About Us Advertise with us Be a Reporter E-Paper

ಅಂಕಣಗಳು

ವಿಶಿಷ್ಟ ವೈದ್ಯಕೀಯ ಸಾಧನೆಗಳ ವೈದ್ಯರಿಗೆ ‘ಪದ್ಮ’

- ಡಾ.ದಯಾನಂದ ಲಿಂಗೇಗೌಡ, ರೇಡಿಯಾಲಜಿಸ್ಟ್

ಈ ಬಾರಿಯ ಪದ್ಮಶ್ರೀ ಪ್ರಶಸ್ತಿಯನ್ನು ಭಾರತದ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್) ಪಿತಾಮಹ ಎಂದೇ ಹೆಸರಾಗಿರುವ ಡಾ. ಮಾಮನ್ ಚಾಂಡಿಯವರಿಗೆ ಘೋಷಿಸಲಾಗಿದೆ. ಆ ಮೂಲಕ ಪ್ರಶಸ್ತಿಯ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಆಯ್ಕೆ ಸಮಿತಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಅದಕ್ಕೆ ಅಭಿನಂದಿಸಲೇಬೇಕು.

ಕೋಲ್ಕತಾದ ಟಾಟಾ ಮೆಡಿಕಲ್ ಸೆಂಟರ್ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕರಾಗಿರುವ ಡಾ.ಚಾಂಡಿರವರಿಗೆ ಪ್ರಶಸ್ತಿಯ ಬಂದಿರುವ ವಿಷಯ ತಿಳಿದಾಗ, ಆಶ್ಚರ್ಯ, ಸಂತೋಷ ಎರಡೂ ಒಟ್ಟಿಗೆ ಆದವು. ಆಶ್ಚರ್ಯವೇಕೆಂದರೆ ಐದು ವರ್ಷಗಳಿಂದ ಅವರೊಟ್ಟಿಗೆ ಸಹದ್ಯೋಗಿಯಂತೆ ಕೆಲಸ ಮಾಡುತ್ತಿರುವ ನನಗೆ, ಇವರು ಎಷ್ಟು ದೊಡ್ಡ ವ್ಯಕ್ತಿ ಎಂದು ಗೊತ್ತಿರಲಿಲ್ಲ. ಇದಕ್ಕೆ ನನ್ನ ಅಜ್ಞಾನ ಎಷ್ಟು ಕಾರಣವೋ, ಅಷ್ಟೇ ಅವರ ಹಮ್ಮು ಬಿಮ್ಮು ಇಲ್ಲದ ಸರಳತೆ ಕಾರಣ. ಸಾಮಾನ್ಯವಾಗಿ ನಿರ್ದೇಶಕರಂಥ ಉನ್ನತ ಹುದ್ದೆಯಲ್ಲಿ ಇರುವವರು, ಇತರ ವೈದ್ಯರನ್ನು ತಮ್ಮ ಆಫೀಸಿಗೆ ಕರೆಸಿ ಮಾತನಾಡಿಸಿದರೆ, ಡಾ.ಚಾಂಡಿಯವರು ರೋಗಿಗಳಿಗೆ ತೊಂದರೆಯಾಗಬಾರದು ಎಂದು ವೈದ್ಯರಿದ್ದಲ್ಲಿಗೇ ಹೋಗಿ ಮಾತನಾಡಿಸುವುದು ಅವರ ಸರಳತೆಗೆ ಒಂದು ಸಣ್ಣ ನಿದರ್ಶನ.

ಅನೇಕ ದಶಮಾನಗಳ ಹಿಂದೆಯೇ ಪ್ರಸ್ತುತದಲ್ಲಿರುವ ಚಿಕಿತ್ಸೆಯನ್ನುಇಂದು ಮಾಡಿ ‘ರಾಜ್ಯ ಅಥವಾ ಜಿಲ್ಲೆ , ತಾಲೂಕಿನಲ್ಲಿಯೇ ಮೊದಲ ಬಾರಿಗೆ ಅಪರೂಪದ ಚಿಕಿತ್ಸೆ’ ಎಂದು ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ವೈದ್ಯರುಗಳ ನಡುವೆ ಡಾ.ಚಾಂಡಿಯವರು ಭಿನ್ನವಾಗಿ ನಿಲ್ಲುತ್ತಾರೆ. ಭಾರತದಲ್ಲಿ ತಮ್ಮ ಕ್ಷೇತ್ರದ ಹತ್ತು ಹಲವು ಮೊತ್ತ ಮೊದಲುಗಳಿಗೆ ಅವರು ಜನಿಸಿದ್ದು ಕೇರಳವಾದರೂ, ಕರ್ಮಭೂಮಿ ತಮಿಳುನಾಡು ಆಗಿತ್ತು. ಕಳೆದ ಏಳೆಂಟು ವರ್ಷಗಳಿಂದ ಕೋಲ್ಕತಾ ನಗರದಲ್ಲಿ ಕಾರ್ಯನಿರತರಾಗಿದ್ದಾರೆ.

