ಹೀಗೂ ಹರಡಬಹುದು ಕಸ್ತೂರಿ ಕನ್ನಡದ ಕಂಪು!

Posted In : ಅಂಕಣಗಳು, ತಿಳಿರು ತೋರಣ

ಅಭಿನವ ಪ್ರಕಾಶನ ಬೆಂಗಳೂರು ಇವರು 2013ರಲ್ಲಿ ಪ್ರಕಟಿಸಿದ ಈ ಪುಸ್ತಕದ ಹೆಸರು ‘beyond words’. ಕನ್ನಡದ ಆಯ್ದ ಕೆಲವು ಪ್ರಖ್ಯಾತ ಪ್ರಾತಿನಿಧಿಕ ಕವಿತೆಗಳು, ಪಕ್ಕದಲ್ಲೇ ಇಂಗ್ಲಿಷ್ ಅನುವಾದದೊಂದಿಗೆ ಪ್ರಕಟಗೊಂಡಿರುವ ಒಂದು ವಿಶಿಷ್ಟ ಸಂಕಲನ. ವಿಶಿಷ್ಟ ಮಾತ್ರವಲ್ಲ ಅನನ್ಯ ಎಂದರೂ ಸರಿಯೇ. ಈ ಪುಸ್ತಕದ ಮೂಲ ಉದ್ದೇಶ ಕನ್ನಡದ ಕಂಪನ್ನು ಕನ್ನಡೇತರರಿಗೂ ತಲುಪಿಸುವುದು. ಅದನ್ನು ಅತ್ಯಂತ ಸಮರ್ಥವಾಗಿ ಕಾರ್ಯಾಚರಣೆಗೆ ತಂದ ಒಂದು ಕಿರುಪ್ರಯತ್ನದ ವಿವರಗಳು ನನಗೀಗ ಸಿಕ್ಕಿವೆ. ಒಳ್ಳೆಯ ವಿಚಾರವನ್ನು ನಿಮಗೂ ತಿಳಿಸಬೇಕೆಂದು ಈ ವಾರದ ಅಂಕಣಕ್ಕೆ ಈ ವಿಷಯವನ್ನು ಆಯ್ದುಕೊಂಡಿದ್ದೇನೆ. ಮತ್ತೆ, ನವೆಂಬರ್‌ನಲ್ಲಿ ಕನ್ನಡದ ಕುರಿತು ಒಂದು ಲೇಖನವನ್ನಾದರೂ ಬರೆಯದಿದ್ದರೆ ನಾನೂ ಒಬ್ಬ ನವೆಂಬರ್ ಕನ್ನಡಿಗ ಅಂತ ಅನಿಸಿಕೊಳ್ಳೋದು ಬೇಡ್ವೇ?

ಮೊದಲಿಗೆ ‘ಬಿಯಾಂಡ್ ವರ್ಡ್ಸ್’ ಪುಸ್ತಕ ಮತ್ತದರ ಲೇಖಕರ ಬಗ್ಗೆ ತಿಳಿಸುತ್ತೇನೆ. ಡಾ. ಮೈಸೂರು ನಟರಾಜ – ಈ ಹೆಸರನ್ನು ನೀವು ಕೇಳಿರಬಹುದು, ಓದಿರಬಹುದು. ನನ್ನ ಅಂಕಣಬರಹಗಳಲ್ಲಿ ಆಗಾಗ ಅವರ ಪ್ರಸ್ತಾವವಾಗುತ್ತದೆ. ಅವರೊಬ್ಬ ಪ್ರಖ್ಯಾತ ಅಮೆರಿಕನ್ನಡಿಗರು. ವೃತ್ತಿಯಲ್ಲಿ ಅಣುವಿಜ್ಞಾನಿ (ಈಗ ನಿವೃತ್ತಿ ತಗೊಂಡಿದ್ದಾರೆ). ಪ್ರವೃತ್ತಿಯಲ್ಲಿ ಕನ್ನಡದ ಅಣುಅಣುವನ್ನೂ ಆಘ್ರಾಣಿಸುವವರು, ಆನಂದಿಸುವವರು, ಆರಾಧಿಸುವವರು. ಕಳೆದ ನಾಲ್ಕೈದು ದಶಕಗಳಲ್ಲಿ ಅವರು ವಿದೇಶಿ ನೆಲದಲ್ಲಿ ಕನ್ನಡ ಸಾಹಿತ್ಯ ಕೃಷಿ ಮಾಡಿ ಹುಲುಸಾದ ಬೆಳೆ ತೆಗೆದಿದ್ದಾರೆ. ಕವಿತೆ, ನಾಟಕ, ಸಣ್ಣಕಥೆ, ಕಾದಂಬರಿ, ಪ್ರಬಂಧ, ಅಂಕಣಬರಹ, ಅನುವಾದ, ಉದ್ಗ್ರಂಥಗಳ ಸಂಪಾದಕತ್ವ – ಹೀಗೆ ಬಹುವಿಧದಲ್ಲಿ ಅಕ್ಷರಪರಿಚಾರಿಕೆ ನಡೆಸಿದ್ದಾರೆ.

