ಮೋದಿ ಹತ್ಯೆ ವಿಚಾರ ಪ್ರಚಾರದ ಗಿಮಿಕ್ ಹೌದೇ ?

Posted In : ಸಂಗಮ, ಸಂಪುಟ

-ರವಿನಾಯಕ್

ಇತಿಹಾಸ ಪುಸ್ತಕದ ಮೇಲೆ ಕಣ್ಣಾಡಿಸಿದರೆ ಕೆಲವು ಸತ್ಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಈ ಜಗತ್ತಿನಲ್ಲಿ ಒಳ್ಳೆಯ ಕಾರ್ಯಗಳಿಂದಲೋ, ಕೆಟ್ಟ ಕಾರ್ಯಗಳಿಂದಲೋ ಜೀವನದಲ್ಲಿ ಎತ್ತರಕ್ಕೆ ಬೆಳೆದವರನ್ನು ಕೆಲವು ದುಷ್ಟಶಕ್ತಿಗಳು ಕೊಂದಿವೆ. ಮನುಕುಲಕ್ಕೆ ಒಳ್ಳೆಯದನ್ನೇ ಬಯಸಿದ ಸತ್ಯನಿಷ್ಠರನ್ನೂ ಜನರು ಬಿಟ್ಟಿಲ್ಲ. ಜಗತ್ತಿಗೆ ಬೆಳಕು ನೀಡಲು ಅವತರಿಸಿದ ಯೇಸು ಕ್ರಿಸ್ತನನ್ನು ಜನರು ಶಿಲುಬೆಗೆ ಏರಿಸಿ, ಜೀವಂತವಾಗಿ ಕೊಂದರು. ಜಾತಿ-ಮತ, ಮೇಲು-ಕೀಳುಗಳಿಲ್ಲದ ಒಂದು ಉತ್ತಮವಾದಂತಹ, ಮಾದರಿ ಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣನವರ ಅಂತ್ಯವೂ ಹೀಗೆ ಸಹಜವಲ್ಲದ ರೀತಿಯಲ್ಲಿ ಆಯಿತು. ವಿಪರ್ಯಾಸ ನೋಡಿ ಯೇಸು, ಬುದ್ಧ, ಬಸವ ಇವರೆಲ್ಲರೂ ಮರಣ ಹೊಂದಿದ ನಂತರವೇ ದೇವರಾದರು!

ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಹಾಂ ಲಿಂಕನ್, ಜಾನ್.ಎಫ್.ಕೆನಡಿ, ಲಾಲ್ ಬಹುದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಮುಂತಾದವರೆಲ್ಲ ತಮ್ಮ ಯಾವ ಕಾರ್ಯಗಳನ್ನೂ ಮಾಡಲಿಲ್ಲ. ಎಲ್ಲವೂ ತನ್ನ ಜನ, ತನ್ನ ದೇಶಕ್ಕಾಗಿಯೇ ಎಂದು ಹಗಲಿರುಳು ಹೋರಾಡಿದರು. ಇಂಥವರನ್ನೂ ಜನರು ಕೊಂದರು.

ಆ ಮಹಾತ್ಮರು ಬದುಕಿದ್ದಾಗ ಅವರ ಕಾರ್ಯಗಳು, ಅವಿರತ ಶ್ರಮಗಳೆಲ್ಲವೂ ನಮ್ಮ ಏಳ್ಗೆಗಾಗಿಯೇ ಎಂಬುದು ಜನರಿಗೆ ತಿಳಿಯಲಲ್ಲ. ಅವರು ಹೋದ ನಂತರವೇ ಅವರ ಮಹೋನ್ನತ ಕಾರ್ಯಗಳ ಬಗ್ಗೆ ಅರಿವಾಗಿ ದೇವರಂತೆ ಪೂಜಿಸುತ್ತಿರುವುದು ವಿಪರ್ಯಾಸ. ಒಟ್ಟಿನಲ್ಲಿ ಹೇಳಬೇಕೆಂದರೆ, ಬದುಕಿದ್ದಾಗ ಮಹಾತ್ಮರ ಮಹತ್ವ ಅರಿಯದೇ, ದುಷ್ಟಶಕ್ತಿಗಳಿಂದ ಅಥವಾ ಭಯೋತ್ಪಾದಕ ಸಂಘಟನೆಗಳಿಂದ ಹತ್ಯೆಯಾದ ನಂತರವೇ ಕಾರ್ಯದ ಕುರಿತು ಅರಿವಾಗುತ್ತದೆ.

