About Us Advertise with us Be a Reporter E-Paper

ಅಂಕಣಗಳು

ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಜುಟ್ಟಿಗೆ ಮಲ್ಲಿಗೆ ಹೂವು ಬೇಕು!

ಮೋಹನ್ ಕುಮಾರ್ ಬಿ.ಎನ್.

ಹಳೇ ಮೈಸೂರು ಭಾಗದಲ್ಲಿ ಒಂದು ಗಾದೆ ಮಾತು ಇದೆ ‘ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಸಹ ಜುಟ್ಟಿಗೆ ಮಾತ್ರ ಮಲ್ಲಿಗೆ ಹೂವು’. ಮನೆಯಲ್ಲಿ ತಿನ್ನುವುದಕ್ಕೆ ಗತಿಯಿಲ್ಲದಿದ್ದರೂ ಸಹ ಶೋಕಿಗಾಗಿ ಖರ್ಚು ಮಾಡುವ ಎಡಬಿಡಂಗಿ ಸೋಮಾರಿಗಳಿಗೆ ಬಳಸುವ ಹೋಲಿಕೆ ಮಾತಿದು. ಈ ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡುತ್ತೇನೆಂದು ತೊಡೆ ತಟ್ಟಿದಾಗಲೆಲ್ಲಾ ನೆನಪಾಗುವ ಗಾದೆ ಮಾತಿದು. ತನ್ನ ದೇಶದಲ್ಲಿನ ಜನರಿಗೆ ಸರಿಯಾದ ಉದ್ಯೋಗ ನೀಡಲು ಯೋಗ್ಯತೆಯಿಲ್ಲದ ತನ್ನ ಸೇನೆಯ ಬಲವರ್ಧನೆಗೆ ಮಾತ್ರ ವರ್ಷಕ್ಕೆ ಬಿಲಿಯನ್ ಗಟ್ಟಲೆ ಹಣವನ್ನು ಸುರಿಯುತ್ತದೆ. ರೋಡಿನಲ್ಲಿ ಭಿಕ್ಷೆ ಬೇಡುವ ಭಿಕ್ಷುಕನೊಬ್ಬ, ಭಿಕ್ಷೆಯಿಂದ ಬಂದ ಹಣದಲ್ಲಿ ಬಾಡಿ ಗಾರ್ಡ್‌ಗಳನ್ನು ನೇಮಿಸಿಕೊಂಡಂತಹ ಪರಿಸ್ಥಿತಿ ಅದರದು. ಗುಳ್ಳೇನರಿಯಂತೆ ಉಗ್ರರ ಮೂಲಕ ಯಾವಾಗಲೂ ನಮ್ಮ ದೇಶದ ಮೇಲೆ ರಣ ಹೇಡಿ ಯುದ್ಧ ಮಾಡುವ ಈ ಪಾಕಿಸ್ತಾನದ ಅಂಡು ಸುಟ್ಟರೂ ಸಹ ಅದು ತನ್ನ ಕುತಂತ್ರಿ ಬುದ್ಧಿ ಬಿಡುವುದಿಲ್ಲ. ತನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ನಿನ್ನ ಎರಡೂ ತೆಗೆಯುತ್ತೇನೆಂಬ ಹೇಡಿ ಹೇಳಿಕೆಯೊಂದಿಗೆ ಯಾವಾಗಲೂ ಸಹ ಕಾಲು ಕೆದರಿಕೊಂಡು ಬರುತ್ತಲೇ ಇರುತ್ತದೆ. 1947, 1971, 1999ರಲ್ಲಿ ಮೂರು ಬಾರಿ ಅವರಿಗೆ ಮಣ್ಣು ಮುಕ್ಕಿಸಿ ಕಳುಹಿಸಿದರೂ ಸಹ ಜಟ್ಟಿ , ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬ ಹುಂಬತನ. ಅಲ್ಲಿನ ರಾಜಕೀಯವಂತೂ ಬೆಂಗಳೂರಿನ ರಾಜ ಕಾಲುವೆಯಲ್ಲಿ ಹರಿಯುವ ಕೊಚ್ಚೆ ನೀರಿಗಿಂತಲೂ ಕಲುಷಿತವಾಗಿದೆ. ಹೆಸರಿಗಷ್ಟೇ ಪ್ರಜಾಪ್ರಭುತ್ವ. ಎಲ್ಲಾ ಆಡಳಿತವೂ ಸೈನ್ಯದಿಂದಲೇ ನಡೆಯುತ್ತದೆ. ಸೈನ್ಯಕ್ಕೆ ಸಹಾಯ ಮಾಡಿದ ವ್ಯಕ್ತಿ ಪ್ರಧಾನ ಮಂತ್ರಿಯಾಗಿ ಮೆರೆಯುತ್ತಾನೆ.

