About Us Advertise with us Be a Reporter E-Paper

ಗುರು

ಪಾಲಿಗೆ ಬಂದದ್ದು ಪಂಚಾಮೃತ

*ಗೌರಿ ಚಂದ್ರಕೇಸರಿ, ಶಿವಮೊಗ್ಗ

ತನ್ನ ಇಡೀ ಜೀವನವನ್ನು ಅತೃಪ್ತಿಯಲ್ಲೇ ಕಳೆಯುವ ಪ್ರಾಣಿಯೆಂದರೆ ಅದು ಮನುಷ್ಯ. ಅಷ್ಠೈಶ್ವರ್ಯಗಳಿದ್ದರೂ ಶ್ರೀಮಂತನಿಗೆ ಇನ್ನೂ ಕೂಡಿಡಬೇಕೆಂಬಾಸೆ. ಅಷ್ಟಾಂಗಗಳೆಲ್ಲವೂ ಸರಿಯಾಗಿದ್ದರೂ ತಾನು ಸುಂದರವಾಗಿಲ್ಲವೆಂಬ ಕೊರಗು. ಕಪ್ಪಗಿದ್ದವರು ಗೌರ ವರ್ಣಕ್ಕಾಗಿ ಹಂಬಲಿಸುವುದು, ಮೋಟು ಜಡೆ ಇದ್ದಲ್ಲಿ ಉದ್ದ ಕೂದಲಿಗಾಗಿ ನಾನಾ ಕಸರತ್ತುಗಳನ್ನು ಮಾಡುವುದು, ದಪ್ಪಗಿದ್ದಲ್ಲಿ ತೆಳ್ಳಗಾಗಬೇಕೆಂಬ ಹಂಬಲ. ನೀಳಕಾಯದವರಾಗಿದ್ದಲ್ಲಿ ಗುಂಡು ಗುಂಡಾಗಿರಬೇಕೆಂಬ ಆಸೆ. ಇರುವುದೆಲ್ಲವನ್ನು ಬಿಟ್ಟು ಇರದಿದ್ದುರೆಡೆಗೆ ತುಡಿಯುವ ಮನ. ಇರುವ ಸುಖವೆಲ್ಲವನ್ನು ಬಿಟ್ಟು ಇರಲಾರದ್ದಕ್ಕೆ ಕೊರಗುತ್ತೇವೆ.

ಅದೇ ಶುಭ್ರ ಶ್ವೇತ ವರ್ಣದ ಬಾತುಕೋಳಿಯೊಂದನ್ನು ಕಂಡ ಕಾಗೆಯು ‘ಅಬ್ಬಾ ನಾನೂ ಆ ಬಾತಿನಂತೆ ಬಿಳಿ ಬಣ್ಣದವನಾಗಿದ್ದರೆ ಎಷ್ಟೊಂದು ಚೆನ್ನಾಗಿತ್ತು?’ ಎಂದು ಯೋಚಿಸಿ ಕೊರಗುತ್ತದೆ. ಆದರೆ ಆ ಬಾತುಕೋಳಿಗೋ ತನ್ನ ಬಿಳಿ ಬಣ್ಣದ ಬಗ್ಗೆ ಅಸಮಧಾನ. ಟೊಂಗೆಯೊಂದರಲ್ಲಿ ಕುಳಿತ ಬಣ್ಣ ಬಣ್ಣದ ಗಿಳಿಯೊಂದನ್ನು ಕಂಡು ತಾನು ಆ ಗಿಳಿಯಂತೆ ಬಣ್ಣಮಯವಾಗಿದ್ದರೆ ಎಲ್ಲರೂ ನನ್ನನ್ನೇ ಹೊಗಳುತ್ತಿದ್ದರು ಎಂದು ಕೊಳ್ಳುತ್ತದೆ. ಆದರೆ ಸುಂದರ ಗರಿಯನ್ನು ಹರಡಿಕೊಂಡು ನಿಂತ ನವಿಲನ್ನು ಕಂಡ ಗಿಳಿ ‘ನನಗೂ ಕಣ್ಣುಗಳನ್ನು ಹೊಂದಿದ ಗರಿಗಳಿದ್ದಿದ್ದರೆ’ ಎಂದು ಕನಸು ಕಾಣುತ್ತಿತ್ತು. ಆದರೆ ಪಂಜರದಲ್ಲಿ ಬಂಧಿಯಾಗಿದ್ದ ಆ ನವಿಲು ಟೊಂಗೆಯ ಮೇಲೆ ಕುಳಿತ ಕಾಗೆಯನ್ನು ಕಂಡು ‘ನಾನೂ ಆ ಕಾಗೆಯಂತೆ ಕಪ್ಪಗಿದ್ದಿದ್ದರೆ ನನ್ನನ್ನು ಯಾರೂ ಕೂಡಿ ಹಾಕುತ್ತಿರಲಿಲ್ಲ’ ತನ್ನ ಚೆಲುವಿಕೆಯೇ ತನ್ನ ಸ್ವಾತಂತ್ರಕ್ಕೆ ಮುಳುವಾಯಿತಲ್ಲ’ ಎಂದು ಹಳಹಳಿಸುತ್ತಿತ್ತು.

