About Us Advertise with us Be a Reporter E-Paper

ಅಂಕಣಗಳು

ಪಟಾಕಿಯ ವಿಷವನ್ನೂ ಮೀರಿಸುವ ಹಿಂದೂವಿರೋಧಿಗಳ ವಿಷ!

ರೋಹಿತ್ ಚಕ್ರತೀರ್ಥ

ನೀವಿದನ್ನು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ದೀಪಾವಳಿಯ ಆಸುಪಾಸಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಪಟಾಕಿ ಹೊಡೆಯಬೇಡಿ, ಹಸಿರು ದೀಪಾವಳಿ ಆಚರಿಸಿ, ದೀಪಾವಳಿಗೆ ಅನಗತ್ಯ ದುಡ್ಡು ಖರ್ಚು ಮಾಡಬೇಡಿ ಎಂದು ಸಾರುವ ಸಂದೇಶಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳತೊಡಗಿವೆ. ಸೆಲೆಬ್ರಿಟಿಗಳು, ಅಥವಾ ತಾವು ಸೆಲೆಬ್ರಿಟಿಗಳೆಂದು ಭಾವಿಸಿಕೊಂಡವರು ಪತ್ರಿಕೆಗಳಲ್ಲಿ ಸಂದೇಶ ಕೊಡತೊಡಗಿದ್ದಾರೆ. ಟಿವಿವಾಹಿನಿಗಳಿಗಂತೂ ದೀಪಾವಳಿಯ ಮೂರು ದಿನವೂ ಆ ಸಂದೇಶವನ್ನು ಮತ್ತೆೆ ಮತ್ತೆೆ ಬಿತ್ತರಿಸಿ ಜನರನ್ನು ಕಾಪಾಡುವುದೇ ಕೆಲಸ! ದೀಪಾವಳಿ ಹಬ್ಬ ಮುಗಿದ ಮರುದಿನ ಎಲ್ಲ ಪತ್ರಿಕೆಗಳೂ ಕಣ್ಣು ಕಳಕೊಂಡವರ ಚಿತ್ರಗಳನ್ನು ತಪ್ಪದೆ ಪ್ರಕಟಿಸುತ್ತವೆ. ಇಷ್ಟು ಜನ ಗಾಯಗೊಂಡರು, ಇಷ್ಟು ಜನ ದೃಷ್ಟಿಹೀನರಾದರು, ಇಷ್ಟೊಂದು ಜನ ಪ್ರಾಣಾಂತಿಕ ಅಪಾಯಕ್ಕೊಳಗಾದರು ಎಂಬೆಲ್ಲ ಮಾಹಿತಿಯಿಂದ ಪುಟ ತುಂಬಿಸಿದರೆ ಪತ್ರಕರ್ತರಿಗೊಂದು ಸಮಾಧಾನ!