ನಮ್ಮ ಪ್ರಧಾನ ಮಂತ್ರಿಯೊಬ್ಬನ ಸಾಮರ್ಥ್ಯವನ್ನು ಆತ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ತಾಳೆ ಹಾಕಿದರೆ, ಪಾಕಿಸ್ತಾನದಲ್ಲಿ ಮಾತ್ರ ಆತನ ಆಡಳಿತಾವಧಿಯಲ್ಲಿ ಕುತಂತ್ರದಿಂದ ಭಾರತದಲ್ಲಿ ಎಷ್ಟು ಭಯೋತ್ಪಾದನೆಯನ್ನು ನಡೆಸಿದ್ದಾನೆ, ಎಷ್ಟು ಜನ ಆತ್ಮಾಹುತಿ ಬಾಂಬರ್‌ಗಳನ್ನು ತಯಾರು ಮಾಡಿ ಹೇಡಿಗಳಂತೆ ಬಾಂಬ್ ಬ್ಲಾಸ್‌ಟ್ ಮಾಡಿದ್ದಾನೆ, ಎಷ್ಟು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿಸಿದ್ದಾನೆ ಎಂದೇ ಅಳೆದು ತೂಗಿ ಆತನಿಗೆ ವೋಟು ಹಾಕಿಸುತ್ತಾರೆ. ಇಂತಹ ದರಿದ್ರ ದೇಶ ನಮ್ಮ ಸೈನಿಕರಿಗೆ ಸವಾಲು ಹಾಕಿ ಯುದ್ಧ ಮಾಡುವ ಯಾವನೋ ಒಬ್ಬ ಸೂಸೈಡ್ ಬಾಂಬರನನ್ನು ಕಳುಹಿಸಿ ಹೇಡಿಗಳಂತೆ ನಮ್ಮ ಸೈನಿಕರನ್ನು ಕೊಂದರು. ಅದು ಯಾವನೋ ಪುಣ್ಯಾತ್ಮ ಆತ್ಮಾಹುತಿ ಮಾಡಿಕೊಂಡರೆ, ಸತ್ತ ಮೇಲೆ ಸ್ವರ್ಗದಲ್ಲಿ ವರ್ಜಿನ್ ಯುವತಿಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಬಹುದೆಂದು ಹೇಳಿದ್ದಾನಂತೆ. ‘ಮದುವೆ ಗಂಡಿಗೆ ಅದೇ ಇಲ್ಲ’ ಎಂಬಂತೆ ಈತನ ದೇಹವೇ ಛಿದ್ರವಾದ ಮೇಲೆ, ಮೇಲೆ ಹೋಗಿ ಏನು ಮಾಡುತ್ತಾನೆ? ದಯವಿಟ್ಟು ಈಗಲಾದರೂ ಮುಸ್ಲಿಂ ನಾಯಕರು ಮುಂದೆ ಬಂದು ನಮ್ಮ ಇಸ್ಲಾಂನಲ್ಲಿ ಈ ರೀತಿಯ ಯಾವುದೇ ಹೇಳಿಕೆಯನ್ನು ಎಲ್ಲಿಯೂ ಸಮಾಜದ ಮುಂದೆ ಹೇಳಬೇಕು. ಈ ಬುದ್ಧಿಜೀವಿಗಳು ಅಂತಾ ಇದ್ದಾರಲ್ಲ, ಅವರ ತಲೆಯಲ್ಲಿ ಬುದ್ಧಿ ಏನಾದರೂ ಇದ್ದರೆ ಅವರಾದರೂ ಬಂದು ಈ ಮಾತನ್ನು ಹೇಳಬೇಕು.

