ಈ ಬಾರಿ ಬಿಜೆಪಿ ಅಲೆ ಹೊಡೆತಕ್ಕೆ ಸಿಲುಕುವರೇ ನವೀನ್‌?

Posted In : ಸಂಗಮ, ಸಂಪುಟ

ಏಪ್ರಿಲ್ 2014ರ ಲೋಕಸಭೆ ಚುನಾವಣೆಯಲ್ಲಿ ದೇಶವೇ ಮೋದಿ ಹವಾಯಿಂದ ಪ್ರಭಾವಿತವಾಗಿದ್ದಾಗ ಅದರಿಂದ ಹೊರಗುಳಿದ ಕೆಲವೇ ರಾಜ್ಯಗಳಲ್ಲಿ ಒಡಿಶಾ ಸಹ ಒಂದಾಗಿತ್ತು. ಮುಖ್ಯಮಂತ್ರಿ, ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್ ಅದಕ್ಕೆ ಮುಖ್ಯ ಕಾರಣವಾಗಿದ್ದರು. ಅಲುಗಾಡಿಸಲಾಗದ ಪ್ರಾಂತೀಯ ಶಕ್ತಿ ಸಂಕೇತವಾದ ನವೀನ್, 21 ಲೋಕಸಭಾ ಸ್ಥಾನಗಳಲ್ಲಿ 20 ಗೆದ್ದು ಒಂದೇ ಒಂದನ್ನು ಬಿಜೆಪಿಗೆ ಉಳಿಸಿದ್ದರು. ಆದಿವಾಸಿ ಜನಾಂಗ ಬಹುಸಂಖ್ಯೆಯಲ್ಲಿರುವ ಸುಂದರ್‌ಗಢ್‌ನಲ್ಲಿ ಮಾಜಿ ಭಾರತ ಹಾಕಿ ತಂಡದ ನಾಯಕ ದಿಲೀಪ್ ತಿರ್ಕೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಬುಡಕಟ್ಟು ಖಾತೆ ಸಚಿವ ಜುಯಲ್ ಒರಾಮ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಹಿನ್ನೆಲೆಯಲ್ಲಿ ಅದೂ ಕೈತಪ್ಪುವ ಭೀತಿ ಎದುರಾಗಿತ್ತು.

ಅದಾಗಿ ನಾಲ್ಕು ವರ್ಷಗಳೇ ಕಳೆದಿವೆ. ‘ಮಹಾನದಿ’ಯಲ್ಲಿ ಸಾಕಷ್ಟು ನೀರು ಹರಿದಿದೆ. ಆದರೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾದಳವನ್ನು ಮಣಿಸುವುದು ಕಷ್ಟಸಾಧ್ಯ. ಇತ್ತೀಚಿನ ಕೆಲ ಚುನಾವಣಾ ಫಲಿತಾಂಶಗಳಿಂದ ಉತ್ತೇಜಿತಗೊಂಡಿರುವ ಕೇಸರಿ ಪಕ್ಷ, ಒಡಿಶಾದಲ್ಲಿಯೂ ಗೆಲ್ಲುತ್ತೇವೆ ಎಂದು ಅದೆಷ್ಟೇ ದೊಡ್ಡದಾಗಿ ಹೇಳಿಕೊಂಡರೂ ಅದು ಸುಲಭವಲ್ಲ ಎಂಬ ಅರಿವಿದೆ.  ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಪಂಚಾಯತ್ ಬಿಜೆಪಿ, ಶೇ.15ರಿಂದ ಶೇ.32ಕ್ಕೆ ಮತ ಗಳಿಕೆ ಏರಿಸಿಕೊಂಡಿದ್ದು ಬಿಜೆಡಿ ಭದ್ರಕೋಟೆಯಲ್ಲಿ ಒಂದು ಸಣ್ಣ ಬಿರುಕು ಮೂಡಿಸಿತು. 2014ರಲ್ಲಿ ತಪ್ಪಿಸಿಕೊಂಡಿದ್ದರೂ ಅಂತಿಮವಾಗಿ ಬಿಜೆಪಿ ಬಿರುಗಾಳಿಯಿಂದ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಪಟ್ನಾಯಕ್ ಯೋಚಿಸುವಂತಾಯಿತು.