ಸಂಪೂರ್ಣವಾಗಿ ಅರ್ಹತೆಯೊಂದರಿಂದಲೇ ಕೆಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಅಮೆರಿಕನ್ನಡಿಗ ಎಂಬ ಸೀಮಿತ ಚೌಕಟ್ಟು ಬೇಡ, ಪ್ರಸಕ್ತ ಕನ್ನಡ ಬರಹಗಾರರೆಲ್ಲರನ್ನೂ ಸಮಷ್ಟಿಯಾಗಿ ಪರಿಗಣಿಸಿದರೆ ನಟರಾಜ ಮುಂಚೂಣಿಯಲ್ಲಿರುತ್ತಾರೆ. ವೈಯಕ್ತಿಕವಾಗಿ ನನಗವರು ಪರಿಚಿತರು, ಆತ್ಮೀಯರು, ಹಿರಿಯ ಹಿತೈಷಿ. ವಾಷಿಂಗ್ಟನ್ ಡಿಸಿ ಪ್ರದೇಶದಲ್ಲೇ ಅವರ ವಾಸ್ತವ್ಯವೂ ಆದ್ದರಿಂದ ಆಗಾಗ ಭೇಟಿಯಾಗುತ್ತಿರುತ್ತೇವೆ. ದೂರವಾಣಿಯಲ್ಲಿ ಲೋಕಾಭಿರಾಮ ಹರಟೆ ಸಮಾಚಾರ ವಿನಿಮಯ ಮಾಡಿಕೊಳ್ಳುತ್ತೇವೆ. ಬರವಣಿಗೆ ಅಲ್ಲದೆ ಬೇರೆ ಕೆಲ ವಿಷಯಗಳಲ್ಲೂ ಫ್ರೀಕ್ವೆನ್ಸಿ ಮ್ಯಾಚ್ ಆಗುವುದರಿಂದ ನಮ್ಮಿಬ್ಬರದು ಸದರ-ಸಾದರ ಸ್ನೇಹ.

2013ರಲ್ಲಿ ಡಾ.ನಟರಾಜ ‘ಬಿಯಾಂಡ್ ವರ್ಡ್ಸ್’ ಕೃತಿ ರಚಿಸಿದರು. ಆ ವರ್ಷ ಹ್ಯೂಸ್ಟನ್‌ನಲ್ಲಿ ನಡೆದ ಕನ್ನಡ ಸಾಹಿತ್ಯರಂಗದ ದ್ವೈವಾರ್ಷಿಕ ಸಮ್ಮೇಳನದಲ್ಲಿ, ಭಾರತದಿಂದ ಮುಖ್ಯಅತಿಥಿಯಾಗಿ ಬಂದಿದ್ದ ಪ್ರೊ. ಕೆ.ವಿ.ತಿರುಮಲೇಶರ ಸಮ್ಮುಖದಲ್ಲಿ ಇದು ಬಿಡುಗಡೆಯಾಯ್ತು. ಅಮೆರಿಕನ್ನಡಿಗ ಬರಹಗಾರರನೇಕರ ಪುಸ್ತಕ ಪ್ರಕಟಣೆಗೆ ನೆರವಾಗಿರುವ ಅಭಿನವ ಪ್ರಕಾಶನದ ರವಿಕುಮಾರ್ ಅವರ ಮುತುವರ್ಜಿಯಿಂದಾಗಿ ‘ಬಿಯಾಂಡ್ ವರ್ಡ್ಸ್’ ಕೃತಿ ಬೆಂಗಳೂರಿನಲ್ಲಿ ಕೆಲವು ಕನ್ನಡ ಪತ್ರಿಕೆಗಳನ್ನೂ ತಲುಪಿತು. ಅವುಗಳ ಪೈಕಿ ಒಂದೆರಡು ಪತ್ರಿಕೆಗಳು ಸಾದರ-ಸ್ವೀಕಾರದಲ್ಲಿ ಪುಸ್ತಕದ ಹೆಸರು ಮತ್ತು ಮುಖಬೆಲೆ ಪ್ರಕಟಿಸಿ ಕೈತೊಳೆದುಕೊಂಡವು. ಅದರ ಬಿಯಾಂಡ್ ಏನೂ ಆಗಲಿಲ್ಲ. ನಿರೀಕ್ಷೆ-ಅಪೇಕ್ಷೆಗಳೂ ಸಾಧುವಲ್ಲವೆನ್ನಿ. ತಲೆಮಾಸಿದವನೊಬ್ಬ ಗಣೇಶನ ಕುರಿತು ವಿಕೃತಮನಸ್ಸಿಂದ ಪುಸ್ತಕ ಬರೆದರೆ ಮಾಧ್ಯಮಗಳು ಪ್ರಚಾರ ಕೊಡುತ್ತವೆ.