ನಮ್ಮ ನೆರೆ ದೇಶ, ಕೇವಲ ಮಿಲಿಟರಿಯಲ್ಲಲ್ಲ ಆರ್ಥಿಕತೆಯಲ್ಲಿಯೂ ದರಿದ್ರವಾಗಿಯೇ ಇದೆ. ಜಗತ್ತಿನ 23ನೇ ದೊಡ್ಡ ಆರ್ಥಿಕ ವ್ಯವಸ್ಥೆಯಿರುವ ರಾಷ್ಟ್ರವಿದು. ಭಾರತವಾದರೋ 6ನೇ ಸ್ಥಾನದಲ್ಲಿದೆ. ಇಂತಹ ದೇಶವು ತನ್ನನ್ನು ತಾನು ಹೇಗೆ ತಾನೆ ಭಾರತದ ಜತೆಗೆ ಹೋಲಿಸಿಕೊಳ್ಳುತ್ತದೆಯೋ ಆ ದೇವರೇ ಬಲ್ಲ. ಪಾಕಿಸ್ತಾನದ ಜಿಡಿಪಿಯು 309 ಅಮೆರಿಕನ್ ಡಾಲರ್ ಆದರೆ ಭಾರತದ ಜಿಡಿಪಿ 3000 ಶತಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಭಾರತದ ಜಿಡಿಪಿಯ ಶೇ 10% ರಷ್ಟಿರುವ ಈ ಭಿಕ್ಷುಕ ದೇಶವು ತನ್ನ ಸೇನಾ ಬಲದ ಪ್ರದರ್ಶನವನ್ನು ನಮ್ಮ ದೇಶದ ಮೇಲೆ ಮಾಡುತ್ತದೆ. ತಾನು ತೆರಿಗೆಯಿಂದ ಬಂದ ಹಣವನ್ನೆಲ್ಲ ಅತಿ ಹೆಚ್ಚಾಗಿ ಸೇನಾ ಬಲಪಡಿಸಲು ಮಾತ್ರವೇ ಉಪಯೋಗಿಸುತ್ತ ತನ್ನ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ.
ಭಾರತ ಹಾಗೂ ಪಾಕಿಸ್ತಾನ ಎರಡೂ ಸಹ 1947ರಲ್ಲಿಯೇ ಸ್ವತಂತ್ರವಾದರೂ ಸಹ ನಾವು ರೀತಿ ಹಾಗೂ ಅವರು ಬೆಳೆದ ರೀತಿಯನೊಮ್ಮೆ ತಾಳೆ ಹಾಕಿ ನೋಡಿದರೆ ನಾವೆಲ್ಲಿ, ಅವರೆಲ್ಲಿ ಎನಿಸದಿರದು. ಸದಾ ಬೇರೆಯವರ ವಿನಾಶ ಬಯಸುವ ಈ ದೇಶವು ಹೇಗೆ ತಾನೆ ಉದ್ಧಾರವಾಗಲು ಸಾಧ್ಯ? ತೆರಿಗೆ ಸಂಗ್ರಹ ಒಟ್ಟಾರೆ ವರ್ಷವೊಂದಕ್ಕೆ 2ಲಕ್ಷ ಕೋಟಿ ರು.ಯಷ್ಟು ಸಂಗ್ರಹವಾಗುತ್ತದೆಯಾದರೆ ಭಾರತದ ತೆರಿಗೆ ಸಂಗ್ರಹ 12ಲಕ್ಷ ಕೋಟಿ ರು.ಯನ್ನು ಈಗಾಗಲೇ ದಾಟಿದೆ. ಕೆಲವರು ಭಾರತದ ಜನಸಂಖ್ಯೆಯನ್ನು ಪಾಕಿಸ್ತಾನದ ಜನಸಂಖ್ಯೆಗೆ ತಾಳೆ ಮಾಡಿ ನೋಡಿ ಈ ರೀತಿಯಾಗಿ ತುಲನೆ ಮಾಡಲು ಎನ್ನುತ್ತಾರೆ. ಆದರೂ ಅವರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಜನಸಂಖ್ಯೆ ಕಡಿಮೆ ಇರುವ ಪ್ರಪಂಚದ ಬಹುತೇಕ ದೇಶಗಳ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಜನಸಂಖ್ಯೆ ಕಡಿಮೆ ಇದ್ದಷ್ಟೂ ಖರ್ಚು ಕಡಿಮೆ, ಅಭಿವೃದ್ಧಿಯೂ ಚೆನ್ನಾಗಿಯೇ ಆಗಬೇಕು. ಆದರೆ ಪಾಕಿಸ್ತಾನಕ್ಕೆ ಇದು ಅನ್ವಯಿಸುವುದಿಲ್ಲ. ಈ ದೇಶದ ವಿತ್ತೀಯ ಕೊರತೆಯಂತೂ ಕಳೆದ 5ವರ್ಷಗಳಿಂದ ಏರುತ್ತಲೇ ಇದೆ. ಇದಕ್ಕಾಗಿಯೇ ಅಮೆರಿಕ, ಚೀನಾ ದೇಶಗಳಿಂದ ಪ್ರತಿ ದಿನವೂ ಭಿಕ್ಷೆ ಬೇಡಿಕೊಂಡೇ ಬದುಕ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದೆ. ಕೇವಲ 20 ಸಾವಿರ ಕೋಟಿ ರು.ಯಷ್ಟು ಹಣವನ್ನು ಹೊಂದಿಸಲಾಗದೇ ನೆರೆಯ ಚೀನಾದಿಂದ ಸಾಲ ಪಡೆದಿದೆ.

