About Us Advertise with us Be a Reporter E-Paper

ಅಂಕಣಗಳು

ಪೇಜಾವರ ಶ್ರೀ, ಕನ್ನಡ ನೆಲದ ವೈಚಾರಿಕ ವಾಗ್ವಾದದ ರೇಖೆ

- ಮುರುಗೇಶ ಆರ್ ನಿರಾಣಿ, ಬೀಳಗಿ ಶಾಸಕರು

ಶ್ರೀಕೃಷ್ಣಮಠದ ಈ ಬಾರಿಯ ಪರ್ಯಾಯೋತ್ಸವದಲ್ಲಿ ಸ್ವಾಮೀಜಿ ಕುಳಿತಕೊಳ್ಳುವ ಪಲ್ಲಕ್ಕಿಯನ್ನು ಮಾನವರು ಹೊರುವ ಪದ್ಧತಿ ರದ್ದಾದದ್ದು ಒಂದು ದೊಡ್ಡ ವೈಚಾರಿಕ ಬೆಳವಣಿಗೆ. ಜೀವಂತ, ಆರೋಗ್ಯಪೂರ್ಣ ಮನುಷ್ಯ ಇನ್ನೊಬ್ಬರ ಮೇಲೆ ಕುಳಿತು ಹೋಗುವದು ಅಸಹ್ಯ ಎಂದು ಸ್ವತಃ ಪೇಜಾವರ ಶ್ರೀಗಳು ಖಂಡಿಸಿದ್ದು ಮೆಚ್ಚತಕ್ಕ ಸಂಗತಿ.

‘ನಮ್ಮನ್ನು ಹಳೆಯ ಮೌಲ್ಯಗಳ ಪ್ರತಿಪಾದಕರೆಂದು ಕೆಲವರು ಕರೆಯುತ್ತಾರೆ. ಹಳೆಯ ಮೌಲ್ಯಗಳು ಯಾವವು? ಹೊಸ ಮೌಲ್ಯಗಳು ಯಾವವು? ವಿಂಗಡಿಸುವದು ಅಜ್ಞಾನದ ಅತಿರೇಕವಾಗುತ್ತದೆ. ಏಕೆಂದರೆ ಮೌಲ್ಯಗಳಲ್ಲಿ ಹಳೆಯದು ಹೊಸದು ಎಂಬುದಿಲ್ಲ’ ಇವು ಉಡುಪಿಯ ಪೇಜಾವರ ಶ್ರೀಗಳ ನೇರ ಮಾತುಗಳು

ಶ್ರೀಗಳು ಮುಧೋಳದ ನಮ್ಮ ಸಕ್ಕರೆ ಕಾರ್ಖಾನೆ, ವಿದ್ಯುತ್ ಘಟಕ, ಬ್ಯಾಂಕ್ ಶಾಖೆಗಳ ಅಡಿಗಲ್ಲು ಸಮಾರಂಭಕ್ಕೆ ಬಂದಿದ್ದರು. ಅವರನ್ನು ಹತ್ತಿರದಿಂದ ಕಾಣುವ, ತಣ್ಣಗೆ ಕುಳಿತು ಮಾತನಾಡುವ, ನಗುವ, ಚಿಂತಿಸುವ, ಚಕಿತಗೊಳ್ಳುವ, ಸಂತೋಷ ಪಡುವುದು ಆಗ ಸಾಧ್ಯವಾಯಿತು. ಅಂದು ಅನೇಕ ಸಂಗತಿಗಳು ನಡೆದವು. ಅವರೊಂದು ದೊಡ್ಡ ವಿಸ್ಮಯ. ಉತ್ಸಾಹದ ಚಿಲುಮೆ.

