About Us Advertise with us Be a Reporter E-Paper

ಗುರು

ಮೈ-ಮನ ಪವಿತ್ರವಾಗಿಸುವ ಪ್ರಕ್ರಿಯೆ

ಡಾ.ಗುರುರಾಜ ಪೋಶೆಟ್ಟಿಹಳ್ಳಿ

ನುಷ್ಯನಲ್ಲಿ ಎರಡು ಶಕ್ತಿಗಳಿವೆ. ಒಂದು ಜ್ಞಾನ ಶಕ್ತಿ. ಮತ್ತೊಂದು ದೈವಿಕ ಶಕ್ತಿ. ಜ್ಞಾನ ಬಲ ಮತ್ತು ಬಾಹು ಬಲ. ಇವೆರಡರಿಂದಲೇ ಬದುಕು. ಸಮೃದ್ಧ ಧರ್ಮಕ್ಕೆ ಅದುವೇ ಅಂಗ. ಅಂತೆಯೇ ಅರಿವಿನಿಂದ ಮುಂದುವರಿಯುವ ಧಾರ್ಮಿಕನ ಜೀವನದಲ್ಲಿ ಎರಡು ದೀಕ್ಷೆ ಮತ್ತು ವ್ರತಗಳಿವೆ, ಅದುವೇ ನಿಯಮ, ಸಂಯಮಗಳು. ಒಂದು ಅಂತರಂಗ ದೀಕ್ಷೆಯಾದರೆ ಮತ್ತೊಂದು ಬಹಿರಂಗ ದೀಕ್ಷೆ.

ಅಂತರಂಗ ದೀಕ್ಷೆಯೆಂದರೆ ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಳ್ಳುವುದು. ತನ್ಮೂಲಕ ಪ್ರತಿಯೊಂದು ಧರ್ಮದ ಆಚರಣೆಯ ಹಿನ್ನೆಲೆ, ಮುನ್ನಲೆಗಳನ್ನು ಅರಿಯುವುದು. ಅಂತಹ ತಿಳಿವಳಿಕೆ ಆತನ ನಡವಳಿಕೆಯನ್ನು ನಿಶ್ಚಯಿಸುತ್ತದೆ. ಅಂತಹ ಅರಿವನ್ನೇ ಋತಂ ವಿಜ್ಞಾನಂ ಎನ್ನುತ್ತೇವೆ. ತಿಳಿವಳಿಕೆ ಬದುಕಿನ ದೊಡ್ಡ ಸಂಪತ್ತು. ತಿಳಿವಳಿಕೆ ಇಲ್ಲದಿದ್ದರೆ ಬದುಕು, ಮನಸ್ಸು ಬುದ್ಧಿ ಎಲ್ಲವೂ ಅಸ್ಥಿರ.

ಬದುಕಿನ ಮತ್ತೊಂದು ಮುಖವೇ ಬಹಿರಂಗ ದೀಕ್ಷೆ. ಇದರಿಂದ ಬಾಹು ಬಲ. ದೇಹದ ದೀಕ್ಷೆ. ತಿಳಿವಳಿಕೆಗೆ ತಕ್ಕ ನಡವಳಿಕೆ. ಅರಿವಿಗೆ ಅನುಗುಣವಾದ ಆಚಾರ. ಅದುವೇ ಜ್ಞಾನದಿಂದ ಕೂಡಿದ ಕರ್ಮಯೋಗ. ಇದೊಂದು ಉತ್ತಮ ಉಪಾಯ. ಉಪಾಯಕ್ಕೆ ಯೋಗವೆನ್ನುತ್ತಾರೆ. ದೇಹಕ್ಕೆ ಎರಡು ದೀಕ್ಷೆ. ಅದುವೇ ನಿಯಮಬದ್ಧತೆ ಮತ್ತು ಸಂರಕ್ಷಣೆ. ಎಲ್ಲರ ಬದುಕಿನಲ್ಲಿ ದೇಹವೇ ಪ್ರಧಾನ. ಎಲ್ಲವೂ ಆಗಿದೆ. ದೇಹವಿಲ್ಲದೇ ಏನೂ ಇಲ್ಲ. ಅದು ಅನುಭವವುಳ್ಳದ್ದು. ಅನುಭವ, ಅನುಭಾವ ಎಲ್ಲಕ್ಕೂ ದೇಹವೇ ಆಧಾರ. ಅದಕ್ಕೆ ನಿಯಮಗಳ ಸಂರಕ್ಷಣೆ ಬೇಕು. ಘೋಷಣೆಯ ರಕ್ಷಣೆ ಬೇಕು. ಏನೆಲ್ಲಾ ಸಂಪಾದಿಸಲು, ಭೋಗಿಸಲು ದೇಹ ಬೇಕು. ದೇಹವಿಲ್ಲದೇ ಅನುಭವಿಸುವುದು ಕಷ್ಟ. ಅದನ್ನೇ ದಾಸರು ಸಾಧನದ ದೇಹವಿದು ನೀ ದಯದಿಂ ಕೊಟ್ಟದ್ದು ಸಾಧಾರಣವಲ್ಲಎಂದರು.

