About Us Advertise with us Be a Reporter E-Paper

ಗುರು

ಶರೀರೈಕ್ಯ ಕ್ರಿಯೆ

- ಕ್ಷಿತಿಜ ಬೀದರ್

ಪಂಚಮಹಾಭೂತಗಳಿಂದಾದ ಶರೀರವು ಹಂಚಿ ಹೋಗುವ ಸತ್ಯವು ಕಣ್ಣೆದುರಿನಲ್ಲಿಯೇ ಇದೆ. ಭೌತಿಕ ಶರೀರದಲ್ಲಿ ಸಮಾವೇಶಗೊಂಡ ಅಗೋಚರ ಶರೀರಗಳ ಕಲ್ಪನೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮೂರು ಪದರುಗಳ ಶರೀರ ಅವಸ್ಥೆಯ ಒಂದು ಕ್ಷಣದ ಅನುಭೂತಿ ಲೇಖಕರ ಅನುಭವಕ್ಕೆ ಬಂದಿರುವುದನ್ನು ಓದುಗರಿಗೋಸ್ಕರ ಇಲ್ಲಿ ವಿಶದಪಡಿಸಲಾಗಿದೆ.

ಅಧ್ಯಾತ್ಮ ಸಾಧನೆಗೆ ಶರೀರ ಬೇಕು. ಇದೊಂದು ಮಾಧ್ಯಮವಷ್ಟೆ. ತನ್ನದೇ ಕಾರ್ಯ ಚಟುವಟಿಕೆಯಿಂದ, ಸ್ವಭಾವ ಗುಣಗಳಿಂದ ಹಸಿವೆ, ನಿದ್ರೆ, ಮೈಥುನ ಎಲ್ಲಾ ವ್ಯಕ್ತಿ ಭಿನ್ನವಾಗಿಲ್ಲ. ಹೊರತಾಗಿಲ್ಲ. ‘ಆಮೇಧ್ಯದ ಹಡಿಕೆ ಮೂತ್ರದ ಕುಡಿಕೆ ’ ಎಂದು ಅಕ್ಕಮಹಾದೇವಿ ಒಂದು ಸಂದರ್ಭದಲ್ಲಿ ಹೇಳಿ, ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನೊಲಿದ ಕಾಯ ಎಂತಾದಡೆಮಗೇನಯ್ಯಾ? ಎಂದು ಶರೀರವನ್ನು ಗೌಣಗೊಳಿಸುತ್ತಾಳೆ. ಇಂಥ ವಿವೇಕ, ಅರಿವು, ಪ್ರಜ್ಞೆ, ಜ್ಞಾನ, ಜನ ಸಾಮಾನ್ಯರಲ್ಲಿ ಕಾಣಲಾಗದು. ಶರೀರವೇ ತಾನು ಎಂಬ ಭ್ರಮೆಯಲ್ಲಿ ಆತ್ಮದ ಅರಿವೇ ಇಲ್ಲದಂತೆ ವ್ಯವಹರಿಸುತ್ತಾರೆ. ಹಾರ್ಮೋನುಗಳ ಸ್ರವಿಕೆಯಿಂದ ವ್ಯಕ್ತಿಯ ಮನಸ್ಸಿನ ಮೇಲಾಗುವ ಪ್ರಭಾವವು ನಿಯಂತ್ರಣಕ್ಕೆ ಸಿಗದಂಥದ್ದು. ಕೇವಲ ರಸಗಳ ಕ್ರಿಯೆಯಿಂದ ಅಪರಾಧಿ ಸ್ವಭಾವ ಹೊಂದುವ ವಿದ್ಯಮಾನವು ಅಚ್ಚರಿ ಮೂಡಿಸುತ್ತದೆ.

