About Us Advertise with us Be a Reporter E-Paper

ಅಂಕಣಗಳು

ಕವಿ ಹೃದಯದ ಕನಸುಗಾರ, ನೇತಾರ

ಶಶಿಧರ ಹಾಲಾಡಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಪರೋಕ್ಷವಾಗಿ ಹೊಗಳಬೇಕಾದಾಗ, ಒಂದು ವಾಕ್ಯ ಬಳಸುತ್ತಾರೆ ‘ಎ ರೈಟ್ ಮ್ಯಾನ್ ಇನ್ ಎ ರಾಂಗ್ ಪಾರ್ಟಿ’. ಇದು ಹೊಗಳಿಕೆಯೂ ಹೌದು, ಟೀಕೆಯೂ ಹೌದು ಎನ್ನುವವರಿದ್ದಾರೆ. ನಿಜ, ಅವರ ಧ್ಯೇಯಗಳು ಉದಾತ್ತವಾಗಿದ್ದವು, ಆದರೆ ಅವೆಲ್ಲವುಗಳನ್ನೂ ಕಾರ್ಯರೂಪಕ್ಕೆ ತರಲು ಅವರಿದ್ದ ಪಕ್ಷ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತಿರಲಿಲ್ಲ ಎಂಬ ಅಭಿಪ್ರಾಯದಲ್ಲಿ ನಿಜಾಂಶವೂ ಅಡಗಿದೆ. ಆರ್‌ಎಸ್‌ಎಸ್ ತಳಹದಿಯಿಂದ ಮೇಲೆದ್ದು ಬಂದ  ಧೀಮಂತ ನಾಯಕನಲ್ಲಿದ್ದ ಪುರೋಗಾಮಿ ಧ್ಯೇಯಗಳು ಕಾರ್ಯರೂಪಕ್ಕೆ ಬಂದದ್ದು, ವಿಶ್ವದ ಗಮನ ಸೆಳೆದದ್ದು, ಅವರು 1999-2004ರ ಅವಧಿಯಲ್ಲಿ ಐದು ವರ್ಷ ಪ್ರಧಾನಿಯಾಗಿದ್ದಾಗ. ಅದಕ್ಕೂ ಮುಂಚೆ, 13 ತಿಂಗಳುಗಳ ಕಾಲ ಅವರು ಪ್ರಧಾನಿಯಾಗಿದ್ದಾಗಲೂ, ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ, ಪ್ರಯೋಗ ನಡೆಸಿದ್ದರು. ಪೋಖ್ರಾನ್ ಅಣ್ವಸ್ತ್ರ ಸ್ಫೋಟ ನಡೆಸಿ ನೆರೆಹೊರೆಯ ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸಿದರು. ಆದರೆ ಅಮೆರಿಕದಂತಹ ದೈತ್ಯರ ಕೆಂಗಣ್ಣಿಗೆ ಗುರಿಯಾದರು.