ಹಿಂದಿನಿಂದ ನಡೆದು ಬಂದ ಹತ್ಯೆಗಳ ಮುಂದುವರಿದ ಭಾಗವಾಗಿ ಈಗ ನರೇಂದ್ರ ಮೋದಿಯವರ ಹತ್ಯೆ ಸಂಚಿನವರೆಗೆ ಬಂದು ನಿಂತಿದೆ! ಮೊನ್ನೆಯಷ್ಟೇ ಪುಣೆ ಪೊಲೀಸರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು.

ಭಯೋತ್ಪಾದಕರಿಗೆ, ಮಾವೋವಾದಿಗಳಿಗೆ, ದೇಶದೊಳಗಿನ ಹಲವು ಗೋಮುಖ ವ್ಯಾಘ್ರರಿಗೆ ಮೋದಿಯೆಂದರೆ ಯಾಕಿಷ್ಟು ದ್ವೇಷ? ಮೋದಿಯವರೇನು ಹಗರಣಗಳನ್ನು ಮಾಡಿ ಕೋಟಿ ಆಕ್ರಮ ಆಸ್ತಿ ಮಾಡಿಕೊಂಡಿದ್ದಾರೆಯೇ? ಮೋದಿಯವರ ಕಾರ್ಯಗಳು, ಹಗಲು-ರಾತ್ರಿ ಅರಿಯದ ಅವರ ಸುತ್ತಾಟಗಳು, ವೈಯಕ್ತಿಕ ಬದುಕಿನ ತ್ಯಾಗ, ಇವೆಲ್ಲ ಯಾರಿಗಾಗಿ ಎಂದು ಈಗಲೂ ದೇಶದ ಜನರು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ಅಧಿಕಾರ, ಹಣ ಅಕ್ರಮ ಆಸ್ತಿಗಾಗಿ ರಾಜಕೀಯ ಮಾಡಿದ್ದಿದ್ದರೆ, ನೋಟು ನಿಷೇಧ, ಜಿಎಸ್‌ಟಿ ಯಂಥ ಕಠಿಣ ಯೋಜನೆಗಳಿಗೆ ಕೈಹಾಕುತ್ತಿರಲಿಲ್ಲ.

ನರೇಂದ್ರ ಮೋದಿಯವರ ವಿಷಯಕ್ಕೆ ಬಂದರೆ, ದೇಶದ ಅಷ್ಟು ಪಕ್ಷಗಳೂ ಪಕ್ಷಭೇದ ಮರೆತು ಒಂದಾಗಿಬಿಡುತ್ತವೆ! ಎಲ್ಲರೂ ಮೋದಿಯನ್ನು ವಿರೋಧಿಸಿ ದಿನಕ್ಕೊಂದು ಕೊಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಯಾವ ಪಕ್ಷಕ್ಕೂ ಮೋದಿಯನ್ನು ಸೋಲಿಸುವ ತಾಕತ್ತು ಇಲ್ಲವೆಂದು ಅರಿತಿರುವ ಇವರು, ದೇಶದಲ್ಲಿ ನಾಯಿಕೊಡೆಗಳಂತೆ ಎದ್ದಿರುವ ಎಲ್ಲ ಪಕ್ಷಗಳ ಒಂದು ಕೂಟ ರಚಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಪಣತೊಟ್ಟಿರುವ ‘ಮಹಾಘಟಭಂಡ’ರು ಅದಕ್ಕಾಗಿ ಪಾಕಿಸ್ತಾನದವರ ಸಹಾಯ ಪಡೆಯಲೂ ಸಿದ್ಧ, ಚೀನಾದ ಸಹಾಯ ಪಡೆಯಲೂ ಸಿದ್ಧ!! ಒಟ್ಟಿನಲ್ಲಿ ಯಾವ ದಾರಿ ಹಿಡಿದಾದರೂ ಸರಿಯೇ. ಇದುವರೆಗೆ ಓಣಿನಾಯಿಗಳಂತೆ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದವರೆಲ್ಲ ಮೋದಿಯ ವಿರುದ್ಧ ತೊಡೆತಟ್ಟಿದ್ದಾರೆ!

