About Us Advertise with us Be a Reporter E-Paper

ಅಂಕಣಗಳು

ಯಶಸ್ಸಿಗೆ ಪ್ರೇರಣೆ ನೀಡಬೇಕಾದವರು ಪಾಲಕರಲ್ಲದೆ ಇನ್ನಾರು…?

- ಸಿದ್ಧಾರ್ಥ ವಾಡೆನ್ನವರ, ಎಂ ಡಿ ಸತೀಶ್ ಶುಗರ್ಸ್

ಮಕ್ಕಳಿಗೆ ಊಟ ನೀಡುವುದು, ಧರಿಸಲಿಕ್ಕೆ ಬಟ್ಟೆ ನೀಡುವುದು, ಮಲಗಲು ಆಶ್ರಯ ನೀಡುವುದು ಇವೇ ನಮ್ಮ ಜವಾಬ್ದಾರಿ ಎಂದು ಹಲವು ಪಾಲಕರು ತಿಳಿದುಕೊಂಡಿದ್ದಾರೆ, ಸಮಸ್ಯೆ ಇರುವುದು ಇಲ್ಲೇ. ಸರಕಾರದವರು ಕೂಡಾ ‘ಖಾನಾ-ಕಪಡಾ-ಮಕಾನ್’ ಯೋಜನೆ ಜಾರಿ ಮಾಡಿ ಕಳೆದ 71 ವರ್ಷಗಳಿಂದ ನಮಗೆ ಮೋಸ ಮಾಡುತ್ತಿದ್ದಾರೆ. ಚೆನ್ನಾಗಿ ಅಧ್ಯಯನ ಮಾಡಿದರೆ ಬುದ್ಧಿವಂತರಾಗುತ್ತೇವೆೆ, ಚೆನ್ನಾಗಿ ನಿದ್ರೆ ಮನಸ್ಸು ಪ್ರಶಾಂತವಾಗುತ್ತದೆ. ಬರುವ ಕೀರ್ತಿ ಸಾಧನೆ ಅದು ಸ್ವ-ಪ್ರಯತ್ನದಿಂದಲೇ ಈ ಸತ್ಯವನ್ನು ಮಕ್ಕಳಿಗೆ ತಿಳಿಸಬೇಕು.

ಒಳ್ಳೆಯದು-ಕೆಟ್ಟದ್ದು, ಸತ್ಯ-ಅಸತ್ಯ ಇವುಗಳ ಬಗ್ಗೆ ಆರನೇಯ ಇಂದ್ರಿಯಕ್ಕೆ ಮಾತ್ರ ಗೊತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ. ಶಾಲೆಯಲ್ಲಿ ಒಂದೇ ರೀತಿಯಾದ ಅಧ್ಯಯನ ಇರುತ್ತದೆ. ಶಿಕ್ಷಕಿ ಅವಳೇ ಇರುತ್ತಾಳೆ, ಪರಿಸರ ಅದೇ ಇರುತ್ತದೆ, ಆಡಳಿತ ಮಂಡಳಿ ಭಿನ್ನವಾಗಿರುವುದಿಲ್ಲ, ಆದರೂ ಒಬ್ಬ ವಿದ್ಯಾರ್ಥಿ ಅತಿ ಹೆಚ್ಚು ಅಂಕಗಳನ್ನು ಪಡೆದರೆ, ಮತ್ತೊಬ್ಬ ವಿದ್ಯಾರ್ಥಿ ಅತಿ ಕಡಿಮೆ ಪಡೆೆಯುತ್ತಾನೆ. ವಿದ್ಯಾರ್ಥಿಗಳು ಪಡೆಯುವ ಅಂಕಗಳ ಮಧ್ಯ ತುಂಬಾ ವ್ಯತ್ಯಾಸ ಇದೆ. ಮುಂದುವರೆದ ದೇಶಗಳಲ್ಲಿ ಈ ರೀತಿ ಇಲ್ಲ. ಮಕ್ಕಳ ಜೀವನದಲ್ಲಿ ಮುಖ್ಯ ಪಾತ್ರ ವಹಿಸುವವರು ಯಾರು? ಜನ್ಮ ನೀಡಿದವರಲ್ಲದೇ ಯಾರಿದ್ದಾರೆ? ನೀವೇ ಯೋಚಿಸಿ.

