ನೈತಿಕತೆಯ ಸಮಾಧಿ ಮೇಲೆ ರಾಜಕಾರಣ

Posted In : ಸಂಗಮ, ಸಂಪುಟ

-ಆನಂದ ಬಿದರಕುಂದಿ

ಪ್ರಧಾನಿಗಳು ಕರ್ನಾಟಕಕ್ಕೆ ಬಂದಾಗಲೆಲ್ಲಾ ಸಿದ್ದರಾಮಯ್ಯನವರ ಸರಕಾರ ‘ಹತ್ತು ಪರ್ಸೆಂಟ್’ ಸರಕಾರ ಎಂದು ಹಂಗಿಸುತ್ತಾರೆ. ಅದಕ್ಕೆ ಪ್ರತ್ಯುತ್ತರವೆಂಬಂತೆ ಸಿದ್ದರಾಮಯ್ಯನವರು ಸಹ ನಮ್ಮದು ಹತ್ತು ಪರ್ಸೆಂಟ್ ಆದರೆ ನಿಮ್ಮದು ತೊಂಬತ್ತು ಪರ್ಸೆಂಟ್ ಎನ್ನುತ್ತಾರೆ. ಇವರಿಬ್ಬರ ನಡುವಿನ ಪರ್ಸಂಟೇಜ್ ಜಗಳಕ್ಕೆ ಸಿಕ್ಕಿರುವ ಬಹಳ ಸುಂದರವಾದ ಹೆಸರು ಟ್ವಿಟ್ಟರ್ ವಾರ್. ಎಂತೆಂತಹದೊ ವಾರ್ ಕಂಡಿರುವ ನಮಗೆ ಆಧುನಿಕ ಯುಗದ ಈ ಸಾಮಾಜಿಕ ಜಾಲ ತಾಣದ ವಾರ್ ನೈತಿಕ ನೆಲೆಗಟ್ಟು ಕಾಣದ, ಕೇವಲ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಂತೆ ಕಾಣುತ್ತಿದೆ.

ಈ ಸಾಮಾಜಿಕ ಜಾಲ ತಾಣಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಅಭಿವ್ಯಕ್ತಿಸುವ ಸಾಧನವಾಗಿರಿಸಿಕೊಂಡಿರುವ ಜನಗಳೂ ಸಹ ತಮಗೆ ತೋಚಿದಂತೆ ಗೀಚುತ್ತ ತಮ್ಮೊಳಗಿನ ಅಸಮಾಧಾನವನ್ನು ಹೊರಗೆಡವುತ್ತಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ಈ ಎರಡು ಪಕ್ಷಗಳ ವಾರ್‌ನಲ್ಲಿ ನಿಜಕ್ಕೂ ನೈತಿಕವಾದದ್ದು ಎನಾದರೂ ಇದೆಯೆ ಎನ್ನುವುದು. ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವ ಬಿಜೆಪಿಗಾಗಲಿ, ಕಾಂಗ್ರೆಸ್‌ಗಾಗಲಿ ಪರಮ ಭ್ರಷ್ಟಾಚಾರದ ಪೂರಕ ದಾಖಲೆಗಳಿದ್ದರೆ ಅವುಗಳನ್ನು ಜನತೆಯ ಮುಂದಿಟ್ಟು ಕೇಳಬೇಕಲ್ಲವೆ? ನಿಮಗೆ ಮತ ಹಾಕಿ ಅಧಿಕಾರದಲ್ಲಿ ಕೂಡಿಸಿದ ಜನತೆಗೆ ಅದನ್ನು ತಿಳಿಯುವ ಹಕ್ಕು ಇದೆಯಲ್ಲವೆ? ಅದ್ಯಾವುದನ್ನು ಮಾಡದೆ ಕೇವಲ ಚುನಾವಣೆ ಸಮೀಪಿಸುತ್ತಿದೆ ಎನ್ನುವ ಏಕ ಕಾರಣಕ್ಕೆ ಈ ರೀತಿಯ ಮಾತುಗಳು ನಿಮಗೆ ಶೋಭೆ ತರುವುದೆ ಅಥವಾ ಇದು ಕೇವಲ ನಿಮ್ಮ ನಾಲಿಗೆ ತುರಿಕೆಯ ಮಾತುಗಳೆ?