ಆತಂಕಕ್ಕೆ ಒಳಗಾದವರು ಇವರು ಮಾತ್ರವಷ್ಟೇ ಅಲ್ಲ, ಪಾಕಿಸ್ತಾನದ ಭಯೋತ್ಪಾದಕರು, ದೇಶದೊಳಗಿನ ಮಾವೋವಾದಿಗಳು, ಧಾರ್ಮಿಕ ಮುಖಂಡರು ಕೂಡ ಆತಂಕದಲ್ಲಿದ್ದಾರೆ. ಅವರಿಗೆಲ್ಲ ಅದುವರೆಗೂ ವಿವಿಧ ಮೂಲಗಳಿಂದ ಬೇಕಾದಷ್ಟು ಹಣ ಹರಿದು ಬರುತ್ತಿತ್ತು. ಈ ಹಣದ ಮೂಲ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅವರ ಕಠಿಣ ನಿರ್ಧಾರಗಳಿಂದ ಹಣದ ಒಳ ಹರಿವು ಬಂದ್ ಆಗಿದೆ. ಹೀಗಾಗಿ ಎಲ್ಲಾ ದುಷ್ಟರ ಕಣ್ಣು ನರೇಂದ್ರಮೋದಿಯವರ ಮೇಲೆ ನೆಟ್ಟಿದೆ.

ತಮ್ಮ ಹತ್ಯೆಯ ಬಗ್ಗೆ ನರೇಂದ್ರ ಮೋದಿಯವರಿಗೆ ನೋಟು ನಿರ್ಧಾರ ತೆಗೆದುಕೊಂಡಾಗಲೇ ತಿಳಿದಿತ್ತು. ಅದಕ್ಕಾಗಿಯೇ ನೋಟು ರದ್ದಾದ ಎರಡೇ ದಿನದಲ್ಲಿ ಮೋದಿಯವರು- ‘ಕೆಲವು ಶಕ್ತಿಗಳು ನನ್ನ ವಿರುದ್ಧ ಎದ್ದು ನಿಂತಿವೆ. ಅವು ನನ್ನನ್ನು ಬಿಡಲಿಕ್ಕಿಲ್ಲ. 70 ವರ್ಷ ಅವರು ಲೂಟಿ ಮಾಡಿದ್ದಕ್ಕೆ ಈಗ ಸಂಕಷ್ಟ ಎದುರಾಗಿದೆ. ಅವರು ನನ್ನನ್ನು ಸಜೀವ ದಹನ ಮಾಡಿದರೂ ಮಾಡಬಹುದು. ನಾನಂತೂ ಎಲ್ಲದಕ್ಕೂ ಸಿದ್ದನಿದ್ದೇನೆ’ ಎಂದಿದ್ದರು.