ದೇಹವಿಲ್ಲದೇ ಸಾಧನವಿಲ್ಲ

ಬುದ್ಧಿ, ಮನಸ್ಸುಗಳಿರಲು ದೇಹ ಬೇಕು. ದೇಹವಿಲ್ಲದೇ ಯಾವ ಸಾಧನವೂ ಇಲ್ಲ. ಯಜ್ಞ, ದಾನ, ತಪಸ್ಸು, ಶ್ರವಣಗಳಿಗೂ ದೇಹ ಬೇಕು. ಎಲ್ಲ ಸಾಧನೆಗೆ ಅದು ಸಾಕು. ದೇಹವನ್ನು ಪವಿತ್ರವಾಗಿ, ಸ್ವಚ್ಛವಾಗಿ, ಕಾಮ, ಕ್ರೋಧ, ಲೋಭ, ಮೋಹ ರಹಿತವಾಗಿ ಇಡಬೇಕು. ದೌರ್ಬಲ್ಯ, ಪರಾಧೀನತೆಯಿಂದ ಮೈಲಿಗೆಯಾದ ದೇಹವನ್ನು ಮಡಿ ಮಾಡಿಕೊಳ್ಳಬೇಕು. ಇಲ್ಲಿ ಮಡಿ ಎಂದರೆ ಸ್ವಚ್ಛ ಹಾಗೂ ಶುದ್ಧವಾಗಿರುವುದು ಎಂದರ್ಥ. ಸ್ನಾನ ಮಾಡಿದಾಕ್ಷಣ ದೇಹವು ಸ್ವಚ್ಛವಾಗುವುದಿಲ್ಲ. ಅದಕ್ಕೆ ಸಂಸ್ಕಾರದ ಲೇಪ ಕೊಡಬೇಕು. ದೇಹಕ್ಕೆ ಅನೇಕ ಬಗೆಯ ಸಂಸ್ಕಾರಗಳು. ಇವು ವಿಶ್ವದ ಎಲ್ಲಾ ಧರ್ಮಗಳಲ್ಲಿ, ಮತಗಳಲ್ಲಿ ಉಂಟು. ವೈಜ್ಞಾನಿಕ ಸತ್ಯ. ತಪ್ತ ಮುದ್ರಾಧಾರಣೆಯಲ್ಲಿ ಕಾಯಿಸಿದ ಶಂಖ, ಚಕ್ರಗಳಿಂದ ದೇಹಕ್ಕೆ ಸಂಸ್ಕಾರ, ಪಾವಿತ್ರ್ಯ ಲಭಿಸುತ್ತದೆ. ಆಗಾಗ ಮರೆತು ಹೋಗುತ್ತಿರುವ ತನ್ನ ಧರ್ಮ, ನಿಯಮ ದೀಕ್ಷೆಗಳನ್ನು ಶಂಖ, ಚಕ್ರಧರಿಸಿ ಜಾಗೃತಗೊಳಿಸುವುದಾಗಿದೆ. ವಿಧಾನ ಎಲ್ಲಾ ವೈಷ್ಣವ ಮತಗಳಲ್ಲಿ ಸಾಮಾನ್ಯವಾಗಿದೆ.