ನಮ್ಮ ದೇಶ ಶ್ರೀಮಂತ ದೇಶ, ಜಿಡಿಪಿಯಲ್ಲಿ ಜಗತ್ತಿನಲ್ಲಿ ಆರನೇ ಸ್ಥಾನವನ್ನು ಅಲಂಕರಿಸಿದೆ. ಆದರೂ ಶ್ರೀಮಂತ ಭಾರತ ದೇಶದಲ್ಲಿ ಬದುಕುತ್ತಿರುವವರು ಹೆಚ್ಚಾಗಿ ಶ್ರೀಮಂತರಲ್ಲ ಅವರು ಬಡವರು. ಇದನ್ನು ತಲಾ ಆದಾಯ ನೋಡಿ ತಿಳಿದುಕೊಳ್ಳಬೇಕು. ತಲಾ ಆದಾಯದಲ್ಲಿ ದೇಶ ಜಗತ್ತಿನಲ್ಲಿ 139ನೇ ಸ್ಥಾನದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಜನಸಂಖ್ಯಾ ಸ್ಪೋಟ. ದೇಶದಲ್ಲಿರುವ ಬಹುತೇಕ ಕುಟುಂಬಗಳು ಬಡತನದಿಂದ ಕೂಡಿವೆ ಈ ಕಟು ಸತ್ಯವನ್ನು ರಾಜಕೀಯ ಪಕ್ಷಗಳು ನಮಗೆ ತಿಳಿಸುವುದಿಲ್ಲ.

ನಿಜ ಹೇಳಬೇಕೆಂದರೆ ಪ್ರತಿ ಕುಟುಂಬಕ್ಕೆ ತೃಪ್ತಿದಾಯಕ ಆದಾಯವಿಲ್ಲ, ಪಾಲಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಬೀಡಿ, ಸಿಗರೇಟ, ಗುಟಖಾ, ಸರಾಯಿ, ಜೂಜಾಟ, ಇಸ್ಪೀಟ್ ಹೀಗೆ ಹಲವು ದುಶ್ಚಟಗಳ ದಾಸರಾಗಿದ್ದಾರೆ. ದೇಹಕ್ಕೆ ಹಾನಿಕಾರಕವಾಗಬಲ್ಲ ವಸ್ತುಗಳನ್ನು ಸರಬರಾಜು ಮಾಡಿ ಸರಕಾರಗಳು ಆದಾಯ ಸಂಗ್ರಹಿಸುತ್ತಿವೆ. ದುಶ್ಚಟಗಳ ಪ್ರಮುಖ ಕಾರಣ, ನಿರುದ್ಯೋಗ, ಜನಸಂಖ್ಯಾ ಸ್ಫೋಟ, ಶಾಶ್ವತ ಆದಾಯ ಇಲ್ಲದೇ ಇರುವುದು. ಮನೆಯಲ್ಲಿ ಪ್ರತಿದಿನ ಜಗಳ, ದುಶ್ಚಟಗಳನ್ನು ಮಕ್ಕಳ ಮುಂದೆಯೇ ಮಾಡುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಇದು ಸಹಜವಾಗಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ.