ಹಲವು ದಶಕಗಳ ಹಿಂದೆ ಭಾರತದಲ್ಲಿ ರಕ್ತ ಸಂಬಂಧಿತ ಎಲ್ಲ ರೋಗಗಳಿಗೆ ಇಡೀ ರಕ್ತವನ್ನೇ ಕೊಡುವ ಚಿಕಿತ್ಸೆ ಪ್ರಚಲಿತದಲ್ಲಿತ್ತು. ಇದರಿಂದ ಅನಗತ್ಯವಾಗಿ ರಕ್ತ ವ್ಯರ್ಥ ವಾಗುತಿತ್ತು. ರಕ್ತದಲ್ಲಿರುವ ನಾನಾ ಅಂಶಗಳನ್ನು ಬೇರ್ಪಡಿಸಿ ರೋಗಿಗೆ ಅಗತ್ಯವಿರುವ ಅಂಶವನ್ನು ಮಾತ್ರ ಕೊಡುವ ಪದ್ಧತಿಯನ್ನು ಭಾರತದಲ್ಲಿ ಜಾರಿಗೆ ತಂದವರಲ್ಲಿ ಡಾ.ಚಾಂಡಿ ಮೊದಲಿಗರು. ಭಾರತದಲ್ಲಿ ರಕ್ತ ಕ್ಯಾನ್ಸರ್‌ಗಳಿಗೆ, ಅಸ್ಥಿ ಮಜ್ಜೆ (ಬೋನ್ ಮ್ಯಾರೋ ಟ್ರಾನ್‌ಸ್ ಪ್ಲಾಂಟ್) ಚಿಕಿತ್ಸೆಯನ್ನು ಮೊಟ್ಟ ಮೊದಲು ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಸತತ ನಲ್ವತ್ತೆರಡು ವರುಷದ, ವೆಲ್ಲೂರಿನ ಪ್ರತಿಷ್ಠಿತ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಡಾ.ಚಾಂಡಿ, ಅಲ್ಲಿ ದೇಶದಲ್ಲಿಯೇ ಮೊದಲ ರಕ್ತ ರೋಗಗಳ ವಿಭಾಗ ಪ್ರಾರಂಭಿಸಿದರು. ಅವರ ಸೇವಾ ಅವಧಿಯಲ್ಲಿ ಹಲವಾರು ವೈದ್ಯರಿಗೆ ತರಬೇತಿ ನೀಡಿ ದೇಶಾದ್ಯಂತ ರಕ್ತ ಸಂಬಂಧಿತ ರೋಗಗಳ ಚಿಕಿತ್ಸೆಗೆ ಪರೋಕ್ಷವಾಗಿ ನೆರವಾಗಿದ್ದಾರೆ. ವೆಲ್ಲೂರಿನಲ್ಲಿ ನಿವೃತ್ತಿ ಪಡೆದ ನಂತರ 2011ರಿಂದ ಕೋಲ್ಕತಾ ಮೆಡಿಕಲ್ ಸೆಂಟರ್ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ 2016ರಲ್ಲಿ ವೈದ್ಯರಿಗಾಗಿ ಇರುವ ಅತ್ಯುನ್ನತ ಬಿ.ಸಿ.ರಾಯ್ ಪ್ರಶಸ್ತಿ ದೊರಕಿದೆ.