ಆನಂತರ ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಒಂಬತ್ತು ಪಟ್ಟು ಅಧಿಕ ಸ್ಥಾನ ಗಳಿಸಿಕೊಳ್ಳುವುದಷ್ಟೇ ಅಲ್ಲದೆ ಆದಿವಾಸಿಗಳು ಬಹುಸಂಖ್ಯಾತರಾಗಿರುವ ಜಿಲ್ಲೆಗಳಲ್ಲಿ ಬಿಜು ಜನತಾದಳವನ್ನು ಹಿಮ್ಮೆಟ್ಟಿಸಿದ ಬಿಜೆಪಿ, ಕಾಂಗ್ರೆಸ್ಸನ್ನು ನೂಕಿ, ಮುಖ್ಯ ಪ್ರತಿಪಕ್ಷವಾಗಿ ಗುರಿ ತಲುಪಿಯೇ ಬಿಟ್ಟಿತು. ಅದೇ ಲೆಕ್ಕಾಚಾರ ಬಳಸಿ ಲೋಕಸಭೆಯ 21 ಸ್ಥಾನಗಳಲ್ಲಿ 7 ಹಾಗೂ 147 ವಿಧಾನಸಭಾ ಸ್ಥಾನಗಳಲ್ಲಿ 145ನ್ನು ಗೆಲ್ಲಬಲ್ಲ ಭರವಸೆಯನ್ನು ಬಿಜೆಪಿ ಗಳಿಸಿತು. ಕಳೆದ ಏಪ್ರಿಲ್‌ನಲ್ಲಿ ನಡೆಸಿದ ರಾಷ್ಟ್ರ ಕಾರ್ಯಕಾರಿಣಿಯಲ್ಲಿ ‘ಒಡಿಶಾ ನಮ್ಮ ಮುಂದಿನ ಯುದ್ಧ ಭೂಮಿ’ ಎಂದು ಪ್ರಧಾನಿ ಘೋಷಿಸಲು ಇಷ್ಟು ಸಾಕಾಯಿತು. ಆನಂತರ ಭರದಿಂದ ಬಿಜೆಪಿ ಒಡಿಶಾದಲ್ಲಿ ತನ್ನ ಶಕ್ತಿ ವಿಸ್ತರಿಸಿಕೊಳ್ಳಲು ಮುಂದಾಗಿದೆ. ಸಾಂಪ್ರದಾಯಿಕ ಕಾಂಗ್ರೆಸ್ ಹಾಗೂ ಬಿಜೆಡಿಯ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಅಮಿತ್‌ಶಾ ‘ಮಿಶನ್ ಗೇಮ್‌ಪ್ಲಾನ್ ರೂಪಿಸಿ, 147 ವಿಧಾನಸಭಾ ಸ್ಥಾನಗಳಲ್ಲಿ 120 ಗೆಲ್ಲುವುದು ಪಕ್ಷದ ಗುರಿ ಎಂದು ಸಾರಿದರು.  ಆದರೆ ಅದಾಗಿ ಆರು ತಿಂಗಳೇ ಕಳೆದಿರುವಾಗ-ರಾಜಕೀಯದಲ್ಲಿ ಇದು ದೀರ್ಘಕಾಲ ಎಂದೇ ಹೇಳಬೇಕು-71ರ ವಯೋಮಾನದ, ಮುಖ್ಯಮಂತ್ರಿಯಾಗಿ ತನ್ನ 18ನೇ ವರ್ಷ ಪೂರೈಸುತ್ತಿರುವ ನವೀನ್ ಪಟ್ನಾಯಕ್, ಸದ್ದಿಲ್ಲದೆ ತಮ್ಮನ್ನು ಹಾಗೂ ತಮ್ಮ ಪಕ್ಷವನ್ನು ಮರುಶೋಧನೆಗೆ ಒಳಪಡಿಸಿಕೊಳ್ಳುತ್ತ ಬಿಜೆಪಿಯ ಎಲ್ಲ ಪ್ರಯತ್ನಗಳನ್ನು ಮೊಟಕುಗೊಳಿಸುವಂತೆ ಪ್ರತ್ಯಸ್ತ್ರ ಹೆಣೆಯುತ್ತಿದ್ದಾರೆ.

