About Us Advertise with us Be a Reporter E-Paper

ಗುರು

ದಿವ್ಯಾನುಭೂತಿ ನೀಡುವ ಪಾದುಕಾ ಮಂದಿರ

* ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಇರುವ ಭಾರತೀಯರು ಪಾದಪೂಜೆ, ಪಾದುಕೆಪೂಜೆಯನ್ನು ಮಾಡುವುದು ವಾಡಿಕೆ. ಗುರುಸನ್ನಿಧಿ, ಮಠಮಂದಿರಗಳಲ್ಲಿ ಪಾದುಕೆಗಳನ್ನು ಪೂಜಿಸುವುದು ಸಾಮಾನ್ಯ ಸಂಗತಿ. ಆಯಾ ಮಠದ, ಸಿದ್ಧಾಂತದ ಗುರುಗಳ ಪಾದುಕೆಗಳನ್ನು ಅಲ್ಲಲ್ಲಿ ಕಾಣಬಹುದು. ಪಾದುಕೆಗಳ ದೇವಾಲಯ ಇಲ್ಲವೆ ಮಂದಿರದ ಒಂದು ಭಾಗವಾಗಿರುವುದು ಸರ್ವೇಸಾಮಾನ್ಯ. ಆದರೆ, ಪಾದುಕೆಗಳಿಗೇ ಪ್ರತ್ಯೇಕ ಮಂದಿರವೊಂದು ಬೆಂಗಳೂರಿನಲ್ಲಿದೆ.

ಅಧ್ಯಾತ್ಮದ ಸೆಲೆಯಿಂದ ಭಾವವನ್ನು ಭಕುತಿಯ ಆಲಯವಾಗಿಸುವ, ಭವದ ಬಂಧನದಿಂದ ದೊರಕಿಸುವ ಗುರುಪಾದುಕೆಗಳ ದರ್ಶನಕ್ಕಾಗಿ ಹಾತೊರೆಯುವ ಭಕ್ತಗಣಕ್ಕೆಂದೇ ರೂಪಗೊಂಡಿರುವ ಅಪರೂಪದ ಪಾದುಕೆಗಳ ಮಂದಿರವೊಂದು ಬೆಂಗಳೂರಿನಲ್ಲಿದೆ. ಆಶ್ಚರ್ಯವಾದರೂ ಇದು ಸತ್ಯ. ಬೆಂಗಳೂರಿನ ಉತ್ತರಹಳ್ಳಿ-ಕೆಂಗೇರಿ ಮುಖ್ಯ ರಸ್ತೆಯ ತುರಹಳ್ಳಿ ಬಳಿಯ ಪಟಾಲಮ್ಮ ದೇವಸ್ಥಾನದ ಸಮೀಪವಿರುವ ಈ ವಿಶಿಷ್ಟ ಪಾದುಕೆ ಮಂದಿರವೇ ಶ್ರೀ ಸದ್ಗುರು ಚೈತನ್ಯ ಮಂದಿರ. ದೇಶದಲ್ಲೇ ಸದ್ಗುರುಗಳ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕಾಗಿಯೇ ರೂಪಿಸಲಾಗಿರುವ ಏಕೈಕ ಮಂದಿರವೆಂಬ ಹೆಗ್ಗಳಿಕೆ ಈ ಮಂದಿರದ್ದು.