ಸ್ವಾಮೀಜಿ ಮುಂಜಾನೆ 4 ಗಂಟೆಯ ಪೂಜೆಗಾಗಿ ನಮ್ಮ ಸಿಬ್ಬಂದಿ ವರ್ಗದವರು ತುಂಬ ಎತ್ತರದ ಅಟ್ಟದ ಕಟ್ಟಡದಲ್ಲಿ ವ್ಯವಸ್ಥೆ ಮಾಡಿದ್ದರು. ಇದು ತಿಳಿದು ನಾನು ಗಾಬರಿಯಾದೆ. ಅವರಿಗೆ ಇಷ್ಟು ಎತ್ತರ ಏರುವುದು ಹೇಗೆ ಸಾಧ್ಯ? ಇದನ್ನೆಲ್ಲ ಯಾಕೆ ಯೋಚಿಸಲಿಲ್ಲ ಎಂದು ಸಿಬ್ಬಂದಿಗೆ ಕೇಳಿದೆ. ಈ ಸ್ಥಳವನ್ನು ಸ್ವಾಮೀಜಿ ಅವರ ಆಪ್ತ ಸಿಬ್ಬಂದಿಯವರೇ ಆಯ್ಕೆ ಮಾಡಿದ್ದಾರೆ. ಅವರ ಒಪ್ಪಿಗೆ ಪಡೆದೇ ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ನಮ್ಮ ಅಧಿಕಾರಿಗಳು ಉತ್ತರಿಸಿದರು. ನನಗೆ ಮಾತ್ರ ಕಳವಳದಲ್ಲಿಯೇ ನಿಂತುಕೊಂಡೆ. ಮುಂದೆ ಕೆಲವೇ ನಿಮಿಷಗಳಲ್ಲಿ ಸ್ವಾಮೀಜಿ ಬಂದರು. ಸರ ಸರನೆ 34 ಮೆಟ್ಟಿಲುಗಳನ್ನು ಏರಿದರು. ಅವರಲ್ಲಿ ಅಡಗಿರುವ ಚೈತನ್ಯ ಕಂಡು ಬೆರಗಾದೆ.

ಪೂಜೆ ಮುಗಿದ ಮೇಲೆ ಕೆಲವು ನಿಮಿಷದ ಮಾತುಕತೆಗೆ ನನ್ನನ್ನು ಕರೆದರು. ರಾಜಕಾರಣ, ಉದ್ದಿಮೆ, ವ್ಯವಹಾರ, ಸಾರ್ವಜನಿಕ ಕೆಲಸ ಎಂದು ಓಡಾಡುವ ನೀವು ಧ್ಯಾನದಿಂದ ಧಾವಂತ ಗೆಲ್ಲಬೇಕು ಎಂದು ಧ್ಯಾನದ ಬಗ್ಗೆ ಮಾತು ಆರಂಭಿಸಿದರು. ಧ್ಯಾನ ಎಂದಕೂಡಲೇ ಕೆಲವರು ತಪಸ್ಸು, ಹಿಮಾಲಯ, ಮೋಕ್ಷ ಎಂದು ಗಾಬರಿಯಾಗಿ ಸರಳವಾಗಿ ಹೇಳಬೇಕೆಂದರೆ ಧ್ಯಾನವೆಂದರೆ ತಾಳ್ಮೆ. ತಾಳ್ಮೆ ಪುಕ್ಕಲುತನ ಎಂದು ಕೆಲವರು ಭಾವಿಸುತ್ತಾರೆ. ಅದು ಆತ್ಮ ಶಕ್ತಿಯ ಸಂಕೇತ. ಧೈರ್ಯಶಾಲಿಗಳಲ್ಲಿ ಮಾತ್ರ ಅಖಂಡ ಸಹನೆ, ವಿನಯ, ತಾಳ್ಮೆ ಇರುತ್ತವೆ ಎಂದರು.

ಧ್ಯಾನವೆಂದರೆ ಮಣೆ ಹಾಕಿಕೊಂಡು ಕುಳಿತು, ಬಾಯಿ ಮುಚ್ಚಿ ಮೂಗಿನ ಹೊರಳೆಗಳಿಂದ ನಿಧಾನವಾಗಿ ಉಸಿರಾಡಿಸುವದಲ್ಲ. ನಾವು ಮಾಡಬೇಕಾದ ಕೆಲಸವನ್ನು ಶ್ರದ್ಧೆಯಿಂದ, ಅಚ್ಚುಕಟ್ಟಾಗಿ ಪ್ರೀತಿಯಿಂದ ಮಾಡುವುದೇ ಧ್ಯಾನ. ಕಲಾವಿದ ಒಂದು ಚಿತ್ರ ಬಿಡಿಸುವುದು, ಕೂಲಿ ತೋಟದಲ್ಲಿ ಕೆಲಸ ಮಾಡುವುದು, ರೈತ ಉಳುವುದು, ಅನ್ನ ಬೇಯಿಸುವುದು, ಮಗು ಓಡಾಡುವದು ಧ್ಯಾನವೇ .