ಇದೇ ಪತ್ರಿಕೆ, ಟಿವಿವಾಹಿನಿಗಳು ಕ್ರಿಸ್‌ಮಸ್, ಹೊಸ ವರ್ಷ, ಬಕ್ರೀದ್, ಮೊಹರಂ ಮುಂತಾದ ಹಬ್ಬಗಳನ್ನು ತೋರಿಸುವ ರೀತಿ ಹೇಗಿರುತ್ತದೆ ನೋಡಿದ್ದೀರಾ? ಹೊಸ ವರ್ಷದ ರಾತ್ರಿ ಅದೆಷ್ಟು ಸಾವಿರ ಜನ ಬ್ರಿಗೇಡ್ ರಸ್ತೆೆಯಲ್ಲಿ ಕುಣಿದು ಕುಪ್ಪಳಿಸಿದರು, ಎಷ್ಟು ಸಾವಿರ ಲೀಟರ್‌ಗಳ ಮದ್ಯಾಭಿಷೇಕದಲ್ಲಿ ಮಿಂದೆದ್ದರು ಎಂಬುದನ್ನು ಜಾಗತಿಕ ಮಟ್ಟದ ಸಾಧನೆ ಎಂಬಂತೆ ಇದೇ ಮಾಧ್ಯಮಗಳು ಎಲ್ಲಿಲ್ಲದ ಉತ್ಸಾಹದಿಂದ ವರ್ಣಮಯ ಶಬ್ದ ಹಾಕಿ ವಿವರಿಸುತ್ತವೆ. ಕ್ರಿಸ್‌ಮಸ್ ಹಬ್ಬದ ದಿನ ಅಪ್ಪಿತಪ್ಪಿಯೂ ಅವಘಡಗಳ ಸುದ್ದಿ ಪ್ರಕಟವಾಗುವುದಿಲ್ಲ. ಹೊಸ ವರ್ಷದ ರಾತ್ರಿ ರಸ್ತೆೆ ಅಪಘಾತಗಳಲ್ಲಿ ತೀರಿಕೊಂಡವರ ಸಂಖ್ಯೆೆ ಎಷ್ಟು ಎಂಬುದನ್ನು ನಾವು ಅಂತರ್ಜಾಲದಲ್ಲಿ ಹುಡುಕಬೇಕಾದರೆ ದುರ್ಬೀನು ಹಿಡಿಯಬೇಕು. ಮೊಹರಂನಲ್ಲಿ ಎದೆಬಡಿದುಕೊಂಡು ರಕ್ತ ಚೆಲ್ಲಿ ಕುಸಿದುಬಿದ್ದವರ ಯಾವ ಮಾಹಿತಿಯನ್ನೂ ನೀವು ಜಪ್ಪಯ್ಯ ಎಂದರೂ ಪತ್ರಿಕೆ, ಟಿವಿಯಲ್ಲಿ ಕಾಣಲಾರಿರಿ. ಬಕ್ರೀದ್ ಸಂದರ್ಭದಲ್ಲಿ ಕುರಿ-ಮೇಕೆಗಳ ಶವಗಳ, ರಕ್ತದ ಹೊಳೆಯ ಫೋಟೋ ಯಾವ ಪತ್ರಿಕೆಯಲ್ಲಾದರೂ ಬಂದದ್ದನ್ನು ನೋಡಿದ ನೆನಪಿದೆಯೇ ನಿಮಗೆ? ಊಹ್ಞೂ! ಆದರೆ ದೀಪಾವಳಿಯ ಮರುದಿನ ಕಣ್ಣು ಕಳಕೊಂಡಾತನ ಚಿತ್ರ ಪತ್ರಿಕೆಯ ಮುಖಪುಟದಲ್ಲಿರುತ್ತದೆ. ಗಣೇಶನ ಹಬ್ಬದ ಮರುದಿನ, ಕೆರೆಯಲ್ಲಿ ತೇಲುತ್ತಿರುವ ಹೂವು-ಹಾರಗಳ ಕೊಳೆಯ ಚಿತ್ರವೇ ಪತ್ರಿಕೆಯ ಮೊದಲ ಪುಟದಲ್ಲಿ ವಿಜೃಂಭಿಸುತ್ತದೆ. ಎದೆ ಬಡಿದುಕೊಳ್ಳುವ ಬದಲು ರಕ್ತನಿಧಿಗೆ ರಕ್ತ ಕೊಡಿ ಎಂದು ಬಾಂಧವರಿಗೆ ಬುದ್ಧಿ ಹೇಳುವವರನ್ನು ನಾವು ನೋಡಿರದೆ ಇರಬಹುದು; ಆದರೆ, ನಾಗರಪಂಚಮಿಯ ಮರುದಿನ ಪೇಪರಿನ ವಾಚಕರ ವಾಣಿಯಲ್ಲಿ, ಹುತ್ತಕ್ಕೆೆರೆವ ಹಾಲನ್ನು ಹಸುಗೂಸುಗಳಿಗೆ ಕೊಡಬಹುದಿತ್ತಲ್ಲಾ ಎಂದು ಕೇಳುವ ಚಿಂತಕನೊಬ್ಬ ಇದ್ದೇ ಇರುತ್ತಾನೆ. ಯಾಕೆ ಹೀಗೆ?