ಆರ್ಯುವೇದದಲ್ಲಿ ಶಲ್ಯ ಶಾಸ್ತ್ರದ ಪ್ರಕಾರ 3 ವಿಧದ ಸರ್ಜರಿಗಳಿವೆ:

ಶಸ್ತ್ರ ಪ್ರಯೋಗ

ಕ್ಷಾರ ಪ್ರಯೋಗ

ಅಗ್ನಿ ಪ್ರಯೋಗ

ಅಗ್ನಿ ಕರ್ಮಕ್ಕೆ ಹೆಚ್ಚು ಮಹತ್ವವಿದ್ದು ಗಾಯ ಶಮನಕ್ಕೆ ಶಲಾಕಾ (ಪಂಚ ಲೋಹ) ಪ್ರಯೋಗ ಮಾಡಲಾಗುತ್ತದೆ. ಶಲಾಕಾ ಬಿಸಿಮಾಡಿ ಮುಟ್ಟಿಸಿದರೆ ಗಾಯ ಗುಣವಾಗುವುದು ಮಾತ್ರವಲ್ಲ ಚರ್ಮದೊಳಗಿನ ಸೋಂಕು ನಿವಾರಣೆ ಯಾಗುತ್ತದೆ. ಅಗ್ನಿಕರ್ಮ ಪ್ರಕ್ರಿಯೆ ಕೆಲವೇ ಸಮುದಾಯದಲ್ಲಿ ಸಂಪ್ರದಾಯ ವಾಗಿ ಆಚರಣೆಯಲ್ಲಿದೆ.

ಮಳೆಗಾಲದಲ್ಲಿ ಸೋಂಕು, ರೋಗ ತಗಲುವುದು ಹೆಚ್ಚು. ಉಡುಪಿ, ಕೇರಳದಲ್ಲಂತೂ ಹೆಚು ಮಳೆ ಬೀಳುತ್ತದೆ. ಜನರಿಗೆ ಕ್ರಿಮೀಕೀಟ, ವಿಷ ಜಂತು, ಸಾಂಕ್ರಾಮಿಕ ರೋಗಗಳ ಬಾಧೆಯಾಗದಂತೆ ಮುಂಜಾಗರೂಕತಾ ಕ್ರಮ ವಾಗಿಯೂ ಧಾರ್ಮಿಕ ನೆಲೆಯಲ್ಲಿ ತಪ್ತ ಮುದ್ರಾಧಾರಣೆ ಮಾಡಲಾಗುತ್ತಿದೆ. ಚರ್ಮ ಸಮಸ್ಯೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಶಾಲಾಕಾ ಪ್ರಯೋಗ ಪರಿಣಾಮಕಾರಿ.