ಇದರ ಮಧ್ಯೆ ಅವರು ಎಲ್ಲರ ಗಮನ ಸೆಳೆದದ್ದು ಲಾಹೋರ್ ಬಸ್  ಅದೊಂದು ದಿನ ದೆಹಲಿಯಲ್ಲಿ ಬಸ್ ಹತ್ತಿದ ಪ್ರಧಾನಿ ವಾಜಪೇಯಿ, 530 ಕಿ.ಮೀ. ದೂರ ಬಸ್ಸಿನಲ್ಲೇ ಕ್ರಮಿಸಿ ಲಾಹೋರ್ ತಲುಪಿ ಇತಿಹಾಸ ನಿರ್ಮಿಸಿದರು. ಸುಮಾರು ಹತ್ತು ಗಂಟೆಗಳ ಅವಧಿಯ ಆ ಬಸ್ ಪ್ರಯಾಣ ಸಂಚಲನವನ್ನೇ ಸೃಷ್ಟಿಸಿತು. ಆ ಬಸ್ ಸೇವೆ ಜನಸಾಮಾನ್ಯರಿಗೂ ಲಭ್ಯವಾದದ್ದು ಒಂದು ಐತಿಹಾಸಿಕ ಸಾಧನೆ. 1947ರ ನಂತರ, ದೇಶ ವಿಭಜನೆಯ ಸಮಯದಲ್ಲಿ ಅನುಭವಿಸಿದ ಕರಾಳ ನೆನಪಿನ ಹಿನ್ನೆಲೆಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.  ವಾಜಪೇಯಿಯವರ ವೈಯಕ್ತಿಕ ನಿರ್ದೇಶನದಂತೆ ಆರಂಭಗೊಂಡ ಆ ಬಸ್ ಸೇವೆ, ಪರಸ್ಪರ ದೇಶಗಳ ಬಾಂಧವ್ಯವನ್ನು ಬೆಳೆಸುವಲ್ಲಿ ಒಂದು ಮೈಲಿಗಲ್ಲಾಗಿ ಉಳಿಯಬೇಕಿತ್ತು. ಬಸ್ ಸೇವೆ ಆರಂಭಗೊಂಡ ಕೆಲವೇ ತಿಂಗಳುಗಳಲ್ಲಿ ನಡೆದ ಕಾರ್ಗಿಲ್ ಯುದ್ಧದ ನಂತರವೂ, ಲಾಹೋರಿನ ಬಸ್ ತನ್ನ ಪಾಡಿಗೆ ತಾನು ಓಡುತ್ತಿತ್ತು. ಆದರೆ, 2001ರಲ್ಲಿ ಪಾರ್ಲಿಮೆಂಟಿನ ಮೇಲೆ ಪಾಕ್ ಮೂಲದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ, ಈ  ಬಸ್ ಸೇವೆ ಸ್ಥಗಿತಗೊಂಡಿತು.