ಇನ್ನು ಚೀನಾ ದೇಶವಂತೂ ಈ ಪಾಕಿಸ್ತಾನದ ಮೇಲೆ ಅದ್ಯಾವ ರೀತಿಯ ಪ್ರೀತಿ ತೋರುತ್ತಿದೆಯೆಂದರೆ ಶತ್ರುವಿನ ಶತ್ರು ಮಿತ್ರನೆಂಬಂತೆ ಭಾರತವನ್ನು ಸದೆ ಬಡೆಯಬೇಕೆಂಬ ಕೈಲಾಗದ ದೂರ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ. ಇತಿಹಾಸವೇ ಹೇಳುವಂತೆ ಯಾವ ದೇಶ ಪಾಕಿಸ್ತಾನದ ಜತೆ ಹೋಗುತ್ತದೆಯೋ ಅದೇ ದೇಶದ ಬೆನ್ನಿಗೆ ಚೂರಿಯನ್ನು ಪಾಕಿಸ್ತಾನ ಹಾಕಿದೆ. ಇದಕ್ಕೆ ಉತ್ತಮವಾದ ಉದಾಹರಣೆಯೆಂದರೆ ಅಮೆರಿಕ. ಸಹಾಯ ಮಾಡಿದ್ದೋ ಮಾಡಿದ್ದು. ಕೊನೆಗೆ ಅದೇ ರಾಷ್ಟ್ರದ ಮೇಲೆ ಭಯೋತ್ಪಾದನೆ ದಾಳಿ ಮಾಡಿದ ಬಿನ್ ಲಾಡೆನ್ ಅನ್ನು ತನ್ನಲ್ಲಿಯೇ ಇಟ್ಟುಕೊಂಡು ಪೋಷಿಸಿತ್ತು ಪಾಕಿಸ್ತಾನ. ಈಗ ಅಮೆರಿಕ ದೇಶಕ್ಕೆ ಇದೆಲ್ಲವೂ ಸಹ ಅರ್ಥವಾಗಿ ಚಪ್ಪಲಿ ಬಿಡುವಲ್ಲಿ ಪಾಕಿಸ್ತಾನವನ್ನು ಬಿಟ್ಟಿದೆ. ಇದೇ ಗತಿ ಅತಿ ಶೀಘ್ರದಲ್ಲಿಯೇ ಚೀನೀಯರಿಗೆ ಬರುವುದರಲ್ಲಿ ಯಾವುದೇ ಸಂಶಯ ಬೇಡ.

ಇಂತಹ ಗುಳ್ಳೆನರಿ ರಾಷ್ಟ್ರವನ್ನು ಬೆಂಬಲಿಸಿ ಚೀನಾ ಒಂದು ದೊಡ್ಡ ಆರ್ಥಿಕತೆಯ ಕಾರಿಡಾರ್‌ನನ್ನೇ ನಿರ್ಮಾಣ ಮಾಡಿದೆ. ಲಕ್ಷಾಂತರ ಕೋಟಿ ಹೂಡಿಕೆ ಮಾಡಿರುವ ಚೀನಾವನ್ನು ಈ ಯೋಜನೆಯಲ್ಲಿ ಬಹುಶಃ ನೆಲಕಚ್ಚಿಸುವ ತನಕ ಪಾಕಿಸ್ತಾನ ಬಿಡುವುದಿಲ್ಲ. ತನ್ನ ಒಡಲಲ್ಲಿ ಸದಾ ಅಸ್ಥಿರತೆಯನ್ನು ಇಟ್ಟುಕೊಂಡು ಕಂಡೋರ ಕಡೆಗೆ ಬೆರಳು ತೋರಿಸುವ ರಾಷ್ಟ್ರವಿದು. ಪಾಕಿಸ್ತಾನ ರಾಜಕೀಯವಂತೂ ಸದಾ ಅಸ್ಥಿರತೆಯಿಂದಲೇ ಕೂಡಿರುತ್ತದೆ. ಮಿಲಿಟರಿ ಕ್ರಾಂತಿಯನ್ನು ಮಾಡಿದ ಪರ್ವೇಜ್ ಮುಷರ್ರಫ್ ಸರ್ವಾಧಿಕಾರಿಯಂತೆ ಮೆರೆದ. ಕೊನೆಗೂ ಹೇಳತೀರದ ಹಾಗೆ ದೇಶ ಬಿಟ್ಟುಹೋಗಿ ಎಲ್ಲಿಯೋ ಕುಳಿತ. ಇನ್ನು ಬೆನಜೀರ್ ಭುಟ್ಟೋ ತರಹದ ಪ್ರಧಾನ ಮಂತ್ರಿಯನ್ನು, ಹೆಣ್ಣು ಮಕ್ಕಳು ಬುರ್ಖಾ ಧರಿಸಿಯೇ ಬರಬೇಕೆಂಬ ನಿಯಮವಿರುವ ರಾಷ್ಟ್ರ ಹೇಗೆ ತಾನೇ ಆಡಳಿತ ನಡೆಸಲು ಬಿಟ್ಟೀತು? ಹೆಂಡತಿಯನ್ನು ಜೀತದ ಆಳುಗಳಿಗಿಂತಲೂ ಹೀನಾಯವಾಗಿ ಕಾಣುವ ರಾಷ್ಟ್ರದಲ್ಲಿ, ಹೆಣ್ಣೋಬ್ಬಳು ಪ್ರಧಾನ ಮಂತ್ರಿಯಾದರೆ, ಕೊಲ್ಲದೆಯೇ ಬಿಟ್ಟಾರೆಯೇ? ತೀರಾ ಇತ್ತೀಚೆಗೆ ನವಾಜ್ ಶರೀಫ್‌ನನ್ನೂ ಕೂಡ ಯಾವುದೇ ವಿವಾದದಲ್ಲಿ ಸಿಲುಕಿಸಿ ಎಲ್ಲೋ ಹೊರದೇಶದಲ್ಲಿ ಕುಳಿತು ಆಡಳಿತ ನಡೆಸಿವಂತಹ ಪರಿಸ್ಥಿತಿಗೆ ತಂದಂತಹ ಕೀರ್ತಿ ಈ ಪಾಕಿಸ್ತಾನದ್ದು.