‘ಮುಖ್ಯಮಂತ್ರಿಯಾಗಿ ನಾಲ್ಕು ಅವಧಿ ಪೂರೈಸಿದರೂ ಗೌರವ, ಜನಪ್ರಿಯತೆ ಮುಕ್ಕಾಗದಂತೆ ಕಾಪಾಡಿಕೊಂಡಿರುವ ಪಟ್ನಾಯಕ್ ಅವರೇ ಒಡಿಶಾ ರಾಜಕೀಯದ ಮುಖ್ಯ ಅಂಶ. ದೇಶಾದ್ಯಂತ ತನ್ನ ಹೆಜ್ಜೆ ಗುರುತು ಮೂಡಿಸುವಲ್ಲಿ ಬಿಜೆಪಿ ಸಾಕಷ್ಟು ಯಶಸ್ವಿಯಾಗಿದ್ದರೂ ನವೀನ್‌ರಂತಹ ರಾಜಕಾರಣಿಯ ವಿರುದ್ಧ ಮೇಲುಗೈ ಸಾಧಿಸುವುದು ಅದಕ್ಕೆ ಕಠಿಣವಾಗಬಹುದು. ವ್ಯಕ್ತಿಗತವಾಗಿ ಅವರನ್ನು ಟೀಕಿಸುವುದರಿಂದ ಪ್ರತಿಪಕ್ಷಗಳಿಗೆ ಯಾವ ಮತಗಳಿಕೆಯೂ ಆಗಲಾರದು’ ಎನ್ನುತ್ತಾರೆ, ಉತ್ಕಲ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಬೃಂದಾಬನ್ ಸತ್ಪಥಿ.

ರಾಜ್ಯದ ಧಾನ್ಯಕಣಜ ಎಂದೇ ಪ್ರಸಿದ್ಧಿಯಾಗಿರುವ ಪಶ್ಚಿಮ ಒಡಿಶಾದ ಬಾರ್‌ಗಢ್‌ನ ಬಿಜೇಪುರ್ ವಿಧಾನಸಭೆ ಕ್ಷೇತ್ರ ಇದಕ್ಕೊಂದು ನಿದರ್ಶನ ಒದಗಿಸಿತು. 2018ರಲ್ಲಿ ಬಿಜೇಪುರ್‌ದಲ್ಲಿ ನಡೆದ ಮರು ಚುನಾವಣೆಯಲ್ಲಿ ಜಯಭೇರಿ ಬಾರಿಸುವುದಾಗಿ ಬಿಜೆಪಿ ಭಾವಿಸಿತ್ತು. ಅದಕ್ಕಾಗಿ ಏನೇನೋ ಪ್ರಯತ್ನಗಳು ನಡೆದವು. ಆದರೆ ನವೀನ್ ವಿರುದ್ಧ ಕಟು ಟೀಕಾಪ್ರಹಾರಕ್ಕೆ ಮುಂದಾದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿಗಳ ಮೇಲೆ ಚಪ್ಪಲಿ ಎಸೆತ, ಬಿಜೆಡಿ ಸಚಿವರ ಸಂಬಂಧಿ ಮೇಲೆ ಪ್ರಾಣಾಂತಿಕ ಹಲ್ಲೆ, ನವೀನ್ ಪಟ್ನಾಯಕ್ ಖಾಸಗಿ ಕಾರ್ಯದರ್ಶಿ ಮನೆಗೆ ಸಗಣಿ ಎರಚಿ ಆಕ್ರಮಣ ಮುಂತಾದ ಘಟನೆಗಳು ಪಕ್ಷಕ್ಕೆ ಮುಳುವಾದವು. 42,000 ಮತಗಳ ಬೃಹತ್ ಅಂತರದಲ್ಲಿ ಬಿಜೆಡಿ ಆ ಗೆದ್ದುಕೊಂಡಿತು.

ಅವಮಾನಕರ ಮರುಚುನಾವಣೆ ಸೋಲಿನ ನಂತರ ಬಿಜೆಪಿ ಚಿಪ್ಪಿನೊಳಗೆ ಅವಿತುಕೊಂಡಂತೆ ಕಂಡರೆ, ಜಿದ್ದಿನ ಪಟ್ನಾಯಕ್ ಹೆಚ್ಚು ಹೆಚ್ಚು ಜನಸಂಪರ್ಕ ಸಾಧಿಸುತ್ತಾ ಸಮುದಾಯಕ್ಕೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ. ತಳಮಟ್ಟದ ಕಾರ್ಯಕರ್ತರೊಂದಿಗೆ, ಸಾಮಾನ್ಯ ಜನರ ಜತೆ ಅಷ್ಟಾಗಿ ಬೆರೆಯದ ಮುಖ್ಯಮಂತ್ರಿ ಎಂದು ತಮ್ಮ ಕುರಿತು ಇರುವ ಗ್ರಹಿಕೆಯನ್ನು ಅವರು ತೊಡೆದುಹಾಕಲು ಅವರು ಪಂಚಾಯತ್ ಸದಸ್ಯರೊಂದಿಗೆ ನಿಕಟವಾಗಿ ಒಡನಾಡುತ್ತಿದ್ದಾರೆ. ‘ಆಮ್ ಗಾಂವ್, ಆಮ್ ವಿಕಾಸ್-ನನ್ನ ಗ್ರಾಮ, ನನ್ನ ಅಭಿವೃದ್ಧಿ’ ಎನ್ನುವ ಕಾರ್ಯಕ್ರಮವನ್ನು ಅದಕ್ಕಾಗಿ ತಮ್ಮ ನೆಚ್ಚಿನ ರಸ್ತೆ ಹಾಗೂ ನಿವಾಸ ಯೋಜನೆಗಳ ಪ್ರಗತಿಯನ್ನು ಮುತುವರ್ಜಿಯಿಂದ ಅವಲೋಕಿಸುತ್ತ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳ ಮೇಲುಸ್ತುವಾರಿ ನಡೆಸಿದ್ದಾರೆ.