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜನ್ಮ ನೀಡಿದವರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಆ ನಿಯಮಗಳೆಂದರೆ,
* ಜನ್ಮ ನೀಡಿದ ದಿನದಿಂದ ಮಗುವಿನ ದೇಹ ಪಕ್ವವಾಗುವವರೆಗೆ ಮತ್ತು ಮಗುವಿನ ಮಿದುಳು ಪಕ್ವವಾಗುವವರೆಗೆ, ಅಂದರೆ ಮನಸ್ಸಿಗೆ ಪಕ್ವತೆ ಪಾಲಕರು ತಮ್ಮ ಅನುಭವದ ಅಮೃತವನ್ನು ಮಕ್ಕಳಿಗೆ ದಾರೆ ಎರೆಯಬೇಕು. * ಅಂದಾಜು 20 ವರ್ಷಕ್ಕೆ ಮಗುವಿನ ದೇಹ ಮತ್ತು ಮನಸ್ಸಿಗೆ ಪರಿಪಕ್ವತೆ ಬರುತ್ತದೆ. 20 ವರ್ಷಗಳವರೆಗೆ ಮಗು ನಿಮ್ಮ ಉಸ್ತುವಾರಿಯಲ್ಲೇ ಬೆಳೆಯಬೇಕು. ಕುಟುಂಬದಲ್ಲಿನ ಕಲಹಗಳು, ವಯಸ್ಕರ ದುಶ್ಚಟಗಳು ಮಕ್ಕಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. * ಮಕ್ಕಳ ಜೊತೆ ಅನ್ಯೋನ್ಯ ಸಂಬಂಧ ಬೆಳೆಸಿಕೊಳ್ಳಬೇಕು, ದುಷ್ಟ ಜನರಿಂದ ದೂರ ಇರಬೇಕು, ಅಗತ್ಯವಿರುವವರೊಂದಿಗೆ ಮಾತ್ರ ಹೊಂದಾಣಿಕೆ ಮಾಡಿಕೊಳ್ಳಬೇಕು. * ಪುರುಷರು ಮನೆಯಲ್ಲಿರುವ ಮೇಲೆ ದಬ್ಬಾಳಿಕೆ ಮಾಡಬಾರದು.

ಮನೆಯಲ್ಲಿ ಬಳಸುವ ಭಾಷೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಪರಿವಾರದಲ್ಲಿ ಉಪಯೋಗಿಸುವ ಭಾಷೆ ಮೃದುವಾಗಿರಬೇಕು. ಯಾವುದೇ ಪರಿಸ್ಥಿತಿಯಲ್ಲಿ ಮಕ್ಕಳ ಮುಂದೆ ಟೆನ್ಷನ್ ಮಾಡಿಕೊಳ್ಳಬಾರದು. ಕನಿಷ್ಠವೆಂದರೂ ಪ್ರತಿ ದಿನ ಒಂದು ಘಂಟೆ ಮಕ್ಕಳ ಅಧ್ಯಯನಕ್ಕೋಸ್ಕರ ಮೀಸಲಿಡಬೇಕು. ಆ ಸಮಯದಲ್ಲಿ ಅಧ್ಯಯನ ಬಿಟ್ಟರೆ ನಿಮ್ಮ ಮನಸ್ಸು ಬೇರೆ ಕಾರ್ಯಗಳತ್ತ ಹೋಗಬಾರದು. ಬಡವ-ಶ್ರೀಮಂತ, ಮೇಲು-ಕೀಳು, ದೊಡ್ಡವರು-ಸಣ್ಣವರು ಮಾನವೀಯ ಮೌಲ್ಯಗಳು ಮತ್ತು ಸಮಾನತೆಯ ಬಗ್ಗೆ ಮಕ್ಕಳಿಗೆ ಆಗಾಗ ಪಾಠ ಮಾಡಬೇಕು. ಬೆಂಬಲ ಅತೀ ಮುಖ್ಯ. ಈ ವಿಷಯಗಳಲ್ಲಿ ನೀವು ತಾರತಮ್ಯ ಪ್ರದರ್ಶಿಸಬಾರದು. ಈ ಬಗ್ಗೆ ಮಕ್ಕಳಿಗೆ ತರಬೇತಿ ನೀಡಬೇಕು ಇಲ್ಲವೇ ತರಬೇತಿ ನೀಡುವ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕು. ಹಣ ಸಂಪಾದಿಸುವುದೊಂದೇ ಅಂತಿಮವಲ್ಲ, ದಿನದ 24 ಘಂಟೆ ಉಲ್ಲಾಸದಿಂದ ಇರುವುದು ಅತಿ ಮುಖ್ಯ.