ಸುಮ್ಮನೇ ಕ್ರಿಕೆಟ್ ಆಡಿಕೊಂಡಿದ್ದ ಇಮ್ರಾನ್ ಖಾನ್ ಈಗ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈತನೂ ಅಷ್ಟೇ, ಸೈನ್ಯದ ಸಹಾಯದಿಂದಲೇ ಗೆದ್ದು ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವುದು. ಅಲ್ಲಿನ ಪ್ರಧಾನ ಮಂತ್ರಿ ಅಭ್ಯರ್ಥಿಯಾದವರು ಭಾರತವನ್ನು ಚೆನ್ನಾಗಿ ತಮ್ಮ ಭಾಷಣಗಳಲ್ಲಿ ಬೈದರೆ ಆಯಿತು, ವೋಟು ಗ್ಯಾರಂಟಿ. ಸೇನೆಯ ಸಹಾಯವೂ ಗ್ಯಾರಂಟಿ. ಇಮ್ರಾನ್ ಖಾನ್ ಕೂಡ ಇದೇ ಕೆಲಸವನ್ನು ಮಾಡಿ ಪ್ರಧಾನ ಮಂತ್ರಿಯಾಗಿದ್ದಾರೆ.
ಭಾರತದೊಂದಿಗೆ ಉತ್ತಮವಾದ ಭಾಂದವ್ಯವನ್ನು ಬಯಸುತ್ತೇವೆಂದು ಸುಳ್ಳು ಹೇಳಿದ್ದು ಇಮ್ರಾನ್ ಖಾನ್ ಮಾಡಿದ್ದು ಮಾತ್ರ ಈ ಹಿಂದಿನ ಪ್ರಧಾನ ಮಂತ್ರಿಗಳು ಮಾಡಿದ ಕೆಲಸವನ್ನೇ. ನವಜೋತ್ ಸಿಂಗ್ ಸಿದ್ದುವಿಗೆ ಈತನು ಆಡುವ ಸಮಯದಲ್ಲಿ ತುಂಬಾ ಪರಿಚಿತ. ಕ್ರಿಕೆಟ್‌ನಲ್ಲಿಯೇ ಭಾರತ ಹಾಗೂ ಪಾಕಿಸ್ತಾನವೆಂದರೆ ಎಂತಹ ಜಿದ್ದಿರುತ್ತದೆ, ಇದೇ ಸಿದ್ದು ಈ ಹಿಂದೆ ಆಡಿದ ಮ್ಯಾಚ್‌ಗಳು ಇದೇ ಜಿದ್ದಿನಿಂದಲೇ. ಆದರೆ ಮ್ಯಾಚ್‌ನಲ್ಲಿ ಜಿದ್ದಿಟ್ಟುಕೊಂಡಿದ್ದ ಸಿದ್ದುವಿಗೆ ಅದ್ಯಾಕೋ ಏನೋ ಆಡಳಿತದಲ್ಲಿ ಇಮ್ರಾನ್ ಖಾನ್‌ನೊಂದಿಗೆ ಜಿದ್ದು ಕಂಡು ಬರುತ್ತಿಲ್ಲ.

ಅದರಲ್ಲಿಯೂ ಒಂದು ಕ್ರಿಕೆಟ್ ತಂಡಕ್ಕೆ ಭದ್ರತೆಯನ್ನು ಕೊಡಲು ಸಾಧ್ಯವಾಗದ ರಾಷ್ಟ್ರ ಈ ಪಾಕಿಸ್ತಾನ, ಶ್ರೀಲಂಕಾ ತಂಡವು ಕ್ರಿಕೆಟ್ ಆಡುತ್ತಿದ್ದಾಗಲೇ ಕ್ರೀಡಾಂಗಣದ ಹೊರಗಡೆ ಉಗ್ರರು ತಮ್ಮ ದಾಳಿಯನ್ನು ಮಾಡಿದ್ದರು. ಶ್ರೀಲಂಕಾದ ಆಟಗಾರರನ್ನು ನೇರವಾಗಿ ಕ್ರೀಡಾಂಗಣದ ಒಳಗಿನಿಂದಲೇ, ತೊಟ್ಟ ಜರ್ಸಿಯಲ್ಲಿಯೇ ಏರ್‌ಲಿಫ್ಟ್ ಮಾಡಲಾಯಿತು. ಇಂತಹ ಲಜ್ಜೆಗೆಟ್ಟ ದೇಶ ಮುಂಬಯಿ ದಾಳಿ ಬಗ್ಗೆ ಇನ್ನು ಪುರಾವೆಯನ್ನು ಕೇಳುತ್ತಲೇ ಇದೆ.