ಎಡಪಂಥೀಯ ಪತ್ರಿಕೆಯಾದ ಪ್ರಜಾವಾಣಿಯಲ್ಲಿ 2018ರ ನವೆಂಬರ್ 1ರಂದು ನಮ್ಮೊಳಗಿನ ನರಕಾಸುರರು ಎಂಬ ಲೇಖನವೊಂದು ಪ್ರಕಟವಾಗಿತ್ತು. ಬರೆದವರು ಎಡಪಂಥೀಯ ವಿಜ್ಞಾನ ಲೇಖಕ ನಾಗೇಶ ಹೆಗಡೆ. ಲೇಖನದ ವಿಷಯ: ದೀಪಾವಳಿಗೆ ಪಟಾಕಿ ಸುಡಬೇಡಿ. ಅದರಿಂದ ಪರಿಸರನಾಶ. ಜಗತ್ತಿನ ಎಲ್ಲ ದೇಶಗಳಲ್ಲೂ ಪಟಾಕಿಯ ಬಗ್ಗೆೆ ಹೇವರಿಕೆ ಹುಟ್ಟಿದ್ದರೆ ಭಾರತದಲ್ಲಿ ಮಾತ್ರ ಅದರತ್ತ ಒಂದು ಆರಾಧನಾಪ್ರವೃತ್ತಿ ಬೆಳೆಯುತ್ತಿದೆ. ಪಟಾಕಿ ಬೇಕೇಬೇಕು ಎಂದು ಕೆಲವು ಪಟ್ಟಭದ್ರರು ಒತ್ತಾಯ ಹೇರುತ್ತಿದ್ದಾಾರೆ. ಅದಕ್ಕೆೆ ಹಿಂದುತ್ವವಾದಿಗಳ ಕುಮ್ಮಕ್ಕು ಇದೆ. ಇತ್ಯಾದಿ ಇತ್ಯಾದಿ… ಎಂದಿನಂತೆ ನಾಗೇಶ ಹೆಗಡೆಯವರ ಲೇಖನದಲ್ಲಿ ಹಿಂದೂಗಳನ್ನು ಕಿಚಾಯಿಸುವ, ಅವಹೇಳನ ಮಾಡುವ ಕೆಲವು ಸಾಲುಗಳೂ, ಶುದ್ಧಾತಿಶುದ್ಧ ಸುಳ್ಳು ವಿವರಗಳೂ ತುಂಬಿದ್ದದ್ದು ಆಶ್ಚರ್ಯವೇನಲ್ಲ. ಸಾಲದ್ದಕ್ಕೆೆ ಲೇಖನದ ವಿಷಯಕ್ಕೆೆ ಯಾವ ರೀತಿಯಲ್ಲೂ ಸಂಬಂಧಿಸದ ಫುಟ್‌ಬಾಲ್ ಮ್ಯಾಚೊಂದರ ಪ್ರಸಂಗದ ಮೂಲಕ ಲೇಖನವನ್ನು ಪ್ರಾರಂಭಿಸಲಾಗಿತ್ತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪ್ರಜಾವಾಣಿಯಲ್ಲಿ ಪ್ರಕಟವಾಗುವ ಪ್ರಗತಿಪರ ಜೀವಪರ ಲೇಖನದಲ್ಲಿ ಏನೆಲ್ಲ ಇರಬೇಕೋ ಅವೆಲ್ಲವೂ ಹೆಗಡೆಯವರ ಲೇಖನದಲ್ಲಿದ್ದವು.

