ಕೆ.ಆರ್.ಮಾರುಕಟ್ಟೆಯಲ್ಲಿ ʼಕಮಲ್ ಶ್ರೀದೇವಿʼ: ಸೋನೆ ಮಳೆ ಜತೆಗೆ ಸಚಿನ್ ಚಲುವರಾಯಸ್ವಾಮಿ-ಸಂಗೀತಾ ಭಟ್ ಮಸ್ತ್ ಫೋಟೊ ಶೂಟ್
ಶೀರ್ಷಿಕೆಯಿಂದಲೇ ಸದ್ಯ ಸ್ಯಾಂಡಲ್ವುಡ್ನ ಮನ ಸೆಳೆದ ಚಿತ್ರಗಳಲ್ಲಿ ʼಕಮಲ್ ಶ್ರೀದೇವಿʼ (Kamal Sridevi) ಕೂಡ ಒಂದು. ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಜನಪ್ರಿಯ ಜೋಡಿಯಾಗಿದ್ದ ಕಮಲ್ ಹಾಸನ್ ಮತ್ತು ಶ್ರೀದೇವಿ ಹೆಸರನ್ನೇ ಶೀರ್ಷಿಕೆಯನ್ನಾಗಿಸಿಕೊಂಡ ಚಿತ್ರತಂಡ ಹೊಸದೊಂದು ಕಥೆ ಹೇಳಲು ಪ್ರೇಕ್ಷಕರ ಮುಂದೆ ಬರುತ್ತಿದೆ. ವಿ.ಎ.ಸುನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯವನ್ನೂ ಆರಂಭಿಸಲಾಗಿದೆ. ಅದರ ಭಾಗವಾಗಿ ಭಿನ್ನವಾಗಿ ಫೋಟೊ ಶೂಟ್ ಮಾಡಿಸಲಾಗಿದೆ.



ಇತ್ತೀಚಿನ ದಿನಗಳಲ್ಲಿ ಸಿನಿಮಾವೊಂದನ್ನು ತಯಾರಿಸುವಷ್ಟೇ ಗಮನ ಅದರ ಪ್ರಚಾರದ ಕಡೆ ನೀಡಬೇಕಾಗುತ್ತದೆ. ಚಿತ್ರದ ಪ್ರಚಾರ ಹೇಗೆ, ಎಷ್ಟು ಮಾಡಿದರೂ ಕಡಿಮೆಯೇ. ಭಿನ್ನವಾಗಿ, ಕ್ರಿಯೇಟ್ ಆಗಿ ಪ್ರಚಾರ ನಡೆಸಿದರಷ್ಟೇ ಪ್ರೇಕ್ಷಕರನ್ನ ಗಮನ ಸೆಳೆಯಬಹುದು. ಹೀಗಾಗಿ ಸದ್ಯ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ʼಕಮಲ್ ಶ್ರೀದೇವಿʼ ಚಿತ್ರತಂಡ ವಿಶೇಷ ಫೋಟೊ ಶೂಟ್ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡಿ ಚಿತ್ರೀಕರಣ ಪೂರ್ಣಗೊಳಿಸಲಾಗಿತ್ತು. ಹೀಗಾಗಿ ಇದೀಗ ಪ್ರಚಾರದಲ್ಲಿ ಸಿನಿಮಾ ತಂಡ ತೊಡಗಿಸಿಕೊಂಡಿದೆ.

ಪ್ರಚಾರ ಆರಂಭಿಸಿರುವ ಚಿತ್ರತಂಡ ಇದೀಗ ಕಥೆಯ ಥೀಮ್ನಲ್ಲಿ ಅದೇ ಪಾತ್ರಗಳ, ಅದೇ ಕಾಸ್ಟ್ಯೂಮ್ನಲ್ಲಿ ಕ್ಯಾಂಡಿಡ್ ಫೋಟೊ ಶೂಟ್ ಮಾಡಿದೆ. ನಾಯಕ ಸಚಿನ್ ಚಲುವರಾಯಸ್ವಾಮಿ, ನಟಿ ಸಂಗೀತಾ ಭಟ್ ಹಾಗೂ ಮತ್ತೊಬ್ಬ ನಟಿ ಅಕ್ಷಿತಾ ಬೋಪಯ್ಯ ಜತೆಗೆ ಇಡೀ ಕೆ.ಆರ್. ಮಾರುಕಟ್ಟೆ ಓಡಾಡಿದ್ದಾರೆ. ಹೂ, ಹಣ್ಣು, ಅರಿಶಿಣ-ಕುಂಕುಮ, ಬಳೆ ಅಂಗಡಿಗಳಲ್ಲಿ ಇವರು ಪೋಸ್ ಕೊಟ್ಟಿದ್ದಾರೆ.