ಧ್ಯಾನವೆಂದರೆ ಸಾವಧಾನ ಸ್ಥಿತಿ. ಒಮ್ಮೆ ಆ ಮನಸ್ಥಿತಿಯನ್ನು ತಂದುಕೊಂಡು ಬಿಟ್ಟರೆ ಎಂಥ ವೇಗ, ಒತ್ತಡದ ಸನ್ನಿವೇಶದಲ್ಲಿಯೂ ಒಳಗೆ ಪೂರ್ಣ ನೆಮ್ಮದಿಯಾಗಿ ತಣ್ಣಗೆ ಇರಲು ಸಾಧ್ಯ. ಅನಗತ್ಯ ವೈರ, ಸಂಘರ್ ಬಿಟ್ಟುಬಿಡಬೇಕು. ಇದು ಧ್ಯಾನದ ವಿರೋಧಿಕ್ರಿಯೆ. ಒತ್ತಡರಹಿತ ಒದುಕಿನಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುತ್ತದೆ. ಆರೋಗ್ಯಕ್ಕಿಂತ ಬೇರೆ ದೊಡ್ಡ ಸಂಪತ್ತು ಇಲ್ಲ ಅಲ್ಲವೇ? ಎಂದು ನಕ್ಕರು. ಇದನ್ನೆಲ್ಲ ಬದುಕಿನಲ್ಲಿ ಆಚರಣೆಗೆ ನನಗೆ ಮತ್ತು ನನ್ನ ಕುಟುಂಬದವರಿಗೆ ಸ್ವಾಮೀಜಿ ತಿಳಿ ಹೇಳಿದರು. ಅವರು ಆಡಿದ ಮಾತುಗಳು ಸದಾ ಮನಸ್ಸಿನಲ್ಲಿ ಎಚ್ಚರಿಕೆ ಗಂಟೆಯಾಗಿ ನಿಂತಿವೆ.

ನಮ್ಮ ಮಾತುಕತೆ ಮುಗಿದ ಮೇಲೆ ಮಾಧ್ಯಮದ ತಂಡ ಬಂದಿತು. ಅವರ ಸಹಾಯಕ ಬಂದು ಮಾಧ್ಯಮದವರು ಭೇಟಿಗೆ ಬಂದಿರುವ ವಿಷಯ ತಿಳಿಸಿದರು. ಸ್ವಾಮೀಜಿ ಒಪ್ಪಿಗೆ ನೀಡಿದರು. ಅವರನ್ನು ಸಿಟ್ಟಿಗೆಬ್ಬಿಸುವ, ಛೇಡಿಸುವ, ಕಾಡುವ ಹಲವಾರು ಪ್ರಶ್ನೆಗಳನ್ನು ಮಾಧ್ಯಮ ಮಿತ್ರರು ಕೇಳಿದರು. ಅವುಗಳಿಗೆಲ್ಲ ಸ್ವಾಮೀಜಿ ಸಹಜವಾಗಿ ಮತ್ತು ಪರಿಣಾಮಕಾರಿಯಾಗಿ ಉತ್ತರ ನೀಡಿದರು.

ಬಿಜೆಪಿ ಏಜೆಂಟ್ ಎಂದು ಆರೋಪ ಕೇಳಿಬರುತ್ತದೆ?’ ಒಬ್ಬ ಪತ್ರಕರ್ತ ನೇರವಾಗಿ ಪ್ರಶ್ನಿಸಿದರು. ನನಗೆ ಶ್ರೀಮತಿ ಇಂದಿರಾ ಗಾಂಧಿಯವರೊಂದಿಗೂ ಉತ್ತಮ ಸಂಬಂಧ ಇತ್ತು. ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಅವರೇ ಅನೇಕ ಬಾರಿ ನನ್ನನ್ನು ಸಂಪರ್ಕಿಸಿ ಮಾತನಾಡಿದ್ದಿದೆ. ನಾವು ಮೊದಲಿನಿಂದಲೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೇವೆ. ಎಲ್ಲ ಪಕ್ಷದ ನಾಯಕರೊಂದಿಗೆ ಒಳ್ಳೆಯ ಸಂಪರ್ಕ ಇದೆ. ನಾವು ಇಂಥವರಿಗೇ, ಇದೇ ಪಕ್ಷಕ್ಕೇ ಮತ ಹಾಕಿ ಎಂದು ಯಾವತ್ತೂ ಪ್ರಚಾರ ಅದು ನಮ್ಮ ಕೆಲಸ ಅಲ್ಲ. ಅನವಶ್ಯಕವಾಗಿ ಕೆಲವರು ನಮ್ಮನ್ನು ರಾಜಕೀಯಕ್ಕೆ ಎಳೆದು ತಳುಕು ಹಾಕುವ ಪ್ರಯತ್ನ ಮಾಡುತ್ತಾರೆ ಎಂದು ಶ್ರೀಗಳು ಉತ್ತರಿಸಿದರು.