ನಾಗೇಶ ಹೆಗಡೆ ಮತ್ತು ಅವರಂತೆ ಸುಳ್ಳೇ ನಮ್ಮನಿ ದೇವರು ಎಂದು ನಂಬಿರುವ ಮಿಕ್ಕ ಎಡಪಂಥೀಯ ವೈಜ್ಞಾನಿಕರಿಗೆ ಒಂದು ಅಂಕಿ-ಅಂಶವನ್ನು ತೋರಿಸಬೇಕಿದೆ. 2014ರಲ್ಲಿ ಭಾರತದಲ್ಲಿ ದಾಖಲಾದ ಅಗ್ನಿ ಆಕಸ್ಮಿಕ ಪ್ರಕರಣಗಳು ಮತ್ತು ಅವುಗಳಲ್ಲಿ ತೀರಿಕೊಂಡವರ ವಿವರಗಳು ಇವು: ವಾಹನಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು: 288. ತೀರಿಕೊಂಡವರು: 249 ಮಂದಿ. ಕಮರ್ಷಿಯಲ್ ಕಟ್ಟಡಗಳಲ್ಲಿ ಸಂಭವಿಸಿದ ಅಗ್ನಿದುರಂತಗಳು: 179. ಸತ್ತವರು: 157 ಜನ. ಮನೆಯ ಒಳಗೆ ಅಥವಾ ಕಟ್ಟಡಗಳ ಒಳಗೆ ಸಂಭವಿಸಿದ ಎಲ್ಲ ಬಗೆಯ ಅಗ್ನಿ ಅನಾಹುತಗಳು: 3736. ಮೃತಪಟ್ಟವರು: 3794 ಮಂದಿ. ರಾಸಾಯನಿಕಗಳನ್ನು ಉತ್ಪಾದಿಸುವ, ಬೆಂಕಿಪೆಟ್ಟಿಗೆ ತಯಾರಿಸುವ, ಪಟಾಕಿ ತಯಾರಿಸುವ – ಹೀಗೆ ಹತ್ತುಹಲವು ಬಗೆಯ ಕಾರ್ಖಾನೆಗಳಲ್ಲಿ ಕಾಣಿಸಿಕೊಂಡ ಬೆಂಕಿ: 143. ತೀರಿಕೊಂಡವರು: 148. ನಾಗೇಶ ಹೆಗಡೆ ಮತ್ತು ಅವರ ವೈಜ್ಞಾನಿಕ ಜೊತೆಗಾರರಲ್ಲಿ ಎಷ್ಟು ಮಂದಿ ಇಂಥ ಅಂಕಿ-ಅಂಶಗಳನ್ನು ಸ್ಟಡಿ ಮಾಡಿದ್ದಾರೆ? ಪಟಾಕಿ ಅಪಾಯ, ಹಾಗಾಗಿ ದೇಶದಲ್ಲಿ ಪಟಾಕಿಯನ್ನೇ ನಿಷೇಧ ಮಾಡಿಬಿಡಬೇಕು ಎಂದು ಒಂದು ಸಾಲಿನ ನಿರ್ಣಯ ಕೊಡುವ ಅತಿಬುದ್ಧಿವಂತರಲ್ಲಿ ನನ್ನದೊಂದು ಮನವಿ: 2014ರಲ್ಲಿ ಭಾರತದಲ್ಲಿ ಅಡುಗೆ ಸಿಲಿಂಡರ್ ಸಿಡಿದು ತೀರಿಕೊಂಡವರ ಸಂಖ್ಯೆೆಯೇ ಬರೋಬ್ಬರಿ 3525. ಅದರಲ್ಲೂ 627 ಮಂದಿ (ಅಂದರೆ 18%) ಕರ್ನಾಟಕವೊಂದರಲ್ಲೇ ಮೃತಪಟ್ಟಿದ್ದಾಾರೆ. ಇಷ್ಟೊxದು ದೊಡ್ಡ ಸಂಖ್ಯೆೆಯಲ್ಲಿ ಜನರನ್ನು ಬಲಿತೆಗೆದುಕೊಂಡ ಸಿಲಿಂಡರ್‌ಗಳನ್ನು ಈ ದೇಶದಲ್ಲಿ ನಿಷೇಧಕ್ಕೊಳಪಡಿಸಬೇಕೆಂದು ನಾನು ಹೋರಾಟ ಮಾಡುತ್ತೇನೆ; ಕೈಜೋಡಿಸುತ್ತೀರಾ? ಪಟಾಕಿಯನ್ನು ಹೊರತುಪಡಿಸಿ 2010ರಿಂದ 14ರವರೆಗೆ ಐದು ವರ್ಷಗಳಲ್ಲಿ ಭಾರತದಲ್ಲಿ ಒಟ್ಟು 1,13,961 ಮಂದಿ ಅಗ್ನಿ ಅವಘಡಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ಇವರೆಲ್ಲರ ಪರವಾಗಿ, ಬನ್ನಿ, ಅಗ್ನಿಯನ್ನೇ ದೇಶದಲ್ಲಿ ನಿಷೇಧಕ್ಕೊಳಪಡಿಸಬೇಕೆಂಬ ಹೋರಾಟ ಮಾಡೋಣ. ಜೊತೆಯಾಗುತ್ತೀರಾ?