ಪ್ರಸ್ತುತ ರಾಜ್ಯ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಒಂದು ಪ್ರತಿಷ್ಠೆಯ ಕಣವಾಗಿ ಹೋಗಿದೆ. ಇಡೀ ದೇಶದಲ್ಲಿ ತನ್ನ ಇಷ್ಟು ವರ್ಷದ ಸಾಮ್ರಾಜ್ಯ ಒಂದೊಂದಾಗಿ ನೋಡಿಕೊಂಡು ಕಾಂಗ್ರೆಸ್ ಹೇಗೆ ತಾನೆ ಸುಮ್ಮನಿದ್ದೀತು?ಹೇಗಾದರೂ ಮಾಡಿ ಶತಾಯು ಗತಾಯ ದಕ್ಷಿಣ ಭಾರತದಲ್ಲಿ ಇರುವ ಒಂದು ರಾಜ್ಯವನ್ನಾದರೂ ಉಳಿಸಿಕೊಳ್ಳುವ ತವಕದಿಂದ ಹೋರಾಡುತ್ತಿದ್ದರೆ ಅತ್ತ ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆಂದು ಪಣ ತೊಟ್ಟು ದೇಶದ ಒಂದೊಂದೇ ರಾಜ್ಯವನ್ನು ತನ್ನ ಜೋಳಿಗೆಗೆ ಸೇರಿಸುತ್ತ ದಕ್ಷಿಣ ಭಾರತದ ಪ್ರತಿಷ್ಠಿತ ರಾಜ್ಯ ಕರ್ನಾಟಕವನ್ನು ಸಹ ಕಬಳಿಸಲು ಪ್ರಯತ್ನಿಸುತ್ತಿದೆ. ಆದರೆ ಇಂದು ನೀವಿಬ್ಬರೂ ಚುನಾಣೆಯ ಗೆಲುವಿನ ಮೆಟ್ಟಿಲೇರಲು ಮಾಡುತ್ತಿರುವ ಪ್ರಯತ್ನವಾದರೊ ಎಂತಹದು ಎನ್ನುವುದನ್ನು ಯೋಚಿಸಬೇಕಾಗಿದೆ. ಖಂಡಿತ ಯೋಚಿಸುತ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳ ಈ ಗುದ್ದಾಟದಲ್ಲಿ ರಾಜ್ಯದ ಹಿತಾಸಕ್ತಿಯಾಗಲಿ, ನೈತಿಕ ರಾಜಕಾರಣದ ಹೊಳಹುಗಳಾಗಲಿ ಏನು ಕಾಣುತ್ತಿಲ್ಲ.

ಕೇವಲ ಭ್ರಷ್ಟಾಚಾರದ ಆರೋಪ ಪ್ರತ್ಯಾರೋಪಗಳು ಅಷ್ಟೇ ಸಾಕೆ ? ಇದಿಷ್ಟೆ ನಿಮಗೆ ಮತ ತಂದು ಕೊಡುವುದಾ? ಅಧಿಕಾರದ ಗದ್ದುಗೆ ಏರುವ ತವಕದಲ್ಲಿರುವ ನೀವುಗಳು ಯೋಚಿಸಬೇಕಾಗಿದೆ, ಇತ್ತಿಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಯಾಕೊ ಕಾಂಗ್ರೆಸಿಗೆ ಕಳವಳ ಉಂಟು ಮಾಡುವಂತಿವೆ. ಚುನಾವಣಾ ಪೂರ್ವ ಕಗ್ಗೊಲೆ, ನಲಪಾಡ್ ಪ್ರಕರಣ, ಲೋಕಾಯುಕ್ತ ಮೇಲೆ ದಾಳಿ ಹತ್ತಾರು ಉದಾರಣೆ ಕೊಡಬಹುದು. ತನ್ನ ಪಕ್ಷದಿಂದಾಗಿದೆ ಎನ್ನುವ ಏಕ ಕಾರಣಕ್ಕೆ ಮುಖ್ಯಮಂತ್ರಿಗಳು ಹೊಣೆ ಹೊತ್ತು ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಚುನಾವಣೆ ಸನಿಹದಲ್ಲಿರುವಾಗ ನಡೆಯುವ ಈ ತರಹದ ಘಟನೆಗಳು ಬೀರುವ ಪರಿಣಾಮಗಳು ದೊಡ್ಡದಾಗಿರುತ್ತವೆ ಎನ್ನುವುದು ಕಾಂಗ್ರೆಸ್‌ಗೆ ತಿಳಿಯದ ವಿಚಾರವೇನಲ್ಲ.ಕೈ ಮೀರುವ ಮೊದಲೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ರಾಜಕಾರಣವನ್ನು ಮತ್ತು ರಾಜಕಾರಣಿಗಳನ್ನು ಯಾವಾಗಲೂ ಅನುಮಾನದಿಂದಲೇ ನೋಡುವ ಜನತೆಯ ಮೇಲೆ ಈ ತರಹದ ಘಟನೆಗಳು ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬಿರುತ್ತವೆ.