ಸ್ವಾಮೀಜಿ ನಿಮ್ಮ ಮಠದಲ್ಲಿಯ ಪಂಕ್ತಿಭೇದ ಆಚರಣೆ ನಿಲ್ಲಬೇಕಾಗಿದೆ. ಸಮಾಜದ ಎಲ್ಲ ಸ್ತರಗಳ ಜನರು ಪಂಕ್ತಿಭೇದ ಇಲ್ಲದೆ ಊಟ ಮಾಡಬೇಕು. ಇದಕ್ಕೆ ಅವಕಾಶ ಮಾಡಿಕೊಡುವಿರಾ ಎಂದು ಮತ್ತೊಬ್ಬ ಪತ್ರಕರ್ತ ಪ್ರಶ್ನಿಸಿದರು.

ಮಠಕ್ಕೆ ಯಾರೇ ಬಂದರೂ ಒಟ್ಟಿಗೆ ಕುಳಿತು ಸಹ ಭೋಜನ ಮಾಡುವ ಅವಕಾಶವಿದೆ. ಅದರಲ್ಲಿ ಜಾತಿ ಭೇದ ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಬಗ್ಗೆ ಕೋರಿಕೆ ಇಡುತ್ತಾರೆ. ಅವರಿಗೆ ಚೌಕದಲ್ಲಿ ಉಣ ಬಡಿಸುತ್ತೇವೆ. ಇದನ್ನು ಪಂಕ್ತಿಭೇದ ಎಂದು ಕೆಲವರು ಅರ್ಥೈಸಿ ಆರೋಪ ಮಾಡುತ್ತಾರೆ ಎಂದು ಸ್ವಾಮೀಜಿ ಉತ್ತರಿಸಿದರು.

ವಿಚಾರವಾದಿಗಳು, ಪ್ರಗತಿ ಪರರೊಂದಿಗೆ ತಮ್ಮ ಭಿನ್ನಾಭಿಪ್ರಾಯದ ತಿಕ್ಕಾಟ ಸದಾ ನಡೆಯುತ್ತದಲ್ಲ ಎಂಬ ಇನ್ನೊಂದು ಪ್ರಶ್ನೆಗೆ ಸ್ವಾಮೀಜಿ ಹೀಗೆ ಉತ್ತರಿಸಿದರು: ಹೌದು! ಮುಕ್ತ ಚರ್ಚೆಗೆ ನಾವು ಸದಾ ಸಿದ್ಧ. ಅದು ಸಂವಾದ, ಜಗಳ ಅಲ್ಲ. ಚರ್ಚೆಯ ಮೂಲಕವೇ ತಿಳಿಯಾಗಬೇಕು. ನಾವು ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇವೆ. ದಲಿತರಿಗೆ ಹೆಚ್ಚು ಗೌರವ ತೋರುತ್ತೇವೆ, ಅವರ ಕೀಳರಿಮೆ ನಿವಾರಿಸುವದು ಬಹು ಮುಖ್ಯ ಕೆಲಸವಾಗಿದೆ.

ಸುಮಾರು 45 ನಿಮಿಷ ನಡೆದ ಈ ಮಾತುಕತೆ ಸ್ವಾಮೀಜಿ ಅವರ ಘನತೆಗೆ ಸಾಕ್ಷಿಯಾಗಿತ್ತು. ನಂತರ ಸ್ವಾಮೀಜಿ ಮುಧೋಳದ ಹರಿಜನ ಕಾಲನಿಗೆ ಹೋಗಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು. ಹರಿಜನರು, ಹಿಂದುಳಿದವರು ಉದ್ದಿಮೆಗಳನ್ನು ಮಾಡಬೇಕು. ವ್ಯಾಪಾರ ವ್ಯವಹಾರದಲ್ಲಿ ತೊಡಗಬೇಕು, ಆರ್ಥಿಕ ಉನ್ನತಿ ಸಾಧಿಸಬೇಕು. ಕೃಷಿ ಮಾಡ ಬಯಸುವ ಸಮಾಜ ರೈತರಿಗೆ ಸರಕಾರ ಉದಾರವಾಗಿ ಭೂಮಿ ನೀಡಬೇಕು ಎಂದು ಸ್ವಾಮೀಜಿ ಸಭೆಯಲ್ಲಿ ಮಾತನಾಡಿದರು.