ಸ್ಥಳದಲ್ಲೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿಧಿ ಬಿಡುಗಡೆ ಮಾಡುವ ಅವರ ಕ್ರಮವಂತೂ ವಿಪರೀತ ಜನಪ್ರಿಯತೆ ತಂದುಕೊಟ್ಟಿದೆ. ‘ಬಿಜು ಯುವ ವಾಹಿನಿ’ ಕಾರ್ಯಕ್ರಮದ ಮೂಲಕ ಹಳ್ಳಿ ಹಳ್ಳಿ ತಲುಪಿ, ತರುಣ ಜನಾಂಗವನ್ನು ಸೆಳೆಯಲು ಕಾರ್ಯಕರ್ತರಿಗೆ ನಿರ್ದೇಶನ ನೀಡಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ‘ಮಹಾನದಿ ಸುರಕ್ಷಾ ರ್ಯಾಲಿ’ಯನ್ನು ಪಕ್ಷ ಮೇ.16ರಿಂದ ಹಮ್ಮಿಕೊಂಡಿದೆ. ಪಶ್ಚಿಮ ಭಾಗವನ್ನು ಕೇಂದ್ರೀಕರಿಸಿ, 15 ಜಿಲ್ಲೆಗಳಿಗೆ ತಲುಪಿ, ಬಿಜೆಡಿ ಸಂಸದರು, ಶಾಸಕರು ಹಾಗೂ ಸ್ಥಳೀಯ ಪದಾಧಿಕಾರಿಗಳು ಪ್ರಚಾರ ನಡೆಸಲಿದ್ದಾರೆ.

ಪಕ್ಷದ ಚುನಾವಣೆ ಕಾರ್ಯಯಂತ್ರ ಬಲಿಷ್ಠವಾಗಿದ್ದು ಯಾವುದೇ ರೀತಿಯಲ್ಲಿ ಭಾಜಪ ತಲೆಯೆತ್ತಲು ಬಿಡದು ಎನ್ನುವ ಭರವಸೆ ವ್ಯಕ್ತಪಡಿಸುತ್ತಾರೆ, ಬಿಜೆಡಿ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಪ್ರಸನ್ನ ಆಚಾರ್ಯ. ‘ಮೋದಿಯನ್ನು ಪ್ರಚಾರಕ್ಕೆ ಕರೆತರಬಹುದು. ಮಾಧ್ಯಮ ಗೋಷ್ಠಿಗಳ ಮೂಲಕ ಪ್ರಚಾರ ಗಿಟ್ಟಿಸಬಹುದು. ಆದರೆ 147 ವಿಧಾನಸಭೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಎಲ್ಲಿ ಹೊಂಚುತ್ತಾರೆ?’ ಅವರು ಪ್ರಶ್ನಿಸುತ್ತಾರೆ. ಅಲ್ಲದೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಯಾರನ್ನು ಮುಂದಿಟ್ಟುಕೊಳ್ಳುತ್ತದೆ ಎನ್ನುವ ಮೂಲಕ ರಾಜ್ಯದಲ್ಲಿ ಬಿಜೆಪಿ ಇನ್ನೂ ವ್ಯಾಪಕವಾಗಿ ಸ್ಥಾಪಿತವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಆದರೆ ಒಡಿಶಾದಲ್ಲಿ ಪಕ್ಷಕ್ಕೆ ನಾಯಕರ ಕೊರತೆ ಇದೆ ಎನ್ನುವುದನ್ನು ಅಲ್ಲಗಳೆಯುವ ಬಿಜೆಪಿ ಕಾರ್ಯಕರ್ತರು, ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಆಗದೇ ಇರುವುದು ಒಂದು ಕೊರತೆ ಎಂದು ಒಪ್ಪಿಕೊಳ್ಳುತ್ತಾರೆ. ‘ಆದರೂ ಇನ್ನೂ ಒಂದು ವರ್ಷ ಸಮಯವಿದೆ. ರಾಜ್ಯದ ಎಲ್ಲ ಭಾಗದ ಜನತೆಯನ್ನು ಸೆಳೆಯುವ ಕಾರ್ಯಕ್ರಮ ರೂಪಿಸಲು ನಡೆಸಿದ್ದೇವೆ’ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಕೆ.ವಿ. ಸಿಂಗ್ ದೇವ್ ಭರವಸೆ ವ್ಯಕ್ತಪಡಿಸುತ್ತಾರೆ.