ಅಟಲ್‌ಜೀ ಅಧಿಕಾರಾವಧಿಯ ಮೊದಲ ಮೂರು ವರ್ಷಗಳಲ್ಲಿ ಭಾರತದ  ಶೇ.7ರ ಹತ್ತಿರ ಇತ್ತು. ಆದರೂ, ಹಲವು ಎಡರು ತೊಡರು, ವಿಘ್ನಗಳನ್ನು ಎದುರಿಸಬೇಕಾದದ್ದು ಅವರ ಹಣೆಯಲ್ಲಿ ಬರೆದಿತ್ತು ಎನ್ನಬಹುದು. ವಾಜಪೇಯಿಯವರು ಪ್ರಧಾನಿಯಾದ ಎರಡೇ ತಿಂಗಳಲ್ಲಿ, ಮುಜುಗರ ಅನುಭವಿಸುವ ಅನಿವಾರ್ಯತೆಗೆ ಸಿಕ್ಕಿಹಾಕಿಕೊಂಡರು. ಇಂಡಿಯನ್ ಏರ್‌ಲೈನ್‌ಸ್ನ ವಿಮಾನವನ್ನು ಅಪಹರಣಕಾರರು ಕಂದಹಾರ್‌ಗೆ (ಅಘಾನಿಸ್ತಾನ) ಕೊಂಡೊಯ್ದು, ಪಾಕಿಸ್ತಾನದ ಭಯೋತ್ಪಾದಕ ಮೌಲಾನ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿಸಿಕೊಂಡರು. ಕುಖ್ಯಾತ ಭಯೋತ್ಪಾದಕನನ್ನು ಬಿಡುಗಡೆ ಮಾಡುವಂತಹ ಅನಿವಾರ್ಯ ನಿರ್ಣಯ ತೆಗೆದುಕೊಳ್ಳಬೇಕಾದಂತಹ ಸ್ಥಿತಿ ವಾಜಪೇಯಿಯವರದಾಯಿತು. ಇಂತಹದ್ದೇ, ಆದರೆ ಹೆಚ್ಚಿನ ಅಪಾಯವಾಗದೇ ಬಗೆಹರಿದ  ಘಟನೆ ಎಂದರೆ ಸಂಸತ್‌ಭವನದ ಮೇಲಿನ ದಾಳಿ (13.12.2001). ಪಾಕಿಸ್ತಾನದ ಗುರುತಿನ ಚೀಟಿ ಹೊಂದಿದ್ದ ದುರುಳರು ಸಂಸತ್‌ಭವನದ ಮೇಲೆ ಗುಂಡಿನ ದಾಳಿ ನಡೆಸಿ, ರಕ್ಷಣಾ ಸಿಬ್ಬಂದಿಯನ್ನು ಕೊಂದರು; ಆದರೆ ತಕ್ಷಣ ಸಂಸತ್‌ಭವನದ ಬಾಗಿಲನ್ನು ಭದ್ರಪಡಿಸಿ, ಆ ಎಲ್ಲಾ ಭಯೋತ್ಪಾದಕರನ್ನು ನಮ್ಮ ರಕ್ಷಣಾ ಸಿಬ್ಬಂದಿ ಹತ್ಯೆಗೈದು ಭಾರೀ ಅನಾಹುತದ ಸಾಧ್ಯತೆಯನ್ನು ತಪ್ಪಿಸಿದರು. ಗುಂಡಿನ ದಾಳಿ ನಡೆದಾಗ, ಎಲ್.ಕೆ. ಅದ್ವಾನಿ ಸೇರಿದಂತೆ ಹಲವು ರಾಜಕಾರಣಿಗಳು ಸಂಸತ್‌ಭವನದ ಆವರಣದಲ್ಲಿದ್ದು, ಆ ದಿನ ಭಯೋತ್ಪಾದಕರ ಕೈಮೇಲಾಗಿದ್ದರೆ,  ದುರ್ಘಟನೆ ಸಂಭವಿಸುತ್ತಿತ್ತೋ ಹೇಳಲಾಗದು. ಐವರು ಭಯೋತ್ಪಾದಕರು, ಎಂಟು ಮಂದಿ ರಕ್ಷಣಾ ಸಿಬ್ಬಂದಿ ಮೃತರಾದ ಆ ಘಟನೆಯು ಸ್ವತಂತ್ರ ಭಾರತದ ಅತಿ ಮುಜುಗರದ ಸನ್ನಿವೇಶಗಳಲ್ಲಿ ಒಂದು. ಗುಜರಾತ್‌ನ ಗೋದ್ರಾದಲ್ಲಿ ರೈಲಿಗೆ ಅಗ್ನಿಸ್ಪರ್ಶದ ನಂತರ ನಡೆದ ಭೀಕರ ಕೋಮುಗಲಭೆ ನಡೆದಾಗಲೂ ವಾಜಪೇಯಿಯವರೇ ಪ್ರಧಾನಿ. ಯಾವುದೇ ಹಿಂಸೆಯನ್ನು ಖಂಡಿಸುತ್ತಿದ್ದ ವಾಜಪೇಯಿಯವರು, ಗುಜರಾತ್ ಮುಖ್ಯಮಂತ್ರಿ ಮೋದಿಯವರಿಗೆ ‘ರಾಜಧರ್ಮ ಪಾಲಿಸಿ’ ಎಂದು ಅಂದು ನೀಡಿದ ಸಲಹೆ ಖ್ಯಾತವಾಗಿದೆ.

1999-2004ರ ಸುಭದ್ರ ಬಿಜೆಪಿ ಸರಕಾರದ ನೇತೃತ್ವ ಹೊತ್ತ  ವಾಜಪೇಯಿಯವರು, ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಲವು. ಅವುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದು, ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ. ಇವೆರಡೂ ವಾಜಪೇಯಿಯವರ ನೆಚ್ಚಿನ ಯೋಜನೆಗಳು. ಆ ಹಿಂದಿನ 32 ವರ್ಷಗಳಲ್ಲಿ ರಚನೆಗೊಂಡ ರಸ್ತೆಗಳ ದುಪ್ಪಟ್ಟು ಉದ್ದದ ರಸ್ತೆಗಳು ಈ ಐದು ವರ್ಷಗಳಲ್ಲಿ ಅಭಿವೃದ್ದಿಗೊಂಡವು. ಅಂದು ಇದ್ದ ಬಿಜೆಪಿ ಸರಕಾರದ ಮಹೋನ್ನತ ಸಾಧನೆಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿ ಯೋಜನೆಯು ವಾಜಪೇಯಿಯವರಿಗೆ ಸಾಕಷ್ಟು ಜನಪ್ರಿಯತೆಯನ್ನು  ಆ ಜನಪ್ರಿಯತೆ ಎಷ್ಟಿತ್ತೆಂದರೆ, ನಂತರ ಬಂದ ಕಾಂಗ್ರೆಸ್ ಸರಕಾರ ಆ ಜನಪರ ಕಾಮಗಾರಿಯ ವೇಗವನ್ನು ತಗ್ಗಿಸಲು ಕ್ರಮ ಕೈಗೊಂಡಿತು!