ನಿಜವಾದ ಮೌಲಿಕ ಕೃತಿಗಳು ಹೇಳಹೆಸರಿಲ್ಲವಾಗುತ್ತವೆ. ಗೊತ್ತಿರುವ ವಿಚಾರ. ಹಳಿದು ಉಪಯೋಗವಿಲ್ಲ. ಸರಿ, ಮೌಲಿಕ ಅನಿಸುವಂಥದ್ದೇನಿದೆ ಈ ಪುಸ್ತಕದಲ್ಲಿ ಎಂದು ನಿಮಗೆ ಕುತೂಹಲ ಇರಬಹುದು. ಇದರಲ್ಲಿರುವ ಕವಿತೆಗಳ ಪಟ್ಟಿ ನೋಡಿದರೆ, ಇಂಗ್ಲಿಷ್ ಅನುವಾದವಿಲ್ಲದೆ ಅವಷ್ಟೇ ಇದ್ದಿದ್ದರೂ ಇದೊಂದು ಸಂಗ್ರಹಯೋಗ್ಯ ಪುಸ್ತಕವೇ! ಡಿವಿಜಿಯವರ ‘ವನಸುಮ’ದಿಂದ ಆರಂಭಗೊಂಡು, ಬೇಂದ್ರೆಯವರ ‘ಕುರುಡು ಕಾಂಚಾಣ’, ಕುವೆಂಪುರವರ ‘ದೇವರ ರುಜು’, ಅಡಿಗರ ‘ಯಾವ ಮೋಹನ ಮುರಲಿ’, ನರಸಿಂಹಸ್ವಾಮಿಯವರ ‘ಕಾಮದಹನ’, ಲಂಕೇಶರ ‘ಅವ್ವ’, ಲಕ್ಷ್ಮೀನಾರಾಯಣಭಟ್ಟರ ‘ಮಗನಿಗೊಂದು ಪತ್ರ’, ಪ್ರತಿಭಾ ನಂದಕುಮಾರರ ‘ನಾನು ಪುಟ್ಟಿ ಮಳೆ ನೋಡಿದ್ದು’- ಹೀಗೆ 31 ವಿವಿಧ ಕವಿ/ಕವಯಿತ್ರಿಯರ ಒಟ್ಟು 42 ಕವಿತೆಗಳು. ಇವುಗಳ ಆಯ್ಕೆ ಮತ್ತು ಮಾರ್ಗದರ್ಶನ ಎಚ್ಚೆಸ್ವಿಯವರದು. ಅವರದೇ ಒಂದು ನೀಳ್ಗವಿತೆ, ವೈಯಕ್ತಿಕ ದುಃಖದ ಸನ್ನಿವೇಶದಲ್ಲಿ ಬರೆದ ‘ಉತ್ತರಾಯಣ’ ಇದರಲ್ಲಿದೆ. ಸ್ವತಃ ನಟರಾಜರೇ ಸೆ.11ರ ದುರ್ಘಟನೆ ಸಂದರ್ಭದಲ್ಲಿ ಬರೆದಿದ್ದ ‘ಅಯ್ಯೋ ಕುಸಿಯಿತೇ ಸಿರಿಕೇಂದ್ರ ಸಹ ಇದೆ. ಪ್ರತಿಯೊಂದು ಕವಿತೆಯ ಪಕ್ಕದಲ್ಲೇ ಇಂಗ್ಲಿಷ್ ಅನುವಾದ. ಚಿಕ್ಕ-ಚೊಕ್ಕ ಕವಿಪರಿಚಯ ಎರಡೂ ಭಾಷೆಗಳಲ್ಲಿ, ಆಯಾಯ ಕವಿತೆಯ ಕೆಳಗೆ. ನಟರಾಜರ ಉಪಯುಕ್ತ ಕೆಲಸವನ್ನು ಮೆಚ್ಚಿ ಸಿ.ಎನ್.ರಾಮಚಂದ್ರನ್ ಬರೆದ ಮುನ್ನುಡಿ. ಪುಸ್ತಕದ ಉಪಯುಕ್ತತೆಗೆ ಒಂದು ಚಿಕ್ಕ ನಿದರ್ಶನ ಹೇಳುತ್ತೇನೆ.