ಶರೀರವು ಜಡ ಚೈತನ್ಯಗಳ ಸಂಯೋಗವಲ್ಲವೇ? ಶರೀರದಲ್ಲಿ ಚೈತನ್ಯ ಒಂದೇ ಅಲ್ಲ, ಸ್ಥೂಲ , ಸೂಕ್ಷ್ಮ , ಕಾರಣ ಎಂಬ ಅವಸ್ಥೆಗಳಿದ್ದು ಇನ್ನು ಆಳದಲ್ಲಿ ಅತೀಂದ್ರಿಯ, ತುರಿಯ ಘಟ್ಟಗಳನ್ನು ಗುರುತಿಸಬಹುದಾಗಿದೆ. ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದವರಿಗೆ ಇದು ತಿಳಿದಿರುವ ವಿಷಯ. ವ್ಯಕ್ತಿ ಸತ್ತರೂ ಆತ್ಮ ಅಮರ ಎನ್ನುವ ಮಾತೇ ಇದೆ. ಹಾಗಿದ್ದರೂ ಅಮರಕ್ಕೆ ಸಾಕ್ಷಿಯಾಗಿ ವ್ಯಕ್ತಿ ಸಾವನ್ನು ಮರೆತು ಕೂಡಿಡುವ ಪ್ರವೃತ್ತಿ ಹೊಂದಿರುತ್ತಾನೆ. ಶರೀರವು ಹಂಚಿ ಹೋಗುವ ಸತ್ಯವು ಕಣ್ಣೆದುರಿನಲ್ಲಿಯೇ ಇದೆ. ಭೌತಿಕ ಶರೀರದಲ್ಲಿ ಸಮಾವೇಶಗೊಂಡ ಅಗೋಚರ ಶರೀರಗಳ ಕಲ್ಪನೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಮೂರು ಪದರುಗಳ ಶರೀರ ಅವಸ್ಥೆಯ ಒಂದು ಕ್ಷಣದ ಅನುಭೂತಿ ನನ್ನ ಅನುಭವಕ್ಕೆ ಬಂದಿರುವ ಪ್ರಸಂಗ ಇಲ್ಲಿದೆ.

ಆ ದಿನ ಶೆಕೆ ಎಂದು ಅಪರೂಪವಾಗಿ ಬಯಲು ಮಹಡಿಗೆ ಬಂದು ಒಬ್ಬನೇ ಮಲಗಿದೆ. ನಿದ್ರೆಯ ಮಂಪರು, ಸುರಕ್ಷಿತ ಎನಿಸದ ಬಯಲು, ಮನಸ್ಸಿನಲ್ಲಿ ಏನೋ ಅಸಮಾಧಾನವಿತ್ತು. ಗಂಟೆಯ ನಂತರ ಒಂದು ಅನುಭವದ ಚೂರು ಭಯ ಮೂಡಿಸಿ ಮಾಯವಾಯಿತು. ಮನುಷ್ಯಾಕೃತಿಯ ಕಪ್ಪು ಛಾಯೆ ಕಿಟಕಿಯಿಂದ ನನ್ನನ್ನು ಹುಡುಕುತ್ತಿರುವಂತೆ ಭಾಸವಾಯಿತು. ನಾನು ವಿಹ್ವಲಗೊಂಡು ಕೋಣೆಯ ಎಂದಿನ ಮಾಮೂಲು ಸ್ಥಳದಲ್ಲಿಯೇ ಮಲಗಿರುವುದನ್ನು ಸ್ಮರಣೆಗೆ ತಂದುಕೊಂಡೆ.

‘ನಾನು ಇಲ್ಲಿಲ್ಲ, ಅಲ್ಲಿ ಹೊರಗೆ ಬಯಲಲ್ಲಿ ಮಲಗಿದ್ದೇನೆ ನೋಡು ಹೋಗು’ ಎಂದು ಕಪ್ಪು ಛಾಯೆಗೆ ಹೇಳಿದೆ. ಅದರ ದುಗುಡು ನನ್ನಲ್ಲಿಯೂ ಕಂಡಿತು. ಹಾಗಾದರೆ ರೂಮಿನಲ್ಲಿಯೇ ಮಲಗಿದಂತೆ ಭಾಸವಾದ ಪ್ರಜ್ಞೆ ಯಾವುದು? ಆ ಕಪ್ಪು ಛಾಯೆ ನನ್ನನ್ನು ಗಾಬರಿಯಲ್ಲಿ ಹುಡುಕುತ್ತಿರುವುದು ಯಾಕೆ? ಬಯಲಲ್ಲಿ ಮಲಗಿರುವುದು ಯಾರು? ಅದು ನಾನೇ ಅಲ್ಲವಾ!? ತಕ್ಷಣ ನನಗೆ ಎಚ್ಚರವಾಗಿ ‘ಇದು ಸೂಕ್ತ ಸ್ಥಳವಲ್ಲ’ ಎಂದುಕೊಂಡು ಆತಂಕದಲ್ಲಿ ಎದ್ದು ಕೋಣೆಯಲ್ಲಿ ಸಿದ್ಧವಾಗಿದ್ದ ಹಾಸಿಗೆಯಲ್ಲಿ ಬಂದು ಮಲಗಿದೆ.
ಬೆಳಗ್ಗೆ ಈ ಅನುಭವ ನಿಧಾನಕ್ಕೆ ಸ್ಮೃತಿಯಲ್ಲಿ ತೇಲಿ ಬಂತು. ಅಧ್ಯಾತ್ಮಿಕವಾಗಿ ಯೋಚಿಸಿದೆ. ಸ್ಥೂಲ ಶರೀರಕ್ಕೆ ಭೌತಿಕ ರೂಪವಿದೆ , ಆಕಾರವಿದೆ. ಜಡತ್ವವಿದೆ. ಸೂಕ್ಷ್ಮ ಶರೀರಕ್ಕೆ ರೂಪ ಮಾತ್ರವಿರುತ್ತದೆ.