ಡಾ.ಚಾಂಡಿ ಬರೀ ಚಿಕಿತ್ಸೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ರೋಗಿಗಳ ಭಾವನೆಗಳ ಅನುಭೂತಿಗೆ ಅವರು ಎಷ್ಟು ಮಹತ್ವ ಕೊಡುತ್ತಾರೆ ಎಂಬುದಕ್ಕೆ ಒಂದು ನಿದರ್ಶನ ಕೊಡುತ್ತೇನೆ. ಅಸ್ಥಿ ಮಜ್ಜೆ ಕಸಿ ಮಾಡಿಕೊಳ್ಳುವ ರೋಗಿಗಳು ಪಡುವ ಮಾನಸಿಕ ತುಮುಲವನ್ನು ಅರಿಯಲು, ವಿಲಕ್ಷಣ ಮಾರ್ಗವನ್ನು ಈ ಮೇರು ವೈದ್ಯ ಅನುಸರಿಸಿದರು. ತಮಗೆ ರೋಗ ಇಲ್ಲದಿದ್ದರೂ, ಅಸ್ಥಿ ಮಜ್ಜೆ ಸೇದುವ (ಬೋನ್ ಮ್ಯಾರೋ ಆಸ್ಪಿರೇಷನ್ ) ಪ್ರಕ್ರಿಯೆಗೆ ತಮ್ಮ ದೇಹವನ್ನು ಒಳಗಾಗಿಸಿದರು. ತಮ್ಮ ಬಳಿ ಬರುವ ಯಾವ ರೋಗಿಗಳು ಹಣಕಾಸಿನ ಮುಗ್ಗಟ್ಟಿನಿಂದ, ಚಿಕಿತ್ಸೆ ನಿರಾಕರಿಸಬಾರದೆಂದು ದಾನಿಗಳಿಂದ ನಿಧಿ ಸಂಗ್ರಹಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೋಗಿಗಳು ಉಪಕೃತರಾಗಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಘೋಷಣೆಗೊಂಡ ದಿನ ಇಡೀ ಆಸ್ಪತ್ರೆಯಲ್ಲಿ ಹಬ್ಬದ ವಾತಾವರಣವಿದ್ದರೆ, ಡಾ.ಚಾಂಡಿಯವರು ಮಾತ್ರ ತಮ್ಮ ದಿನ ನಿತ್ಯದ ಕೆಲಸದಲ್ಲಿ ಮಗ್ನರಾಗಿ, ಎಲ್ಲ ರೋಗಿಗಳ ಚಿಕಿತ್ಸೆ ಕೊಠಡಿಯಿಂದ ಹೊರಬರಲೇ ಇಲ್ಲ. ಒತ್ತಾಯದ ಮೇರೆಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮುಜುಗರದಿಂದಲೇ ಭಾಗವಹಿಸಿದ ಇಳಿ ವಯಸ್ಸಿನ ಡಾ.ಚಾಂಡಿಯವರು ಹೇಳಿದ್ದು, ಎಲ್ಲರ ಕಣ್ಣುಗಳಲ್ಲಿ ನೀರು ತರಿಸಿತ್ತು. ‘ನನಗೆ ಪ್ರಶಸ್ತಿ ಬಂದಿರುವುದು ನನಗೆ ವಿಶೇಷವೆನಿಸಲಿಲ್ಲ. ಆದರೆ ಅದನ್ನು ಸಂಭ್ರಮಿಸುತ್ತಿರುವ ಲಕ್ಷಾಂತರ ಜನಗಳನ್ನು ನೋಡಿ ಸಂತೋಷ ವೆನಿಸುತ್ತಿದೆ. ನಾನು ದೇವರಲ್ಲಿ ಬೇಡಿಕೊಳ್ಳುವುದಿಷ್ಟೇ. ನಾನು ಯಾರಿಗೂ ಪ್ರಯೋಜನವಿಲ್ಲವೆಂದಾಗ, ಆ ಕ್ಷಣವೇ ಸಾವು ನನ್ನನ್ನು ಅಪ್ಪಿಕೊಳ್ಳಲಿ.’