ನನ್ನೊಬ್ಬ ಸ್ನೇಹಿತ ಜಯಕುಮಾರ್ ಎಂಬುವವರು ಮೂಲತಃ ಬೆಂಗಳೂರಿನವರು, ಈಗ ಅಮೆರಿಕದಲ್ಲಿ ಐಟಿ ಉದ್ಯೋಗದಲ್ಲಿರುವವರು ಒಮ್ಮೆ ಇಲ್ಲಿ ನಮ್ಮನೆಗೆ ಬಂದಿದ್ದರು. ಉಭಯಕುಶಲೋಪರಿ ಮಾತಾಡುತ್ತಿದ್ದಾಗ ಅಲ್ಲೇ ಟೀಪಾಯ್ ಮೇಲಿದ್ದ ‘ಬಿಯಾಂಡ್ ವರ್ಡ್ಸ್ ಪುಸ್ತಕ ಕಣ್ಣಿಗೆಬಿತ್ತು. ಎತ್ತಿಕೊಂಡು ಪುಟ ತಿರುವಿದರು. ಕುತೂಹಲ ಹುಟ್ಟಿರಬೇಕು. ವನಸುಮ ಮತ್ತು ಕುರುಡುಕಾಂಚಾಣ ಕವಿತೆಗಳ ಇಂಗ್ಲಿಷ್ ಅನುವಾದವನ್ನೋದಿದ ಅವರ ಉದ್ಗಾರ: ‘ವಾವ್! ಈ ಕವಿತೆಗಳ ಇಷ್ಟೊಂದು ಗಹನ ಅರ್ಥ ನನಗೆ ಗೊತ್ತೇ ಇರಲಿಲ್ಲ. ಸರಳ ಇಂಗ್ಲಿಷ್‌ನಲ್ಲಿ ಓದಿದಾಗ ತಿಳಿದು ರೋಮಾಂಚನವಾಯ್ತು. ಕನ್ನಡಕವಿಗಳ ಬಗೆಗಿನ ಗೌರವ ಇಮ್ಮಡಿಯಾಯ್ತು!’ ಅದು ಉತ್ಪ್ರೇಕ್ಷೆಯಲ್ಲ. ಕನ್ನಡ ಭಾಷೆಯನ್ನು ಸಾಹಿತ್ಯಿಕವಾಗಿ ಓದಿ-ಅರಿಯದ, ಆಳವಾದ ಸಾಹಿತ್ಯಾಧ್ಯಯನ ಇಲ್ಲದ ಯಾರಿಗೇ ಆದರೂ- ಉದಾಹರಣೆಗೆ ಎರಡನೇ ತಲೆಮಾರಿನ ಅಮೆರಿಕನ್ನಡಿಗ ಮಕ್ಕಳಿಗೆ- ಅಂಥದೊಂದು ರೋಮಾಂಚನ ಈ ಪುಸ್ತಕವನ್ನೋದಿದರೆ ಆಗಿಯೇ ಆಗುತ್ತದೆ.

ಇದಿಷ್ಟು ‘ಬಿಯಾಂಡ್ ವರ್ಡ್ಸ್’ ಪುಸ್ತಕದ ವಿಚಾರವಾಯ್ತು. ಈಗ ಇದನ್ನು ಮತ್ತಷ್ಟು ಬಿಯಾಂಡ್ ಒಯ್ದ ಒಬ್ಬ ಭಾಷಾಭಿಮಾನಿ ಕನ್ನಡತಿಯ ಬಗ್ಗೆ ಹೇಳುತ್ತೇನೆ. ಈಕೆಯ ಹೆಸರು ಸುಪ್ರಿಯಾ ನಾರಾಯಣ್. ಬೆಂಗಳೂರಿನಲ್ಲಿ ಹುಟ್ಟಿಬೆಳೆದು, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಓದಿ, ಹತ್ತು ವರ್ಷಗಳ ಕಾಲ (ಅದರಲ್ಲಿ ನಾಲ್ಕು ವರ್ಷ ಅಮೆರಿಕದಲ್ಲೂ) ಇನ್ಫೊಸಿಸ್, ಆಕ್ಸೆಂಚರ್ ಮುಂತಾದ ಐಟಿ ಕಂಪನಿಗಳಲ್ಲಿ ‘ಮಣ್ಣು ಹೊತ್ತು’, ಅಂಥ ಉದ್ಯೋಗಕ್ಕಿಂತ ಹಳ್ಳಿಯ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕಿ ತಾನಾಗುತ್ತೇನೆಂದು ಕಳೆದವರ್ಷ ಅಮೆರಿಕ ವಾಸಕ್ಕೆ, ಐಟಿ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಬೆಂಗಳೂರಿನ ಉಪನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದವಳು.