ಆಗ ಜನ ನೈತಿಕ ಪ್ರಶ್ನೆಗಳನ್ನು ಎತ್ತುತ್ತಾರೆ.ಇದಕ್ಕೆ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ ಸಾಕು, ಹೀಗಾಗಿ ರಾಜಕೀಯ ಪಕ್ಷಗಳು ಹೊಣೆಯರಿತು ನಡೆಯಬೇಕಾಗುತ್ತದೆ. ಮೊನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಆಮಿತ್ ಶಾರವರು ಮಾತನಾಡುತ್ತ ನಮಗೆ ಅಧಿಕಾರ ಕೊಡಿ ತಕ್ಷಣ ಮಹದಾಯಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದರು. ಇದೆಂತಹ ತಂತ್ರ? ಕೇಂದ್ರದಲ್ಲಿ ತನ್ನದೆ ಪಕ್ಷ ಅಧಿಕಾರದಲ್ಲಿದೆ, ಅದಕ್ಕೆ ಸಂಬಂಧಪಟ್ಟಂತೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷದ ಸರಕಾರವಿದೆ, ಅಧಿಕಾರ ಉಪಯೋಗಿಸಿ ಒಂದಿಷ್ಟು ಪರಿಹಾರದ ಭರವಸೆ ಅದು ಬಿಟ್ಟು ಅಧಿಕಾರ ಕೊಟ್ಟರಷ್ಟೆ ಪರಿಹಾರವೆಂದರೆ ಹೇಗೆ? ಸಾರಾಸಗಟಾಗಿ ಇದು ಬ್ಲಾಕ್ ಮೇಲ್ ಅಲ್ಲವೆ? ನೀರಿಲ್ಲದೆ ನರಳುತ್ತಿರುವ ರೈತರ ಗೋಳಿಗೆ ನಿಮ್ಮ ಬದ್ಧತೆ ಇಷ್ಟೆಯೆ? ಸುಮ್ಮನೆ ಆಯಾ ರಾಜ್ಯಗಳ ಸರಕಾರವನ್ನು ಒಪ್ಪಿಸಿದರೆ ಸಾಕು, ಪರಿಹಾರ ಗ್ಯಾರಂಟಿ ಎಂದು ಬಿಜೆಪಿ ಹೇಳಿದರೆ ನಮ್ಮ ಕಡೆಯಿಂದ ಯಾವ ತಕರಾರು ಇಲ್ಲ, ಪ್ರಧಾನಿಗಳು ಮಧ್ಯಸ್ತಿಕೆ ವಹಿಸಿದರೆ ಸಾಕು ಪರಿಹಾರ ಸಿಗುತ್ತದೆಂದು ಕಾಂಗ್ರೆಸ್ ಬುರುಡೆ ಬಿಡುತ್ತದೆ.

ಮಹದಾಯಿ ಸಮಸ್ಯೆ ಇಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳೂ ಬೇಯಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಾವ ನೈತಿಕತೆಯೂ ಇಲ್ಲ. ಇಂತಹ ರಾಜಕಾರಣಕ್ಕೆ ರಾಜ್ಯ ಸಾಕ್ಷಿಯಾಗಬೇಕಾಗಿದ್ದು ನಮ್ಮ ದುರಂತವಷ್ಟೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ದೇಣಿಗೆ ಮೂಲಗಳು ಎಷ್ಟು ಶುದ್ಧವಾಗಿದೆ ಎಂದು ಹೇಳದೆ ಕೇವಲ ಭ್ರಷ್ಟಾಚಾರದ ವಿರುದ್ಧ ಶುದ್ಧಾಂಗ ರಾಜಕಾರಣದ ಬಗ್ಗೆ ಮಾತನಾಡತೊಡಗಿದರೆ ಅದು ಹಾಸ್ಯಾಸ್ಪದವಾಗದೆ ಇರದು. ಚುನಾವಣೆಯ ಸಮಯದಲ್ಲಿ ಬರಿ ಗಿಮಿಕ್ ತಂತ್ರಗಳ ಮೊರೆ ಹೋಗಿರುವ ಪಕ್ಷಗಳು ಯಾತ್ರೆ-ಜಾತ್ರೆ ಪಾದಯಾತ್ರೆ ಚಾರ್ಜಶೀಟು ಕೊಳಗೇರಿ ವಾಸ ಎಂದೆಲ್ಲಾ ಶುರು ಮಾಡಿವೆ. ಈಗಾಗಲೆ ಮುಂಬರುವ ಸೀರೆ, ಪಂಚೆ,ಕುಕ್ಕರ್‌ಗಳನ್ನು ಹಂಚಲಾಗುತ್ತಿದೆ. ಹಣ ಹೆಂಡ ಹಂಚುವ ದಿನಗಳು ದೂರವಿಲ್ಲ. ಇಂತಹ ನಡೆಗಳಿಂದ ಜನರ ಹತ್ತಿರ ಓಟು ಕೇಳುವ ಬದಲು ಜನರೆ ಸ್ವಯಂ ಪ್ರೇರಿತರಾಗಿ ಓಟು ಹಾಕುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುವುದು ನಿಮ್ಮ ನಡೆಯಾಗಬೇಕು.