ಮಾಜಿ ಸಚಿವ ನಿರಂಜನ್ ಪಟ್ನಾಯಕ್ ಅವರನ್ನು ರಾಜ್ಯದ ಮುಖ್ಯಸ್ಥರನ್ನಾಗಿ ಕಳೆದ ತಿಂಗಳು ಕಾಂಗ್ರೆಸ್ ನೇಮಿಸಿರುವುದು ಸಹ ಬಿಜೆಡಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. ಕಾರ್ಯಕರ್ತರಲ್ಲಿದ್ದ ವಿವಾದ, ಒಳಜಗಳ ಪರಿಹರಿಸಲು ಕಾಂಗ್ರೆಸ್ ಇತ್ತೀಚೆಗೆ ಕೈಗೊಂಡ ಈ ಕ್ರಮದಿಂದ ಪಕ್ಷ ತೊರೆಯುವವರ ಸಂಖ್ಯೆ ಕಡಿಮೆಯಾದರೆ ಅದು ಬಿಜೆಡಿಗಿಂತ ಭಾಜಪಕ್ಕೇ ಹಾನಿಕರವಾಗಬಹುದು. ಆದಿವಾಸಿ ಹಾಗೂ ಕರಾವಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭಿವೃದ್ಧಿಪಡಿಸಿಕೊಂಡರೆ ತ್ರಿಕೋನ ಸ್ಪರ್ಧೆ ಏರ್ಪಟ್ಟು ಬಿಜೆಡಿ ವಿರುದ್ಧವಾಗಿರುವ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಇದರಿಂದ ಬಿಜೆಪಿ ಬೆಳವಣಿಗೆಗೆ ಅಡ್ಡಿ.

ತದ್ವಿರುದ್ಧವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಗಳಿಂದ ವಲಸೆ ಬರುತ್ತಿರುವ ನಾಯಕರನ್ನು ಸೇರಿಸಿಕೊಳ್ಳುತ್ತಾ ಬಿಜೆಡಿ ತನ್ನ ಶಕ್ತಿ ವರ್ಧಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಪಟ್ನಾಯಕ್ ತವರು ಜಿಲ್ಲೆ ಗಂಜಾಂನಲ್ಲಿ ಇತ್ತೀಚೆಗೆ ಹಿರಿಯ ಕಾಂಗ್ರೆಸ್ ನಾಯಕ ಚಂದ್ರಶೇಖರ್ ಸಾಹು ಹಾಗೂ ಮಾಜಿ ಕೇಂದ್ರಸಚಿವ ಬಿಕ್ರಮ್ ಪಾಂಡಾ ಬಿಜೆಡಿಗೆ ಸೇರ್ಪಡೆಯಾದರು. ಆಡಳಿತ ವಿರೋಧಿ ಅಲೆ ಹೊಡೆತದಿಂದ ಪಾರಾಗಲು ಪಕ್ಷಕ್ಕೆ ಹೊಸ ನಾಯಕರ ಸೇರ್ಪಡೆ ಸಹಕಾರಿಯಾದರೆ ಅದರಿಂದ ಅನಾನುಕೂಲಗಳೂ ಇವೆ. ಮೂಲ ಬಿಜು ಜನತಾದಳದ ಸದಸ್ಯರು ಈ ಬೆಳವಣಿಗೆಯಿಂದ ಅಸಂತುಷ್ಟಗೊಂಡು ಆಂತರಿಕ ಗೊಂದಲಗಳು ಸೃಷ್ಟಿಯಾಗಬಹುದು.