ಈ ಪಾಕಿಸ್ತಾನ ಎಂತಹ ದೇಶವೆಂದರೆ ಉಗ್ರ ಒಸಾಮಾ ಬಿನ್ ಲಾಡೆನ್‌ಗೆ ಬಿಗಿ ಭದ್ರತೆ ನೀಡುತ್ತದೆ. ದಾವೂದ್ ಇಬ್ರಾಹಿಂಗೆ ಭದ್ರತೆಯನ್ನು ನೀಡುತ್ತದೆ. ಆದರೆ ತನ್ನದೇ ಪ್ರಧಾನಿ ಬೆನಜೀರ್‌ಗೆ ಭದ್ರತೆ ನೀಡಲಿಲ್ಲ. ತನ್ನಲ್ಲಿ ಮಾತ್ರವಲ್ಲದೆ ಯುರೋಪಿನಂತಹ ಸುಂದರವಾದ, ಮುಂದುವರಿದ ರಾಷ್ಟ್ರಗಳಾದ ಫ್ರಾನ್ಸ್ , ಸ್ಪೇನ್, ಲಂಡನ್‌ಗಳಲ್ಲಿಯೂ ತನ್ನ ಉಗ್ರರನ್ನು ಹರಡಿದೆ. ಕೇವಲ ಮುಂದಿನ 10 ವರ್ಷಗಳಲ್ಲಿ ಈ ರಾಷ್ಟ್ರಗಳನ್ನು ಸಹ ಪಾಕಿಸ್ತಾನ ಅಥವಾ ಅಫಘಾನಿಸ್ತಾನ ಮಾದರಿಯಲ್ಲಿ ಹಾಳುಮಾಡಿ ಧ್ವಂಸ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಈ ದೇಶಗಳಲ್ಲಿ 10ರಲ್ಲಿ ಮೂರು ಜನ ಪಾಕಿಸ್ತಾನಿಗಳನ್ನು ಕಾಣಬಹುದು.

ಯೂರೋಪಿನವರೋ ನಾವೆಲ್ಲರೂ ಒಂದೇ ಎಂದು ಸಿಕ್ಕ ಸಿಕ್ಕವರನ್ನೆಲ್ಲಾ ಒಳಗೆ ಬಿಟ್ಟುಕೊಂಡರು. ಈಗ ಅದೇ ಅವರಿಗೆ ತಲೆನೋವಾಗಿ ಪರಿಣಿಮಿಸಿದೆ. ಫ್ರಾನ್ಸ್ ದೇಶದಲ್ಲಂತೂ ಒಂದಲ್ಲಾ ಒಂದು ಉಗ್ರ ಕೃತ್ಯಗಳು ಯಾವಾಗಲೂ ಇರುತ್ತದೆ. ಇಟಲಿಯ ರೋಮ್‌ ನಗರದಲ್ಲಿಂತೂ ಪ್ರವಾಸೋಧ್ಯಯಮದ ಜಾಗಗಳಲ್ಲಿ ವಾಟರ್ ಬಾಟಲ್ ಮಾರುವವರು, ಟೊಪ್ಪಿಗಳನ್ನು ಮಾರುವವರು, ತಿಂಡಿಗಳನ್ನು ಮಾರುವವರು ಎಲ್ಲರೂ ಈ ಪಾಕಿಸ್ತಾನಿಗಳು ಅಥವಾ ಬಾಂಗ್ಲಾದೇಶಿಗಳು. ಈ ರೀತಿಯ ಕೆಲಸಗಳನ್ನು ಮಾಡುವವರು ಈ ದೇಶದಲ್ಲಿ ಸಿಗುವುದಿಲ್ಲವೆಂದು ಹೊರಗಿನಿಂದ ಕರೆಸಿದರು. ಈಗ ನೋಡಿದರೆ ಅವರುಗಳೇ ಇಂದು ದೇಶದ ಭದ್ರತೆಗೆ ಮುಳ್ಳಾಗಿದ್ದಾರೆ.