ಅವರ ಹೇಳಿಕೆಗೆ ಇಂಬು ಕೊಡುವಂತೆ ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದ ಬಿಹಾರದ ಪಟನಾದಲ್ಲಿ ಪ್ರಚಾರ ಸಭೆಯಲ್ಲಿ ಕೆಲವೇ ಗಂಟೆಗಳ ಮೊದಲು ಅದೇ ಸ್ಥಳದ ಆಸು ಪಾಸು ಸರಣಿ ಸ್ಫೋಟ ಸಂಭವಿಸಿದ್ದವು. ಅದರ ಪ್ರಮುಖ ಸಂಚುಕೋರರಾದ ಹೈದರ್ ಅಲಿ ಯಾನೆ ಬ್ಲ್ಯಾಕ್ ಬ್ಯೂಟಿ ಸೇರಿದಂತೆ ನಾಲ್ವರನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಅವರ ಬಾಯ್ಬಿಡಿಸಿದಾಗ ಆಘಾತಕಾರಿ ಅಂಶವೊಂದು ಹೊರಬಿತ್ತು. ನಿಯೋಜಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವುದಕ್ಕಾಗಿ ಕಾಶ್ಮೀರ ಕಣಿವೆಯಲ್ಲಿರುವ ಎಲ್ಲ ಉಗ್ರ ಸಂಘಟನೆಗಳು ಒಂದಾಗಿರುವ ಮಾಹಿತಿ ಬಾಯಿಬಿಟ್ಟಿದ್ದ. ಬಂಧಿತ ಉಗ್ರ ಅಲಿ, ಇಂಡಿಯನ್ ಮುಜಾಹಿದ್ದೀನ್ ರಾಂಚಿ ಘಟಕದ ಮುಖ್ಯಸ್ಥ. ಪಾಟ್ನಾ, ಬುದ್ಧಗಯಾ, ಹೈದರಾಬಾದ್ ಸರಣಿ ಸ್ಫೋಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಪಾಟ್ನಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಹತ್ಯೆ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥರು ಬಹಳ ಅಸಮಾಧಾನಗೊಂಡಿದ್ದರಂತೆ. ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಕೆಲವು ಸಿಮಿ ಕಾರ್ಯಕರ್ತರು, ನರೇಂದ್ರ ಮೋದಿ ಹತ್ಯೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದೇವೆ ಎಂದು ಬಹಿರಂಗವಾಗಿ ಮೋದಿ ನಾಯಕತ್ವದ ಬಗ್ಗೆ ಆತಂಕಕ್ಕೆ ಒಳಗಾಗಿರುವ ಉಗ್ರ ಸಂಘಟನೆಗಳು ತಮ್ಮೊಳಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ‘ಟಾರ್ಗೆಟ್ ನಮೋ’ ಮಂತ್ರ ಜಪಿಸತೊಡಗಿದ್ದಾರೆ. ದೇಶದೊಳಗೂ ಎಲ್ಲ ರಾಜಕೀಯ ಪಕ್ಷಗಳು ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ.

ಹಣ ಮತ್ತು ಅಧಿಕಾರಕ್ಕಾಗಿ ಎಂಥ ನೀಚ ಕಾರ್ಯಕ್ಕೂ ಇಳಿಯುವ ನಮ್ಮ ದೇಶದ ರಾಜಕಾರಣ ಮತ್ತು ಇಲ್ಲಿನ ರಾಜಕಾರಣಿಗಳನ್ನು ಹಲವು ಹಗರಣ ಕೊಲೆಯಂಥ ಪ್ರಕರಣಗಳು ಇತಿಹಾಸದಲ್ಲಿ ದಾಖಲಾಗಿವೆ. ಜನರ ತೆರಿಗೆಯ ಹಣವನ್ನು ತಾನು ತಿನ್ನುವುದಿಲ್ಲ, ಲೂಟಿ ಹೊಡೆಯುವುದಕ್ಕಾಗೇ ಸಮಾಜಸೇವೆಯ ಮುಖವಾಡ ಹೊರುವುದಿಲ್ಲ, ಬರುವ ಭ್ರಷ್ಟರಿಗೂ ತಿನ್ನಲು ಬಿಡುವುದಿಲ್ಲ ಎಂಬ ಶಪಥ ತೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭ್ರಷ್ಟರಿಗೆ ಮೋದಿ ಅಧಿಕಾರದಲ್ಲಿರುವಷ್ಟು ದಿನ ಇವರ ಬಾಯಿಗೆ ಮಣ್ಣೇ ಗತಿ ಎಂಬುದು ಖಾತ್ರಿಯಾಗಿದೆ. ಈಗ ಮೋದಿ ಹತ್ಯೆಯ ಸಂಚು ಕೇಳಿ ಒಳಗೊಳಗೆ ಸಂತೋಷಪಟ್ಟವರೆಷ್ಟೋ!