ಜಡತ್ವವಿರುವುದಿಲ್ಲ. ಆದರೆ ‘ಶರೀರ’ಕ್ಕೆ ರೂಪವು ಇಲ್ಲ, ಜಡತ್ವವೂ ಇಲ್ಲ. ಆಯುಷ್ಯ ಮುಗಿಯದೇ ಹೊಂದಿದವರ ಸ್ಥೂಲ ಶರೀರ ಮಾತ್ರ ಮಣ್ಣು ಸೇರುತ್ತದೆ. ಸೂಕ್ಷ್ಮ ಶರೀರಗಳು ಹಾಗೆಯೇ ಉಳಿದು ಬಿಡುತ್ತವೆ ಎಂದು ಯೋಚಿಸಿದಾಗ ನನ್ನ ಅನುಭವ ಸ್ಪಷ್ಟವಾಯಿತು. ಬಯಲು ಪ್ರದೇಶದಲ್ಲಿ ಮಲಗಿದ ನಾನು ಸ್ಥೂಲ ಶರೀರಿ ಅಲ್ಲವೇ! ಕಪ್ಪು ಛಾಯೆ ಜೀವಾತ್ಮ , ಅದು ಸೂಕ್ಷ್ಮ ಶರೀರವಾಗಿದೆ. ರೂಮಿನೊಳಗೆ ಮಲಗಿದ್ದು ನನ್ನದೇ ಕಾರಣ ಶರೀರ! ಅಭ್ಯಾಸ ಬಲದಂತೆ ಅದು ನನ್ನಿಂದ ಬೇರ್ಪಟ್ಟು ತನ್ನ ಮಾಮೂಲು ಸ್ಥಳದಲ್ಲಿಯೇ ವಿರಮಿಸಿದೆ. ಖಾಯಂ ಸ್ಥಳಕ್ಕೆ ಬೇರ್ಪಟ್ಟ ಸೂಕ್ಷ್ಮ ಶರೀರ ನನ್ನ ಸ್ಥೂಲ ಶರೀರ ಕಾಣದೆ ದಿಗಿಲುಗೊಂಡಿದೆ. ಅದರ ಇಂಗಿತ ಅರಿತ ಕಾರಣ ‘ಶರೀರ ’ ಹೊರಗೆ ಬಯಲಲ್ಲಿ ಮಲಗಿದ್ದ ನನ್ನೆಡೆಗೆ ಹೋಗಲು ನಿರ್ದೇಶನ ನೀಡಿದೆ. ಮೂರು ಶರೀರಗಳು ಒಂದು ಕ್ಷಣ ಮಾತ್ರ ಪ್ರತ್ಯೇಕಗೊಂಡು ಮತ್ತೆ ಕೂಡಿಕೊಂಡಿರಬೇಕು ಎಂದೆನಿಸಿತು. ಈ ಅನುಭವ ಅಂತರಾತ್ಮನಿಗೆ ಸಿಕ್ಕಾಗ ಭೌತಿಕ ಶರೀರಕ್ಕೆ (ಶುದ್ಧ ಮನಸ್ಸಿನ ಅರೆ ಪ್ರಜ್ಞೆಗೆ ) ವರ್ಗಾಯಿಸಿದಂತೆ ತೋರುತ್ತದೆ. ಅಂತರಾತ್ಮ ಅಂದರೆ ಸಾಕ್ಷಿಭೂತ ಪ್ರಜ್ಞೆ ಅಲ್ಲವೇ? ಧ್ಯಾನ ಸಮಾಧಿಯಲ್ಲಿ ಶರೀರೈಕ್ಯದ ಅನುಭವಗಳು ಬೇಕಾದಷ್ಟು ಸಿದ್ಧಿಸಿರುತ್ತವೆ. ನನಗಾದದ್ದು ಆಕಸ್ಮಿಕವಷ್ಟೆ! ಜ್ಞಾನಿಗಳು ಈ ವಿದ್ಯಮಾನವನ್ನು ಬೇರೆ ದೃಷ್ಟಿಕೋನದಲ್ಲಿ ವಿವರಿಸಲೂ ಬಹುದು.

Tags

Related Articles

Leave a Reply

Your email address will not be published. Required fields are marked *

Language
Close