ಇಂತಹವರ ಜತೆ ಯುದ್ಧ ಮಾಡಿ ಪ್ರಯೋಜನವಿಲ್ಲ, ಗೆಲುವು ನಮ್ಮದೇ ಅಂತ ಅವರಿಗೂ ತಿಳಿದಿದೆ. ಆದರೂ ಏನೋ ಒಂದು ಭಂಡ ನಡೆ. ಇವರನ್ನು ಎಲ್ಲಾ ಕಡೆಯಿಂದಲೂ ರಾಜತಾಂತ್ರಿಕವಾಗಿ ಮೊದಲು ಪ್ರತ್ಯೇಕಿಸಬೇಕಿದೆ. ಇದು ತುಂಬಾ ಅಪಾಯದ ರಾಷ್ಟ್ರವೆಂದು ಬಿಂಬಿಸಬೇಕು, ತನ್ನಲ್ಲಿ ಏನೂ ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುವ ಪಾಕಿಸ್ತಾನವು ಪ್ರತಿಯೊಂದು ಅಗತ್ಯ ವಸ್ತುಗಳಿಗೂ ಇತರೆ ರಾಷ್ಟ್ರಗಳನ್ನು ಅವಲಂಭಿಸಿದೆ. 1960ರ ‘ಸಿಂಧೂ ನದೀಕೊಳ್ಳದ ನೀರು ಹಂಚಿಕೆಯ ಒಪ್ಪಂದ’ವನ್ನು ರದ್ದು ಮಾಡಿದರೆ ಇವರ ಕಥೆ ಮುಗಿಯಿತು. ಈಗಾಗಲೇ ತಿನ್ನಲು ಅನ್ನವಿಲ್ಲ, ಇನ್ನು ನೀರನ್ನು ಸಹ ನಿಲ್ಲಿಸಿದರೆ ಬೀದಿಗೆ ಬಂದು ಬೀಳುತ್ತಾರೆ. ಈಗಾಗಲೇ ಟೊಮ್ಯಾಟೋ ರಫ್ತ್ತನ್ನು ರದ್ದುಗೊಳಿಸಿರುವ ಭಾರತದ ಕ್ರಮದಿಂದಾಗಿ ಪಾಕಿಸ್ತಾನದಲ್ಲಿ ಕೆಜಿ ಟೊಮ್ಯಾಟೋ ಬೆಲೆ 200 ರು. ದಾಟಿದೆ. ನೋಟ್ಯಂತರವಾದ ಮೇಲಂತೂ ಅಲ್ಲಿಂದ ಬರುತ್ತಿದ್ದ ಖೋಟಾ ನೋಟುಗಳು ಸಂಪೂರ್ಣ ಬಂದ್ ಆಗಿವೆ. ಅವರಿಗೆ ಈಗ ಕಲ್ಲು ಹೊಡೆಯುವವರಿಗೆ ಕೊಡಲು ಬೇಕಾದ ಹಣ ನೀಡಲು ಹಳೆಯ ನೋಟುಗಳೇ ಇಲ್ಲದಂತಾಗಿದೆ.

ಕಾಶ್ಮೀರದಲ್ಲಿಯೂ ಪ್ರತಿದಿನ ಏನಾದರೊಂದು ಘಟನೆಯನ್ನು ಮಾಡಿಯೇ ತೀರುವ ರಾಷ್ಟ್ರ ಪಾಕಿಸ್ತಾನ. ಭಾರತದ ಜತೆಗೇ ಇದ್ದ ದೊಡ್ಡ ಭೂಮಂಡಲವನ್ನು 1947ರಲ್ಲಿಯೇ ನೀಡಿ ಮುಸ್ಲಿಂ ರಾಷ್ಟ್ರ ಸ್ಥಾಪನೆ ಮಾಡಿಕೊಂಡರೂ ಇವರ ಭೂಮಿಯ ದಾಹವು ಇನ್ನೂ ಕಾಶ್ಮೀರದ ಜನರಿಗೋ ಬಿಕ್ಷೆ ಬೇಡಿ ಬದುಕುತ್ತಿರುವ ಪಾಕಿಸ್ತಾನವೇ ಬೇಕು. ಹಲವಾರು ಸವಲತ್ತುಗಳನ್ನು ಇವರಿಗೆ ನೀಡಿದರೂ ಸಹ, ಇಲ್ಲಿನ ಹಲವು ಜನರಿಗೆ ಪಾಕಿಸ್ತಾನವೇ ಬೇಕು. ಸಂವಿಧಾನದ 370ನೇ ಕಾಲಂನ ಅನ್ವಯ, ಇಡೀ ಜಮ್ಮು ಮತ್ತು ಕಾಶ್ಮೀರವನ್ನು ವಿಶೇಷ ರಾಜ್ಯವೆಂದು ಘೋಷಿಸಿ, ಯಾರೂ ಸಹ ಹೊರಗಿನವರು ಅಲ್ಲಿಗೆ ಬರದಂತೆ ಮಾಡಿ, ವಿಶೇಷ ಸವಲತ್ತುಗಳನ್ನು ಅಲ್ಲಿನ ಜನರಿಗೆ ನೀಡಿದರೂ ಸಹ ಹಲವರಿಗೆ ಆ ಕಡೆಯೇ ಸೆಳೆತ.