ಬಿಜೆಪಿ ಎತ್ತುತ್ತಿರುವ ಆನೇಕ ಭ್ರಷ್ಟಾಚಾರದ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ಕೊಡದೆ ನಿಮ್ಮ ಕಾಲದಲ್ಲಿ ನೀವು ಭ್ರಷ್ಟಾಚಾರ ಮಾಡಿಲ್ಲವೆ? ನೀವು ಜೈಲಿಗೆ ಹೋಗಿ ಬಂದಿಲ್ಲವೆ ಎಂದುತ್ತರಿಸಿದರೆ ಸಾಕೆ?ಜನತೆಗೆ ಉತ್ತರಿಸಿದಾಗ ತಾನೆ ನಿವೇಷ್ಟು ನೈತಿಕವಾಗಿ ಬದ್ಧರಾಗಿದ್ದಿರಿ ತಿಳಿಯುವುದು? ಸರಕಾರದ ಬಹಳಷ್ಟು ಇಲಾಖೆಗಳು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿವೆ ಎನ್ನುವ ಸತ್ಯ ಎಲ್ಲರಿಗೂ ತಿಳಿದದ್ದೇ. ಜನರಂತು ಹೈರಾಣಾಗಿ ಹೋಗಿದ್ದಾರೆ ಮೂರೂ ಪಕ್ಷಗಳು ಆಡಳಿತ ಮಾಡಿರುವ ನಿಮಗೆ ಇದರ ಅರಿವಿದ್ದು ಇದರ ದಮನಕ್ಕೆ ಏನೂ ಮಾಡದೆ ಇವತ್ತು ಯಾವ ನೈತಿಕ ಆಧಾರದ ಮೇಲೆ ಮತ್ತೊಬ್ಬರ ಭ್ರಷ್ಟತೆಯ ಬಗ್ಗೆ ಮಾತನಾಡುತ್ತೀರ ಎನ್ನುವುದೇ ಆಶ್ಚರ್ಯ.

ಇಂದಿರಾ ಕ್ಯಾಂಟಿನ್‌ನ ಪ್ರತಿಯೊಂದು ಇಡ್ಲಿಯೂ ಮತವಾಗುವುದು ಎನ್ನುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಇದ್ದರೆ, ಮೋದಿ ಅಲೆ ಒಂದೇ ಸಾಕು ಏರಿಬಿಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಎರಡು ರಾಷ್ಟ್ರಿಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ಜನತೆ ಈ ಸಾರಿ ತನಗೆ ಬೆಂಬಲ ಕೊಡುತ್ತದೆ ಎಂದು ಜೆಡಿಎಸ್ ಕಾಯುತ್ತಿದೆ. ಯಾರೆ ಅಧಿಕಾರಕ್ಕೆ ಬರಲಿ, ಅದು ಜನರ ತೀರ್ಮಾನ. ಆ ತೀರ್ಮಾನ ಏನಿರಲಿದೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಮತ ಕೇಳುವ ನಿಮ್ಮ ಮಾತುಗಳಿಗೆ ಮತ ಹಾಕುವ ನಮ್ಮ ಬೆರಳುಗಳಿಗೆ ಒಂದು ಸ್ಪಷ್ಟತೆ ಇದ್ದಾಗ ಮಾತ್ರ ಚುನಾವಣೆಯೆನ್ನುವುದಕ್ಕೆ ನಿಜವಾದ ಆರ್ಥ ಬರುತ್ತದೆ. ಅದು ನಿಮ್ಮ ರಾಜಕಾರಣದ ನಡೆಯಿಂದ ಮಾತ್ರ ಸಾಧ್ಯ. ಚುನಾವಣೆ ಆದಷ್ಟು ಅರ್ಥಪೂರ್ಣವಾಗಿ ನಡೆಯಲಿ ಎನ್ನುವುದಷ್ಟೇ ನಮ್ಮ ಆಶಯ.

Leave a Reply

Your email address will not be published. Required fields are marked *

2 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top