ಸಂಸ್ಕೃತಿ, ಭಾಷೆ, ದೇಶಪ್ರೇಮ ಈ ಅಂಶಗಳನ್ನು ಮಕ್ಕಳ ತಲೆಯಲ್ಲಿ ತುಂಬಬೇಕು. ಈಗ ಎಲ್ಲಿ ನೋಡಿದರೂ ವ್ಯಸನಿಗಳೇ, ವ್ಯಸನದಾರಿಗಳು ಬೀದಿ-ಬೀದಿಯಲ್ಲಿ ಸಿಗುತ್ತಾರೆ, ಎಲ್ಲವನ್ನು ಮಕ್ಕಳ ಮುಂದೆ ಬಚ್ಚಿಡದೇ ಅವುಗಳ ಬಗ್ಗೆ ತಿಳಿ ಹೇಳಬೇಕು, ಜ್ಞಾನವೃದ್ದಿಗೆ ಇವೆಲ್ಲವುಗಳ ತಿಳಿವಳಿಕೆ ಅತಿ ಮುಖ್ಯ. ಯಶಸ್ವಿ ನಾಯಕರ ಜೀವನ ಚರಿತ್ರೆಗಳನ್ನು ಹೇಳಿ ಕೊಡಬೇಕು, ಕೆಟ್ಟ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಹೇಗೆ ಗುರುತಿಸುವುದು ಈ ಬಗ್ಗೆ ತರಬೇತಿ ನೀಡಬೇಕು.

ಇಪ್ಪತ್ತು ವರ್ಷಗಳವರೆಗೆ ಶಾಲೆಯೊಂದನ್ನು ಬಿಟ್ಟು ಒಬ್ಬಂಟಿಗರನ್ನಾಗಿ ಎಲ್ಲಿಯೂ ಕಳುಹಿಸಬೇಡಿ, ಜೊತೆಗೆ ನೀವೂ ಹೋಗುವುದನ್ನು ರೂಢಿಸಿಕೊಳ್ಳಿ. ಅವರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲು ನೀವು ಜೊತೆಯಾಗಿಯೇ ಇರಬೇಕು. ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಿಮ್ಮಿಂದಲೇ ಸಿಗುವಂತಾಗಲಿ. ಮಕ್ಕಳ ಉತ್ತರ ಗೆಳೆಯರಿಂದ, ಸುತ್ತಮುತ್ತಲಿರುವವರಿಂದ ಸಿಗಬಾರದು.

ಗಿಡ ಬೆಳೆಯಲು ಸದೃಢ ಬೇರುಗಳಿರಬೇಕು, ಹಾಗೆಯೇ ಮಗು ಬೆಳೆಯಲು ಒಳ್ಳೆಯ ತಂದೆ-ತಾಯಿಗಳಿರಬೇಕು. ಸಾಮಾನ್ಯ ಜ್ಞಾನ ಪೋಷಕರಿಂದ ಸಿಗುತ್ತಿದ್ದರೆ, ಮಗುವಿನ ಬೇರುಗಳು ತುಂಬಾ ಉದ್ದ ಬೆಳೆಯುತ್ತವೆ, ಮುಂದೆ ದೊಡ್ಡವರಾದಾಗ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗುತ್ತಾರೆ. ಜವಾಬ್ದಾರಿಯನ್ನು ನೀವು ಅರಿತರೆ ಅದು ಮಕ್ಕಳಿಗೂ ಬರುತ್ತದೆ. ಸಂಶೋಧನಾತ್ಮಕ ಚಿಂತನೆ, ಸುತ್ತಲಿರುವ ಸೃಷ್ಟಿಯ ಮೂಲ ಇವುಗಳ ಬಗ್ಗೆ ಪ್ರಥಮವಾಗಿ ಮಕ್ಕಳಿಗೆ ತಿಳಿಸುವ ವ್ಯವಸ್ಥೆ ಪಾಲಕರಿಂದ ಆಗಬೇಕು. ಬಟ್ಟೆ ತೊಳೆಯವದರಿಂದ – ಧರಿಸಿಕೊಳ್ಳುವವರೆಗೆ, ಶಾಲೆಗೆ ಹೋಗುವುದರಿಂದ- ಮದುವೆ ಮಾಡಿಕೊಳ್ಳುವವರೆಗೆ ನಿಮ್ಮ ಜವಾಬ್ದಾರಿಯಲ್ಲಿ ವ್ಯತ್ಯಾಸವಾಗಬಾರದು. ಮಧ್ಯದಲ್ಲಿ ಅಡೆತಡೆ ಇರಬಾರದು.