ನಾಗೇಶ ಹೆಗಡೆಯವರು ತನ್ನ ಪ್ರಜಾವಾಣಿ ಲೇಖನದಲ್ಲಿ ನಮ್ಮ ದೇಶವು ಪಟಾಕಿಯಿಂದಾಗಿ ಪದೇ ಪದೇ ವಿಶ್ವಮಟ್ಟದಲ್ಲಿ ಮಾನ ಕಳೆದುಕೊಳ್ಳುತ್ತಿದೆ ಎಂಬ ವಾಕ್ಯ ಬರೆದಿದ್ದಾಾರೆ. ಪದೇ ಪದೇ ಎಂದರೆ ಎಷ್ಟು ವರ್ಷಗಳಿಂದ? ಯಾವ ರೀತಿಯಲ್ಲಿ ಭಾರತ ಮಾನ ಕಳೆದುಕೊಳ್ಳುತ್ತಿದೆ? ಎಂಬುದನ್ನೆೆಲ್ಲ ಅಂಕಿ-ಅಂಶ ಸಮೇತ ಅವರು ಜನರ ಮುಂದಿಟ್ಟಿದ್ದರೆ ದೊಡ್ಡ ಉಪಕಾರವಾಗುತ್ತಿತ್ತು. 2010ರ ಒಂದೇ ವರ್ಷದಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ಕೇವಲ ಬ್ರಿಟನ್ ಒಂದರಲ್ಲೇ 80,000 ಅವಘಡಗಳು ದಾಖಲಾದವು ಎಂದು ಅಲ್ಲಿನ ಪ್ರಸಿದ್ಧ ಪತ್ರಿಕೆಗಳಾದ ಮಿರರ್ ಮತ್ತು ಡೈಲಿ ಮೇಲ್ ವರದಿ ಮಾಡಿದ್ದವು. ಅಷ್ಟು ಹಳೆಯದು ಬೇಡ, ಇತ್ತೀಚಿನ ಮಾಹಿತಿ ಇದ್ದರೆ ಕೊಡಿ ಎನ್ನುತ್ತೀರಾ? ತಗೊಳ್ಳಿ: ಕೇವಲ ಬ್ರಿಟನ್ ಒಂದರಲ್ಲೇ, ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ 49% ಮಂದಿ ಅಡುಗೆಮನೆಯಲ್ಲಿ ಸಂಭವಿಸುವ ಅಗ್ನಿ ಆಕಸ್ಮಿಕಗಳಿಂದ ತೊಂದರೆ ಅನುಭವಿಸುತ್ತಾರೆ. ಪ್ರತಿ ಹತ್ತರಲ್ಲಿ ಒಬ್ಬ ವ್ಯಕ್ತಿ ಮೈಗೆ ಬಿಸಿ ಎಣ್ಣೆೆಯನ್ನೋ ಬಿಸಿ ಮಾಂಸದ ತುಣುಕನ್ನೋ ಚೆಲ್ಲಿ ಚರ್ಮ ಸುಟ್ಟುಕೊಳ್ಳುತ್ತಾನೆ. ಪ್ರತಿ 40 ಮಂದಿಯಲ್ಲಿ ಒಬ್ಬ ವಿದ್ಯುದಾಘಾತಕ್ಕೆೆ ತುತ್ತಾಾಗುತ್ತಾನೆ. ಕ್ರಿಸ್‌ಮಸ್ ಮರಗಳನ್ನು ಶೃಂಗಾರ ಮಾಡಲು ಹೋಗಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆೆ ಸೇರುವವರ ಸಂಖ್ಯೆೆ 80,000! ಕ್ರಿಸ್‌ಮಸ್‌ಗೆಂದು ಬ್ರಿಟನ್ ಒಂದರಲ್ಲೇ 4 ಲಕ್ಷ ಟರ್ಕಿ ಕೋಳಿಗಳನ್ನು ಕೊಲ್ಲಲಾಗುತ್ತದೆ. ಕ್ರಿಸ್‌ಮಸ್ ಮತ್ತು ಹೊಸವರ್ಷದ ವಾರದಲ್ಲಿ ಬ್ರಿಟನ್‌ನಲ್ಲಿ 265 ಮಿಲಿಯನ್ ಪೈಂಟ್‌ಗಳಷ್ಟು ಮದ್ಯ ಮಾರಾಟವಾಗುತ್ತದೆ. ಜೊತೆಗೆ, ವರ್ಷದ ಉಳಿದ ದಿನಗಳಿಗಿಂತ 30% ಹೆಚ್ಚು ಅಪಘಾತಗಳೂ ಸಂಭವಿಸುತ್ತವೆ! ಇಷ್ಟೆೆಲ್ಲ ಇದ್ದರೂ ಆ ದೇಶದ ಯಾವ ಪತ್ರಿಕೆಯೂ ಕ್ರಿಸ್‌ಮಸ್‌ನಿಂದಾಗಿ ನಮ್ಮ ದೇಶ ವಿಶ್ವಮಟ್ಟದಲ್ಲಿ ಮಾನ ಕಳೆದುಕೊಳ್ಳುತ್ತಿದೆ ಎಂದು ಬರೆಯುವುದಿಲ್ಲ! ಬಹುಶಃ ಅಲ್ಲಿನ ಪತ್ರಕರ್ತರಿಗೆ ನಾಗೇಶ ಹೆಗಡೆಯವರಿಗಿರುವಷ್ಟು ಸತ್ಯನಿಷ್ಠತೆ ಇಲ್ಲವೆಂದು ಹೇಳೋಣವೇ?