ಒಂದು ಶಾಲೆಯ ಸೀಟನ್ನೂ ಸಹ ಹೊರ ಜಮ್ಮು ಮತ್ತು ಕಾಶ್ಮೀರದಲ್ಲಿ ತೆಗೆದುಕೊಳ್ಳಲೂ ಸಾಧ್ಯವಿಲ್ಲ. ಹೊರ ರಾಜ್ಯದವರು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸೈಟು ತೆಗೆದುಕೊಳ್ಳುವ ಹಕ್ಕೂ ಇಲ್ಲ. ಕೇಂದ್ರ ಸರಕಾರವು ಈ ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತಿಲ್ಲ, ಹಲವು ತೆರಿಗೆಗಳು ಈ ರಾಜ್ಯದಲ್ಲಿ ಇಲ್ಲವೇ ಇಲ್ಲ . ನಾಯಿಯನ್ನು ಕರೆದಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ಅದು ತನ್ನ ಕೆಲಸವನ್ನು ಬಿಡುತ್ತದೆಯೇ? ಅದೇ ರೀತಿ ಇವರುಗಳಿಗೆ ಏನೇ ಮಾಡಿದರೂ ಸಹ ಪ್ರಯೋಜನವಿಲ್ಲ. ಮೊದಲು ಸಂವಿಧಾನದ ಕಾಲಂ ಅನ್ನು ಬ್ಯಾನ್ ಮಾಡಬೇಕು. ಹೊರಗಿನಿಂದ ಉಗ್ರರನ್ನು ಈ ಹಿಂದಿನಂತೆ ಕಾಶ್ಮೀರದ ಒಳಗೆ ಕಳುಹಿಸಲು, ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲದ ಕಾರಣ, ಸ್ಥಳೀಯ ಯುವಕರನ್ನು ಬಳಸಿಕೊಂಡು ಅವರ ತಲೆ ಕೆಡಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸಲಾಗುತ್ತಿದೆ.

ಹಲವಾರು ಮೂಲಭೂತ ಸಮಸ್ಯೆಗಳು, ಪಾಕಿಸ್ತಾನ ದೇಶವನ್ನು ಕಿತ್ತು ತಿನ್ನುತ್ತಿವೆ. ಆದರೆ ಅದ್ಯಾವುದರ ಬಗ್ಗೆಯೂ ಸ್ಪಲ್ಪವೂ ತಲೆಕೆಡಿಸಿಕೊಳ್ಳದ ದೇಶ, ಇಂದು ಕಾಲು ಕೆದರಿಕೊಂಡು ಭಾರತವನ್ನು ಯುದ್ಧಕ್ಕೆ ಆಹ್ವಾನಿಸುತ್ತಿದೆ. ನಮ್ಮಲ್ಲಿನ ಅಗ್ನಿ ಕ್ಷಿಪಣಿಗೆ 6000 ಕಿಮೀ ನಷ್ಟು ದೂರ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದೆ. ಇದರ ಅರ್ಧದಷ್ಟು ಸಾಮರ್ಥ್ಯವಿರುವ ಕ್ಷಿಪಣಿಯನ್ನು ಹೊಂದಿರುವ ಪಾಕಿಸ್ತಾನವು ನಮ್ಮ ಮೇಲೆ ಯುದ್ಧ ಮಾಡುತ್ತೇವೆಂದು ಸವಾಲು ಹಾಕಿದೆ. ಸೇನಾ ವಿಭಾಗದಲ್ಲಿ ಯಾವ ರೀತಿಯಲ್ಲಿ ನೋಡಿದರೂ ಭಾರತದ ಸನಿಹ ಬರಲ್ಲೂ ಪಾಕ್‌ಗೆ ಸಾಧ್ಯವೇ ಇಲ್ಲ. ಈಗಾಗಲೇ 3 ಬಾರಿ ಸೋತರೂ ಅವರಿಗೆ ಬುದ್ಧಿ ಬಂದಿಲ್ಲ, ಬರುವುದೂ ಇಲ್ಲ. ಚೀನಾ ದೇಶ ತಾನು ಬಳಸಿ ಗುಜರಿಗೆ ಹಾಕುವ ಸೇನಾ ಅಸ್ತ್ರಗಳನ್ನು ಪಾಕಿಸ್ತಾನಕ್ಕೆ ನೀಡುತ್ತದೆ. ತನ್ನ ದೇಶದ ಬಜೆಟ್‌ನಲ್ಲಿ ಅಲ್ಲಿನ ರಾಷ್ಟ್ರದ ಒಂದು ಚಿಟಿಕೆ ಉಪ್ಪಿನಷ್ಟು ಹಣವನ್ನು ಮೀಸಲಿಟ್ಟು ಉಳಿದೆಲ್ಲವನ್ನು ಸೇನಾ ಸಾಮರ್ಥ್ಯ ವೃದ್ಧಿಪಡಿಸಲು ಬಳಸುತ್ತ್ತದೆ. ಇದರಿಂದ ತನಗೆ ಯಾವ ರೀತಿಯ ಉಪಯೋಗವಿಲ್ಲವೆಂದು ತಿಳಿದಿದ್ದರೂ ಸಹ ತನ್ನ ಚಾಳಿ ಬಿಡುವುದಿಲ್ಲ.
ಅದಕ್ಕೇ ಹೇಳಿದ್ದು, ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಇವರಿಗೆ ಜುಟ್ಟಿಗೆ ಮಾತ್ರ ಮಲ್ಲಿಗೆ ಹೂವು ಬೇಕು!

Tags

Related Articles

Leave a Reply

Your email address will not be published. Required fields are marked *

Language
Close