ವಿಶ್ವವಾಣಿ

ರಕ್ತಪಾತಕ್ಕೆ ರಕ್ತಪಾತವೇ ಉತ್ತರ: ಪಾಕ್‌ ಸೇನಾ ಮುಖ್ಯಸ್ಥ ಬಾಜ್ವಾ

ಇಸ್ಲಮಾಬಾದ್‌: ಪಾಕಿಸ್ತಾನದ ಸೇನೆ ಮತ್ತೆ ತನ್ನ ಬಾಲ ಬಿಚ್ಚಿದ್ದು, ಭಾರತವನ್ನು ಪ್ರಚೋದಿಸುವ ಹೇಳಿಕೆ ನೀಡಿದೆ. ಗಡಿಯಲ್ಲಿ ರಕ್ತಪಾತ ನಡೆಸುತ್ತಿರುವವರ ಮೇಲೆ ರಕ್ತಪಾತದ ಮೂಲಕವೇ ಸೇಡು ತೀರಿಸಿಕೊಳ್ಳುವುದಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಾಜ್ವಾ ಹೇಳಿದ್ದಾರೆ.

ರಾವಲ್‌ಪಿಂಡಿಯಲ್ಲಿ ನಡೆದ ಪಾಕಿಸ್ತಾನದ 53ನೇ ರಕ್ಷಣಾ ದಿನಾಚರಣೆಯಲ್ಲಿ ಸೇನಾ ಮುಖ್ಯಸ್ಥ ಮತ್ತು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪಾಕಿಸ್ತಾನಿ ಸೈನಿಕರಿಗೆ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಸೇನಾ ಮುಖ್ಯಸ್ಥ, ಪಾಕಿಸ್ತಾನದ ಸೈನಿಕರು ತಾಯಿನಾಡಿನ ರಕ್ಷಣೆಗಾಗಿ ಒಟ್ಟಾಗಿದ್ದಾರೆ. 1956ರಲ್ಲಿ ನಡೆದ ಇಂಡೋ-ಪಾಕ್‌ ಯುದ್ಧವನ್ನು ಉಲ್ಲೇಖಿಸಿ, ಅಂದು ನಡೆದ ಯುದ್ಧದಿಂದಾಗಿ ಇಂದಿನವರೆಗೂ ಪಾಕಿಸ್ತಾನದ ಪ್ರತಿ ಯುವಕನಿಗೂ ಒಂದೊಂದು ಪಾಠ ದೊರೆತಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ವರದಿ ಪ್ರಕಟಿಸಿರುವ ಪಾಕಿಸ್ತಾನದ ‘ಡಾನ್’ ಪತ್ರಿಕೆ, “ಸಶಸ್ತ್ರ ಪಡೆಗಳು, ಪಾಕಿಸ್ತಾನದ ಪ್ರಜೆಗಳ ಬೆಂಬಲದೊಂದಿಗೆ ದುಷ್ಟ ಎದುರಾಳಿಯನ್ನು ಸೋಲಿಸಿದ ದಿನ ಇದಾಗಿದೆ. ಪ್ರತಿ ಪಾಕಿಸ್ತಾನಿಯೂ ಸೈನಿಕನಂತೆ. ನಾವೆಲ್ಲ ನಮ್ಮ ದೇಶ ರಕ್ಷಣೆಗಾಗಿ ಒಟ್ಟಾಗಿದ್ದೇವೆ ಮತ್ತು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆ. ನಮ್ಮ ಸೈನಿಕರು ಯುದ್ಧದ ಗುಂಡುಗಳಿಗೆ ಪ್ರಾಣ ಅರ್ಪಿಸಿದರು. ದೇಶಕ್ಕೆ ಹಾನಿಯಾಗದಂತೆ ತಡೆದರು,” ಎಂದು ಹೇಳಿದ್ದಾರೆ.

ದೇಶವು ಹುತಾತ್ಮ ಯೋಧರನ್ನು ಮರೆಯುವುದಿಲ್ಲ. ಗಡಿಗಳಲ್ಲಿ ಹರಿದ ರಕ್ತದ ಕೋಡಿಗೆ ಸಮನಾದ ಸೇಡನ್ನು ತೀರಿಸಿಕೊಳ್ಳುತ್ತೇವೆ. ಎರಡು ದಶಕಗಳಿಂದಲೂ ದೇಶ ಕಷ್ಟದ ದಿನಗಳಿಂದ ಮುಂದೆ ಬಂದಿದೆ ಮತ್ತು ಯುದ್ಧವು ಇಂದಿಗೂ ಮುಂದುವರಿಯುತ್ತಲೇ ಇದೆ. ಪಾಕಿಸ್ತಾನದ ಈಗಿನ ಸರ್ಕಾರ ಬಲಿಷ್ಠ ಸೇನೆಯನ್ನು ರೂಪಿಸುವಲ್ಲಿ ಬದ್ಧವಾಗಿದೆ. ಅಲ್ಲದೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಭಾರತದೊಂದಿಗೆ ಶಾಂತಿ ಸ್ಥಾಪಿಸುವ ಮಾತುಗಳನ್ನೇ ಆಡುತ್ತಿದೆ ಎಂದು ತಿಳಿಸಿದ್ದಾರೆ.

ಪಾಕ್‌ ಯುದ್ಧ ಮಾಡುವುದಿಲ್ಲ: ಇದೇ ವೇಳೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮಾತನಾಡಿ, ಪಾಕಿಸ್ತಾನವು ಯಾರೊಂದಿಗೂ ಯುದ್ಧ ಮಾಡಲು ಬಯಸುವುದಿಲ್ಲ. ಯಾರೊಂದಿಗೂ ಯುದ್ಧ ಮಾಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ನಾವೇನಿದ್ದರೂ ನಮ್ಮ ಉದ್ದೇಶದ ಕಡೆಗಿದ್ದು, ಜನಗಳಿಗಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.