ಹೀಗೆ ದೇವರು ನಮಗೆ ಏನೆಲ್ಲವನ್ನು ಕೊಟ್ಟಿದ್ದರೂ ಸದಾ ನಮ್ಮಲ್ಲಿ ಒಂದು ಕೊರಗು ಇದ್ದೇ ಇರುತ್ತದೆ. ನನ್ನ ಕಾಲಿಗೆ ಹೊಸ ಚಪ್ಪಲಿ ಇಲ್ಲವಲ್ಲ ಎಂದು ದು:ಖ ನಾವು ಎರಡೂ ಕಾಲುಗಳಿಲ್ಲದವರನ್ನು ನೋಡಿ ಕನಿಷ್ಠ ನಮಗೆ ಓಡಾಡಲು ಕಾಲುಗಳಾದರೂ ಇವೆಯಲ್ಲ ಎಂದು ತೃಪ್ತರಾಗಬೇಕು. ಕಣ್ಣಿಗೆ ಹಾಕಿಕೊಳ್ಳಲು ಬಣ್ಣ ಬಣ್ಣದ ತಂಪು ಕನ್ನಡಕವಿಲ್ಲವೆಂದು ನೊಂದುಕೊಳ್ಳುವ ಬದಲು ದೃಷ್ಟಿಯ ಭಾಗ್ಯವನ್ನು ಕಳೆದುಕೊಂಡವರನ್ನು ನೆನೆದು ಈ ಸುಂದರ ಲೋಕವನ್ನು ಕಾಣುವ ಭಾಗ್ಯ ನಮ್ಮದಾಗಿದೆ ಎಂದು ಹೆಮ್ಮೆ ಪಡಬೇಕು. ವಾಸಿಸಲು ಬಂಗಲೆ ಇಲ್ಲವೆಂದು ಹೆತ್ತವರನ್ನು ಹೀಗೆಳೆಯುವ ಬದಲು ಬೀದಿಯಲ್ಲಿ ಕುಳಿತು ಬೇಡಿ ತಿನ್ನುವ ಸ್ಥಿತಿಯನ್ನು ಆ ಭಗವಂತ ತರಲಿಲ್ಲವೆಂದು ಸಂತಸ ಪಡಬೇಕು. ಇದ್ದುದರಲ್ಲಿಯೇ ಹೊಂದಿ ಮನುಷ್ಯ ಜನ್ಮವನ್ನು ಪಡೆದಿರುವ ನಾವೇ ಧನ್ಯರೆಂದು ಬಾಳಬೇಕು. ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸಿ ಮುನ್ನಡೆಯಬೇಕು ಅಂದಾಗ ಮಾತ್ರ ಬದುಕು ಸುಖಪ್ರದವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close