ನನಗೆ 2014ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ‘ಅಕ್ಕ’ ಸಮ್ಮೇಳನ ಸಂದರ್ಭದಲ್ಲಿ ಪರಿಚಯವಾದಳು. ಒಮ್ಮೆ ವಾಷಿಂಗ್ಟನ್‌ಗೂ ಬಂದಿದ್ದಳು. ‘ಕನ್ನಡ ಎನೆ ಕಿವಿ ನಿಮಿರುವ’ ಚಿಗರೆ, ಉತ್ಸಾಹದ ಚಿಲುಮೆ ಸುಪ್ರಿಯಾ. ಬೆಂಗಳೂರಿಗೆ ಶಿಪ್ಟ್ ಆದಮೇಲೂ ಸಂಪರ್ಕದಲ್ಲಿದ್ದಾಳೆ. ಅವಳ ಶಾಲಾಚಟುವಟಿಕೆಗಳ ಬಗ್ಗೆ, ‘ಸಮ್ಮರ್‌ಕ್ಯಾಂಪ್‌ನಲ್ಲಿ ಮಕ್ಕಳಿಗೆ ಆರ್ಟ್ ಟೀಚರ್ ಆಗಿ ಬರಬೇಕೆಂದು ಶಾಲೆಯವರು ಕೇಳಿದ್ದಕ್ಕೆ ಹೋಗಿ ಮಕ್ಕಳಿಗೆ ಚಿತ್ರಕಲೆ, ಕ್ರಾಫ್ಟ್ ‌ವರ್ಕ್ ಇತ್ಯಾದಿ ಕಲಿಸಿಕೊಡುವಾಗಲೇ ವಿಶ್ವವಿನೂತನ ವಿದ್ಯಾಚೇತನ ಹಾಡನ್ನೂ ಕಲಿಸಿದೆ. ಪುಣ್ಯಕೋಟಿಯ ಕಥೆ ಹೇಳಿ ಮಕ್ಕಳಿಂದ ಅಭಿನಯ ಮಾಡಿಸಿದೆ. ಅವರೆಲ್ಲ ಭಾವುಕರಾಗಿ ಕಣ್ಣೀರುಗರೆದರು… ಮುಂತಾಗಿ ಸಮಾಚಾರಗಳನ್ನು ತಿಳಿಸುತ್ತಾಳೆ.

ಒಂದೆರಡು ತಿಂಗಳ ಹಿಂದೆ ವಾಟ್ಸಾಪಲ್ಲಿ ಮೆಸೇಜು ಕಳಿಸಿದ್ದಳು: ‘ಜೋಶಿ ಸರ್, ನಿಮಗೆ ಕನ್ನಡದ ಯಾವ್ದಾದ್ರೂ ಪುಸ್ತಕ ಇಂಗ್ಲಿಷಲ್ಲಿ ಇರೋದು ಗೊತ್ತಿದೆಯಾ? ನಮ್ಮ ಶಾಲೆಯಲ್ಲಿ ತಿಂಗಳಿಗೊಂದು ಬುಕ್ ರಿವ್ಯೂ ಕಾರ್ಯಕ್ರಮ ಇರುತ್ತದೆ. ಇದುವರೆಗೆ ಬರೀ ಇಂಗ್ಲಿಷ್ ಪುಸ್ತಕಗಳನ್ನೇ ವಿಮರ್ಶಿಸಿರೋದು. ಯಾವ್ದಾದ್ರೂ ಕನ್ನಡ ಕೃತಿ, ಕನ್ನಡ ಬಾರದವರಿಗೂ ಗೊತ್ತಾಗುವಂತೆ ಪರಿಚಯಿಸಬೇಕು ಅಂತಿದ್ದೇನೆ. ಸಹಾಯ ಮಾಡುವಿರಾ? ಎಂದು ಕೇಳಿದ್ದಳು. ನನಗೆ ತತ್‌ಕ್ಷಣ ನೆನಪಾದದ್ದು, ಅವಳ ಉದ್ದೇಶಕ್ಕೆ ಹೇಳಿಮಾಡಿಸಿದಂತಿರುವ ‘ಬಿಯಾಂಡ್ ವರ್ಡ್ಸ್’. ಅದರ ಬಗ್ಗೆ ತಿಳಿಸಿದೆ. ಮುಖಪುಟದ ಚಿತ್ರ, ಸ್ಯಾಂಪಲ್ ಎಂದು ಅದರಲ್ಲಿ ನನಗೆ ತುಂಬ ಇಷ್ಟವೆನಿಸಿದ ‘ಮರ’ ಕವಿತೆಯ (ಕವಿ: ಆನಂದ ಝಂಜರವಾಡ) ಕನ್ನಡ ಮತ್ತು ಇಂಗ್ಲಿಷ್ ಪುಟಗಳೆರಡರ ಫೊಟೊ ತೆಗೆದು ವಾಟ್ಸಾಪಲ್ಲೇ ಕಳಿಸಿದೆ. ಅಭಿನವ ಪ್ರಕಾಶನದ ರವಿಕುಮಾರ್ ಅವರ ಸಂಪರ್ಕವಿವರ (9448804905) ಸಹ ಬರೆದೆ.