ದೀಪಾವಳಿಯ ಮೂರು ದಿನ ಸುಡುವ ಪಟಾಕಿಯಿಂದಲೇ ಜಗತ್ತಿನ ಮಾಲಿನ್ಯ ಮೂರುಪಟ್ಟು ಹೆಚ್ಚುತ್ತದೆ ಎಂಬಂತೆ ಮಾತಾಡುವವರಿಗೆ ಒಂದು ಸ್ಟಾಟಿಸ್ಟಿಕ್ಸ್‌ ತೋರಿಸಬೇಕಿದೆ. ಕ್ರಿಸ್‌ಮಸ್ ಹಬ್ಬಕ್ಕೆೆ ಫರ್ ಅಥವಾ ಪೈನ್ ವೃಕ್ಷಗಳನ್ನು ಮನೆಯಲ್ಲಿ ನೆಟ್ಟು ಅಲಂಕಾರ ಮಾಡುವ ಪದ್ಧತಿ ಇರುವುದು ಗೊತ್ತಲ್ಲ? ಕೇವಲ ಹಬ್ಬದ ಹೊತ್ತಿಗೆ ಅಲಂಕಾರ ಮಾಡುವ ಏಕೈಕ ಉದ್ದೇಶದಿಂದ ಅಮೆರಿಕ 3.5 ಕೋಟಿ ವೃಕ್ಷಗಳನ್ನೂ ಯುರೋಪ್ 5 ಕೋಟಿ ಮರಗಳನ್ನೂ ಕಡಿಯುತ್ತವೆ ಎಂಬುದು ನಿಮಗೆ ಗೊತ್ತೆೆ? ಬೇರೆಲ್ಲ ಬಿಡಿ, ಕೇವಲ ಬ್ರಿಟನ್ ಒಂದೇ ಕ್ರಿಸ್‌ಮಸ್ ಹೊತ್ತಲ್ಲಿ ಬರೋಬ್ಬರಿ 80 ಲಕ್ಷ ಪೈನ್ ವೃಕ್ಷಗಳನ್ನು ಕಡಿದು ಬಳಸಿಕೊಳ್ಳುತ್ತದೆ. ಒಟ್ಟಾರೆ ಹೇಳುವುದಾದರೆ ಅಮೆರಿಕ ಮತ್ತು ಯುರೋಪ್ ಸೇರಿ ಪ್ರತಿ ವರ್ಷ ಅಜಮಾಸು 10 ಕೋಟಿ ಪೈನ್/ಫರ್ ವೃಕ್ಷಗಳನ್ನು ಕೇವಲ ಹಬ್ಬದ ಅಲಂಕಾರಕ್ಕಾಗಿ ಬಳಸಿಕೊಳ್ಳುತ್ತವೆ. ಮಾತ್ರವಲ್ಲ; ಇಷ್ಟೇ ಸಂಖ್ಯೆೆಯಲ್ಲಿ ಅಥವಾ ತುಸು ಹೆಚ್ಚೇ ಪ್ರಮಾಣದಲ್ಲಿ ಈ ಎಲ್ಲ ದೇಶಗಳು ಪ್ಲಾಸ್ಟಿಕ್ ಕ್ರಿಸ್‌ಮಸ್ ವೃಕ್ಷಗಳನ್ನೂ ಬಳಕೆ ಮಾಡುತ್ತವೆ ಎಂಬುದನ್ನು ಮರೆಯಬಾರದು. ಕೆನಡಾ ಒಂದೇ ಪ್ರತಿ ವರ್ಷ ಚೀನಾ, ತೈವಾನ್, ಕೊರಿಯಗಳಿಂದ ಆಮದಾಗಿ ಬರುವ ಪ್ಲಾಸ್ಟಿಕ್ ಕ್ರಿಸ್‌ಮಸ್ ಮರಗಳಿಗೆ ಸುರಿಯುವ ಮೊತ್ತ 56 ಮಿಲಿಯನ್ ಡಾಲರುಗಳು! ಗಮನಿಸಿ: ಈ ಎಲ್ಲ ಮರಗಳನ್ನೂ ತಯಾರು ಮಾಡುವುದು ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಎಂಬ ತೈಲೋತ್ಪನ್ನದಿಂದ. ಪಿವಿಸಿಯಿಂದ ಮಾಡಿದ ಯಾವ ಉತ್ಪನ್ನವನ್ನೂ ಮರುಸಂಸ್ಕರಣೆ ಮಾಡಲು ಸಾಧ್ಯವಿಲ್ಲ. ಬಳಸಿ ಎಸೆದ ವಸ್ತುಗಳೆಲ್ಲವೂ ಸಾವಿರಾರು ವರ್ಷ ಕೊಳೆಯದೆ ಪರಿಸರದಲ್ಲಿರುತ್ತವೆ. ಗಣೇಶನ ಮೂರ್ತಿಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಬೇಡಿ ಎಂದು ಅಲವತ್ತುಕೊಳ್ಳುವ ಸಾವಿರಾರು ಭಾರತೀಯ ಮಾಧ್ಯಮಗಳು ಕಾಣಸಿಗುವಂತೆಯೇ ಕ್ರಿಸ್‌ಮಸ್ ಹಬ್ಬಕ್ಕೆೆ ಈ ವರ್ಷದಿಂದ ನೈಸರ್ಗಿಕ ಅಥವಾ ಪ್ಲಾಾಸ್ಟಿಕ್ ವೃಕ್ಷ ಖರೀದಿಸಬೇಡಿ ಎನ್ನುವ ಒಂದೇ ಒಂದು ಪತ್ರಿಕೆಯನ್ನಾಗಲೀ ಟಿವಿ ಚಾನೆಲ್ಲನ್ನಾಗಲೀ ನೋಡಿದ್ದೀರಾ? ಭಾರತದ ಸೋಕಾಲ್ಡ್‌ ವೈಜ್ಞಾನಿಕ ಮನೋಭಾವದ ಬುದ್ಧಿವಂತರು ಈ ಎಲ್ಲ ವಿಷಯದಲ್ಲಿ ತಮ್ಮ ಅಭಿಪ್ರಾಯಮಂಡನೆ ಮಾಡಿದ್ದನ್ನು ಯಾರಾದರೂ ಕಂಡಿದ್ದೀರಾ?