‘ಶಾಲೆ ಕಲಿಯುವುದು ನೌಕರಿಗೋಸ್ಕರ ಅಲ್ಲ ನೌಕರಿ ಕೊಡುವುದಕ್ಕೋಸ್ಕರ’ ಹೀಗೆ ಹೇಳಿ ಮಕ್ಕಳು ಸಂಶೋಧನಾತ್ಮಕ ಚಿಂತನೆಗೊಳಗಾಗುವಂತೆ ಮಾಡಬೇಕು. ರಾಜಕೀಯ, ಅಧ್ಯಾತ್ಮ, ಧಾರ್ಮಿಕ, ಉದ್ಯಮ, ಸೇವಾಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಿವೆ. ಯಾವುದಾದರೊಂದು ಕ್ಷೇತ್ರದಲ್ಲಿ ನೀನು ನಾಯಕನಾಗಬೇಕಿದೆ, ಈ ಅರಿವು ಮತ್ತು ಜ್ಞಾನ ಮಕ್ಕಳಲ್ಲಿ ಮೂಡಿಸಬೇಕು. ಆಯಾ ಕ್ಷೇತ್ರಗಳಲ್ಲಿ ಯಶಸ್ವಿಯಾದ ನಾಯಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಲೇಬೇಕು. ನೀಡುವ ಸಮಯ ಅದು ನಿಮ್ಮ ಸ್ವಾರ್ಥಗೋಸ್ಕರ ಉಪಯೋಗ ಆಗಬಾರದು. ಆ ನಿಮ್ಮ ಸಮಯ ಮಗುವಿನ ಭವಿಷ್ಯಕ್ಕೋಸ್ಕರ ಉಪಯೋಗ ಆಗಬೇಕು. ಮಕ್ಕಳಿಗೋಸ್ಕರ ಸಮಯ ಮಿಸಲಿಡಬೇಕು. ನಿಮ್ಮ ಸಮಯ ಮಕ್ಕಳ ಜ್ಞಾನಾಭಿವೃದ್ಧಿಗೆ ಅನುವು ಮಾಡಿಕೊಡುತ್ತಿರಬೇಕು.

ಪ್ರತಿದಿನ ಸಿಗರೇಟ ಸೇದುವುದು, ಸಾರಾಯಿ ಕುಡಿಯುವುದು, ಕುಟುಂಬದವರ ಜೊತೆಗೆ ಹೊಂದಾಣಿಕೆ ಇಲ್ಲದೇ ಇರುವುದು, ಜನ್ಮ ನೀಡಿದ ತಂದೆ-ತಾಯಿಗಳಿಗೆ ಮಾನ್ಯತೆ ಕೊಡದೇ ಇರುವುದು, ಜನ್ಮ ನೀಡಿದ ಮಕ್ಕಳ ಮೇಲೆ ಗಮನ ಹರಿಸದೇ ಇರುವುದು, ಮಕ್ಕಳು ಶಾಲೆಯಿಂದ ಮನೆಗೆ ತಂದೆ ಹೊರಗೆ ಹೋಗುವುದು, ಮಕ್ಕಳು ಶಾಲೆಗೆ ಹೋದಾಗ ತಂದೆ ಮನೆಗೆ ಬರುವುದು ಈ ತರಹದ ರೂಢಿಗಳು ದೇಶದಲ್ಲಿ ಸಾಮಾನ್ಯವಾಗಿವೆ. ತಂದೆ ಅನ್ನುವವನಿಗೆ ಟೆನ್ಷನ್ ಬೇಡವಾಗಿದೆ. ಸಂಸಾರ ಮಾಡಲು ಹೆಂಡತಿ ಬೇಕು ಜೀವನ ನಡೆಸಲು ಜವಾಬ್ದಾರಿ ಬೇಕಾಗಿಲ್ಲ. ಮಕ್ಕಳ ಭವಿಷ್ಯವನ್ನು ಲೆಕ್ಕಿಸದೇ ದೇಹದ ಅಗತ್ಯಗಳೆಡೆಗೆ ಅವನ ಗಮನವಿರುತ್ತದೆ. ಮಕ್ಕಳ ಆರೈಕೆ ಮಾಡುತ್ತಲೇ ಇದ್ದರೆ ಎಂಜಾಯ್‌ಮೆಂಟ್ ಲೈಫ್ ಹಾಳಾಗುತ್ತದೆ, ಈ ನಂಬಿಕೆ ಹಲವು ಜನರಲ್ಲಿದೆ. ಯಾವುದೇ ಸಾಧನೆ ಮಾಡದೇ, ಟೆನ್ಷನ್‌ಗೆ ಒಳಗಾಗಿ ನಿರ್ಲಕ್ಷಿಸುತ್ತಿದ್ದಾರೆ.

