
ಜಕಾರ್ತಾ: ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಪಾಂಗ್ಕಲ್ ಪಿನಾಕ್ ದ್ವೀಪಕ್ಕೆ ಹೊರಟಿದ್ದ ಲಯನ್ ಏರ್ ವಿಮಾನ ಸೋಮವಾರ ಬೆಳಗ್ಗೆ ಪತನಗೊಂಡಿದೆ.
ವಿಮಾನದಲ್ಲಿ 189 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ 13 ನಿಮಿಷಗಳಲ್ಲೇ ಸಂಪರ್ಕ ಕಡಿತಗೊಂಡಿದ್ದು, ಸಮುದ್ರದಲ್ಲಿ ಪತನವಾಗಿದೆ. ವಿಮಾನ ಬೀಳುತ್ತಿರುವ ದೃಶ್ಯವನ್ನು ಜಕಾರ್ತ ಬಂದರಿನಿಂದ ಹೊರಟಿದ್ದ ಬೋಟ್ ಸಿಬ್ಬಂದಿ ನೋಡಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನವು ಫ್ಲೈಟ್ ರೇಡಾರ್ 24 ಏರ್ ಟ್ರ್ಯಾಕಿಂಗ್ ಸೇವೆ ಅಡಿ ಕಾರ್ಯನಿರ್ವಹಿಸುತ್ತಿತ್ತು. ಬೆಳಗ್ಗೆ 7.30ರ ವೇಳೆಗೆ ದ್ವೀಪದಲ್ಲಿ ಇಳಿಯಬೇಕಿದ್ದ ವಿಮಾನ ಪತನಗೊಂಡಿದೆ. ಇಂಡೊನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.