ಪಾದರಸದಂತೆ ಚುರುಕಾಗಿ ಓಡಾಡುವ ಪೇಜಾವರ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರಿಗೆ 80 ದಾಟಿದೆ. ಅವರ ಮಾತು ಸ್ಪಷ್ಟ. ಎಂಥ ಪ್ರಶ್ನೆ ಎದುರಾದರೂ ವಿಚಲಿತರಾಗುವುದಿಲ್ಲ. ಅವರ ಎದೆಗಾರಿಕೆ, ಧೈರ್ಯ, ನೇರ ನುಡಿಯಿಂದ ಎಲ್ಲರನ್ನೂ ಗೆಲ್ಲುತ್ತಾರೆ. ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಾಮ. ತಂದೆ ನಾರಾಯಣಚಾರ್ಯ, ತಾಯಿ ಕಮಲಮ್ಮ. ಅಚ್ಚರಿಯ ಸಂಗತಿಯೆಂದರೆ ಸ್ವಾಮೀಜಿ ಹೆಚ್ಚು ಶಿಕ್ಷಣ ಪಡೆದಿಲ್ಲ. ಓದಿದ್ದು ಕೇವಲ 5ನೇ ವರ್ಗದವರೆಗೆ ಮಾತ್ರ. ಅವರು ದೇಶ-ವಿದೇಶಗಳ ಗಣ್ಯರೊಂದಿಗೆ ಅನೇಕ ಮಹತ್ವದ ವಿಷಯಗಳನ್ನು ಚರ್ಚಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮೀಜಿ ಅವರನ್ನು ದೇಹಲಿಯ ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿ ಚರ್ಚಿಸಿದರು. ಮಲೆನಾಡಿನ ನಕ್ಸಲ್ ಚಟುವಟಿಕೆ ನಿಲ್ಲಿಸಲು ಅವರು ನಡೆಸಿದ ಪ್ರಯತ್ನ ಮೆಚ್ಚತಕ್ಕಂತಹುದು. ಮಲೆನಾಡಿನ ಅರಣ್ಯವಾಸಿಗಳಿಗೆ ಕೆಲವು ಮೂಲಭೂತ ಸೌಲಭ್ಯಗಳನ್ನು ಸರಕಾರದಿಂದ ಕೊಡಿಸಿದ್ದಾರೆ.

ಪೇಜಾವರ ಸ್ವಾಮೀಜಿಯವರು ಪೀಠಾರೋಹಣ ಮಾಡಿ 80 ವರ್ಷ ಪೂರೈಸಿದ ಉತ್ಸವ ಉಡುಪಿಯಲ್ಲಿ ಇತ್ತೀಚೆಗೆ ನಡೆಯಿತು. ಅವರಿಗೆ 87ರ ಪ್ರಾಯ. ಆದರೆ ದೈರ್ಯವಾಗಿ ವಾಗ್ವಾದಕ್ಕೆ ಸಜ್ಜಾಗುತ್ತಾರೆ. ಎಂದೂ ಉದ್ವೇಗಕ್ಕೆ ಒಳಗಾಗುವುದಿಲ್ಲ. ಇಂಥ ಸ್ವಾಮೀಜಿ ಅವರನ್ನು ಭೇಟಿಯಾಗುವ ಅವರೊಂದಿಗೆ ಒಂದಿಷ್ಟು ಸಮಯ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನ ಭಾಗ್ಯವೆಂದು ಭಾವಿಸಿದ್ದೇನೆ.

ನಿರೂಪಣೆ: ಮಲ್ಲಿಕಾರ್ಜುನ ಹೆಗ್ಗಳಗಿ

Tags

Related Articles

Leave a Reply

Your email address will not be published. Required fields are marked *

Language
Close