ಭಾರತೀಯ ಪರಂಪರೆಯಲ್ಲಿ ಪಾದುಕೆಗಳ ಪ್ರಾಮುಖ್ಯತೆ ಹಾಗೂ ಅದರ ಮಹತ್ವ ಭರತನಿಂದಲೇ ಪ್ರಾರಂಭವಾಗಿದೆ. ಶ್ರೀ ರಾಮರ ಪಾದುಕೆಯನ್ನೇ ಆಧಾರವಾಗಿಟ್ಟುಕೊಂಡು 13 ವರ್ಷಗಳ ಕಾಲ ಅಯೋಧ್ಯೆಯ ರಾಜ್ಯಭಾರವನ್ನು ನಡೆಸಿದ ಭರತ, ಪಾದುಕೆಯು ಸಾಕ್ಷಾತ್ ಆ ಪರಮಾತ್ಮನ ಸ್ವರೂಪವೇ ಎಂದು ತಿಳಿಸಿಕೊಟ್ಟಿದ್ದಾನೆ. ಗುರುವಿನ ಸಂಪೂರ್ಣ ಚೈತನ್ಯ ಅವನ ಪಾದಗಳಲ್ಲಿ ಅಡಕವಾಗಿದ್ದು, ಆ ಪಾದಗಳನ್ನು ಹೊತ್ತಿರುವ ಪಾದುಕೆಗಳು, ಸಾಕ್ಷಾತ್ ಗುರುವಿನ ಚೈತನ್ಯದಷ್ಟೇ ಮಹತ್ವ ಹೊಂದಿದೆ ಎಂಬುದನ್ನು ನಮ್ಮ ಪರಂಪರೆಯಲ್ಲಿ ಹಲವಾರು ನಿದರ್ಶನಗಳ ಮೂಲಕ ನೋಡುತ್ತಾ ಬಂದಿದ್ದೇವೆ. ಮದನಮೋಹನ ಮಾಳವೀಯ ಶೃಂಗೇರಿ ಶಾರದಾಪೀಠಾಧೀಶ್ವರರಾಗಿದ್ದ ಜಗದ್ಗುರು ಶ್ರಶ್ರೀ ಸ್ವಾಮಿಗಳ ಕೃಪೆಯಿಂದ ಬನಾರಸ್ ಹಿಂದೂ ಮಹಾ ವಿಶ್ವವಿದ್ಯಾಲಯವನ್ನೇ ಸ್ಥಾಪಿಸಲಾಯಿತು ಎಂದರೆ ಪಾದುಕೆಯ ಮಹತ್ವವು ನಮಗೆ ವೇದ್ಯವಾಗುತ್ತದೆ.

ಈ ಉದ್ದೇಶವನ್ನಿಟ್ಟುಕೊಂಡು ಗುರುವಿನ ಮಹತ್ವ , ಸಂದೇಶ, ಸಿದ್ಧಾಂತ, ತತ್ವ ಹಾಗೂ ಗುರುವಿನ ಪಾದುಕೆಗಳ ಮಹತ್ವ ಎಲ್ಲರಿಗೂ ಲಭ್ಯವಾಗಬೇಕೆಂಬ ಮಹತ್ ಸಂಕಲ್ಪದಿಂದ ಹಾಗೂ ಗುರುಗಳ ಆರ್ಶೀವಾದದಿಂದ ಈ ಮಹಾನ್ ಕೈಂಕರ್ಯವು 2000ನೇ ಇಸವಿಯಲ್ಲಿ ಪ್ರಾರಂಭವಾಯಿತು.

ಮಂದಿರದ ಹಿನ್ನಲೆ
ಸದ್ಗುರು ಚೈತನ್ಯ ಮಂದಿರವು ನಿರ್ಮಾಣವಾಗಬೇಕೆಂಬ ಸಂಕಲ್ಪವಾದನಂತರ 2009ನೇ ತಿಂಗಳಲ್ಲಿ ಬೆಂಗಳೂರಿಗೆ ಶ್ರಶ್ರೀ ಭಾರತೀತೀರ್ಥ ಪಾದಾರ್ಪಣೆ ಆಯಿತು. ಆಗ ಅಧ್ಯಕ್ಷರಾದ ಶ್ರಶ್ರೀ ಕೆ. ಎನ್.ವೆಂಕಟನಾರಾಯಣ ಅವರು ಗುರುಗಳಲ್ಲಿ, ಸದ್ಗುರು ಪಾದುಕೆಗಳನ್ನು ಅನುಗ್ರಹ ಮಾಡಬೇಕೆಂದು ಪ್ರಾರ್ಥಿಸಿಕೊಂಡಾಗ ಜಗದ್ಗುರುಗಳು ತಾವು ಭಗವತಿಯಲ್ಲಿ ಪ್ರಾರ್ಥಿಸಿ ತಿಳಿಸುತ್ತೆವೆಂದರು. 2 ದಿನಗಳ ನಂತರ ಗುರುಗಳೇ ಸ್ವತಃ ತಮ್ಮ ಅಮೃತ ಹಸ್ತದಿಂದ ಪೂಜೆ ಮಾಡಿರುವಂತಹ ಪಾದುಕೆಗಳನ್ನು ಅನುಗ್ರಹಿಸಲು ನಿರ್ಧರಿಸಿದರು. ಈ ಪಾದುಕೆಗಳನ್ನು ಯಾರೂ ಧರಿಸಕೂಡದೆಂದು ಹೇಳಿ ಪಾದುಕೆಗಳನ್ನು ಗಾಣಗಾಪುರದ ಆದಿಯಾಗಿ ಭಾರತದ 48 ದತ್ತ ಕ್ಷೇತ್ರಗಳಲ್ಲಿ ಪೂಜೆ ಮಾಡಿಸಿದ ನಂತರ ಈ ಪಾದುಕೆಗಳನ್ನು ಹೇಳಿ, ಹಾಗೆಯೇ ಗುರುಪರಂಪರೆಯಲ್ಲಿ ಮೂಲ ಸ್ವರೂಪವಾದ ಶ್ರಶ್ರೀ ದಕ್ಷಿಣಾಮೂರ್ತಿ ಹಾಗೂ ದತ್ತಾತ್ರೇಯರನ್ನು ಪ್ರತಿಷ್ಠಾಪಿಸಬೇಕೆಂದು ಆದೇಶ ನೀಡಿದರು.