ಜಾತಿ, ಮತ ಭೇದವಿಲ್ಲ

ರಾಮಾನುಜ, ಮಾಧ್ವ, ವಲ್ಲಬಾದಿಗಳಲ್ಲಿಯೂ ತಪ್ತ ಮುದ್ರಾಧಾರಣೆ ಪದ್ಧತಿ ಯಿದೆ. ಇದು ವೇದ ವಿಹಿತ ಸಂಸ್ಕಾರ. ದೇಹಕ್ಕೆ ಕಾಯಿಸಿದ ಶಂಖು, ಚಕ್ರಗಳ ಮೊಹರು, ಮುದ್ರೆ ಹಾಕುವುದು ಧರ್ಮದೀಕ್ಷೆ ರೀತ್ಯ ಎಚ್ಚರಗೊಳಿಸುವುದು. ಬದುಕನ್ನು ಭಗವಂತನ ರಕ್ಷಣೆಯಲ್ಲಿ ಉಳಿಸಿ, ಬೆಳೆಸಿಕೊಳ್ಳುವುದು. ಅನೇಕ ಕಾರಣಗಳಿಂದ ಅಶುಚಿಯಾದ ದೇಹಕ್ಕೆ ಶುದ್ಧಿತರುವ ವಿಧಾನ. ಪವಿತ್ರ ಗೊಳಿಸುವ ಪದ್ಧತಿ. ತನ್ನ ಗುರುವಿನಿಂದ ನಡೆಯುವ ಎಲ್ಲಾ ಜಾತಿ ಯವರೂ, ಎಲ್ಲಾ ಸ್ತ್ರೀ ಪುರುಷರೂ ಇದನ್ನು ಪಡೆಯಲು ಅರ್ಹರು. ಇದುವೆ ದೀಕ್ಷೆಯ ಉದಾತ್ತತೆ. ವಿಷ್ಣು ಧರ್ಮದ ವಿಶಾಲತೆ. ತಪ್ತ ಮುದ್ರೆಯನ್ನು ಪೀಠಾಧಿಪತಿ ಗುರುಗಳಿಂದ, ವಿದ್ಯಾ ಗುರುವಾದ ತಂದೆಯಿಂದ, ಹಿರಿಯ ಸಂಬಂಧಿಗಳಿಂದ ಇಲ್ಲವೇ ತಾನೇ ಸ್ವಂತವಾಗಿ ಧರಿಸಬಹುದು.

ತಪ್ತ ಮುದ್ರೆಯನ್ನು ನೀಡುವವರಿಗೂ, ಪಡೆಯುವವರಿಗೂ ವೇದ, ಸ್ಮತಿ ಗಳು ಅನೇಕ ಅರ್ಹತೆಗಳನ್ನು ಹೇಳಿದೆ. ಶುದ್ಧ ಆಚಾರ, ವಿಚಾರವಿದ್ದವರಿಂದಲೇ ಪಡೆಯಬೇಕು. ಅದು ಸಾರ್ಥಕ. ಸುದರ್ಶನ ಯಾಗ ಮುದ್ರೆಗಳಿಗೆ ಸಂಸ್ಕಾರ ನೀಡಿ, ಅದರಿಂದ ಮುದ್ರೆ ಪಡೆಯಬೇಕು ಎಂದಿದೆ. ಚಾತುರ್ಮಾಸ್ಯ ವ್ರತಾರಂಭಕ್ಕೆ ಮೊದಲು ದೇಹ ಶುದ್ಧಿಗಾಗಿ ನಡೆಯುವ ತಪ್ತ ಮುದ್ರಾ ಧಾರಣೆಯ ಹಿಂದೆ ಬರಿಯ ಅಧ್ಯಾತ್ಮಿಕ, ಧಾರ್ಮಿಕ ಸಂಪ್ರದಾಯ ಮಾತ್ರವಲ್ಲ ವೈಜ್ಞಾನಿಕ ಕಾರಣ, ಧೋರಣೆಗಳಿವೆ. ಅಕ್ಯುಪ್ರೆಶರ್‌ನಂತೆ ಕಾರ್ಯನಿರ್ವಹಿಸುವ ತಪ್ತ ಮುದ್ರಾಧಾರಣೆ ದೇಹದ ಅಂಗಾಂಗಗಳ ಅಸಮತೋಲನ, ಉಷ್ಣತೆ ಜತೆಗೆ ಒತ್ತಡ ನಿವಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ಪರಿಣಾಮಕಾರಿ ಯಾಗಿದೆ. ರೋಗಾಣುವನ್ನು ದೇಹಕ್ಕೆ ಚುಚ್ಚುಮದ್ದಿನ ಮೂಲಕ ಛೂ ಬಿಟ್ಟು ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ಕೊಡುವಂತೆ ದೇಹದ ಪರಿಶುದ್ಧತೆಗಾಗಿ ಪ್ರತಿಯೊಬ್ಬರೂ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳಬೇಕು.

Tags

Related Articles

Leave a Reply

Your email address will not be published. Required fields are marked *

Language
Close