ಪಟಾಕಿ ಹಚ್ಚಬೇಕು ಎನ್ನುವವನು ನಾನಲ್ಲ. ಪಟಾಕಿ ಹಚ್ಚಿ, ಈಗಾಗಲೇ ಇರುವ ಮಾಲಿನ್ಯಕ್ಕೆೆ ಮತ್ತಷ್ಟನ್ನು ಜಮೆ ಮಾಡೋಣ ಎಂಬ ದಡ್ಡತನವನ್ನಂತೂ ತೋರಲಾರೆ. ಆದರೆ ಹೇಗೆ ದೀಪಾವಳಿಯ ಪಟಾಕಿ ವಿಷಾನಿಲ ಹೊರಸೂಸುತ್ತದೋ ಅದೇ ವಿಷಾನಿಲ ಆ ಪಟಾಕಿಯನ್ನು ಕ್ರಿಸ್‌ಮಸ್ಸಿಗೋ ಹೊಸ ವರ್ಷಕ್ಕೋ ಹಚ್ಚಿದರೂ ಹೊರಬರುತ್ತದೆ ಎಂಬುದು ನಮಗೆ ಅರ್ಥವಾಗಬೇಕಿದೆ. ಹಿಂದೂಗಳ ಹಬ್ಬಕ್ಕೆೆ ವಿಷಾನಿಲ ಹೊರಬಿಟ್ಟು ಉಳಿದವರ ಹಬ್ಬದಲ್ಲಿ ಆಕ್ಸಿಜನ್ ಸೂಸುವ ಸೆಕ್ಯುಲರ್ ಪಟಾಕಿಗಳನ್ನು ನಾನಂತೂ ಕಂಡಿಲ್ಲ. ನಾಗರಪಂಚಮಿಯ ದಿನ ಹುತ್ತಕ್ಕೆೆ ಹಾಲೆರೆಯಬೇಡಿ ಎನ್ನುವ ಎಷ್ಟು ಮಂದಿ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಹಸಿದವರಿಗೆ ಊಟ ಹಾಕಿದ್ದಾರೆ? ಮಕ್ಕಳಿಗೆ ಹಾಲು ಕುಡಿಸಿದ್ದಾರೆ? ದೀಪಾವಳಿಯ ಪಟಾಕಿಯಿಂದ ಮೃಗಪಕ್ಷಿಗಳಿಗೆ ಭಯವಾಗುತ್ತದೆಂದು ಅಲವತ್ತುಕೊಳ್ಳುವ ಜೀವಪರ ಪ್ರಗತಿಪರ ಚಿಂತಕರಲ್ಲಿ ಎಷ್ಟು ಮಂದಿ ಸಸ್ಯಾಹಾರಿಗಳು? ಕುರಿ ಕೋಳಿ ಹಸು ಹಂದಿಗಳನ್ನು ಕೊಂದು ತಿನ್ನುವ ನೀವು ಆ ಮೃಗಪಕ್ಷಿಗಳಿಗೆ ಪಟಾಕಿಯಿಂದ ಭಯವಾಗುತ್ತದೆ ಎಂದು ವಕಾಲತ್ತು ಮಾಡುವುದು ಪರಪುರುಷನಿಂದ ಮುತ್ತಿಕ್ಕಿಸಿಕೊಳ್ಳುವುದು ಪಾಪವೆಂದು ವೇಶ್ಯೆೆಯೊಬ್ಬಳು ಉಪದೇಶ ಮಾಡುವುದಕ್ಕೆೆ ಸಮ ಅಲ್ಲವೆ? ನೀವು ಮಾಡುವ ಉಪದೇಶಗಳನ್ನು ನೀವೇ ಮೊದಲು