ಉದಯೋನ್ಮುಖ ಕವಿಯ ಒಳತೋಟಿಗಳು

Posted In : ಸಂಪಾದಕೀಯ-2

ಮಂಕನಿಗೆ ಕವಿಯಾಗಬೇಕೆಂಬ ಹಂಬಲ. ಆದರೆ ಹೇಗೆ ಬರೆಯ ಬೇಕೆಂಬುದೆಲ್ಲ ಗೊತ್ತಿಲ್ಲ. ಇದೇ ಕಾರಣಕ್ಕಾಗಿ ಆತ ನೂರಾರು ನವ್ಯಕವಿತೆಗಳನ್ನು ಓದಿದ್ದಾನೆ. ಅದ್ಯಾವುದೂ ಆತನಿಗೆ ಅರ್ಥವೇ ಆಗಿಲ್ಲ. ಒಂದೇ ಕವನವನ್ನು ಎಷ್ಟು ತಿರುಗಿಸಿ, ಮಗುಚಿ ಹಾಕಿದರೂ ಶಬ್ದಗಳಷ್ಟೇ ಕಾಣುತ್ತವೆಯೇ ಹೊರತು ಅದರ ಹೂರಣ ಅವನಿಗಿನ್ನೂ ಸಿಕ್ಕಿಲ್ಲ. ಕವನವನ್ನು ಅರ್ಥ ಮಾಡಿ ಕೊಳ್ಳುವ ಬಗೆ ಹೇಗೆ? ಎಂಬ ಯೋಚನೆಯಲ್ಲೇ ಆತ ಅನೇಕ ರಾತ್ರಿಗಳನ್ನು ಕಳೆದಿದ್ದಾನೆ. ಒಂದು ಕವನವೂ ತನಗೆ ಅರ್ಥ ವಾಗುತ್ತಿಲ್ಲ. ಹೀಗೇ ಆದರೆ ತಾನು ಕವನಗಳನ್ನು ಬರೆಯುವುದು ಹೇಗೆ? ಕವಿ ಎನಿಸಿಕೊಳ್ಳುವುದು ಹೇಗೆ? ಎಂಬು ದನ್ನು ಯೋಚಿಸಿಯೇ ಆತನ ತೂಕ ಇಳಿದುಬಿಟ್ಟಿದೆ.

ಕವಿಯಾಗಬೇಕೆಂಬ ಉತ್ಕಟ ಇಚ್ಛೆಯಿಂದ ಆತ ಅನೇಕ ಪ್ರಸಿದ್ಧ ಕವಿಗಳನ್ನು ಭೇಟಿಯಾಗಿದ್ದಾನೆ. ಅವರ ಹಸ್ತಾಕ್ಷರವನ್ನು ಪಡೆದಿದ್ದಾನೆ. ಅವರ ಜತೆ ಸೆಲ್ಫಿಯನ್ನೂ ತೆಗೆದುಕೊಂಡಿದ್ದಾನೆ. ಆದರೆ ಕವಿತೆ ಮಾತ್ರ ಆತನಿಗೆ ಒಲಿದಿಲ್ಲ. ‘ಕವನ ಬರಿಯೋಕೆ ಚಿತ್ತ ಹುತ್ತಗಟ್ಬೇಕಪ್ಪಾ ತಮ್ಮಾ..’ ಎಂಬ ಹಿರಿಯ ಕವಿಯೊಬ್ಬರ ಮಾತು ಅವನ ತಲೆಯೊಳಗೆ 2ಜಿ ಇಂಟರ್ನೆಟ್‌ನಲ್ಲಿ ಯಾವುದಾದರೂ ಲಿಂಕ್ ಕ್ಲಿಕ್ ಮಾಡಿದಾಗ ಸುತ್ತುತ್ತಲ್ಲಾ, ಹಾಗೆ ಸುತ್ತುತ್ತಲೇ ಇದೆ. ಕವನ ಅರ್ಥವಾಗಲಿಲ್ಲವೆಂದರೆ ತನ್ನ ಚಿತ್ತವಿನ್ನೂ ಹುತ್ತಗಟ್ಟಿಲ್ಲ ಎಂದರ್ಥ ಎಂದುಕೊಂಡು ಆತನ ತಲೆಬಿಸಿ ಜಾಸ್ತಿಯಾಗಿ ಬಿಟ್ಟಿದೆ. ಕವಿತೆ ಬರೆಯೋದು, ಅರ್ಥ ಮಾಡಿಕೊಳ್ಳೋದು ಜಗತ್ತಿನ ಅತ್ಯಂತ ಕಠಿಣ ಕೆಲಸಗಳಲ್ಲಿ ಒಂದು ಎಂದು ಆತ ಇತ್ತೀಚೆಗೆ ನಿರ್ಧರಿಸಿಬಿಟ್ಟಿದ್ದಾನೆ.