ಮಾರನೆದಿನವೇ ‘ಇವತ್ತು ಅಂಕಿತ ಮಳಿಗೆಯಿಂದ ಆ ಪುಸ್ತಕ ತಕ್ಕೊಂಡುಬಂದೆ’ ಎಂದು ಫೊಟೊ ಸಹಿತ ಮೆಸೇಜು ಸುಪ್ರಿಯಾಳಿಂದ! ಬುಕ್ ರಿವ್ಯೂ ಕಾರ್ಯಕ್ರಮ ತಿಂಗಳಿಗೊಮ್ಮೆ ಒಬ್ಬೊಬ್ಬ ಶಿಕ್ಷಕ/ಕಿ ಸರದಿಯಂತೆ ನಡೆಸುತ್ತಾರಂತೆ. ನವೆಂಬರ್ ಪಾಳಿ ತನಗಿರಲಿ ಎಂದು ಸುಪ್ರಿಯಾ ಆಗಲೇ ಮುಖ್ಯೋಪಾಧ್ಯಾಯರ ಅನುಮತಿ ಪಡೆದಿದ್ದಳು. ತಾನು ನಡೆಸುವ ಕಾರ್ಯಕ್ರಮ ವಿಭಿನ್ನವಾಗಿ, ಆಕರ್ಷಕವಾಗಿ, ಅರ್ಥಪೂರ್ಣವಾಗಿ ಇರಬೇಕೆಂದು ಸಿದ್ಧತೆ ನಡೆಸಿದ್ದಳು. ಬಿಯಾಂಡ್ ವರ್ಡ್ಸ್ ಪುಸ್ತಕದಿಂದ ನಾಲ್ಕು ಕವಿತೆಗಳನ್ನು ಆಯ್ದುಕೊಂಡು ತಯಾರಾದಳು. ಮೊನ್ನೆ ನವೆಂಬರ್ 19ರಂದು ನಡೆದ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸನ್ನು ಸುಪ್ರಿಯಾ ನನಗೆ ಬರೆದುಕಳಿಸಿದ ಮಿಂಚಂಚೆಯನ್ನೋದಿಯೇ ನೀವೂ ತಿಳಿದುಕೊಳ್ಳಬೇಕು: ‘ನಮ್ಮ ಶಾಲೆಯ ಆವರಣದಲ್ಲಿ ಒಂದು ಹೊಂಗೆ ಮರ ಇದೆ. ಅದರ ನೆರಳಿನ ಸುತ್ತ ಕಲ್ಲುಚಪ್ಪಡಿ ಹಾಸಿದ್ದಾರೆ. ನಿನ್ನೆ ಮಂಜು ಕವಿದ ವಾತಾವರಣ ಹಳೆಯ ಬೆಂಗಳೂರನ್ನು ನೆನಪಿಸುವಂತಿತ್ತು. ಎಲ್ಲರೂ ಚಳಿ ಎಂದು ಸಾಕ್ಸ್, ಸ್ವೆಟರ್ ಹಾಕ್ಕೊಂಡು ಬಂದಿದ್ದರು. ನನ್ನ ಪುಣ್ಯಕ್ಕೆ ಹೊರಗೆ ಅಷ್ಟು ಚಳಿ ಇರಲಿಲ್ಲ. ನಮ್ಮ ಕಾರ್ಯಕ್ರಮ ಹೊಂಗೆ ಮರದಡಿಯಲ್ಲೇ ಮಾಡುವುದಾಗಿ ತಿಳಿಸಿದಾಗ ಎಲ್ಲರಿಗೂ ಖುಷಿ. ಮರದ ಟೊಂಗೆಗಳಿಗೆ ದಿನಪತ್ರಿಕೆಯಿಂದ ಕತ್ತರಿಸಿದ ಪಕ್ಷಿಗಳನ್ನು ನೇತುಹಾಕಿ, ಆಕಾಶದ ಬಣ್ಣಗಳ ದುಪ್ಪಟ್ಟಗಳನ್ನು ಇಳಿಬಿಟ್ಟು ಸೂರ್ಯಾಸ್ತದ ದೃಶ್ಯ ಸೃಷ್ಟಿಸಿದ್ದೆವು. ಸ್ನೇಹಿತರೊಬ್ಬರ ಲ್ಯಾಪ್‌ಟಾಪ್‌ನಿಂದ ಸಂಜೆರಾಗ ಸಂಗೀತ ಮೆಲುವಾಗಿ ತೇಲಿಬರುತ್ತಿತ್ತು.