ಪಾಲಿಸಿದ ಒಂದು ಉದಾಹರಣೆಯಾದರೂ ನಿಮ್ಮ ಜೀವನದಲ್ಲಿ ಇದೆಯೇ? ದೇವಸ್ಥಾನದಲ್ಲಿ ಗಂಟೆ ಬಾರಿಸುವುದರಿಂದ ಶಬ್ದಮಾಲಿನ್ಯ ಆದೀತೆಂದು ಬಡಬಡಿಸುವ ಅದೆಷ್ಟು ಜಾತ್ಯತೀತ ಗಂಜಿಗಳು ದಿನಕ್ಕೈದು ಬಾರಿ ಧ್ವನಿವರ್ಧಕದಲ್ಲಿ ಅರಚಾಡುವುದನ್ನು ಆಕ್ಷೇಪಿಸಿದ್ದೀರಿ? ಹೋಳಿ ಹಬ್ಬಕ್ಕೆೆ ನೀರು ಪೋಲಾಗುತ್ತದೆಂದು ಗೊಣಗಾಡುವ ಅದೆಷ್ಟು ಮಂದಿ ಜೀವಪರ ಸಾಕ್ಷಿಪ್ರಜ್ಞೆಗಳು ಉಳಿದವರ ಹಬ್ಬಗಳಲ್ಲಿ ಕುರಿಕೋಣಗಳ ನೆತ್ತರು ಹರಿದು ಕೆರೆಕೋಡಿ ಕಲುಷಿತವಾಗುವುದನ್ನು ಪ್ರಸ್ತಾಪಿಸಿದ್ದೀರಿ? ನಿಮ್ಮ ಆಕ್ಷೇಪ, ಗೊಣಗಾಟ, ಒದರಾಟಗಳೆಲ್ಲವೂ ಹಿಂದೂ ಹಬ್ಬಗಳಿಗಷ್ಟೇ ಸೀಮಿತವಾಗಿರುವುದರ ಗುಟ್ಟೇನು? ನಾಳೆಯೊಂದು ದಿನ ದೀಪಾವಳಿ ಹಬ್ಬಕ್ಕೆೆ ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಸುವ ಕಂಪೆನಿಗಳು ನಿಮಗೂ ಒಂದಷ್ಟು ಗಂಜಿ ಕಲ್ಪಿಸಿದರೆ ನಿಮ್ಮ ಮಾತಿನ ಧಾಟಿ ಬದಲಾದೀತೇ? ವಸ್ತುನಿಷ್ಠವಾಗಿ ನೀವು ಬರೆಯುವುದು, ಯೋಚಿಸುವುದು ಯಾವಾಗ? ದೀಪಾವಳಿಯ ಪಟಾಕಿ ಹೊಮ್ಮಿಸುವ ವಿಷಕ್ಕಿxತ ದೊಡ್ಡ ಮಟ್ಟದ ವಿಷವನ್ನು ಚಿಂತಕರೇ, ನೀವೇ ಕಾರಿಕೊಳ್ಳುತ್ತೀರಲ್ಲ, ಸರಿಯೇ?

Tags

Related Articles

Leave a Reply

Your email address will not be published. Required fields are marked *

Language
Close