ಲಾಹೋರ್‌ಗೆ ಬಸ್ ಸೇವೆ ಆರಂಭಿಸಿದ ನಂತರ, ಎಲ್ಲಾ ಸಮುದಾಯಗಳ ಮೆಚ್ಚುಗೆ ಗಳಿಸಲು ವಾಜಪೇಯಿಯವರು ಮಾಡಿದ ಮತ್ತೊಂದ ಕೆಲಸವೆಂದರೆ ಪಾಕಿಸ್ತಾನದ ಅಧ್ಯಕ್ಷರನ್ನು ಆಗ್ರಾ ಶೃಂಗಸಭೆಗೆ ಆಹ್ವಾನಿಸಿದ್ದು. ಆದರೆ, ಅಂದು ಮುಷರ್ರಫ್ ಆಗ್ರಾಕ್ಕೆ ಬಂದು, ತಾಜ್‌ಮಹಲ್‌ನ ಅಂದ ಚಂದ ನೋಡಿದ್ದು ಬಿಟ್ಟರೆ, ಬೇರೇನೂ ಸಾಧಿಸಲಾಗಲಿಲ್ಲ. ಅದಾಗಿ ಕೆಲವೇ ತಿಂಗಳಲ್ಲಿ ಪಾಕಿಸ್ತಾನದ ಭಯೋತ್ಪಾದಕರು  ಪಾರ್ಲಿಮೆಂಟಿನ ಮೇಲೆ ದಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ನೋಡಿದಾಗ, ವಾಜಪೇಯಿಯವರು ಪಾಕಿಸ್ತಾನದೊಂದಿಗೆ ಸ್ನೇಹ, ವಿಶ್ವಾಸ ಗಳಿಸಲು ಮಾಡಿದ ಪ್ರಯತ್ನವೆಲ್ಲಾ ನೀರ ಮೇಲೆ ನಡೆಸಿದ ಹೋಮದಂತಾಯಿತು ಎಂಬುದು ಒಂದು ಕಟುವಾಸ್ತವ. ತನ್ನ ನಡೆ – ನುಡಿಯಲ್ಲಿ, ಎಲ್ಲಾ ವರ್ಗಗಳ ಮತ್ತು ವಿದೇಶಗಳ ಮೆಚ್ಚುಗೆ ಗಳಿಸಬೇಕು, ವೈರಿ ದೇಶಕ್ಕೂ ಸ್ನೇಹ ಹಸ್ತ ಚಾಚಬೇಕೆಂಬುದು ಅವರ ತುಡಿತ. ಇಂತಹ ವಿಶಾಲ ಹೃದಯವನ್ನು ಕಂಡೇ, ಹಲವರು ಅವರನ್ನು ‘ಭೀಷ್ಮ ಪಿತಾಮಹ’ ಎಂದು  ಕರೆದಿದ್ದಾರೆ.