ಅಲ್ಲಿಗೆ ಸಮಯಕ್ಕೆ ಬಂದ ಶಿಕ್ಷಕರಲ್ಲಿ ಕೆಲವರು ಬೆಟ್ಟಗಳಂತೆ, ಕೆಲವರು ನದಿಗಳಂತೆ, ಕೆಲವರು ಕಾಡಿನಂತೆ ದುಪ್ಪಟ್ಟಗಳಿಂದ ತೋರಿಸುವುದಾಗಿ ಮೊದಲೇ ಹೇಳಲಾಗಿತ್ತು. ಹಾಗೆಯೇ ಮಾಡಿದರು. ಉಳಿದ ಪ್ರೇಕ್ಷಕರೆಲ್ಲ ಬಂದು ಕುಳಿತಾಗ, ದೃಶ್ಯಾವಳಿಯನ್ನು ನೋಡಿ ಅವರಿಗೆ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಹಂಚಿಕೊಳ್ಳುವಂತೆ ಹೇಳಿ ಶುರುಮಾಡಿದೆವು. ಕುವೆಂಪುರವರ ‘ದೇವರು ರುಜು ಮಾಡಿದನು’ ಕವಿತೆ ಓದಿ ಪ್ರಕೃತಿಸೌಂದರ್ಯ ಬಣ್ಣನೆಯ ಶೈಲಿ ಬಗ್ಗೆ ಮಾತನಾಡಿದೆವು. ಆಮೇಲೆ ನಿಸ್ಸಾರ್ ಅಹ್ಮದರ ‘ಹಕ್ಕು’ ಪದ್ಯವನ್ನು ಅರ್ಧ ಓದಿ, ನಾಲ್ಕು ತಂಡಗಳಾಗಿ ವಿಂಗಡಿಸಿದ್ದ ಪ್ರೇಕ್ಷಕರಿಗೆ ಕವಿತೆಯನ್ನು ಪೂರ್ಣಗೊಳಿಸಲು ಹೇಳಿದೆವು. ಎಲ್ಲರೂ ತಮ್ಮೊಳಗಿನ ಕವಿಯನ್ನು ಹೊರತೆಗೆದು ಬಂಗಾಲಿ, ಹಿಂದಿ, ಇಂಗ್ಲಿಷ್ ಹೀಗೆ ತಂತಮ್ಮ ಭಾಷೆಯಲ್ಲಿ ಅನಿಸಿಕೆ ಹಂಚಿಕೊಂಡರು. ಪದಗಳಿಗಿಂತ ಮಿಗಿಲಾದ(ಬಿಯಾಂಡ್ ವರ್ಡ್ಸ್) ಭಾವನೆಗಳ ವಿಚಾರವಾದ್ದರಿಂದ, ಭಾಷೆಗಿಂತ ಮಿಗಿಲಾಗಿ ಸಂಸ್ಕೃತಿಯನ್ನು ತೆರೆದಿಡುವ ಯತ್ನ ನಡೆಯಿತು.