ಅಲ್ಲಿ ಉಪಸ್ಥಿತರಿದ್ದ ಡಾ.ಚಾಂಡಿಯವರ ಪತ್ನಿ ಮಾತು ಕೂಡ ಮಾರ್ಮಿಕವಾಗಿತ್ತು: ‘ನಾನು ಕಾನೂನಿನ ಪ್ರಕಾರ ಮದುವೆಯಾಗಿದ್ದರೂ, ತಾಂತ್ರಿಕವಾಗಿ ಅವರು ಮದುವೆಯಾಗಿರುವುದು ಅವರ ರೋಗಿಗಳನ್ನು. ಹಗಲು ರಾತ್ರಿ ರೋಗಿಗಳಿಗೆ ಸಿಗುವ ಡಾ.ಚಾಂಡಿ, ಕುಟುಂಬದ ಜತೆ ಕಾಲ ಕಳೆಯುವುದು ಕಡಿಮೆಯೇ. ಅವರ ಮಹಾನ್ ಕಾರ್ಯಕ್ಕೆ ತೊಂದರೆಯಾಗದಿರಲಿ ಎಂದು ಕುಟುಂಬದ ಎಲ್ಲ ಕೆಲಸಗಳನ್ನು ನಾನೇ ನಿರ್ವಹಿಸಿದ್ದೇನೆ’ ಎಂದರವರು. ಡಾ.ಚಾಂಡಿಯವರ ಪತ್ನಿ ಹೇಳಿದ ಮಾತು ಬಹುತೇಕ ವೈದ್ಯ ಪತ್ನಿಯರ ಭಾವನೆಯನ್ನು ಪ್ರತಿನಿಧಿಸಿದಂತೆ ಇತ್ತು. ಈ ಸಂದರ್ಭದಲ್ಲಿ ಯಾರೋ ಹೇಳಿದ ಮಾತು ನೆನಪಿಗೆ ಬರುತ್ತದೆ.’ ಸಂತೋಷವಾಗಿರುವ ಒಬ್ಬ ವೈದ್ಯ ತೋರಿಸಿ, ನೋಡೋಣ. ಹಾಗೇನಾದರೂ ವೈದ್ಯರ ಪತ್ನಿ ಸಂತೋಷವಾಗಿದ್ದರೆ, ಅವರ ಪತಿಗೆ ರೋಗಿಗಳಿಲ್ಲ ಎಂದು ಖಚಿತವಾಗಿ ಹೇಳಬಹುದು!’ ಹಾಗೆ ವೈದ್ಯವೃತ್ತಿಗೆ ವೈದ್ಯರು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರು ಕೂಡ ತ್ಯಾಗ ಮಾಡಬೇಕಾಗುತ್ತದೆ.

ವೈದ್ಯಕೀಯ ಕ್ಷೇತ್ರದ ಸಣ್ಣ ಋಣಾತ್ಮಕ ಸುದ್ದಿ ಸಿಕ್ಕರೂ ಪ್ರಸಾರ ಮಾಡುವ ಮಾಧ್ಯಮಗಳು, ಇಂತಹ ಧನಾತ್ಮಕ ಸುದ್ದಿಗಳಿಗೆ ಜಾಗವನ್ನೇ ಕೊಡುವುದಿಲ್ಲ ಎಂಬ ಬೇಸರವಿದೆ. ರಾಜಕಾರಣಿಗಳು ಬೈದಾಡಿಕೊಂಡಿದ್ದನ್ನು ಪ್ರಮುಖ ಪುಟದಲ್ಲಿ ಸುದ್ದಿ ಮಾಡುವ ಪತ್ರಿಕೆಗಳು, ಪ್ರಶಸ್ತಿ ಬಂದ ಸುದ್ದಿಯನ್ನು ಒಂದು ಸೀಮಿತಗೊಳಿಸಿದ್ದಾರೆ. ಸಿನಿಮಾ ನಟರು ಏದುಸಿರು ಬಿಟ್ಟರೂ, ಅರ್ಧ ಗಂಟೆ ಕಾರ್ಯಕ್ರಮ ಮಾಡಿ ತೋರಿಸುವ ದೃಶ್ಯ ಮಾಧ್ಯಮಗಳು, ವೈದ್ಯರಿಗೆ ಸಲ್ಲಿದ ಪದ್ಮಶ್ರೀಯ ಬಗ್ಗೆ ಒಂದು ಸಾಲು ಕೊಡ ತೋರಿಸದೆ ಇದ್ದುದ್ದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಡಾ.ಚಾಂಡಿಯಂತಹ ವೈದ್ಯರುಗಳು ತಮ್ಮ ಬಗ್ಗೆ ತಾವು ಎಂದಿಗೂ ಹೇಳಿಕೊಳ್ಳುವುದಿಲ್ಲ. ಆದರೆ ಅವರ ಬಗ್ಗೆ ಸುತ್ತಮುತ್ತಲಿನ ಜನರು ಬರೆಯದೆ ಇದ್ದರೆ ಅದು ಅವರ ಲೋಪವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close