ಪಾದುಕಾ ಯಾತ್ರೆ :
2009 ಮೇ ತಿಂಗಳಲ್ಲಿ ಗುರುಗಳಿಂದ ಪಾದುಕೆಯನ್ನು ಅನುಗ್ರಹ ಪಡೆ ನಂತರ ಗುರುಗಳ ಆದೇಶದಂತೆ ಪಾದುಕಾ ಯಾತ್ರೆಯು ಪ್ರಾರಂಭವಾಯಿತು. ಗಾಣಗಾಪುರ, ಔದುಂಬರ, ವಾಡಿ, ಸಜ್ಜನಘಡ, ಗೋಂದಾವಳಿ, ಅಕ್ಕಲ್ಕೋಟ್, ಶಿರಡಿ, ತಿರುವಣ್ಣಾಮಲೈ, ಮುಂತಾದ 48 ಕ್ಷೇತ್ರಗಳಿಗೆ ಗುರುಬಂಧುಗಳೊಡಗೂಡಿ ಪಾದುಕಾ ಯಾತ್ರೆ ಯಶಸ್ವಿಯಾಯಿತು. ಅದೇ 2009ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಸುಮಾರು ದಿನಗಳ ಅಭೂತಪೂರ್ವವಾದ ಶ್ರಶ್ರೀ ಸದ್ಗುರು ಪಾದುಕಾ ಯಜ್ಞ ಶಂಕರಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಆಶ್ಚರ್ಯವಾಗುವಂತೆ ಸುಮಾರು 21 ಅವಧೂತರು ಧರಿಸಿರುವಂತಹ ಪಾದುಕೆಗಳು ಈ ಕಾರ್ಯಕ್ರಮಕ್ಕೆ ಲಭ್ಯವಾಯಿತು. ತತ್‌ಕ್ಷಣದಲ್ಲೇ ಎಲ್ಲರ ಮನಸ್ಸಿಗೆ ಬಂದ ವಿಷಯ, ಒಂದೇ ಸೂರಿನ ಅಡಿ ಈ ಎಲ್ಲಾ ಗುರು ಚೈತನ್ಯಗಳನ್ನು ಪಾದುಕೆಯ ಮೂಲಕ ಆರಾಧಸುವ ಅವಕಾಶ ದೊರಕಿಸಲು ಪಾದುಕಾ ಮಂದಿರ ಸೃಷ್ಠಿಯಾಗಬೇಕೆಂದು.