ವಾಜಪೇಯಿಯವರ  ಜೀವನದ ದೊಡ್ಡ ಆಘಾತಗಳಲ್ಲಿ ಒಂದು ಎಂದರೆ, 2004ರ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಅನುಭವಿಸಿದ ಸೋಲು. 2004ರಲ್ಲಿ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢ ಚುನಾವಣೆಗಳಲ್ಲಿ ಬಿಜೆಪಿ ಗೆದ್ದುಬಂದ ಹಿನ್ನೆಲೆಯಲ್ಲಿ, ಅವಧಿ ಮುಗಿಯುವ ಮುನ್ನವೇ ಲೋಕಸಭೆಯನ್ನು ವಿಸರ್ಜಿಸಿ, ಚುನಾವಣೆ ನಡೆಸಲಾಯಿತು. ದೇಶದ ಎಲ್ಲಾ ಕಡೆ ಬಿಜೆಪಿ ಹವಾ ಇದೆ ಎಂದು ಯೋಚಿಸಿದ್ದು ಒಂದು ತಪ್ಪು ನಡೆಯಾಗಿತ್ತು. ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸೋತವು; ಸೋನಿಯಾ ನೇತೃತ್ವದ ಕಾಂಗ್ರೆಸ್ ಇತರ ಪಕ್ಷಗಳ  ಸರಕಾರ ರಚಿಸಿತು. ಮನಮೋಹನ ಸಿಂಗ್ ಪ್ರಧಾನಿಯಾದರು. ಭಾರತದ ಇತಿಹಾಸದಲ್ಲಿ ಇದು ಒಂದು ಪ್ರಮುಖ ತಿರುವು. 1999-2004 ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ, ಪ್ರಧಾನಿಯಾಗಿದ್ದ ವಾಜಪೇಯಿಯವರಿಗೆ ಇನ್ನೊಂದು ಅವಧಿ ಅಧಿಕಾರ ನಡೆಸಲು ಜನವಿಶ್ವಾಸ ದೊರೆಯಲಿಲ್ಲ.

ಅದಾಗಿ ಒಂದೇ ವರ್ಷದಲ್ಲಿ, ಅಂದರೆ 2005ರಲ್ಲಿ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗುವ ಘೋಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ, 2004ರ ಬಿಜೆಪಿ ಸೋಲಿನ ನಂತರ, ಅವರು ತೆರೆಮರೆಗೆ ಸರಿದರು ಎಂದೇ ಹೇಳಬಹುದು. 2009ರಲ್ಲಿ ಅನಾರೋಗ್ಯ ಪೀಡಿತರಾಗಿ, ನಾಲಗೆಯ  ಕಳೆದುಕೊಂಡ ನಂತರ, ಅಕ್ಷರಶಃ ದುರ್ಬಲರಾದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ, ಪೂರ್ಣಾವಧಿ ಪೂರೈಸಿದ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿ ವಾಜಪೇಯಿಯವರು, ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ನಿರ್ಣಯಗಳು ನಮ್ಮ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿವೆ.

ವಾಜಪೇಯಿಯವರು 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ್ದರು; 1975-77 ರ ಅವಧಿಯಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲೂ ವಿನಾಕಾರಣ ಜೈಲು ವಾಸ ಅನುಭವಿಸಿದ್ದರು. ನಂತರ ಬಂದ ಜನತಾಪಕ್ಷದ ಸರಕಾರದಲ್ಲಿ, ವಿದೇಶಾಂಗ ಖಾತೆಯ ಹೊಣೆ ಹೊತ್ತರು. ಮೂರು  ಪ್ರಧಾನ ಮಂತ್ರಿಯಾಗಿದ್ದರು. ವಾಜಪೇಯಿಯವರು ಕೇವಲ ಶುಷ್ಕ ಆಡಳಿತ ನಡೆಸುವ ಪ್ರಧಾನಿ ಮಾತ್ರ ಆಗಿರಲಿಲ್ಲ, ಕವನಗಳನ್ನು ಬರೆಯಬಲ್ಲ ಕವಿ, ದೂರದೃಷ್ಟಿ ಹೊಂದಿದ್ದ ನೇತಾರ ಮತ್ತು ಎಲ್ಲಾ ವರ್ಗದ ಜನರ ಭಾವನೆಗಳಿಗೆ ಬೆಲೆ ಕೊಡುವ ಮಾನವೀಯ ಹೃದಯ ಹೊಂದಿದ್ದ ನಾಯಕರೂ ಆಗಿದ್ದರು. ಪ್ರಧಾನಿಯಾಗಿ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ, ನೆನಪಿಸಿಕೊಳ್ಳುವುದೇ ಆ ಮಹಾಚೇತನಕ್ಕೆ ನಾವು ಮಾಡಬಹುದಾದ ನಮನ, ಅಶ್ರುತರ್ಪಣ.

Tags

Related Articles

Leave a Reply

Your email address will not be published. Required fields are marked *

Language
Close