‘ಪರಸ್ಪರ ವಿರುದ್ಧವಾದ ಇಂತಹ ಹಲವು ಬೆಳವಣಿಗೆಗಳನ್ನು ನಿಯಂತ್ರಣದಲ್ಲಿಡುವುದು ಮುಖ್ಯಮಂತ್ರಿಯ ಕೈಯಲ್ಲಿದೆ. ಅದರಲ್ಲಿ ಅವರು ಸಾಧಿಸುವ ಯಶಸ್ಸಿನ ಪ್ರಮಾಣದಲ್ಲಿಯೇ ಲೋಕಸಭೆ ಚುನಾವಣೆ ಫಲಿತಾಂಶವೂ ನಿಂತಿದೆ’ ಎನ್ನುತ್ತಾರೆ, ಮಾಜಿ ಹಣಕಾಸು ಸಚಿವ, ರಾಜಕೀಯ ವಿಶ್ಲೇಷಕ, ಪಂಚಾನನ ಕನೌಂಗೊ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಹಳಷ್ಟು ನಿಂತಿದೆ. ಆ ನಂತರ ನಡೆಯುವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢಗಳ ವಿಧಾನಸಭೆ ಚುನಾವಣೆಗಲ್ಲಿ ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದು ಸಹ. ಒಡಿಶಾದಲ್ಲಿ ತನ್ನ ನೆಲೆ ಸ್ಥಾಪಿಸುವ ಅದರ ಹವಣಿಕೆ ಈ ಎಲ್ಲವನ್ನೂ ಆಧರಿಸಿದೆ. ಸ್ಪಷ್ಟ ಬಹುಮತದ ಗೆಲುವನ್ನು ಅದು ಕರ್ನಾಟಕದಲ್ಲಿ ಸಾಧಿಸಿದರೆ ಒಡಿಶಾದಲ್ಲಿ ತನ್ನ ಪ್ರಯತ್ನಗಳನ್ನು ಅದು ಇಮ್ಮಡಿಗೊಳಿಸಬಹುದು. ಸಾಂಸ್ಥಿಕ ಕೊರತೆಗಳನ್ನು ನೀಗಿಕೊಂಡು ಯುದ್ಧಕ್ಕೆ ಬಿಜೆಪಿ ಸಜ್ಜಾಯಿತೆಂದರೆ, ಬಿಜೆಡಿ ಬಹು ದೊಡ್ಡ ಸವಾಲನ್ನು ಎದುರಿಸಬೇಕಾಗಿ ಬರುತ್ತದೆ ಎಂದೂ ಅಭಿಪ್ರಾಯಪಡುತ್ತಾರೆ.

ಒಟ್ಟಾರೆ, ಸದ್ಯ ಒಡಿಶಾ ವಶಪಡಿಸಿಕೊಳ್ಳುವಲ್ಲಿ ಬಿಜೆಪಿಗೆ ಹಲವು ತೊಡಕುಗಳಿವೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಆದರೂ ‘ಮಾಣಿಕ್ ಸರ್ಕಾರ್ ಅವರಂತಹ ಜನಪ್ರಿಯ ಮುಖ್ಯಮಂತ್ರಿ ಹಾಗೂ ಸಿಪಿಎಂ ನಂತರಬಲಿಷ್ಠ ಪಕ್ಷ ಇದ್ದ ತ್ರಿಪುರಾದಲ್ಲಿಯೇ ಬಿಜೆಪಿ ತನ್ನ ಪ್ರಯತ್ನದಲ್ಲಿ ಸಫಲವಾಗಿರುವಾಗ ಒಡಿಶಾದಲ್ಲಿಯೂ ಅದೇ ಫಲಿತಾಂಶ ಸಿಗಲಾರದೇ?’ ಎಂದು ಪ್ರಶ್ನಿಸುತ್ತಾರೆ, ಭಾಜಪ ಪ್ರಧಾನ ಕಾರ್ಯದರ್ಶಿ ಸುರೇಶ್ ಪೂಜಾರಿ. ‘ನಾವು ಸದ್ದುಗದ್ದಲವಿಲ್ಲದೆ ಕಾರ್ಯ ನಿರತರಾಗಿದ್ದೇವೆ. ಫಲ ಮುಂದಿನ ವರ್ಷ ದೊರಕಲಿದೆ’ ಎಂಬ ಭರವಸೆಯನ್ನು ಅವರದು.

 

Leave a Reply

Your email address will not be published. Required fields are marked *

three × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top