ಪ್ರತಿಷ್ಠಾಪನೆ: ಗುರು ಕೃಪೆಯಿದ್ದರೆ ಎಂತಹ ಅಸಂಭವವೂ ಸುಲಲಿತವಾಗಿ ಜರುಗುತ್ತದೆ ಎಂಬ ನಿದರ್ಶನಕ್ಕೆ ಜನವರಿಯಲ್ಲಿ ಶಂಕುಸ್ಥಾಪನೆ ಆದಂತಹ ಶ್ರಶ್ರೀ ಸದ್ಗುರು ಚೈತನ್ಯ ಮಂದಿರವು 2012 ಮಾರ್ಚ್ 4ನೇ ತಾರೀಖು ಶ್ರಶ್ರೀ ದಕ್ಷಿಣಾಮೂರ್ತಿ ದತ್ತಾತ್ರೇಯರ ಪ್ರತಿಷ್ಠಾನಾ ಕಾರ್ಯಕ್ರಮ ಅದ್ಭುತವಾಗಿ ನಡೆಯಿತು. ಸ್ವತಃ ಜಗದ್ಗುರುಗಳಾದ ಶ್ರಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಸ್ವಹಸ್ತದಿಂದ ಪ್ರತಿಷ್ಠಾಪನಾ ಕುಂಬಾಭಿಷೇಕ ನಡೆಸಿಕೊಟ್ಟದ್ದು ಎಲ್ಲರ ಪುಣ್ಯವೇ ಸರಿ.
ಪಾದುಕಾ ಮಹತ್ವ

108 ಗುರುಗಳ ಪಾದುಕೆಗಳನ್ನು ತಲಾ ಒಂದೊಂದು ಪ್ರತ್ಯೇಕ ಕರ್ಬೋರ್ಡ್‌ಗಳಲ್ಲಿ ಆಯಾ ಗುರುಗಳ ಭಾವಚಿತ್ರದ ಸಮೇತ ಇರಿಸಲಾಗಿದೆ. ಅವಧೂತ ಪರಂಪರೆ, ಮಠಾಧೀಶರ ಪರಂಪರೆ ಮತ್ತು ಪರಂಪರೆಯನ್ನು ಬೆಳಗಿದ ಮಹಾಮಹಿಮರ ಪಾದುಕೆಗಳನ್ನು ಏಕಕಾಲಕ್ಕೆ ದರ್ಶನ ಮಾಡಿಸುವ ಈ ಯತ್ನವೇ ಶ್ಲಾಘನೀಯ. ವಿಶಿಷ್ಟ ಆನಂದದ ಅನುಭೂತಿ. ಆಧ್ಯಾತ್ಮದ ಸ್ಪರ್ಶದಿಂದ ಸಚೇತನಗೊಳಿಸುವ ಸಂಗತಿ.

ಶೃಂಗೇರಿ ಶಾರದಾ ಪೀಠದ ಪರಮಶ್ರೇಷ್ಠ ಗುರುಗಳಾದ ಶ್ರಶ್ರೀಚಂದ್ರಶೇಖರ ಭಾರತಿ ಸ್ವಾಮಿಗಳು, ಅಭಿನವ ತೀರ್ಥ ಸ್ವಾಮಿಗಳು, ಹಾಲಿ ಜಗದ್ಗುರುಗಳಾದ ಶ್ರಶ್ರೀಭಾರತಿ ತೀರ್ಥ ಮಹಾಸ್ವಾಮಿಗಳು, ಹತ್ತಾರು ಅವಧೂತರು, ಸಮಾಜ ಸುಧಾರಕರಕರಾದ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶ್ರಶ್ರೀ ಶಿರಡಿಸಾಯಿಬಾಬಾ, ಸತ್ಯಬಾಯಿ ಬಾಬಾ ಸೇರಿದಂತೆ ಒಟ್ಟು 108 ಮಂದಿ ಗುರುಗಳ ಪಾದುಕೆಗಳು ಇಲ್ಲುಂಟು. ಹಲವು ಪಾದುಕೆಗಳು ಸ್ವತಃ ಆ ಸದ್ಗುರುಗಳು ಉಪಯೋಗಿಸಿದ್ದೇ ಆಗಿರುವುದು ವಿಶೇಷ. ಇನ್ನುಳಿದ ಪಾದುಕೆಗಳನ್ನು ಮೂಲ ಗುರುಸನ್ನಿಧಿಯಲ್ಲಿ ಸ್ಪರ್ಶಿಸಿ 48 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಿ ತಂದಿರಿಸಿದ ಪ್ರತಿರೂಪದ ಪಾದುಕೆಗಳಾಗಿವೆ.

Tags

Related Articles

Leave a Reply

Your email address will not be published. Required fields are marked *

Language
Close