ಮುಂದುವರೆದ ಅನ್ಯಾಯ

Posted In : ಸಂಪಾದಕೀಯ-1

ಕರ್ನಾಟಕದ ಬಗ್ಗೆ ಕೇಂದ್ರ ಸರಕಾರದ ಮಲತಾಯಿ ಧೋರಣೆ ಮತ್ತೆ ಮುಂದು ವರಿದಿದೆ. ರಾಜ್ಯದ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಯೋಜನೆಗೆ ಕೇವಲ 836 ರುಪಾಯಿ ಬಿಡುಗಡೆ ಮಾಡಿದೆ. ಆದರೆ ನೆರೆಯ ಮಹಾರಾಷ್ಟ್ರಕ್ಕೆ 1,378 ಕೋಟಿ ಮತ್ತು ಮಧ್ಯಪ್ರದೇಶಕ್ಕೆ 948 ಕೋಟಿ ರುಪಾಯಿ ಕೊಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಇರುವುದಕ್ಕೂ ಕೇಂದ್ರ ಸರಕಾರ ಈ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮೆರೆದಿರುವುದಕ್ಕೂ ಸಂಬಂಧ ಇಲ್ಲ ಎಂದು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ.

ಒಂದೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಿದ್ದರೆ ಕೇಂದ್ರ ಸರಕಾರ ಇದೇ ನೀತಿ ಅನುಸರಿಸುತ್ತಿತ್ತು ಎಂದು ಬರುವುದಿಲ್ಲ. ಈವರೆಗೂ ನಾನಾ ಅನುದಾನಗಳ ನೀಡಿಕೆಯಲ್ಲೂ ಇದೇ ಪಕ್ಷಪಾತವನ್ನು ಕರ್ನಾಟಕ ಅನುಭವಿಸಿದೆ. ಕರ್ನಾಟಕ ಈ ದೇಶದ ಒಂದು ಭಾಗ. ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಪ್ರಧಾನಿ. ಬರೀ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇರುವ ರಾಜ್ಯಗಳಿಗೆ ಮಾತ್ರ ಅವರು ಪ್ರಧಾನಿ ಅಲ್ಲ. ಹೀಗಾಗಿ ಪ್ರಗತಿ ವಿಚಾರದಲ್ಲಿ ಪಕ್ಷ ರಾಜಕಾರಣ ಬೆರೆಸುವುದು ವಿಹಿತವಲ್ಲ.

ಕರ್ನಾಟಕ ಅದೇನು ತಪ್ಪು ಮಾಡಿದೆ ಅಂತ ಇಂಥ ತಾರತಮ್ಯ ಅನುಭವಿಸಬೇಕು? ಇಲ್ಲಿರುವ ಜನ ಈ ದೇಶದ ಎಲ್ಲವನ್ನೂ ಪಕ್ಷ ರಾಜಕಾರಣದ ಕಣ್ಣಿಂದಲೇ ಏಕೆ ನೋಡಬೇಕು? ಕರ್ನಾಟಕದಲ್ಲಿ ಮೊದಲಿಂದಲೂ ಒಂದು ಪ್ರತೀತಿ ಇದೆ. ಹೆಚ್ಚಿನ ಸಂದರ್ಭ ಗಳಲ್ಲಿ ಕರ್ನಾಟಕ ಮತ್ತು ಕೇಂದ್ರ ಸರಕಾರದಲ್ಲಿ ವಿಭಿನ್ನ ಸರಕಾರಗಳು ಅಧಿಕಾರ ನಡೆಸಿವೆ. ಕರ್ನಾಟಕದ ಜನ ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ರಾಜಕೀಯದಲ್ಲಿ ಯಾವುದೇ ಭಾವಾವೇಶ ಬೆರೆಸುವುದಿಲ್ಲ. ಹೀಗಾಗಿ ಅದು ಇಡೀ ದೇಶದ ರಾಜಕಾರಣದಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ. ಅದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳು ಅದು ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ಮಲ ತಾಯಿ ಕಣ್ಣುಗಳಿಂಲೇ ನೋಡುತ್ತಿರುವುದರಿಂದ ಮೊದಲಿಂದಲೂ ಅನ್ಯಾಯವಾಗುತ್ತಲೇ ಬಂದಿದೆ.

ನೆಲ, ಜಲ, ಭಾಷೆ, ಪ್ರಗತಿ ಎಲ್ಲ ವಿಚಾರಗಳಲ್ಲೂ ಇದರ ಅನುಭವವಾಗಿದೆ. ಮಹದಾಯಿ ವಿವಾದ ಇತ್ತೀಚಿನದು. ಸ್ಮಾರ್ಟ್ ಸಿಟಿ ಅನುದಾನದ ಅನ್ಯಾಯ ಹೊಸ ಸೇರ್ಪಡೆ. ಈ ಪರಂಪರೆಗೆ ತೆರೆ ಎಳೆಯಲು ಎಲ್ಲ ರಾಜಕೀಯ ಪಕ್ಷಗಳೂ ಇಚ್ಛಾಶಕ್ತಿ ಪ್ರದರ್ಶಿಸ ಬೇಕು. ದೇಶದ ಪ್ರಗತಿ ರಾಜಕೀಯಕ್ಕಿಂತಲೂ ಮಿಗಿಲು ಎಂಬುದನ್ನು ಸಾಬೀತು ಮಾಡಬೇಕು.

Leave a Reply

Your email address will not be published. Required fields are marked *

ten + eleven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top