ಮೋದಿ ಹತ್ಯೆಯ ಸಂಚು ಕೇವಲ ಪ್ರಚಾರಕ್ಕೋಸ್ಕರ ಮಾಡಿದ ಗಿಮಿಕ್ ಎಂದು ವಿರೋಧ ಪಕ್ಷಗಳು ಹೇಳಿವೆ. ದೇಶದ ಪ್ರಧಾನಮಂತ್ರಿಯ ಹತ್ಯೆ ಸೂಚನೆ ಮೊದಲಿನಿಂದಲೂ ಇತ್ತು. ಮೋದಿ ಪ್ರಧಾನಿಯಾದಾಗಲೇ ಭದ್ರತೆ ವಿಚಾರ ದೊಡ್ಡ ತಲೆ ನೋವಾಗಿತ್ತು. ಈಗಂತೂ ಅವರ ಜನಪ್ರಿಯತೆ ಇಷ್ಟೊಂದು ಹೆಚ್ಚಿದ ಮೇಲೆ ಅದು ನಿಜಕ್ಕೂ ದೊಡ್ಡ ಸವಾಲೇ ಆಗಿದೆ. ಹೀಗಿರುವಾಗ ಇಂಥ ಗಂಭೀರ ವಿಚಾರವನ್ನು ಗಿಮಿಕ್ ಆಗಿ ಬಳಸಿಕೊಳ್ಳುವ ಅಗತ್ಯ ಬಿಜೆಪಿಗಿಲ್ಲ. ಕಾರಣ ಬಿಜೆಪಿ 22 ರಾಜ್ಯಗಳನ್ನು ಗೆದ್ದು ಬೀಗುತ್ತಿದೆ. ಪ್ರಧಾನಿಯ ಹತ್ಯೆಯ ವಿಷಯ ಇಟ್ಟುಕೊಂಡು ಮುಂಬರುವ ಚುನಾವಣೆ ಗೆಲ್ಲುವುದಕ್ಕಿಂತ ಮೋದಿಯನ್ನು ಜೀವಂತ ಉಳಿಸಿಕೊಳ್ಳುವುದೇ ಅದಕ್ಕೆ ಪ್ರಮುಖ ವಿಷಯವಾಗಿದೆ.

ಭಾರತದ ಭದ್ರತಾ ಪಡೆಗಳು ಮೊದಲಿಗಿಂತಲೂ ಹತ್ತುಪಟ್ಟು ಇಂಥ ಸಂಚನ್ನು ವಿಫಲಗೊಳಿಸುವ ಸಾಮರ್ಥ್ಯ ನಮ್ಮ ದೇಶದ ಭದ್ರತಾ ಪಡೆಗಳಿಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಬಂಧಿಸಿದ್ದಷ್ಟೇ ಅಲ್ಲ, ದೇಶದ ಭದ್ರತೆಗೆ ಸವಾಲು ಹಾಕಿದಂತೆ. ಭಾರತೀಯ ಭದ್ರತಾ ಪಡೆಗಳು ಎಲ್ಲ ದುಷ್ಟರನ್ನು ಸದೆಬಡೆಯಲಿ.

 

Leave a Reply

Your email address will not be published. Required fields are marked *

twenty − 15 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top