ನಿಸ್ಸಾರ್ ಅಹ್ಮದ್ ಮತ್ತು ಕುವೆಂಪುರವರ ಇತರ ಪ್ರಕೃತಿ-ಕವನಗಳನ್ನೂ ಪ್ರಸ್ತಾವಿಸಿದೆವು. ಆಮೇಲೆ ಎಲ್ಲ ತಂಡಗಳಿಗೂ ಝಂಜರವಾಡರ ‘ಮರ’ ಕವಿತೆಯನ್ನು ಒಂದು ಮರದ ಚಿತ್ರದಲ್ಲಿ ಬರೆದು ಕೊಡಲಾಯ್ತು. ಅದನ್ನು ಓದಿ ಎಲ್ಲರ ಅನಿಸಿಕೆಗಳನ್ನು ಚರ್ಚೆ ಮಾಡಿದೆವು. ಗಂಗಾಧರ ಚಿತ್ತಾಲರ ‘ಸಂಪರ್ಕ’ ಕವಿತೆಯ ಮೂಲಕ ಪ್ರಕೃತಿಯೊಂದಿಗೆ ನಮಗಿರುವ ಸಂಪರ್ಕವನ್ನು ಚರ್ಚಿಸಿದೆವು. ನಟರಾಜ್ ಬರೆದ ಪ್ರಸ್ತಾವನೆಯಿಂದ ಅನುವಾದದ ಉದ್ದಿಶ್ಯ ಮತ್ತು ಸಾರ್ಥಕ್ಯಗಳನ್ನು ಅರ್ಥಮಾಡಿಕೊಂಡೆವು. ನನಗಂತೂ ತುಂಬ ಖುಷಿ. ಬಿಯಾಂಡ್ ವರ್ಡ್ಸ್ ಪುಸ್ತಕದ ನಾಲ್ಕು ಪ್ರತಿಗಳನ್ನು ಒಯ್ದಿದ್ದೆ. ನಾಲ್ಕಕ್ಕೂ ಬೇಡಿಕೆ ಬಂದು ಖರ್ಚಾದವು! ನಮ್ಮ ಹೆಮ್ಮೆಯ ಕವಿಗಳ ಕವಿತೆಗಳನ್ನು ಇತರರಿಗೆ ಪರಿಚಯಿಸಿದ, ಭಾವಾರ್ಥ ಹಂಚಿಕೊಂಡ ಧನ್ಯತಾಭಾವ ನನ್ನದು. ಸದಾ ನೆನಪಲ್ಲುಳಿವ ಸಂಗತಿ. ನಟರಾಜರಿಗೂ ನಿಮಗೂ ನಾನು ಚಿರಋಣಿ. ಇಂತಿ ನಿಮ್ಮ ಪ್ರೀತಿಯ, ಸುಪ್ರಿಯಾ.

ಕನ್ನಡದ ಹೆಸರಿನಲ್ಲಿ ದಬ್ಬಾಳಿಕೆ ನಡೆಸಿ ಅಮಾಯಕರಿಂದ ಹಫ್ತಾ ಸಂಗ್ರಹಿಸಿ ತಂತಮ್ಮ ಆಸ್ತಿ ವಿಸ್ತರಿಸಿಕೊಳ್ಳುವ ‘ಓರಾಟಗಾರ’ರಿಗಿಂತ, ಕನ್ನಡವನ್ನು ಸರಳಗೊಳಿಸುತ್ತೇವೆಂದು ಅಕ್ಷರಗಳ ಕೈಕಾಲು ಮುರಿಯುವ ‘ಎಲ್ಲರಿ’ಗಿಂತ, ಹೀಗೆ ಸದ್ದುಗದ್ದಲವಿಲ್ಲದೆ ಕನ್ನಡದ ಸುಗಂಧವನ್ನು, ಶ್ರೇಷ್ಠತೆಯನ್ನು ಇತರರಿಗೂ ಪಸರಿಸುವ ಡಾ.ನಟರಾಜ ಮತ್ತು ಸುಪ್ರಿಯಾರಂಥವರು ಯಾವತ್ತಿಗೂ ಗೌರವಾರ್ಹರಾಗುತ್ತಾರೆ. ನಮ್ಮ ಹೃದಯದಲ್ಲಿ ಪ್ರೀತಿಯ ಸ್ಥಾನ ಪಡೆದುಕೊಳ್ಳುತ್ತಾರೆ. ಕನ್ನಡ ಸಂಸ್ಕೃತಿ ಸೇತು ನಿರ್ಮಾಣದಲ್ಲಿ ನಿಸ್ವಾರ್ಥದಿಂದ ನೆರವಾಗುವ ಅಳಿಲುಗಳಿವು.

-ಶ್ರೀವತ್ಸ ಜೋಶಿ

Leave a Reply

Your email address will not be published. Required fields are marked *

20 + eighteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top