ಜತೆಗೆ ಕೆ.ಆರ್. ಮಾರ್ಕೆಟ್ ಕಟ್ಟಡದ ಮೇಲೆ ಹೂ ಚೆಲ್ಲಿ ಸಂಭ್ರಮಿಸಿದ್ದಾರೆ. ಕೋಟೆ ಬೀದಿಯಲ್ಲಿ ಮಂಗಳಮುಖಿಯರು ದೃಷ್ಟಿ ತೆಗೆದಿದ್ದಾರೆ. ಕವಡೆ ಶಾಸ್ತ್ರ ಕೇಳಿದ್ದಾರೆ. ಅಲ್ಲದೆ ಖಾಸಗಿ ಬಸ್ ನಿಲ್ದಾಣದಲ್ಲಿ, ಬಸ್ ಒಳಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ಯುವ ಸೆಲೆಬ್ರಿಟಿ ಛಾಯಾಗ್ರಾಹಕ ಕೆವಿನ್ ಶೆರ್ವಿನ್ ಮಸ್ಕರೇನ್ಹಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ʼಕಮಲ್ ಶ್ರೀದೇವಿʼ ಥೀಮ್ ಅನ್ನು ಕ್ಯಾಂಡಿಡ್ ಆಗಿ ಸೆರೆಹಿಡಿದಿದ್ದಾರೆ.

ಶ್ರೀ ಎನ್ ಚಲುವರಾಯ ಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ನಡಿ ಬಿ.ಕೆ. ಧನಲಕ್ಷ್ಮೀ ನಿರ್ಮಾಣ ಮಾಡುತ್ತಿದ್ದಾರೆ. Barnswallow companyಯ ರಾಜವರ್ಧನ್ ಸಹ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಸಚಿನ್ ಮಾತನಾಡಿ, ʼʼಇದು ನಮ್ ಕ್ರಿಯೇಟಿವ್ ಹೆಡ್ ರಾಜವರ್ಧನ್ ಅವರ ಐಡಿಯಾ. ʼಕಮಲ್ ಶ್ರೀದೇವಿʼ ಚಿತ್ರಕ್ಕೂ ಈ ಫೋಟೊಶೂಟ್ಗೂ ನಿಕಟ ಸಂಬಂಧವಿದೆ. ಕಮಲ್ ಪಾತ್ರಕ್ಕೂ ಸಂಗೀತಾ ಭಟ್ ಹಾಗೂ ಅಕ್ಷಿತಾ ಪಾತ್ರಕ್ಕೂ ಸಂಬಂಧವೇನು ಎನ್ನುವುದನ್ನು ನೀವು ಈ ಫೋಟೊಗಳನ್ನು ನೋಡಿ ಊಹಿಸಿಕೊಳ್ಳ ಬಹುದುʼʼ ಎಂದಿದ್ದಾರೆ.

ಸಂಗೀತಾ ಭಟ್ ಚಿತ್ರದ ಬಗ್ಗೆ ಮಾಹಿತಿ ನೀಡಿ, ʼʼಕಮಲ್ ಶ್ರೀದೇವಿʼ ಚಿತ್ರದಲ್ಲಿ ನಾನೇನು? ನನ್ನ ಪಾತ್ರವೇನು? ಎನ್ನುವುದಕ್ಕೆ ಈ ಪೋಟೊಶೂಟ್ ಒಂದು ಕ್ಲ್ಯೂ. ರಾಜವರ್ಧನ್ ಅವರಲ್ಲೊಬ್ಬ ನಿರ್ದೇಶಕ ಇದ್ದಾನೆ. ಅವರು ಬೇಗ ಆಚೆ ಬರಲಿ. ಮಾರ್ಕೆಟ್ನಲ್ಲಿ ಫೋಟೊಶೂಟ್ ವಿಶೇಷವಾಗಿತ್ತು. ಸಾಮಾನ್ಯರ ಮಧ್ಯೆ ನಡೆಸಿದ ಶೂಟಿಂಗ್ ವಿಶೇಷವಾಗಿತ್ತುʼʼ ಎಂದು ಹೇಳಿದ್ದಾರೆ.

ರಾಜವರ್ಧನ್ ಮಾತನಾಡಿ, ʼʼಇವತ್ತಿಗೆ ಈ ರೀತಿ ಫೀಲ್ಡಿಳಿದು, ನುಗ್ಗಿ , ಪ್ರಚಾರ ಮಡ್ಲೇ ಬೇಕು. ಹೊಸದಾಗಿ ಪ್ರೇಕ್ಷಕರಿಗೆ ನಾಟುವ ವಿಷಯ ಯಾವಾಗಲೂ ಆರ್ಗ್ಯಾನಿಕ್ ಆಗಿರುತ್ತದೆ. ಅದಕ್ಕೆ ಈ ಪ್ರಯತ್ನʼʼ ಎಂದು ವಿವರಿಸಿದ್ದಾರೆ. ಸುನೀಲ್ ಕುಮಾರ್ ಮಾಹಿತಿ ನೀಡಿ, ʼʼನಾನು ʼಜಾಕಿʼ ಹಾಗೂ ʼಅಣ್ಣಾಬಾಂಡ್ʼ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕೆಲಸ ಮಾಡುವಾಗ ಸೂರಿ ಜತೆಗೆ ಈ ಜಾಗದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದೆ. ʼಕಮಲ್ ಶ್ರೀದೇವಿʼ ಚಿತ್ರೀಕರಣದ ವೇಳೆ ಇಲ್ಲಿ ಏನಾದರೂ ಮಾಡಬಹುದು ಅನ್ನೋ ಆಲೋಚನೆ ಬಂದಿತ್ತು. ಸಿನಿಮಾಕ್ಕೂ, ಈ ಜಾಗಕ್ಕೂ, ಈ ಫೋಟೊಶೂಟ್ಗೂ ಖಂಡಿತ ಲಿಂಕ್ ಇದೆ. ಅದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆʼʼ ಎಂದು ಹೇಳಿದ್ದಾರೆ.