‘ಕವಿತೆಯೆಂದರೆ ಅದು ಮೂಡಣದ ಬೆಳಗಿನಂತೆ ಸಹಜವಾದ ಪ್ರಕ್ರಿಯೆ. ಬೀಜ ನೆಟ್ಟು ಒಂದೇ ದಿನಕ್ಕೆ ಗಿಡವಾಗಿ ಬೆಳೆದು ಮೊಗ್ಗು ಬಿಡಲಿ ಎಂದು ನಾವು ಬಯಸುವುದಕ್ಕಾಗುತ್ತಾ? ಸ್ವಲ್ಪ ತಾಳು’ ಈಗಷ್ಟೇ ಯುವ ಸಾಹಿತಿ ಪ್ರಶಸ್ತಿ ಪಡೆದ ತನ್ನ ವಾರಗೆಯ ಗೆಳೆಯನ ಈ ಸಾಹಿತ್ಯಿಕ ಉಪದೇಶ ಆತನನ್ನು ಇನ್ನಷ್ಟು ಚಿಂತಾಕ್ರಾಂತನನ್ನಾಗಿಸಿದೆ. ಕೆಲವೊಮ್ಮೆ ಆತನಿಗೆ ಕವನಗಳನ್ನು ದೊಡ್ಡದಾಗಿ ಓದಿಕೊಳ್ಳುವಾಗ ತಾನು ಯಾವುದಾದರೂ ಲೇಖನವನ್ನು ಓದುತ್ತಿದ್ದೇನೆಯೋ ಎನಿಸಿಬಿಡುತ್ತದೆ. ಉದ್ದಕ್ಕೆ ಬರೆದ ವಾಕ್ಯಗಳನ್ನೇ ತುಂಡು ತುಂಡಾಗಿಸಲಾಗಿದೆ ಎಂದೂ ಆತನಿಗೆ ಹಲವು ಬಾರಿ ಅನಿಸಿದೆ. ಆದರೆ ವಾಕ್ಯಗಳನ್ನು ಯಾವ ಆಧಾರದಲ್ಲಿ ತುಂಡರಿಸುವುದೆಂಬುದಿನ್ನೂ ಆತನಿಗೆ ಅರ್ಥವಾಗಿಲ್ಲ. ಅಂತೂ ಇತ್ತೀಚೆಗೆ ಆತನಿಗೆ ಕವನದ ಮೇಲೆ ಒಂದು ಹಿಡಿತ ಬಂದಿದೆ. ಅದಕ್ಕಿಂತ ಹೆಚ್ಚಾಗಿ ಕವನದ ಬಗೆಗಿನ ಅಭಿಪ್ರಾಯ ಗಟ್ಟಿಯಾಗಿದೆ. ಕವನಗಳನ್ನೆಲ್ಲ ಅರ್ಥ ಮಾಡಿಕೊಳ್ಳಬಾರದು, ಬದಲಿಗೆ ಹಾಗೆಯೇ ಓದಿಕೊಂಡು ಹೋಗಬೇಕು. ಅದೇ ಕವಿತೆಯ ಆಸ್ವಾದ ಪ್ರಕ್ರಿಯೆ ಎಂದು ಈಗ ಅರ್ಥವಾಗಿದೆ.

ಕೊನೆ ಪದರ: ಕವಿತೆಯನ್ನು ಕೆಲವರು ಹೆಂಡತಿಗೆ ಹೋಲಿಸುತ್ತಾರೆ. ಸಾರ್ಥಕ ಹೋಲಿಕೆ. ಎರಡೂ ಅರ್ಥವಾಗುವುದಿಲ್ಲ.

Leave a Reply

Your email address will not be published. Required fields are marked *

1 × three =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top