ಕೆಲವು ಅನ್ವೇಷಣೆಗಳ ಪ್ರಕಾರ 18 ವರ್ಷಗಳವರೆಗೆ ಮಕ್ಕಳ ಬ್ರೇನ್ ಸಂಪೂರ್ಣವಾಗಿ ಬೆಳೆದಿರುವದಿಲ್ಲ. ಮಕ್ಕಳ ಬ್ರೇನ್ ಪಕ್ವವಾಗುವವರೆಗೆ ಅದರ ಉಸ್ತುವಾರಿಯನ್ನು ಜನ್ಮ ನೀಡಿದ ತಂದೆ ತಾಯಿಯೇ ನೋಡಿಕೊಳ್ಳಬೇಕಾಗುತ್ತದೆ. ಒಮ್ಮೆ ಜನ್ಮ ನೀಡಿದರೆ ಕನಿಷ್ಠ 20 ವರ್ಷಗಳವರೆಗೆ ಪಾಲನೆ-ಪೋಷಣೆ ಪಾಲಕರ ಜವಾಬ್ದಾರಿ. ಮಕ್ಕಳ ಭವಿಷ್ಯದ ಚಿಂತನೆ ಮತ್ತು ಉಸ್ತುವಾರಿ ಜನ್ಮ ನೀಡಿದವರಿಂದಲೇ ಆಗಬೇಕು. ಮಕ್ಕಳ ಸಮೃದ್ಧ ಬದುಕಿಗೆ ಇದು ಅಡಿಪಾಯ. 20 ವರ್ಷಗಳವರೆಗೆ ಮಕ್ಕಳ ಪಾಲನೆ-ಪೋಷಣೆಗೆ ಸಮಯ ನೀಡಿದರೆ ಅದೇ 50 ವರ್ಷಗಳವರೆಗೆ ತಂದೆ-ತಾಯಿಯರ ಸೇವೆಯನ್ನು ಮಾಡುತ್ತಾರೆ.

ರಾಜಕೀಯದಲ್ಲಿ ನಾಯಕರಾಗಬೇಕಾದರೆ ಮಹಾತ್ಮಾ ಗಾಂಧೀ, ಮಾರ್ಟಿನ್ ಲೂಥರ್ ಕಿಂಗ್, ವ್ಯವಹಾರದಲ್ಲಿ ನಾಯಕರಾಗಬೇಕಾದರೆ ಅಂಡ್ರೀವ್ ಕಾರ್ನೆಜ್ – ಹೆನ್ರಿ ಪೂರ್ಡ್, ಧರ್ಮದಲ್ಲಿ ನಾಯಕರಾಗಬೇಕಾದರೆ ಭಗವಾನ ಮಹಾವೀರ – ಭಗವಾನ ಬುದ್ಧ, ಆಧ್ಯಾತ್ಮದಲ್ಲಿ ನಾಯಕರಾಗಬೇಕಾದರೆ ಸ್ವಾಮಿ ವಿವೇಕಾನಂದ – ಸದ್ಗುರು ಜಗ್ಗಿ ವಾಸುದೇವ ಇಂತಹ ಮಹಾನ್ ನಾಯಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು ಜೊತೆಗೆ ಮಕ್ಕಳಿಗೂ ಅಧ್ಯಯನ ಮಾಡಲು ಹೇಳಬೇಕು. ಆಸಕ್ತಿ ಇರುವ ಕ್ಷೇತ್ರಗಳ ಮಾಹಿತಿ ಸಂಗ್ರಹಿಸಬೇಕು. ಸಂಗ್ರಹಿಸಿದ ಮಾಹಿತಿಯನ್ನು ಮಕ್ಕಳಿಗೆ ಒದಗಿಸಬೇಕು.

Tags

Related Articles

Leave a Reply

Your email address will not be published. Required fields are marked *

Language
Close