಟ್ ಮೇಲೆ ಕಲ್ಲುತೂರಾಟ ನಡೆಸಿದ್ದು, ರೆಸ್ಟೋರೆಂಟ್ ನ ಕಿಟಕಿ ಗಾಜು ಪುಡಿ,ಪುಡಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕಲ್ಲಡ್ಕದಲ್ಲಿ ಟೈರ್ ಗೆ ಬೆಂಕಿ ಹೊತ್ತಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದವರನ್ನು ಚದುರಿಸಿ, ಉರಿಯುತ್ತಿದ್ದ ಟೈರ್ ಬೆಂಕಿಯನ್ನು ಪೊಲೀಸರು ನಂದಿಸಿದ್ದಾರೆ. ಕುಲಶೇಖರ್ ಬಳಿಯೂ ಟೈರ್ ಗೆ ಬೆಂಕಿ ಹತ್ತಿಸುವ ಯತ್ನವನ್ನು ವಿಫಲಗೊಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಇನ್ನು ಮಂಗಳೂರು ನಗರದಲ್ಲಿರುವ ಶಿವಬಾಗ್ ಹೋಟೆಲ್‍ಗೆ ದುಷ್ಕರ್ಮಿಯೊಬ್ಬ ಹೆಲ್ಮೆಟ್ ಧರಿಸಿ ಬಂದು ಕಲ್ಲು ತೂರಿ ಪರಾರಿಯಾಗಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ಬಾಗಲಕೋಟೆಯಲ್ಲಿ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಬೆಲೆ ಏರಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಭಾವಚಿತ್ರಗಳ ಮೇಲೆ ಕಾಲಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ, ಬೆಳಗಾವಿ, ಗದಗ ಸೇರಿದಂತೆ ಹಲವೆಡೆ ಸಂಚಾರ ಸ್ತಬ್ಧವಾಗಿದೆ.